ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rangaswamy Mookanahalli Column: ಕಳೆದುಕೊಳ್ಳುವ ಮುನ್ನ, ಉಳಿಸಿಕೊಳ್ಳಲು ಯತ್ನಿಸೋಣವೇ ?

ಮರಣಶಯ್ಯೆಯಲ್ಲಿ ಮಲಗಿದ್ದ ಸಾವಿರಾರು ಜನರನ್ನು, ‘ನಿಮ್ಮ ಜೀವನದಲ್ಲಿ ನೀವು ಮಾಡಿದ ಮೂರು ತಪ್ಪುಗಳನ್ನು ಹೇಳಲಾಗುತ್ತದೆಯೇ?’ ಎನ್ನುವ ಪ್ರಶ್ನೆಯನ್ನು ಕೇಳಲಾಗುತ್ತದೆ. ಅದರಲ್ಲಿ ಪ್ರಥಮ ಸ್ಥಾನ ಗಳಿಸಿಕೊಂಡದ್ದು ‘ಬದುಕಿನ ಉದ್ದೇಶವೇನು? ಎನ್ನುವುದನ್ನು ನಾವು ಅರಿತುಕೊಳ್ಳದೆ ಹೋದದ್ದು’ ಎಂದು ಹೇಳಲಾಗುತ್ತದೆ.

ಕಳೆದುಕೊಳ್ಳುವ ಮುನ್ನ, ಉಳಿಸಿಕೊಳ್ಳಲು ಯತ್ನಿಸೋಣವೇ ?

-

ವಿಶ್ವರಂಗ

ಇನ್ನೊಂದು ವರ್ಷವನ್ನು ಕೂಡ ನಾವು ಮುಗಿಸುವ ಹಂತದಲ್ಲಿದ್ದೇವೆ. ಕಳೆದ ವರ್ಷ ಈ ದಿನಗಳಲ್ಲಿ ನಾವು ಸಾಕಷ್ಟು ಸಂಕಲ್ಪಗಳನ್ನು ಮಾಡಿಕೊಂಡಿದ್ದೆವು. ಅವುಗಳಲ್ಲಿ ಎಷ್ಟನ್ನು ಪಾಲಿಸಿದೆವು? ಎನ್ನುವುದನ್ನು ನಾವು ಗಮನಿಸಬೇಕು. ಹೊಸ ಸಂಕಲ್ಪಗಳನ್ನು ಮಾಡಿಕೊಳ್ಳುವ ಸಮಯದಲ್ಲಿ ನಿನ್ನೆಯ ದಿನದಲ್ಲಿ ನಾವು ಅಂದುಕೊಂಡದ್ದು ಎಷ್ಟು ಸಾಧಿಸಿದೆವು ಎನ್ನುವ ಮಾರ್ಕ್ಸ್ ಕಾರ್ಡ್ ನಾವೇ ಸೃಷ್ಟಿಸಿಕೊಳ್ಳಬೇಕು.

ಆದರೆ, ನಮ್ಮಲ್ಲಿ ಮುಕ್ಕಾಲು ಪಾಲು ಜನ ಅದರ ಗೋಜಿಗೇ ಹೋಗುವುದಿಲ್ಲ. ನಿನ್ನೆಯನ್ನು ಅರಿತು ಕೊಳ್ಳದೆ, ಇಂದಿನ ದಿನದಲ್ಲಿ ಸರಿಯಾಗಿ ಕೆಲಸ ಮಾಡದೆ ನಾವು ನಾಳೆಯನ್ನು ಎಂದಿಗೂ ನಮ್ಮಿಚ್ಛೆ ಯಂತೆ ಕಟ್ಟಿಕೊಳ್ಳಲಾರೆವು.

ಮರಣಶಯ್ಯೆಯಲ್ಲಿ ಮಲಗಿದ್ದ ಸಾವಿರಾರು ಜನರನ್ನು, ‘ನಿಮ್ಮ ಜೀವನದಲ್ಲಿ ನೀವು ಮಾಡಿದ ಮೂರು ತಪ್ಪುಗಳನ್ನು ಹೇಳಲಾಗುತ್ತದೆಯೇ?’ ಎನ್ನುವ ಪ್ರಶ್ನೆಯನ್ನು ಕೇಳಲಾಗುತ್ತದೆ. ಅದರಲ್ಲಿ ಪ್ರಥಮ ಸ್ಥಾನ ಗಳಿಸಿಕೊಂಡದ್ದು ‘ಬದುಕಿನ ಉದ್ದೇಶವೇನು? ಎನ್ನುವುದನ್ನು ನಾವು ಅರಿತು‌ ಕೊಳ್ಳದೆ ಹೋದದ್ದು’ ಎಂದು ಹೇಳಲಾಗುತ್ತದೆ.

ಎರಡನೆಯದು ‘ಹಣ ಮತ್ತು ಆರೋಗ್ಯವಿದ್ದಾಗ ಅವುಗಳ ಕಡೆಗೆ ಗಮನ ಕೊಡದೆ, ಅವುಗಳನ್ನು ಉಳಿಸಿಕೊಳ್ಳುವ ಮತ್ತು ವೃದ್ಧಿಸಿಕೊಳ್ಳುವ ಬಗ್ಗೆ ಚಿಂತಿಸದೆ ಹೋದದ್ದು’ ಮತ್ತು ಮೂರನೆಯದು ‘ನಮಗನ್ನಿಸಿದ್ದು ಮಾಡದೆ ಸಮಾಜದ ಜನರ ಮಾತನ್ನು ನಂಬುತ್ತಾ ಹೋದದ್ದು’ ಎನ್ನುವ ಅಂಶ ಗಳು ದಾಖಲಾಗಿವೆ.

ಇದನ್ನೂ ಓದಿ: Rangaswamy Mookanahalli Column: ಟೈಮ್‌ ಪಾಸ್‌ ಮತ್ತು ಫೋಕಸ್‌ ನಡುವೆ ಸ್ವಾಸ್ಥ್ಯ ಅಡಗಿದೆ !

ಇದರ ಜತೆಗೆ ‘ಸಂಬಂಧಗಳನ್ನು ಉಳಿಸಿಕೊಳ್ಳುವ ಬಗ್ಗೆ ಹೆಚ್ಚಿನ ಪ್ರಯತ್ನ ಮಾಡದೆ ಹೋದದ್ದು’ ಮತ್ತು ‘ಇವತ್ತಿನ ಬಗ್ಗೆ ಯೋಚಿಸದೆ ನಿನ್ನೆ ಮತ್ತು ನಾಳೆಯಲ್ಲಿ ಹೆಚ್ಚಿನ ಸಮಯ ಕಳೆದದ್ದರ’ ಬಗ್ಗೆ ಕೂಡ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದವರು ಕೂಡ ಬಹಳಷ್ಟು ಜನ.

ಇವತ್ತಿಗೆ ನಾವು ಬದುಕಿನ ಯಾವುದೇ ಹಂತದಲ್ಲಿರಲಿ ಈ ಐದು ಅಂಶಗಳನ್ನು ಒಮ್ಮೆ ಮೆಲುಕು ಹಾಕುವ ಅವಶ್ಯಕತೆ ಬಹಳ ಹೆಚ್ಚಾಗಿದೆ. ಏಕೆಂದರೆ ನಾವು ಕೂಡ ಪ್ರತಿ ನಿಮಿಷ, ಗಂಟೆ, ವಾರ, ತಿಂಗಳು, ವರ್ಷ ಸಾವಿಗೆ ಸನಿಹವಾಗುತ್ತಿರುತ್ತೇವೆ. ನಾವು ಇದರ ಬಗ್ಗೆ ಗಮನ ಕೊಡುವುದಿಲ್ಲ ಎನ್ನು ವುದು ಬೇರೆ ಮಾತು. ನಾವ್ಯಾರೂ ಇಲ್ಲಿ ಪರ್ಮನೆಂಟ್ ಅಲ್ಲ.

ಆದರೆ ನಮ್ಮದು ಎಂದು ಇರುವುದು ‘ನಮ್ಮ ವೇಳೆ’ ಮಾತ್ರ ಎನ್ನುವುದನ್ನು ನಾವು ಅರಿತು ಕೊಳ್ಳ ಬೇಕು. ನೀವೇ ಗಮನಿಸಿ ನೋಡಿ, ‘ನಾನು ಬ್ರಾಹ್ಮಣ, ನಾನು ಗೌಡ, ನಾನು ಹಿಂದೂ, ನಾನು ಮುಸ್ಲಿಂ’ ಇವೆಲ್ಲವೂ ನಮಗೆ ಗೊತ್ತಿಲ್ಲದೇ, ನಮ್ಮ ಅನುಮತಿ ಕೇಳದೆ ನಮಗೆ ಸಮಾಜ ನೀಡಿದ ಬಳುವಳಿ.

ಇನ್ನು ಹೆಸರು ಕೂಡ ಅಷ್ಟೇ, ನಮ್ಮನ್ನು ಯಾರೂ ಕೇಳದೆ ಇಟ್ಟ ಹೆಸರು ಜೀವನಪೂರ್ತಿ ನಮ್ಮದು ಎಂದು ಹಾಯಾಗಿ ಬದುಕಿ ಬಿಡುತ್ತೇವೆ. ಬದುಕಿನಲ್ಲಿ ಕೂಡ ಅಷ್ಟೇ ನಮ್ಮ ಪದವಿ, ಹಣ ಇತ್ಯಾದಿ ಎಲ್ಲವೂ ನಮ್ಮ ಪ್ರಯತ್ನ ಮತ್ತು ಸಮಾಜದ ಸಹಾಯದಿಂದ ನಾವು ಪಡೆದುಕೊಂಡದ್ದು, ಆದರೆ ಅವೆಲ್ಲವನ್ನೂ ನಾವು ಇಲ್ಲೇ ಬಿಟ್ಟು ಹೋಗಬೇಕು.

ನಮ್ಮದು ಎನ್ನುವುದು ನಮ್ಮ ಸಮಯ ಮಾತ್ರ. ಉಳಿದಂತೆ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಬೇರೆ ಅಂಶಗಳ ಮೇಲೆ ಅವಲಂಬಿತ, ಅರ್ಥಾತ್ ಪೂರ್ಣವಾಗಿ ನಮ್ಮವಲ್ಲ. ವರ್ಷದ ಕೊನೆಯಲ್ಲಿ ನಿಂತು ನಾವೀಗ ಈ ಐದು ಅಂಶಗಳನ್ನು ಕುರಿತು ಅವಲೋಕನ ಮಾಡಿಕೊಳ್ಳಬೇಕಿದೆ. ಮತ್ತದೇ ಹೇಳುವೆ- ಬದುಕಿನ ಯಾವುದೇ ಹಂತದಲ್ಲಿರಲಿ ನಾವು ಈ ಕಸರತ್ತು ಮಾಡುವುದು ಬಹಳ ಅವಶ್ಯಕ.

ಏಕೆಂದರೆ ನಾವೆ 45/50 ವಯೋಮಾನವನ್ನು ಮಧ್ಯವಯಸ್ಸು ಎನ್ನುವ ನಂಬಿಕೆಯಲ್ಲಿ ಬದುಕು ತ್ತಿದ್ದೇವೆ. ಇದು ಶುದ್ಧ ಸುಳ್ಳು. ಮನುಷ್ಯ ಆರೋಗ್ಯಕರವಾಗಿ, ಸಮಾಜಕ್ಕೆ ಏನಾದರೂ ವಾಪಸ್ಸು ನೀಡುವ ಹಂತದಲ್ಲಿರುವ ವಯಸ್ಸನ್ನು ಮಾತ್ರ ನಾವು ಲೆಕ್ಕ ಹಾಕಬೇಕು. ಆ ಲೆಕ್ಕಾಚಾರದಲ್ಲಿ ಒಬ್ಬ ಮನುಷ್ಯ ಎಪ್ಪತ್ತು ವರ್ಷಗಳ ಕಾಲ ಬದುಕುತ್ತಾನೆ ಎಂದುಕೊಳ್ಳಬಹುದು.

ಭಾರತೀಯರ ಸರಾಸರಿ ಬದುಕುವ ಲೆಕ್ಕಾಚಾರ ಕೂಡ ಇದೇ ಸಂಖ್ಯೆಯನ್ನು ಸೂಚಿಸುತ್ತದೆ. ಇದರ ಪ್ರಕಾರ ನೋಡಿದರು ಕೂಡ 35ರ ಹರೆಯವನ್ನು ನಿಜವಾದ ಮಧ್ಯವಯಸ್ಸು ಎಂದು ನಾವು ಪರಿ ಗಣಿಸಬೇಕು. ಈ ಬೇಸಿಕ್ ಲೆಕ್ಕಾಚಾರದ ನಾವು ಎಡವಿಬಿಟ್ಟಿದ್ದೇವೆ. ಹೀಗಾಗಿ ನಮ್ಮೆ ಉಳಿದ ಲೆಕ್ಕಾ ಚಾರಗಳು ಕೂಡ ಉಲ್ಟಾ ಹೊಡೆದುಬಿಡುತ್ತವೆ. ಆದ್ದರಿಂದ, ಈ ಐದು ಅಂಶಗಳನ್ನು ಅವಲೋಕಿಸು ವುದು ಅಷ್ಟೊಂದು ಪ್ರಾಮುಖ್ಯವನ್ನು ಪಡೆದುಕೊಳ್ಳುತ್ತದೆ.

ಎಲ್ಲಕ್ಕೂ ಮೊದಲಿಗೆ ಬದುಕಿನ ಉದ್ದೇಶವೇನು? ಎನ್ನುವ ಪ್ರಶ್ನೆಗೆ ನಾವು ಇಲ್ಲಿಯ ತನಕ ಉತ್ತರ ವನ್ನು ಕೊಟ್ಟುಕೊಂಡಿಲ್ಲದಿದ್ದರೆ ಅದಕ್ಕೆ ಉತ್ತರ ಕೊಟ್ಟುಕೊಳ್ಳುವುದಕ್ಕೆ ಈಗ ಸಮಯ ಮಾಡಿ ಕೊಳ್ಳಬೇಕು. ಉದ್ದೇಶ ಎಂದಕೊಡಲೇ ಮಹತ್ತರವಾದದ್ದನ್ನು ಸಾಧಿಸಬೇಕು, ಅದಕ್ಕೊಂದು ಗುರಿ-ಉದ್ದೇಶ ಬೇಕು ಎಂದಲ್ಲ.

ಬದುಕಿನ ಜಂಜಾಟಗಳ ನಡುವೆ ನಮ್ಮನ್ನು ನಾವು ಹುಡುಕಿಕೊಳ್ಳುವುದು, ಅನ್ನಿಸಿದ ಊರಿಗೆ ಒಂದು ಟ್ರಿಪ್ ಹೋಗಿಬರುವುದು, ಹೊಸದಾಗಿ ಈಜು ಕಲಿಯುವುದು, ಒಂಟಿಯಾಗಿದ್ದೂ ಖುಷಿಯಾಗಿರು ವುದು, ಹೀಗೆ ಉದ್ದೇಶ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.

ಒಟ್ಟಾರೆ ಬದುಕಿಗೊಂದು ಉದ್ದೇಶ ಬೇಕೇಬೇಕು. ಈ ವರ್ಷ ಅಂಥ ಒಂದು ಉದ್ದೇಶ ನಮ್ಮದಾಗಲಿ. ಏಕೆಂದರೆ ಬದುಕಿನ ಕೊನೆಯ ಹಂತದಲ್ಲಿ ‘ನಾನೇನೂ ಮಾಡದೆ ಸಾಯುವ ಸಮಯಕ್ಕೆ ಬಂದು ನಿಂತುಬಿಟ್ಟೆ’ ಎನ್ನುವ ವಿಷಾದ ಕೊಡುವ ನೋವು ಎಲ್ಲ ನೋವುಗಳಿಗಿಂತ ದೊಡ್ಡದು.

ಎರಡನೆಯದಾಗಿ ಈ ಸಾಲುಗಳನ್ನು ಓದುತ್ತಿರುವವರ ಬಳಿ ಒಂದಷ್ಟು ಹಣ ಮತ್ತು ಆರೋಗ್ಯ ಎರಡೂ ಇದ್ದ ಪಕ್ಷದಲ್ಲಿ ಅವುಗಳನ್ನು ವೃದ್ಧಿಸಿಕೊಳ್ಳುವುದರ ಬಗ್ಗೆ ಒಂದಷ್ಟು ಚಿಂತಿಸುವ ಅವಶ್ಯ ಕತೆ ಕೂಡ ಹಿಂದಿಗಿಂತ ಇಂದು ಹೆಚ್ಚಾಗಿದೆ.

ನಮ್ಮ ಬಳಿ ಏನಿರುತ್ತದೆ ಅದನ್ನು ನಾವು ಹೆಚ್ಚು ಪೂಜಿಸುವುದಿಲ್ಲ, ಅದರ ಬಗ್ಗೆ ಗಮನ ಹರಿಸುವು ದಿಲ್ಲ. ಅದು ಸದಾ ಹಾಗೇ ಇರುತ್ತದೆ ಎಂದುಕೊಳ್ಳುತ್ತೇವೆ. ಇದು ಎಲ್ಲರೂ ಮಾಡುವ ತಪ್ಪು. ಹಣ ಮತ್ತು ಆರೋಗ್ಯ ಎರಡನ್ನೂ ನಾವು ಜತನದಿಂದ ಕಾಪಾಡಿಕೊಳ್ಳಬೇಕು. ಅದ್ಯಾವ ಮಾಯದಲ್ಲಿ ಇವೆರಡೂ ಇಲ್ಲವಾಗುತ್ತವೆ ಎನ್ನುವುದನ್ನು ಪತ್ತೆಹಚ್ಚಲು ಸಾಧ್ಯವಿಲ್ಲ.

ಕಳೆದುಕೊಂಡ ಮೇಲೆ ಎರಡನ್ನೂ ಮರಳಿ ಪಡೆದುಕೊಳ್ಳಲು ಬಹಳಷ್ಟು ಬೆವರು ಸುರಿಸಬೇಕಾಗು ತ್ತದೆ. ನಿಮಗೆ ಗೊತ್ತಿರಲಿ, ಮತ್ತೆ ಗಳಿಸಿಕೊಳ್ಳಲು ಪಡುವ ಶ್ರಮದ ಅರ್ಧದಲ್ಲಿ ನಾವು ಅವುಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬಹುದು. ಅದರಲ್ಲೂ ಹಣವನ್ನು ಹೇಗಾದರೂ ಮರಳಿ ಪಡೆದುಕೊಳ್ಳಬಹುದು.

ಆರೋಗ್ಯವನ್ನು ಮರಳಿ ಗಳಿಸಿಕೊಳ್ಳುವುದು ಬಹಳ ಕಷ್ಟದ ಕೆಲಸ. ಹೀಗಾಗಿ ಕೈಯಿಂದ ಜಾರುವ ಮುನ್ನ ಇವುಗಳನ್ನು ಕಾಪಾಡಿಕೊಳ್ಳುವ ಬಗ್ಗೆ ಹೊಸ ವರ್ಷದ ಬಾಗಿಲಿನಲ್ಲಿ ಒಂದಷ್ಟು ಚಿಂತಿಸು ವುದು ಒಳ್ಳೆಯದು.

ಮೂರನೆಯದಾಗಿ ನಾವು ನಮ್ಮನ್ನು ನಂಬುವುದಿಲ್ಲ, ಸಮಾಜ ನಮ್ಮ ಬಗ್ಗೆ ಏನು ಹೇಳುತ್ತದೆ ಅದನ್ನು ನಂಬುತ್ತೇವೆ. ವಿಪರ್ಯಾಸ ಎನ್ನಿಸುತ್ತದೆ ಅಲ್ಲವೇ? ಆದರೆ ಇದೇ ಸತ್ಯ. ನಮಗೆ ಐಐಟಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಐಐಟಿ ಮದ್ರಾಸಿನಲ್ಲಿ ಓದಬೇಕು ಎನ್ನುವ ಹಂಬಲವಿರುತ್ತದೆ. ಆದರೆ ಸಮಾಜ ‘ಆ ಪರೀಕ್ಷೆ ಪಾಸು ಮಾಡುವುದು ಸುಲಭವಲ್ಲ’ ಎನ್ನುತ್ತದೆ.

‘ನಿನ್ನದು ಮಹತ್ವಾಕಾಂಕ್ಷೆ, ಪ್ಲಾನ್-ಬಿ ರೆಡಿ ಇಟ್ಟುಕೊಂಡಿರು’ ಎನ್ನುವ ಉಪದೇಶ ನೀಡುತ್ತದೆ. ಅಳ್ಳಕ ಮನಸ್ಸು ಸಮಾಜದ ಮಾತನ್ನು ಬಹುಬೇಗ ಒಪ್ಪಿಕೊಂಡುಬಿಡುತ್ತದೆ. ನಮಗೆ ಗೊತ್ತಿಲ್ಲದೇ ಮನಸ್ಸು, ದೇಹ ಎಲ್ಲವೂ ‘ಪ್ಲಾನ್-ಬಿ’ಗೆ ಸಿದ್ಧವಾಗುತ್ತವೆ. ನೀವು ನಂಬುವುದಿಲ್ಲ, ಆದರೆ ನಮ್ಮ ಮನಸ್ಸು ಕೆಲಸ ಮಾಡುವುದೇ ಹೀಗೆ.

ಮನಸ್ಸಿಗೆ ನೀವು ಯಾವ ನಿರ್ದೇಶನವನ್ನು ಬಲವಾಗಿ ನೀಡುತ್ತೀರೋ ಅದನ್ನೇ ಅದು ಪಾಲಿಸುತ್ತದೆ. ಜಗತ್ತು ನಮ್ಮ ಬಗ್ಗೆ ಒಂದು ಡೆಫಿನಿಷನ್ ಕೊಡುತ್ತದೆ- ‘ಅವನು ಪುಕ್ಕಲ, ಅವನು ಸಾಹಸಿ, ಅವನು ಗೋ-ಗೆಟ್ಟರ್, ಅವನು ಅದೃಷ್ಟವಂತ’ ಇತ್ಯಾದಿ. ಒಳ್ಳೆಯದೋ ಅಥವಾ ಕೆಟ್ಟದ್ದೋ ಸಮಾಜದ ಡೆಫಿನಿಷನ್ ಅನ್ನು ನಾವು ಒಪ್ಪಿಕೊಳ್ಳುವ ಅವಶ್ಯಕತೆಯಿಲ್ಲ.

ನಾವ್ಯಾರು ಎನ್ನುವ ಡೆಫಿನಿಷನ್ ಅನ್ನು ನಾವೇ ಬರೆದುಕೊಳ್ಳಬೇಕು. ಸಮಾಜ ಯಾವ ಮಟ್ಟದಲ್ಲಿ ಪ್ರಬಲವೆಂದರೆ, ಮುಕ್ಕಾಲು ಪಾಲು ಜನ ತಮ್ಮ ಡೆಫಿನಿಷನ್ ಸಮಾಜ ಹೇಳಿದ ಡೆಫಿನಿಷನ್ ಎಂದು ನಂಬುತ್ತಾರೆ. ಈ ವರ್ಷ ಈ ಪ್ಯಾಟ್ರನ್ ಮುರಿಯೋಣ. ನಾವ್ಯಾರು ಎನ್ನುವ ಹೇಳಿಕೆಯನ್ನು ನಾವೇ ಕೊಟ್ಟುಕೊಳ್ಳೋಣ.

ಐಎಎಸ್ ಇರಬಹುದು ಅಥವಾ ಬೇರೆ ಯಾವುದೇ ಪರೀಕ್ಷೆ ಇರಬಹುದು, ಅದನ್ನು ಈ ಸಮಾಜ, ಜಗತ್ತು ಕಷ್ಟ ಎಂದರೆ ಅದು ಅವುಗಳ ಡೆಫಿನಿಷನ್; ನನ್ನ ಡೆಫಿನಿಷನ್ ಬೇರೆ ಎನ್ನುವ ಆತ್ಮವಿಶ್ವಾಸ ಬೆಳೆಸಿಕೊಳ್ಳೋಣ. ನೆನಪಿರಲಿ ನಾವೇನನ್ನು ಪ್ರಬಲವಾಗಿ ಹೇಳುತ್ತೇವೋ, ಅದನ್ನು ನಮ್ಮ ಮನಸ್ಸು ನಂಬುತ್ತದೆ ಮತ್ತು ಕಾರ್ಯರೂಪಕ್ಕೆ ತರುತ್ತದೆ. ನಾಲ್ಕನೆಯ ಮತ್ತು ಅತ್ಯಂತ ಕ್ಲಿಷ್ಟ ಅಂಶವೆಂದರೆ ಸಂಬಂಧಗಳನ್ನು ಕುರಿತದ್ದು!

ಹೌದು ಇಂದಿಗೆ ಉತ್ತಮ ಸಂಬಂಧಗಳನ್ನು ಉಳಿಸಿಕೊಳ್ಳುವುದು ಅತ್ಯಂತ ಕಷ್ಟದ ಕೆಲಸವಾಗಿದೆ. ನೀವೇ ಗಮನಿಸಿ ನೋಡಿ, ಈ ಸೋಷಿಯಲ್ ಮೀಡಿಯಾ ಯುಗದಲ್ಲಿ ಈ ಮಾತು ಇನ್ನಷ್ಟು ಸತ್ಯ ಎನ್ನುವ ಅರಿವು ನಿಮ್ಮದಾಗುತ್ತದೆ. ಯಾರೋ, ಏತಕ್ಕೋ ಹಾಕಿದ ಒಂದು ಸ್ಟೇಟಸ್, ನಾಲ್ಕು ಸಾಲಿನ ಬರಹ ವರ್ಷಗಳ ಸಂಬಂಧಕ್ಕೆ ಎಳ್ಳು-ನೀರು ಬಿಡುವ ಹಂತಕ್ಕೆ ಬಂದು ನಿಲ್ಲುತ್ತದೆ.

‘ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ’ ಎನ್ನುವಂತೆ ಬಹಳಷ್ಟು ವರ್ಷಗಳ ಒಂದೊಳ್ಳೆ ಸಂಬಂಧ ಮುರಿದು ಬೀಳಲು ಅರೆಕ್ಷಣ ಸಾಕು. ಇದನ್ನು ಹೊರತುಪಡಿಸಿ, ಮನೆ ಮನೆಯಲ್ಲಿ ಕೂಡ ಅಣ್ಣ-ತಮ್ಮ, ಅಕ್ಕ-ತಂಗಿ, ಅಷ್ಟೇಕೆ ತಾಯಿ-ಮಕ್ಕಳ ನಡುವಿನ ಸಂಬಂಧಗಳು ಕೂಡ ಅಡುತ್ತಿವೆ.

ಒಂದೊಳ್ಳೆ ಸಂಬಂಧ ಉಳಿಸಿಕೊಳ್ಳುವುದು ಸ್ವಾರ್ಥದ ದೃಷ್ಟಿಯಿಂದ ನೋಡಿದರೂ ಒಳ್ಳೆಯದು. ಉತ್ತಮ ಸಂಬಂಧ, ಉತ್ತಮ ಕುಟುಂಬವನ್ನು ಹೊಂದಿದ ವ್ಯಕ್ತಿ ಹೆಚ್ಚಿನ ಸಾಧನೆಯನ್ನು ಮಾಡಲು ಸಾಧ್ಯ. ಐದನೆಯದಾಗಿ ನಾವು ಸದಾ ಕಳೆದುಹೋದ ನಿನ್ನೆಯ ಛಾಯೆಯಲ್ಲಿ, ಕಾಣದ ನಾಳಿನ ಬೆಳಕಿನ ಬಗ್ಗೆ ಯೋಚಿಸುತ್ತ ಕಳೆಯುತ್ತೇವೆ.

‘ಇಂದು’ ಎಂಬ ಕಣ್ಣೆದುರಿನ ವಾಸ್ತವವನ್ನು ನಾವು ಕಡೆಗಣಿಸಿಬಿಡುತ್ತೇವೆ. ಇಂದು ಮ್ಯಾಜಿಕ್ ಮರೆತು ಬಿಡುತ್ತೇವೆ. ಅದೊಂದು ಸರಳ ಸತ್ಯ. ನಮ್ಮ ‘ಇಂದು’ ಚೆನ್ನಾಗಿದ್ದರೆ, ನಮ್ಮ ನಿನ್ನೆ ಮತ್ತು ನಮ್ಮ ನಾಳೆ ಚೆನ್ನಾಗಿರುತ್ತದೆ. ನಮ್ಮ ಇಂದು ಸರಿಯಾಗಿರದೆ ಹೋದರೆ ಅದು ಸಹಜವಾಗೇ ನಮ್ಮ ನಿನ್ನೆ ಲೆಕ್ಕದಲ್ಲಿ ಸೋಲುತ್ತದೆ. ನಾಳೆಯ ಲೆಕ್ಕದಲ್ಲೂ ಗೆಲ್ಲುವುದಿಲ್ಲ. ಟುಡೇ, ಈಗ, ಇಂದು ಎನ್ನು ವುದು ಅದೆಷ್ಟು ಪ್ರಮುಖ ವಾದದ್ದು ಎಂದರೆ ನಮ್ಮ ನಿನ್ನೆ, ನಾಳೆಗಳು ಉತ್ಪತ್ತಿಯಾಗುವುದು ಇಂದಿನಲ್ಲಿ!

ಈ ಸರಳ ಸತ್ಯ ವನ್ನು ನಾವು ವರ್ಷದ ಕೊನೆಯ ಈ ದಿನಗಳಲ್ಲಿ ಇನ್ನಷ್ಟು ಮನನ ಮಾಡಿಕೊಂಡರೆ ಅದರಿಂದ ನಮಗೇ ಲಾಭ. ಹೋಗುವ ಮುನ್ನ: ನಮಗೇನು ಬೇಕು? ಅದನ್ನು ಸರಿಯಾದ ಮಾರ್ಗ ದಲ್ಲಿ ಗಳಿಸಿಕೊಳ್ಳುವುದು ಹೇಗೆ? ಎನ್ನುವುದನ್ನು ನಾವು ಅರಿತುಕೊಳ್ಳಬೇಕು. ಹೊಸ ವರ್ಷದಲ್ಲಿ ನಾವೊಂದು ಹೊಸ ಸಂಕಲ್ಪ ವನ್ನು ಮಾಡಿಕೊಳ್ಳಬೇಕು. ನಾವು ಸಬಲರಾಗದೆ ಸಮಾಜಕ್ಕೆ ನಾವೇನೂ ಕೊಡುಗೆಯನ್ನು ನೀಡಲು ಸಾಧ್ಯವಿಲ್ಲ.

ಹೀಗಾಗಿ ನಾವು ಸಬಲರಾಗಬೇಕು, ಅದು ಈ ವರ್ಷದ ನಮ್ಮ ಸಂಕಲ್ಪವಾಗಿರಬೇಕು. ಸಬಲರಾಗಲು ನಮಗೆ ಅವಶ್ಯಕವಾಗಿ ಬೇಕಾಗಿರುವ ಐದು ಹೊಸ ಸಂಕಲ್ಪಗಳನ್ನು ಕೂಡ ನಾವು ತಪ್ಪದೆ ಪಾಲಿಸ ಬೇಕು. ನಾವು ಸಬಲರಾಗುತ್ತಾ ಹೋದಾಗ ಸಮಾಜ ಮತ್ತು ಜನ ಕೂಡ ಆ ‘ಸಬಲ’ ನಮ್ಮನ್ನು ನಂಬುತ್ತಾರೆ.

ನೆನಪಿರಲಿ- ಜಗತ್ತು ಪೂಜಿಸುವುದು ಶಕ್ತಿಯನ್ನು, ಗೆದ್ದವರನ್ನು, ಯಶಸ್ವಿಯಾದವರನ್ನು; ಹೀಗಾಗಿ ಅಂಥ ಜಯ, ಯಶಸ್ಸು ಪಡೆದುಕೊಳ್ಳಲು ಬೇಕಾದ ಸಂಕಲ್ಪ, ಮನೋಬಲ ನಮ್ಮೆಲ್ಲರದೂ ಆಗಲಿ....