ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ರಾಮಚರಿತ ಮಾನಸ: ಮರಳಿದ ಹನುಮಂತನ ಆತ್ಮವಿಶ್ವಾಸ

ಜಾಂಬವಂತನು “ನನಗೆ ಮುಪ್ಪು ಬಂದಿದೆ, ಹಳೆಯ ಶಕ್ತಿ ಈಗ ಉಳಿದಿಲ್ಲ" ಎಂದು ಗೊಣಗಿದನು. ಹೀಗೆ ಪ್ರತಿಯೊಬ್ಬರೂ ತಮ್ಮ ಮಿತಿಯನ್ನು ಹೇಳುತ್ತಾ ಅಸಹಾಯಕತೆಯಿಂದ ಮೌನವಾದಾಗ, ಇಡೀ ವಾತಾವರಣದಲ್ಲಿ ನಿರಾಶೆ ಮನೆ ಮಾಡಿತ್ತು. ಆದರೆ ಅಲ್ಲಿ ಒಬ್ಬ ವೀರ ಮಾತ್ರ ಸಮುದ್ರದ ಅಲೆಗಳನ್ನು ನೋಡುತ್ತಾ ಶಾಂತನಾಗಿ ಕುಳಿತಿದ್ದ. ಅವನೇ ಪವನಪುತ್ರ ಹನುಮಂತ.

ರಾಮಚರಿತ ಮಾನಸ: ಮರಳಿದ ಹನುಮಂತನ ಆತ್ಮವಿಶ್ವಾಸ

-

ಒಂದೊಳ್ಳೆ ಮಾತು

ಸೀತೆಯನ್ನು ಹುಡುಕುತ್ತಾ ದಕ್ಷಿಣ ಸಮುದ್ರ ತೀರಕ್ಕೆ ಬಂದ ವಾನರ ಸೈನ್ಯಕ್ಕೆ ನೂರು ಯೋಜನ ವಿಸ್ತಾರದ ಸಮುದ್ರವನ್ನು ದಾಟುವುದು ಹೇಗೆಂಬ ಚಿಂತೆ ಕಾಡುತ್ತದೆ. ಎಲ್ಲಾ ವೀರರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ. ಅಂಗದನು “ನಾನು ಸಮುದ್ರವನ್ನು ದಾಟಬಲ್ಲೆ, ಆದರೆ ಮರಳಿ ಬರುವ ಶಕ್ತಿ ನನಗಿದೆಯೇ ಎಂದು ಸಂಶಯವಿದೆ" ಎಂದನು.

ಜಾಂಬವಂತನು “ನನಗೆ ಮುಪ್ಪು ಬಂದಿದೆ, ಹಳೆಯ ಶಕ್ತಿ ಈಗ ಉಳಿದಿಲ್ಲ" ಎಂದು ಗೊಣಗಿದನು. ಹೀಗೆ ಪ್ರತಿಯೊಬ್ಬರೂ ತಮ್ಮ ಮಿತಿಯನ್ನು ಹೇಳುತ್ತಾ ಅಸಹಾಯಕತೆಯಿಂದ ಮೌನವಾದಾಗ, ಇಡೀ ವಾತಾವರಣದಲ್ಲಿ ನಿರಾಶೆ ಮನೆ ಮಾಡಿತ್ತು. ಆದರೆ ಅಲ್ಲಿ ಒಬ್ಬ ವೀರ ಮಾತ್ರ ಸಮುದ್ರದ ಅಲೆಗಳನ್ನು ನೋಡುತ್ತಾ ಶಾಂತನಾಗಿ ಕುಳಿತಿದ್ದ. ಅವನೇ ಪವನಪುತ್ರ ಹನುಮಂತ.

ಹನುಮಂತನಿಗೆ ತನ್ನ ಮಹಾಶಕ್ತಿಯ ಅರಿವೇ ಇರಲಿಲ್ಲ. ಬಾಲ್ಯದಲ್ಲಿ ಋಷಿಗಳ ಶಾಪದಿಂದಾಗಿ, ಯಾರಾದರೂ ನೆನಪಿಸುವವರೆಗೂ ಅವನ ಶಕ್ತಿ ಅವನಿಗೆ ಮರೆತು ಹೋಗುತ್ತಿತ್ತು. ವಾನರ ಸೈನ್ಯದ ಹಿರಿಯನಾದ, ಜ್ಞಾನವೃದ್ಧ ಜಾಂಬವಂತನು ಹನುಮಂತನ ಈ ಮೌನವನ್ನು ಗಮನಿಸಿದನು.

ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ: ವಾಲಿಯ ಮುಕ್ತಿಪಥ

ಹನುಮಂತನ ಹತ್ತಿರ ನಡೆದು ಬಂದು ಅವನ ಭುಜದ ಮೇಲೆ ಕೈ ಇಟ್ಟು ಮೆಲ್ಲಗೆ ಕೇಳಿದನು: ಕಹಇ ರೀಛಪತಿ ಸುನು ಹನುಮಾನಾ | ಕಾ ಚುಪ ಸಾಧಿ ರಹೇಹು ಬಲವಾನಾ || (ಎಲೈ ಬಲಶಾಲಿಯಾದ ಹನುಮಂತನೇ, ನೀನೇಕೆ ಈ ರೀತಿ ಮೌನವಾಗಿ ಕುಳಿತಿದ್ದೀಯಾ? ನಿನಗೆ ನಿನ್ನ ಬಗ್ಗೆ ಅರಿವಿಲ್ಲವೇ?).

ಜಾಂಬವಂತನ ದನಿ ಗಂಭೀರವಾಯಿತು. ಅವನು ಹನುಮಂತನಿಗೆ ಅವನ ಹಿರಿಮೆಯನ್ನು ನೆನಪಿಸಲು ಪ್ರಾರಂಭಿಸಿದನು. “ಹನುಮಂತ, ನೀನು ಸಾಧಾರಣ ವಾನರನಲ್ಲ. ನೀನು ವಾಯುಪುತ್ರ. ನಿನ್ನ ವೇಗ ವಾಯುವಿನಷ್ಟೇ ಅಗಾಧವಾದುದು. ಜಗತ್ತಿನ ಕಷ್ಟಗಳನ್ನು ಪರಿಹರಿಸಲೆಂದೇ ಅವತರಿಸಿ ದ ಮಹಾಪ್ರಾಣ ನೀನು.

ಬುದ್ಧಿ, ವಿವೇಕ ಮತ್ತು ವಿeನದ ಮಹಾಸಾಗರ ನೀನು. ನಿನ್ನಂಥ ವೀರನಿಗೆ ಈ ನೂರು ಯೋಜನದ ಸಮುದ್ರವು ಒಂದು ಸಣ್ಣ ಗೋವಿನ ಪಾದದ ಗುರುತಿನಷ್ಟೇ (ಗೋಷ್ಪದ) ಸಣ್ಣದು!".

ಜಾಂಬವಂತನ ಪ್ರತಿಯೊಂದು ಮಾತು ಕಿವಿಗೆ ಬೀಳುತ್ತಿದ್ದಂತೆ, ಹನುಮಂತನ ಸುಪ್ತಪ್ರಜ್ಞೆ ಎಚ್ಚರ ಗೊಳ್ಳತೊಡಗಿತು. ಅವನ ರಕ್ತದಲ್ಲಿ ಮಿಂಚಿನ ಸಂಚಾರವಾದಂತಾಯಿತು. ಹನುಮಂತನು ನಿಧಾನ ವಾಗಿ ಎದ್ದು ನಿಂತನು. ಅವನ ಶರೀರವು ಆಕಾಶದಷ್ಟು ಬೆಳೆಯತೊಡಗಿತು. ಅವನ ಮುಖದಲ್ಲಿ ಈಗ ಅಂಜಿಕೆಯಿಲ್ಲ, ಬದಲಾಗಿ ರಾಮನ ಕಾರ್ಯವನ್ನು ಪೂರೈಸಲೇಬೇಕೆಂಬ ದೃಢ ಸಂಕಲ್ಪವಿತ್ತು.

ಪರ್ವತದಂತೆ ಬೃಹತ್ ರೂಪ ತಾಳಿದ ಹನುಮಂತನು ಗುಡುಗಿನ ದನಿಯಲ್ಲಿ ಹೇಳಿದನು: “ಜಾಂಬವಂತನೇ, ನಿನ್ನ ಮಾತುಗಳು ನನ್ನ ಮೈಯಲ್ಲಿ ಹೊಸ ಚೈತನ್ಯ ತುಂಬಿವೆ. ಈ ಸಮುದ್ರ ವನ್ನೇನು, ಇಡೀ ಬ್ರಹ್ಮಾಂಡವನ್ನೇ ಹಾರಿ ಬರಬಲ್ಲ ಶಕ್ತಿ ಈಗ ನನಗಿದೆ ಎನಿಸುತ್ತಿದೆ. ನಾನು ಈ ಕ್ಷಣವೇ ಲಂಕೆಗೆ ಹಾರುತ್ತೇನೆ, ಸೀತೆಯ ದರ್ಶನ ಪಡೆಯುತ್ತೇನೆ. ನಾನು ರಾಮನ ಕಾರ್ಯವನ್ನು ಮುಗಿಸದ ಹೊರತು ವಿಶ್ರಮಿಸುವುದಿಲ್ಲ!".

ಹನುಮಂತನು ಸಮುದ್ರದ ಮೇಲೆ ಹಾರಲು ಸಿದ್ಧನಾಗಿ ನಿಂತ ಆ ಕ್ಷಣ, ಮನುಕುಲಕ್ಕೆ ಒಂದು ದೊಡ್ಡ ಪಾಠವನ್ನು ನೀಡಿತು. ನಮ್ಮಲ್ಲಿ ಪ್ರತಿಯೊಬ್ಬರೂ ಹನುಮಂತನಂತೆ ಅಪಾರ ಶಕ್ತಿಯನ್ನು ಹೊತ್ತವರು. ಆದರೆ ಸಂಕೋಚ, ಭಯ ಮತ್ತು ‘ನನ್ನಿಂದ ಅಸಾಧ್ಯ’ ಎಂಬ ಅಳುಕು ನಮ್ಮನ್ನು ಕಟ್ಟಿಹಾಕಿರುತ್ತದೆ. ನಮಗೆ ಬೇಕಾಗಿರುವುದು ನಮ್ಮನ್ನು ಪ್ರೋತ್ಸಾಹಿಸುವ ಒಬ್ಬ ‘ಜಾಂಬವಂತ’.

ಸೋತಾಗ ಅಥವಾ ಅಡೆತಡೆಗಳು ಬಂದಾಗ ನಾವು ಹನುಮಂತನಂತೆ ಮೌನವಾಗಿ ಕುಳಿತು ಬಿಡು ತ್ತೇವೆ. ನಮಗೆ ಬೇಕಾಗಿರುವುದು ಕೇವಲ ನಮ್ಮ ಮೇಲೆ ನಮಗಿರುವ ನಂಬಿಕೆ. ದಾರಿಯಲ್ಲಿ ಅಡೆತಡೆ ಗಳು ಬರುವುದು ನಮ್ಮನ್ನು ತಡೆಯಲಿಕ್ಕಲ್ಲ, ಬದಲಿಗೆ ನಮ್ಮ ಶಕ್ತಿಯನ್ನು ಪರೀಕ್ಷಿಸಿ ನಮ್ಮನ್ನು ಗಟ್ಟಿಗೊಳಿಸಲು. ಆದರೆ ನಮ್ಮ ಶಕ್ತಿಯನ್ನು ನಾವೇ ನೆನಪಿಸಿಕೊಂಡಾಗ ಅಥವಾ ಗುರುವಿನ ಪ್ರೇರಣೆ ಸಿಕ್ಕಾಗ, ಹನುಮಂತನು ಸಮುದ್ರವನ್ನು ದಾಟಿದಂತೆ ನಾವು ಬದುಕಿನ ಯಾವುದೇ ಅಡೆತಡೆಯನ್ನು ಸುಲಭವಾಗಿ ದಾಟಬಹುದು. ಇಂಥ ಶಕ್ತಿ ನೀಡುವ ಗುರು ಪ್ರೇರಣೆ ಎಲ್ಲರಿಗೂ ಆಗಲಿ, ಬದುಕನ್ನು ಆತ್ಮವಿಶ್ವಾಸದಿಂದ ಎದುರಿಸುವಂತೆ ಆಗಲಿ ಎನ್ನುವುದೇ ಹಾರೈಕೆ.