ಡಾ.ಅಮ್ಮಸಂದ್ರ ಸುರೇಶ್
ಸಾಮಾನ್ಯ ನಾಗರಿಕನೂ ಸಾರ್ವಜನಿಕ ಅಧಿಕಾರಿಗಳಿಂದ ಮಾಹಿತಿ ಪಡೆಯಲು ಅನುವಾಗಲು ಮತ್ತು ಸರಕಾರಗಳನ್ನು ಹೆಚ್ಚು ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿಸಲು ಜನಸಾಮಾನ್ಯ ರಿಗೆ ಅಧಿಕಾರ ನೀಡುವ ಸಲುವಾಗಿ ಜಾರಿಗೆ ತಂದ ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ)ಗೆ ಈಗ ಇಪ್ಪತ್ತರ ಹರೆಯ. ವಿಶ್ವದ ಅತ್ಯುತ್ತಮ ಪಾರದರ್ಶಕ ಕಾನೂನುಗಳಲ್ಲಿ ಒಂದು ಎಂದು ಪರಿಗಣಿಸ ಲಾಗಿರುವ ಮಾಹಿತಿ ಹಕ್ಕು ಕಾಯಿದೆ ಅಕ್ಟೋಬರ್ ೧೨, ೨೦೦೫ರಂದು ಜಾರಿಗೆ ಬಂದಿತು.
ಇದು ಭಾರತೀಯ ಸಂವಿಧಾನದ ೧೯ನೇ ವಿಧಿಯ ಅಡಿಯಲ್ಲಿ ಬರುವ ಮೂಲಭೂತ ಹಕ್ಕುಗಳಲ್ಲಿ ಒಂದಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಭಾಗವಾಗಿದೆ. ಕಳೆದ ೨೦ ವರ್ಷಗಳ ಅವಧಿಯಲ್ಲಿ ನಾಗರಿಕ ಸಮಸ್ಯೆಗಳಿಗೆ ಸಂಬಂಧಿಸಿದ ಮಾಹಿತಿ, ಪರಿಸರ ಮಾಲಿನ್ಯ, ಭ್ರಷ್ಟಾಚಾರ ಸೇರಿದಂತೆ ಸಾವಿರಾರು ಪ್ರಕರಣಗಳು ಮಾಹಿತಿ ಹಕ್ಕು ಕಾಯಿದೆಯಡಿ ಹೊರಬಿದ್ದಿವೆ.
ಲಕ್ಷಾಂತರ ಸಾರ್ವಜನಿಕರು ದೇಶದಾದ್ಯಂತ ಸರಕಾರಿ ಕಾರ್ಯನಿರ್ವಹಣೆಯಲ್ಲಿನ ಲೋಪ-ದೋಷಗಳನ್ನು ಬಹಿರಂಗಪಡಿಸಲು ಈ ಕಾಯಿದೆಯನ್ನು ಬಳಸುತ್ತಿದ್ದಾರೆ. ಜನರು ಸರಕಾರದ ಆಡಳಿತದೊಂದಿಗೆ ಅರ್ಥಪೂರ್ಣವಾದ ರೀತಿಯಲ್ಲಿ ತೊಡಗಿಸಿಕೊಳ್ಳಲು ಈ ಕಾಯಿದೆ ಅನುವು ಮಾಡಿಕೊಡುತ್ತಿದೆ.
ಇದನ್ನೂ ಓದಿ: RTI Activist banned: 20 ಪ್ರಭಾವಿ ಆರ್‌ಟಿಐ ಕಾರ್ಯಕರ್ತರಿಗೆ ನಿಷೇಧ
ಜನಸಾಮಾನ್ಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಕಾಯಿದೆ ಎಂದು ಗುರುತಿಸ ಲಾಗಿರುವ ‘ಆರ್‌ಟಿಐ’ ಜಾರಿಯಾಗಿ ೨೦ ವರ್ಷಗಳಾದರೂ ಮಾಹಿತಿ ನಿರಾಕರಣೆ, ಉನ್ನತ ಸ್ತರಗಳಲ್ಲಿ ಹೆಚ್ಚುತ್ತಿರುವ ಬಾಕಿ ಪ್ರಕರಣಗಳು, ಮಾಹಿತಿ ಅಯೋಗಗಳಲ್ಲಿ ಹೆಚ್ಚುತ್ತಿರುವ ಖಾಲಿ ಹುದ್ದೆಗಳ ಸಂಖ್ಯೆ ಸೇರಿದಂತೆ ಹಲವು ವಿಷಯಗಳು ಮಾಹಿತಿ ಹಕ್ಕು ಕಾಯಿದೆಯ ಮೂಲ ಉದ್ದೇಶ ಈಡೇರುವಲ್ಲಿ ಪ್ರಮುಖ ಅಡೆತಡೆಗಳಾಗಿ ಹೊರಹೊಮ್ಮಿವೆ. ಆದರೂ ಒಂದು ಅಂದಾಜಿನ ಪ್ರಕಾರ ಪ್ರತಿವರ್ಷ ಸುಮಾರು ೬೦ ಲಕ್ಷ ಆರ್‌ಟಿಐ ಅರ್ಜಿಗಳು ಸಲ್ಲಿಕೆಯಾಗುತ್ತಿವೆ.
ಹೀಗೆ ಸಲ್ಲಿಕೆಯಾದ ಒಟ್ಟು ಅರ್ಜಿಗಳ ಪೈಕಿ ಶೇ.50ರಷ್ಟು ಪ್ರಕರಣಗಳಲ್ಲಿ, ಜನರು ಯಾವುದೇ ಅಡೆತಡೆಯಿಲ್ಲದೆ ಮಾಹಿತಿಯನ್ನು ಪಡೆಯುತ್ತಾರೆ ಎಂಬ ಅಂಶ ಹಲವು ಅಧ್ಯಯನಗಳಿಂದ ಹೊರ ಬಿದ್ದಿವೆ. ಆಹಾರ, ಪಿಂಚಣಿ, ಆರೋಗ್ಯ, ನೀರು ಮತ್ತು ನೈರ್ಮಲ್ಯದಂಥ ಹಲವು ಮೂಲ ಹಕ್ಕುಗಳ ಕುರಿತು ಮಾಹಿತಿಯನ್ನು ಪಡೆಯುವಲ್ಲಿ ಈ ಕಾಯಿದೆ ನಿಜವಾಗಿಯೂ ಸಹಾಯ ಮಾಡಿದೆ.
ಈ ವರ್ಷದ ಜೂನ್ ೩೦ರ ಹೊತ್ತಿಗೆ, ೨೯ ಮಾಹಿತಿ ಆಯೋಗಗಳ (ಕೇಂದ್ರ ಮತ್ತು ರಾಜ್ಯ ಮಾಹಿತಿ ಆಯೋಗಗಳೆರಡೂ) ಮುಂದೆ ಸಲ್ಲಿಸಲಾದ ೪ ಲಕ್ಷಕ್ಕೂ ಹೆಚ್ಚು ಮೇಲ್ಮನವಿಗಳು ಮತ್ತು ದೂರುಗಳು ಇನ್ನೂ ಇತ್ಯರ್ಥವಾಗದೆ ಬಾಕಿ ಉಳಿದಿವೆ ಎಂದು ಎಸ್‌ಎನ್‌ಎಸ್‌ನ ಮೌಲ್ಯಮಾಪನದಲ್ಲಿ ಉಲ್ಲೇ ಖಿಸಲಾಗಿದೆ.
ಈ ಕಾಯಿದೆ ಜಾರಿಗೆ ಬಂದ ಒಂದು ವರ್ಷದಲ್ಲಿಯೇ ಶಾಸನಕ್ಕೆ ತಿದ್ದುಪಡಿ ತರುವ ಮೊದಲ ಪ್ರಯತ್ನವನ್ನು ಮಾಡಲಾಯಿತು. ಆದರೆ ಸಾರ್ವಜನಿಕರ ವಿರೋಧದಿಂದಾಗಿ ಈ ಕುರಿತಾದ ಪ್ರಸ್ತಾವನೆಯನ್ನು ಕೈಬಿಡಲಾಯಿತು. ಆದರೂ, ಕಳೆದ ಐದು ವರ್ಷಗಳಲ್ಲಿ ಕಾಯಿದೆಗೆ ಎರಡು ತಿದ್ದುಪಡಿಗಳನ್ನು ಮಾಡಲಾಗಿದೆ.
೨೦೧೯ರಲ್ಲಿ, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಆರ್‌ಟಿಐ ಮೇಲ್ಮನವಿ ಸಂಸ್ಥೆಗಳ ಮುಖ್ಯಸ್ಥ ರಾಗಿರುವ ಮಾಹಿತಿ ಆಯುಕ್ತರ ಸಂಬಳ ಮತ್ತು ಸೇವಾ ಷರತ್ತುಗಳನ್ನು ನಿಗದಿಪಡಿಸುವ ಅಧಿಕಾರ ವನ್ನು ಕೇಂದ್ರ ಸರಕಾರಕ್ಕೆ ನೀಡಲು ಸಂಸತ್ತು ಕಾನೂನನ್ನು ತಿದ್ದುಪಡಿ ಮಾಡಿತು.
೨೦೨೩ರಲ್ಲಿ, ಸಂಸತ್ತು ಡಿಜಿಟಲ್ ವೈಯಕ್ತಿಕ ಮಾಹಿತಿ ರಕ್ಷಣೆ (ಡಿಪಿಡಿಪಿ) ಕಾಯಿದೆಯನ್ನು ಅಂಗೀಕರಿಸಿತು, ಈ ತಿದ್ದುಪಡಿಯು ಸಾರ್ವಜನಿಕ ಹಿತಾಸಕ್ತಿ ಸೇರಿದಂತೆ ಯಾವುದೇ ವಿನಾಯಿತಿ ಇಲ್ಲದೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ಪಿಐಓಗಳು ತಡೆ ಹಿಡಿಯಲು ಅನುಮತಿಸುತ್ತದೆ. ಈ ಎರಡೂ ಕಾಯಿದೆಗಳು ವ್ಯಾಪಕವಾದ ಪರಿಣಾಮಗಳನ್ನು ಹೊಂದಿವೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ ೮(೧)ರ ಅನ್ವಯ ನಿರ್ದಿಷ್ಟ ಇಲಾಖೆ ಮತ್ತು ಸಂಸ್ಥೆಗಳನ್ನು ಹೊರತುಪಡಿಸಿ ಯಾವುದೇ ಸರಕಾರದ ಯಾವುದೇ ಇಲಾಖೆಯ ಕಾರ್ಯವಾದರೂ ಆರ್‌ಟಿಐ ವ್ಯಾಪ್ತಿಗೆ ಒಳಪಡುತ್ತದೆ. ಸರಕಾರದ ಕಾಮಗಾರಿಗಳಿಗೆ ಸಂಬಂಧಿತ ಪ್ರಶ್ನೆಗಳಿಗೆ ಉತ್ತರ ಅಥವಾ ಮಾಹಿತಿಯನ್ನು ಪಡೆಯಬಹುದು. ಯಾವುದೇ ಒಂದು ಕಾಮಗಾರಿಯ ಪ್ರತಿ ಹಂತದ ಮಾಹಿತಿ ಯನ್ನು ಪಡೆಯಬಹುದು.
ಸರಕಾರ ಹೊರಡಿಸಿದ ಆದೇಶಗಳ ನಕಲು ಪ್ರತಿಯನ್ನು ಕೇಳಿ ಪಡೆದುಕೊಳ್ಳಬಹುದು. ಸಾರ್ವ ಜನಿಕರು ತಮ್ಮ ಕುಂದುಕೊರತೆಗಳ ನಿವಾರಣೆಗಾಗಿ ಅರ್ಜಿ ಸಲ್ಲಿಸಿದಾಗ ಸದರಿ ಅರ್ಜಿಯ ಸ್ಥಿತಿಗತಿ ಯನ್ನು ತಿಳಿದುಕೊಳ್ಳಬಹುದು. ಭ್ರಷ್ಟ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯಿದೆ ಆತಂಕ ವನ್ನು ಸೃಷ್ಟಿಸಿರುವುದರಲ್ಲಿ ಎರಡು ಮಾತಿಲ್ಲ.
ಸಾಮಾಜಿಕ ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರರು ಹಾಗೂ ಪತ್ರಕರ್ತರಿಗೆ ಒಂದು ಪ್ರಮುಖ ಅಸ್ತವಾಗಿರುವುದರಿಂದ ಆರ್‌ಟಿಐ ಕಾಯಿದೆಯಡಿ ಮಾಹಿತಿಯನ್ನು ಬಯಸಿ ಬರುವ ಅರ್ಜಿಗಳು ಸಾವಿರಾರು. ಸರಕಾರದ ವಿವಿಧ ಇಲಾಖೆಗಳಿಂದ ಮಾಹಿತಿ ಪಡೆಯಲು ಮಾಧ್ಯಮಗಳಿಗೆ ಇದು ವರದಾನವಾಗಿದೆ.
ಈ ಕಾಯಿದೆಯ ದುರುಪಯೋಗ ಕೂಡ ಆಗುತ್ತಿದೆ ಎಂಬ ದೂರುಗಳೂ ಕೇಳಿಬರುತ್ತಿವೆ. ಕೆಲವರು ವೈಯಕ್ತಿಕ ಮಾಹಿತಿಗಳನ್ನು ಕೇಳಿ ವ್ಯಕ್ತಿಗಳ ಚಾರಿತ್ರ್ಯಕ್ಕೆ ಹಾನಿಮಾಡುವ ಕೆಲಸಗಳಲ್ಲಿ ತೊಡಗಿzರೆ ಎನ್ನಲಾಗುತ್ತಿವೆ. ಆದರೆ ಆರ್‌ಟಿಐ ಕಾಯಿದೆ ಸೆಕ್ಷನ್ ೮(೧) (ಜಿ) ಅನ್ವಯ ಯಾವುದೇ ವ್ಯಕ್ತಿಯ ಖಾಸಗಿ ಮಾಹಿತಿಗಳು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸದೇ ಇದ್ದರೆ ಅಥವಾ ಬಯಸಿರುವ ಮಾಹಿತಿ ಯಿಂದ ವ್ಯಕ್ತಿಯ ಖಾಸಗಿತನಕ್ಕೆ ಭಂಗ ಬರುವಂತಿದ್ದರೆ ಮಾಹಿತಿ ಅಧಿಕಾರಿ ಅಥವಾ ಸಂಬಂಧಿಸಿದ ಮೇಲ್ಮನವಿ ಪ್ರಾಽಕಾರಗಳು ಅಂಥ ಮಾಹಿತಿಯನ್ನು ಕೊಡಲು ನಿರಾಕರಿಸಬಹುದು.
ಇದಕ್ಕೆ ಪೂರಕವಾಗಿ ಡಿಪಿಡಿಪಿ ಕಾಯ್ದೆಯ ಸೆಕ್ಷನ್ 44(೩)ರ ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಹಾಗೂ ಇತರ ವಿಚಾರಗಳನ್ನು ತೆಗೆಯಲಾಗಿದ್ದು ಯಾವುದೇ ವ್ಯಕ್ತಿಯ ಖಾಸಗಿ ಮಾಹಿತಿಗಳನ್ನು ತಡೆಹಿಡಿಯುವುದಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಡಿಜಿಟಲ್ ವ್ಯೆಯಕ್ತಿಕ ದತ್ತಾಂಶ ರಕ್ಷಣೆ (ಡಿಪಿಡಿಪಿ) ಕಾಯಿದೆ ಇನ್ನೂ ಸಂಪೂರ್ಣವಾಗಿ ಜಾರಿಗೆ ಬರಬೇಕಿದೆ.
ಮಾಹಿತಿ ಹಕ್ಕು ಜಾರಿಗೆ ಬಂದ ನಂತರ ಭ್ರಷ್ಟಾಚಾರ ಪ್ರಕರಣಗಳನ್ನು ಹೊರ ತೆಗೆಯಲು ಪ್ರಯತ್ನಿ ಸಿದ ಮಾಹಿತಿ ಹಕ್ಕು ಕಾರ್ಯಕರ್ತರನ್ನು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಬೆದರಿಸುವ ಹಾಗೂ ಕೊಲೆ ಮಾಡುವ ಪ್ರವೃತ್ತಿಗಳೂ ಹೆಚ್ಚಾಗಿ ನಡೆಯುತ್ತಿವೆ. ಕಾಮನ್‌ವೆಲ್ತ್ ಮಾನವ ಹಕ್ಕುಗಳ ಉಪಕ್ರಮ (ಸಿಎಚ್‌ಆರ್‌ಐ) ವರದಿಗಳ ಪ್ರಕಾರ ಕಾಯಿದೆ ಜಾರಿಯಾದಾಗಿನಿಂದ ಪ್ರತಿವರ್ಷ ಮಾಹಿತಿ ಹಕ್ಕು ಕಾರ್ಯಕರ್ತರ ಹತ್ಯೆಗಳು ಅವ್ಯಾಹತವಾಗಿ ನಡೆಯುತ್ತಿವೆ.
ಏನೇ ಆಗಲಿ ಮಾಹಿತಿ ಹಕ್ಕು ಕಾಯಿದೆಯು, ಮಾಹಿತಿ ಹಕ್ಕು ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರರು ಹಾಗೂ ಮಾಧ್ಯಮಗಳಿಗೆ ಒಂದು ಶಕ್ತಿಯುತ ಸಾಧನವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.