ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Rangaswamy Mookanahalli Column: ರಿಜೆಕ್ಟ್‌ ದಿ ರಿಜೆಕ್ಷನ್: ನಿರಾಕರಣೆಯನ್ನು ನಿರಾಕರಿಸಿ !

ಫಲಿತಾಂಶ ಹೇಳಬೇಕಾಗಿಲ್ಲ ಎಂದುಕೊಳ್ಳುವೆ. ರಿಜೆಕ್ಷನ್ ಎನ್ನುವುದು ಈ ವೇಳೆಗೆ ಅಭ್ಯಾಸ ವಾಗಿ ಹೋಗಿ ಬಿಟ್ಟಿತ್ತು. ‘ಪರವಾಗಿಲ್ಲ’ ಎನ್ನುವ ಎಲ್ಲಾ ಸಂಸ್ಥೆಗಳಲ್ಲೂ ನನ್ನನ್ನು ತಿರಸ್ಕರಿಸಿದ್ದರು. ಮಶ್ವರಂನಿಂದ ಯಶವಂತಪುರದ ಕಡೆಗೆ ನಡೆಯುತ್ತಾ ನನಗೆ ಗೊತ್ತಿಲ್ಲದೆ ಕಣ್ಣಲ್ಲಿ ನೀರು ಹರಿಯುತ್ತಿತ್ತು.

ರಿಜೆಕ್ಟ್‌ ದಿ ರಿಜೆಕ್ಷನ್: ನಿರಾಕರಣೆಯನ್ನು ನಿರಾಕರಿಸಿ !

-

ವಿಶ್ವರಂಗ

ನಮ್ಮ ಎಲ್ಲಾ ರೀತಿಯ ಕೆಲಸಗಳ ಕಾರಣ ಮತ್ತು ಫಲಿತಾಂಶವೇ ನಾವು ಎನ್ನಬಹುದು. ಬಹಳ ಸರಳವಾಗಿ ಇದನ್ನು, ಬೇವಿನ ಬೀಜವನ್ನು ಬಿತ್ತಿ ಮಾವಿನ ಫಲ ನಿರೀಕ್ಷಿಸಿದರೆ ಹೇಗೆ ಅದು ಸಾಧ್ಯವಿರುವುದಿಲ್ಲವೋ, ಥೇಟ್ ಹಾಗೆ ನಮ್ಮ ಒಟ್ಟು ಕರ್ಮಫಲಗಳು ನಾವು ಎನ್ನಬಹುದು. ಇದೇನೂ ದೊಡ್ಡ ರಹಸ್ಯವಲ್ಲ.

ಬಹಳ ಹಿಂದಿನಿಂದ ನಮ್ಮ ಪೂರ್ವಜರು ಈ ಮಾತುಗಳನ್ನು ಹೇಳಿಕೊಂಡು ಬಂದಿದ್ದಾರೆ. ಆದರೆ ಈ ಗುಣವನ್ನು ಒಂದು ಕಿವಿಯಲ್ಲಿ ಕೇಳಿ ಇನ್ನೊಂದರಲ್ಲಿ ಬಿಡುವವರ ಸಂಖ್ಯೆ ಅಸಂಖ್ಯ. ಯಾರು ಈ ಗುಣವನ್ನು, ಲಕ್ಷಣವನ್ನು ತಮ್ಮದಾಗಿಸಿಕೊಂಡಿದ್ದಾರೋ ಅವರು ಬದುಕಿನಲ್ಲಿ ತಮಗೂ ಮತ್ತು ಇತರರಿಗೂ ಸೃಷ್ಟಿಸಿದ್ದಾರೆ.

ಆಶ್ಚರ್ಯ ಎನ್ನಿಸುತ್ತದೆ, ಆದರೆ ಒಂದು ಸತ್ಯವೇನು ಗೊತ್ತೇ? ಒಮ್ಮೆ ನಾವು ಇಂಥ ಒಂದು ಅಂಶವನ್ನು ಸೃಷ್ಟಿಸಿಬಿಟ್ಟರೆ ಸಾಕು ಅದು ಬಹುದೂರ ಸಾಗುತ್ತದೆ. ನಮ್ಮ ಅರಿವಿಗೂ, ಊಹೆಗೂ ನಿಲುಕದ ರೀತಿಯಲ್ಲಿ ಬೇರೆಯವರನ್ನು ತಲುಪುತ್ತದೆ. ಯೋಚಿಸಲಾಗದ ರೀತಿ ಯಲ್ಲಿ ಅದು ದುಪ್ಪಟ್ಟುಗೊಳ್ಳುತ್ತಾ ತನ್ನ ಫಲಿತಾಂಶವನ್ನು ನೀಡುತ್ತದೆ.

ಕೊನೆಯ ಫಲಿತಾಂಶ ಅಥವಾ ಎಂಡ್ ರಿಸಲ್ಟ್ ಎಂದು ನಾವು ಏನನ್ನು ಕರೆಯುತ್ತೇವೋ ಅದು ಆಕಸ್ಮಿಕವಾಗಿರಲು ಸಾಧ್ಯವಿಲ್ಲ. ಅದು ನಿಗದಿತ ಕೆಲಸವನ್ನು ಪದೇ ಪದೆ, ನಿಗದಿತ ಫಲಿತಾಂಶ ಸಿಗುವವರೆಗೆ ಬೇಸರವಿಲ್ಲದೆ ಮಾಡುವ ಕ್ರಿಯೆ. ಈ ಸಾಲುಗಳನ್ನು ಮನನ ಮಾಡಿಕೊಳ್ಳುವುದು ಉತ್ತಮ.

ಇದನ್ನೂ ಓದಿ: Rangaswamy Mookanahalli Column: ಬದುಕು ಸ್ಯಾಕರಿನ್‌ʼನಂತೆ, ಸಿಹಿಯುಂಟು ಶಕ್ತಿಯಿಲ್ಲ !

ಬೇಕಿದ್ದಲ್ಲಿ ಇದನ್ನು ಬರೆದು ಓದುವ ಕೋಣೆಯಲ್ಲಿ, ಕಂಪ್ಯೂಟರ್ ಮೇಲೆ, ಫ್ರಿಜ್ ಮೇಲೆ ಎದರೂ ಸರಿಯೇ ನಿತ್ಯವೂ ಕಣ್ಣಿಗೆ ಕಾಣಿಸುವಂತೆ ಅಂಟಿಸಿಕೊಳ್ಳುವುದು ಕೂಡ ಮಾಡ ಬಹುದು. ನಿತ್ಯವೂ ಹತ್ತಾರು ಬಾರಿ ಇದನ್ನು ಓದುವುದರಿಂದ ಅದು ಮನಸ್ಸಿಗೆ ಹೆಚ್ಚು ನಾಟುತ್ತದೆ. ಈಗ ನೀವೇ ಪ್ರಶ್ನಿಸಿಕೊಂಡು ನೋಡಿ, ಹಿಡಿದ ಕೆಲಸದಲ್ಲಿ ಬಯಸಿದ ಫಲಿತಾಂಶ ಸಿಗದೆ ಹೋದರೆ ನಾವು ನಿರಾಶರಾಗುತ್ತೇವೆ.

ಇದರ ಸಹವಾಸ ಸಾಕು ಎಂದು ಬೇರೊಂದು ಪ್ರಯತ್ನಕ್ಕೆ ಕೈಹಾಕುತ್ತೇವೆ ಅಲ್ಲವೇ? ಉತ್ತರ ದಲ್ಲಿ ಪ್ರಾಮಾಣಿಕತೆಯಿರಲಿ. ಇದರಲ್ಲಿ ನಾಚಿಕೆ ಪಟ್ಟುಕೊಳ್ಳುವಂಥದ್ದು ಏನಿಲ್ಲ. ಜಗತ್ತಿನ 99 ಪ್ರತಿಶತ ಜನ ಮಾಡುವುದು ಇದನ್ನೇ!

ನಾವು 99 ರಿಂದ 1 ಪ್ರತಿಶತ ಜನರಲ್ಲಿ ಒಬ್ಬರಾಗಬೇಕು ಎಂದರೆ ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಸುಲಭವಾಗಿ ಎಲ್ಲವನ್ನೂ ಬಿಟ್ಟು ಮುಂದೆ ಹೋಗುವುದು ಉತ್ತಮ ಲಕ್ಷಣವಲ್ಲ. ಹಿಡಿದ ಕೆಲಸವು ಬಯಸಿದ ಫಲಿತಾಂಶವನ್ನು ಕೊಡುವವರೆಗೆ ದುಡಿಯಬೇಕು.

ದಣಿವಿನಲ್ಲೂ ದೃಢತೆ ಕಳೆದುಕೊಳ್ಳಬಾರದು. ನಾವು ಪ್ರತಿ ಕೆಲಸವನ್ನು ಶುರುಮಾಡಲು ಒಂದು ಕಾರಣವಿರುತ್ತದೆ. ಆ ಕಾರಣದ ಸಲುವಾಗಿ ನಾವು ಮಾಡುವ ಕೆಲಸವು ಫಲವನ್ನು ನೀಡುತ್ತದೆ. ಫಲಿತಾಂಶ ಯಾವಾಗಲೂ ನಾವು ಬಯಸಿದಂತೆಯೇ ಇರಬೇಕು ಎನ್ನುವಂತಿ ಲ್ಲ.

ನಾವು ಬಯಸಿದ ಫಲಿತಾಂಶ ಸಿಕ್ಕರೆ ನಮ್ಮ ಸಿದ್ಧತೆ ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ಪ್ರೋಸೆಸ್ ಸರಿಯಾಗಿದೆ ಎಂದರ್ಥ. ಅದಿಲ್ಲದೆ ವ್ಯತಿರಿಕ್ತ ಫಲಿತಾಂಶ ಬಂದಿದ್ದರೆ, ನಮ್ಮ ಕೆಲಸದಲ್ಲಿ, ನಮ್ಮ ಪ್ರೋಸೆಸ್‌ನಲ್ಲಿ ಏನೋ ಎಡವಟ್ಟಾಗಿದೆ ಎಂದರ್ಥ. ಹೀಗಾಗಿ ಫಲಿತಾಂಶ ಏನೇ ಇರಲಿ ಅದು ಆಕ್ಸಿಡೆಂಟ್ ಅಲ್ಲ.

ಇದನ್ನೂ ಓದಿ: Rangaswamy Mookanahalli Column: ಕಳೆದುಕೊಳ್ಳುವ ಮುನ್ನ, ಉಳಿಸಿಕೊಳ್ಳಲು ಯತ್ನಿಸೋಣವೇ ?

ಅಚಾನಕ್ಕಾಗಿ ಏನೂ ಆಗುವುದಿಲ್ಲ. ಅದು ಒಂದಲ್ಲ ಹತ್ತಾರು ಸೂಚನೆಗಳನ್ನು ಕೊಟ್ಟಿರು ತ್ತದೆ. ಆದರೆ ನಾವು ಅದನ್ನು ಅರಿತುಕೊಳ್ಳುವಲ್ಲಿ ಸೋತಿರುತ್ತೇವೆ. ಹಾಗೆ ನೋಡಲು ಹೋದರೆ ಆಕ್ಸಿಡೆಂಟ್ ಅಥವಾ ಅಪಘಾತ ಕೂಡ ನಿಜಾರ್ಥದಲ್ಲಿ ಅಪಘಾತ ವಲ್ಲ. ಅದು ಕೂಡ ಸೂಚನೆ ಕೊಟ್ಟಿರುತ್ತದೆ.

ನಿದ್ದೆ ಬರುತ್ತಿದ್ದರೂ ಡ್ರೈವ್ ಮಾಡುವುದು, ಮಿತಿ ಮೀರಿದ ವೇಗ, ಅಥವಾ ಮೆಕ್ಯಾನಿಕ್ ನಿಮ್ಮ ವಾಹನವು ದೂರ ಪ್ರಯಾಣಕ್ಕೆ ಯೋಗ್ಯವಲ್ಲ ಎಂದಿರುವುದು ಹೀಗೆ ಹಲವಾರು ಸೂಚನೆಗಳನ್ನು ನಿರ್ಲಕ್ಷಿಸಿ ವಾಹನ ಚಾಲನೆ ಮಾಡಿ ಅಪಘಾತಕ್ಕೆ ತುತ್ತಾದರೆ ಅದನ್ನು ಅಪಘಾತ ಎನ್ನುವುದು ಹೇಗೆ? ಗೊತ್ತಿಲ್ಲದೇ ಆಗುವುದು ಆಕ್ಸಿಡೆಂಟ್ ಎನ್ನಿಸುತ್ತದೆ.

ಮುಕ್ಕಾಲು ಪಾಲು ಫಲಿತಾಂಶಗಳು ಆಕ್ಸಿಡೆಂಟ್ ಆಗಿರುವುದಿಲ್ಲ. ಮನುಷ್ಯನ ಚಿಂತನೆಗಳಿಗೆ ಅಗಾಧ ಶಕ್ತಿಯಿದೆ. ಅದು ಬೇಕಾದ್ದನ್ನು ಸೃಷ್ಟಿಸುವ ಅಥವಾ ನಾಶ ಮಾಡುವ ಶಕ್ತಿಯನ್ನು ಖಂಡಿತ ಹೊಂದಿದೆ. ನಮಗೇನೂ ಬೇಡ ಎಂದು ಕುಳಿತುಕೊಳ್ಳುವ ಚಿಂತನೆ ಕೂಡ ಅದರದೇ ಆದ ಸನ್ನಿವೇಶವನ್ನು ಸೃಷ್ಟಿಸುತ್ತದೆ.

ಹೀಗಾಗಿ ನಾವು ಚಲನೆಯಲ್ಲಿರಲಿ ಅಥವಾ ಜಡತ್ವವನ್ನು ಒಪ್ಪಿಕೊಂಡಿರಲಿ ಎರಡೂ ಬೇರೆ ಬೇರೆ ರೀತಿಯ ಫಲಿತಾಂಶವನ್ನು ನೀಡುತ್ತವೆ. ನಮ್ಮ ಚಿಂತನೆಯು ನಮ್ಮನ್ನು ಸಮಾಜ ದಲ್ಲಿ ಉನ್ನತಿಯ ಕಡೆಗೂ, ಅವನತಿಯ ಕಡೆಗೂ ಕರೆದೊಯ್ಯುವ ಶಕ್ತಿಯನ್ನು ಹೊಂದಿವೆ. ಇಷ್ಟೆ ಹೇಳುವುದಕ್ಕೆ ಕಾರಣ ಕೆಳಗಿನ ಸಾಲುಗಳಲ್ಲಿವೆ.

rejected R

ಕೆಲಸಕ್ಕಾಗಿ ಬೆಂಗಳೂರಿನ ಬೀದಿ ಬೀದಿಗಳನ್ನು ಅಲೆದಿದ್ದೇನೆ. ಕೆಲಸಕ್ಕೆ ಅರ್ಜಿ ಹಾಕಿದ ಕಡೆಯಿಂದ ಇಂಟರ್ವ್ಯೂಗೆ ಕರೆ ಬಂದರೆ ಖುಷಿಯಾಗುತ್ತಿತ್ತು. ಏಕೆಂದರೆ ಹತ್ತರಲ್ಲಿ ನಾಲ್ಕೈದು ಕಡೆಯಿಂದ ಮಾತ್ರ ಕರೆ ಬರುತ್ತಿತ್ತು. ಸಂದರ್ಶನದಲ್ಲಿ ನಪಾಸು ಆಗುವುದು ಕೂಡ ಸಾಮಾನ್ಯವಾಗಿತ್ತು. ಯಾರೂ ಕಾರಣ ಹೇಳುತ್ತಿರಲಿಲ್ಲ. ಆದರೆ ಕೆಲಸ ಮಾತ್ರ ಯಾರೂ ಕೊಡಲಿಲ್ಲ.

ಅದೊಂದು ದಿನ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆಯಿಂದ ಸಂದರ್ಶನಕ್ಕೆ ಕರೆ ಬಂದಿತ್ತು. ಬಹಳ ಖುಷಿಯಿಂದ, ಶ್ರದ್ಧೆಯಿಂದ, ಸಂದರ್ಶನದಲ್ಲಿ ಏನೆ ಕೇಳಬಹುದು ಎನ್ನುವುದನ್ನು ಊಹಿಸಿಕೊಂಡು ಅದಕ್ಕೆ ತಯಾರಿ ಮಾಡಿಕೊಂಡು ಹೋಗಿದ್ದೆ.

ಜಪಾನಿಯರ ಬಗ್ಗೆ ಕೂಡ ಒಂದಷ್ಟು ತಿಳಿದು ಕೊಂಡು ಹೋಗಿದ್ದೆ. ಸಂದರ್ಶಕರು ಜಪಾನಿ ಯರು ಆಗಿರಬಹುದು ಎನ್ನುವ ಊಹೆ ಕೂಡ ಮಾಡಿಕೊಂಡಿದ್ದೆ. ನನ್ನ ಊಹೆ ನಿಜವಾಗಿತ್ತು. ಜಪಾನಿಯರು ಸಂದರ್ಶನಕ್ಕೆ ಕುಳಿತ್ತಿದ್ದರು. ಜಗತ್ತಿನ ಅರಿವಿಲ್ಲದ ವಯಸ್ಸದು. ಮೆಜೆಸ್ಟಿಕ್, ಎಂಜಿ ರಸ್ತೆ ನೋಡಿರದ ಬದುಕು. ಅವರು ಕೇಳಿದಕ್ಕೆ ಸರಿಯಾಗಿ ಉತ್ತರಿಸುವುದು ದೂರದ ಮಾತು, ಏನು ಕೇಳುತ್ತಿದ್ದಾರೆ ಎನ್ನುವುದೇ ಅರ್ಥವಾಗಲಿಲ್ಲ.

ಫಲಿತಾಂಶ ಹೇಳಬೇಕಾಗಿಲ್ಲ ಎಂದುಕೊಳ್ಳುವೆ. ರಿಜೆಕ್ಷನ್ ಎನ್ನುವುದು ಈ ವೇಳೆಗೆ ಅಭ್ಯಾಸ ವಾಗಿ ಹೋಗಿ ಬಿಟ್ಟಿತ್ತು. ‘ಪರವಾಗಿಲ್ಲ’ ಎನ್ನುವ ಎಲ್ಲಾ ಸಂಸ್ಥೆಗಳಲ್ಲೂ ನನ್ನನ್ನು ತಿರಸ್ಕರಿಸಿದ್ದರು. ಮಶ್ವರಂನಿಂದ ಯಶವಂತಪುರದ ಕಡೆಗೆ ನಡೆಯುತ್ತಾ ನನಗೆ ಗೊತ್ತಿಲ್ಲದೆ ಕಣ್ಣಲ್ಲಿ ನೀರು ಹರಿಯುತ್ತಿತ್ತು.

ಎಲ್ಲಾ ಸಿರಿವಂತರೂ ನೆಟ್‌ವರ್ಕ್ ಸೃಷ್ಟಿಸಿಕೊಂಡಿರುತ್ತಾರೆ ಮತ್ತು ಅಲ್ಲಿ ತಮ್ಮ ವಂಶದ ಕುಡಿಗಳಿಗೆ ಹೆಚ್ಚಿನ ಅವಕಾಶ ಕೊಡುತ್ತಾರೆ; ಹೀಗಾಗಿ ನಾವೆಷ್ಟೇ ಪ್ರಯತ್ನ ಪಟ್ಟರೂ ನಮಗೆ ಅವರಿಗೆ ಸಿಕ್ಕಿದ ಅವಕಾಶ ಸಿಕ್ಕುವುದಿಲ್ಲ ಎನ್ನುವುದನ್ನು ಬಲವಾಗಿ ನಂಬಿದ್ದೆ. ಬದುಕಿನಲ್ಲಿ ಅಂದುಕೊಂಡ ಯಾವ ಕಾರ್ಯಾವೂ ಸುಗಮವಾಗಿ ಆಗುತ್ತಿರಲಿಲ್ಲ.

ಇದೆಲ್ಲದರ ಜತೆಗೆ ಮನೆಯಲ್ಲಿ ಬಡತನವೂ ಇದ್ದರೆ ಕೀಳರಿಮೆ ಎನ್ನುವುದು ಬಹುಬೇಗ ಮನಸ್ಸಿನ ಮೇಲೆ ನಿಯಂತ್ರಣವನ್ನು ಸಾಧಿಸಿ ಬಿಡುತ್ತದೆ. ಹೀಗೆ ವಿಶ್ವಾಸವಿಲ್ಲದ ಮನಸ್ಸಿಗೆ ಹೇಳುವ ಯಾವ ಧನಾತ್ಮಕ ಮಾತುಗಳೂ ರುಚಿಸುವುದಿಲ್ಲ. ಬದಲಿಗೆ ಹಾಗೆ ಹೇಳಿದವರ ಮೇಲೂ ವೃಥಾ ಕೋಪ ಬರುತ್ತದೆ.

ನದಿಯನ್ನು ದಾಟಿ ಆ ಬದಿಗೆ ನಿಂತ ಮೇಲೆ ಈ ರೀತಿ ಬುದ್ದಿ ಹೇಳುವುದು ಸುಲಭ ಎಂದು ಬುದ್ದಿ ಹೇಳಿದವರ ಕುರಿತು ಕೂಡ ನಾವು ಕೇವಲವಾಗಿ ಮಾತನಾಡುತ್ತೇವೆ. ಈಗ ನಿಮ್ಮ ಪರಿಸ್ಥಿತಿ ಹೀಗಿದ್ದರೆ ಅದಕ್ಕೆ ಬೇಸರ ಪಟ್ಟುಕೊಳ್ಳಬೇಡಿ. ಮೊದಲೇ ಹೇಳಿದಂತೆ ನನ್ನ ಬದುಕಿನ ಪ್ರಥಮ 23 ವರ್ಷ ನಾನೂ ಕೂಡ ಇದೆ ರೀತಿಯ ಮನಸ್ಥಿತಿ ಹೊಂದಿದ್ದೆ!

ಈ ರೀತಿಯ ಮನಸ್ಥಿತಿ ಹೊಂದಿದ್ದರೆ ಅದು ನಿಮ್ಮ ತಪ್ಪಲ್ಲ. ನಮಗೆ ಆದ ಅನುಭವದ ಆಧಾರದ ಮೇಲೆ ನಾವು ಬದುಕನ್ನು ವಿವರಿಸುತ್ತಾ ಹೋಗುತ್ತೇವೆ.

ಮಲ್ಲೇಶ್ವರಂ ಮತ್ತು ಯಶವಂತಪುರದ ಮಧ್ಯದಲ್ಲಿ ಒಬ್ಬ ಚಾರ್ಟರ್ಡ್ ಅಕೌಂಟೆಂಟ್ ಆಫೀಸ್ ಕಣ್ಣಿಗೆ ಕಂಡಿತು. ಆ ಸಂಸ್ಥೆಯ ಹೆಸರು ಇಂದಿಗೂ ನನ್ನ ನೆನಪಲ್ಲಿ ಭದ್ರವಾಗಿದೆ. ಇವತ್ತಿಗೆ ಹೆಸರು ಬೇಕಿಲ್ಲ. ಘಟನೆ ಹೇಳುತ್ತೇನೆ. ಆ ಆಫೀಸ್ ಎದುರು ‘ಆಡಿಟ್ ಅಸ್ಸಿಸ್ಟಂಟ್ಸ್ ಬೇಕಾಗಿದ್ದಾರೆ’ ಎಂದು ಬೋರ್ಡ್ ತೂಗುಹಾಕಿದ್ದರು. ಅದನ್ನು ಕಂಡು ಒಳಹೋಗಿದ್ದೆ. ಅವತ್ತಿಗೆ ನಾನು 140 ಕೆ.ಜಿ. ತೂಗುತ್ತಿದ್ದೆ. ನನ್ನ ಡ್ರೆಸ್ಸಿಂಗ್ ಸೆನ್ಸ್ ಆ ದೇವರಿಗೇ ಪ್ರೀತಿ!

ನನ್ನ ಸರ್ಟಿಫಿಕೇಟ್ ನೋಡಿ, “ಇದು ನಿನ್ನದೇನು?" ಎಂದು ಪ್ರಶ್ನಿಸಿದರು. ಹೌದು ಎಂದದ್ದಕ್ಕೆ, ಒಂದೆರಡು ಪ್ರಶ್ನೆ ಕೇಳಿದರು. ಗೊತ್ತಿದ್ದಷ್ಟು ಉತ್ತರಿಸಿದೆ. ಆದರೂ ಅವರಿಗೆ ಸಮಾಧಾನವಾಗಲಿಲ್ಲ.

ಇಂಗ್ಲಿಷ್ ಪತ್ರಿಕೆಯನ್ನು ನನ್ನ ಕೈಗಿಟ್ಟು, ಹತ್ತಾರು ಸಾಲು ಓದಲು ಹೇಳಿದರು. ಯಾವ ಪ್ರತಿಷ್ಠಿತ ಸಂಸ್ಥೆಗಳು ಕೂಡ ನನಗೆ ಕೆಲಸ ಕೊಡುತ್ತಿರಲಿಲ್ಲ, ಕಾರಣ ಕೂಡ ಹೇಳುತ್ತಿರಲಿಲ್ಲ, ಏಕೆ ಎನ್ನುವುದು ಅವರು ಕೈಗೆ ಇಂಗ್ಲಿಷ್ ಪತ್ರಿಕೆ ಇಟ್ಟ ಕ್ಷಣ ನನಗೆ ಅರಿವಾಯ್ತು. ನನ್ನ ದೇಹಭಾಷೆ ಮತ್ತು ನನ್ನ ವಿದ್ಯಾಭ್ಯಾಸದ ಸರ್ಟಿಫಿಕೇಟ್ ಹೊಂದಾಣಿಕೆಯಾಗುತ್ತಿರಲಿಲ್ಲ! ಇಂಗ್ಲಿಷ್ ಪತ್ರಿಕೆಯನ್ನು ಚೆನ್ನಾಗಿ ಓದಿದೆ. ಆತ ನನಗೆ ಕೆಲಸ ಆಫರ್ ನೀಡಿದರು. ಅವರು ಹೇಳಿದ ವೇತನ ನನಗೆ ತುಂಬಾ ಕಡಿಮೆ ಎನ್ನಿಸಿ ಬೇಡ ಎಂದು ಹೊರ ಬಂದಿದ್ದೆ!

ಕೆಲಸಗಳು ಸಿಗದೆ ರಿಜೆಕ್ಷನ್ ಅನುಭವಿಸಿದ್ದ ನಾನು, ಸಿಕ್ಕ ಕೆಲಸವನ್ನು ರಿಜೆಕ್ಟ್ ಮಾಡಿದ್ದೆ. ಇವತ್ತಿಗೆ ಆ ನನ್ನ ನಿರ್ಧಾರ ನೆನಪಿಸಿಕೊಂಡು ಹೆಮ್ಮೆ ಎನ್ನಿಸುತ್ತದೆ. ಅವತ್ತು ಆ ಕೆಲಸಕ್ಕೆ ನಾನು ಅಡ್ಜ ಮಾಡಿಕೊಂಡಿದ್ದರೆ? ನಮ್ಮ ಬದುಕಿನಲ್ಲಿ ಯಾವುದೂ ನಾವೆಂದುಕೊಂಡಂತೆ ಆಗುತ್ತಿಲ್ಲ ಎಂದರೆ, ಅದು ಹೊಸ ಬದುಕಿಗೆ ನಮ್ಮನ್ನು ಸಜ್ಜು ಮಾಡುತ್ತಿದೆ ಎಂದರ್ಥ.

ಭಾರತದಲ್ಲಿ ಅನ್ನ ಹುಟ್ಟಿಸಿಕೊಳ್ಳುವ ಭಾಗ್ಯ ಅಂದಿಗೆ ನನಗೆ ಇರಲಿಲ್ಲ. ಆದರೆ ಅದು ಗೊತ್ತಾಗುವುದಾದರೂ ಹೇಗೆ? ಅಂದಿನ ವಯಸ್ಸಿನಲ್ಲಿ ಒಂದಲ್ಲ ಹತ್ತಾರು ಗುರುಗಳನ್ನು ಭೇಟಿ ಮಾಡಿದ್ದೆ. ತಿಳಿದವರು ಅನ್ನಿಸಿದವರನ್ನೆ ಮಾತನಾಡಿಸಿದ್ದೆ.

ಇನ್ನಷ್ಟು ಸಂಶಯ ಹೆಚ್ಚಾಗಿ ನೊಂದುಕೊಂಡಿದ್ದೆ. ಇಂಥ ಬದುಕನ್ನು ನನಗೇಕೆ ಕೊಟ್ಟೆ ಭಗವಂತ ಎಂದು ದೇವರನ್ನು ಕೂಡ ಬಯ್ದುಕೊಂಡಿದ್ದೆ! ಸಹಜವಾಗೇ ಎಲ್ಲರಿಗೂ ಆಗುವಂತೆ ನನಗೂ ಯಶಸ್ವಿಯಲ್ಲದ ಅಪ್ಪನ ಬಗ್ಗೆ ಬೇಸರ ಕೂಡ ಹುಟ್ಟಿತ್ತು. ಈತ ತನ್ನ ವೇಳೆಯನ್ನು ಸರಿಯಾಗಿ ದುಡಿಸಿಕೊಂಡಿದ್ದರೆ? ನನಗೆ ಇಂಥ ಕಷ್ಟ ಬರುತ್ತಿರಲಿಲ್ಲ ಎನ್ನುವ ಸ್ವಾನುಕಂಪದಿಂದ ತಾಸುಗಟ್ಟಲೆ ಅತ್ತಿದ್ದೇನೆ.

ನಮ್ಮ ಬದುಕನ್ನು ಬದಲಿಸುವ ದಿವ್ಯಮಂತ್ರ ನಮ್ಮ ಬಳಿಯಿದೆ. ಯಾವ ಗುರುವೂ ನೀಡಲಾಗದ ಉಪದೇಶವನ್ನು ಕೂಡ ನಮ್ಮ ಮನಸ್ಸು ನಮಗೆ ನೀಡಬಲ್ಲದು ಎನ್ನುವುದರ ಅರಿವು ನಮಗಾಗಬೇಕು. ಅದಾಗುವವರೆಗೂ ಬದುಕು ಜಾಳು ಜಾಳು. ಬ್ರಿಟಿಷರು ನಮ್ಮಲ್ಲಿ ಅವರ ಶಿಕ್ಷಣದ ಮೂಲಕ ಒಂದಂಶವನ್ನು ಬಹಳವಾಗಿ ತಲೆಯಲ್ಲಿರಿಸಿ ಹೋಗಿದ್ದಾರೆ.

ವಂಶವಾಹಿನಿಯಿಂದ ಬರುವುದು ಕೇವಲ ಕಾಯಿಲೆಗಳು ಎನ್ನುವುದು ಆ ಅಂಶ. ಕಾಯಿಲೆ ಗಳು ಬರುತ್ತವೆ ಎನ್ನುವುದು ನಿಜ. ಅದರ ಜತೆಗೆ ಸುಪ್ತವಾಗಿರುವ ಅನೇಕ ಶಕ್ತಿಗಳು ಕೂಡ ಬಂದಿರುತ್ತವೆ. ನಾವು ನಮ್ಮ ಬಗ್ಗೆ ಅಂದುಕೊಂಡದ್ದಕಿಂತ ಹೆಚ್ಚಿನ ಬಲಶಾಲಿಗಳೂ, ಬುದ್ಧಿವಂತರೂ ಆಗಿದ್ದೇವೆ ಎನ್ನುವುದರ ಅರಿವಾಗುವುದಿಲ್ಲ. ಆದರೆ ಇದು ನಿಜ.

ಕೇವಲ ರಿಜೆಕ್ಷನ್ʼಗಳನ್ನು ಕಂಡಿದ್ದ ಬದುಕಿನಲ್ಲಿ ಪ್ರಥಮ ಬಾರಿಗೆ ಸಿಕ್ಕ ಕೆಲಸವನ್ನು ರಿಜೆಕ್ಟ್ ಮಾಡಿದ್ದು ಒಂದು ರೀತಿಯಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬಿತು. ಬದುಕು ನನಗಾಗಿ ಒಂದು ಬದುಕನ್ನು ಹೆಣೆಯುತ್ತಿತ್ತು. ಇದರ ಅರಿವಿಲ್ಲದ ನಾನು, ನನ್ನ ಸೋಲಿಗೆ ಕಾರಣ‌ ವನ್ನು ಕಂಡುಕೊಂಡಿದ್ದೆ. ಹೀಗಾಗಿ ಅವುಗಳನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ.

ಸಿಕ್ಕ ಕೆಲಸವನ್ನು ರಿಜೆಕ್ಟ್ ಮಾಡಿದ ಒಂದೆರಡು ತಿಂಗಳಲ್ಲಿ ಸಂದರ್ಶನದಲ್ಲಿ ಪಾಸಾಗಿ ದುಬೈ ತಲುಪಿದೆ. ದುಬೈನಲ್ಲಿ ಕೂಡ ಮೂರು ತಿಂಗಳು ಕಳೆಯುವುದರಲ್ಲಿ ಯುರೋಪು ಸೇರಿಕೊಂಡೆ. ಅಂದುಕೊಂಡದ್ದು ಏನೂ ಆಗುತ್ತಿರದ ಬದುಕಿನಲ್ಲಿ ಅಂದುಕೊಳ್ಳದೆ ಬಹಳಷ್ಟು ಬದಲಾವಣೆಗಳು ಆಗತೊಡಗಿದವು.

ನಮ್ಮ ಸಮಯ ಬರುವವರೆಗೂ ತಾಳ್ಮೆಯಿಂದ ಕಾಯುವುದನ್ನು, ತಪ್ಪುಗಳು ಎನ್ನಿಸಿದರೆ ಅದನ್ನು ತಿದ್ದಿಕೊಳ್ಳುವುದನ್ನು ಮಾತ್ರ ನಿಲ್ಲಿಸಬಾರದು ಎನ್ನುವುದು ಬದುಕು ನನಗೆ ಕಲಿಸಿದ ಪಾಠ. ಇದೇನೋ ನಾನು ಮಹತ್ತರ ಸಾಧಿಸಿದ್ದೇನೆ ಎನ್ನುವುದರ ಬಗ್ಗೆಯಲ್ಲ. ಇವತ್ತಿಗೆ ರಿಜೆಕ್ಷನ್ ಅನುಭವಿಸುತ್ತಿರುವರಿಗೆ ಸಣ್ಣ ಸಮಾಧಾನ ಸಿಕ್ಕರೆ ಸಾಕು ಎನ್ನುವ ಭಾವನೆ ಅಷ್ಟೇ.