ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ರಾಮಚರಿತ ಮಾನಸ: ಚೂಡಾಮಣಿ ಸ್ವೀಕಾರ, ರಾಮನೆಡೆಗೆ ಹಾರಿದ ಹನುಮಂತ

“ಹೇ ಹನುಮಂತನೇ, ಈ ಚೂಡಾಮಣಿಯನ್ನು ಕಂಡು ಪ್ರಭುವು ನನ್ನನ್ನು ನೆನೆಯಲಿ. ಅವರಿಗೆ ತಿಳಿಸು- ನಿನ್ನ ಸೀತೆಯು ಪ್ರತಿ ಕ್ಷಣವೂ ನಿನ್ನ ನಾಮವನ್ನೇ ಉಸಿರಾಡುತ್ತಿದ್ದಾಳೆ. ಆದರೆ ಕಾತರಕ್ಕೂ ಒಂದು ಮಿತಿಯಿದೆ. ಒಂದು ತಿಂಗಳೊಳಗೆ ನನ್ನನ್ನು ಈ ಕಾರಾಗೃಹದಿಂದ ಮುಕ್ತಗೊಳಿಸದಿದ್ದರೆ, ಈ ಸೀತೆ ಜೀವಂತವಾಗಿರುವುದಿಲ್ಲ" ಎಂದು ಅಳುತ್ತಾ ಸಂದೇಶ ನೀಡಿದಳು.

ರಾಮಚರಿತ ಮಾನಸ: ಚೂಡಾಮಣಿ ಸ್ವೀಕಾರ, ರಾಮನೆಡೆಗೆ ಹಾರಿದ ಹನುಮಂತ

-

ಒಂದೊಳ್ಳೆ ಮಾತು

ಲಂಕೆಯ ಅಹಂಕಾರವನ್ನು ದಹಿಸಿ ಅಕ್ಷರಶಃ ವಿಜಯಶಾಲಿಯಾಗಿ ಬಂದ ಹನುಮಂತನು, ಮರಳುವ ಮುನ್ನ ಇನ್ನೊಮ್ಮೆ ಅಶೋಕವನಕ್ಕೆ ಧಾವಿಸಿದನು. ಅಲ್ಲಿ ತಾಯಿ ಸೀತೆಯ ಪಾದಗಳಿಗೆ ನಮಿಸಿ, “ತಾಯಿ, ನನ್ನ ಕಾರ್ಯ ಪೂರ್ಣಗೊಂಡಿದೆ. ಈಗ ನಾನು ಪ್ರಭು ಶ್ರೀರಾಮನ ಬಳಿಗೆ ಮರಳಬೇಕು. ನೀನು ಸುರಕ್ಷಿತವಾಗಿದ್ದೀಯೆ ಎಂಬ ಸುದ್ದಿಯ ಜತೆಗೆ, ಪ್ರಭುವಿಗೆ ನಂಬಿಕೆ ಬರುವಂಥ ಯಾವುದಾದರೂ ಕುರುಹನ್ನು ದಯಪಾಲಿಸು" ಎಂದು ವಿನಯದಿಂದ ಬೇಡಿದನು.

ಸೀತೆಯ ಕಣ್ಣಾಲಿಗಳು ತುಂಬಿ ಬಂದವು. ಆ ಕಾವಿ ಬಟ್ಟೆಯಲ್ಲೂ ಜಗನ್ಮಾತೆಯ ತೇಜಸ್ಸು ಮರೆ ಯಾಗಿರಲಿಲ್ಲ. ಅವಳು ತನ್ನ ತಲೆಯಲ್ಲಿ ಧರಿಸಿದ್ದ ‘ಚೂಡಾಮಣಿ’ ಎಂಬ ದೈವಿಕ ಆಭರಣವನ್ನು ತೆಗೆದು ಹನುಮಂತನ ಕೈಗಿಟ್ಟಳು.

“ಹೇ ಹನುಮಂತನೇ, ಈ ಚೂಡಾಮಣಿಯನ್ನು ಕಂಡು ಪ್ರಭುವು ನನ್ನನ್ನು ನೆನೆಯಲಿ. ಅವರಿಗೆ ತಿಳಿಸು- ನಿನ್ನ ಸೀತೆಯು ಪ್ರತಿ ಕ್ಷಣವೂ ನಿನ್ನ ನಾಮವನ್ನೇ ಉಸಿರಾಡುತ್ತಿದ್ದಾಳೆ. ಆದರೆ ಕಾತರಕ್ಕೂ ಒಂದು ಮಿತಿಯಿದೆ. ಒಂದು ತಿಂಗಳೊಳಗೆ ನನ್ನನ್ನು ಈ ಕಾರಾಗೃಹದಿಂದ ಮುಕ್ತಗೊಳಿಸದಿದ್ದರೆ, ಈ ಸೀತೆ ಜೀವಂತವಾಗಿರುವುದಿಲ್ಲ" ಎಂದು ಅಳುತ್ತಾ ಸಂದೇಶ ನೀಡಿದಳು.

ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ: ಲಂಕಾದಹನ-ಅಧರ್ಮದ ಸೌಧಕ್ಕೆ ಬಿದ್ದ ಕಿಚ್ಚು

ಹನುಮಂತನು ಅವಳಿಗೆ ಧೈರ್ಯ ತುಂಬಿ, “ತಾಯಿ, ಅತಿ ಶೀಘ್ರದ ರಾಮಪ್ರಭುವು ವಾನರ ಸೈನ್ಯ ದೊಂದಿಗೆ ಬಂದು ನಿನ್ನನ್ನು ಕರೆದೊಯ್ಯಲಿದ್ದಾರೆ" ಎಂದು ಅಭಯ ನೀಡಿ ಸಮುದ್ರವನ್ನು ದಾಟಿ ಮರಳಿ ಬಂದನು. ಮಹೇಂದ್ರ ಪರ್ವತದ ಮೇಲೆ ಹನುಮಂತನು ಬಂದಿಳಿಯುತ್ತಿದ್ದಂತೆ ವಾನರ ಸೈನ್ಯದಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಎಲ್ಲರೂ ಒಂದೇ ಧ್ವನಿಯಲ್ಲಿ ‘ಜೈ ಶ್ರೀರಾಮ’ ಎಂದು ಘೋಷಣೆ ಕೂಗಿದರು. ಹನುಮಂತನು ಎಲ್ಲರನ್ನೂ ಕರೆದುಕೊಂಡು ಶ್ರೀರಾಮನು ತಂಗಿದ್ದ ಜಾಗಕ್ಕೆ ಧಾವಿಸಿದನು. ರಾಮನನ್ನು ಕಂಡೊ ಡನೆ ಹನುಮಂತನಿಗೆ ಮಾತು ಹೊರಡಲಿಲ್ಲ. ಅಂತರಂಗದ ಭಕ್ತಿಯು ಕಣ್ಣೀರಿನ ರೂಪದಲ್ಲಿ ಹರಿಯಿತು. ಅವನು ರಾಮನ ಪಾದಗಳಿಗೆ ನಮಸ್ಕರಿಸಿದನು. ರಾಮನು ಕಾತರದಿಂದ, “ಹನುಮಂತಾ, ನನ್ನ ಸೀತೆ ಹೇಗಿzಳೆ? ಅವಳ ಸುದ್ದಿಯನ್ನು ತಂದೆಯಾ?" ಎಂದು ಕೇಳಿದಾಗ, ಹನುಮಂತನು ಮೌನವಾಗಿ ಸೀತೆ ನೀಡಿದ್ದ ಆ ಚೂಡಾಮಣಿಯನ್ನು ರಾಮನ ಕೈಗಿಟ್ಟನು. ಆ ಆಭರಣವನ್ನು ಕಂಡೊಡನೆ ರಾಮನ ಹೃದಯ ಕಿವುಚಿದಂತಾಯಿತು.

ಜನಕ ಮಹಾರಾಜನು ವಿವಾಹದ ಸಮಯದಲ್ಲಿ ನೀಡಿದ್ದ ಆ ಕುರುಹನ್ನು ಕಂಡ ರಾಮನು ಅದನ್ನು ತನ್ನ ಕಣ್ಣುಗಳಿಗೆ ಒತ್ತಿಕೊಂಡನು. ಆ ಕ್ಷಣದ ಭಕ್ತಿ ಮತ್ತು ಪ್ರೇಮದ ಸಮ್ಮಿಲನವನ್ನು ತುಳಸೀದಾಸರು ಹೀಗೆ ವರ್ಣಿಸುತ್ತಾರೆ:

ಸುನಿ ಸೀತಾದೇವೀ ಕರ ಬಾನೀ |

ಭಯಉ ಮಗನ ರಘುಪತಿ ಸುಖದಾನೀ ||

ಭಾವಾರ್ಥ: ಸೀತೆಯ ಕ್ಷೇಮದ ಮಾತುಗಳನ್ನು ಕೇಳಿ ಮತ್ತು ಚೂಡಾಮಣಿಯನ್ನು ಕಂಡು ಸುಖದಾಯಕನಾದ ರಘುಪತಿಯು ಪ್ರೇಮ ಪರವಶನಾದನು. ಹನುಮಂತನು ಸೀತೆಯ ವಿರಹ ವೇದನೆಯನ್ನು ವಿವರಿಸುತ್ತಾ, “ಪ್ರಭು, ತಾಯಿ ನಿನ್ನ ಹಾದಿಯನ್ನೇ ನೋಡುತ್ತಿದ್ದಾಳೆ, ನಾಲಗೆ ಯಿಂದ ನಿನ್ನ ನಾಮವನ್ನೇ ಜಪಿಸುತ್ತಿದ್ದಾಳೆ.

ಅವಳ ಪ್ರಾಣವು ಕೇವಲ ನಿನ್ನ ಭೇಟಿಯ ಆಸೆಯಲ್ಲಿ ಅಂಟಿಕೊಂಡಿದೆ" ಎಂದು ಹೇಳಿದಾಗ ರಾಮನ ಕಣ್ಣುಗಳು ಹನಿಗೂಡಿದವು. ರಾಮನು ಭಾವೋದ್ವೇಗದಿಂದ ಹನುಮಂತನನ್ನು ಎಬ್ಬಿಸಿ ಗಟ್ಟಿಯಾಗಿ ಅಪ್ಪಿಕೊಂಡನು.

“ಹನುಮಂತಾ, ನೀನು ಮಾಡಿದ ಈ ಉಪಕಾರಕ್ಕೆ ನಾನು ಪ್ರತಿಯಾಗಿ ಏನು ನೀಡಲಿ? ಈ ಜಗತ್ತಿನಲ್ಲಿ ನಿನ್ನ ಋಣವನ್ನು ತೀರಿಸಲು ನನ್ನ ಬಳಿ ಏನೂ ಇಲ್ಲ. ನೀನು ಕೇವಲ ಭಕ್ತನಲ್ಲ ನನ್ನ ಪ್ರಾಣಪ್ರಿಯ ಮಿತ್ರ" ಎಂದು ಹರಸಿದನು. ಒಬ್ಬ ಭಗವಂತನು ತನ್ನ ಭಕ್ತನನ್ನು ಅಪ್ಪಿಕೊಳ್ಳುವ ಆ ದೃಶ್ಯವು ಇಡೀ ಸುಂದರಕಾಂಡದ ಶ್ರೇಷ್ಠ ಕ್ಷಣವಾಯಿತು.

ಸಜ್ಜನರು ಮತ್ತು ನಿಸ್ವಾರ್ಥ ಸೇವಕರು ತಮ್ಮ ಶ್ರದ್ಧೆಯಿಂದ ಪರಮಾತ್ಮನನ್ನೇ ಹೇಗೆ ಗೆಲ್ಲಬಲ್ಲರು ಎಂಬುದಕ್ಕೆ ಈ ಪ್ರಸಂಗವು ಮುಕುಟಪ್ರಾಯವಾಗಿದೆ. ಹನುಮಂತನ ಭಕ್ತಿ ಮತ್ತು ರಾಮನ ಕರುಣೆ ಒಂದಾದ ಆ ಕ್ಷಣವು ಇಂದಿಗೂ ಭಕ್ತರ ಪಾಲಿಗೆ ಪರಮ ಪವಿತ್ರವಾಗಿದೆ.

ನಮ್ಮ ಹಿನ್ನೆಲೆ, ಆರ್ಥಿಕ ಪರಿಸ್ಥಿತಿ, ಸಮಾಜದಲ್ಲಿ ನಮ್ಮ ಸ್ಥಿತಿಗತಿ ಏನೇ ಇರಬಹುದು ಆದರೆ ದೃಢ ಭಕ್ತಿಯಿಂದ ಭಗವಂತನನ್ನು ಜಪಿಸಿದಾಗ, ನಮ್ಮನ್ನು ಅವನಿಗೆ ಸಮರ್ಪಿಸಿಕೊಂಡಾಗ ಆಗುವ ಪವಾಡಗಳು ಅನನ್ಯ. ನಮಗೇ ಅರಿವಿಲ್ಲದಂತೆ ನಾವು ಭಗವಂತನ ಸಾನಿಧ್ಯದೆಡೆಗೆ ಒಂದೊಂದೇ ಹೆಜ್ಜೆಯನ್ನು ಇಡುತ್ತಿರುತ್ತೇವೆ.

ನಮ್ಮನ್ನು ಪ್ರಗತಿಯ ಪಥದಲ್ಲಿ ಭಗವಂತ ಕೈಹಿಡಿದು ನಡೆಸುತ್ತಾನೆ, ಆಲಿಂಗಿಸಿ ಆಶೀರ್ವದಿಸುತ್ತಾನೆ. ಇದು ಅನುಭವಕ್ಕೆ ಮಾತ್ರ ವೇದ್ಯವಾಗುವ ಭಕ್ತಿಭಾವ. ನಿಷ್ಠೆಯಿಂದ ಬದುಕಿದಾಗ ಮಾತ್ರ ಇದನ್ನು ಅನುಭವಿಸುವ ಸುಕೃತ ನಮ್ಮದಾಗುತ್ತದೆ...