ತಾಳ-ಮೇಳ
ಪ್ರಿಯದರ್ಶನ ಭಟ್ಟ
ಸೀತಾಪಹಾರ ಪ್ರಸಂಗ. ಸಂನ್ಯಾಸಿ ವೇಷ ಧರಿಸಿದ ರಾವಣನ ಪಾತ್ರಧಾರಿಯೊಬ್ಬರು -“ಸಂನ್ಯಾಸಿ ಗಳಿಗೆ ಒಂದು ಹಿಡಿ ಭಿಕ್ಷೆ ಹಾಕಿದರೆ ಅವರ ಕುಲಗೋತ್ರ ಉದ್ಧಾರವಾಗುತ್ತದೆ. ಸಂನ್ಯಾಸವೆಂದರೆ ಅದು ಅಷ್ಟು ಸುಲಭವಲ್ಲ. ಮನುಷ್ಯನೆಂದರೆ ಹತ್ತು ಮುಖ; ಹುಚ್ಚು ಮನಸ್ಸುಳ್ಳವನು.
ಹುಚ್ಚು ಮನಸ್ಸಿನ ಹತ್ತು ಮುಖ. ಒಂದೊಂದು ಮುಖ ಒಂದೊಂದು ದರ್ಶನ ಮಾಡಿಸುತ್ತದೆ. ಅದಕ್ಕಾಗಿ ಆ ಒಂಭತ್ತು ಮುಖಗಳನ್ನು ವ್ಯವಸಾಯಾತ್ಮಿಕವಾದ ಜ್ಞಾನಮುಖದಲ್ಲಿ ಬಂಧಿಸಬೇಕು" ಅನ್ನುತ್ತಾ ಪೀಠಿಕೆಯನ್ನು ಆರಂಭಿಸುತ್ತಾರೆ. ಹೀಗೆ ಹೇಳುತ್ತಲೇ ಅವರು ಡಾ|| ಶಿವರಾಮ ಕಾರಂತರ ಹುಚ್ಚು ಮನಸ್ಸಿನ ಹತ್ತು ಮುಖಗಳು ಕಾದಂಬರಿಯನ್ನು ವಾಚ್ಯವಾಗಿಸಿ, ಅದರೊಳಗೆ ತಾನು ಹತ್ತು ಮುಖವುಳ್ಳ ರಾವಣ ಎಂಬುದನ್ನು ಧ್ವನಿಸಿದ ಅವರ ಪರಿ ನಿಜಕ್ಕೂ ಚೇತೋಹಾರಿಯಾದುದು.
ಪುರಾಣದ ರಾವಣನ ವ್ಯಕ್ತಿತ್ವಕ್ಕೆ ಮತ್ತು ಪೌರಾಣಿಕ ಆವರಣಕ್ಕೆ ಸ್ವಲ್ಪವೂ ಕುಂದಾಗದಂತೆ ಆಧುನಿಕ ಕಾದಂಬರಿಯೊಂದನ್ನು ಧ್ವನಿಸಿದ ಅವರ ಪ್ರತಿಭಾ ಸಂಪತ್ತು ನಿಜಕ್ಕೂ ಪ್ರಶಂಸಾರ್ಹ ವಾದುದು.
ಹಾಗೆಯೇ ಸೀತೆಯ ಬಳಿ ಬಂದ ಆತ ಅವಳ ಹತ್ತಿರ “ಅಮ್ಮ, ನಾವು ಎಳವೆಯಲ್ಲೇ ಸಂಪತ್ತು, ಐಶ್ವರ್ಯ, ಹೆಂಡತಿ, ಮಕ್ಕಳು, ಅಧಿಕಾರ ಹೊಂದಿದವರು. ಇವೆಲ್ಲ ಏನಿದ್ದರೇನು? ಇವೆಲ್ಲ ರಸ ಅಲ್ಲ. ಕೈ ಕಸ ಅಮ್ಮ. ರಸ ಎಲ್ಲಿದೆ? ಅನ್ನುತ್ತಾ ತನ್ನ ತಾಯಿ ಕೈಕಸೆ ಎಂಬುದನ್ನೂ, ಜೊತೆಗೆ ತಾನೊಬ್ಬ ಲಂಪಟ ಎಂಬುದನ್ನೂ ಧ್ವನಿಸಿ ಬಿಡುತ್ತಾರೆ.
ಇದನ್ನೂ ಓದಿ: Vishweshwar Bhat Column: ʼಸ್ಕಾಚ್ʼ ಸವಿಯುತ್ತಾ, ಹೊಸವರ್ಷಕ್ಕೆ ಕಾಲಿಡೋಣ !
ಮುಂದುವರಿದು ಅವರು-“ನಾನು ಬಹಳ ಕಡೆ ಭಿಕ್ಷೆ ಪಡೆದಿದ್ದೇನೆ. ಆದರೆ ಎಲ್ಲೂ ತೃಪ್ತಿಯಾಗು ವಷ್ಟು ಭಿಕ್ಷೆ ಸಿಗಲಿಲ್ಲ. ಹೊಟ್ಟೆಯೇನೋ ತುಂಬುತ್ತದೆ. ಆದರೆ ಅಂತರಂಗ ತೃಪ್ತಿಯಾಗುವುದಿಲ್ಲ. ನಿಮ್ಮ ಕೈಯಿಂದ ಸಿಗುವ ಭಿಕ್ಷೆ ಅಂತರಂಗಕ್ಕೆ ತೃಪ್ತಿಯಾದೀತು!" ಅನ್ನುತ್ತಾ ರಾವಣನ ಹತ್ತಿಕ್ಕ ಲಾಗದ ಕಾಮವನ್ನು ಅಭಿವ್ಯಕ್ತಿಸಿಬಿಡುತ್ತಾರೆ.
ಇದು ಸುಮಾರು 30-40 ವರ್ಷಗಳ ಹಿಂದಿನ ತಾಳಮದ್ದಳೆಯೊಂದರ ಅರ್ಥಗಾರಿಕೆಯ ಸೊಗಸು. ಇದರ ಧ್ವನಿಪೂರ್ಣತೆ, ಔಚಿತ್ಯವನ್ನು ಕೆಡಿಸಿದೆ ಆಧುನಿಕತೆಯನ್ನು ತಂದ ರೀತಿ, ಸಂಕ್ಷಿಪ್ತತೆಯಲ್ಲೂ ರಾವಣನ ವ್ಯಕ್ತಿತ್ವದ ಮುಖ್ಯಅಂಶ ಕಾಮುಕತನವನ್ನು ಅನಾವರಣಗೊಳಿಸಿದ ಪರಿ-ಇವೇ ಮೊದಲಾದ ವಾಗರ್ಥವನ್ನು ಇಂದು ಎಲ್ಲಿಂದ ನೋಡೋಣ ಹೇಳಿ.
ಇದನ್ನು ಇಷ್ಟು ಸೊಗಸಾಗಿ ಹೇಳಿದವರು ಖ್ಯಾತ ಅರ್ಥಧಾರಿ ಶೇಣಿ ಗೋಪಾಲಕೃಷ್ಣ ಭಟ್ಟರು. ಹಾಗೆಯೇ ಇನ್ನೊಂದು ಮನೋಜ್ಞವಾದ, ಮೈನವಿರೇಳಿಸುವ, ಮತ್ತೆಮತ್ತೆ ಮೆಲುಕು ಹಾಕುವ ಅರ್ಥಗಾರಿಕೆ. ಪ್ರಸಂಗ -ಕರ್ಣಪರ್ವದ ಒಂದು ಸನ್ನಿವೇಶ. ಅರ್ಜುನನ ಎದುರಿಗೆ ಕರ್ಣನ ಪಾತ್ರ ಧಾರಿ ಅಬ್ಬರಿಸುತ್ತಿದ್ದಾನೆ.
“ಎಲವೋ ಅರ್ಜುನ, ಶಿಖಂಡಿಯನ್ನು ಮುಂದಿಟ್ಟುಕೊಂಡು ಭೀಷ್ಮನನ್ನು ಗೆದ್ದ ಭೀಷ್ಮ ಪರ್ವ ಇದಲ್ಲ. ವಂಚನೆಯಿಂದ ದ್ರೋಣನನ್ನು ಗೆದ್ದ ದ್ರೋಣ ಪರ್ವ ಇದಲ್ಲ. ನೋಡು ಈಗ ನನ್ನ ಪ್ರತಾಪವನ್ನು" ಎಂದು ಅಬ್ಬರಿಸಿ ಬೊಬ್ಬಿರಿಯುತ್ತಾನೆ. ಇಲ್ಲಿ ನಾವು ಗಮನಿಸಬೇಕಾದುದು ಕರ್ಣ ತನ್ನ ಯುದ್ಧಪರ್ವವನ್ನು ಆರಂಭಿಸಿದ್ದಾನೆ ಎಂಬುದನ್ನು. ಅದರಲ್ಲೂ ಒಂದು ವಿಶೇಷತೆಯೆಂದರೆ ಕರ್ಣ ಪರ್ವ ಎಂಬ ಶಬ್ದದ ಹಂಗೇ ಇಲ್ಲದೆ ಕರ್ಣ ಪರ್ವವನ್ನು ಧ್ವನಿಸಿದ್ದು.
ಮುಂದೆ ಇದೇ ಕರ್ಣ ತನ್ನ ಕೈಗೆ ಸಿಕ್ಕ ಸರ್ಪಾಸವನ್ನು ಹಿಡಿದುಕೊಂಡು ಅದಕ್ಕೂ ತನಗೂ ಅಭೇದವನ್ನು ಕಲ್ಪಿಸಿಕೊಂಡು, ಅರ್ಥ ಹೇಳುತ್ತಾ, ಪ್ರೇಕ್ಷಕರನ್ನು ಮತ್ತೊಂದು ಹೊಸ ಚಿಂತನೆಯತ್ತ ಹೊರಳಿಸುತ್ತಾನೆ. “ಯುದ್ಧದ ಹಾಲು ಕಾದು ಕೆನೆ ಬರುವ ಈ ಆಯತ ಸಂದರ್ಭದಲ್ಲಿ ಸರ್ಪಾಸ್ತ್ರ ವೊಂದು ನನ್ನ ಕೈ ಸೇರಿತಲ್ಲ!
ಮುಂದೆ ಅರ್ಧ ಸರ್ಪ. ಹಿಂದೆ ಅರ್ಧ ಬಾಣ. ಮೋಡ ಮುಸುಕಿದ ಸೂರ್ಯನ ಹಾಗೆ. ಕರ್ಣನ ಜೀವನವೂ ಹೀಗೆಯೇ. ನನ್ನ ಪ್ರತಾಪವನ್ನು ಜಗತ್ತಿಗೆ ತೋರಿಸಿದ್ದೇನೆ. ಆದರೆ ನಾನು ಯಾರು ಅಂತ ಜಗತ್ತಿಗೆ ಗೊತ್ತಿಲ್ಲ. ಇಲ್ಲಿ ಮೈವಡೆದ ಈ ಸರ್ಪಾಸ ಯಾರು? ಏನು? ಎಂಬುದು ಗೊತ್ತಿಲ್ಲ. ಹಾಗೆಯೇ ಕರ್ಣ ಯಾರು ಎಂಬುದೂ ಜಗತ್ತಿಗೆ ಗೊತ್ತಿಲ್ಲ" ಅಂತ ಹೇಳುತ್ತಾನೆ.
ಇಲ್ಲಿ ಸರ್ಪಾಸ್ತ್ರ ಮತ್ತು ಕರ್ಣನ ಅಭೇದ ಕಲ್ಪನೆಯೇ ಬಹು ಸುಂದರವಾದುದು. ಯಾವ ಶಬ್ದಾಡಂಬರವೂ ಇಲ್ಲದೆ ಸರಳವಾಗಿ, ಸಂಕ್ಷಿಪ್ತವಾಗಿ ಹೇಳಬೇಕಾದುದನ್ನು ಹೇಳಿದ ರೀತಿ ನಿಜಕ್ಕೂ ತಾಳಮದ್ದಳೆಗೇ ಒಂದು ಆದರ್ಶಪ್ರಾಯವಾದುದು. ಇಂದು ಇಂತಹವರನ್ನು ಎಲ್ಲಿಂದ ಹುಡುಕಿ ತರೋಣ ಹೇಳಿ. ಇದನ್ನು ನಿರೂಪಿಸಿದವರು ಖ್ಯಾತ ಅರ್ಥಧಾರಿ, ಚಿಂತಕ, ವಿಮರ್ಶಕ ಡಾ|| ಎಂ.ಪ್ರಭಾಕರ ಜೋಶಿ. ಇನ್ನೊಬ್ಬ ಪ್ರಸಿದ್ಧ ಅರ್ಥಧಾರಿ, ಖ್ಯಾತ ಸಾಹಿತಿ ಡಾ|| ರಮಾನಂದ ಬನಾರಿಯವರು ವೀರಮಣಿ ಕಾಳಗದಲ್ಲಿ ಈಶ್ವರನ ಪಾತ್ರ ವಹಿಸಿಕೊಂಡು-“ಏರಿ ವೃಷಭನ ಚಂದ್ರಚೂಡ ಭಾಗೀರಥಿಯು" ಪದ್ಯಕ್ಕೆ ಪೀಠಿಕೆ ಹೇಳುವಾಗ “ನಾನೀಗ ವೃಷಭಾರೂಢನಾಗಿದ್ದೇನೆ; ಎತ್ತನ್ನು ಏರಿದ್ದೇನೆ; ಭಕ್ತರನ್ನು ಉದ್ಧರಿಸುವವನು ನಾನು; ಪತಿತರನ್ನು ಎತ್ತುವವನು ನಾನು; ನನ್ನ ವಾಹನ ಎತ್ತು.
ಅದು ಭಕ್ತರನ್ನು ಎತ್ತು ಎಂದು ಹೇಳುತ್ತದೆ. ನಾನಿರುವುದೇ ಎತ್ತುವುದಕ್ಕಾಗಿ" ಎಂದು ಹೇಳುತ್ತಾ ನಮ್ಮನ್ನು ಹೊಸ ಪ್ರಪಂಚಕ್ಕೇ ಒಯ್ದುಬಿಡುತ್ತಾರೆ. ಇಂದಿನ ಅರ್ಥಧಾರಿಗಳಲ್ಲೂ ಇಂತಹವರು ಇದ್ದಾರೆ. ಅಂತಹವರೇ ತಾಳಮದ್ದಳೆ ರಂಗಭೂಮಿಯ ಸೌಂದರ್ಯವನ್ನು, ತತ್ತ್ವವನ್ನು ಉಳಿಸು ವವರು. ಅಂತಹವರಲ್ಲಿ ಅಗ್ರಮಾನ್ಯರಾಗಿ ಕಾಣಸಿಗುವವರೆಂದರೆ ಖ್ಯಾತ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಒಬ್ಬರು.
ಯಕ್ಷಗಾನ ಕುರಿತಾಗಿಯೇ ಹತ್ತೆಂಟು ಪುಸ್ತಕಗಳನ್ನು ಬರೆದಿದ್ದಾರೆ. ಇನ್ನೊಬ್ಬರು ಸುಣ್ಣಂಬಳ ವಿಶ್ವೇಶ್ವರ ಭಟ್ಟರು. ವೃತ್ತಿಪರ ಕಲಾವಿದರು ಮತ್ತು ಅರ್ಥಧಾರಿಗಳು. ವೇಷ ಮತ್ತು ಅರ್ಥಧಾರಿಕೆ ಎರಡರಲ್ಲೂ ಸಮಾನ ಯೋಗ್ಯತೆಯುಳ್ಳವರು. ಪುರಾಣ-ಕಾವ್ಯೇತಿಹಾಸಗಳನ್ನು ಚೆನ್ನಾಗಿ ಓದಿಕೊಂಡವರು.
ಈ ಕಲಾವಿದರಂತೆಯೇ ತಾಳಮದ್ದಳೆ ರಂಗವನ್ನು ಶ್ರೀಮಂತಗೊಳಿಸುವಲ್ಲಿ, ತಮಗೆ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ, ಪುರಾಣಪ್ರಪಂಚವನ್ನು ಸಾಕಾರಗೊಳಿಸುವಲ್ಲಿ ತಮ್ಮದೇ ಆದ ವೈಶಿಷ್ಟ್ಯವನ್ನು ಮೂಡಿಸಿದ ಶ್ರೀಯುತರಾದ ಸರ್ಪಂಗಳ ಈಶ್ವರ ಭಟ್ಟ, ಗಣರಾಜ ಕುಂಬ್ಳೆ, ಗಣಪತಿ ಭಟ್ಟ ಸಂಕದಗುಂಡಿ, ಪವನ ಕಿರಣಕೆರೆ, ಹರೀಶ ಭಟ್ಟ ಬಳಂತಿಮಗರು, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ನಾರಾಯಣ ಯಾಜಿ ಮೊದಲಾವರು ನಿಜಕ್ಕೂ ಅಭಿನಂದ ನಾರ್ಹರು.
ಇವರೆಲ್ಲರೂ ತಾಳಮದ್ದಳೆ ರಂಗಭೂಷಣರೇ. ಇಂತಹ ಅರ್ಥಧಾರಿಗಳನ್ನು ಕುರಿತು ಗ.ನಾ.ಭಟ್ಟರು ಎರಡು ಮಾತುಗಳನ್ನು ಬರೆಯಬಹುದಿತ್ತು. ಯಾಕೆ ಬರೆದಿಲ್ಲವೋ ಗೊತ್ತಿಲ್ಲ. ಆದರೆ ಒಂದಂತೂ ಸತ್ಯ. ಎಲ್ಲ ಕ್ಷೇತ್ರದಲ್ಲೂ ಇರುವಂತೆಯೇ ತಾಳಮದ್ದಳೆ ಕ್ಷೇತ್ರದಲ್ಲೂ ಬೇಕಾದಷ್ಟು ಅಪಸವ್ಯಗಳಿವೆ; ಕುರೂಪಗಳಿವೆ; ವಿಕೃತಿಗಳಿವೆ; ಅತಿರೇಕಗಳಿವೆ. ಇವನ್ನು ದೊಡ್ಡದು ಮಾಡದೆ ಧನಾತ್ಮಕವಾಗಿ ಚಿಂತಿಸಿದರೆ ತಾಳಮದ್ದಳೆಯೆಂಬ ಆಕಾಶಗಂಗೆಯಲ್ಲಿ ಇನ್ನೂ ಅನೇಕ ಹೊಳೆಯುವ ನಕ್ಷತ್ರಗಳು ಸಿಗುತ್ತವೆ.
ಕೊನೆಯದಾಗಿ ಒಂದು ಮಾತನ್ನು ಹೇಳಬಯಸುತ್ತೇನೆ. ಅದು ದಿ|| ಕೊರ್ಗಿ ವೇಂಕಟೇಶ್ವರ ಉಪಾ ಧ್ಯಾಯರು ಹೇಳಿದ ಮಾತು. ಅದು ಎಲ್ಲ ಕಲಾವಿದರಿಗೂ ಅನುಸಂಧೇಯ ಅಂತ ಭಾವಿಸುತ್ತೇನೆ. “ಯಕ್ಷಗಾನ ಕಲಾಕಾರನಿಗೆ ಬಹುಶ್ರುತತತ್ತ್ವ ಎಷ್ಟಿದ್ದರೂ ಕಡಿಮೆಯೇ. ಯುಕ್ತಿ, ಧರ್ಮಶಾಸ್ತ್ರ, ರಾಜನೀತಿ, ಯೋಗ, ಅಧ್ಯಾತ್ಮಜ್ಞಾನ, ಸುಭಾಷಿತ, ಗಾದೆಮಾತು, ಅಲಂಕಾರ, ಪೌರಾಣಿಕ ಕಥಾ ಪರಿಚಯ, ತರ್ಕಶಕ್ತಿ, ವರ್ಣನಕೌಶಲ, ಕಾವ್ಯಾಭ್ಯಾಸ, ನಿರೂಪಣತಂತ್ರ, ಮಾತು ಬೆಳೆಸುವ ಜಾಣ್ಮೆ, ಒಟ್ಟಂದದ ನೋಟ, ಪಾತ್ರದ ಪ್ರಧಾನ ಲಕ್ಷ್ಯ, ಪ್ರಸಂಗಾವಧಾನತೆ, ಅವಧಿ ಗನುಗುಣವಾಗಿ ಹಿಗ್ಗಿಸುವ ಕುಗ್ಗಿಸುವ ಕಲೆ, ಭಾಷಾಶುದ್ಧಿ, ಅಭಿನಯ ಸಿದ್ಧಿ, ದೈಹಿಕ ಸಾಮರ್ಥ್ಯ, ಯಾವ ಪಾತ್ರವನ್ನಾದರೂ ನಿರ್ವಹಿಸಬಲ್ಲೆ ಎಂಬ ಆತ್ಮವಿಶ್ವಾಸ, ಕಂಠತ್ರಾಣ, ಈ ಮುಂತಾದ ಹಾಗೂ ಇನ್ನೂ ಅನೇಕ ಗುಣ ಗಳನ್ನು ಕಲಾಕಾರ ತನ್ನದಾಗಿಸಿಕೊಳ್ಳಬೇಕು".
ಇವನ್ನು ಅರ್ಥಧಾರಿಗಳು ಸಾಧಿಸಿದ್ದೇ ಆದರೆ ತಾಳಮದ್ದಳೆಯೆಂಬ ಈ ಕಲಾಪ್ರಕಾರ ವಿಶ್ವ ವಿನೂತನವಾಗುವುವದರಲ್ಲಿ ಸಂಶಯವೇ ಇಲ್ಲ. ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ಟರು ಇದಕ್ಕೊಂದು ಮುಕ್ತ ವೇದಿಕೆ ಕಲ್ಪಿಸಿದ್ದು ಅದೂ ಸಾರ್ಥಕವಾಗುತ್ತದೆ.