Rashmi Hegde Column: ಗೂಢಚಾರಿ ನೀರಾ ಆರ್ಯ
ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ನಮ್ಮ ಕಲ್ಪನೆಗೂ ಮೀರಿದ ತ್ಯಾಗ, ಬಲಿದಾನಗಳು ಈ ದೇಶದಲ್ಲಿ ನಡೆ ದಿವೆ. ಊಹೆಗೂ ನಿಲುಕದ ಕಠಿಣ ಶಿಕ್ಷೆಗಳಿಗೆ ದೇಶಭಕ್ತರು ಗುರಿಯಾಗಿದ್ದಾರೆ. ಅಂತಹ ಎಲ್ಲರ ಪರಿಚ ಯವು ಪಠ್ಯಪುಸ್ತಕಗಳಲ್ಲಿ ಸೇರಿಲ್ಲ; ಅಂತಹ ಮಹಾನ್ ದೇಶಪ್ರೇಮಿಗಳಲ್ಲೊಬ್ಬಳು ‘ನೀರಾ ಆರ್ಯಾ


ರಶ್ಮಿ ಹೆಗಡೆ, ಮುಂಬೈ
ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ನಮ್ಮ ಕಲ್ಪನೆಗೂ ಮೀರಿದ ತ್ಯಾಗ, ಬಲಿದಾನಗಳು ಈ ದೇಶದಲ್ಲಿ ನಡೆದಿವೆ. ಊಹೆಗೂ ನಿಲುಕದ ಕಠಿಣ ಶಿಕ್ಷೆಗಳಿಗೆ ದೇಶಭಕ್ತರು ಗುರಿಯಾಗಿದ್ದಾರೆ. ಅಂತಹ ಎಲ್ಲರ ಪರಿಚಯವು ಪಠ್ಯಪುಸ್ತಕಗಳಲ್ಲಿ ಸೇರಿಲ್ಲ; ಅಂತಹ ಮಹಾನ್ ದೇಶಪ್ರೇಮಿಗಳಲ್ಲೊಬ್ಬಳು ‘ನೀರಾ ಆರ್ಯಾ’.
1902, ಮಾರ್ಚ್ 5 ರಂದು ಉತ್ತರಪ್ರದೇಶದ ಭಾಗಪತ್ ಜಿಲ್ಲೆಯ ವ್ಯಾಪಾರಿ ಸೇಠ್ ಛಜ್ಜುಮಲ್ ಮಗಳಾಗಿ ಜನಿಸಿದ್ದ ನೀರಾಗೆ, ತಂದೆಯು ಕಲಕತ್ತಾದಲ್ಲಿ ವಿದ್ಯಾಭ್ಯಾಸ ಕೊಡಿಸಿದ್ದ. ಯಾವ ಬ್ರಿಟಿಷ್ ಸರಕಾರದ ಜೊತೆಗೂಡಿ ಆತ ವ್ಯಾಪಾರ ನಡೆಸುತ್ತಿದ್ದನೋ ಅವರ ವಿರುದ್ಧವೇ ಆತನ ಮಕ್ಕಳು ಸಿಡಿದೆದ್ದರು.
ಕ್ರಾಂತಿಕಾರಿ ಚಿಂತನೆಗಳ ಕೈಹಿಡಿದು, ತಂದೆಯ ಸಕಲೈಶ್ವರ್ಯವನ್ನೂ ತೊರೆದರು. ನೇತಾಜಿ ಸುಭಾ ಷ್ಚಂದ್ರ ಬೋಸರ ತತ್ವ ಸಿದ್ಧಾಂತಗಳನ್ನು ಮೆಚ್ಚಿದ ನೀರಾ, ಆಜಾದ್ ಹಿಂದ್ ಫೌಜಿನ ಝಾನ್ಸಿರಾಣಿ ರೆಜಿಮೆಂಟ್ ಸೇರಿಕೊಂಡಳು. ತಂದೆಯು ಮಗಳನ್ನು ಆಕೆಯ ಇಚ್ಛೆಯ ವಿರುದ್ಧ ಪರಿಚಯಸ್ಥರ ಮಗನಾದ ಶ್ರೀಕಾಂತ್ ಜಯರಂಜನ್ ದಾಸ್ ಜೊತೆಗೆ ಮದುವೆ ಮಾಡಿಸಿದ. ಶ್ರೀಕಾಂತ್ ಬ್ರಿಟಿಷ್ ಸರಕಾರಕ್ಕೋಸ್ಕರ ಕೆಲಸಮಾಡುವ ಗುಪ್ತಚರದಳದ ಸಿಬ್ಬಂದಿಯಾಗಿದ್ದ. ನೀರಾ ಆರ್ಯಳು, ಝಾನ್ಸಿ ರಾಣಿ ರೆಜಿಮೆಂಟ್ ಸೇರಿ, ಬ್ರಿಟಿಷರ ವಿರುದ್ಧ ಕಾರ್ಯ ಚಟುವಟಿಕೆ ನಡೆಸಲು ಆಂಭಿಸಿದಳು; ಆಕೆಯ ಪತಿ ಕ್ರಾಂತಿಕಾರಿಗಳ ವಿರುದ್ಧ ಕಾರ್ಯ ನಡೆಸುತ್ತಿದ್ದ. ಇಬ್ಬರ ತತ್ವ ಹಾಗೂ ಸಿದ್ಧಾಂತ ಸಂಪೂರ್ಣವಾಗಿ ತದ್ವಿರುದ್ಧ. ಕ್ರಮೇಣ ಅವರಲ್ಲಿ ಭಿನ್ನಾಭಿಪ್ರಾಯ ತಲೆದೋರತೊಡಗಿತ್ತು. ಆಕೆಯ ಚಲನವಲನಗಳು ಆತನಲ್ಲಿ ಸಂಶಯವನ್ನು ಉಂಟುಮಾಡಿತ್ತು. ಇಬ್ಬರಲ್ಲೂ ಆಗಾಗ ದೇಶದ ಕುರಿತು ಕಟುವಾದ ವಾದವಿವಾದ, ಚರ್ಚೆ ನಡೆಯುತ್ತಲೇ ಇತ್ತು.
ಗುಪ್ತಚರದಳಕ್ಕೆ
ಸುಭಾಶ್ ಚಂದ್ರ ಬೋಸ ಹುಟ್ಟುಹಾಕಿದ ಆಜಾದ್ ಹಿಂದ್ ಫೌಜಿನ ಗೂಢಚಾರಿಕಾ ವಿಭಾಗದ ಮುಖ್ಯಸ್ಥರಾಗಿದ್ದ ಪವಿತ್ರ ಮೋಹನ್ ರಾಯ್ ಎನ್ನುವವರು ನೀರಾ ಹಾಗೂ ಇತರೆ ಕೆಲವು ಮಹಿಳೆ ಯರನ್ನು ಗೂಡಚಾರಿಕಾ ವಿಭಾಗಕ್ಕೆ ನೇಮಿಸಿದರು. ಆ ಸಮಯದಲ್ಲಿ ಬ್ರಿಟಿಷರು ಭಾರತದ ಮಹಿಳೆ ಯರನ್ನು ತಮ್ಮ ಮನೆಯ ಕೆಲಸಕ್ಕಾಗಿ ಬಳಸಿಕೊಂಡು, ಅವರನ್ನು ತಮ್ಮ ಗುಲಾಮರಂತೆ ನಡೆಸಿ ಕೊಳ್ಳುತ್ತಿದ್ದರು. ಇದನ್ನು ಅರ್ಥ ಮಾಡಿಕೊಂಡ ಪವಿತ್ರ ಮೋಹನ್ ರಾಯ್, ನೀರಾ ಹಾಗೂ ಇತರ ರನ್ನು ಬಡ ಮಹಿಳೆಯರ ರೂಪದಲ್ಲಿ ವೇಷ ಬದಲಿಸಿ ಆ ಬ್ರಿಟಿಷರ ಮನೆಗಳಿಗೆ ಕಸ, ಮುಸುರೆ ಹಾಗೂ ಇನ್ನಿತರೆ ಮನೆಗೆಲಸಗಳಿಗೆ ಸೇರಿಸಿದ್ದರು.
ಆಕೆಯ ಜೊತೆ ಸರಸ್ವತಿ ರಾಜಮಣಿ, ದುರ್ಗಾ ಮಲ್ಲಮ್ ಗೊರ್ಖಾ ಮುಂತಾದವರೂ ಇದ್ದರು. ಅವರಿಬ್ಬರೂ ಮಾರುವೇಷದಲ್ಲಿ ಬ್ರಿಟಿಷ್ ಕ್ಯಾಂಪ್‌ಗಳಿಂದ ವಿಷಯಗಳನ್ನು ಸಂಗ್ರಹಿಸುತ್ತಿದ್ದರು. ಎಷ್ಟೋ ಬಾರಿ ನೀರಾ ಬ್ರಿಟಿಷರ ಮನೆಗಳಿಂದ ದೇಶಕ್ಕೆ ಸಂಬಂಧ ಪಟ್ಟ ಪ್ರಮುಖ ಕಾಗದ ಪತ್ರ ಗಳನ್ನು ಯಾರಿಗೂ ತಿಳಿಯದಂತೆ ಕದ್ದು ತಂದುಕೊಡುತ್ತಿದ್ದಳು.
ಆ ಕೆಲಸವನ್ನು ಧೈರ್ಯದಿಂದ ಸಮರ್ಪಕವಾಗಿ ಮಾಡಿದ ನೀರಾಳಿಗೆ ಸ್ವತಃ ನೇತಾಜಿಯವರು ‘ನೀನು ಈ ದೇಶದ ಮೊದಲ ಮಹಿಳಾ ಗೂಢಚಾರಿಣಿ’ ಎಂದು ಕರೆದರು. ಪತಿಯ ಕಣ್ಣು ತಪ್ಪಿಸಿ ಆಕೆ ಆಜಾದ್ ಹಿಂದ್ ಫೌಜ್‌ನಲ್ಲಿ ತನ್ನ ಸೇವೆ ಹಾಗೂ ತರಬೇತಿಯನ್ನು ಮುಂದುವರೆಸಿದ್ದಳು. ನೀರಾಗೆ ಕ್ರಾಂತಿಕಾರಿಗಳ ಸಂಪರ್ಕವಿರಬಹುದು ಎಂಬ ಸಂಶಯದಿಂದ ಆಕೆಯ ಮೇಲೆ ಪತಿಯು ಒಂದು ಕಣ್ಣಿಟ್ಟ.
ಒಮ್ಮೆ ಆಕೆ ನೇತಾಜಿ ಹಾಗೂ ಇತರ ಹೋರಾಟಗಾರರನ್ನು ಭೇಟಿಯಾಗಲು ಹೊರಟಾಗ ಶ್ರೀಕಾಂತ್ ಆಕೆಯನ್ನು ಹಿಂಬಾಲಿಸಿದ. ನೇತಾಜಿಯನ್ನು ಕಂಡಕೂಡಲೇ ಅವರ ವಾಹನ ಚಾಲಕನತ್ತ ಗುಂಡು ಹಾರಿಸಿದ; ಮುಂದಿನ ಗುಂಡನ್ನು ಆತ ನೇತಾಜಿಯವರಿಗೆ ಹಾರಿಸುವವನಿದ್ದ.
ಪತಿಗೆ ಚುಚ್ಚಿದ ಪತ್ನಿ
ಒಂದೆಡೆ ತನ್ನ ನೆಚ್ಚಿನ ನಾಯಕ, ಇನ್ನೊಂದೆಡೆ ತನ್ನ ಪತಿ. ಇವರಿಬ್ಬರಲ್ಲಿ ಒಬ್ಬರನ್ನು ಮಾತ್ರ ಉಳಿಸೋಕೆ ಸಾಧ್ಯ. ತಾನು ಪತಿಯನ್ನು ಹಾಗೇ ಬಿಟ್ಟರೆ ಒಬ್ಬ ದೇಶಭಕ್ತನನ್ನು ಬ್ರಿಟಿಷರಿಗೆ ಹಿಡಿದು ಕೊಡುತ್ತಾನೆ ಎಂದು ಯೋಚಿಸಿ ತಕ್ಷಣವೇ ಕೈಯಲ್ಲಿದ್ದ ಬಂದೂಕಿನಿಂದ ತನ್ನ ಪತಿಗೆ ಗುಂಡು ಹೊಡೆಯಲು ಮುಂದಾಗುತ್ತಾಳೆ. ಆದರೆ ಅದರಲ್ಲಿ ಗುಂಡು ಖಾಲಿಯಾಗಿತ್ತು.
ಹಿಂದೆ ಮುಂದೆ ಯೋಚಿಸದೆ ಅಲ್ಲಿಯೇ ಇದ್ದ ದೊಡ್ಡ ಕತ್ತಿಯಿಂದ ಆತನ ಎದೆಗೆ ಚುಚ್ಚಿಬಿಡುತ್ತಾಳೆ. ಆ ಪರಿಣಾಮ ಶ್ರೀಕಾಂತನ ಸಾವಾಗುತ್ತದೆ. ಅವರೆಲ್ಲ ಅಲ್ಲಿಂದ ತಪ್ಪಿಸಿಕೊಳ್ಳುತ್ತಾರೆ. ದೇಶದ್ರೋಹಿ ಗಂಡನನ್ನು ಕೊಂದೆ ಎಂಬ ನೋವಿಗಿಂತ ದೇಶಭಕ್ತ ಸುಭಾಷರನ್ನು ಕಾಪಾಡಿದೆ ಎಂಬ ಸಮಾಧಾನ ಆಕೆಗಿತ್ತು.
1945ರ ಸಮಯಕ್ಕೆ ನೇತಾಜಿಯಿದ್ದ ವಿಮಾನ ಅಪಘಾತಕ್ಕೀಡಾಯಿತು ಎಂಬ ವಿಷಯ ಎಲ್ಲೆಡೆ ಹಬ್ಬಿತು. ಇದೇ ಸಮಯದಲ್ಲಿ ಆಜಾದ್ ಹಿಂದ್ ಫೌಜಿನ ಸಾವಿರಾರು ಸೈನಿಕರನ್ನು, ಹೋರಾಟ ಗಾರರನ್ನು ಬ್ರಿಟಿಷರು ಸೆರೆಹಿಡಿದರು. ಅವರಲ್ಲಿ ನೀರಾ ಆರ್ಯ ಕೂಡಾ ಒಬ್ಬಳು.
ಬ್ರಿಟಿಷ್ ಸರಕಾರದ ಸೇವೆಯಲ್ಲಿದ್ದ ಶ್ರೀಕಾಂತ್‌ನನ್ನು ಕೊಂದ ಹಾಗೂ ಸರಕಾರದ ವಿರುದ್ಧದ ಗೂಢಚಾರಿಕೆಯ ಅಪರಾಧದ ಮೇಲೆ ಆಕೆಯನ್ನು ಬಂಧಿಸಿ, ಅಂಡಮಾನ್ ನಿಕೋಬಾರ್‌ನ ಜೈಲಿ ನಲ್ಲಿಟ್ಟು ಆಕೆಗೆ ನಾನಾ ರೀತಿಯ ಚಿತ್ರಹಿಂಸೆ ಕೊಡಲಾಗುತ್ತದೆ. ಒಮ್ಮೆ ಜೈಲರ್ ಆಕೆಯ ಕೋಣೆಗೆ ಬರುತ್ತಾನೆ. ಸುಭಾಷ್ ಚಂದ್ರ ಬೋಸ್ ಸಾವು ಅನುಮಾನಾಸ್ಪದವಾದ್ದರಿಂದ ಬ್ರಿಟಿಷರಿಗೆ ಅವರಿನ್ನೂ ಬದುಕಿರಬಹುದು ಎಂಬ ಗುಮಾನಿ ಇತ್ತು.
‘ನೇತಾಜಿ ಹಾಗೂ ಇನ್ನಿತರ ಕ್ರಾಂತಿಕಾರಿಗಳು ಎಲ್ಲಿದ್ದಾರೆ ಹೇಳು! ನೀನು ನಿಜ ಹೇಳಿದರೆ ಈಗಲೇ ನಿನ್ನನ್ನು ಬಿಟ್ಟುಬಿಡುತ್ತೇವೆ’ಎನ್ನುತ್ತಾನೆ. ಆದರೆ ಆಕೆಯದ್ದು ಒಂದೇ ಉತ್ತರ, ‘ನೇತಾಜಿ ವಿಮಾನ ಅಪಘಾತದಲ್ಲಿ ತೀರಿಕೊಂಡಿದ್ದಾರೆ. ಅಷ್ಟಕ್ಕೂ ಅವರು ನಮ್ಮೆಲ್ಲರ ಮನಸ್ಸಿನಲ್ಲಿದ್ದಾರೆ. ನಮ್ಮೆದೆ ಯಲ್ಲಿ ಸದಾ ಹಸಿರಾಗಿದ್ದಾರೆ’ಎಂದು ಕೂಗಿಕೂಗಿ ಹೇಳುತ್ತಾಳೆ. ‘ಓಹ್ ಹೌದಾ! ಹಾಗಿದ್ದರೆ ನಿನ್ನ ಎದೆಯನ್ನೇ ಕೇಳಿ ತಿಳಿಯುತ್ತೇವೆ’ ಎನ್ನುತ್ತಾ ಕತ್ತಿಯಿಂದ ನೀರಾಳ ಒಂದು ಸ್ತನವನ್ನೇ ಕತ್ತರಿಸಿ ಬಿಡುತ್ತಾರೆ.
ಸ್ವಾಭಿಮಾನಿ ಬದುಕು
ನಮ್ಮ ದೇಶಕ್ಕೆ ಸ್ವಾತಂತ್ರ ಸಿಕ್ಕನಂತರ ಕಾಲಪಾನಿಯಿಂದ ಬಿಡುಗಡೆ ಹೊಂದಿದ ಆಕೆ ಯಾರ ಹಂಗೂ ಇರದಂತೆ, ಒಬ್ಬಂಟಿಯಾಗಿ ಹೈದರಾಬಾದಿನಲ್ಲಿ ಬಂದು ನೆಲೆಸಿ, ಒಂದು ಚಿಕ್ಕ ಗುಡಿಸಲಿ ನಲ್ಲಿ ವಾಸವಿದ್ದಳು. ಸ್ವಾತಂತ್ರ್ಯ ಹೋರಾಟಗಾರರಿಗೆ ದೊರಕುವ ಪಿಂಚಣಿಯನ್ನೂ ನಿರಾಕರಿಸಿ ದ್ದಳು ನೀರಾ. ಅತ್ಯಂತ ಸ್ವಾಭಿಮಾನಿ ಜೀವನ ನಡೆಸಿದ ನೀರಾ ಆರ್ಯ, ಕೊನೆಯ ದಿನಗಳಲ್ಲಿ ಹೂವು ಮಾರಿ ಜೀವನ ನಡೆಸುತ್ತಿದ್ದಳು.
ದುಃಖಕರ ವಿಷಯವೆಂದರೆ, 1998,ಜುಲೈ 26 ರಂದು ಹೈದರಾಬಾದಿನಲ್ಲಿ ಕೊನೆಯುಸಿರೆಳೆದ ನೀರಾ ಆರ್ಯಳ ಶವ ಸಂಸ್ಕಾರವೂ ಕೂಡ ಯಾವುದೇ ಸರಕಾರಿ ಗೌರವವಿಲ್ಲದೇ ನೆರವೇರುತ್ತದೆ. ಆಸ್ಪತ್ರೆ ಯವರು ಆಕೆಯ ಸಂದರ್ಶನಕ್ಕೆ ಬಂದಿದ್ದ ಒಬ್ಬ ಪತ್ರಕರ್ತರಿಗೆ ಈ ವಿಚಾರ ತಿಳಿಸುತ್ತಾರೆ. ಅವರು ತಮ್ಮ ಸಂಗಡಿಗರೊಂದಿಗೆ ಬಂದು ನೀರಾ ಆರ್ಯಳ ಅಂತಿಮ ಸಂಸ್ಕಾರ ನೆರವೇರಿಸಿದರು. ನೀರಾ ಆರ್ಯ ಈ ನಾಡಿನ ಮಣ್ಣಿನಲ್ಲಿ ಮಣ್ಣಾಗಿ ಮರೆಯಾದರೂ ಆಕೆಯ ತ್ಯಾಗ, ಬಲಿದಾನ ಮಾತ್ರ ಎಂದಿಗೂ ಅಮರ.
ಚಲನಚಿತ್ರದಲ್ಲಿ ನೀರಾ
ಅಜಾದ್ ಹಿಂದ್ ಫೌಜ್ ಪರವಾಗಿ ಕೆಲಸ ಮಾಡಿ, ಅಂಡಮಾನ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ನೀರಾ ಆರ್ಯ ಬದುಕನ್ನು ಆಧರಿಸಿದ ಚಲನಚಿತ್ರವನ್ನು ರೂಪಾ ಐಯರ್ ಅವರು ಸಿದ್ಧಪಡಿಸು ತ್ತಿದ್ದಾರೆ. ನೀರಾ ಆರ್ಯ ಅವರ ಹೋರಾಟದ ಬದುಕನ್ನು ಚಿತ್ರಿಸುವ ‘ಫಸ್ಟ್ ಲೇಡಿ ಸ್ಪೈ ಆಫ್ ಐಎನ್‌ಎ ನೀರಾ ಆರ್ಯ’ ಎಂಬ ಪುಸ್ತಕವೂ ಹೊರಬಂದಿದೆ.