ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಮೋ ವಿಗ್ರಹವಾನ್‌ ಧರ್ಮಃ

ಪುತ್ರ, ಸೋದರ, ಪತಿ, ರಾಜನೀತಿಜ್ಞ, ಶಿಷ್ಯ, ಯೋಧ, ಆದರ್ಶಮಿತ್ರನಾಗಿ, ಶತ್ರುವಿದ್ದರೂ ರಾಮನಂತಿರಬೇಕು ಎಂಬುದಕ್ಕೆ ಶ್ರೀರಾಮನೇ ಆದರ್ಶ ಪುರುಷೋತ್ತಮನಾಗಿದ್ದಾನೆ. ಬೇರೆ ಬೇರೆ ಮನುಷ್ಯನಲ್ಲಿ ಬೇರೆ ಬೇರೆ ಸದ್ಗುಣಗಳಿರಬಹುದು. ಆದರೆ ಅವೆಲ್ಲವೂ ಒಬ್ಬನಲ್ಲೇ ಇರಲು ಸಾಧ್ಯವೇ? ಎಂದರೆ ಸಾಧ್ಯವಿದೆ.

ರಾಮೋ ವಿಗ್ರಹವಾನ್‌ ಧರ್ಮಃ

-

Ashok Nayak
Ashok Nayak Mar 27, 2026 9:33 AM

ತನ್ನಿಮಿತ್ತ

ಅಶ್ವಿನಿ ಹೊದಲ

ಧರ್ಮದ ಸಾಕಾರಮೂರ್ತಿಯೇ ಶ್ರೀರಾಮ. ಧರ್ಮ ಮತ್ತು ಅಧರ್ಮಗಳ ನಡುವಿನ ನಿರಂತರ ಸೆಣಸಾಟವೇ ಲೋಕದ ಇತಿಹಾಸ. ಆದರೆ ಚಿತ್ತ ಸಂಯಮದಿಂದ, ಏಕಾಗ್ರಕರ್ಮ ಯೋಗದಿಂದ, ಯೋಗ-ತಪಸ್ಸಾಧನೆಗಳಿಂದ ಅಂತರಾತ್ಮನಲ್ಲಿ ಪರಬ್ರಹ್ಮಸ್ವರೂಪವನ್ನು ಸಾಕ್ಷಾತ್ಕರಿಸಿಕೊಳ್ಳುವುದು ಮನುಷ್ಯನಿಗಿರುವ ಅಪೂರ್ವ ಸಾಧ್ಯತೆ. ಇದು ಅನ್ಯಪ್ರಾಣಿ ಗಳಿಗಿಲ್ಲ.

ಆದ್ದರಿಂದಲೇ ಪ್ರಾಚೀನ ಋಷಿ-ಮುನಿಗಳು ಈ ಸಾಧನೆಯಲ್ಲಿ ತೊಡಗಿಕೊಂಡು ಮಹಾತ್ಮ ರೆನಿಸಿದ್ದಾರೆ. ರಾಮಾಯಣದ ಆರಂಭವೇ ರಾಮನ ವ್ಯಕ್ತಿತ್ವವನ್ನು ಸೂಚಿಸುವಂಥದ್ದು. ಮುನಿಶ್ರೇಷ್ಠರಾದ ವಾಲ್ಮೀಕಿಯು ಮಹರ್ಷಿ ನಾರದರನ್ನು “ಸಕಲ ಸದ್ಗುಣ ಸಂಪನ್ನ, ಪರಾಕ್ರಮಶಾಲಿ, ಧರ್ಮಜ್ಞ, ಸತ್ಯಸಂಧ, ಮಾಡಿದ ಸಂಕಲ್ಪವನ್ನು ಬಿಡದವ, ಸದಾಚಾರ ಸಂಪನ್ನ, ಸರ್ವಭೂ ತಹಿತಕರ, ಸರ್ವಶಾಸ್ತ್ರಜ್ಞ, ಸರ್ವಕಾ ರ್ಯ ಧುರಂಧರ, ಜಿತೇಂದ್ರಿಯ, ಧೈರ್ಯಶಾಲಿ, ಕಾಂತಿವಂತ, ಕೋಪವನ್ನು ಜಯಿಸಿದವ, ಅಹಂಕಾರರಹಿತ, ಅಸೂಯೆ ಇಲ್ಲದವ, ಯುದ್ಧಕ್ಕೆ ನಿಂತರೆ ದೇವತೆಗಳನ್ನೇ ಗೆಲ್ಲಬಲ್ಲವ ಈ ಷೋಡಶ ಗುಣಗಳಿಂದ ಕೂಡಿದಂಥವ ಈಗ ಈ ಲೋಕದಲ್ಲಿ ಯಾರಾದರೂ ಇದ್ದರೆ ದಯವಿಟ್ಟು ತಿಳಿಸಿ" ಎಂದು ಕೇಳಿಕೊಂಡಾಗ ನಾರದರು ಹೇಳುವುದು ‘ದಾಶರಥಿ ರಾಮ’ನನ್ನು!

ಮತ್ತೆ ಈ ಎಲ್ಲಾ ಗುಣಗಳು ಯಾವುದೋ ಒಂದು ಸಂದರ್ಭಕ್ಕೋ, ಘಟನೆಗೋ ಸೀಮಿತ ವಾಗಿಲ್ಲದೇ ಇಡೀ ಜೀವನವೇ ಪಾಲಿಸುವಂಥದ್ದು. ಕಲಿಯುಗದ ಕಾಲಘಟ್ಟದಲ್ಲಿ ಅಸೂಯೆ ಇಲ್ಲ ದಂತೆಯೋ, ಕೋಪವನ್ನು ನಿಗ್ರಹಿಸುವುದೋ ಹೀಗೆ ಒಂದು ಗುಣವನ್ನೇ ಜೀವನ ಪರ್ಯಂತ ಸಾಧಿಸುವುದು ಕಷ್ಟವಾಗಿರುವಾಗ ಶ್ರೀರಾಮ ಷೋಡಶ ಸದ್ಗುಣಗಳನ್ನು ತನ್ನ ಬದುಕಿನುದ್ದಕ್ಕೂ ರೂಢಿಸಿಕೊಂಡಿದ್ದ ಎನ್ನುವಾಗ ಅವನ ಮೇರು ವ್ಯಕ್ತಿತ್ವವನ್ನು ನಾವು ಊಹಿಸಿಕೊಳ್ಳಬಹುದು. ಆ ಕಾರಣಕ್ಕಾಗಿಯೇ ಶ್ರೀರಾಮ ಸರ್ವಕಾಲಕ್ಕೂ ಆದರ್ಶ ಪುರುಷನಾಗಿ ಮಾದರಿಯಾಗಿರುವನು.

ಪುತ್ರ, ಸೋದರ, ಪತಿ, ರಾಜನೀತಿಜ್ಞ, ಶಿಷ್ಯ, ಯೋಧ, ಆದರ್ಶಮಿತ್ರನಾಗಿ, ಶತ್ರುವಿದ್ದರೂ ರಾಮನಂತಿರಬೇಕು ಎಂಬುದಕ್ಕೆ ಶ್ರೀರಾಮನೇ ಆದರ್ಶ ಪುರುಷೋತ್ತಮನಾಗಿದ್ದಾನೆ. ಬೇರೆ ಬೇರೆ ಮನುಷ್ಯನಲ್ಲಿ ಬೇರೆ ಬೇರೆ ಸದ್ಗುಣಗಳಿರಬಹುದು. ಆದರೆ ಅವೆಲ್ಲವೂ ಒಬ್ಬನಲ್ಲೇ ಇರಲು ಸಾಧ್ಯವೇ? ಎಂದರೆ ಸಾಧ್ಯವಿದೆ.

ಇದನ್ನೂ ಓದಿ: S G Hegde Column: ಹವ್ಯಕ ಭಾಷಾ ಅಕಾಡೆಮಿಯು ಸಾಧಿಸಬೇಕಾದದ್ದೇನು ?

ಸಕಲ ಸದ್ಗುಣಗಳ ಮೂರ್ತರೂಪವೇ ಶ್ರೀರಾಮ! ಪರಮಾತ್ಮನೇ ಲೋಕಕಲ್ಯಾಣಕ್ಕಾಗಿ ಮಾನವರೂಪಿಯಾಗಿ ಹುಟ್ಟಿ ಪರಿಪೂರ್ಣತೆಯ ಶಿಖರವನ್ನೇರಿ ದೈವತ್ವವನ್ನು ಪಡೆದು ದೇವತಾಪುರುಷನಾಗಿ ಕಾಣಿಸಿಕೊಳ್ಳುವುದು ಸೋಜಿಗವೇ ಸರಿ. ಶ್ರೀರಾಮನನ್ನು ಮಾನವ ನಂತೆ ನೋಡಿದಾಗ ಮಾತ್ರವೇ ಅವನ ಘನತೆ, ವ್ಯಕ್ತಿತ್ವ, ಮಹತ್ವ ಅರ್ಥವಾಗುತ್ತದೆ.

ರಾಮನೂ ನಮ್ಮಂತೆಯೇ ಮನುಷ್ಯನು, ಆದ್ದರಿಂದಲೇ ಅವನೂ ತನ್ನ ಜೀವನದುದ್ದಕ್ಕೂ ಹಲವು ಎಡರು-ತೊಡರುಗಳನ್ನು ಎದುರಿಸುತ್ತಾ ನಮ್ಮಂತೆಯೇ ಸುಖ-ದುಃಖಗಳನ್ನು ಅನುಭವಿಸಿದ. ವೈಯಕ್ತಿಕ ಹಾಗೂ ಕೌಟುಂಬಿಕ ಜೀವನದ ಪರಿಶುದ್ಧತೆಯಲ್ಲಿ, ಸಾಮಾಜಿಕ ವಾಗಿ ಪ್ರಜಾಪಾಲನೆಯಲ್ಲಿ ಆದರ್ಶವೇನೆಂಬುದನ್ನು ಶ್ರೀರಾಮನ ಮೂಲಕ ತೋರಿಸಿ ಕೊಡುವ ಮಹಾಗ್ರಂಥ ‘ರಾಮಾಯಣ’ ಇಡೀ ಜಗತ್ತಿಗೇ ದಾರಿದೀಪ.

ಧರ್ಮ ಮತ್ತು ಅಧರ್ಮಗಳ ಸಂಘರ್ಷದಲ್ಲಿ ಧರ್ಮಕ್ಕೇ ಅಂತಿಮ ಜಯವೆಂಬುದನ್ನು ಭಗವಂತನೇ ಸ್ವತಃ ನಮಗೆ ತೋರಿಸುವುದು ರಾಮಾಯಣದ ಚಿರಂತನತೆಯ ಗುಟ್ಟು. ‘ನ್ಯಾಯಾತ್ ಪಥಃ ಪ್ರವಿಚಲಂತಿ ಪದಂ ನ ಧಿರಾಃ’ ಅಂದರೆ ಎಂಥದೇ ಕಷ್ಟದ ಸಂದರ್ಭ ಬಂದೊದಗಿದರೂ ಧೀರರಾದವರು, ಧರ್ಮವನ್ನು ನ್ಯಾಯ ಮಾರ್ಗವನ್ನು ಬಿಡುವುದಿಲ್ಲ ಎಂಬ ರಾಮನ ಆದರ್ಶ ನಮಗೆಲ್ಲರಿಗೂ ಮಾರ್ಗದರ್ಶಕವಾಗಿದೆ.

ವನವಾಸಕ್ಕೆ ತೆರಳುವ ಮುಂಚೆ ಕೈಕೇಯಿಗೆ ನಮಸ್ಕರಿಸುವಾಗ ‘ವಿದ್ಧಿ ಮಾಂ ಋಷಭಸ್ತು ಲ್ಯಂ ಕೇವಲಂ ಧರ್ಮಚಾರಿಣಂ’- ಅಂದರೆ, ನನಗೆ ಸಂಪತ್ತು, ರಾಜ್ಯ, ಸುಖಭೋಗಗಳ ಚಿಂತೆಯಿಲ್ಲ, ಧರ್ಮಾಚರಣೆಯೇ ನನ್ನ ವ್ರತ ಎನ್ನುತ್ತಾನೆ ರಾಮ. ಇಂದಿನ ಕಾಲದಲ್ಲಿ ನಿಂತು ನೋಡಿದರೆ ರಾಮನ ಎಷ್ಟೋ ನಡೆಗಳ ಬಗ್ಗೆ ಅನೇಕರು ಆಕ್ಷೇಪಗಳನ್ನೆತ್ತುತ್ತಾರೆ.

ಒಬ್ಬ ಅಗಸನ ಮಾತನ್ನು ಕೇಳಿ ತುಂಬು ಗರ್ಭಿಣಿ ಸೀತೆಯನ್ನು ಕಾಡಿಗಟ್ಟಿದ್ದು ಸರಿಯೇ? ಮರದ ಮರೆಯಲ್ಲಿ ನಿಂತು ವಾಲಿಯನ್ನು ವಧಿಸಿದ್ದು ಧರ್ಮಕ್ಕೆ ವಿರೋಧವಲ್ಲವೇ? ಶೂದ್ರ ತಪಸ್ವಿಯಾದ ಶಂಬೂಕನ ಸಂಹಾರ ಸಾಧುವೇ? ನರನಾಗಿ ಜನಿಸಿದ ಶ್ರೀರಾಮ ತನ್ನ ನಡೆಯಿಂದ ಸಾಮಾನ್ಯ ಮತ್ತು ವಿಶೇಷ ಧರ್ಮಗಳನ್ನು ಹೇಗೆ ಆಚರಿಸಬೇಕು ಎಂಬುದನ್ನು ಸ್ವತಃ ನಡೆದು ತೋರಿದ್ದಾನೆ. ಸಾಮಾನ್ಯ ಧರ್ಮಕ್ಕೂ ವಿಶೇಷ ಧರ್ಮಕ್ಕೂ ಘರ್ಷಣೆ ಉಂಟಾದಾಗ ಸಾಮಾನ್ಯಧರ್ಮವನ್ನು ಬಿಟ್ಟು ವಿಶೇಷ ಧರ್ಮವನ್ನು ಪರಿಗ್ರಹಿಸಬೇಕು ಎಂಬ ಅಂಶವನ್ನು ವಿದಿತವಾಗಿಸಿದವ ರಾಮ!

ರಾಮನು ತಾನು ಚಕ್ರವರ್ತಿಯ ಕುಮಾರನಾಗಿದ್ದು ಬೇಡನಾದ ಗುಹನೊಂದಿಗೆ ಸಖ್ಯ ಬೆಳೆಸಿ ‘ನನಗೆ ನೀನು ಸಹೋದರ’ ಎಂದ. ಮನುಷ್ಯ ಜಾತಿಗೇ ಸೇರದ ವಾನರ ಮತ್ತು ಭಲ್ಲೂಕ ರಾಜರಾದ ಸುಗ್ರೀವ-ಅಂಗದರೊಂದಿಗೆ ಸ್ನೇಹ ಬೆಳೆಸಿದ. ಎಲ್ಲೋ ಕಾಡಿನಲ್ಲಿ ವಾಸವಾಗಿದ್ದ ಶಬರಜಾತಿಗೆ ಸೇರಿದ ಶಬರಿಗೆ ಮೋಕ್ಷವನ್ನಿತ್ತ. ರಾಕ್ಷಸಕುಲದಲ್ಲಿ ಹುಟ್ಟಿದರೂ ಸದಾಚಾರ ದಿಂದ ರಾಮನಲ್ಲೇ ಶರಣಾಗತನಾದ ವಿಭೀಷಣನಿಗೆ ರಕ್ಷಣೆಯನ್ನಿತ್ತ.

ರಾಮನ ಸೌಶೀಲ್ಯಕ್ಕೆ ಇವೆಲ್ಲವೂ ದೃಷ್ಟಾಂತಗಳಾಗಿ ಕಾಣಿಸುತ್ತವೆ. ರಾವಣನೇ ಒಪ್ಪಿಕೊಳ್ಳು ವಂತೆ ರಾಮನು ಮಹಾವಿಕ್ರಮ ಸಂಪನ್ನ. ಅವನನ್ನು ಕೊಲ್ಲಲು ರಾಮನಿಗೆ ಅಷ್ಟೊಂದು ಕಾಲವನ್ನು ತೆಗೆದುಕೊಳ್ಳಬೇಕಿರಲಿಲ್ಲ. ಮಹಾಬಲಿಷ್ಠನೆಂದು ಮೆರೆದ ರಾವಣನನ್ನೇ ಕಟ್ಟಿಹಾಕಿದ ವಾಲಿಯನ್ನೇ ರಾಮ ಒಂದೇ ಬಾಣದಿಂದ ನಿಗ್ರಹಿಸಲಿಲ್ಲವೇ? ಆದರೆ ರಾವಣ ನನ್ನು ಕೊಲ್ಲಲು ಯಾಕೆ ಅಷ್ಟು ತಡಮಾಡಿದ? ಏಕೆಂದರೆ ‘ರಿಪೂಣಾಮಪಿವತ್ಸಲಃ’ ಅಂದರೆ- ತನ್ನ ಪತ್ನಿಯನ್ನು ಅಪಹರಿಸಿದ ಶತ್ರುವನ್ನು ಮಿತ್ರನನ್ನಾಗಿ ಮಾಡಿಕೊಳ್ಳ ಬೇಕೆಂದು ರಾಮ ಅಭಿಪ್ರಾಯಪಟ್ಟನಂತೆ.

ವಿಭೀಷಣ ಶರಣು ಬಂದಂತೆ ರಾವಣನೂ ತನ್ನನ್ನು ಶರಣು ಹೋಗಲಿ, ಅಭಯ-ಆಶ್ರಯ ನೀಡೋಣ ಎಂದು ಕ್ರಮವಾಗಿ ಅವನಿಗೆ ತನ್ನ ಪರಾಕ್ರಮವನ್ನು ತೋರಿಸಿದ. ‘ಜೇತವ್ಯಮಿತಿ ಕಾಕುತ್ಸ್ಥಃ’ ಎಂಬುದಕ್ಕೆ ರಾವಣನನ್ನು ಜಯಿಸಬೇಕು ಎಂದು ಕಾದನೇ ಹೊರತು ಕೊಲ್ಲ ಬೇಕು ಎಂದಲ್ಲ ಎಂಬುದು ಪ್ರಾಜ್ಞರ ಅಭಿಪ್ರಾಯ.

ಶ್ರೀರಾಮನ ಇಡೀ ಜೀವನವೇ ಧರ್ಮಪಾಲನೆಯನ್ನು ತೋರಿಸುವಂಥದ್ದು. ಬಾಲ್ಯದಲ್ಲಿ ವಿಶ್ವಾಮಿತ್ರರೊಂದಿಗೆ ರಾಕ್ಷಸರ ನಿಗ್ರಹಕ್ಕಾಗಿ ಹೊರಟ ದಾಶರಥಿ, ಅರಣ್ಯ ವಾಸದಲ್ಲಿದ್ದು ಋಷಿ-ಮುನಿಗಳ ಸಂಸರ್ಗದಲ್ಲಿದ್ದದ್ದು ಸ್ಪಷ್ಟ. ಅಯೋಧ್ಯೆಯಿಂದ ಹೊರಟು ಮಿಥಿಲೆ ಯನ್ನು ತಲುಪುವವರೆಗೆ ಅವನು ಬಯಸಿದ್ದರೆ ಯಾವುದಾದರೂ ರಾಜರ ಅರಮನೆಯಲ್ಲಿ ತಂಗಬಹುದಿತ್ತು. ಅಖಂಡ ಭೂಮಂಡಲದ ಸಾರ್ವಭೌಮ ದಶರಥ ಚಕ್ರವರ್ತಿಯ ಮಗ ರಾಮ. ಆದರೆ ಹಾಗಾಗಲಿಲ್ಲ.

ಮುಂದೆ ವನವಾಸದ ಸಂದರ್ಭದಲ್ಲಿಯೂ ಅನೇಕ ಸಿದ್ಧಾಶ್ರಮಗಳಲ್ಲಿದ್ದು ಋಷಿಸದೃಶ ಜೀವನವನ್ನೇ ನಡೆಸಿದ. ತನ್ನ ಬಹುಪಾಲು ಜೀವನವನ್ನು ಆತ ಕಳೆದದ್ದು ಹೀಗೇ. ಧರ್ಮಾರ್ಥಕಾಮಗಳು ಒಂದರಿಂದ ಒಂದು ಬಾಧಿತವಾಗದಂತೆ ನಡೆಯಬೇಕು ಎಂಬುದು ವೇದದ ಸಂದೇಶ. ರಾಮನ ರಾಜ್ಯದಲ್ಲಿ ಸಕಾಲದಲ್ಲಿ ಮಳೆ-ಬೆಳೆಯಾಗುತ್ತಿತ್ತು.

ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರು ತಮ್ಮ ವರ್ಣಕ್ಕನುಸಾರವಾದ ಕರ್ಮಗಳಲ್ಲೇ ನಿರತ ರಾಗಿದ್ದರು. ಅನೃತವನ್ನು ಆಡುತ್ತಿರಲಿಲ್ಲ, ಲೋಭರಹಿತರಾಗಿದ್ದರು. ಮಾತಾ-ಪಿತೃಗಳು ಪುತ್ರರಿಂದ ಸದಾ ಪೋಷಿಸಲ್ಪಟ್ಟು ಗೌರವಿಸಲ್ಪಡುತ್ತಿದ್ದರು. ಆಸ್ತಿಗಾಗಿ ಸಹೋದರರು ಜಗಳವಾಡುತ್ತಿರಲಿಲ್ಲ.

ರಾಜ್ಯಾಡಳಿತದಲ್ಲಿ ಪ್ರಜೆಗಳ ಮೇಲೆ ಅನಗತ್ಯ ತೆರಿಗೆಯನ್ನು ವಿಧಿಸದಿದ್ದುದರಿಂದ ಪ್ರಜೆಗಳೆ ಲ್ಲರೂ ಸಂತೋಷವಾಗಿ ಜೀವಿಸಿದ್ದರು. ಸ್ತ್ರೀಯರ ಮೇಲೆ ಅತ್ಯಾಚಾರ-ದೌರ್ಜನ್ಯ ಗಳಾಗುತ್ತಿರಲಿಲ್ಲ. ಹೀಗೆ ಸರ್ವಸುಖದಿಂದ, ಶಾಂತಿಯಿಂದ ಶ್ರೀರಾಮ ರಾಜ್ಯವನ್ನಾಳುತ್ತಿದ್ದ ಎಂಬ ಸುಂದರ ಚಿತ್ರಣವನ್ನು, ಶ್ರೇಷ್ಠಧರ್ಮವನ್ನು ವಾಲ್ಮೀಕಿ ಮಹರ್ಷಿಗಳು ರಾಮಾಯಣ ದಲ್ಲಿ ವಿವರಿಸಿದ್ದಾರೆ.

ತ್ರೇತಾಯುಗದಲ್ಲಿದ್ದ ಅಸ್ತಿತ್ವದಲ್ಲಿದ್ದ ರಾಮರಾಜ್ಯ ಕಲಿಯುಗದಲ್ಲೂ ನೆಲೆಗೊಳ್ಳಬೇಕಾದರೆ ಆಡಳಿತಗಾರರು ರಾಮನಂತೆ ನಿಸ್ಪೃಹರಾಗಿ, ಧರ್ಮಪರಾಯಣ ರಾಗಿ, ಪ್ರಜಾರಂಜಕರಾಗಿ, ಪರಾಕ್ರಮಿಗಳಾಗಿರಬೇಕು. ಹಾಗೆಯೇ ಪ್ರಜೆಗಳೂ ತಮಗೆ ನಿಯತವಾದ ಕರ್ಮವನ್ನು ಆಲಸ್ಯವಿಲ್ಲದೇ ಧರ್ಮಮಾರ್ಗದಲ್ಲಿ ನಡೆಸಬೇಕು.

ಸತ್ಯಸಂಧತೆ, ಧರ್ಮಪರತೆ, ನಿಸ್ಪೃಹತೆ, ಕಾರ್ಯಪಟುತ್ವ, ಲೋಭ, ಸೋಮಾರಿತನ ವಿಲ್ಲದಿರುವಿಕೆ, ಕಾರುಣ್ಯ ಈ ಗುಣಗಳ ಅನುಷ್ಠಾನದಿಂದಲೇ ಮಾನವತ್ವದಿಂದ ದೈವತ್ವ ಕ್ಕೇರುವ ಸಿದ್ಧತೆ ಮಾಡಿಕೊಳ್ಳಬೇಕು. ಆಗ ಮಾತ್ರ ರಾಮರಾಜ್ಯದ ಕನಸು ನನಸಾದೀತು. ಮೋಹವೆಂಬ ಸಮುದ್ರವನ್ನು ದಾಟಿ ರಾಗದ್ವೇಷಾದಿ ರಾಕ್ಷಸರನ್ನು ಸಂಹರಿಸಿ ಶಾಂತಿ ಯೆಂಬ ಸೀತಾದೇವಿಯನ್ನು ಪಡೆದು ಆತ್ಮನೆಂಬ ರಾಮನು ಸದಾ ಬೆಳಗುತ್ತಿದ್ದಾನೆ ಎಂದು ಶಂಕರಾಚಾರ್ಯರು ರಾಮಾಯಣದ ಭಾವಾರ್ಥವನ್ನು ಹೇಳುತ್ತಾರೆ.

ವಾಲ್ಮೀಕಿ ರಚಿತ ರಾಮಾಯಣ ಇಹ-ಪರಕ್ಕೆ ಸಾಧಕ. ದಶರಥನಂಥ ತಂದೆ, ತಂದೆಯ ಆeಯನ್ನು ಶಿರೋಧಾರಣೆ ಮಾಡುವ ರಾಮನಂಥ ಮಗ, ಪತಿಯನ್ನೇ ಅನುಸರಿಸುವ ಸೀತೆ, ಅಣ್ಣನನ್ನೇ ಪ್ರಾಣವಾಗಿ ಪ್ರೀತಿಸುವ ಲಕ್ಷ್ಮಣ-ಭರತ -ಶತ್ರುಘ್ನರಂಥ ಸಹೋದರರು, ರಾಜನನ್ನು ಸದಾ ಧರ್ಮಮಾರ್ಗದಲ್ಲಿಯೇ ಇರುವಂತೆ ಸನ್ಮಾರ್ಗ ತೋರುವ ವಸಿಷ್ಠ-ವಾಮದೇವರಂಥ ಪುರೋಹಿತರು, ಯಾವುದೇ ಕಾರ್ಯವನ್ನು ಬಿಡದಂತೆ ಸಾಧಿಸುವ ಛಲವುಳ್ಳ ಹನುಮನಂಥ ದೂತ, ಹಿತೈಷಿ ಮಿತ್ರನಾದ ಸುಗ್ರೀವ, ವಿಭೀಷಣನಂಥ ಭಕ್ತ, ಸುಮಂತ್ರನಂಥ ಉತ್ತಮನಾದ ಮಂತ್ರಿ, ಮುಂತಾದ ಎಲ್ಲ ವ್ಯಕ್ತಿಗಳೂ ಸಹ ಆದರ್ಶಪ್ರಾಯ ರಾಗಿ ಧರ್ಮನಿಷ್ಠಜೀವನ ನಡೆಸಿ ಇಹದಲ್ಲಿ ಸರ್ವಸೌಖ್ಯವನ್ನು ಪಡೆದು, ಪರದಲ್ಲಿ ಮೋಕ್ಷ ಲಭಿಸುವಂತೆ ಮಾಡುವ ಶಕ್ತಿಯುಳ್ಳದ್ದು ಶ್ರೀಮದ್ರಾಮಾಯಣ! ಆದ್ದರಿಂದಲೇ ರಾಮಾಯಣ ಅನಾದಿಕಾಲದಿಂದಿದ್ದರೂ ಎಂದೆಂದಿಗೂ ನಿತ್ಯನೂತನ ವಾಗಿದೆ.

(ಲೇಖಕಿ ಚಿಂತಕಿ ಮತ್ತು ಲಿಪಿ ತಜ್ಞೆ)