ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sadhanashree Column: ಕನಸು ಕಾಣಲು ಕಾರಣ: ಆಯುರ್ವೇದದ ಕಣ್ಣುಗಳಲ್ಲಿ

ಸ್ನೇಹಿತರೆ, ಆಯುರ್ವೇದದಲ್ಲಿ ‘ಕನಸು’ ಎಂಬ ವಿಷಯವನ್ನು ನಮ್ಮ ಆಚಾರ್ಯರು ಸವಿಸ್ತಾರವಾಗಿ ತಿಳಿಸಿಕೊಟ್ಟಿzರೆ. ಕಾರಣ, ನಮ್ಮ ಆಂತರ್ಯದ ಆರೋಗ್ಯಕ್ಕೂ ಮತ್ತು ಕನಸುಗಳಿಗೂ ನೇರವಾದ ಸಂಬಂಧವಿದೆ. ಅದರಲ್ಲೂ ವಿಶೇಷವಾಗಿ ನಮ್ಮ ಹೃದಯ, ಮನಸ್ಸು, ನಿದ್ದೆ ಮತ್ತು ಕನಸು- ಇವುಗಳಿಗೆ ಬಿಡಿಸಲಾರದ ನಂಟು.

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಆಯುರ್ವೇದವು ಕನಸುಗಳನ್ನು ವಿಭಿನ್ನವಾಗಿ ಅರ್ಥೈಸುತ್ತದೆ. ದೇಹದ ಮೂರು ದೋಷ ಗಳಾದ ವಾತ, ಪಿತ್ತ, ಕಫಗಳ ಪ್ರಮಾಣವು ಕನಸುಗಳ ಸ್ವರೂಪವನ್ನು ಬದಲಿಸುತ್ತವೆ. ವಾತ ದೋಷದ ಪ್ರಾಬಲ್ಯವಿದ್ದಾಗ ಓಡುವ, ಹಾರಾಡುವ, ಕುಣಿಯುವ, ಜಿಗಿಯುವ, ಕೂಗುವ ಕನಸುಗಳು ಬೀಳುತ್ತವೆ. ಪಿತ್ತ ಪ್ರಾಬಲ್ಯವಿದ್ದಾಗ ಬೆಂಕಿ, ಯುದ್ಧ, ಬಿಸಿಲು, ಕೋಪ ಅಥವಾ ತೀಕ್ಷ್ಣ ದೃಶ್ಯಗಳ ಕನಸುಗಳನ್ನು ನೋಡುತ್ತಾರೆ.

ಒಮ್ಮೆ ಹಳ್ಳಿ ಬದಿಯ ಚಿಕ್ಕ ಮನೆಯೊಂದರಲ್ಲಿ ವಯೋವೃದ್ಧನೊಬ್ಬ ವಾಸಿಸುತ್ತಿದ್ದ. ಅವನ ಜೀವನ ಸರಳವಾಗಿತ್ತು- ಬೆಳಗ್ಗೆ ಹೊಲಕ್ಕೆ ಹೋಗುವುದು, ಸಂಜೆ ಕೆರೆಯ ತೀರದಲ್ಲಿ ಕುಳಿತು ಜಪ ಮಾಡುವುದು. ಆದರೆ ಅವನಿಗೆ ಪ್ರತಿ ರಾತ್ರಿಯೂ ವಿಚಿತ್ರ ಕನಸುಗಳು. ಒಮ್ಮೆ ಹಸಿರು ತೋಟದಲ್ಲಿ ಹಕ್ಕಿಗಳೊಂದಿಗೆ ಮಾತನಾಡುತ್ತಿದ್ದ ಹಾಗೆ, ಮತ್ತೊಮ್ಮೆ ಕತ್ತಲೆಯ ಅರಣ್ಯದಲ್ಲಿ ದಾರಿ ತಪ್ಪುತ್ತಿದ್ದ ಹಾಗೆ, ಕೆಲವೊಮ್ಮೆ ನದಿಯ ತೀರದಲ್ಲಿ ಹಸಿದ ಹುಲಿಯ ಹಿಂದೆ ಓಡುತ್ತಿದ್ದ ಹಾಗೆ. ಬೆಳಗ್ಗೆ ಎದ್ದಾಗ ಅವನ ಮನಸ್ಸು ಗೊಂದಲದಿಂದ ತುಂಬಿ, ಈ ಕನಸುಗಳ ಅರ್ಥವೇನು? ಇವು ಯಾಕೆ ನನ್ನನ್ನು ಕಾಡುತ್ತಿವೆ? ಎಂದು ಆತನು ಆತ್ಮಪರಿಶೀಲನೆ ಮಾಡಲು ಪ್ರಯತ್ನಿಸುತ್ತಿದ್ದನು. ಆದರೆ ಸಮಾಧಾನ ಕರವಾದ ಅರ್ಥ ಸಿಗಲಿಲ್ಲ.

ಒಂದು ದಿನ ಹಳ್ಳಿಗೆ ಬಂದ ಆಯುರ್ವೇದ ವೈದ್ಯನು ಆ ವೃದ್ಧನ ಮಾತುಗಳನ್ನು ಶ್ರದ್ಧೆಯಿಂದ ಕೇಳಿ ಹೀಗೆಂದನು: “ಕನಸುಗಳು ನಮ್ಮ ಅಂತರಂಗದ ದರ್ಪಣ. ಕನಸು ಎಂಬುದು ಕೆಲವೊಮ್ಮೆ, ದೇಹದಲ್ಲಿ ನಡೆಯುತ್ತಿರುವ ಅಸಮತೋಲನದ ಸೂಚನೆಯೂ ಆಗಿರಬಹುದು, ಮತ್ತೊಮ್ಮೆ ಅದು ಶಾಂತಿ ಮತ್ತು ಆರೋಗ್ಯದ ಸಂಕೇತವೂ ಆಗಿರಬಹುದು.

ನೀನು ಹುಲಿಯ ಹಿಂದೆ ಓಡುವ ಕನಸು ಕಾಣುವುದು ನಿನ್ನ ಮನಸ್ಸಿನ ಭಯದ ಪ್ರತಿರೂಪ. ನದಿಯ ಕನಸು ನಿನ್ನ ಜೀವನದ ಹರಿವಿನ ಸೂಚನೆ. ಹಸಿರು ತೋಟದ ಕನಸು ನಿನ್ನ ಹೃದಯದ ಶಾಂತಿ ಯನ್ನು ತೋರಿಸುತ್ತದೆ. ದೇಹ, ಮನಸ್ಸು, ಇಂದ್ರಿಯ- ಈ ಮೂರೂ ಸಮತೋಲನದಲ್ಲಿದ್ದಾಗ ಕನಸುಗಳೂ ಸುಂದರವಾಗುತ್ತವೆ".

ಇದನ್ನೂ ಓದಿ: Dr Sadhanashree Column: ಹಬ್ಬದ ನಂತರದ ಸಮತೋಲನಕ್ಕಾಗಿ ಅಜ್ಜಿಯ ಸೂತ್ರಗಳು

ಸ್ನೇಹಿತರೆ, ಆಯುರ್ವೇದದಲ್ಲಿ ‘ಕನಸು’ ಎಂಬ ವಿಷಯವನ್ನು ನಮ್ಮ ಆಚಾರ್ಯರು ಸವಿಸ್ತಾರವಾಗಿ ತಿಳಿಸಿಕೊಟ್ಟಿzರೆ. ಕಾರಣ, ನಮ್ಮ ಆಂತರ್ಯದ ಆರೋಗ್ಯಕ್ಕೂ ಮತ್ತು ಕನಸುಗಳಿಗೂ ನೇರವಾದ ಸಂಬಂಧವಿದೆ. ಅದರಲ್ಲೂ ವಿಶೇಷವಾಗಿ ನಮ್ಮ ಹೃದಯ, ಮನಸ್ಸು, ನಿದ್ದೆ ಮತ್ತು ಕನಸು- ಇವುಗಳಿಗೆ ಬಿಡಿಸಲಾರದ ನಂಟು.

ಆಯುರ್ವೇದವು ಉಲ್ಲೇಖಿಸುವ ಪ್ರಕಾರ ಗರ್ಭಾವಸ್ಥೆಯಿಂದ ಹಿಡಿದು ನಾವು ಸಾಯುವವರೆಗೆ ನಮಗಾಗಿ ದುಡಿದು, ಮಿಡಿದು, ನಮ್ಮನ್ನು ರಕ್ಷಿಸುವ ಅಂಗವೆಂದರೆ ಅದು ಹೃದಯ. ಈ ಹೃದಯವೇ ಮನಸ್ಸಿನ ವಾಸಸ್ಥಾನ. ಆದ್ದರಿಂದಲೇ ಮನಸ್ಸಿಗೆ ನೋವಾದರೆ ಅದರ ನೇರ ಪರಿಣಾಮ ಹೃದಯದ ಮೇಲೆ.

ಅಂತೆಯೇ, ನಮ್ಮ ಭಾವನೆಗಳು ಮನಸ್ಸಿನ ಬಹುಮುಖ್ಯ ಅಂಶ. ಆದ್ದರಿಂದ, ಭಾವನೆಗಳ ಮೂಲ ಸ್ಥಾನ ನಮ್ಮ ಹೃದಯವೇ. ಹೃದಯವು ಮನಸ್ಸಿನ ವಾಸಸ್ಥಾನ. ಇನ್ನು ಮನಸ್ಸಿನ ಕಾರ್ಯಕ್ಷೇತ್ರದ ಬಗ್ಗೆ ಹೇಳುವುದಾದರೆ, ಅದು ನಮ್ಮ ಸಂಪೂರ್ಣ ಶರೀರ. ಹಗಲಿನ ಸಮಯದಲ್ಲಿ ಮನಸ್ಸು ಮತ್ತು ಹೃದಯ ಎರಡೂ ಒಂದಲ್ಲ ಒಂದು ರೀತಿಯ ಕೆಲಸದಲ್ಲಿ ತೊಡಗಿಕೊಂಡಿರುತ್ತದೆ.

Dr Sadhana

ಇನ್ನು ರಾತ್ರಿಯ ಸಮಯದಲ್ಲಿ ಕತ್ತಲೆ ಆವರಿಸಿದಂತೆ ಹೃದಯವು ತನ್ನ ಕಾರ್ಯವನ್ನು ಕಡಿಮೆ ಮಾಡುತ್ತದೆ. ಅಂತೆಯೇ ಮನಸ್ಸನ್ನು ಒಂದು ರೀತಿಯ ಜಡತ್ವ ಆವರಿಸುತ್ತದೆ. ನಮ್ಮ ಎಲ್ಲಾ ದೈಹಿಕ ಕ್ರಿಯೆಗಳು ನಿಧಾನವಾಗುತ್ತವೆ. ರಾತ್ರಿಯಲ್ಲಿ ಹೃದಯದ ಚಟುವಟಿಕೆ ಕಡಿಮೆಯಾಗುವುದರಿಂದ ಹೃದಯದ ಅಧೀನದಲ್ಲಿರುವ ಮನಸ್ಸಿನ ಕೆಲಸವೂ ಕುಗ್ಗುತ್ತದೆ. ಆದ್ದರಿಂದ, ಮನಸ್ಸಿನ ಹತೋಟಿ ಯಲ್ಲಿರುವ ಐದು ಇಂದ್ರಿಯಗಳು- ಅಂದರೆ (ಶಬ್ದ) ಕಿವಿ, (ಸ್ಪರ್ಶ) ಚರ್ಮ, (ರೂಪ) ಕಣ್ಣು, (ರಸ) ನಾಲಿಗೆ ಮತ್ತು (ಗಂಧ) ಮೂಗು- ಹೀಗೆ ಅವುಗಳ ಕೆಲಸವು ಕಡಿತವಾಗುತ್ತದೆ. ಇದರಿಂದ ನಿದ್ರಿಸು ವಾಗ ನಮಗೆ ಇಂದ್ರಿಯಗಳ ಮೂಲಕ ಯಾವುದೇ ಅನುಭವ ಆಗುವುದಿಲ್ಲ.

ವಾಸ್ತವವಾಗಿ ನಿದ್ರೆಯು ಅನುಭವಶೂನ್ಯ ಸ್ಥಿತಿಯಾಗಬೇಕು. ಹೀಗೆ ಹೆಚ್ಚು ಸ್ವಪ್ನಗಳಿಲ್ಲದ ಯಾವುದೇ ರೀತಿಯ ಅನುಭವಗಳಿಲ್ಲದ ನಿದ್ದೆಯು ಆರೋಗ್ಯಕರವಾದ ನಿದ್ರೆ ಎನಿಸುತ್ತದೆ. ಇಂಥ ನಿದ್ರೆಯಿಂದಲೇ ನಮ್ಮ ಶರೀರ, ಇಂದ್ರಿಯ ಮತ್ತು ಮನಸ್ಸುಗಳಿಗೆ ಪೋಷಣೆ ದೊರಕುವುದು. ಇಡೀ ದಿನ ನಮ್ಮದ ಏರುಪೇರುಗಳು ಶಮನಗೊಂಡು ನಮ್ಮನ್ನು ಮುಂದಿನ ದಿನದ ಕೆಲಸಕ್ಕೆ ಸಿದ್ಧ ಮಾಡುತ್ತವೆ.

ಇಂಥ ಗಾಢವಾದ ನಿದ್ರಾಸ್ಥಿತಿಯನ್ನು ನಾವು ಅನುಭವಿಸಿದಾಗ ನಮ್ಮಲ್ಲಿ ಚೈತನ್ಯ ಉತ್ಸಾಹಗಳು ತುಂಬಿಕೊಂಡು ಇಡೀ ದಿನ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ. ಆದರೆ ಮಲಗುವ ಮುನ್ನ, ಕೊನೆಯ ಕ್ಷಣದವರೆಗೂ ನಾವು ನಮ್ಮ ಮನಸ್ಸನ್ನು ಬಾಹ್ಯ ಚಟುವಟಿಕೆಗಳಿಂದ ಬಿಡುವು ಮಾಡದಿದ್ದರೆ ಇಂಥ ಉತ್ತಮ ನಿದ್ದೆಯನ್ನು ಅನುಭವಿಸಲು ಸಾಧ್ಯವಿಲ್ಲ.

ಮಲಗುವವರೆಗೂ ಮೊಬೈಲ್, ಮನೆ ಕೆಲಸ, ಟಿವಿ ಸೀರಿಯಲ, ಆಫೀಸ್ ಕೆಲಸ, ‌ಸಿನಿಮಾ ಹಾಡು, ಬೇರೆ ಬೇರೆ ರೀತಿಯ ಚಿಂತನೆಗಳು- ಹೀಗೆ ಮನಸ್ಸು ಚಟುವಟಿಕೆಯ ಇದ್ದರೆ ಆಗ ಮನಸ್ಸು ರಜಸ್ಸಿ ನಿಂದ ಉತ್ತೇಜನಗೊಳ್ಳುತ್ತದೆ. ಇಂಥ ಮಾನಸಿಕ ಸ್ಥಿತಿಯಲ್ಲಿ ವ್ಯಕ್ತಿಯು ಮಲಗಿದಾಗ ಎಲ್ಲಾ ವಿವಿಧ ಅನುಭವಗಳನ್ನು ಮನಸ್ಸು ಆ ವ್ಯಕ್ತಿಯ ಅನುಭವಕ್ಕೆ ಪುನಃ ರವಾನಿಸುತ್ತದೆ.

ಕನಸಿನಲ್ಲಿ ನಮಗೆ ಸಿಗುವ ಅನುಭವಗಳು ಮಲಗುವ ಮುನ್ನ ಆಗುವ ಅನುಭವಗಳಿರಬಹುದು, ಅಥವಾ ಆ ದಿನದ ಘಟನೆಗಳ ಪ್ರಭಾವವಿರಬಹುದು, ನಮ್ಮ ಜೀವನದ ಹಿಂದೆ ಯಾವಾಗಲೋ ಸಿಕ್ಕಿದ ಅನುಭವವಾಗಿರಬಹುದು. ಒಟ್ಟಾರೆ, ಇಂಥ ಅನುಭವಗಳು ಒಬ್ಬ ವ್ಯಕ್ತಿಗೆ ಆಯಾ ಇಂದ್ರಿಯ ಗಳಿಂದ ಸಿಗುವುದರಿಂದ ಕನಸು ನಿಜವೇನೋ ಎಂಬಂತೆ ಭಾಸವಾಗುತ್ತದೆ.

ಆದ್ದರಿಂದ ಕನಸುಗಳಿಲ್ಲದೆ ಗಾಢ ನಿದ್ರೆಗೆ ಜಾರಬೇಕಾದರೆ ನಾವು ಮಲಗುವ ಮುನ್ನ ಶಾಂತವಾಗಿ, ಒಳಮುಖಗೊಂಡು, ಬಾಹ್ಯ ಚಟುವಟಿಕೆಗಳನ್ನು ತ್ಯಜಿಸಿ, ಮನಸ್ಸನ್ನು ಖಾಲಿ ಮಾಡಿಕೊಂಡು, ತಿಳಿನೀರಿನಂಥ ಮನೋಸ್ಥಿತಿಯಲ್ಲಿ ಮಲಗುವ ಪ್ರಯತ್ನ ಮಾಡಿದರೆ ಆಗ ನಮಗೆ ಕನಸುಗಳು ಬಾಧಿಸುವುದಿಲ್ಲ.

ಗಾಢನಿದ್ರೆಯಲ್ಲಿ ಕನಸುಗಳು ಶೂನ್ಯ. ಆರೋಗ್ಯಕರ ನಿದ್ರೆ ಎಂದರೆ ಕನಸುಗಳಿಲ್ಲದ ಗಾಢ ಮತ್ತು ದೀರ್ಘ ನಿದ್ರೆ. ಆಯುರ್ವೇದವು ಕನಸುಗಳನ್ನು ಬೇರೆ ಬೇರೆ ರೀತಿಯಾಗಿ ಅರ್ಥೈಸುತ್ತದೆ. ದೇಹದ ಮೂರು ದೋಷಗಳು- ವಾತ, ಪಿತ್ತ, ಕಫ; ದೇಹದಲ್ಲಿನ ಇವುಗಳ ಪ್ರಮಾಣವು ಕನಸುಗಳ ಸ್ವರೂಪ ವನ್ನು ಬದಲಿಸುತ್ತವೆ. ವಾತ ದೋಷದ ಪ್ರಾಬಲ್ಯವಿದ್ದಾಗ ಓಡುವ, ಹಾರಾಡುವ, ಕುಣಿಯುವ, ಜಿಗಿಯುವ, ಕೂಗುವ ಚಲನೆಯುಕ್ತವಾದ ಕನಸುಗಳು ಬೀಳುತ್ತವೆ.

ಪಿತ್ತ ಪ್ರಾಬಲ್ಯವಿದ್ದಾಗ ಬೆಂಕಿ, ಯುದ್ಧ, ಬಿಸಿಲು, ಕೋಪ ಅಥವಾ ತೀಕ್ಷ್ಣ ದೃಶ್ಯಗಳ ಕನಸುಗಳನ್ನು ನೋಡುತ್ತಾರೆ. ಕಫದ ಪ್ರಾಬಲ್ಯವು ನೀರು, ಹಸಿರು ಅರಣ್ಯ, ಕಮಲ, ಹಂಸ,ಬಾತುಕೋಳಿ ಮತ್ತು ಶಾಂತ ಸ್ಥಳದ ಕನಸುಗಳನ್ನು ನೀಡುತ್ತದೆ. ಆದರೆ ದೇಹವು ಆರೋಗ್ಯವಾಗಿದ್ದಾಗ, ಸುಸ್ಥಿತಿ ಯಲ್ಲಿದ್ದಾಗ ಕಾಡುವ ಕನಸುಗಳು ಆ ವ್ಯಕ್ತಿಯ ಪ್ರಕೃತಿಯನ್ನು ಸೂಚಿಸುತ್ತವೆ.

ವಾತ ಪ್ರಕೃತಿಯವರು ಕನಸಿನಲ್ಲಿ ಸಾಮಾನ್ಯವಾಗಿ ಹಾರಾಡುವಂತೆ ವಿಹರಿಸುತ್ತಾರೆ. ಪಿತ್ತ ಪ್ರಕೃತಿ ಯವರ ಕನಸು ಹೆಚ್ಚಾಗಿ ಭಯಂಕರವಾಗಿರುತ್ತದೆ. ಕಫ ಪ್ರಕೃತಿಯ ವ್ಯಕ್ತಿಯ ಕನಸುಗಳು ಸುಮಧುರ ಮತ್ತು ಪ್ರಶಾಂತವಾಗಿರುತ್ತವೆ. ಆದರೆ ರೋಗಕಾರಕ ದೋಷಗಳಿಂದ ಉಂಟಾದ ಕನಸುಗಳು ರೋಗ ಸೂಚಕ.

ಆಯುರ್ವೇದವು ಕನಸುಗಳನ್ನು ಇನ್ನೊಂದು ರೀತಿಯಾಗಿ ವಿಂಗಡಿಸುತ್ತದೆ:

೧. ದೃಷ್ಟ: ಜಾಗೃತಾವಸ್ಥೆಯಲ್ಲಿ ಯಾವಾಗಲೋ ಕಂಡದ್ದೇ ಕನಸಿನಲ್ಲಿ ಕಾಣಿಸುವುದು.

ಉದಾಹರಣೆಗೆ, ಹಗಲು ಹೊತ್ತಿನಲ್ಲಿ ಕಂಡ ಹಕ್ಕಿ, ರಾತ್ರಿ ಕನಸಿನಲ್ಲಿ ಕಾಣುವುದು.

೨. ಶ್ರುತ: ಹಿಂದೆ ಕೇಳಿದ ಸಂಗತಿಗಳು ಕನಸಿನಲ್ಲಿ ವ್ಯಕ್ತವಾಗುವುದು. ಉದಾಹರಣೆಗೆ, ಯಾರಾದರೂ ಒಂದು ಕಥೆ ಹೇಳಿದರೆ, ಅದು ರಾತ್ರಿ ಕನಸಿನಲ್ಲಿ ರೂಪ ಪಡೆಯುವುದು.

೩. ಅನುಭೂತ: ಉಳಿದ ಇಂದ್ರಿಯಗಳಾದ ರುಚಿ, ವಾಸನೆ, ಸ್ಪರ್ಶೇಂದ್ರಿಯಗಳಿಂದ ನೇರವಾಗಿ ಅನುಭವಿಸಿದ ವಿಷಯಗಳು ಅಥವಾ ಜೀವನದ ಯಾವುದೋ ಘಟನೆ, ಹಿಂದಿನ ಜನುಮದ ಅನುಭವಗಳು ಕನಸಿನಲ್ಲಿ ಪುನಃ ಕಾಣಿಸಿಕೊಳ್ಳುವುದು. ಉದಾಹರಣೆಗೆ, ದಿನದ ಹೊತ್ತಿನಲ್ಲಿ ಹೊಲದಲ್ಲಿ ಕೆಲಸ ಮಾಡಿದ ಅನುಭವ, ರಾತ್ರಿ ಕನಸಿನಲ್ಲಿ ಮತ್ತೆ ನಡೆಯುವುದು.

೪. ಪ್ರಾರ್ಥಿತ: ಮನಸ್ಸಿನ ಆಕಾಂಕ್ಷೆ, ಬೇಡಿಕೆ ಅಥವಾ ಬಯಕೆಗಳಿಂದ ಹುಟ್ಟುವ ಕನಸುಗಳು. ಉದಾಹರಣೆಗೆ, ಸಂಪತ್ತು ಬಯಸುವವನು ಧನದ ಕನಸು ಕಾಣುವುದು.

೫. ಕಲ್ಪಿತ: ಮನಸ್ಸಿನಲ್ಲಿ ಹುಟ್ಟುವ ಕಲ್ಪನೆಗಳಿಂದ ಅಥವಾ ಗಾಢವಾದ ಚಿಂತನೆಗಳಿಂದ ಬಂದ ಕನಸುಗಳು. ಉದಾಹರಣೆಗೆ, ಹಾರುವ ಕನಸು, ಅಸಾಧ್ಯವಾದ ಘಟನೆಗಳ ಕನಸು.

೬. ಭಾವಿಕ: ಮುನ್ಸೂಚನೆ ಅಥವಾ ಭವಿಷ್ಯದ ಸೂಚನೆ ನೀಡುವ ಕನಸುಗಳು. ಉದಾಹರಣೆಗೆ, ಅನಾರೋಗ್ಯ ಬರಬಹುದೆಂಬ ಮುನ್ನೋಟ ಅಥವಾ ಶುಭಕಾರ್ಯಕ್ಕೆ ಸಂಕೇತ ನೀಡುವ ಕನಸು.

೭. ದೋಷಜ: ಆಗಲೇ ಹೇಳಿದ ಹಾಗೆ ದೇಹದ ದೋಷಗಳ (ವಾತ, ಪಿತ್ತ, ಕಫ) ಅಸಮತೋಲನದಿಂದ ಉಂಟಾಗುವ ಕನಸುಗಳು. ಇದು ಅನಾರೋಗ್ಯ ಸೂಚಕ ಮತ್ತು ದೋಷಜನಿತವಾದದ್ದು.

ಕನಸುಗಳಿಗೆ ಫಲವಿದೆಯೇ? ಅರ್ಥವಿದೆಯೇ?

ದೃಷ್ಟ, ಶ್ರುತ, ಅನುಭೂತ, ಪ್ರಾರ್ಥಿತ, ಕಲ್ಪಿತ ಇಂಥ ಕನಸುಗಳಿಗೆ ಯಾವುದೇ ವಿಶೇಷ ಫಲವಿಲ್ಲ; ಅವು ಕೇವಲ ಮನಸ್ಸಿನ ಕಲ್ಪನೆಗಳು. ಹಗಲು ಹೊತ್ತಿನಲ್ಲಿ ಕಂಡ ಕನಸುಗಳನ್ನು ಸಾಮಾನ್ಯವಾಗಿ ಫಲಪ್ರದವೆಂದು ಪರಿಗಣಿಸುವುದಿಲ್ಲ.

ರಾತ್ರಿಯಲ್ಲಿ ಕಂಡ ಕನಸುಗಳು ಅತಿ ಉದ್ದವಾದವು, ಅತಿ ಚಿಕ್ಕದಾದವು, ಅಥವಾ ನಿದ್ರೆಯ ಮಧ್ಯ ದಲ್ಲಿ ಕಂಡವು- ಇವುಗಳಿಗೆ ವಿಶೇಷ ಅರ್ಥವಿಲ್ಲ, ಫಲವಿಲ್ಲ.

ಆದರೆ ರಾತ್ರಿಯ ನಿದ್ರೆಯ ಅಂತ್ಯದ ವೇಳೆ ಕಾಣುವ ಕನಸುಗಳು ಸಾಮಾನ್ಯವಾಗಿ ನಿಜವಾಗುವ ಸ್ವಭಾವ ಹೊಂದುತ್ತವೆ.

ಕನಸು ಕಂಡ ನಂತರ ನಿದ್ರೆಯಿಂದ ಎದ್ದಿದ್ದರೆ, ಆ ಕನಸು ಹೆಚ್ಚು ದೃಢವಾಗಿ ಫಲಿಸುವ ಸಾಧ್ಯತೆ ಇರುತ್ತದೆ.

ಶುಭ ಕನಸು ಬೆಳಗಿನ ಹೊತ್ತಿನಲ್ಲಿ, ಹಿತವಾದ, ಸಾತ್ವಿಕ ಮನಸ್ಥಿತಿಯಲ್ಲಿ ಕಂಡರೆ, ಅವು ಶುಭ-ಫಲಗಳನ್ನು ನೀಡುವ ಸಾಧ್ಯತೆ ಹೆಚ್ಚು. ಸ್ನೇಹಿತರೆ, ಕನಸುಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ಅವುಗಳ ಸ್ವರೂಪವನ್ನು ಸುಧಾರಿಸಲು ಜೀವನಶೈಲಿಯ ಬದಲಾವಣೆ ಅಗತ್ಯ.

ಅವೆಂದರೆ-

ನಿದ್ರೆಯ ಶಿಸ್ತಿನ ಪ್ರಾಮುಖ್ಯ: ಸರಿಯಾದ ಸಮಯಕ್ಕೆ ರಾತ್ರಿ ಮಲಗುವುದು, ಪ್ರಶಾಂತ ಮನಃ ಸ್ಥಿತಿಯಲ್ಲಿ ಮಲಗುವುದು.

ಆಹಾರ ಮತ್ತು ದಿನಚರ್ಯೆ: ತೀವ್ರ ಉಪ್ಪು, ಹುಳಿ, ಮಸಾಲೆಯ ಆಹಾರವನ್ನು ಹೆಚ್ಚು ತಿಂದರೆ ಅಶಾಂತ ಕನಸುಗಳು ಬರುತ್ತವೆ. ಸಾತ್ವಿಕ ಆಹಾರವು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

ಧ್ಯಾನ ಮತ್ತು ಪ್ರಾಣಾಯಾಮ: ಮನಸ್ಸಿನ ಸಮತೋಲನವು ಶುಭ ಕನಸುಗಳಿಗೆ ದಾರಿ ಮಾಡಿ ಕೊಡುತ್ತದೆ.

ಕನಸುಗಳು ನಮ್ಮ ಜೀವನದ ಅಂತರಂಗದ ನುಡಿಗಳು. ಅವು ಕೇವಲ ನಿದ್ರೆಯಲ್ಲಿನ ಕಲ್ಪನೆಗಳಲ್ಲದೆ, ದೇಹದ ದೋಷಗಳ, ಮನಸ್ಸಿನ ಭಾವನೆಗಳ ಮತ್ತು ಆತ್ಮದ ಆಳವಾದ ಸ್ಥಿತಿಯ ಪ್ರತಿಬಿಂಬಗಳಾಗಿವೆ. ಆಯುರ್ವೇದವು ಕನಸುಗಳನ್ನು ಆರೋಗ್ಯದ ದರ್ಶನಗಳೆಂದು ನೋಡುತ್ತದೆ- ಅವು ಎಚ್ಚರಿಕೆಯ ಸಂಕೇತವಾಗಬಹುದು.

ಕನಸುಗಳನ್ನು ಅರ್ಥ ಮಾಡಿಕೊಳ್ಳುವುದು ಎಂದರೆ ನಮ್ಮ ಅಂತರಂಗವನ್ನು ತಿಳಿಯುವ ಒಂದು ಪಯಣ. ಪ್ರತಿಯೊಂದು ಕನಸೂ ನಮಗೆ ಯಾವುದೋ ಪಾಠವನ್ನು ನೀಡುತ್ತದೆ- ಭಯವನ್ನು ಎದುರಿಸಲು, ಬಯಕೆಯನ್ನು ಅರಿಯಲು, ಶಾಂತಿಯನ್ನು ಉಳಿಸಿಕೊಳ್ಳಲು. ಜಾಗೃತಿಯ ಬೆಳಕಿ ನಂತೆ ಕನಸುಗಳು ಕತ್ತಲಿನಲ್ಲಿಯೂ ದಾರಿದೀಪವಾಗಬಹುದು.

ಕನಸುಗಳ ದ್ವಾರವು ನಮ್ಮ ದೇಹ, ಮನಸ್ಸು, ಇಂದ್ರಿಯಗಳನ್ನು ಸಮತೋಲನದತ್ತ ಕೊಂಡೊ ಯ್ಯುವ ಪವಿತ್ರ ಸೇತುವೆಯಾಗಬಹುದು! ಕನಸುಗಳ ಸಾರ್ಥಕತೆ ನಮ್ಮ ಕಣ್ಣುಗಳಿಗೆ ಕಾಣಬೇಕಷ್ಟೇ!

ಡಾ. ಸಾಧನಾಶ್ರೀ ಪಿ,

View all posts by this author