ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ರಾಮಚರಿತ ಮಾನಸ: ರಾಮ ಮತ್ತು ಸುಗ್ರೀವನ ಸ್ನೇಹದ ವಾತಾವರಣ

ಯಾರು ತನ್ನ ಮಿತ್ರನ ದುಃಖವನ್ನು ಕಂಡು ದುಃಖಿತರಾಗುವುದಿಲ್ಲವೋ, ಅಂಥವರ ಮುಖ ನೋಡು ವುದು ಕೂಡ ಪಾಪದ ಕೆಲಸ. ತನ್ನ ಬೆಟ್ಟದಂಥ ದೊಡ್ಡ ಕಷ್ಟವನ್ನೂ ಧೂಳಿನ ಕಣದಂತೆ ಭಾವಿಸಿ, ಮಿತ್ರನ ಸಣ್ಣ ಕಷ್ಟವನ್ನೂ ಮೇರುಪರ್ವತದಂತೆ ಅತಿ ದೊಡ್ಡದೆಂದು ಭಾವಿಸಿ ಸಹಾಯ ಮಾಡುವವನೇ ಶ್ರೇಷ್ಠ ಮಿತ್ರ ಎಂದರ್ಥ.

ಒಂದೊಳ್ಳೆ ಮಾತು

ರಾಮಚರಿತ ಮಾನಸದಲ್ಲಿ ಶ್ರೀರಾಮನು ಸುಗ್ರೀವನಿಗೆ ಸ್ನೇಹದ ಮಹತ್ವವನ್ನು ವಿವರಿಸುವ ಈ ಪ್ರಸಂಗವು ಇಂದಿನ ಸಮಾಜಕ್ಕೆ ಅತ್ಯಗತ್ಯವಾದ ಪಾಠವಾಗಿದೆ.

ಮೂಲ ಶ್ಲೋಕ (ಚೌಪಾಯಿ):

ಜೇ ನ ಮಿತ್ರ ದುಖ ಹೋಹಿಂ ದುಖಾರೀ |

ತಿನ್ಹಹಿ ಬಿಲೋಕತ ಪಾತಕು ಭಾರೀ || ನಿಜ ದುಖ

ಗಿರಿ ಸಮ ರಜ ಕರಿ ಜಾನಾ | ಮಿತ್ರಕ ದುಖ ರಜ

ಮೇರು ಸಮಾನಾ ||

ಅಂದರೆ, ಯಾರು ತನ್ನ ಮಿತ್ರನ ದುಃಖವನ್ನು ಕಂಡು ದುಃಖಿತರಾಗುವುದಿಲ್ಲವೋ, ಅಂಥವರ ಮುಖ ನೋಡುವುದು ಕೂಡ ಪಾಪದ ಕೆಲಸ. ತನ್ನ ಬೆಟ್ಟದಂಥ ದೊಡ್ಡ ಕಷ್ಟವನ್ನೂ ಧೂಳಿನ ಕಣದಂತೆ ಭಾವಿಸಿ, ಮಿತ್ರನ ಸಣ್ಣ ಕಷ್ಟವನ್ನೂ ಮೇರುಪರ್ವತದಂತೆ ಅತಿ ದೊಡ್ಡದೆಂದು ಭಾವಿಸಿ ಸಹಾಯ ಮಾಡುವವನೇ ಶ್ರೇಷ್ಠ ಮಿತ್ರ ಎಂದರ್ಥ.

ರಾಮ-ಲಕ್ಷ್ಮಣರು ಸೀತೆಯನ್ನರಸಿ ಬರುವಾಗ ಹನುಮಂತ ಅವರನ್ನು ಗುರುತಿಸಿ ರಾಮ ಮತ್ತು ಸುಗ್ರೀವರ ನಡುವೆ ಪರಸ್ಪರ ಪರಿಚಯ ಮಾಡಿಸುತ್ತಾನೆ. ಸುಗ್ರೀವನು ರಾಮನ ನೀಲಮೇಘ ಶ್ಯಾಮಲ ವರ್ಣದ ಸೌಂದರ್ಯಕ್ಕೆ ಮನಸೋಲುತ್ತಾನೆ.

ಅಗ್ನಿಯನ್ನು ಸಾಕ್ಷಿಯಾಗಿಟ್ಟುಕೊಂಡು ಅವರಿಬ್ಬರೂ ಕೈ ಕೈ ಹಿಡಿದು ಸ್ನೇಹದ ಹಸ್ತ ಚಾಚುತ್ತಾರೆ. ಸುಗ್ರೀವನು ತನ್ನ ಕಥೆಯನ್ನು ವಿವರಿಸುವಾಗ ದುಃಖದ ಕಟ್ಟೆ ಒಡೆಯುತ್ತದೆ. “ಪ್ರಭು, ನನ್ನ ಅಣ್ಣ ವಾಲಿಯು ನನ್ನನ್ನು ರಾಜ್ಯದಿಂದ ಹೊರಹಾಕಿದ್ದಾನೆ.

ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ: ರಾಮ ಮತ್ತು ಹನುಮರ ಭೇಟಿ

ಅಷ್ಟೇ ಅಲ್ಲದೆ, ಪ್ರಾಣಕ್ಕಿಂತ ಹೆಚ್ಚಾದ ನನ್ನ ಹೆಂಡತಿಯನ್ನು ಬಲವಂತವಾಗಿ ತನ್ನವಳನ್ನಾಗಿ ಮಾಡಿಕೊಂಡಿದ್ದಾನೆ. ನಾನಿಲ್ಲಿ ಅನಾಥನಾಗಿ, ಪ್ರತಿಕ್ಷಣವೂ ಸಾವಿನ ಭಯದಲ್ಲಿ ಬದುಕುತ್ತಿದ್ದೇನೆ" ಎಂದು ರಾಮನ ಪಾದಗಳ ಮೇಲೆ ಬಿದ್ದು ಕಣ್ಣೀರು ಹಾಕುತ್ತಾನೆ.

ಅವನ ಅಳಲನ್ನು ಕೇಳಿದ ರಾಮನ ಕಣ್ಣುಗಳಲ್ಲಿ ಕರುಣೆ ತುಂಬಿ ಬರುತ್ತದೆ. ರಾಮ ಹೇಳುತ್ತಾನೆ, “ಸುಗ್ರೀವ, ಶಾಂತನಾಗು. ಸೂರ್ಯನ ತೇಜಸ್ಸಿನಂತಿರುವ ನಿನ್ನ ಮುಖದಲ್ಲಿ ಈ ಕಣ್ಣೀರು ಶೋಭಿಸು ವುದಿಲ್ಲ. ನಿನ್ನ ಶತ್ರು ಯಾರೋ, ಅವನೇ ನನ್ನ ಶತ್ರು".

ಸುಗ್ರೀವನ ಭರವಸೆ ಹೆಚ್ಚಿಸಲು ರಾಮನು ಅಲ್ಲಿ ಸ್ನೇಹದ ಬಗ್ಗೆ ಸಾರ್ವಕಾಲಿಕ ಸತ್ಯಗಳನ್ನು ಬೋಧಿಸುತ್ತಾನೆ. ಇದು ರಾಮಚರಿತಮಾನಸದ ಅತ್ಯಂತ ಉದಾತ್ತ ಭಾಗ. ರಾಮ ಹೇಳುತ್ತಾನೆ: “ಸುಗ್ರೀವ, ಯಾವ ಮಿತ್ರನು ತನ್ನ ಗೆಳೆಯನ ಕಷ್ಟವನ್ನು ಕಂಡು ದುಃಖಿತನಾಗುವುದಿಲ್ಲವೋ, ಅಂಥವನ ಮುಖ ನೋಡುವುದು ಕೂಡ ಪಾಪ. ಗೆಳೆಯನ ಬೆಟ್ಟದಂಥ ಕಷ್ಟವನ್ನು ತಾನು ಸಾಸಿವೆ ಯ ಕಾಳಿನಂತೆ ಭಾವಿಸಿ ದೂರ ಮಾಡಬೇಕು. ನಿಜವಾದ ಮಿತ್ರನು ತನ್ನ ಗೆಳೆಯನಲ್ಲಿರುವ ನೂರು ದೋಷಗಳನ್ನು ಜಗತ್ತಿಗೆ ತೋರಿಸಬಾರದು.

ಬದಲಿಗೆ, ಅವನಲ್ಲಿರುವ ಒಂದು ಸಣ್ಣ ಗುಣವನ್ನು ಪರ್ವತದಂತೆ ಎತ್ತಿ ಹಿಡಿಯಬೇಕು. ಗೆಳೆಯನು ದಾರಿ ತಪ್ಪಿದಾಗ, ಅವನನ್ನು ತಡೆದು ಸರಿಯಾದ ದಾರಿಗೆ ತರಬೇಕು. ಸಂಕಷ್ಟದ ಸಮಯದಲ್ಲಿ ನೂರು ಪಟ್ಟು ಹೆಚ್ಚು ಪ್ರೀತಿಯನ್ನು ತೋರಿಸಿ ಅವನ ಬೆನ್ನಿಗೆ ನಿಲ್ಲಬೇಕು".

ರಾಮನು ಸುಗ್ರೀವನಿಗೆ ಧೈರ್ಯ ತುಂಬುತ್ತಾ, “ಮಿತ್ರನೇ, ಭಯಪಡಬೇಡ. ಒಂದೇ ಬಾಣದಿಂದ ವಾಲಿಯನ್ನು ಸಂಹರಿಸಿ ನಿನ್ನ ಹೆಂಡತಿ ಮತ್ತು ರಾಜ್ಯವನ್ನು ನಿನಗೆ ಮರಳಿ ಕೊಡಿಸುತ್ತೇನೆ" ಎಂದು ವಚನ ನೀಡುತ್ತಾನೆ. ಸುಗ್ರೀವನಿಗೆ ವಾಲಿಯ ಶಕ್ತಿಯ ಬಗ್ಗೆ ಅತಿಯಾದ ಹೆದರಿಕೆ ಇತ್ತು. ಅದನ್ನು ಹೋಗಲಾಡಿಸಲು ರಾಮನು ತನ್ನ ಹೆಬ್ಬೆರಳಿನಿಂದಲೇ ದುಂದುಭಿ ರಾಕ್ಷಸನ ಅಸ್ಥಿಪಂಜರವನ್ನು ಗಾಳಿಯಲ್ಲಿ ತೂರಿದನು ಮತ್ತು ಏಳು ಸಾಲುವೃಕ್ಷಗಳನ್ನು ಒಂದೇ ಬಾಣದಿಂದ ಭೇದಿಸಿದನು.

ರಾಮನ ಈ ಅದ್ಭುತ ಶಕ್ತಿಯನ್ನು ಕಂಡ ಸುಗ್ರೀವನಿಗೆ ಈಗ ರಾಮನೇ ಪರಮಾತ್ಮನೆಂಬ ಅರಿವಾ ಯಿತು. ನಂತರ ನಡೆದ ಯುದ್ಧದಲ್ಲಿ ರಾಮನು ವಾಲಿಯನ್ನು ಸಂಹರಿಸುತ್ತಾನೆ. ಸುಗ್ರೀವನಿಗೆ ಪಟ್ಟಾಭಿಷೇಕವಾಗುತ್ತದೆ. ರಾಮನು ತಾನು ನೀಡಿದ ಮಾತನ್ನು ಉಳಿಸಿಕೊಳ್ಳುತ್ತಾನೆ. ಸುಗ್ರೀವನು ಕೃತಜ್ಞತೆಯಿಂದ ರಾಮನ ಸೇವೆಯಲ್ಲಿ ತನ್ನನ್ನೇ ಅರ್ಪಿಸಿಕೊಳ್ಳುತ್ತಾನೆ.

ನಮ್ಮ ಬದುಕಿನಲ್ಲಿ ನೂರಾರು ಗೆಳೆಯರಿರುವುದಕ್ಕಿಂತ, ಕಷ್ಟದ ಸಮಯದಲ್ಲಿ ನೆರಳಾಗುವ ಒಬ್ಬ ಮಿತ್ರನಿದ್ದರೂ ಸಾಕು. ನಾವು ಇತರರಿಗೆ ಎಂಥ ಮಿತ್ರರಾಗಿದ್ದೇವೆ ಎಂದು ನಾವೇ ಪ್ರಶ್ನಿಸಿಕೊಳ್ಳಬೇಕು. ನಮ್ಮ ಸುಖದಲ್ಲಿ ಭಾಗಿಯಾಗುವವರಿಗಿಂತ, ನಮ್ಮ ಕಣ್ಣೀರನ್ನು ಒರೆಸುವ ಕೈಗಳಿಗೆ ಬೆಲೆ ಹೆಚ್ಚು. ಸ್ನೇಹ ಎಂಬುದು ಕೇವಲ ಮಾತಲ್ಲ, ಅದು ಜೀವನಪರ್ಯಂತ ನಿಭಾಯಿಸಬೇಕಾದ ದೊಡ್ಡ ಜವಾಬ್ದಾರಿ...

ರೂಪಾ ಗುರುರಾಜ್

View all posts by this author