ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rangaswamy Mookanahalli Column: ಚಿಂತನೆ ಬದಲಾಗದೆ, ತಲೆಮಾರಿನ ಹೆಸರು ಬದಲಾದರೆ ಸಾಕೇ ?

ನಾವು ಜನಿಸಿ ಒಂದೆರೆಡು ದಶಕದ ನಂತರ ಏನು ನೋಡಿದೆವು, ಯಾವುದನ್ನು ಕಷ್ಟಪಟ್ಟು ಬೆವರು ಸುರಿಸಿ ಪಡೆದುಕೊಂಡೆವು, ಅವೆಲ್ಲವೂ ಅವರಿಗೆ ಕಷ್ಟಪಡದೆ ಕಣ್ಣುಬಿಟ್ಟ ತಕ್ಷಣ ಲಭ್ಯವಿತ್ತು. ತಾವು ಪಡದ ಕಷ್ಟಕ್ಕೆ ಅವರಿಗೆ ಫಲಿತಾಂಶ ಸಿಕ್ಕಿತ್ತು. ನಾವು ಬಡತನದ ಕಾಲಘಟ್ಟದಲ್ಲಿ ಹುಟ್ಟಿದೆವು. ಅವರು ಸಿರಿತನದ ಸಮಯದಲ್ಲಿ ಹುಟ್ಟಿದವರು.

ಚಿಂತನೆ ಬದಲಾಗದೆ, ತಲೆಮಾರಿನ ಹೆಸರು ಬದಲಾದರೆ ಸಾಕೇ ?

-

ರಂಗಸ್ವಾಮಿ ಎಂ ರಂಗಸ್ವಾಮಿ ಎಂ Sep 16, 2025 7:25 AM

ವಿಶ್ವರಂಗ

ನೇಪಾಳದಲ್ಲಿ ಹೊಸ ತಲೆಮಾರಿನ ನಾಗರೀಕರು ಅಂದರೆ ಜೆನ್ ಜಿ, ಜನರೇಷನ್ ಜಿ ದಂಗೆ ಎದ್ದು ಆ ದೇಶದ ಆರ್ಥಿಕವಾಗಿ ಕನಿಷ್ಠ ಒಂದತ್ತು ವರ್ಷ ಹಿಂದಕ್ಕೋಗುವಂತೆ ಮಾಡಿರುವುದು ಇವತ್ತಿಗೆ ಹಳೆ ಸುದ್ದಿ. ಅವರು ಸರಕಾರದ ವಿರುದ್ಧ ಆ ಮಟ್ಟಕ್ಕೆ ತಿರುಗಿ ಬೀಳಲು ಕಾರಣಗಳು ಕೂಡ ಅನೇಕ. ತಮ್ಮ ಇಷ್ಟವಾದ ಆಟಿಕೆ ಸೋಶಿಯಲ್ ಮೀಡಿಯಾವನ್ನು ನಿರ್ಬಂಧಿಸಿದ್ದು ತುರ್ತು ಕಾರಣವಾಗಿ ಮಾರ್ಪಟ್ಟಿದೆ.

ಹೀಗಾಗಿ ಅದು ಹೆಚ್ಚು ಮುನ್ನೆಲೆಗೆ ಬಂದಿದೆ. ಈ ಜನರೇಷನ್ ಜಿ ಹೇಗೆ ಚಿಂತಿಸುತ್ತದೆ ಎನ್ನುವುದನ್ನು ನಾವು ಮೊದಲಿಗೆ ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಅವರು ನಮ್ಮ ತಲೆಮಾರಿನ ಜನರಂತೆ ಚಿಂತಿಸುವುದಿಲ್ಲ. 1996 ರಿಂದ 2010ರ ನಡುವಿನ ಸಮಯದಲ್ಲಿ ಜನಿಸಿದವರನ್ನು ಜೆನ್ ಜಿ ಎಂದು ಗುರುತಿಸಲಾಗುತ್ತದೆ. ಈ ತಲೆಮಾರಿನ ವ್ಯಕ್ತಿಗಳಿಗೆ ಕಣ್ಣು ಬಿಟ್ಟ ತಕ್ಷಣ ಎಲ್ಲವೂ ಲಭ್ಯವಿತ್ತು.

ನಾವು ಜನಿಸಿ ಒಂದೆರೆಡು ದಶಕದ ನಂತರ ಏನು ನೋಡಿದೆವು, ಯಾವುದನ್ನು ಕಷ್ಟಪಟ್ಟು ಬೆವರು ಸುರಿಸಿ ಪಡೆದುಕೊಂಡೆವು, ಅವೆಲ್ಲವೂ ಅವರಿಗೆ ಕಷ್ಟಪಡದೆ ಕಣ್ಣುಬಿಟ್ಟ ತಕ್ಷಣ ಲಭ್ಯವಿತ್ತು. ತಾವು ಪಡದ ಕಷ್ಟಕ್ಕೆ ಅವರಿಗೆ ಫಲಿತಾಂಶ ಸಿಕ್ಕಿತ್ತು. ನಾವು ಬಡತನದ ಕಾಲಘಟ್ಟದಲ್ಲಿ ಹುಟ್ಟಿದೆವು. ಅವರು ಸಿರಿತನದ ಸಮಯದಲ್ಲಿ ಹುಟ್ಟಿದವರು.

ಹರಿದ ಬಟ್ಟೆ ಹೊಲಿದು ಅಥವಾ ಅಣ್ಣನ/ಅಕ್ಕನ ಬಟ್ಟೆ ಮರು ಉಪಯೋಗಿಸಿ ಅವರಿಗೆ ಗೊತ್ತಿಲ್ಲ. ಸ್ನೇಹಿತರ ಪುಸ್ತಕ ಎರವಲು ಪಡೆದು ಓದುವುದು ದೂರದ ಮಾತು. ಮನೆ ಮುಂದೆ ಶಾಲೆ, ಕಾಲೇಜಿನ ವಾಹನ ಬಂದು ನಿಲ್ಲುವುದು ಇವರ ಪಾಲಿಗೆ ಅತಿ ಸಹಜ ಕ್ರಿಯೆ. ನೀರಿಗಾಗಿ ಪರದಾಡಲಿಲ್ಲ. ವಿದ್ಯುತ್ ಕಡಿತವಾಯ್ತು ಎಂದು ಕೊರಗಲಿಲ್ಲ. ನಮಗೆ ಐಷಾರಾಮ ಎನ್ನಿಸಿದ್ದು ಇವರಿಗೆ ಸಹಜ, ಸಾಮಾನ್ಯ ಎನ್ನುವಂತಾಗಿತ್ತು. ಪೋಷಕರು ಕೂಡ ನಾವು ಪಟ್ಟ ಕಷ್ಟ ನಮ್ಮ ಮಕ್ಕಳೇಕೆ ಪಡಬೇಕು ಎನ್ನುವ ಮನಸ್ಥಿತಿಯ ಮಾಲೀಕರಾದರು.

ಇದನ್ನೂ ಓದಿ: Rangaswamy Mookanahalli Column: ಈ ತಾಕತ್ತನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ !

ಕೇಳುವುದಿನ್ನೇನು? ಬದುಕು ಎಂದರೆ ಹೂವಿನ ಹಾದಿ ಎನ್ನುವಂತಹ ಮನಸ್ಥಿತಿ ಬಹಳಷ್ಟು ಜೆನ್‌ಜಿಗಳು ಬೆಳೆಸಿಕೊಂಡರು. ಸಾಲದಕ್ಕೆ ಇಷ್ಟೆ ಸೌಲಭ್ಯಕ್ಕೆ ನಾನು ಹಕ್ಕುದಾರ, ಸಹಜ ವಾರಸು ದಾರ ಎನ್ನುವ ಗುಣವೂ ಸೇರಿಕೊಂಡಿದೆ. ಇಲ್ಲ ಇದು ನಿನ್ನದಲ್ಲದ ಪರಿಶ್ರಮಕ್ಕೆ ಸಿಗುತ್ತಿರುವುದು, ಹೀಗಾಗಿ ಹೀಗೆ ಸಿಕ್ಕಿರುವ ಸೌಲಭ್ಯಕ್ಕೆ ಋಣಿಯಾಗಿರಬೇಕು ಎನ್ನುವುದನ್ನು ಕಲಿಸಲು ಮುಕ್ಕಾಲು ಪೋಷಕರು ಎಡವಿದ್ದಾರೆ.

ಇಷ್ಟೆ ಹೇಳಲು ಕಾರಣವಿದೆ. ನಾನು ಈ ಜೆನ್ ಜಿಗಳ ನಿಕಟ ಸಂಪರ್ಕದಲ್ಲಿದ್ದೇನೆ. ಎಲ್ಲರೂ ಹೀಗೆ ಎನ್ನುವಂತಿಲ್ಲ, ಕೆಲವರಿಗೆ ಬದುಕಿನ ಸಂಕಷ್ಟಗಳ ಅರಿವಿದೆ. ಉಳಿಕೆ-ಹೂಡಿಕೆ ಸಲಹೆ ಕೇಳಿಕೊಂಡು ನನ್ನ ಬಳಿ ಬರುವರಲ್ಲಿ ಜೆನ್ ಜಿ ಕೂಡ ಇದ್ದಾರೆ ಎನ್ನುವುದು ಒಂದಷ್ಟು ಸಮಾಧಾನ ತರುವ ವಿಚಾರ. ಇದನ್ನು ಹೊರತು ಪಡಿಸಿ ಕೂಡ ನಾನು ಶಾಲೆಗಳಿಗೆ, ಕಾಲೇಜುಗಳಿಗೆ ಹಣಕಾಸು ಸಾಕ್ಷರತೆ ಕುರಿತು ಜಾಗ್ರತೆ ಮೂಡಿಸಲು ಹೋಗುತ್ತಿರುತ್ತೇನೆ.

ಅಲ್ಲಿನ ಅವರ ಜೊತೆಗಿನ ಸಂವಹನ ಅವರ ಮನಸ್ಥಿತಿ ಅರಿಯಲು ಬಹಳ ಸಹಾಯ ಮಾಡಿದೆ. ಅಂತಹ ಒಂದೆರೆಡು ಘಟನೆ ನಿಮಗೂ ತಲುಪಿಸುವೆ. ಮೈಸೂರಿನ ಪ್ರಸಿದ್ಧ ವಾಣಿಜ್ಯ ಕಾಲೇಜಿನಲ್ಲಿ ಉಪನ್ಯಾಸ ಕೊಡಲು ಹೋಗಿz. ಪದವಿ ನಂತರ ಅವರ ಮುಂದಿರುವ ಅವಕಾಶಗಳು, ಹೂಡಿಕೆ ಬದುಕಿಗೇಕೆ ಮುಖ್ಯ ಎನ್ನುವುದನ್ನು ತಿಳಿಸುವುದು ಉದ್ದೇಶವಾಗಿತ್ತು. ಹೂಡಿಕೆಗೆ ಅಡಿಪಾಯ ಗಳಿಕೆ ಅಲ್ವಾ ? ಹೀಗಾಗಿ ಪದವಿಯ ನಂತರ ಎಷ್ಟು ವೇತನವನ್ನು ನೀವು ಬಯಸುತ್ತೀರಿ? ಎನ್ನುವ ಪ್ರಶ್ನೆಯನ್ನು ಮುನ್ನೂರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಮಕ್ಕಳನ್ನು ಕೇಳಿದೆ. ಉತ್ತರಗಳು ಹುಬ್ಬೇರಿಸು ವಂತಿದ್ದವು !

Screenshot_5 R 1

ಕೇವಲರು ವಾರ್ಷಿಕ ಹನ್ನೆರೆಡು ಲಕ್ಷ ಪ್ಯಾಕೇಜ್ ಬೇಕು ಎಂದರು. ಇನ್ನೂ ಕೆಲವರು ಹದಿನೆಂಟು ಲಕ್ಷ ಪ್ಯಾಕೇಜ್ ಬೇಕು ಎಂದರು. ಕೇವಲರಂತೂ 24 ಲಕ್ಷದ ಪ್ಯಾಕೇಜ್ ಇಲ್ಲದಿದ್ದರೆ ಬದುಕುವು ದಾದರೂ ಹೇಗೆ ? ಎಂದರು.

ಅವರ ಉತ್ತರ ಕೇಳಿ ನನಗೆ ಗೊತ್ತಿಲದೇ ’ಅದ್ಬುತ’ ಎನ್ನುವ ಮಾತು ಹೊರಬಿದ್ದಿತ್ತು! ನಂತರದ್ದು ಬೇರೆಯ ಕಥೆ. ಅವರನ್ನು ಕುರಿತು ಈಗ ಹೇಳಿ ಕಳೆದ ವರ್ಷ ನಿಮ್ಮ ಸೀನಿಯರ್ಸ್ ಗೆ ಕ್ಯಾಂಪಸ್‌ನಲ್ಲಿ ಅತಿ ಹೆಚ್ಚು ಎಂದರೆ ಎಷ್ಟರ ಪ್ಯಾಕೇಜ್ ಸಿಕ್ಕಿತು? ಎಂದು ಪ್ರಶ್ನಿಸಿದೆ. ಉತ್ತರ ಕೂಡ ಹುಬ್ಬೇರಿಸು ವಂತಿತ್ತು!

ಕೇವಲ ಒಬ್ಬ ವಿದ್ಯಾರ್ಥಿಗೆ ಮಾತ್ರ ನಾಲ್ಕು ಲಕ್ಷ ಇಪ್ಪತ್ತು ಸಾವಿರ ವಾರ್ಷಿಕ ಪ್ಯಾಕೇಜ್ ಸಿಕ್ಕಿದೆ. ಮಿಕ್ಕ ಬಹಳಷ್ಟು ಮಂದಿಗೆ 3 ಲಕ್ಷ ವಾರ್ಷಿಕ ಪ್ಯಾಕೆಜ್ ಸಿಕ್ಕಿದೆ. ರಿಯಾಲಿಟಿ 3 ಲಕ್ಷ ವಾರ್ಷಿಕ ಆದರೆ ಮಿನಿಮಮ್ ಎಕ್ಸ್ಪೆಕ್ಟೇಶನ್ 12 ಲಕ್ಷ! ಅಂದರೆ ವಾಸ್ತವದ ನಾಲ್ಕು ಪಟ್ಟು ಹೆಚ್ಚು ವೇತನವನ್ನು ಕ್ಕಳು ಬಯಸುತ್ತಿದ್ದಾರೆ.

ಅವರನ್ನು ಕುರಿತು ಹೇಳಿದೆ ನೀವು ಬಯಸುವ ಪ್ಯಾಕೇಜ್ ಪಡೆಯಲು ನಿಮ್ಮಲ್ಲಿ ಅಂತಹ ವಿಶೇಷತೆ ಯೇನಿದೆ? ಬಹುತೇಕರಿಂದ ಮೌನವನ್ನು ಮೀರಿದ ಉತ್ತರ ದೊರೆಯಲಿಲ್ಲ. ಉತ್ತರಿಸಿದ ಒಂದಷ್ಟು ಜನ ಹೇಳಿದ್ದು ವಾಸ್ತವತೆಯಿಂದ ಈ ಜನರೇಷನ್ ಮಕ್ಕಳು ಅದೆಷ್ಟು ದೂರವಿದ್ದಾರೆ ಎನ್ನುವುದನ್ನು ತಿಳಿಸಿಕೊಟ್ಟಿತು. ಇವತ್ತಿನ ಸಮಾಜದಲ್ಲಿ ಒಂದು ಮಟ್ಟಿಗೆ ಬದುಕಲು ಅಷ್ಟು ಹಣ ಬೇಕು, ಹೀಗಾಗಿ ಅವರು ಅಷ್ಟು ಹಣ ವೇತನದ ರೂಪದಲ್ಲಿ ನೀಡಬೇಕು ಎನ್ನುವ ಧಾಟಿಯಲ್ಲಿ ಆ ಉತ್ತರಗಳು ಇದ್ದವು. ಯಾರೂ, ಏನನ್ನೂ ಪುಕ್ಕಟೆ ನೀಡುವುದಿಲ್ಲ ಎನ್ನುವ ನನ್ನ ಮಾತುಗಳಿಗೆ ಅಲ್ಲಿ ಅಷ್ಟು ಬೆಲೆ ಸಿಕ್ಕಲಿಲ್ಲ ಎನ್ನುವುದು ಬೇರೆ ಮಾತು.

ನಮ್ಮ ಬದುಕಿನ ಏಳುಬೀಳುಗಳಲ್ಲಿ ಬುಮ್ರಾ ಬಂದು ಸಹಾಯ ಮಾಡುವುದಿಲ್ಲ ಎಂದು ಹೇಳಬೇ ಕೆನ್ನುವ ಮಾತುಗಳನ್ನು ನುಂಗಿಕೊಂಡೆ. ಏಕೆಂದರೆ ಸತ್ಯ ಬಹಳ ಕಹಿ. ಅದು ಯಾರಿಗೂ ಬೇಡವಾದ ವಸ್ತು. ಕ್ರಿಕೆಟ್ಟು, ಸಿನಿಮಾಕ್ಕೆ ಮೀಸಲಿಡುವ ಸಮಯದ 1/4 ಭಾಗ ಸ್ವಉದ್ದಾರಕ್ಕೆ, ಸ್ವ ಕಲ್ಯಾಣಕ್ಕೆ ವಿನಿಯೋಗ ಮಾಡಿದ್ದರೂ ಸಾಕಿತ್ತು. ಸ್ವಕಲ್ಯಾಣದ ಜೊತೆಗೆ ಲೋಕ ಕಲ್ಯಾಣವೂ ಆಗುತ್ತಿತ್ತು.

ಬದುಕಿನಲ್ಲಿ ಒಂದು ಹಂತ ತಲುಪಿದವರ ಕಥೆ ಬೇರೆ, ಇದು ಅವರನ್ನು ಕುರಿತಲ್ಲ . ಆದರೆ ಬದುಕು ಕಟ್ಟಿಕೊಳ್ಳಬೇಕಾದ ಮಕ್ಕಳು ಹೆಜ್ಜೆ ಹೆಜ್ಜೆಗೂ ತೊಡರಾಗುವ ಇಂತಹ ಬಲೆಗಳಲ್ಲಿ ಸಿಲುಕಿ ಏನೂ ಆಗದೆ ಸಾಯುತ್ತಾರಲ್ಲ, ಬದುಕು ಪೂರ್ತಿ ವೇಳೆಯಿಲ್ಲ, ಹಣವಿಲ್ಲ ಎಂದು ಗೊಣಗಾಡುತ್ತಾ ಕಳೆಯುತ್ತಾರಲ್ಲ ಎಂದು ಬೇಸರ ಉಂಟಾಗುತ್ತದೆ. ಹೇಳಿದರೆ ಕೇಳುವ ವ್ಯವಧಾನವಿಲ್ಲ. ವಾಸ್ತವತೆ ಯನ್ನು ಒಪ್ಪಿಕೊಳ್ಳುವ ಮನಸ್ಸು ಕೂಡ ಇಲ್ಲ.

ಬಹುತೇಕ ಮಕ್ಕಳ ಮನಸ್ಸಿನ ತುಂಬೆ ರೀಲ್ಸ್ ಗಳಲ್ಲಿ ಬರುವ ಕಸ ತುಂಬಿ ಕೊಂಡಿದೆ. ಗವಾಸ್ಕರ್ ನಿವೃತ್ತಿ ನಂತರವೂ ಇಂದಿಗೂ ಪ್ರಸ್ತುತ. ಕ್ರಿಕೆಟ್ ನೋಡುತ್ತಾ ಸಮಯ ವ್ಯಯಿಸಿದ ಕೋಟ್ಯಂತರ ಜನರು ಜೀವಮಾನದಲ್ಲಿ ಗಳಿಸಲಾಗದ ಹಣವನ್ನು ಆತ ನಿವೃತ್ತಿ ನಂತರ ಕಾಮೆಂಟ್ರಿ ಹೇಳಿ ಗಳಿಸುತ್ತಿದ್ದಾನೆ. ಇನ್ನು ಆಟಗಾರರ ಬ್ಯಾಂಕ್ ಬ್ಯಾಲೆನ್ಸ್ ಪಂದ್ಯ ಸೋಲಲಿ ಅಥವಾ ಗೆಲ್ಲಲಿ ಹೆಚ್ಚಾಗುತ್ತಲೇ ಇರುತ್ತದೆ.

ಇಲ್ಲಿ ನಿಮ್ಮ ಸ್ಥಾನ ಎಲ್ಲಿದೆ ಎನ್ನುವ ಯೋಚನೆ ಕೂಡ ಮಾಡಿ ಪ್ಲೀಸ್ ಎನ್ನುವ ಮಾತುಗಳನ್ನು ಹೇಳಿ ಬಂದಿದ್ದೆ. ಅಷ್ಟು ಮಕ್ಕಳಲ್ಲಿ 10 ರಿಂದ 15 ಪ್ರತಿಶತ ಮಕ್ಕಳಿಗೆ ಮಾತ್ರ ನನ್ನ ಮಾತುಗಳಿಗೆ ಕಿವಿಯಾಗಿದ್ದರು. ಉಳಿದವರು ಎಂದಿನಂತೆ ಮೊಬೈಲ್ ದೇವರ ಪೂಜೆಯಲ್ಲಿ ಮಗ್ನರಾಗಿದ್ದರು.

ಬೆಂಗಳೂರಿನ ಕಾಲೇಜಿನಲ್ಲಿ ಕೂಡ ಹಣಕಾಸು ನಿರ್ವಹಣೆ ಕುರಿತು ಮಾತನಾಡಲು ಹೋಗಿದ್ದೆ. ಅರ್ಲಿ ಸ್ಟಾರ್ಟ್ ಅಂದರೆ ಬೇಗ ಉಳಿಕೆ ಮತ್ತು ಹೂಡಿಕೆ ಮಾಡುವುದರಿಂದ ಹೇಗೆ ಬದುಕು ಬದಲಾಗುತ್ತದೆ. ಚಕ್ರಬಡ್ಡಿಯ ನಿಜವಾದ ಶಕ್ತಿಯನ್ನು ಉಪಯೋಗಿಸಿಕೊಳ್ಳುವ ತಾಕತ್ತು ಈಗ ನಿಮ್ಮ ಬಳಿಯಿದೆ ಅದನ್ನು ಸರಿಯಾಗಿ ಬಳಸಿಕೊಂಡರೆ ಬದುಕು ಬಂಗಾರವಾಗುತ್ತದೆ. ಈ ಸಮಯವನ್ನು ನೀವು ಸರಿಯಾಗಿ ಬಳಸಿಕೊಳ್ಳದೆ ಹೋದರೆ ಜೀವನ ಪೂರ್ತಿ ನಿಮ್ಮ ಹಣೆಬರಹ‌ ವನ್ನು ಹಳಿದುಕೊಳ್ಳುತ್ತ ಬದುಕಬೇಕಾಗುತ್ತದೆ.

ಈಗ ನೋಡಿ ನಿಮ್ಮ ಹಣೆಬರಹ ಬರೆದುಕೊಳ್ಳುವ ಶಕ್ತಿ ಭಗವಂತ ನೀಡಿದ್ದಾನೆ, ಎನ್ನುವ ಮಾತು ಗಳನ್ನು ಹೇಳಿದೆ. ಪೂರ್ಣ ಒಂದು ತಾಸಿನ ನಂತರ ಪ್ರಶ್ನೋತ್ತರದ ಸಮಯದಲ್ಲಿ ಹದಿನೆಂಟು ಅಥವಾ ಇಪ್ಪತ್ತು ವರ್ಷದ ಹೆಣ್ಣು ಮಗಳೊಬ್ಬಳು ’ ಸಾರ್ , ಬದುಕು ಅನಿಶ್ಚಿತ, ಯಾವಾಗ ಏನು ಬೇಕಾದರೂ ಆಗಬಹುದು. ಕಾಣದ ಆ ನಾಳೆಗಾಗಿ ನಾವೇಕೆ ಕಷ್ಟಪಟ್ಟು ಉಳಿಸಬೇಕು? ಹೂಡಿಕೆ ಮಾಡಬೇಕು? ಬೇರೆ ಯಾರನ್ನೂ ಸಾಹುಕಾರರನ್ನಾಗಿ ಮಾಡಬೇಕು/ ಎಂದು ಪ್ರಶ್ನಿಸಿದರು.

ಆ ಸಭೆಯಲ್ಲಿ ಎಂಟು ನೂರಕ್ಕೂ ಹೆಚ್ಚು ಮಕ್ಕಳಿದ್ದರು. ಇಡೀ ಸಭಾಂಗಣ ಚಪ್ಪಾಳೆಯಿಂದ ತುಂಬಿ ಹೋಗಿತ್ತು. ಚಪ್ಪಾಳೆ ನಿಂತ ಮೇಲೆ ಶಾಂತವಾಗಿ ಆ ಮಗವನ್ನು ಕುರಿತು’ ಪುಟ್ಟ ನಿನಗೆ ಥಿಯರಿ ಆಫ್ ಪ್ರಾಬಬಿಲಿಟಿ ಗೊತ್ತಲ್ವಾ, ಅದರ ಪ್ರಕಾರ ನೀನು ಹೇಳಿದಂತೆ ಏನು ಬೇಕಾದರೂ ಆಗಬಹುದು, ಆಗದೆಯೂ ಇರಬಹುದು. ‌

ಬೇರೆ ಯಾರಿಗೂ ಆಯ್ತು ಎಂದು ನಿನಗೂ ಹಾಗೆ ಆಗುತ್ತೆ ಎಂದು ಯೋಚಿಸುವುದು ಎಷ್ಟು ಸರಿ? ಅಲ್ಲದೆ ಕೆಟ್ಟದ್ದು ಆಗುತ್ತೆ ಎನ್ನುವ ಆ 50 ಪ್ರತಿಶತವನ್ನು ನಿನ್ನ ಮನಸ್ಸೇಕೆ ನಂಬುತ್ತಿದೆ? ಉಳಿದ 50 ಪ್ರತಿಶತ ಏನೂ ಆಗದೆ ಅದ್ಬುತ ಜೀವನ ನಡೆಸಬಹುದು ಎನ್ನುವ ಧನಾತ್ಮಕ ಸಂಭಾವ್ಯತೆಯನ್ನು ನಿನ್ನ ಮನಸ್ಸು ಏಕೆ ಒಪ್ಪಿಕೊಳ್ಳುತ್ತಿಲ್ಲ? ಎಂದು ಮರು ಪ್ರಶ್ನಿಸಿದೆ.

ಈ ಬಾರಿ ಕೂಡ ಸಭಾಂಗಣ ಚಪ್ಪಾಳೆಯಿಂದ ತುಂಬಿತ್ತು. ಇನ್ನೊಂದು ಮಗು’ ಸಾರ್ ನೀವು ಹೇಳಿದಂತೆ ಈ ವಯಸ್ಸಿನಲ್ಲಿ ಎಂಜಾಯ್ ಮಾಡುವುದು ಬಿಟ್ಟೆವು ಉಳಿಸದೆವು, ಹೂಡಿಕೆ ಮಾಡಿದೆವು ಎಂದುಕೊಳ್ಳೋಣ, ಅರವತ್ತರ ವಯಸ್ಸಿನಲ್ಲಿ ಬರುವ ಕೋಟ್ಯಂತರ ರೂಪಾಯಿ ಹಣದಿಂದ ಏನು ಪ್ರಯೋಜನ ಎಂಜಾಯ್ ಮಾಡುವ ಉತ್ಸಾಹ ಮತ್ತು ಶಕ್ತಿಯೇ ಇರುವುದಿಲ್ಲ’ ಎನ್ನುವ ಪ್ರಶ್ನೆ ಮಾಡಿದರು.

ಅರವತ್ತಕ್ಕೆ ಉತ್ಸಾಹ ಬತ್ತಿ ಹೋಗುತ್ತದೆಯೇ? ಅರವತ್ತಕ್ಕೆ ಶಕ್ತಿ ಇರುವುದಿಲ್ಲವೇ? ಈ ಋಣಾತ್ಮಕ ಅಂಶವನ್ನು ನಿಮ್ಮ ಮನಸ್ಸಿನಲ್ಲಿ ಬಿತ್ತಿದ್ದು ಯಾರು ? ನಮ್ಮ ಪ್ರಧಾನಿಯವರನ್ನು ನೋಡಿ, 74 ರಲ್ಲೂ ಅದೆಷ್ಟು ಉತ್ಸಾಹವಿದೆ ಎನ್ನುವ ನನ್ನ ಮಾತಿಗೆ ಚಪ್ಪಾಳೆ ಜೊತೆಗೆ ’ಹೋ’ ಎನ್ನುವ ಉದ್ಘಾರ ಕೂಡ ಜೊತೆಯಾಗಿತ್ತು.

ಜನರೇಷನ್ ಜಿ ಬಹುಬೇಗ ಒಂದು ನಿರ್ಧಾರಕ್ಕೆ ಬಂದು ಬಿಡುತ್ತದೆ. ಒಂದು ವಿಚಾರಕ್ಕೆ ಹತ್ತು ಆಯಾಮಗಳಿರುತ್ತವೆ ಎನ್ನುವುದರ ಅರಿವಿಲ್ಲದ ವಯಸ್ಸದು. ಗುಂಪಿನಲ್ಲಿ ನಿರ್ಧಾರವಾದ ವಿಚಾರ ಗಳಿಗೆ ಅವರು ಇನ್ನಿಲ್ಲದ ಮಹತ್ವ ಮತ್ತು ಮರ್ಯಾದೆಯನ್ನು ನೀಡುತ್ತಾರೆ. ತಮ್ಮದೇ ಆದ ವಿಚಾರಧಾರೆಯನ್ನು ಹೊಂದಿರುವವರ ಸಂಖ್ಯೆ ಬಹಳ ಕಡಿಮೆ.

ನಿಜ ಹೇಳಬೇಕೆಂದರೆ ನಾವು ಅದೇ ರೀತಿ ಇದ್ದವರಲ್ಲವೇ ? ಇವತ್ತಿನ ಸೋಶಿಯಲ್ ಮೀಡಿಯಾ ಯುಗದಲ್ಲಿ ಎಲ್ಲವೂ ಜಗಜ್ಜಾಹೀರಾತಾಗುತ್ತಿದೆ. ಅವರು ಜಗತ್ತಿಗೆ ತೆರೆದುಕೊಂಡಿದ್ದಾರೆ. ಹೀಗಾಗಿ ಅವರ ನೂನ್ಯತೆಗಳನ್ನು ನಾವು ವಿಮರ್ಶಿಸಿ ಬರೆಯಬಹುದು. ಎಲ್ಲಾ ಕಾಲದಲ್ಲೂ ಜನಸಂಖ್ಯೆಯ 10 ರಿಂದ 15 ಪ್ರತಿಶತ ಮಾತ್ರ ಬದುಕನ್ನು ಕುರಿತು, ಸಮಾಜವನ್ನು ಕುರಿತು, ಆಯಾಮಗಳ ಕುರಿತು ಚಿಂತಿಸುತ್ತಾರೆ.

ಉಳಿದ 85 ಪ್ರತಿಶತ ಜನ ಎಲ್ಲಾ ಕಾಲದಲ್ಲೂ ಹೀಗೆ ಸಮಯವನ್ನು ಕಳೆದು ಇಲ್ಲಿನ ಆಟಕ್ಕೆ ವಿದಾಯ ಹೇಳಿ ಹೋಗುವವರೆ, ಇದರಲ್ಲಿ ಸಂಶಯ ಬೇಡ. ಸಮಯಕ್ಕೆ ತಕ್ಕಂತೆ ನಾವು ಜಿ, ಆಲ್ಫಾ, ಬೀಟಾ ಇತ್ಯಾದಿ ಹೆಸರಿನಿಂದ ಒಂದು ತಲೆಮಾರನ್ನು ಹೆಸರಿಸಬಹುದು. ಹೆಸರು ಬದಲಾದ ಮಾತ್ರಕ್ಕೆ ಚಿಂತಿಸುವ ರೀತಿ ಬದಲಾಗಿಲ್ಲ.

ನಾವು ಜಗತ್ತಿನ ಮೊದಲ 15 ಪ್ರತಿಶತದಲ್ಲಿ ಬರುವಂತೆ ಮಕ್ಕಳನ್ನು ಬೆಳಸ ಬೇಕು. ಜಗತ್ತು ಪೂರ್ತಿ ಬದಲಿಸುವ ಶಕ್ತಿ ಜಗದೀಶನಿಗೂ ಇಲ್ಲ ಎನ್ನುವ ವಾಸ್ತವತೆಯನ್ನು ನಾವು ಕೂಡ ಅರ್ಥ ಮಾಡಿಕೊಳ್ಳಬೇಕು.