ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ರಾಮಚರಿತ ಮಾನಸ: ಹನುಮಂತ ಮತ್ತು ಮೈನಾಕ ಪರ್ವತ

ಶ್ರೀರಾಮನ ಪೂರ್ವಜರಾದ ಸಗರ ಚಕ್ರವರ್ತಿಗಳಿಂದಲೇ ತನಗೆ ಅಸ್ತಿತ್ವ ಸಿಕ್ಕಿದೆ ಎಂಬ ಕೃತಜ್ಞತೆ ಸಮುದ್ರರಾಜನಿಗಿತ್ತು. ರಾಮಕಾರ್ಯಕ್ಕಾಗಿ ಹೊರಟಿರುವ ಈ ಮಹಾವೀರ ಹನುಮಂತನಿಗೆ ಏನಾದರೂ ಸಹಾಯ ಮಾಡಬೇಕು, ಇಷ್ಟು ದೂರದ ಪಯಣದಲ್ಲಿ ಅವನಿಗೆ ದಣಿವಾರಿಸಿಕೊಳ್ಳಲು ಒಂದು ಆಸರೆ ನೀಡಬೇಕು ಎಂದು ಸಮುದ್ರರಾಜನು ಬಯಸಿದನು.

ಒಂದೊಳ್ಳೆ ಮಾತು

ಸಾಗರೋಲ್ಲಂಘನ ಮಾಡಲು ಯೋಚಿಸುತ್ತಾ ಕುಳಿತಿದ್ದ ಹನುಮಂತನು ಜಾಂಬವಂತನ ನುಡಿ ಳಿಂದ ಜಾಗೃತಗೊಂಡು ಮಹಾಪರ್ವತದಂಥ ರೂಪ ತಾಳಿ ‘ಜೈ ಶ್ರೀರಾಮ’ ಎಂದು ಸಿಂಹನಾದ ಮಾಡುತ್ತಾ ಆಕಾಶಕ್ಕೆ ಚಿಮ್ಮಿದನು. ಅವನ ವೇಗಕ್ಕೆ ಸಮುದ್ರದ ನೀರು ಎರಡು ಭಾಗವಾಗುತ್ತಿತ್ತು, ಮೋಡಗಳು ಚೆಪಿಲ್ಲಿಯಾಗುತ್ತಿದ್ದವು.

ನೂರು ಯೋಜನಗಳ ಆ ಅಗಾಧ ಸಮುದ್ರವನ್ನು ದಾಟಿ ಸೀತೆಯಿರುವ ಲಂಕೆಯನ್ನು ಸೇರುವು ದೊಂದೇ ಅವನ ಮನಸ್ಸಿನಲ್ಲಿದ್ದ ಏಕೈಕ ಸಂಕಲ್ಪ. ಹನುಮಂತನು ಆಕಾಶಮಾರ್ಗದಲ್ಲಿ ಹಾರಿ ಹೋಗುತ್ತಿರುವುದನ್ನು ಕೆಳಗಿನಿಂದ ಸಮುದ್ರರಾಜನು ಕಂಡನು.

ಶ್ರೀರಾಮನ ಪೂರ್ವಜರಾದ ಸಗರ ಚಕ್ರವರ್ತಿಗಳಿಂದಲೇ ತನಗೆ ಅಸ್ತಿತ್ವ ಸಿಕ್ಕಿದೆ ಎಂಬ ಕೃತಜ್ಞತೆ ಸಮುದ್ರರಾಜನಿಗಿತ್ತು. ರಾಮಕಾರ್ಯಕ್ಕಾಗಿ ಹೊರಟಿರುವ ಈ ಮಹಾವೀರ ಹನುಮಂತನಿಗೆ ಏನಾದರೂ ಸಹಾಯ ಮಾಡಬೇಕು, ಇಷ್ಟು ದೂರದ ಪಯಣದಲ್ಲಿ ಅವನಿಗೆ ದಣಿವಾರಿಸಿಕೊಳ್ಳಲು ಒಂದು ಆಸರೆ ನೀಡಬೇಕು ಎಂದು ಸಮುದ್ರರಾಜನು ಬಯಸಿದನು. ಅವನು ಸಮುದ್ರದ ಆಳದಲ್ಲಿ ಅಡಗಿದ್ದ ಮೈನಾಕ ಪರ್ವತವನ್ನು ಕರೆದು ಆಜ್ಞಾಪಿಸಿದನು: “ಎಲೈ ಮೈನಾಕನೇ, ನೀನು ಮೇಲೆದ್ದು ಬಾ. ಪವನಪುತ್ರನು ಸುದೀರ್ಘ ಪಯಣದಲ್ಲಿದ್ದಾನೆ. ಅವನಿಗೆ ವಿಶ್ರಮಿಸಲು ನಿನ್ನ ಶಿಖರಗಳನ್ನು ಹಾಸಿಗೆಯಂತೆ ಹಾಸಿಕೊಡು".

ಇದನ್ನೂ ಓದಿ:Roopa Gururaj Column: ರಾಮಚರಿತ ಮಾನಸ: ಮರಳಿದ ಹನುಮಂತನ ಆತ್ಮವಿಶ್ವಾಸ

ಸಮುದ್ರರಾಜನ ಆಜ್ಞೆಯಂತೆ, ಇದ್ದಕ್ಕಿದ್ದಂತೆ ಸಮುದ್ರದ ಮಧ್ಯದಲ್ಲಿ ಬೃಹತ್ ಚಿನ್ನದ ಪರ್ವತ ವೊಂದು ತಲೆಯೆತ್ತಿ ನಿಂತಿತು. ಅದರ ಸುಂದರವಾದ ಶಿಖರಗಳು, ತಂಪಾದ ನೆರಳು ನೀಡುವ ವೃಕ್ಷಗಳು ಮತ್ತು ಸವಿಯಾದ ಹಣ್ಣು-ಹಂಪಲುಗಳು ಯಾರನ್ನಾದರೂ ಒಂದು ಕ್ಷಣ ನಿಲ್ಲುವಂತೆ ಮಾಡುವಂತಿದ್ದವು.

ಮೈನಾಕನು ಹನುಮಂತನ ಮುಂದೆ ಪ್ರತ್ಯಕ್ಷನಾಗಿ ಅತ್ಯಂತ ವಿನಯದಿಂದ ಪ್ರಾರ್ಥಿಸಿದನು: “ಓ ಮಹಾವೀರನೇ, ನೀನು ವಾಯುದೇವನ ಪುತ್ರ. ವಾಯುದೇವನು ಹಿಂದೆ ಇಂದ್ರನು ಪರ್ವತಗಳ ರೆಕ್ಕೆಗಳನ್ನು ಕತ್ತರಿಸುವಾಗ ನನ್ನನ್ನು ರಕ್ಷಿಸಿದ ಉಪಕಾರಿ. ಆ ಸಂಬಂಧದಿಂದ ನೀನು ನನಗೆ ಅಣ್ಣನ ಸಮಾನ. ದಯವಿಟ್ಟು ನನ್ನ ಮೇಲೆ ಕುಳಿತು ಸ್ವಲ್ಪ ವಿಶ್ರಾಂತಿ ಪಡೆ. ಈ ರುಚಿಯಾದ ಹಣ್ಣುಗಳನ್ನು ಭಕ್ಷಿಸಿ ನಿನ್ನ ದಣಿವಾರಿಸಿಕೊಂಡು ನಂತರ ನಿನ್ನ ಪಯಣ ಮುಂದುವರಿಸು".

ಆಕಾಶದಲ್ಲಿ ಮಿಂಚಿನಂತೆ ಸಾಗುತ್ತಿದ್ದ ಹನುಮಂತನಿಗೆ ಮೈನಾಕನ ಆಹ್ವಾನ ಕೇಳಿಸಿತು. ಕಣ್ಣು ಹಾಯಿಸಿದರೆ ಅಲ್ಲಿ ಅದ್ಭುತವಾದ ವಿಶ್ರಾಂತಿ ತಾಣವಿದೆ, ಹಸಿವು ತಣಿಸಲು ಹಣ್ಣುಗಳಿವೆ. ಆದರೆ ಹನುಮಂತನ ಹೃದಯದಲ್ಲಿ ಮೈನಾಕನ ಸುಂದರ ಶಿಖರಗಳಿಗಿಂತ ಹೆಚ್ಚಾಗಿ, ಅಶೋಕವನದಲ್ಲಿ ಕಣ್ಣೀರು ಹಾಕುತ್ತಿರುವ ಮಾತೆ ಸೀತೆಯ ಮುಖ ಮತ್ತು ರಾಮನ ಕಳವಳ ತುಂಬಿತ್ತು.

ಹನುಮಂತನು ಒಂದು ಕ್ಷಣವೂ ಅಲ್ಲಿ ನಿಲ್ಲಲಿಲ್ಲ. ಈ ಸಂದರ್ಭದಲ್ಲಿನ ರಾಮಚರಿತಮಾನಸದ (ಸುಂದರಕಾಂಡ) ಪ್ರಸಿದ್ಧ ದೋಹಾ ಹೀಗಿದೆ:

ಹನುಮಾನ ತೆಹಿ ಪರಸಾ ಕರ ಪುನಿ ಕೀನ್ಹ ಪ್ರಣಾಮ |

ರಾಮ ಕಾಜು ಕೀನ್ಹೇಂ ಬಿನು ಮೋಹಿ ಕಹಾಂ ಬಿಶ್ರಾಮ ||

ಅಂದರೆ, ಹನುಮಂತನು ಮೈನಾಕ ಪರ್ವತವನ್ನು ಪ್ರೀತಿಯಿಂದ ಸ್ಪರ್ಶಿಸಿದನು ಮತ್ತು ಪರ್ವತಕ್ಕೆ ಭಕ್ತಿಯಿಂದ ಪ್ರಣಾಮ ಮಾಡಿದನು. “ನಿನ್ನ ಪ್ರೀತಿಗೆ ನಾನು ಚಿರಋಣಿ. ಆದರೆ ಪ್ರಭು ಶ್ರೀರಾಮನ ಕಾರ್ಯವನ್ನು ಪೂರ್ಣಗೊಳಿಸುವ ಮೊದಲು ನನಗೆ ವಿಶ್ರಾಂತಿ ಪಡೆಯುವ ಅಧಿಕಾರ ಎಲ್ಲಿದೆ? ವಿಶ್ರಾಂತಿ ಎನ್ನುವುದು ಗುರಿ ತಲುಪಿದ ನಂತರ ಸಿಗಬೇಕಾದ ಫಲವೇ ಹೊರತು, ಹಾದಿಯಲ್ಲಿ ಪಡೆಯುವ ಸುಖವಲ್ಲ".

ಹನುಮಂತನು ಮೈನಾಕನ ಆತಿಥ್ಯವನ್ನು ತಿರಸ್ಕರಿಸಲಿಲ್ಲ, ಬದಲಿಗೆ ಅತ್ಯಂತ ಸಂಸ್ಕಾರಯುತವಾಗಿ ನಡೆದುಕೊಂಡನು. ಒಂದು ಕ್ಷಣವೂ ವಿಳಂಬ ಮಾಡದೆ, ತನ್ನ ವೇಗವನ್ನು ಹೆಚ್ಚಿಸಿಕೊಂಡು ಲಂಕೆಯತ್ತ ಮುನ್ನುಗ್ಗಿದನು. ಹನುಮಂತನ ಈ ನಿಷ್ಠೆಯನ್ನು ಕಂಡು ದೇವತೆಗಳು ಆಕಾಶದಿಂದ ಹೂಮಳೆ ಸುರಿಸಿದರು.

ಮೈನಾಕ ಪರ್ವತವೂ ಆ ಮಹಾವೀರನ ಕರ್ತವ್ಯಪ್ರಜ್ಞೆಗೆ ಮಾರು ಹೋಗಿ ಅವನ ಪಯಣವನ್ನು ಹರಸುತ್ತಾ ನಿಂತಿತು. ಬದುಕಿನ ಹಾದಿಯಲ್ಲಿ ಮೈನಾಕನಂಥ ಅನೇಕ ಆಕರ್ಷಣೆಗಳು, ಸುಖಗಳು ಮತ್ತು ವಿಶ್ರಾಂತಿಯ ಆಮಿಷಗಳು ನಮಗೆ ಎದುರಾಗುತ್ತವೆ. ಅವು ಕೆಟ್ಟದ್ದಲ್ಲದಿದ್ದರೂ, ನಮ್ಮ ಗುರಿಯನ್ನು ವಿಳಂಬಗೊಳಿಸುತ್ತವೆ. ಗುರಿ ಮುಟ್ಟುವವರೆಗೂ ಮನಸ್ಸನ್ನು ವಿಚಲಿತಗೊಳಿಸಿಕೊಳ್ಳದೆ ಮತ್ತು ಪ್ರೀತಿಯಿಂದ ಕರೆದವರಿಗೆ ಗೌರವ ನೀಡುತ್ತಲೇ ಕರ್ತವ್ಯಕ್ಕೆ ಮೊದಲ ಆದ್ಯತೆ ನೀಡಬೇಕು.

ಆಗ ಮಾತ್ರ ನಾವು ಅಂದುಕೊಂಡ ಗುರಿಯನ್ನು ತಲುಪಲು ಸಾಧ್ಯ. ಕರ್ತವ್ಯದ ಸಮಯದಲ್ಲಿ ಅನಗತ್ಯ ಆತಿಥ್ಯವನ್ನು ಸ್ವೀಕರಿಸಿ ಮುಲಾಜಿಗೆ ಬೀಳಬಾರದು. ಅದನ್ನು ವಿನಯದಿಂದ ನಿರಾಕರಿ ಸುವ ಸಮಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು.

ರೂಪಾ ಗುರುರಾಜ್

View all posts by this author