ವಿಶ್ವರಂಗ
ಯುರೋಪಿನಲ್ಲಿ ಬಾಂಗ್ಲಾದೇಶಿಯರು, ಪಾಕಿಸ್ತಾನಿಯರು ಮತ್ತು ನಮ್ಮ ಪಂಜಾಬಿಗಳು ವರ್ಷಾನು ಗಟ್ಟಲೆ ಅಲ್ಲಿಯೂ ಇಲ್ಲದ, ಇಲ್ಲಿಯೂ ಸಲ್ಲದ ತ್ರಿಶಂಕು ಬದುಕು ಬದುಕುವು ದನ್ನು ದೊಡ್ಡ ಮಟ್ಟ ದಲ್ಲಿ ಕಾಣಬಹುದು. ಅಕ್ರಮ ವಲಸಿಗರು ಎನ್ನುವ ಕಾರಣಕ್ಕೆ ಸಾಮಾನ್ಯವಾಗಿ ಸಿಗುವ ವೇತನದ ಅರ್ಧದಲ್ಲಿ ಇವರಿಂದ ಕೆಲಸ ಮಾಡಿಸಿಕೊಳ್ಳುವವರಿಗೆ ಮಾತ್ರ ದಂಡ ಬೀಳದಿರುವುದು ನುಕುಲದ ವಿಪರ್ಯಾಸ.
ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಟ್ರಂಪ್ ಹತ್ತಾರು ಕಾರ್ಯ ನಿರ್ವಾಹಕ ಆದೇಶಗಳನ್ನು ನೀಡಿದ್ದಾರೆ. ಅದರಲ್ಲಿ ಹೆಚ್ಚು ಸುದ್ದಿ ಮಾಡುತ್ತಿರು ವುದು- ಅಕ್ರಮ ವಲಸಿಗರನ್ನು ಅಮೆರಿಕದಿಂದ ಹೊರಹಾಕುವ ಆದೇಶ. ಹೇಳುವುದು ಮಾತ್ರವಲ್ಲದೆ ಇಂಥವರನ್ನು ಹುಡುಕಿ ಅಮೆರಿಕದಿಂದ ಹೊರ ಹಾಕುವ ಕೆಲಸವೂ ಶುರುವಾಗಿದೆ.
ಸರಿಸುಮಾರು 17 ಸಾವಿರ ಅಕ್ರಮ ಭಾರತೀಯ ವಲಸಿಗರು ಅಲ್ಲಿದ್ದಾರೆ ಎನ್ನುತ್ತದೆ ಅಂಕಿ-ಅಂಶ. 2003ನೇ ಇಸವಿಯಿಂದ ಬಾರ್ಸಿಲೋನಾಕ್ಕೆ ಬರುವ ವಲಸಿಗರ ಸಂಖ್ಯೆಯಲ್ಲಿ ಬಹಳ ಹೆಚ್ಚಳ ವಾಗಲು ಶುರುವಾಯಿತು. ಲ್ಯಾಟಿನ್ ಅಮೆರಿಕದಿಂದ ಬಂದ ವಲಸಿಗರಿಗೆ ಭಾಷೆ ಸಮಸ್ಯೆಯಾಗು ತ್ತಿರಲಿಲ್ಲ. ಆದರೆ ಬಾಂಗ್ಲಾ ಮತ್ತು ಪಾಕಿಸ್ತಾನದಿಂದ ಬಹಳಷ್ಟು ಜನ ವಲಸೆ ಬರಲು ಶುರು ಮಾಡಿ ದರು.
ಇದನ್ನೂ ಓದಿ: Rangaswamy Mookanahalli Column: ಬದಲಾದ ಮೌಲ್ಯ, ಬದಲಾದ ಶಿಕ್ಷಣ !
ಹೀಗೆ ಬಂದವರಲ್ಲಿ ಒಂದು ಪ್ರತಿಶತ ಕೂಡ ವಿಮಾನದ ಮೂಲಕ, ಕಾನೂನು ರೀತ್ಯಾ ಬಂದವರಲ್ಲ, ಪ್ರತಿಯೊಬ್ಬ ವಲಸಿಗನದೂ ಒಂದೊಂದು ಕಥೆ. ತಮ್ಮನ್ನು ಪಾಕಿಸ್ತಾನದಿಂದ ಬಾರ್ಸಿಲೋನಾಕ್ಕೆ ಕರೆತರಲು ಅವರು ಬರೋಬ್ಬರಿ 8 ಲಕ್ಷ ಪಾಕಿಸ್ತಾನಿ ರುಪಾಯಿಯನ್ನು ಏಜೆಂಟ್‌ಗೆ ನೀಡಬೇಕಿತ್ತು. ಇಂಥ ಏಜೆಂಟ್‌ಗಳು ಅವರನ್ನು ರಷ್ಯಾಕ್ಕೆ ಕರೆತಂದು ಅಲ್ಲಿ 3-4 ತಿಂಗಳು ಇರಿಸುತ್ತಿದ್ದರಂತೆ.
ಆನಂತರ ಸಮಯ ನೋಡಿ ಉಕ್ರೇನ್ ಮೂಲಕ ಹಂಗರಿ ದೇಶವನ್ನು ತಲುಪಿ, ಅಲ್ಲಿಂದ ಆಸ್ಟ್ರಿಯಾ, ಇಟಲಿ, ನಂತರ ಫ್ರಾನ್ಸ್, ಕೊನೆಗೆ ಸ್ಪೇನ್‌ಗೆ ತಲುಪಿಸುತ್ತಿದ್ದರು. ಹೀಗೆ ಸ್ಪೇನ್ ತಲುಪಲು ಕೆಲವೊಬ್ಬ ವಲಸಿಗರು 2 ವರ್ಷ ತೆಗೆದುಕೊಂಡಿದ್ದಿದೆ. ಯುರೋಪ್ ನಲ್ಲಿ ಇಟಲಿ, ಗ್ರೀಸ್, ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳು ಮಾನವೀಯತೆಯ ಆಧಾರದ ಮೇಲೆ ಒಂದಷ್ಟು ವಲಸಿಗರಿಗೆ ಬಾಗಿಲು ತೆರೆಯುತ್ತಿದ್ದವು.
ವರ್ಷ ಅಥವಾ ಎರಡು ವರ್ಷದಲ್ಲಿ ಕೆಲಕಾಲ ಇಂಥದೊಂದು ಅವಕಾಶವನ್ನು ಕಲ್ಪಿಸು ತ್ತಿದ್ದವು. ಎಲ್ಲಾ ದೇಶಗಳು ಒಟ್ಟಿಗೆ ಇಂಥ ಅವಕಾಶವನ್ನು ನೀಡುತ್ತಿರಲಿಲ್ಲ, ಬದಲಿಗೆ ವಿಭಿನ್ನ ಸಮಯಗಳಲ್ಲಿ ಇಂಥ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದವು. ಹೀಗಾಗಿ, ಯಾವ ದೇಶವು ವರ್ಷದ ಯಾವ ತಿಂಗಳಲ್ಲಿ ಬಾಗಿಲು ತೆರೆದಿದೆ ಎಂಬುದನ್ನು ಅವಲಂಬಿಸಿ ವಲಸಿಗರು ಸಾಗುವ ದೇಶಗಳ ಪಟ್ಟಿ ಬದಲಾಗುತ್ತಿತ್ತು.
ಅಲಿ ಎಂಬಾತ ಬಾಂಗ್ಲಾದೇಶಿ. ವಯಸ್ಸು 50ರ ಆಸುಪಾಸು ಎನಿಸುತ್ತದೆ. ಅವನಿಗೆ ತನ್ನ ನಿಖರ ವಯಸ್ಸು ಕೂಡ ಗೊತ್ತಿರಲಿಲ್ಲ, ಡಾಕ್ಯುಮೆಂಟ್‌ನಲ್ಲಿದ್ದ ದಿನಾಂಕ ಸರಿಯೇ ತಪ್ಪೇ ಎಂಬುದು ಕೂಡ ತಿಳಿದಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅದು ಅವನಿಗೆ ಬೇಕಿರಲೂ ಇಲ್ಲ. ಅಲಿ ಬಾಂಗ್ಲಾದೇಶ ಬಿಟ್ಟವನು ಬಾರ್ಸಿಲೋನಾ ತಲುಪುವಷ್ಟರಲ್ಲಿ 2 ವರ್ಷ ಹಿಡಿಯಿತಂತೆ!
ಆಮೇಲೆ ಇಲ್ಲಿನ ರೆಸಿಡೆನ್ಸ್ ಪರ್ಮಿಟ್ ಪಡೆದುಕೊಳ್ಳುವುದರಲ್ಲಿ ಅವನಿಗೆ 3 ವರ್ಷ ಕಳೆದು ಹೋಯ್ತು. ಕೆಲಸ ಮಾಡಿ ಮನೆಗೆ ಮತ್ತು ಬಾರ್ಸಿಲೋನಾಕ್ಕೆ ಬರಲು ಮಾಡಿದ ಸಾಲ 8 ಲಕ್ಷ ತೀರಿ ಸುವ ವೇಳೆಗೆ 8 ವರ್ಷವಾಗಿತ್ತು. 8 ವರ್ಷದ ನಂತರ ಅಲಿ ಬಾಂಗ್ಲಾಕ್ಕೆ ಹೊರಟಾಗ, ಅದೇನೋ ಯುದ್ಧ ಗೆದ್ದ ಸಾರ್ಥಕತೆ ಅವನ ಮುಖದಲ್ಲಿತ್ತು.
ಅಲಿ ಬಹಳ ನಿಯತ್ತಿನ ಮನುಷ್ಯ, ಬಹಳವೇ ಧರ್ಮಭೀರು. 2005ರಿಂದ 2014ರವರೆಗೆ ನಮ್ಮ ಮನೆಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ಅಲಿ ತಂದುಕೊಡುತ್ತಿದ್ದ. ನಾನು ಮತ್ತು ರಮ್ಯ, ಮನೆಗೆ ಬೇಕಾದ ವಸ್ತುಗಳನ್ನು ಸೂಪರ್‌ಮಾರ್ಕೆಟ್‌ನಿಂದ ವಾರಕ್ಕೊಮ್ಮೆ ತರುತ್ತಿದ್ದೆವು. ಅಕ್ಕಿ, ಬೇಳೆ ಜತೆಗೆ ಭಾರ ತೀಯ ಅಡುಗೆಯಲ್ಲಿ ಬಳಸುವ ಹಸಿರು ಮೆಣಸಿನಕಾಯಿ, ಕೊತ್ತಂಬರಿ, ಜೀರಿಗೆ, ಸಾಸಿವೆಯಂಥ ಪದಾರ್ಥಗಳನ್ನು ಅಲಿ ತಂದುಕೊಡುತ್ತಿದ್ದ. ನಾವಿದ್ದ ಕಡೆ ಬಹುತೇಕ ಏಷ್ಯನ್ ಸ್ಟೋರ್‌ಗಳನ್ನು ನಡೆಸುತ್ತಿದ್ದುದು ಪಾಕಿಸ್ತಾನೀಯರು ಅಥವಾ ಬಾಂಗ್ಲಾದೇಶೀಯರು.
ಅಲ್ಲೊಂದು ಇಲ್ಲೊಂದು ಭಾರತೀಯ ಪಂಜಾಬಿ ಅಂಗಡಿಗಳೂ ಇದ್ದವು. ಅಲಿ ಬಾಂಗ್ಲಾ ದೇಶಕ್ಕೆ ಹೋಗುವ ಮುನ್ನ ಒಂದು ದಿನ, “ರಂಗ ಭಾಯ್, ನಮ್ಮ ಜೀವನ ನಮ್ಮ ಶತ್ರು ವಿಗೂ ಬೇಡ" ಎಂದ. “ಏನಾಯ್ತು ಅಲಿ?" ಎಂದದ್ದಕ್ಕೆ, “ನನ್ನ ಮಗ ನನ್ನ ಗುರುತು ಹಿಡಿಯ ಲಿಲ್ಲ" ಎಂದು ಬಹಳ ವೇದನೆ ಪಟ್ಟುಕೊಂಡ. ಅಲಿ ತಾನು ಸವೆದು ತನ್ನ ಕುಟುಂಬಕ್ಕೆ ಅನ್ನ-ಆಶ್ರಯ ನೀಡಿದ.
ಮಗಳನ್ನು ಮೆಡಿಕಲ್ ಓದಿಸುತ್ತಿರುವುದನ್ನು ಹೆಮ್ಮೆಯಿಂದ ಹೇಳಿಕೊಂಡು ತಿರುಗುತ್ತಿದ್ದ. 2014ರಲ್ಲಿ ಬಾಂಗ್ಲಾಕ್ಕೆ ಹೋದವನು ಮತ್ತೆ ಮರಳಲಿಲ್ಲ. ನಾಲ್ಕೈದು ತಿಂಗಳ ನಂತರ ಬಾಂಗ್ಲಾದೇಶಿ ಅಂಗಡಿ ಗಳಲ್ಲಿ ಅವನ ಬಗ್ಗೆ ವಿಚಾರಿಸಲು ಶುರುಮಾಡಿದೆ. ಕೊನೆಗೊಂದು ಅಂಗಡಿಯಲ್ಲಿ, ಅವನ ಮನೆ ಯನ್ನು ಶೇರ್ ಮಾಡುತ್ತಿದ್ದ ಇನ್ನೊಬ್ಬ ಬಾಂಗ್ಲಾದೇಶಿಯನ ನಂಬರ್ ಸಿಕ್ಕಿತು.
ಬಾಂಗ್ಲಾದೇಶಕ್ಕೆ ಹೋದ ಅಲಿ ಪಾರ್ಶ್ವವಾಯುವಿಗೆ ತುತ್ತಾಗಿರುವುದು ತಿಳಿಯಿತು. ಅವನನ್ನು ಬಲ್ಲವರಿಂದ ಮತ್ತು ಇತರ ಮೂಲಗಳಿಂದ ಒಂದಷ್ಟು ಹಣವನ್ನು ಸಂಗ್ರಹಿಸಿ (ಸಾವಿರ ಯುರೋ ಎಂದು ನೆನಪು) ಅಲಿಗೆ ಕಳಿಸಿದೆವು. ಒಂದೆರಡು ಬಾರಿ ಫೋನ್‌ನಲ್ಲಿ ಅವನೊಂದಿಗೆ ಮಾತನಾಡಿದೆ. “ರಂಗ ಭಾಯ್, ಮನುಷ್ಯ ದುಡಿಯುತ್ತಿರಬೇಕು, ಹಣ ಗಳಿಸುತ್ತಿರಬೇಕು.
ಇಲ್ಲದಿದ್ದರೆ ಅವನಿಗೆ ಇಜ್ಜತ್ (ಗೌರವ) ಇರುವುದಿಲ್ಲ" ಎನ್ನುತ್ತಿದ್ದ. ತನ್ನ ಕುಟುಂಬಕ್ಕೆ ಅಲಿ ಎಟಿಎಂ ಮಷೀನ್ ಆಗಿದ್ದನಷ್ಟೆ. ಮಷೀನ್ ನಲ್ಲಿ ಹಣ ಬರುವುದು ನಿಂತಮೇಲೆ ಮಷೀನ್‌ಗೆ ಬೆಲೆಯೆಲ್ಲಿದೆ? “ನೀನು ಇದ್ದರೆ ವಾಸಿ ಕಣೋ. ನೀನಿಲ್ಲ ಅಂದರೆ, ‘ಅಲಿ ಭಾಯ್, ಅಂದರ್ ಆವೋ, ಪಾನಿ ಪೀಕೇತು ಜಾವೋ’ ಅಂದರೂ ‘ನೈ ಬಾಬಿ’ ಎನ್ನುವುದು ಬಿಟ್ಟು ಇನ್ನೇನೂ ಹೇಳುತ್ತಿರಲಿಲ್ಲ, ಕತ್ತೆತ್ತಿ ಕೂಡ ನೋಡುತ್ತಿರಲಿಲ್ಲ. ಅಯ್ಯೋ ಪಾಪ, ಅಲಿಗೆ ಹೀಗಾಗಬಾರದಿತ್ತು" ಎಂದು ರಮ್ಯ ನೊಂದು ಕೊಂಡಳು.
2015ರ ವೇಳೆಗೆ ಅಲಿ ಸತ್ತುಹೋದ ಎನ್ನುವ ಸುದ್ದಿ ಕೂಡ ತಲುಪಿತು. ಬಾಂಗ್ಲಾದೇಶದ ಯಾವುದೋ ಊರಿನಲ್ಲಿ, ಸರಿಯಾಗಿ ದಿನಾಂಕ ಕೂಡ ತಿಳಿಯದ ದಿನದಲ್ಲಿ ಹುಟ್ಟಿದ ಅಲಿಗೂ ನನಗೂ ಎಲ್ಲಿಯ ಋಣಾನುಬಂಧ? ಅಷ್ಟಕ್ಕೂ ನಾನೇನು ಅವನಿಗೆ ನೂರಾರು ಯುರೋ ಕೊಡುತ್ತಿರಲಿಲ್ಲ. ಮನೆಗೆ ಸಾಮಾನು ತಂದುಕೊಡುತ್ತಿದ್ದುದಕ್ಕೆ ತಿಂಗಳಿಗೆ 30 ಅಥವಾ 40 ಯುರೋ ಹಣವನ್ನು ಭಕ್ಷೀಸ್ ರೂಪದಲ್ಲಿ ನೀಡುತ್ತಿದ್ದೆ, ಅಷ್ಟೇ. ಸಂಕೋಚದ ಮುದ್ದೆಯಾದ ಅವನು ಅದನ್ನೂ ‘ಬೇಡ’ ಎಂದು ನಿರಾಕರಿಸುತ್ತಿದ್ದ.
ಬಲವಂತ ಮಾಡಿ ಜೇಬಿಗೆ ತುರುಕಬೇಕಿತ್ತು. ಇಂಥ ‘ಅಲಿ’ಗಳು ಯುರೋಪ್‌ನಲ್ಲಿ ಅಸಂಖ್ಯ. ಇಂಥ ಜನರ ಜತೆಗೆ ಗೊತ್ತಿಲ್ಲದೇ ಒಂದಷ್ಟು ಉಗ್ರರೂ ನುಸುಳುತ್ತಾರೆ. ಯಾರು ಒಳ್ಳೆಯವರು, ಯಾರು ಕೆಟ್ಟವರು? ಇಂಥ ಸ್ಥಿತಿಯನ್ನು ನಿರ್ಮಿಸಿದವರು ಯಾರು? ಇಷ್ಟೆಲ್ಲಾ ನೋವಿಗೆ ಕಾರಣರಾರು? ಯುರೋಪಿನಲ್ಲಿ ಇಂದಿಗೆ ಸಿರಿಯಾ, ಆಫ್ರಿಕಾ, ಮೊರಾಕೊ ದೇಶಗಳಿಂದ ಬಂದಿರುವ-ಬರುತ್ತಿರುವ ವಲಸಿಗರ ಹಾವಳಿ ಎಷ್ಟಾಗಿದೆಯೆಂದರೆ, ‘ವಲಸೆ ಎಂಬುದು ಹೊಲಸು’ ಎನ್ನುವಂತಾಗಿದೆ.
ಅವರಿದ್ದ ದೇಶದಲ್ಲೇ ಎಲ್ಲವೂ ಸಿಕ್ಕಿದ್ದರೆ, ಅಲ್ಲೊಂದು ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ವಾಗಿದ್ದರೆ ಯಾರು ತಾನೇ ಅಕ್ರಮ ವಲಸೆಗೆ ಮುಂದಾಗುತ್ತಾರೆ? ಟ್ರಂಪ್ ಮಾಡುತ್ತಿರುವ ಕೆಲಸವು ಅವರ ದೇಶದ ಹಿತದೃಷ್ಟಿಯಿಂದ ಸರಿಯಾಗಿದೆ. ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ, ಉತ್ತಮ ಬದುಕಿನ ಆಸೆಯಿಂದ ವಲಸೆ ಹೋದ ಜನರನ್ನೂ ಬೈಯುವಂತಿಲ್ಲ. ಎಲ್ಲದಕ್ಕೂ ಪರಿಸ್ಥಿತಿ ಕಾರಣ.
ಬಾದಲೋನಾ ನಗರದಲ್ಲಿರುವ ಲಾಲಾಜಿ ಇಂಡಿಯನ್ ಮತ್ತು ಪಾಕಿಸ್ತಾನಿ ರೆಸ್ಟೋರೆಂಟ್ ಒಂದ ರಲ್ಲಿ ಒಮ್ಮೆ ಊಟ ಮಾಡಲು ಕೂತಿದ್ದೆವು. ಇಲ್ಲೊಂದು ವಿಷಯವನ್ನು ಹೇಳಿ ಮುಂದುವರಿಸು ತ್ತೇನೆ. ಸಾಮಾನ್ಯವಾಗಿ ಯುರೋಪಿನಲ್ಲಿ ಭಾರತೀಯರು ನಡೆಸುವ ಹೋಟೆಲ್‌ಗಳ ಸಂಖ್ಯೆ ಕಡಿಮೆ. ಇಂದಿಗೆ ಒಂದಷ್ಟು ಬದಲಾವಣೆಯಾಗಿದೆಯಾದರೂ, ಬಹುತೇಕ ಹೋಟೆಲ್ ಅಥವಾ ರೆಸ್ಟೋ ರೆಂಟ್‌ಗಳನ್ನು ನಡೆಸುವುದು ಪಾಕಿಸ್ತಾನೀಯರು ಅಥವಾ ಬಾಂಗ್ಲಾದೇಶೀಯರು.
ತಮ್ಮ ಹೋಟೆಲ್ ಮುಂಭಾಗದಲ್ಲಿ ‘ಪಾಕಿಸ್ತಾನಿ’ ಎಂದು ಹಾಕಿದ್ದರೆ ಸ್ಥಳೀಯರಿಂದ ಮೊದ ಲ್ಗೊಂಡು ಪ್ರವಾಸಿಗಳವರೆಗೆ ಬಹುತೇಕರು ಹೋಟೆಲ್‌ನೊಳಗೆ ಬರುವುದಿಲ್ಲ ಎಂಬ ಕಾರಣಕ್ಕೆ ‘ಇಂಡಿಯನ್ ಕ್ಯೂಸಿನ್’ ಎಂದು ಹಾಕುತ್ತಾರೆ. ಇದ್ದುದರಲ್ಲಿ ನೇಪಾಳಿಗಳು ವಾಸಿ, ‘ನೇಪಾಳಿ ರೆಸ್ಟೋ ರೆಂಟ್’ ಅಂತ ಧೈರ್ಯವಾಗಿ ಹಾಕಿಕೊಳ್ಳುತ್ತಾರೆ.
ಹೀಗೆ ಪಾಕಿಸ್ತಾನಿ ಮಾಲೀಕನ ಹೋಟೆಲ್ ಒಂದರಲ್ಲಿ ಊಟಕ್ಕೆ ಕುಳಿತಿದ್ದೆವು. ವ್ಯಕ್ತಿಯೊಬ್ಬ ಪಿಜ್ಜಾ ಡೆಲಿವರಿಗೆ ಬಳಸುವ ಬ್ಯಾಗೊಂದನ್ನು ಹಿಡಿದು ಒಳಬಂದ. ನಂತರ ಹೋಟೆಲ್ ಮಾಲೀಕನಿಗೆ ಒಂದಷ್ಟು ದುಡ್ಡನ್ನ ನೀಡಿ, ಟೇಬಲ್ ಒಂದರಲ್ಲಿ ಕುಳಿತು ನಮ್ಮನ್ನು ನೋಡಲು ಶುರುಮಾಡಿದ. ಮೊದಮೊದಲು ನಾವಷ್ಟು ಗಮನ ನೀಡಲಿಲ್ಲ. “ಅವನಿಗೆ ಹಸಿವಾದಂತಿದೆ, ಒಮ್ಮೆ ವಿಚಾರಿಸಿ ನೋಡು" ಎಂದಳು ರಮ್ಯ. ಅವನನ್ನು ಮಾತಾಡಿಸಿದಾಗ ತಿಳಿದದ್ದು- ಅವನಿನ್ನೂ ಕಾನೂನು ಬಾಹಿರವಾಗಿ ನೆಲೆ ನಿಂತಿರುವ ವಲಸಿಗ, ಮೂಲತಃ ಪಾಕಿಸ್ತಾನಿ.
ಲಾಲಾಜಿ ಹೋಟೆಲ್‌ನಲ್ಲಿ ನಿತ್ಯವೂ 20-30 ಸಮೋಸ ತೆಗೆದುಕೊಂಡು ಹೋಗಿ, ಪಾಕಿಸ್ತಾನಿ ಮತ್ತು ಬಾಂಗ್ಲಾದೇಶಿಯರು ಹೆಚ್ಚಾಗಿ ಇರುವ ಜಾಗದಲ್ಲಿ ಅದನ್ನು ಮಾರಿಕೊಂಡುಬರುವ ಕೆಲಸವನ್ನು ಮಾಡುತ್ತಾ ದಿನ ಕಳೆಯುತ್ತಿದ್ದ. ಅವನ ದಿನದ ಸಂಪಾದನೆ 10-15 ಯುರೋ! ಇದರಲ್ಲಿ ಅವನ ಜೀವನ ನಡೆಯಬೇಕು.
ಹೀಗೆ ರೆಸಿಡೆನ್ಸಿ ಪರ್ಮಿಟ್ ಇಲ್ಲದೆ 8 ವರ್ಷದಿಂದ ಅಲೆಮಾರಿ ಬದುಕನ್ನು ಸವೆಸುತ್ತಿದ್ದ ಅವನು, ಅನ್ನವನ್ನು ತಿಂದು 6 ತಿಂಗಳಾಗಿತ್ತಂತೆ. “ಭಾಯ್ ಮಾಫ್ ಕರ್‌ನಾ, ಆಪ್ ಲೋಗ್ ಬಿರಿಯಾನಿ ಖಾ ರಹಾಥಾ, ಇಸ್ಲಿಯೇ ದೇಖಾ... ಮಾಫ್ ಕರ್‌ನಾ" ಎಂದ ಆತ. ಇಂದಿಗೆ ಅವನ ಹೆಸರು ಮರೆತು ಹೋಗಿದೆ. ಅವನಿಗೆ ಒಂದು ಪ್ಲೇಟು ಚಿಕನ್ ಬಿರಿಯಾನಿ ಕೊಡಿಸಿದೆ.
“ಆರು ತಿಂಗಳಿಂದ ಬೆಳಗ್ಗೆ-ಮಧ್ಯಾಹ್ನ-ರಾತ್ರಿ ಒಂದು ಅಥವಾ ಎರಡು ಸಮೋಸ ತಿಂದು ನೀರು ಕುಡಿದು ಮಲಗುವುದು ಮಾಮೂಲಾಗಿ ಬಿಟ್ಟಿದೆ, ಸಮೋಸಾ ಎಂದರೆ ವಾಕರಿಕೆ ಬರುತ್ತದೆ" ಎಂದ ವನ ಕಣ್ಣಲ್ಲಿ ಬಿರಿಯಾನಿ ತಿನ್ನುವಾಗ ಒಂದಷ್ಟು ಹೊಳಪು ಕಂಡಿತು. ಯುರೋಪ್ ಅಥವಾ ಅಮೆರಿಕ ಎಂದಾಕ್ಷಣ, ಅಲ್ಲಿ ಎಲ್ಲವೂ ಸುಂದರ ಎನ್ನುವ ಭಾವನೆಯಿಂದ ಸಾಕಷ್ಟು ಜನ ವಲಸೆ ಹೋಗುತ್ತಾರೆ.
ಅಲ್ಲಿನ ನೆಲದ ಬಗ್ಗೆ ಅರಿವಿಲ್ಲದ, ವಿದ್ಯಾಭ್ಯಾಸವಿಲ್ಲದ ಮುಕ್ಕಾಲು ಪಾಲು ವಲಸಿಗರ ಕಥೆಯಿದು. ಇಲ್ಲಿ ನೋವುಂಡವರು ಊರಿಗೆ ಹೋದಾಗ ಸುಣ್ಣ-ಬಣ್ಣ ಹಚ್ಚಿ ಸುಖವನ್ನು ವರ್ಣಿಸುತ್ತಾರೆ. ಹೀಗಾಗಿ ಯುರೋಪಿನಲ್ಲಿ ಬಾಂಗ್ಲಾದೇಶೀಯರು, ಪಾಕಿಸ್ತಾನೀಯರು ಮತ್ತು ನಮ್ಮ ಪಂಜಾಬಿಗಳು ಹೀಗೆ ವರ್ಷಾನುಗಟ್ಟಲೆ ಅಲ್ಲಿಯೂ ಇಲ್ಲದ, ಇಲ್ಲಿಯೂ ಸಲ್ಲದ ತ್ರಿಶಂಕು ಬದುಕು ಬದುಕುವುದನ್ನು ದೊಡ್ಡ ಮಟ್ಟದಲ್ಲಿ ಕಾಣಬಹುದು.
ಅಕ್ರಮ ವಲಸಿಗರು ಎನ್ನುವ ಕಾರಣಕ್ಕೆ ಸಾಮಾನ್ಯವಾಗಿ ಸಿಗುವ ವೇತನದ ಅರ್ಧದಲ್ಲಿ ಇವರಿಂದ ಕೆಲಸ ಮಾಡಿಸಿಕೊಳ್ಳುವ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಮಾತ್ರ ದಂಡ ಬೀಳದಿರುವುದು ಮನುಕುಲದ ವಿಪರ್ಯಾಸ. ‘ಹೆಗ್ಗಣ ದೇಶಾಂತರ ಹೋದರೂ ನೆಲವನ್ನು ಕೊರೆಯುವುದು ತಪ್ಪುವುದಿಲ್ಲ’ ಎನ್ನು ವ ಮಾತು, ‘ಪಾಪಿ ಸಮುದ್ರ ಹೊಕ್ಕರೆ ಮೊಣಕಾಲುದ್ದ ನೀರು’ ಎನ್ನುವ ಗಾದೆಮಾತು ಇಂಥ ಸನ್ನಿ ವೇಶಕ್ಕೆ ತಕ್ಕ ಹಾಗಿವೆ. ಕೊನೆಗೂ, ನಾವು ನಡೆದುಬಂದದ್ದು ಅನುಭವಿಸದೇ ಬೇರೆ ದಾರಿ ಯಾವುದಿದೆ ಇಲ್ಲಿ?