Ranjith H Ashwath : ಈ ಸಮೀಕ್ಷೆಯಲ್ಲಿ ಸಿಗುವುದೇ ಜಾತಿಗಳ ನಿಖರ ಲೆಕ್ಕ ?
ದೇಶದ ರಾಜಕೀಯದಲ್ಲಿ ಒಂದೊಂದು ವಿಷಯ ಒಂದೊಂದು ರೀತಿಯ ಪ್ರಭಾವ ಬೀರುತ್ತದೆ. ಉತ್ತರ ಭಾರತ ಹಾಗೂ ರಾಷ್ಟ್ರೀಯ ಮಟ್ಟದ ರಾಜಕಾರಣದಲ್ಲಿ ಧರ್ಮಾಧಾರಿತ ರಾಜಕಾರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕರೆ ಕರ್ನಾಟಕದ ಮಟ್ಟಿಗೆ ಧರ್ಮಕ್ಕಿಂತ ಮಿಗಿಲಾದ ಜಾತಿ ಸಮೀಕರಣದಲ್ಲಿಯೇ ರಾಜಕೀಯದ ಆಗು-ಹೋಗುಗಳಾಗುತ್ತದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

-

ಅಶ್ವತ್ಥಕಟ್ಟೆ
ranjith.hoskere@gmail.com
ಭಾರತದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಕಾರ್ಯಾಂಗ-ನ್ಯಾಯಾಂಗ ಹಾಗೂ ಶಾಸಕಾಂಗ ಎನ್ನುವುದು ಸಂವಿಧಾನದಲ್ಲಿರುವ ಅಧಿಕೃತ ಘೋಷಣೆ. ಆದರೆ ಭಾರತದ ಚುನಾವಣಾ ರಾಜಕೀಯ ವ್ಯವಸ್ಥೆಯಲ್ಲಿ ‘ಜಾತಿ’ ಎನ್ನುವುದು ಮೇಲಿನ ಮೂರರಷ್ಟೇ ಪ್ರಮುಖ ಪಾತ್ರ ವಹಿಸುತ್ತವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಅಂಶ. ಜಾತಿ-ಧರ್ಮದ ಆಧಾರ ಮೀರಿದ ರಾಜಕೀಯ ವ್ಯವಸ್ಥೆಯನ್ನು ಸದ್ಯದ ಪರಿಸ್ಥಿತಿಯಲ್ಲಿ ದೇಶದಲ್ಲಿ ‘ಊಹಿಸಿಕೊಳ್ಳುವುದು’ ಕಷ್ಟ ಎನ್ನುವುದು ರಾಜಕೀಯಕ್ಕೆ ಅಂಬೆಗಾಲಿಡುತ್ತಿರುವ ಶಿಶುಗಳಿಗೂ ಗೊತ್ತಿರುವ ವಿಷಯ.
ದೇಶದ ರಾಜಕೀಯದಲ್ಲಿ ಒಂದೊಂದು ವಿಷಯ ಒಂದೊಂದು ರೀತಿಯ ಪ್ರಭಾವ ಬೀರುತ್ತದೆ. ಉತ್ತರ ಭಾರತ ಹಾಗೂ ರಾಷ್ಟ್ರೀಯ ಮಟ್ಟದ ರಾಜಕಾರಣದಲ್ಲಿ ಧರ್ಮಾಧಾರಿತ ರಾಜಕಾರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕರೆ ಕರ್ನಾಟಕದ ಮಟ್ಟಿಗೆ ಧರ್ಮಕ್ಕಿಂತ ಮಿಗಿಲಾದ ಜಾತಿ ಸಮೀಕರಣ ದಲ್ಲಿಯೇ ರಾಜಕೀಯದ ಆಗು-ಹೋಗುಗಳಾಗುತ್ತದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.
ಕಳೆದ ನಾಲ್ಕೈದು ದಶಕಗಳಿಂದ ರಾಜ್ಯ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಕ್ಕಲಿಗ-ಲಿಂಗಾಯತ ಪ್ರಾಬಲ್ಯದಲ್ಲಿಯೇ ರಾಜಕೀಯ ನಡೆಯುತ್ತಿದೆ. ಆದರೆ ಈ ಎರಡು ಸಮುದಾಯವನ್ನು ಮೀರಿ ಜಾತಿ ಸಮೀಕರಣವಿದೆ ಎನ್ನುವುದು ಅಹಿಂದ ಸಮುದಾಯದ ವಾದವಾಗಿದೆ.
ಈ ಗೊಂದಲಗಳ ನಿವಾರಣೆಗೆ 2013ರಲ್ಲಿ ಕಾಂಗ್ರೆಸ್ ಸರಕಾರ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಹೆಸರಲ್ಲಿ ‘ಜಾತಿ ಗಣತಿ’ಯನ್ನು ಮಾಡಿಸಿತ್ತು. ಆದರೆ ದಶಕದ ಬಳಿಕ ಅದನ್ನು ‘ಒಪ್ಪಿ’ಕೊಂಡಿದ್ದ ರಿಂದ ಮರು ಸಮೀಕ್ಷೆಯ ಕೂಗು ಕೇಳಿಬಂದಿತ್ತು. ಇದರ ಬೆನ್ನಲ್ಲೇ, ಇದೀಗ ಮುಂದಿನ ವಾರದಿಂದ ರಾಜ್ಯ ಸರಕಾರ ಮರು ಸಮೀಕ್ಷೆ ನಡೆಸಲು ಮುಂದಾಗಿದೆ. ಈ ಹಿಂದೆ ಕಾಂತರಾಜು ಅವರ ನೇತೃತ್ವದ ಆಯೋಗ ವರದಿಯೇ ಅವೈಜ್ಞಾನಿಕವೆನ್ನುವ ಕೂಗನ್ನು ಹಲವು ಸಮುದಾಯಗಳು ಎಬ್ಬಿಸಿವೆ.
ಇದನ್ನೂ ಓದಿ: Ranjith H Ashwath Column: ಇವಿಎಂ ಬದಿಗಿಟ್ಟು ಸಾಧಿಸಲು ಹೊರಟಿದ್ದೇನನ್ನು ?
ಆದ್ದರಿಂದ ಇದೀಗ ಮರು ಸಮೀಕ್ಷೆಯನ್ನು ‘ವೈಜ್ಞಾನಿಕ’ ರೀತಿಯಲ್ಲಿ ಮಾಡುವುದಾಗಿ ಸರಕಾರ ಘೋಷಿಸಿದೆ. ಆದರೆ ಇದಕ್ಕೆ ಮೀಸಲಿಟ್ಟಿರುವ ಅನುದಾನ ಬರೋಬ್ಬರಿ 425 ಕೋಟಿ ರು. ಮರು ಸಮೀಕ್ಷೆಗೆ ಅಕ್ಷೇಪವ್ಯಕ್ತಪಡಿಸುತ್ತಿರುವ ಅನೇಕರು, ಇದೀಗ ಈ ಅನುದಾನ ಕೇಳಿ ತೆರಿಗೆ ಹಣ ವ್ಯರ್ಥ ಎನ್ನುವ ವಾದವನ್ನು ಮುಂದುವರೆಸಿದ್ದಾರೆ.
ಹಾಗೇ ನೋಡಿದರೆ, ಸೆ.22ರಿಂದ ಆರಂಭಗೊಳ್ಳಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಈ ಬಾರಿ ಎಷ್ಟು ಖರ್ಚಾಗಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಈ ಬಗ್ಗೆ ಮಾಹಿತಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದಕ್ಕಾಗಿ ಬರೋಬ್ಬರಿ 425 ಕೋಟಿ ರು. ಮೀಸಲಿಡಲಾಗಿದೆ. ಇದರಲ್ಲಿ 325 ಕೋಟಿ ರು. ಸಮೀಕ್ಷೆಯಲ್ಲಿ ಭಾಗವಹಿಸುವ ಶಿಕ್ಷಕರಿಗೆ ವಿಶೇಷ ಭತ್ಯೆ’ಯ ರೂಪದಲ್ಲಿಯೇ ನೀಡಲಾಗುತ್ತದೆ. ಆದರೆ ಹೆಚ್ಚುವರಿ ಹಣ ಸಿಕ್ಕರೂ ರಜೆ ಸಿಗುವುದಿಲ್ಲ ಎನ್ನುವುದು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.
ಕರ್ನಾಟಕದ ಪಾಲಿಗೆ ಮೊದಲೇ ಹೇಳಿದಂತೆ ಇದು ಮೊದಲ ಜಾತಿ ಗಣತಿ ಏನಲ್ಲ. ಈ ಹಿಂದೆ ದೇಶದಲ್ಲಿಯೇ ಮೊದಲ ಬಾರಿಗೆ ಜಾತಿ ಗಣತಿಯನ್ನು ನಡೆಸಬೇಕು ಎನ್ನುವ ಆಲೋಚನೆಯನ್ನು ಪ್ರಕಟಿಸಿದ್ದೇ ಕರ್ನಾಟಕ ಸರಕಾರ. 2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯನ್ನು ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸಲು ತೀರ್ಮಾನಿಸಿತ್ತು.
ಆಯೋಗದ ಅಂದಿನ ಅಧ್ಯಕ್ಷರಾಗಿದ್ದ ಕಾಂತರಾಜು ಅವರ ನೇತೃತ್ವದಲ್ಲಿ ನಡೆದ ಸಮೀಕ್ಷೆಯ ವರದಿಯನ್ನು, ಚುನಾವಣೆಗೆ ಹಿಂದಿನ ವರ್ಷ ಸರಕಾರಕ್ಕೆ ಸಲ್ಲಿಸಲಾಯಿತು. ಇದರಲ್ಲಿ ‘ಅಹಿಂದ’ ಮತಬ್ಯಾಂಕ್ ಸದೃಢವಾಗಿರುವ ಅಂಶಗಳಿರುವ ಸೂಕ್ಷ್ಮ ಅರಿತು ಮೇಲ್ಜಾತಿಯ ಬಹುತೇಕ ನಾಯಕರು, ಯಾವುದೇ ಕಾರಣಕ್ಕೂ ಈ ವರದಿ ಮಂಡನೆಯಾಗಿ, ಬಹಿರಂಗವಾಗಬಾರದು ಎನ್ನುವ ಒತ್ತಡವನ್ನು ಮುಖ್ಯಮಂತ್ರಿಗಳ ಮೇಲೆ ತಂದಿದ್ದರಿಂದ ಸಮೀಕ್ಷೆ ‘ಸದ್ದಿಲ್ಲದೇ’ ಮಲಗಿತ್ತು.
ಬಳಿಕ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದರೂ, ಕುಮಾರಸ್ವಾಮಿ ಅವರು ಈ ವರದಿಯನ್ನು ಸ್ವೀಕರಿಸುವ ಸಹವಾಸಕ್ಕೆ ಹೋಗಲಿಲ್ಲ. ಏಕೆಂದರೆ, ಈ ವರದಿ ಒಂದು ವೇಳೆ ಬಹಿರಂಗವಾದರೆ ‘ಒಕ್ಕಲಿಗರ’ ಮತಬ್ಯಾಂಕ್‌ಗೆ ಬಹುದೊಡ್ಡ ಹೊಡೆತ ಬೀಳುತ್ತದೆ ಎನ್ನುವ ಖಚಿತತೆ ಹಾಗೂ ಅನವಶ್ಯಕವಾಗಿ ಜೆಡಿಎಸ್ ಮತ ಬ್ಯಾಂಕ್ ಅನ್ನು ಎದುರು ಹಾಕಿಕೊಳ್ಳಬೇಕುವ ‘ರಿಸ್ಕ್’ ಅನ್ನು ಪರಿಗಣಿಸಿ ವರದಿಯ ಸಹವಾಸಕ್ಕೆ ಹೋಗಲಿಲ್ಲ.
ಬಳಿಕ ಸಮ್ಮಿಶ್ರ ಸರಕಾರ ಹೋಗಿ, ಬಿಜೆಪಿ ಸರಕಾರ ಬಂದಾಗಲೂ ಯಡಿಯೂರಪ್ಪ ಅವರಾಗಲಿ, ಬಸವರಾಜ ಬೊಮ್ಮಾಯಿ ಅವರಾಗಲಿ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ವರ್ತಿಸಿದ್ದರು. ಆದರೆ ‘ಅಹಿಂದ’ ಮತಗಳನ್ನು ಸೆಳೆಯುವ ಉದ್ದೇಶದಿಂದ ಕಾಂಗ್ರೆಸ್ ಚುನಾವಣಾ ಸಮಯದಲ್ಲಿ ಜಾತಿ ಗಣತಿಯನ್ನು ಜಾರಿಗೊಳಿಸುವ ‘ಕಾರ್ಡ್’ ಅನ್ನು ಪ್ಲೇ ಮಾಡಿತ್ತು.
ಇದು ತಕ್ಕಮಟ್ಟಿಗೆ ಯಶಸ್ಸು ಆಗಿತ್ತು. ಆದರೆ ಅಧಿಕಾರಕ್ಕೆ ಬಂದ ಬಳಿಕ, ಸಹಜವಾಗಿಯೇ ಲಿಂಗಾ ಯತ-ಒಕ್ಕಲಿಗ ಶಾಸಕ, ಸಚಿವರಿಂದ ಜಾತಿ ಗಣತಿಗೆ ಪ್ರಬಲ ವಿರೋಧ ವ್ಯಕ್ತವಾಗಿತ್ತು. ಅದರಲ್ಲಿಯೂ 10 ವರ್ಷ ಹಿಂದೆ ಸಿದ್ಧವಾಗಿದ್ದ ವರದಿಯನ್ನು ಈಗ ಒಪ್ಪಿಕೊಳ್ಳುವುದು ಸರಿಯಲ್ಲ ಎನ್ನುವ ಮಾತುಗಳೂ ಕೇಳಿಬಂದಿತ್ತು.
ಆದ್ದರಿಂದಲೇ ಜಯ ಪ್ರಕಾಶ್ ಹೆಗ್ಡೆ ಅವರಿಗೆ ಕಾಂತರಾಜ್ ಆಯೋಗದ ವರದಿಯನ್ನು ‘ಅಪ್ಡೇಟ್’ ಮಾಡುವಂತೆ ಸರಕಾರ ಹೇಳಿತ್ತು. ಆದರೆ ಅಪ್ಡೇಟ್ ಆಗಿರುವ ವರದಿ ಅಥವಾ ಹಿಂದಿನ ವರದಿಯಲ್ಲಿ ಮೇಲ್ಜಾತಿಗಳ ಸಂಖ್ಯೆಯಲ್ಲಿ ತೀವ್ರ ‘ವ್ಯತ್ಯಾಸ’ವಿರುವುದು ಹಾಗೂ ಮುಸ್ಲಿಮರಲ್ಲಿನ ಒಳ ಪಂಗಡ ವನ್ನು ಪ್ರತ್ಯೇಕವಾಗಿ ನಮೂದಿಸದೇ ‘ದೊಡ್ಡ ಸಂಖ್ಯೆ’ ನೀಡಿದ್ದ ಹಲವರ ಅಸಮಾಧಾನಕ್ಕೆ ಕಾರಣ ವಾಗಿ, ಹೈಕಮಾಂಡ್‌ನಿಂದ ‘ಮರು’ ಸಮೀಕ್ಷೆಯ ಸೂಚನೆ ಬರುವಂತೆ ನೋಡಿಕೊಂಡರು ಎನ್ನುವುದು ಸ್ಪಷ್ಟ.
ಇದರ ಬೆನ್ನಲ್ಲೇ ಮರು ಸಮೀಕ್ಷೆಗೆ ಸರಕಾರ ಆದೇಶ ಹೊರಡಿಸಿ, ದಸರಾ ರಜೆಯ ಸಮಯದಲ್ಲಿ 1.75 ಲಕ್ಷ ಶಿಕ್ಷಕರು, ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರಿಂದ ಸಮೀಕ್ಷಾ ಕಾರ್ಯ ನಡೆಸಲು ಸಿದ್ಧತೆ ನಡೆಸಿಕೊಂಡಿದ್ದಾರೆ. ಸಮೀಕ್ಷೆಗೆ ಶಿಕ್ಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆ ನಡೆಸುವುದರಿಂದ ತಮಗೆ 20-22 ಸಾವಿರ ರುಪಾಯಿ ಹಣ ಬರುವುದು ಬೇರೆ ಮಾತು.
ಕಳೆದ ಬೇಸಿಗೆ ರಜೆಯಲ್ಲಿ ಒಳ ಮೀಸಲಾತಿ ಸಮೀಕ್ಷೆಗೆ ಬಳಸಿಕೊಂಡು ರಜೆಗೆ ಕತ್ತರಿ ಹಾಕಿದ್ದಾರೆ. ಇದೀಗ ಜಾತಿ ಗಣತಿಯ ಕಾರಣಕ್ಕೆ ರಜೆಗೆ ಕತ್ತರಿ ಹಾಕಲಾಗಿದೆ. ಬರುವ ದುಡ್ಡಿಗಿಂತ ಹೆಚ್ಚಾಗಿ, ರಜೆಯಲ್ಲಿಯೂ ಓಡಾಡಬೇಕು ಎನ್ನುವುದು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ಸಮೀಕ್ಷಗೆ 425 ಕೋಟಿ ರು. ಖರ್ಚು ಮಾಡುವುದಾಗಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಈ ಪ್ರಮಾಣದಲ್ಲಿ ಹಣ ವ್ಯಯಿಸಿ, ಜಾತಿ ಗಣತಿ ನಡೆಸಿದರೂ ‘ಅಂತ್ಯ’ ಸಿಗುವುದೇ ಎನ್ನುವುದು ಅನೇಕರಲ್ಲಿರುವ ಪ್ರಶ್ನೆಯಾಗಿದೆ. ಏಕೆಂದರೆ, ಈ ಹಿಂದೆ ಕಾಂತರಾಜ್ ಆಯೋಗ 160 ಕೋಟಿ ರು. ವೆಚ್ಚದಲ್ಲಿ ನಡೆಸಿದ್ದ ಸಮೀಕ್ಷೆಯನ್ನು ಸರಕಾರ ತಿರುಗಿಯೂ ನೋಡಲಿಲ್ಲ. ಇದೀಗ ಮತ್ತೆ ಇದೇ ಸಾಹಸಕ್ಕೆ ಸರಕಾರಕ್ಕೆ ಮುಂದಾಗಿದೆ. ಈ ಸಮೀಕ್ಷೆಯೂ ಮುಗಿಯುವುದಕ್ಕೆ ಕನಿಷ್ಠ ಆರು ತಿಂಗಳ ಹಿಡಿಯುತ್ತದೆ. ಅಲ್ಲಿಗೆ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರ್ಣಗೊಂಡಿರುತ್ತದೆ.
ಬಳಿಕ ಸ್ಥಳೀಯ ಸಂಸ್ಥೆ ಚುನಾವಣೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ, ಸಂಪುಟ ಪುನಾರಚನೆಯ ನೆಪದಲ್ಲಿ ಒಂದು ವರ್ಷ ಮುಂದಕ್ಕೆ ಹೋಗುವುದು ನಿಶ್ಚಿತ. ಆ ವೇಳೆಗೆ ಸರಕಾರ ಅಽಕಾರಕ್ಕೆ ಬಂದು ಮೂರುವರೆಯಿಂದ ನಾಲ್ಕು ವರ್ಷ ಪೂರ್ಣಗೊಳಿಸಿರುತ್ತದೆ. ಹಾಗಿರುವಾಗ,
ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಇಂತಹ ಸೂಕ್ಷ್ಮ ವಿಷಯವನ್ನು ಎತ್ತಿಕೊಳ್ಳುವುದಕ್ಕೆ ಯಾವುದೇ ಪಕ್ಷ ಯೋಚಿಸುವುದಿಲ್ಲ. ಒಂದು ವೇಳೆ ರಾಜ್ಯ ಸರಕಾರ ಹೇಳಿರುವಂತೆ ಆರು ತಿಂಗಳಲ್ಲಿಯೇ ಇಡೀ ಸಮೀಕ್ಷೆಯನ್ನು ಆಯೋಗ ನೀಡಿದರೂ, ಅದನ್ನು ಸಂಪುಟಕ್ಕೆ ತಂದು ‘ರಾಜಕೀಯ’ ಒತ್ತಡಗಳನ್ನು ಮೀರಿ ಅನುಮೋದನೆ ಪಡೆದುಕೊಳ್ಳುವುದು ಅಷ್ಟು ಸುಲಭವಾಗಿಲ್ಲ.
ಏಕೆಂದರೆ, ಈಗಾಗಲೇ ಕಾಂತರಾಜು ಆಯೋಗದ ವರದಿ, ಬಳಿಕ ಜಯಪ್ರಕಾಶ್ ಹೆಗ್ಡೆ ಆಯೋಗ ನೀಡಿದ ಪರಿಷ್ಕೃತ ವರದಿಯಲ್ಲಿ, ಮುಸ್ಲಿಂ, ಪರಿಶಿಷ್ಟ ಜಾತಿ, ಪಂಗಡಗಳು ಟಾಪ್ ಸ್ಥಾನದಲ್ಲಿವೆ. ಆದರೆ ಲಿಂಗಾಯತ ಹಾಗೂ ಒಕ್ಕಲಿಗಗಳು ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸಮುದಾಯ ಎನ್ನುವ ವಾದವನ್ನು ಮಂಡಿಸುತ್ತಿವೆ. ಕೇವಲ ಈ ಎರಡು ಮಾತ್ರವಲ್ಲದೇ, ಇನ್ನು ಹಲವು ಸಮುದಾಯಗಳು ತಮಗೆ ‘ಅನ್ಯಾಯ’ವಾಗಿದೆ ಎನ್ನುವ ವಾದವನ್ನು ಮಂಡಿಸುತ್ತಿವೆ.
ಒಂದು ವೇಳೆ ಈ ಸಮೀಕ್ಷಾ ಕಾರ್ಯದಲ್ಲಿ ಈ ಎಲ್ಲ ಸಮುದಾಯಗಳು ‘ಒಪ್ಪುವ’ ಅಂಕಿ-ಅಂಶ ಬಂದರೆ ಸಹಜವಾಗಿಯೇ ಮುಸ್ಲಿಂ ಹಾಗೂ ದಲಿತರು ಧ್ವನಿ ಎತ್ತುತ್ತಾರೆ. ಇಲ್ಲವೇ, ಕಾಂತರಾಜು ಅವರು ಸಿದ್ಧಪಡಿಸಿದ್ದ ವರದಿಯ ಆಚೀಚೆಯಲ್ಲಿಯೇ ಅಂಕಿ-ಅಂಶ ಬಂದರೆ ಈಗಾಗಲೇ ವಿರೋಧಿಸುತ್ತಿರುವ ಸಮುದಾಯಗಳು ತಮ್ಮ ವಿರೋಧವನ್ನು ಮುಂದುವರೆಯಸಲಿವೆ.
ಹೀಗಿರುವಾಗ, ಮಧುಸೂಧನ್ ಅವರ ಸಮಿತಿ ಎಷ್ಟೇ ವೈಜ್ಞಾನಿಕವಾಗಿ ಸಮೀಕ್ಷೆಯನ್ನು ನಡೆಸಿದರೂ, ಎಲ್ಲ ಸಮುದಾಯಗಳನ್ನು ‘ಸಂತೈಸಲು’ ಸಾಧ್ಯವಿಲ್ಲ ಎನ್ನುವುದು ಸ್ಪಷ್ಟ. ಈ ಪ್ರಮಾಣದ ಗೊಂದಲಗಳಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ನಡುವೆ ಈಗಾಗಲೇ ಕೇಂದ್ರ ಸರಕಾರ ನಡೆಸಲಿರುವ ಜನಗಣತಿಯ ಸಮಯದಲ್ಲಿಯೇ ಜಾತಿ ಗಣತಿಯನ್ನು ಮಾಡುವುದಾಗಿ ಘೋಷಿಸಿದೆ. ಹೀಗಿರುವಾಗ ಇಷ್ಟೆಲ್ಲ ಗೊಂದಲದ ನಡುವೆ ಸಮೀಕ್ಷೆ ಪೂರ್ಣಗೊಂಡರೂ, ರಾಜ್ಯ ಸರಕಾರ ನಡೆಸುವ ಈ ಸಮೀಕ್ಷೆಯ ಭವಿಷ್ಯ ಏನು ಎನ್ನುವ ಪ್ರಶ್ನೆ ಬಹುತೇಕರಲ್ಲಿದೆ.
ಕೇಂದ್ರ ಸರಕಾರ ನಡೆಸುವ ಜಾತಿ ಗಣತಿಗೂ, ರಾಜ್ಯ ಸರಕಾರ ನಡೆಸುವ ಜಾತಿಗಣತಿಗೂ ‘ಭಿನ್ನ’ ಅಂಕಿ-ಅಂಶ ಬಂದರೆ ಯಾವುದನ್ನು ಅಂತಿಮವೆನ್ನಬೇಕು? ಎನ್ನುವ ಪ್ರಶ್ನೆಗೆ ಬಹುತೇಕರಲ್ಲಿ ಉತ್ತರವಿಲ್ಲ. ಇಂತಹ ಸನ್ನಿವೇಶದ ನಡುವೆಯೇ ಮುಂದಿನ ವಾರದಿಂದ ರಾಜ್ಯದಲ್ಲಿ ಜಾತಿ ಗಣತಿ ಆರಂಭವಾಗಲಿದೆ.
ಕಾಂತರಾಜು ನೇತೃತ್ವದ ಆಯೋಗ ನಡೆಸಿದ್ದ ಸಮೀಕ್ಷಾ ಕಾರ್ಯವನ್ನು ಬಹುತೇಕರ ಮನೆಯಲ್ಲಿ ಮಾಡಿಯೇ ಇರಲಿಲ್ಲ ಎನ್ನುವ ಆರೋಪವಿದೆ. ಆದ್ದರಿಂದ 425 ಕೋಟಿ ವೆಚ್ಚದಲ್ಲಿ ನಡೆಸಲು ಉದ್ದೇಶಿಸಿರುವ ಈ ಸಮೀಕ್ಷೆಯನ್ನಾದರೂ ಸರಿಯಾದ ರೀತಿಯಲ್ಲಿ ನಡೆಸಲಿ ಎನ್ನುವುದು ಸಾರ್ವ ಜನಿಕರ ಆಗ್ರಹವಾಗಿದೆ.