Roopa Gururaj Column: ಭಕ್ತಿಯಿಂದ ಸಮರ್ಪಿಸಿಕೊಂಡಾಗ ಮುಕ್ತಿ ನೀಡುವ ಭಗವಂತ
ಎಲ್ಲರೂ ಹುಡುಕುತ್ತಿರಲು ಗುಡಿಗೆ ವಿಠಲನ ದರ್ಶನಕ್ಕೆ ಬಂದ ವೇಶ್ಯೆಯ ಕೈಯಲ್ಲಿ ಕಂಕಣ ಕಂಡಿತು. ಅವ ಳನ್ನು ಕರೆಸಿ ಪ್ರಶ್ನೆ ಮಾಡಲು ‘ನನಗೆ ಎಲ್ಲಿಂದ ಬರಬೇಕು ಸ್ವಾಮಿ ಈ ರತ್ನಕಂಕಣ? ಪುರಂದರ ದಾಸರೇ ಕೊಟ್ಟದ್ದು’ ಎಂದು ಹೇಳಿದಳು. ಅದನ್ನು ಕೇಳಿ ದಾಸರನ್ನು ಕಳ್ಳತನದ ಆರೋಪದ ಮೇಲೆ ಕಂಬಕ್ಕೆ ಕಟ್ಟಿ ಛಡಿ ಏಟು ಶಿಕ್ಷೆ ಕೊಡಿಸಿದರು.
ಒಂದೊಳ್ಳೆ ಮಾತು
ರೂಪಾ ಗುರುರಾಜ್
ಒಮ್ಮೆ ಪುರಂದರದಾಸರು ಶೌಚ ಮುಗಿಸಿ ಬಂದು, ಕಾಲು ತೊಳೆಯಲು ನೀರು ಕೇಳಿದರೆ ಮಗನು ಬಂದು ವಿಠಲನ ಪೂಜೆಗೆ ಇಟ್ಟಿದ್ದ ಚಿನ್ನದ ತಂಬಿಗೆಯಲ್ಲಿದ್ದ ನೀರು ತಂದು ಕೊಡುವನು. ಅದನ್ನು ಕಂಡು ಕೋಪಗೊಂಡು, ‘ದೇವರ ತಂಬಿಗೆಯಲ್ಲಿ ನೀರು ತಂದೆಯಾ?‘ ಎಂದು ಬಾಲಕನ ತಲೆಗೆ ಜೋರಾಗಿ ಮಟ್ಟಿದರು. ಬಾಲಕ ಅಳುತ್ತಾ ಹೋದ.
ಇದಾಗಿ ಕೆಲವು ದಿನಗಳ ನಂತರ ಗುಡಿಯಲ್ಲಿ ವಿಠಲನ ರತ್ನಕಂಕಣ ಕಾಣೆಯಾಗಿತ್ತು. ಎಲ್ಲರೂ ಹುಡುಕುತ್ತಿರಲು ಗುಡಿಗೆ ವಿಠಲನ ದರ್ಶನಕ್ಕೆ ಬಂದ ವೇಶ್ಯೆಯ ಕೈಯಲ್ಲಿ ಕಂಕಣ ಕಂಡಿತು. ಅವ ಳನ್ನು ಕರೆಸಿ ಪ್ರಶ್ನೆ ಮಾಡಲು ‘ನನಗೆ ಎಲ್ಲಿಂದ ಬರಬೇಕು ಸ್ವಾಮಿ ಈ ರತ್ನಕಂಕಣ? ಪುರಂದರ ದಾಸರೇ ಕೊಟ್ಟದ್ದು’ ಎಂದು ಹೇಳಿದಳು. ಅದನ್ನು ಕೇಳಿ ದಾಸರನ್ನು ಕಳ್ಳತನದ ಆರೋಪದ ಮೇಲೆ ಕಂಬಕ್ಕೆ ಕಟ್ಟಿ ಛಡಿ ಏಟು ಶಿಕ್ಷೆ ಕೊಡಿಸಿದರು.
ಇದನ್ನೂ ಓದಿ: Roopa Gururaj Column: ಮೂರು ಉಳಿಸುವ ಸ್ವಾರ್ಥದಿಂದ ಆರು ನಷ್ಟ
ಆಗ ದಾಸರು, ‘ಯಾವ ಪಾಪಕ್ಕೆ ಈ ಶಿಕ್ಷೆ ವಿಠಲಾ?’ ಎಂದು ಕಣ್ಣು ಮುಚ್ಚಿ ವಿಠಲನ ಧ್ಯಾನಿಸುವರು. ವಿಠಲನು ನಿನ್ನ ಕಾಲಿಗೆ ನನ್ನ ಚಿನ್ನದ ಗಿಂಡಿಯಲ್ಲಿ ನೀರು ತಂದು ಕೊಟ್ಟರೆ ನನಗೇ ತಲೆಗೆ ಮಟ್ಟಿದೆ ಯಲ್ಲ ಆ ಏಟಿಗೆ ಈ ಸೇಡು. ನಾನೇ ವೇಶ್ಯೆಯ ಮನೆಗೆ ಹೋಗಿ ನಿನ್ನ ಸೋಗಿನಲ್ಲಿ ನನ್ನ ರತ್ನ ಕಂಕಣ ಕೊಟ್ಟು ಬಂದೆ ಎಂದು ತಿಳಿಸಿದ ಮೇಲೆ ದಾಸರು ಈ ರೀತಿ ಅವನ ಕೀರ್ತನೆ ರಚಿಸಿ ಹಾಡುವರು ..
ಮುಯ್ಯಕ್ಕೆ ಮುಯ್ಯಿ ತೀರಿತು, ಜಗದಯ್ಯ ವಿಜಯ್ಯ ಸಾಹಯ್ಯ ಪಂಢರಿರಾಯ ||
ಸಣ್ಣವನೆಂದು ನಾ ನೀರು ತಾರೆಂದರೆ
ಬೆಣ್ಣೆಕಳ್ಳ ಕೃಷ್ಣ ಮರವೆ ಮಾಡಿ
ಚಿನ್ನದ ಗಿಂಡಿಲಿ ನೀರು ತಂದಿಟ್ಟರೆ
ಕಣ್ಣು ಕಾಣದೆ ನಾ ಠೊಣೆದೆ ಪಂಢರಿರಾಯ ||
ಎನ್ನ ಪೆಸರು ಮಾಡಿ ಸೂಳೆಗೆ ಕಂಕಣವನ್ನು
ನೀನಿತ್ತೆ ನಿಜರೂಪದಿ
ಎನ್ನ ಪೀಡಿಸಿ ಪರಮ ಬಂಡನ ಮಾಡಿ
ನಿನ್ನ ಮುಯ್ಯಕ್ಕೆ ಮುಯ್ಯಿ ತೀರಿಸಿಕೊಂಡ್ಯಯ್ಯ ||
ಭಕ್ತವತ್ಸಲನೆಂಬ ಬಿರುದು ಬೇಕಾದರೆ
ಭಕ್ತರಾಧಿನನಾಗಿರಬೇಡವೆ?
ಯುಕ್ತಿಯಲಿ ನಿನ್ನಂಥ ದೇವರ ನಾ ಕಾಣೆ
ಮುಕ್ತೀಶ ಪುರಂದರವಿಠಲ ಪಂಢರಿರಾಯ ||
ಇದರಿಂದ ಪ್ರೀತನಾದ ವಿಠಲ ಅಲ್ಲೇ ಇದ್ದ ಭಕ್ತನೊಬ್ಬನ, ಮೈಮೇಲೆ ಬಂದು ದಾಸರ ತಪ್ಪೇನೂ
ಇಲ್ಲವೆಂದೂ, ಅವರ ಕಳಂಕ ತಾನೇ ಅಳಿಸಿನಂತೆ. ತನ್ನ ಭಕ್ತರ ಸಹಾಯಕ್ಕೆ ತಾನು ಇದ್ದೇನೆ ಅವರ ಹಿಂದೆ ಮುಂದೆ ಬೆಂಬಿಡದೆ ಓಡಾಡುತ್ತಾ ಕಾಪಾಡುತ್ತೇನೆ ಎಂದು ವಿಠಲ ನೀಡಿದ ಭರವಸೆ ಇದು. ಕಾಯುವವನೂ ನಾನೇ, ಕಳೆವವನೂ ನಾನೇ ಎಂದು ಬ್ರಹ್ಮಾಂಡ ದೊಡೆಯ ಮುಕ್ತೀಶ ಹೀಗೆ ತೋರಿದ ಲೀಲೆಯಿದು.
ಈ ಕಥೆ ಹಲವು ರೀತಿಯಲ್ಲಿ ಪ್ರತೀತಿಯಲ್ಲಿ ಇದೆ, ಆದರೆ ತಾತ್ಪರ್ಯ ಇಷ್ಟೇ ತಪ್ಪು ಮಾಡಿದಾಗ ಭಗವಂತ ತಾನು ನೀಡುವ ಶಿಕ್ಷೆಗಳನ್ನು, ಪ್ರಾಮಾಣಿಕ ಪಶ್ಚಾತಾಪಕ್ಕೆ ತಾನೇ ಕರಗಿ ಪರಿಹರಿಸುತ್ತಾನೆ. ಅವನಲ್ಲಿ ಅಪರಿಮಿತವಾದ ನಂಬಿಕೆ, ಭಕ್ತಿ ಭಾವ ಸದಾ ಇರಬೇಕಷ್ಟೇ.
ಇಂದಿನ ದಿನಗಳಲ್ಲಿ ಒಂದು ಚಿಕ್ಕ ಕಷ್ಟ ಎದುರಾದರೂ ಕೂಡ ನಾವು ಆತ್ಮವಿಶ್ವಾಸವನ್ನ, ಆತ್ಮ ಸ್ಥೈರ್ಯವನ್ನು ಕಳೆದುಕೊಂಡು ಬಿಡುತ್ತೇವೆ. ಇನ್ನು ಮುಂದೆ ದಾರಿಯೇ ಇಲ್ಲ ಎಂದು ಖಿನ್ನತೆಗೆ ಒಳಗಾಗುತ್ತೇವೆ. ವೈದ್ಯರು ಆಪ್ತ ಸಮಾಲೋಚಕರು ಯಾರು ಎಷ್ಟೇ ನಮಗೆ ಸಹಾಯ ಮಾಡಿದರೂ, ನಮ್ಮೊಳಗೆ ಆತ್ಮ ವಿಶ್ವಾಸ, ಆತ್ಮಸ್ಥೈರ್ಯ ಮೂಡದೆ ಇದ್ದರೆ ನಾವು ಆ ಮನಸ್ಥಿತಿಯಿಂದ ಹೊರಬರಲು ಸಾಧ್ಯವಿಲ್ಲ.
ಇದಕ್ಕೆ ಅಪರಿಮಿತವಾದ ಭಕ್ತಿ ಮತ್ತು ಭಗವಂತನಲ್ಲಿ ನಂಬಿಕೆ ಇರಬೇಕು. ನಮ್ಮನ್ನು ನಾವು ಅವನಿಗೆ ಸಮರ್ಪಿಸಿಕೊಂಡು ಎಲ್ಲವನ್ನು ನೀನು ನಿಭಾಯಿಸು ಎಂದು ಎಲ್ಲ ಭಾರವನ್ನು ಅವನಿಗೆ ಹಾಕಿ ನಮ್ಮ ಬದುಕನ್ನು ಎದುರಿಸಲು ಪ್ರಾರಂಭಿಸಿದಾಗ ಭಗವಂತ ಯಾವುದಾದರೂ ರೂಪದಲ್ಲಿ ಬಂದು ನಮಗೆ ಸಹಾಯ ಮಾಡಿಯೇ ಮಾಡುತ್ತಾನೆ. ನಂಬಿ ಕೆಟ್ಟವರಿಲ್ಲವೋ ಶ್ರೀಹರಿ, ನಿನ್ನ ನಂಬಿ ಕೆಟ್ಟವರಿಲ್ಲವೋ..