ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ರಾಮಚರಿತ ಮಾನಸ: ಶಬರಿಗೆ ಶ್ರೀರಾಮನ ದರ್ಶನ

ಒಂದು ದಿನ ಕಾಡಿನ ಹಾದಿಯಲ್ಲಿ ದಿವ್ಯ ತೇಜಸ್ಸಿನ ಇಬ್ಬರು ರಾಜಕುಮಾರರು ಬರುತ್ತಿರುವುದು ಅವಳಿಗೆ ಕಂಡಿತು. ನೀಲಮೇಘಶ್ಯಾಮನಾದ ರಾಮನನ್ನು ಕಂಡೊಡನೆ ಅವಳಿಗೆ ಗುರುಗಳ ಮಾತು ನೆನಪಾ ಯಿತು. ಆನಂದಬಾಷ್ಪ ಸುರಿಸುತ್ತಾ ಓಡಿಹೋಗಿ ಅವರ ಪಾದಗಳಿಗೆ ಎರಗಿದಳು. ಮಾತು ಹೊರಡುತ್ತಿರ ಲಿಲ್ಲ, ಕೇವಲ ಭಾವವಷ್ಟೇ ಮೈವೆತ್ತಿತ್ತು.

ಒಂದೊಳ್ಳೆ ಮಾತು

ದಂಡಕಾರಣ್ಯದ ಒಂದು ಮೂಲೆ. ಅಲ್ಲಿನ ಪುಟ್ಟ ಪರ್ಣಶಾಲೆಯಲ್ಲಿ ವೃದ್ಧೆ ಶಬರಿಯ ವಾಸ. ಅವಳ ಮೈ ಸುಕ್ಕಾಗಿ, ಕಣ್ಣು ಮಂಜಾಗಿದ್ದರೂ ಅಂತರಂಗ ಮಾತ್ರ ಸದಾ ಜಾಗೃತವಾಗಿತ್ತು. ಅದಕ್ಕೆ ಕಾರಣ ಅವಳ ಗುರುಗಳಾದ ಮಾತಂಗ ಮಹರ್ಷಿಗಳು ನೀಡಿದ ಆಶ್ವಾಸನೆ.

“ಶಬರಿ, ನಿನ್ನ ಭಕ್ತಿಗೆ ಮೆಚ್ಚಿ ಸ್ವತಃ ಶ್ರೀಹರಿಯೇ ರಾಮನ ರೂಪದಲ್ಲಿ ನಿನ್ನಲ್ಲಿಗೆ ಬರುತ್ತಾನೆ" ಎಂದು ಹೇಳಿ ಅವರು ದೇಹತ್ಯಾಗ ಮಾಡಿದ್ದರು. ಅಂದಿನಿಂದ ಶಬರಿಗೆ ಪ್ರತಿ ಸೂರ್ಯೋದಯವೂ ಭರವಸೆ ಯ ಕಿರಣವಾಗಿತ್ತು, ಪ್ರತಿ ಸೂರ್ಯಾಸ್ತವೂ ನಾಳೆ ಪ್ರಭು ಬಂದೇ ಬರುತ್ತಾನೆ ಎಂಬ ನಂಬಿಕೆ ಯಾಗಿತ್ತು.

ಒಂದು ದಿನ ಕಾಡಿನ ಹಾದಿಯಲ್ಲಿ ದಿವ್ಯ ತೇಜಸ್ಸಿನ ಇಬ್ಬರು ರಾಜಕುಮಾರರು ಬರುತ್ತಿರುವುದು ಅವಳಿಗೆ ಕಂಡಿತು. ನೀಲಮೇಘಶ್ಯಾಮನಾದ ರಾಮನನ್ನು ಕಂಡೊಡನೆ ಅವಳಿಗೆ ಗುರುಗಳ ಮಾತು ನೆನಪಾಯಿತು. ಆನಂದಬಾಷ್ಪ ಸುರಿಸುತ್ತಾ ಓಡಿ ಹೋಗಿ ಅವರ ಪಾದಗಳಿಗೆ ಎರಗಿದಳು. ಮಾತು ಹೊರಡುತ್ತಿರಲಿಲ್ಲ, ಕೇವಲ ಭಾವವಷ್ಟೇ ಮೈವೆತ್ತಿತ್ತು.

ರಾಮ ಮತ್ತು ಲಕ್ಷ್ಮಣರನ್ನು ಅತಿ ಅಕ್ಕರೆಯಿಂದ ತನ್ನ ಗುಡಿಸಲಿಗೆ ಕರೆತಂದಳು. ದೇವರಿಗೆ ಕುಳಿತು ಕೊಳ್ಳಲು ದರ್ಭೆಯ ಆಸನ ನೀಡಿ, ತನ್ನ ಕೈಗಳಿಂದ ಅವರ ಪಾದಗಳನ್ನು ತೊಳೆದು ಆ ಪವಿತ್ರ ತೀರ್ಥವನ್ನು ಕುಡಿದಳು.

ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ: ಚೂಡಾಮಣಿ ಸ್ವೀಕಾರ, ರಾಮನೆಡೆಗೆ ಹಾರಿದ ಹನುಮಂತ

ತನ್ನ ಆರಾಧ್ಯದೈವ ಹಸಿದಿರಬಹುದು ಎಂದುಕೊಂಡ ಶಬರಿ, ತಾನು ಮುಂಜಾನೆಯೇ ಆಯ್ದು ತಂದಿದ್ದ ಬೋರೆ ಹಣ್ಣುಗಳನ್ನು ಮುಂದಿಟ್ಟಳು. ಇಲ್ಲಿಂದ ಶುರುವಾಗುವುದು ಭಕ್ತಿಯ ಅನನ್ಯ ದೃಶ್ಯ. ಶಬರಿಗೆ ಒಂದು ಭಯ- ‘ನನ್ನ ಪ್ರಭು ಕಾಡಿನ ಹಣ್ಣುಗಳನ್ನು ತಿನ್ನುವಾಗ ಅವುಗಳಲ್ಲಿ ಯಾವುದಾದರೂ ಒಂದು ಹುಳಿಯಾಗಿದ್ದರೆ? ರಾಮನ ಮನಸ್ಸಿಗೆ ನೋವಾಗಬಾರದು’. ಈ ಆತಂಕ ದಿಂದ ಅವಳು ಒಂದೊಂದು ಹಣ್ಣನ್ನು ತಾನೇ ಮೊದಲು ಕಚ್ಚಿ ನೋಡಲಾರಂಭಿಸಿದಳು.

ಯಾವ ಹಣ್ಣು ಸಿಹಿಯಾಗಿರುತ್ತದೆಯೋ ಅದನ್ನು ಮಾತ್ರ ರಾಮನ ಬಟ್ಟಲಿಗೆ ಹಾಕುತ್ತಿದ್ದಳು. ಹುಳಿಯಾದ ಹಣ್ಣುಗಳನ್ನು ಬಿಸಾಡುತ್ತಿದ್ದಳು. ಲೋಕದ ದೃಷ್ಟಿಯಲ್ಲಿ ಅದು ಎಂಜಲು, ಆದರೆ ಶಬರಿಯ ದೃಷ್ಟಿಯಲ್ಲಿ ಅದು ತನ್ನ ದೇವರಿಗೆ ನೀಡುತ್ತಿರುವ ಅತ್ಯಂತ ಶುದ್ಧವಾದ ‘ಪ್ರೇಮದ ಪ್ರಸಾದ’.

ರಾಮಚರಿತ ಮಾನಸದ ಅರಣ್ಯ ಕಾಂಡದಲ್ಲಿ ಈ ಸನ್ನಿವೇಶ ಹೀಗೆ ಬರುತ್ತದೆ:

ಕಂದ ಮೂಲ ಫಲ ಅತಿ ಬನಿ ಆನೆ |

ಪ್ರೇಮ ಸಹಿತ ಪ್ರಭು ಪಾಹುನ ಜಾನೆ ||

ಬಾರಂಬಾರ ಮುಖ ಕಮಲ ಬಿಲೋಕಿ |

ಮಗನ ಭಈ ತನ ಪ್ರೀತಿ ಬಿಸೋಖಿ ||

ಭಾವಾರ್ಥ: ಶಬರಿ ಅತ್ಯಂತ ರುಚಿಕರವಾದ ಕಂದಮೂಲ ಫಲಗಳನ್ನು ತಂದಿದ್ದಳು. ರಾಮನು ಅವಳ ಪ್ರೇಮವನ್ನು ಕಂಡು ಅವನ್ನು ಸ್ವೀಕರಿಸಿದನು. ಅವಳು ಪದೇ ಪದೆ ರಾಮನ ಮುಖ ಕಮಲ ವನ್ನು ನೋಡುತ್ತಾ, ಪ್ರೇಮದ ಪರವಶತೆಯಲ್ಲಿ ತನ್ನ ದೇಹದ ಅರಿವನ್ನೇ ಮರೆತಿದ್ದಳು.

ಪಕ್ಕದ ಕುಳಿತಿದ್ದ ಲಕ್ಷ್ಮಣನಿಗೆ ಅಚ್ಚರಿಯೂ, ಸ್ವಲ್ಪ ಮುಜುಗರವೂ ಆಯಿತು. ಜಗದ ಒಡೆಯನಾದ ರಾಮನು ಇವಳು ಕಚ್ಚಿ ನೀಡುತ್ತಿರುವ ಎಂಜಲು ಹಣ್ಣುಗಳನ್ನು ತಿನ್ನುತ್ತಿzರಲ್ಲ? ಎಂದು ಅವನು ಯೋಚಿಸಿದನು. ಆದರೆ ಶ್ರೀರಾಮಚಂದ್ರನಿಗೆ ಆ ಹಣ್ಣುಗಳಲ್ಲಿ ಸ್ವರ್ಗದ ಅಮೃತಕ್ಕಿಂತ ಹೆಚ್ಚಿನ ರುಚಿ ಸಿಗುತ್ತಿತ್ತು. ಅವನು ಒಂದೊಂದೇ ಹಣ್ಣನ್ನು ಸವಿಯುತ್ತಾ ಲಕ್ಷ್ಮಣನ ಕಡೆಗೆ ನೋಡಿ, “ಲಕ್ಷ್ಮಣ, ಇಂಥ ರುಚಿಯಾದ ಹಣ್ಣುಗಳನ್ನು ನಾನು ಅಯೋಧ್ಯೆಯ ಅರಮನೆಯಲ್ಲೂ ತಿಂದಿಲ್ಲ. ಈ ಹಣ್ಣುಗಳಲ್ಲಿ ಶಬರಿಯ ತಾಯ್ತನದ ಪ್ರೀತಿಯಿದೆ" ಎಂದು ಪ್ರಶಂಸಿಸಿದನು.

ಆನಂತರ ಶಬರಿಯು, “ಪ್ರಭು, ನಾನು ಅತ್ಯಂತ ಸಾಮಾನ್ಯ ಸ್ತ್ರೀ, ನಿನಗೆ ಪೂಜೆ ಮಾಡುವ ವಿಧಾನ ವೂ ನನಗೆ ತಿಳಿಯದು" ಎಂದು ವಿನಮ್ರಳಾದಾಗ, ರಾಮನು ಅವಳಿಗೆ ಪ್ರಸಿದ್ಧವಾದ ‘ನವಧಾ ಭಕ್ತಿ’ಯನ್ನು ಬೋಧಿಸಿದನು.

1. ಸತ್ಸಂಗ (ಒಳ್ಳೆಯವರ ಒಡನಾಟ)

2. ಹರಿಕಥೆಯಲ್ಲಿ ಪ್ರೇಮ

3. ಗುರುವಿನ ಸೇವೆ

4. ನಿಷ್ಕಪಟ ಭಜನೆ

5. ಮಂತ್ರಜಪ ಮತ್ತು ಅಚಲ ನಂಬಿಕೆ

6. ಇಂದ್ರಿಯ ನಿಗ್ರಹ ಮತ್ತು ಸತ್ಕರ್ಮ

7. ಜಗತ್ತನ್ನೇ ರಾಮಮಯವೆಂದು ನೋಡುವುದು

8. ಸಿಕ್ಕಿದ್ದರಲ್ಲಿ ಸಂತೃಪ್ತಿ ಪಡುವುದು

9. ಸರಳತೆ ಮತ್ತು ಅಚಲ ಭರವಸೆ.

“ಯಾರಲ್ಲಿ ಈ ಒಂಬತ್ತು ವಿಧದ ಭಕ್ತಿಗಳಲ್ಲಿ ಒಂದು ಗುಣವಿದ್ದರೂ ಅವರು ನನಗೆ ಅತ್ಯಂತ ಪ್ರಿಯರು. ಶಬರಿ, ನಿನ್ನಲ್ಲಿ ಈ ಎಲ್ಲ ಗುಣಗಳೂ ಇವೆ" ಎಂದು ರಾಮ ಹರಸಿದನು. ಕೊನೆಗೆ ಶಬರಿ ಯು ತನ್ನ ಭಕ್ತಿ ಸಾರ್ಥಕವಾಯಿತೆಂದು ಭಾವಿಸಿ, ರಾಮನ ಎದುರಿಗೇ ಯೋಗಾಗ್ನಿಯಲ್ಲಿ ತನ್ನ ದೇಹವನ್ನು ಅರ್ಪಿಸಿ ದಿವ್ಯಧಾಮವನ್ನು ಸೇರಿದಳು.

ಅಯೋಧ್ಯೆಯ ರಾಜನು ಒಬ್ಬ ಸಾಮಾನ್ಯ ಅರಣ್ಯವಾಸಿ ಸ್ತ್ರೀಯ ಅಂತ್ಯಕ್ರಿಯೆಯ ಜವಾಬ್ದಾರಿ ಯನ್ನು ತಾನೇ ವಹಿಸಿಕೊಂಡು ಅವಳಿಗೆ ಮೋಕ್ಷವನ್ನು ಕರುಣಿಸಿದ ಈ ಪ್ರಸಂಗ ‘ರಾಮಚರಿತ ಮಾನಸ’ದ ಅತ್ಯಂತ ಹೃದಯಸ್ಪರ್ಶಿ ಅಧ್ಯಾಯಗಳಲ್ಲಿ ಒಂದಾಗಿದೆ. ಇಂಥ ‘ನವಧಾ ಭಕ್ತಿ’ ನಮಗೂ ದಕ್ಕುವಂತಾಗಲಿ.

ರೂಪಾ ಗುರುರಾಜ್

View all posts by this author