ವೀಕೆಂಡ್ ವಿತ್ ಮೋಹನ್
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಶಾಖೆಗಳಿಗೆ ಒಂದು ದಿನವೂ ಭೇಟಿ ನೀಡದ ಕಾಂಗ್ರೆಸ್ಸಿನ ನಾಯಕರು ಅದರ ಆಳ ಮತ್ತು ಅಗಲದ ಬಗ್ಗೆ ಪುಂಖಾನುಪುಂಖವಾಗಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಆರೆಸ್ಸೆಸ್‌ನಲ್ಲಿ ಜಾತಿಯೆಂಬ ಪರಿಕಲ್ಪನೆ ಇಲ್ಲವೆಂದು ಅನೇಕ ಕಾಂಗ್ರೆಸ್ಸಿಗರಿಗೆ ತಿಳಿದಿದೆ. ಆದರೂ ಅಲ್ಲಿನ ಸ್ವಯಂಸೇವಕರ ಜಾತಿಯ ಬಗ್ಗೆ ಮಾತನಾಡುತ್ತಾರೆ.
ಹಲವು ದಶಕಗಳಿಂದ ಆರೆಸ್ಸೆಸ್ ಸಮಾಜಮುಖಿ ಕಾರ್ಯಗಳಿಂದ, ತನ್ನ ವಿರುದ್ಧದ ಟೀಕೆಗಳಿಗೆ ಉತ್ತರ ಕೊಡುತ್ತಾ ಬಂದಿದೆ. 100 ವರ್ಷಗಳನ್ನು ಪೂರೈಸಿದ ಸಂಘದ ಏಳಿಗೆಯನ್ನು ಸಹಿಸಲು ಎಡಚರರಿಗೆ ಸಾಧ್ಯವಾಗುತ್ತಿಲ್ಲ. ನೆಹರು ಕಾಲದಿಂದಲೂ ಎಡಚರರ ಕೈಗೊಂಬೆಯಾಗಿರುವ ಕಾಂಗ್ರೆಸ್ ಪಕ್ಷ ಅವರ ತಲೆಬುಡವಿಲ್ಲದ ನಿರೂಪಣೆಗಳ ಸಂವಹನಗಳಿಗೆ ವೇದಿಕೆ ಕಲ್ಪಿಸಿ ಕೊಟ್ಟಿದೆ.
ಬ್ರಿಟಿಷರ ಕಾಲದಿಂದಲೂ ಭಾರತದಲ್ಲಿ ಕಮ್ಯುನಿಸ್ಟ್ ಸಿದ್ಧಾಂತವನ್ನು ಸಂಪೂರ್ಣವಾಗಿ ಜಾರಿಗೆ ತರಬೇಕೆಂಬ ಎಡಚರರ ಕನಸು ಇಂದಿಗೂ ಕನಸಾಗೇ ಉಳಿದಿದೆ. ಎಡಚರರ ವಾದಗಳಿಗೆ ತಲೆಬುಡ ವಿರುವುದಿಲ್ಲ. ಇಂದಿಗೂ ಅವರ ಆರ್ಯ ಮತ್ತು ದ್ರಾವಿಡ ಸಿದ್ಧಾಂತಕ್ಕೆ ಸಣ್ಣದೊಂದು ಪುರಾವೆ ಸಿಕ್ಕಿಲ್ಲ.
ಶಾಲಾ ಮಕ್ಕಳ ಪಠ್ಯರಚನೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ಎಡಚರರು ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ನ ಪಾತ್ರದ ಇತಿಹಾಸವನ್ನು ಮುಚ್ಚಿಟ್ಟರು. ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಯನ್ನು ಮುಚ್ಚಿಟ್ಟರು, ವೀರ ಸಾವರ್ಕರ್ ಅವರ ಸ್ವಾತಂತ್ರ್ಯ ಹೋರಾಟವನ್ನು ಮುಚ್ಚಿಟ್ಟು ಅವರ ವಿರುದ್ಧ ಅಪಪ್ರಚಾರ ಮಾಡಿದರು, ಆರೆಸ್ಸೆಸ್‌ನ ಸಮಾಜಮುಖಿ ಕೆಲಸಗಳನ್ನು ಇತಿಹಾಸದಲ್ಲಿ ಬರೆಯಲಿಲ್ಲ.
ಇದನ್ನೂ ಓದಿ: Mohan Vishwa Column: ಬ್ರಿಟಿಷರನ್ನು ಸೋಲಿಸಿದ್ದ ಅಫ್ಘಾನಿಸ್ತಾನದ ಸುತ್ತಮುತ್ತ
ನೆಹರು ಜೈಲಿನಲ್ಲಿದ್ದಾಗ ತಮ್ಮ ಮಗಳು ಇಂದಿರಾ ಗಾಂಧಿಗೆ ಬರೆದ ಪತ್ರವನ್ನು ಮಕ್ಕಳ ಪಠ್ಯದಲ್ಲಿ ಯಾತಕ್ಕೆ ಸೇರಿಸಿದರೋ ಭಗವಂತನೇ ಬಲ್ಲ. ಬ್ರಿಟಿಷರ ವಿರುದ್ಧ ಒಗ್ಗಟ್ಟನ್ನು ಪ್ರದರ್ಶಿಸಲು ಬ್ರಿಟಿಷ್ ಅಧಿಕಾರಿ ನೇತೃತ್ವದಲ್ಲಿ ಸ್ಥಾಪನೆಯಾದ ಕಾಂಗ್ರೆಸ್ ಎಂಬ ಸಂಘಟನೆಯನ್ನು, ಇಂದಿನ ಕಾಂಗ್ರೆಸ್ ಎಂಬ ರಾಜಕೀಯ ಪಕ್ಷಕ್ಕೆ ಹೋಲಿಸಿ ಮಾತನಾಡುತ್ತಾರೆ.
ವಲ್ಲಭಭಾಯಿ ಪಟೇಲ ಅವರ ಇತಿಹಾಸವನ್ನು ಇವರು ಮಕ್ಕಳ ಪಠ್ಯದಲ್ಲಿ ಆಳವಾಗಿ ಸೇರಿಸಲಿಲ್ಲ. ಸ್ವಾತಂತ್ರ್ಯ ಸಿಕ್ಕ ನಂತರ ಕಾಂಗ್ರೆಸ್ ಸಂಘಟನೆಯನ್ನು ವಿಸರ್ಜಿಸುವಂತೆ ಮಹಾತ್ಮ ಗಾಂಧಿ ಹೇಳಿದ ವಿಚಾರವನ್ನು ಇತಿಹಾಸದಲ್ಲಿ ಹೇಳಲಿಲ್ಲ. ಇತಿಹಾಸದ ಪುಟಗಳಲ್ಲಿ ಅನೇಕ ಸತ್ಯಗಳನ್ನು ಮುಚ್ಚಿ ಟ್ಟು ಆರೆಸ್ಸೆಸ್ ವಿರುದ್ಧ ನಿರಂತರವಾಗಿ ಅಪಪ್ರಚಾರ ಮಾಡಿಕೊಂಡು ಬಂದಿದ್ದಾರೆ.
100 ವರ್ಷಗಳ ನಂತರವೂ ಅವರ ಅಪಪ್ರಚಾರಗಳಿಗೆ ಸಮಾಜ ಸೊಪ್ಪು ಹಾಕಲಿಲ್ಲ. ಸಚಿವ ಪ್ರಿಯಾಂಕ್ ಖರ್ಗೆಯವರು ಹೈಕಮಾಂಡ್ ಮಟ್ಟದಲ್ಲಿ ಚಾಲ್ತಿಯಲ್ಲಿರಲು ಸಂಘದ ವಿರುದ್ಧ ಮಾತನಾಡಿ ಅವರ ಪಕ್ಷದ ಹಳೆಯ ನಾಯಕರು ಬಳಸಿದ ಮಾರ್ಗವನ್ನು ಬಳಸುತ್ತಿದ್ದಾರೆ. ಆರೆಸ್ಸೆಸ್ ಎಂಬುದು ಜಾತಿಯನ್ನೂ ಮೀರಿದ ಸಂಘಟನೆ. ಜಾತಿಗಳ ಬಗ್ಗೆ ಆರೆಸ್ಸೆಸ್‌ನಲ್ಲಿ ಇಂದಿಗೂ ಚರ್ಚೆ ಯಾಗುವುದಿಲ್ಲ.
ಸ್ವತಃ ಮಹಾತ್ಮ ಗಾಂಧಿಯವರು ಆರೆಸ್ಸೆಸ್‌ನ ಶಿಬಿರಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಎಡಚರರು, ಆರೆಸ್ಸೆಸ್ ಕೇವಲ ಮೇಲ್ವರ್ಗದವರಿಗೆ ಸೇರಿದ್ದು ಎಂಬ ಸುಳ್ಳು ನಿರೂಪಣೆಯನ್ನು ತೇಲಿ ಬಿಡುತ್ತಾರೆ. ಮತ್ತೊಂದೆಡೆ ‘ಸಂಘದಲ್ಲಿ ಬಡವರಿಗೆ ಜಾಗ ವಿಲ್ಲ, ಮಹಿಳೆಯರಿಲ್ಲ’ ಎಂಬ ಮತ್ತೊಂದು ಸುಳ್ಳು ನಿರೂಪಣೆಯನ್ನು ತೇಲಿ ಬಿಡುತ್ತಾರೆ. ಅವರ ನಿರೂಪಣೆಯನ್ನು ಕಾಂಗ್ರೆಸ್ಸಿನ ನಾಯಕರು ಮುಂದುವರಿಸಿಕೊಂಡು ಹೋಗುತ್ತಾರೆ. ಆದರೆ ಆರೆಸ್ಸೆಸ್‌ನ ಕಾರ್ಯಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸಿದವರಿಗೆ ಮಾತ್ರ ಅದರ ನೈಜ ಚಿತ್ರಣದ ಅರಿವಾಗುತ್ತದೆ.
ಆರೆಸ್ಸೆಸ್‌ನ ಪ್ರಚಾರಕರಾಗಿದ್ದ ದತ್ತೋಪಂತ ತೆಂಗಡಿಯವರ ನೇತೃತ್ವದಲ್ಲಿ 1955ರ ಜುಲೈ ೨೩ರಂದು ‘ಭಾರತೀಯ ಮಜ್ದೂರ್ ಸಂಘ’ ಹೆಸರಿನ ಕಾರ್ಮಿಕ ಸಂಘಟನೆ ಪ್ರಾರಂಭವಾಯಿತು. ಈ ಸಂಘಟನೆಯ ಧ್ವಜದ ಬಣ್ಣ ‘ಕೇಸರಿ’. ವಿಶ್ವಕರ್ಮ ಜಯಂತಿಯನ್ನು ಭಾರತೀಯ ಮಜ್ದೂರ್ ಸಂಘವು ‘ಭಾರತೀಯ ಶ್ರಮಿಕರ ದಿನ’ವೆಂದು ಘೋಷಿಸಿತ್ತು.
ಕಾರ್ಮಿಕ ಸಂಘಟನೆ ಸ್ಥಾಪನೆಯಾದ 12 ವರ್ಷಗಳ ನಂತರ 1967ರಲ್ಲಿ ಮೊಟ್ಟಮೊದಲ ರಾಷ್ಟ್ರೀ ಯ ಸಮ್ಮೇಳನ ನಡೆಯಿತು. ಅಲ್ಲಿಯವರೆಗೂ ಕಾರ್ಮಿಕ ಸಂಘಟನೆಯನ್ನು ಬಲಪಡಿಸುವ ನಿಟ್ಟಿ ನಲ್ಲಿ ಸಂಘದ ಅನೇಕರು ಶ್ರಮಪಟ್ಟಿದ್ದರು. ಅಂದಿನ ಕಾಲದಲ್ಲಿ ದೇಶದ ಸುಮಾರು 541 ಕಾರ್ಮಿಕ ಸಂಘಟನೆಗಳು ಭಾರತೀಯ ಮಜ್ದೂರ್ ಸಂಘದ ಜತೆ ಕೈ ಜೋಡಿಸಿದ್ದವು.
12 ವರ್ಷದಲ್ಲಿ 2,50,000ಕ್ಕೂ ಅಧಿಕ ಮಂದಿ ಸಂಘಟನೆಯ ಸದಸ್ಯರಾಗಿದ್ದರು. ಭಾರತೀಯ ಮಜ್ದೂರ್ ಸಂಘವು ಎಂದಿಗೂ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡುವ ಪ್ರತಿಭಟನೆ ಮಾಡಲಿಲ್ಲ. ಮಾಲೀಕ ಹಾಗೂ ಕಾರ್ಮಿಕರು ಒಂದು ಕುಟುಂಬದ ಸದಸ್ಯರಂತೆ ಒಬ್ಬರಿಗೊಬ್ಬರು ಸಹಕಾರಿಯಾಗಿ ಕೆಲಸ ಮಾಡಬೇಕೆಂಬುದು ಈ ಸಂಘಟನೆಯ ಮೂಲ ಉದ್ದೇಶವಾಗಿತ್ತು.
ಮಜ್ದೂರ್ ಸಂಘ ಸ್ಥಾಪನೆಯಾದ ೩ ದಶಕದಲ್ಲಿ ದೇಶದ ಅಂದಿನ ದೊಡ್ಡ ಕಾರ್ಮಿಕ ಸಂಘಟನೆ ಯಾಗಿದ್ದ ‘ಇಂಟಕ್’ ಅನ್ನೂ ಮೀರಿಸಿ ಬೆಳೆದಿತ್ತು. ದತ್ತೋಪಂತ ತೆಂಗಡಿಯವರು ಎಂದಿಗೂ ಭಾರತೀಯ ಮಜ್ದೂರ್ ಸಂಘವನ್ನು ಒಂದು ರಾಜಕೀಯ ಪಕ್ಷದ ಸಂಘಟನೆಯನ್ನಾಗಿ ಮಾಡಲಿಲ್ಲ.
ಪ್ರತಿಭಟನೆಗಳ ಮೂಲಕ ಪಟ್ಟಣಗಳನ್ನು ಸ್ತಬ್ಧಗೊಳಿಸುವ ಕೆಲಸ ಮಾಡಲಿಲ್ಲ. ಅವರ ಹೋರಾ ಟವು ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಸೀಮಿತವಾಗಿತ್ತು. 1962ರ ಜನವರಿ ತಿಂಗಳಲ್ಲಿ ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕ ಸ್ಥಾಪಿಸುವುದರ ಕುರಿತಂತೆ ಅಲ್ಲಿನ ಸ್ಥಳೀಯರು ಸರಕಾರದೊಂದಿಗೆ ಚರ್ಚೆಯನ್ನು ಪ್ರಾರಂಭಿಸಿದ್ದರು.
ಸ್ಥಳೀಯ ಮಟ್ಟದಲ್ಲಿ ಉತ್ತಮ ಸ್ಪಂದನೆ ಸಿಕ್ಕರೂ ರಾಜಕೀಯ ಒತ್ತಡಗಳಿಂದಾಗಿ ಸರಕಾರದ ಮಟ್ಟ ದಲ್ಲಿ ಉತ್ತಮ ಸ್ಪಂದನೆ ಸಿಕ್ಕಿರಲಿಲ್ಲ. ಸ್ಮಾರಕ ಸ್ಥಾಪನೆ ವಿಳಂಬವಾಗಲು, ಕನ್ಯಾಕುಮಾರಿ ಯಲ್ಲಿದ್ದ ಕೆಲವೊಂದು ಕ್ರಿಶ್ಚಿಯನ್ ಮಿಷನರಿಗಳ ಒತ್ತಡವು ಸರಕಾರದ ಮೇಲಿದ್ದುದೇ ಕಾರಣವಾಗಿತ್ತು. ಅಂಥ ಸಮಯದಲ್ಲಿ ಅಲ್ಲಿನ ಸ್ಥಳೀಯರು ಆರೆಸ್ಸೆಸ್‌ನ ಸರಸಂಘಚಾಲಕರಾಗಿದ್ದ ಗುರೂಜಿಯವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಆಗ ತಾನೆ 6 ವರ್ಷಗಳ ಸಂಘದ ಸಹಕಾರ್ಯವಾಹ ಜವಾಬ್ದಾರಿಯಿಂದ ನಿವೃತ್ತಿಗೊಂಡಿದ್ದ ಏಕನಾಥ್ ರಾನಡೆಯವರಿಗೆ ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಿಸುವ ನಿಟ್ಟಿನಲ್ಲಿ ಸ್ಥಳೀಯರ ಜತೆಗೂಡಬೇಕೆಂದು ಗುರೂಜಿ ಹೇಳುತ್ತಾರೆ. ಅಲ್ಲಿನ ಸ್ಥಳೀಯರಿಗೆ, ಏಕನಾಥ್ ರಾನಡೆಯವರು ಸ್ವಾಮಿ ವಿವೇಕಾನಂದರ 100 ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಬರೆದಿದ್ದ ಪುಸ್ತಕದ ಅರಿವಿತ್ತು, ಹಾಗಾಗಿ ಅವರನ್ನು ನೇಮಿಸುವಂತೆ ಗುರೂಜಿಯವರ ಬಳಿ ಕೇಳಿಕೊಂಡಿದ್ದರು.
ಆರೆಸ್ಸೆಸ್‌ನ ಸ್ವಯಂಸೇವಕರಾಗಿದ್ದ ಏಕನಾಥ್ ರಾನಡೆಯವರು ವಿವಿಧ ಪಕ್ಷದ ರಾಜಕೀಯ ನಾಯಕರುಗಳನ್ನು ಒಪ್ಪಿಸಿ ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕೆ ವೇಗ ನೀಡುವುದು ಸುಲಭದ ಕೆಲಸವಾಗಿರಲಿಲ್ಲ. ವಿವಿಧ ಪಕ್ಷಗಳ 323 ಸಂಸದರ ಸಹಿ ಹಾಕಿಸಿ ಏಕನಾಥ್ ರಾನಡೆಯವರು ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಲು ಸರಕಾರದ ಮೇಲೆ ಒತ್ತಡ ಹಾಕಿಸಿದರು.
ಬುದ್ಧಿವಂತ ಪ್ರಚಾರಕರೊಬ್ಬರು ವಿವಿಧ ಸಿದ್ಧಾಂತ ಹೊಂದಿದ್ದ ರಾಜಕೀಯ ಪಕ್ಷಗಳ ಸಂಸದರನ್ನು ಒಂದೆಡೆ ಸೇರಿಸಿ ದೊಡ್ಡದೊಂದು ಯೋಜನೆಯನ್ನು ಬೆಂಬಲಿಸುವಂತೆ ಮಾಡಿದ್ದು ಇತಿಹಾಸ. 1970ರ ಸೆಪ್ಟೆಂಬರ್ ೪ರಂದು ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣ ವಾಗಿ, ರಾಷ್ಟ್ರಪತಿಗಳ ಅಮೃತ ಹಸ್ತದಿಂದ ಉದ್ಘಾಟನೆಯಾಯಿತು. ಆರೆಸ್ಸೆಸ್‌ನ ಈ ಇತಿಹಾಸವನ್ನು ಯಾವ ಪಠ್ಯದಲ್ಲಿಯೂ ಎಡಚರರು ಸೇರಿಸಲಿಲ್ಲ, ಹಾಗಾಗಿ ಹಲವರಿಗೆ ಆರೆಸ್ಸೆಸ್‌ನ ನೈಜ ಇತಿಹಾಸದ ಪರಿಚಯವಾಗಲಿಲ್ಲ.
1936ರಲ್ಲಿ ಆರೆಸ್ಸೆಸ್‌ನ ಮಹಿಳಾ ಘಟಕವನ್ನು ಸ್ಥಾಪಿಸಲು ಲಕ್ಷ್ಮೀಬಾಯಿ ಕೇಲ್ಕರ್ ಅವರು ಆರೆಸ್ಸೆಸ್‌ನ ಸಂಸ್ಥಾಪಕರಾದ ಹೆಡ್ಗೆವಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಸಂಪೂರ್ಣವಾದ ಸ್ವತಂತ್ರ ಮಹಿಳಾ ಸಂಘಟನೆಯನ್ನು ಸ್ಥಾಪಿಸುವುದು ಸೂಕ್ತವೆಂದು ಹೆಡ್ಗೆವಾರ್ ಹೇಳಿದರು. ಪರಿಣಾಮವಾಗಿ, ದೇಶಭಕ್ತ ಮಹಿಳೆಯರನ್ನೊಳಗೊಂಡ ‘ರಾಷ್ಟ್ರ ಸೇವಿಕಾ ಸಮಿತಿ’ಯು 1936ರ ಅಕ್ಟೋಬರ್ ೨೫ರಂದು, ವಿಜಯದಶಮಿಯಂದು ಸ್ಥಾಪನೆಯಾಯಿತು.
ಈ ಸಮಿತಿಯು ಪ್ರಾರಂಭದ ದಿನದಿಂದಲೂ ಅನೇಕ ಸಮಾಜಮುಖಿ ಕಾರ್ಯಗಳನ್ನು ಅಂದರೆ, ಸಮಾಜಸೇವೆ, ವಿದ್ಯಾಭ್ಯಾಸ, ಭಾರತೀಯ ಸಂಸ್ಕೃತಿಯ ಅನಾವರಣ ಮುಂತಾದ ಅನೇಕ ಕಾರ್ಯ ಗಳನ್ನು ಮಾಡಿಕೊಂಡು ಬಂದಿದೆ. ಪ್ರಸ್ತುತ ದೇಶದಾದ್ಯಂತ 5215 ಸ್ಥಳಗಳಲ್ಲಿ ಈ ಸಂಘಟನೆ ತನ್ನ ಕಾರ್ಯಗಳನ್ನು ನಡೆಸುತ್ತಿದೆ. ಪ್ರತಿನಿತ್ಯ 875 ಶಾಖೆಗಳನ್ನು ನಡೆಸುತ್ತಿದೆ.
ವಿದೇಶಗಳಲ್ಲೂ ರಾಷ್ಟ್ರೀಯ ಸೇವಿಕಾ ಸಮಿತಿಯ ಘಟಕಗಳಿದ್ದು, ಸದಸ್ಯರ ಸಂಖ್ಯೆ ಅಂದಾಜು ಹತ್ತು ಲಕ್ಷವೆಂದು ಹೇಳಬಹುದು. ಈ ಸಮಿತಿಯು ದೇಶದಾದ್ಯಂತ ಸುಮಾರು 475 ಜಾಗಗಳಲ್ಲಿ ಬಡವರು ಮತ್ತು ಹಿಂದುಳಿದ ವರ್ಗದ ಹೆಣ್ಣುಮಕ್ಕಳ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಮಹಿಳೆಯರಿಗೆ ಗ್ರಂಥಾಲಯ ವ್ಯವಸ್ಥೆ, ಕಂಪ್ಯೂಟರ್ ತರಬೇತಿ, ಯೋಗ, ಅಬಲಾ ಶ್ರಮ, ಅನಾಥಾಶ್ರಮಗಳನ್ನು ನಡೆಸುತ್ತದೆ.
ಸಮಾಜದಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯಗಳ ಕುರಿತು ಜಾಗೃತಿ ಮೂಡಿಸಿ ಅನೇಕ ಕಾರ್ಯಾಗಾರಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ. ಆರೆಸ್ಸೆಸ್‌ನ ಸ್ಥಾಪನೆಯಾಗಿ 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಜಯ ದಶಮಿಯಂದು ನಡೆದ ಪಥಸಂಚಲನದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಲಕ್ಷಾಂತರ ಮಹಿಳೆಯರು ಪಾಲ್ಗೊಂಡಿದ್ದರು.
ಆರೆಸ್ಸೆಸ್‌ನಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲವೆಂದು ಸುಳ್ಳು ಹೇಳುವವರು ಒಮ್ಮೆ ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯ ಚಟುವಟಿಕೆಗಳನ್ನು ನೋಡಿ ಮಾತನಾಡಬೇಕು. ಚೆನ್ನೈ ನಗರದಲ್ಲಿ ಮಳೆ ಯಿಂದ ಉಂಟಾದ ದೊಡ್ಡ ಮಟ್ಟದ ಪ್ರವಾಹದಲ್ಲಿ ಸ್ಥಳೀಯರ ರಕ್ಷಣೆಗೆ ಮೊದಲು ಧಾವಿಸಿದ್ದು, ವಿಶಾಖಪಟ್ಟಣದಲ್ಲಿ ಚಂಡಮಾರುತದಿಂದ ಉಂಟಾದ ಹಾನಿ ಪ್ರದೇಶಗಳಿಗೆ ಧಾವಿಸಿ ಜನರ ನೆರವಿಗೆ ಬಂದದ್ದು, ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿಯಲ್ಲಿ ಜನರ ನೆರವಿಗೆ ಧಾವಿಸಿದ್ದು, ಉತ್ತರಾಖಂಡ್‌ನಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿದ್ದ ಜನರ ರಕ್ಷಣೆಗೆ ಧಾವಿಸಿದ್ದು, ಕೋವಿಡ್ ಸಮಯದಲ್ಲಿ ಕೋಟ್ಯಂತರ ಜನರ ಮನೆ ಬಾಗಿಲಿಗೆ ಊಟ, ಔಷಧಿ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಸಹಾಯ ಮಾಡಿದ್ದು ಆರೆಸ್ಸೆಸ್‌ನ ಸ್ವಯಂ ಸೇವಕರು. ಆರೆಸ್ಸೆಸ್‌ನ ದೊಡ್ಡ ಪಾಲು ಆಸಮಾಜಮುಖಿ ಕಾರ್ಯಗಳಿಗೆ ಮೀಸಲು, ಸಮಾಜದಲ್ಲಿರುವ ಜಾತಿ ತಾರತಮ್ಯ ವನ್ನು ನಿಲ್ಲಿಸುವ ನಿಟ್ಟಿನಲ್ಲಿ ಆರೆಸ್ಸೆಸ್‌ನ ಪ್ರಚಾರಕರು ಎಲೆಮರೆ ಕಾಯಿಯಂತೆ ಪ್ರತಿನಿತ್ಯ ತಮ್ಮ ಮನೆಗಳನ್ನು ಬಿಟ್ಟು ಕೆಲಸ ಮಾಡುತ್ತಿದ್ದಾರೆ.
ಆರೆಸ್ಸೆಸ್ ಸಮಾಜದ ಜತೆ ಬೆರೆತು ಹೋಗಿದೆ. 100 ವರ್ಷಗಳ ನಂತರವೂ ಆರೆಸ್ಸೆಸ್ ನಿರಂತರವಾಗಿ ತನ್ನ ಸಮಾಜಮುಖಿ ಕೆಲಸವನ್ನು ಮಾಡುತ್ತಲೇ ಇದೆ. ಈ ಹಿಂದೆಯೂ, ಆರೆಸ್ಸೆಸ್ ವಿರುದ್ಧ ಅನೇಕ ಬಾರಿ ಅಪಪ್ರಚಾರಗಳು ನಡೆದಿವೆ. ಆದರೆ ಆರೆಸ್ಸೆಸ್ ಯಾವುದನ್ನೂ ಲೆಕ್ಕಿಸದೆ ತನ್ನ ಸಮಾಜ ಮುಖಿ ಕಾರ್ಯಗಳಿಂದ ಇಂಥ ಟೀಕೆಗಳಿಗೆ ಉತ್ತರಿಸುತ್ತಾ ಬಂದಿದೆ.