ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayak V Bhat Column: ಪುಣ್ಯಾಶ್ರಮದ ಪ್ರಭೆಗೆ ಸಂದ ನಾಡೋಜ ಪದವಿ

ಸಂಗೀತ ಕಲೆಯನ್ನು ದೇವರಿಂದ ಕೊಡುಗೆಯಾಗಿ ಪಡೆದುಕೊಂಡು ಬಂದ ಗಾಯಕರಲ್ಲಿ ೆಂಕಟೇಶ್ ಕುಮಾರ್ ಒಬ್ಬರು. ತಮ್ಮ ಸಾಂಪ್ರದಾಯಿಕ ಗಾಯನ ಶೈಲಿಯಿಂದಾಗಿ ಸಂಗೀತ ಪ್ರೇಮಿಗಳ ನೆಚ್ಚಿನ ಕಲಾವಿದರಾಗಿರುವ ಇವರು, ಗಾನಗಂಗೋತ್ರಿಯನ್ನು ಆಧುನಿಕ ಆಘಾತಗಳ ನಡುವೆಯೂ ಮಲಿನ ವಾಗಲು ಬಿಡದೆ ಪರಿಶುದ್ಧವಾಗಿಯೇ ಉಳಿಸಿಕೊಂಡು ಬಂದಿದ್ದಾರೆ.

ಪುಣ್ಯಾಶ್ರಮದ ಪ್ರಭೆಗೆ ಸಂದ ನಾಡೋಜ ಪದವಿ

ವಿದ್ಯಮಾನ

ಧಾರವಾಡವೆನ್ನುತ್ತಿದ್ದಂತೆ ನೆನಪಾಗುವುದು ಲೈನ್ ಬಜಾರಿನ ಬಾಬುಸಿಂಗ್ ಠಾಕೂರ್ ಪೇಢಾ, ಸಾಧನಕೇರಿಯ ಸಾಧಕ ಬೇಂದ್ರೆ ಅಜ್ಜ ಮತ್ತು ಹಿಂದೂಸ್ತಾನಿ ಸಂಗೀತ. ಇವು ಮೂರು ಧಾರವಾಡದ ಗುರುತುಗಳು ಎನ್ನಬಹುದು. ಕಿರಾನಾ ಘರಾನಾದ ‘ಭಾರತರತ್ನ’ ಪಂ.ಭೀಮಸೇನ ಜೋಶಿ, ಜೈಪುರ-ಅತ್ರೋಲಿ ಘರಾನಾದ ‘ಪದ್ಮವಿಭೂಷಣ’ ಪಂ.ಮಲ್ಲಿಕಾರ್ಜುನ ಮನ್ಸೂರ್, ‘ಸ್ವರ ಶಿರೋಮಣಿ’ ಡಾ.ಗಂಗೂಬಾಯಿ ಹಾನಗಲ್, ಕಿರಾನಾ ಘರಾನಾದ ‘ಚೀಜ್’ಗಳ ರಾಜರೆನಿಸಿದ್ದ ‘ಪದ್ಮವಿಭೂಷಣ’ ಪಂ.ಬಸವರಾಜ ರಾಜಗುರು ಮತ್ತು ಖ್ಯಾತ ಹಿಂದೂಸ್ತಾನಿ ಗಾಯಕ ‘ಪದ್ಮವಿಭೂಷಣ’ ಪಂ. ಕುಮಾರ ಗಂಧರ್ವ (ಶಿವಪುತ್ತರ ಕೊಂಕಾಳಿಮಠ) ಮುಂತಾದವರು ಧಾರವಾಡದ ಸಂಗೀತದ ತೇರೆಳೆದ ಪ್ರಸಿದ್ಧರು.

ಈ ಐವರನ್ನು ಹೊರತುಪಡಿಸಿಯೂ ಧಾರವಾಡ ಜಿಲ್ಲೆಯಿಂದ ಅತಿ ಹೆಚ್ಚು ಪ್ರಸಿದ್ಧ ಸಂಗೀತಗಾರರು ಬೆಳಕಿಗೆ ಬಂದಿದ್ದಾರೆ, ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶ-ವಿದೇಶಗಳಲ್ಲೂ ಕೀರ್ತಿಪತಾಕೆಯನ್ನು ಹಾರಿಸುತ್ತಿದ್ದಾರೆ. ಧಾರವಾಡದಲ್ಲಿ ಯಾವಾಗ, ಎಲ್ಲಿ ನೋಡಿದರೂ ಸಂಗೀತ; ಪ್ರತಿ ಕೇರಿಗಳಲ್ಲಿ ಜೋಳದ ರೊಟ್ಟಿಯನ್ನು ತಟ್ಟುವ ಲಯ ಒಂದೆಡೆಯಾದರೆ, ಮನೆಮನೆಗಳಿಂದ ಕೇಳಿ ಬರುವ ತಂಬೂರದ ನಿನಾದ ಇನ್ನೊಂದೆಡೆ. ನನ್ನ ಕಾಲೇಜು ದಿನಗಳಲ್ಲಿ ಈ ನಿನಾದ ಕೇಳಿಸುವ ಎಷ್ಟೋ ಮನೆಗಳ ಮುಂದೆ ನಿಂತು ಆನಂದಿಸಿದ್ದಿದೆ.

ಇದನ್ನೂ ಓದಿ: Vinayaka V Bhat Column: ನೀತಿಯುತ ರಾಮಪಥ, ಇಂದಿಗೂ ಪ್ರಸ್ತುತ

ವಿದ್ಯಾವರ್ಧಕ ಸಂಘ, ಕಲಾಭವನ, ರಾಯರ ಮಠ, ರಾಮಮಂದಿರ ಮುಂತಾದೆಡೆ ನಡೆಯುತ್ತಿದ್ದ ಹಿರಿ-ಕಿರಿಯರ ಸಂಗೀತ ಕಛೇರಿಗಳನ್ನು ಕೇಳಿದ್ದು ನನ್ನ ಸೌಭಾಗ್ಯ. ಇಂಥ ಧಾರವಾಡದಲ್ಲಿಂದು ಭೀಮಸೇನ ಜೋಶಿ ಮುಂತಾದ ದಿಗ್ಗಜರ ಹೆಸರುಳಿಸುವ ಯೋಗ್ಯತೆಯಿರುವ ಗಾಯಕರು ಎಂದರೆ ಪಂ.ವೆಂಕಟೇಶ್ ಕುಮಾರ್ ಅವರು ಎಂದು ನಿಸ್ಸಂದಿಗ್ಧವಾಗಿ ಹೇಳಬಹುದು.

’ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿ ಗಾನರಸಂ ಫಣಿಃ’ ಎಂಬ ಮಾತೊಂದಿದೆ. ಸಂಗೀತದ ಭಾಷೆಯೇ ಹಾಗೆ. ಅದು ಶಿಶುಗಳಿಗೂ ಪಶುಗಳಿಗೂ ಸಮಾನವೇದ್ಯ. ಅನುಭವಿಸುವವರಿಗೆ ಅತ್ಯಂತ ಸರಳ ವಾದರೆ, ಅಭ್ಯಾಸಿಗಳಿಗೆ ಅತ್ಯಂತ ಕಠಿಣ! ಅದಕ್ಕೇ ಹೇಳುವುದು ‘ಗಾನವಿದ್ಯಾ ಬಡೀ ಕಠಿಣ ಹೈ’ ಅಂತ. ಸಂಗೀತವು ನಿರಂತರ ಕಲಿಕೆಯಿಂದ ಸಿದ್ಧಿಸುವಂಥ ವಿದ್ಯೆ ಎಂಬುದು ಒಂದೆಡೆಯಾದರೆ, ಮತ್ತೊಂದೆಡೆ ಈ ಸಂಗೀತದ ಸಂಸ್ಕಾರ ಎಂಬುದು ದೇವರ ಕೊಡುಗೆಯೆಂದೇ ಅನೇಕ ವಿದ್ವಾಂಸರು ಪರಿಗಣಿಸುತ್ತಾರೆ.

ಸಂಗೀತ ಮತ್ತು ಸಾಹಿತ್ಯಗಳು ಸರಸ್ವತಿಯ ಸ್ತನದ್ವಯಗಳು, ಹಾಗಾಗಿ ಸಂಗೀತವು ಆಪಾತ ಮಧುರ ವಾದರೆ ಸಾಹಿತ್ಯವು ಆಲೋಚನಾಮೃತ ಎಂದು ಪರಿಗಣಿತವಾಗಿದೆ. ಹಾಗೆ, ಸಂಗೀತ ಕಲೆಯನ್ನು ದೇವರಿಂದ ಕೊಡುಗೆಯಾಗಿ ಪಡೆದುಕೊಂಡು ಬಂದ ಗಾಯಕರಲ್ಲಿ ವೆಂಕಟೇಶ್ ಕುಮಾರ್ ಒಬ್ಬರು ಎಂಬುದನ್ನು ಅವರ ಹಾಡುಗಾರಿಕೆಯನ್ನು ಕೇಳಿದವರೆಲ್ಲರೂ ಒಪ್ಪುತ್ತಾರೆ. ಹಾಡುಗಾರರು ಅನೇಕ ರಿದ್ದಾರೆ, ಆದರೆ ವಿರಳರಲ್ಲಿ ಅತಿವಿರಳರಾದವರು ವೆಂಕಟೇಶರು.

7 R

ತಮ್ಮ ಶಾರೀರ ಶ್ರೀಮಂತಿಕೆ, ಸಾಂಪ್ರದಾಯಿಕ ಮತ್ತು ವಿಭಿನ್ನ ಗಾಯನ ಶೈಲಿಯಿಂದಾಗಿ ಸಂಗೀತ ಪ್ರೇಮಿಗಳ ನೆಚ್ಚಿನ ಕಲಾವಿದರಾಗಿರುವ ಇವರು, ತಮ್ಮ ಗುರುಪರಂಪರೆಯಿಂದ ಹರಿದು ಬಂದ ಗಾನಗಂಗೋತ್ರಿಯನ್ನು ಆಧುನಿಕ ಆಘಾತಗಳ ನಡುವೆಯೂ ಮಲಿನವಾಗಲು ಬಿಡದೆ ಪರಿಶುದ್ಧ ವಾಗಿಯೇ ಉಳಿಸಿಕೊಂಡು ಬಂದಿದ್ದಾರೆ.

ದೇಶಾದ್ಯಂತ ಬಹುಬೇಡಿಕೆಯ ಹಾಡುಗಾರರಾಗಿರುವ ಇವರು ತಮ್ಮ ಪರಂಪರೆಯ ಉನ್ನತ ಶ್ರೇಣಿಯ ಗಾಯಕರಲ್ಲಿ ಒಬ್ಬರಾಗಿದ್ದರೂ ಸರಳ-ಸದ್ಗುಣ ವ್ಯಕ್ತಿತ್ವವನ್ನು ಇನ್ನೂ ಇರಿಸಿಕೊಂಡಿ ದ್ದಾರೆ. ಅವರ ವಿನಯ-ವಿಧೇಯತೆಗಳೇ ಅವರ ಕಲಾವಂತಿಕೆಗೆ ಮತ್ತಷ್ಟು ಮೆರಗು ನೀಡಿವೆ ಎನ್ನಲಡ್ಡಿಯಿಲ್ಲ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1999), ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (2007), ವತ್ಸಲಾ ಭೀಮಸೇನ ಜೋಶಿ ಪ್ರಶಸ್ತಿ (2008), ಕೃಷ್ಣಾ ಹಾನಗಲ್ ಪ್ರಶಸ್ತಿ(2009), ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2012), ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ದಿಂದ ಗೌರವ ಡಾಕ್ಟರೇಟ್ (2014), ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ (2016), ಗಂಗೂಬಾಯಿ ಹಾನಗಲ್ ರಾಷ್ಟ್ರೀಯ ಪ್ರಶಸ್ತಿ (2017), ಮಧ್ಯಪ್ರದೇಶ ಸರಕಾರದ ಕಾಳಿದಾಸ್ ಸಮ್ಮಾನ್ (2017ರ ಸಾಲಿಗೆ; ಇದನ್ನು 2021ರಲ್ಲಿ ನೀಡಲಾಯಿತು), ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಯೂನಿವರ್ಸಿಟಿ ಫಾರ್ ಹ್ಯೂಮನ್ ಎಕ್ಸಲೆನ್ಸ್‌ನಿಂದ ಗೌರವ ಡಾಕ್ಟರೇಟ್ (2022) ಮುಂತಾದವನ್ನು ಮುಡಿಗೇರಿಸಿ ಕೊಂಡಿರುವ ಇವರು, ಹಂಪಿ ಕನ್ನಡ ವಿಶ್ವವಿದ್ಯಾಲಯದ‘ನಾಡೋಜ’ ಪ್ರಶಸ್ತಿಗೆ ಇತ್ತೀಚೆಗೆ ಭಾಜನ ರಾಗಿದ್ದಾರೆ.

ಯೋಗ್ಯರಿಗೆ ಪ್ರಶಸ್ತಿಗಳು ಸಂದಾಗ ಸಿಗುವ ಸಂತೋಷವು, ಈ ಪ್ರಶಸ್ತಿಯು ವೆಂಕಟೇಶ್ ಅವರಿಗೆ ದೊರೆತಾಗ ಸಿಕ್ಕಿತೆನ್ನಬಹುದು. ವೆಂಕಟೇಶ್ ಜನಿಸಿದ್ದು 1953ರ ಜುಲೈ 1ರಂದು, ಬಳ್ಳಾರಿ ಸಮೀಪದ ಲಕ್ಷ್ಮೀಪುರದಲ್ಲಿ; ತಂದೆ ಹುಲೆಪ್ಪ ಜಾನಪದ ಗಾಯಕ ಮತ್ತು ಬೊಂಬೆಯಾಟಗಾರರಾಗಿದ್ದವರು. 15 ವರ್ಷದವರಿದ್ದಾಗ ವೆಂಕಟೇಶ್‌ರನ್ನು ಅವರ ಸೋದರಮಾವ ಬೆಳಗಲ್ಲು ವೀರಣ್ಣ ಅವರು ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಕರೆದೊಯ್ದರು. ವೀರಶೈವ ಸಂತ ಹಾಗೂ ಹಿಂದೂಸ್ತಾನಿ ಸಂಗೀತಗಾರ ಪುಟ್ಟರಾಜ ಗವಾಯಿಗಳಿಂದ ಖ್ಯಾತಿಗೆ ಬಂದ ಈ ಮಠ ಸಂಗೀತಕ್ಕಾಗಿಯೇ ಇರುವಂಥದ್ದಾದ್ದರಿಂದ, ನಿಜಾರ್ಥದಲ್ಲಿ ಸಂಗೀತ ವಿಶ್ವವಿದ್ಯಾಲಯವೆಂದರೆ ‘ಪುಣ್ಯಾಶ್ರಮ’ ಎನ್ನಬಹುದು.

ವೆಂಕಟೇಶರು ಮುಂದಿನ 12 ವರ್ಷಗಳ ಕಾಲ ಆಶ್ರಮದಲ್ಲೇ ಇದ್ದುಕೊಂಡು ಗುರುಗಳ ಸೇವೆ ಮಾಡುತ್ತಾ ಹಿಂದೂಸ್ತಾನಿ ಗಾಯನವನ್ನು ಕಲಿತರು. ಗ್ವಾಲಿಯರ್ ಮತ್ತು ಕಿರಾನಾ ಘರಾನಾ ಶೈಲಿಗಳಲ್ಲಿ ಅವರ ಕಲಿಕೆಯಾಯಿತು. ಹಾಡುಗಾರಿಕೆಯಲ್ಲಿ ವೆಂಕಟೇಶ್ ಈ ಶೈಲಿಗಳನ್ನು ತೋರುತ್ತಾರಾದರೂ, ಈ ಘರಾನಾಗಳನ್ನೂ ಮೀರಿಸಿದ ಪ್ರತಿಭೆ ಅವರದ್ದು. ಅವರ ಗುರುಗಳಿಗೆ ಕರ್ನಾಟಕ ಸಂಗೀತದಲ್ಲೂ ಪ್ರಾವೀಣ್ಯವಿದ್ದುದರಿಂದ ವೆಂಕಟೇಶರ ಗಾಯನದಲ್ಲಿ ಈ ಶೈಲಿಯ ಕುರುಹುಗಳೂ ಕಾಣಸಿಗುತ್ತವೆ.

ಆಶ್ರಮವನ್ನು ತೊರೆದ 14 ವರ್ಷಗಳ ನಂತರ (1993ರಲ್ಲಿ) ಪುಣೆಯ ಸವಾಯಿ ಗಂಧರ್ವ ಸಂಗೀತ ಮಹೋತ್ಸವದಲ್ಲಿ ಕಾರ್ಯಕ್ರಮ ನೀಡಲು ಭೀಮಸೇನ್ ಜೋಶಿಯವರಿಂದ ಆಹ್ವಾನ ಬಂದಾಗ, ವೆಂಕಟೇಶರಿಗೆ ರಾಷ್ಟ್ರಮಟ್ಟದಲ್ಲಿ ಮೊದಲ ಬ್ರೇಕ್ ಸಿಕ್ಕಿತು. ಆದಾಗ್ಯೂ, ರಾಷ್ಟ್ರೀಯ ಸಂಗೀತ ಉತ್ಸವಗಳಲ್ಲಿ ಪ್ರಸಿದ್ಧಿಗೆ ಬರಲು ಅವರು ಇನ್ನೂ 10 ವರ್ಷ ಕಾಯಬೇಕಾಯಿತು.

ಅಂದಿನಿಂದ ಇಂದಿನವರೆಗೂ ಅನೇಕ ರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಜನಮೆಚ್ಚುಗೆ ಗಳಿಸಿರುವ ಅವರು 1988ರಿಂದ ಆಕಾಶವಾಣಿಯ ‘ಎ’ ಟಾಪ್ ದರ್ಜೆಯ ಕಲಾವಿದ ರಾಗಿಯೂ ಗುರುತಿಸಿಕೊಂಡಿದ್ದಾರೆ. ಗದಗ ಬಳಿಯ ವಿಜಯ ಮಹಾಂತೇಶ ಕಲಾ ಕಾಲೇಜಿನಲ್ಲಿ ಬೋಧನಾ ವೃತ್ತಿ ಆರಂಭಿಸಿ ಒಂದೂವರೆ ವರ್ಷ ಸೇವೆ ಸಲ್ಲಿಸಿದ ವೆಂಕಟೇಶ್, ಉಡುಪಿಯ ಮುಕುಂದ ಕೃಪಾದಲ್ಲೂ ಬೋಧಿಸಿದ್ದಾರೆ. ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು, ಕರ್ನಾಟಕ ಸರಕಾರವು ನಡೆಸುವ ಪರೀಕ್ಷೆಗೆ ಸೂಚಿಸಲಾದ ಸಂಗೀತದ ಪಠ್ಯಪುಸ್ತಕವನ್ನೂ ಬರೆದಿದ್ದಾರೆ.

ಧಾರವಾಡದ ಯೂನಿವರ್ಸಿಟಿ ಕಾಲೇಜ್ ಆಫ್ ಮ್ಯೂಸಿಕ್ನಲ್ಲಿ 33 ವರ್ಷಗಳ ಕಾಲ ಬೋಧಿಸಿದ ಅವರು ಈ ಕಾರ್ಯಭಾರದಿಂದಾಗಿ ಅನೇಕ ಸಂಗೀತ ಕಛೇರಿಗಳನ್ನು‌ ನಿರಾಕರಿಸಬೇಕಾಯಿತು. ಕಛೇರಿಗಳು ಸಿಗುವುದೇ ದುಸ್ತರವಾಗಿದ್ದ ಸಮಯದಲ್ಲಿ ತಮಗೆ ಸ್ಥಿರತೆ ನೀಡಿದ್ದ ಕೆಲಸವನ್ನು ತ್ಯಜಿಸಲೂ ಅವರಿಗೆ ಮನಸ್ಸಾಗಲಿಲ್ಲ; ನಂತರ 2015ರಲ್ಲಿ ಬೋಧನಾ ವೃತ್ತಿಯಿಂದ ನಿವೃತ್ತರಾದರು.

ಒಮ್ಮೆ ಭೀಮಸೇನ್ ಜೋಶಿಯವರು ವೆಂಕಟೇಶರನ್ನು ಪುಣೆಯ ಸವಾಯಿ ಗಂಧರ್ವ ಸಂಗೀತ ಸಮಾರೋಹದಲ್ಲಿ ಹಾಡುವಂತೆ ವೈಯಕ್ತಿಕವಾಗಿ ಆಹ್ವಾನಿಸಿದ್ದರು. ಕಛೇರಿಯ ಮಧ್ಯೆ, ವಚನ ವನ್ನು ಹಾಡುವಂತೆ ಸಂಗೀತರಸಿಕರು ಆಗ್ರಹಿಸಿದರಂತೆ. ಆದರೆ, ಶುದ್ಧ ಶಾಸ್ತ್ರೀಯ ಸಂಗೀತಕ್ಕೆ ಮೀಸಲಾಗಿದ್ದ ವೇದಿಕೆಯಲ್ಲಿ ವಚನ ಹಾಡುವುದು ಹೇಗೆ? ಎಂಬ ಅಳುಕಿನಿಂದ ಸಭೆಯ ಮುಂದಿನ ಸಾಲಲ್ಲಿ ಕುಳಿತಿದ್ದ ಭೀಮಸೇನ್ ಜೋಶಿಯವರತ್ತ ನೋಡಿದಾಗ ‘ಪರವಾಗಿಲ್ಲ ಹಾಡು’ ಎಂದು ಅವರು ಸಂಜ್ಞೆ ಮಾಡಿದರಂತೆ. ಅದರಂತೆ, ಶಾಸ್ತ್ರೀಯ ಗಾಯನಕ್ಕೆ ಮೀಸಲಾಗಿದ್ದ ಸವಾಯಿ ಗಂಧರ್ವ ಉತ್ಸವದ ವೇದಿಕೆಯಲ್ಲಿ ಕನ್ನಡದ ವಚನಗಳನ್ನು ಪ್ರಸ್ತುತಪಡಿಸಿದ ಏಕೈಕ ಗಾಯಕ ಎಂಬ ಹೆಗ್ಗಳಿಕೆ ವೆಂಕಟೇಶರದ್ದಾಯಿತು.

ಯಾವುದೇ ತರಹದ ಸಂಗೀತಕ್ಕೆ ಷಡ್ಜವೇ ಮಾಲಾಧಾರ,ಅದನ್ನು ದೃಢವಾಗಿ ತೋರಿಸಬಲ್ಲವರನ್ನು ಅತ್ಯಂತ ಶ್ರೇಷ್ಠ ಕಲಾವಿದರಾಗಿ ಕಾಣುವ ಪದ್ಧತಿಯಿದೆ. ಭಾರತೀಯ ಸಂಗೀತ ಪ್ರಕಾರದಲ್ಲಿ ಭೀಮ ಸೇನ್ ಜೋಶಿಯವರ ‘ಭೀಮ ಸೇನಿ ಷಡ್ಜ’ ಎನ್ನುವುದಿದೆ. ಅಂತೆಯೇ ಅತ್ಯಂತ ದೃಢತ್ವದ ‘ಷಡ್ಜ’ಕ್ಕೆ ಹೆಸರಾದ ವೆಂಕಟೇಶರು ಇರುವುದರಿಂದ ಅದಕ್ಕೆ ‘ವೆಂಕಟೇಶಿ ಷಡ್ಜ’ ಎನ್ನಬಹುದು. “ವೆಂಕಟೇಶರು ‘ಸ’ಕಾರ ಹಚ್ಚಿದರೇ ಸಾಕು ರೋಮಾಂಚನವಾಗುತ್ತದೆ" ಎಂದು ಕರ್ನಾಟಕ ಸಂಗೀತದ ದಿಗ್ಗಜ ವಿದ್ವಾನ್ ಆರ್. ಕೆ.ಪದ್ಮನಾಭರು ಹೇಳಿದ್ದನ್ನು ಕೇಳಿದ್ದೇನೆ.

ಆ ಮಾತು ಅಕ್ಷರಶಃ ನಿಜ. ರಾಗ ಸಂಗೀತವಿರಲಿ, ದಾಸವಾಣಿಯಿರಲಿ, ವಚನಗಾಯನವಿರಲಿ, ಮೊದಲ ಸ್ವರದಿಂದಲೇ ಪ್ರೇಕ್ಷಕರ ಮನಗೆಲ್ಲುತ್ತಾರೆ ವೆಂಕಟೇಶ್ ಕುಮಾರ್. ವೆಂಕಟೇಶರ ಶಾಸ್ತ್ರೀಯ ಮತ್ತು ಭಕ್ತಿಸಂಗೀತಗಳ ಅನೇಕ ಧ್ವನಿಮುದ್ರಿಕೆಗಳು ಹೊರಬಂದಿವೆಯಾದರೂ 1998ರಲ್ಲಿ ಮೊದಲು ಬಿಡುಗಡೆಯಾದ ‘ಸ್ಮರಣೆ ಸಾಲದೇ’ ಧ್ವನಿಮುದ್ರಿಕೆ ಎಲ್ಲ ದೃಷ್ಟಿಯಿಂದಲೂ ಸಾರ್ವಕಾಲಿಕ ದಾಖಲೆ ಯನ್ನು ಸೃಷ್ಟಿಸಿತು, ಇದರಲ್ಲಿನ ಹಾಡುಗಳು ಅವರಿಗೆ ಲೋಕಪ್ರಿಯತೆಯನ್ನು ತಂದು ಕೊಟ್ಟವು.

ಈ ಧ್ವನಿಮುದ್ರಿಕೆಯಲ್ಲಿನ‘ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ’, ‘ಮಂತ್ರಾಲಯ ನಿವಾಸ’, ‘ಗಜಮುಖನೆ ಸಿದ್ಧಿದಾಯಕನೆ’ ಮುಂತಾದ ಹಾಡುಗಳನ್ನು ಅವರು ಕಛೇರಿಗಳಲ್ಲಿ ಈಗಲೂ ಪ್ರೇಕ್ಷಕರ ಒತ್ತಾಯದ ಮೇರೆಗೆ ಹಾಡಬೇಕಾಗಿ ಬರುತ್ತದೆ. ‘ಒಂದು ಬಾರಿ ಸ್ಮರಣೆ ಸಾಲದೇ’ ಎಂಬ ದಾಸರ ಪದವನ್ನಂತೂ ಅವರು ಎಷ್ಟು ಸಾವಿರ ಬಾರಿ ಹಾಡಿದ್ದಾರೋ? ಇದು ಮತ್ತೆ ಮತ್ತೆ ಕೇಳಬೇಕೆನ್ನಿಸುವ ಅಮರಗೀತೆಯಾಗಿ ಸಂಗೀತ ರಸಿಕರ ಮನದಲ್ಲಿ ಬೇರೂರಿಬಿಟ್ಟಿದೆ.

ವಿದೇಶಗಳಲ್ಲಿ ಕಛೇರಿ ನಡೆದರೂ ಈ ಹಾಡಿಗೆ ಬೇಡಿಕೆ ಬಂದೇ ಬರುತ್ತದೆ. ಭೈರವಿ ರಾಗದಲ್ಲಿರುವ ‘ಶರಣು ಸಕಲೋದ್ಧಾರ ಅಸುರ ಕುಲಸಂಹಾರ’ ಹಾಡಂತೂ ಕೇಳುಗರ ಕಂಗಳನ್ನು ತೇವವಾ ಗಿಸಿಬಿಡುತ್ತದೆ. ಒಂದು ರಾಗವನ್ನೋ, ಹಾಡನ್ನೋ ಎಷ್ಟು ಸುಂದರಗೊಳಿಸಬಹುದೋ ಅಷ್ಟನ್ನೂ ಅವರು ಮಾಡದೆ ಬಿಟ್ಟಿದ್ದಿಲ್ಲ. ಹೀಗಾಗಿಯೇ ಅವರ ಹಾಡುಗಳನ್ನು ಬೇರೆಯವರು ಹಾಡಲು ಯತ್ನಿಸುವುದಿಲ್ಲ; ವೆಂಕಟೇಶರು ಈ ಹಾಡಿಗೆ ಒದಗಿಸಿದ ನ್ಯಾಯವನ್ನು ತಾವು ಒದಗಿಸಲಾರೆವು ಎಂಬ ಭಯ ಇದಕ್ಕೆ ಕಾರಣ. ಹೀಗಾಗಿ ಕೆಲ ಹಾಡುಗಳು ಅವರ ಸ್ವತ್ತಾಗಿಯೇ ಉಳಿದುಬಿಟ್ಟಿವೆ.

ಅವರದ್ದು 3 ತಾಸಿನ ಸಂಗೀತ ಕಛೇರಿಯಾದರೂ, ಅದರ ಗುಂಗಿನಿಂದ ಹೊರಬರಲು ರಸಿಕರಿಗೆ 300 ದಿನ ಬೇಕಾಗುತ್ತವೆ, ಅಷ್ಟು ಪ್ರಭಾವಶಾಲಿ ಗಾಯನ ಅವರದ್ದು! 72 ವರ್ಷದ ವೆಂಕಟೇಶರು ಹಾಡಲು ಶುರುವಿಟ್ಟುಕೊಂಡರೆ, ಶರೀರಕ್ಕಾದ ಮುಪ್ಪು ಶಾರೀರಕ್ಕೆ ಆಗಿಯೇ ಇಲ್ಲವೆನಿಸುತ್ತದೆ. ಇನ್ನೂ ಅಷ್ಟು ತಾಜಾ ಇದೆ ಅವರ ಶಾರೀರ.

ಕೇಳುಗರ ಕುರಿತಾಗಿ ಅವರಿಗಿರುವ ಪ್ರೀತಿ-ಗೌರವಗಳ ಕುರಿತಾಗಿ ಹೇಳಲೇಬೇಕು. ಕೇಳುಗನೊಬ್ಬ ಅಪೇಕ್ಷಿಸಿದ ಹಾಡನ್ನು ಹಾಡದೆ ಅವರು ಕಛೇರಿಯನ್ನು ಮುಗಿಸಿದ್ದೇ ಇಲ್ಲ. ‘ಹಾಡುಗಾರನಿಗೆ ಕೇಳುಗನೇ ದೇವರು, ಅವನಿಲ್ಲದಿದ್ದರೆ ನಮ್ಮ ಕಲಾವಂತಿಕೆಗೆಲ್ಲಿ ಬೆಲೆ?’ ಎಂಬುದು ಅವರ ಅಭಿಪ್ರಾಯ. ಮೈಸೂರಿನಲ್ಲೊಮ್ಮೆ ಕಛೇರಿ ನಡೆಸಿಕೊಡುತ್ತಿದ್ದಾಗ, ಬಂಕಿಮಚಂದ್ರ ಚಟರ್ಜಿಯವರ ‘ವಂದೇ ಮಾತರಂ’ ದೇಶಭಕ್ತಿ ಗೀತೆಯನ್ನು ಹಾಡುವಂತೆ ಅಭಿಮಾನಿಯೊಬ್ಬಳು ಆಗ್ರಹಿಸಿದಳು.

ಅದು ಅವರೆಂದೂ ಹಾಡಿದ ಹಾಡಲ್ಲ, ಕಂಠಸ್ಥವೂ ಅಲ್ಲ. ಆದರೂ ಮೊಬೈಲ್ ಫೋನಿನಲ್ಲಿ ನೋಡಿಕೊಂಡು ಆ ಹಾಡನ್ನು ಸುಂದರವಾಗಿ ಪ್ರಸ್ತುತಪಡಿಸಿ ಆಕೆಯ ಮನತಣಿಸಿದ್ದರು. ಆ ಘಟನೆಗೆ ನಾನೂ ಸಾಕ್ಷಿಯಾಗಿದ್ದೆ. ಪುಣ್ಯಾಶ್ರಮದ ಪುಣ್ಯದ ಫಲವೆನ್ನುವಂತಿರುವ, ಗುರು-ಶಿಷ್ಯ ಪರಂಪರೆ ಯಲ್ಲಿ ಅಧ್ಯಯನ ಮಾಡಿರುವ ವೆಂಕಟೇಶರು ಕೂಡ ಪಂ.ರಮೇಶ್ ಕುಲ್ಕುಂದರು ಸೇರಿದಂತೆ ಅನೇಕ ಉತ್ತಮ ಶಿಷ್ಯರನ್ನು ತರಬೇತುಗೊಳಿಸಿ ಸಂಗೀತ ಕ್ಷೇತ್ರಕ್ಕೆ ನೀಡಿ ಉಪಕರಿಸಿದ್ದಾರೆ. “ಲೌಕಿಕ ಮನ್ನಣೆಗಳಿಗೆ ನಾನು ಹೆಚ್ಚು ಮಹತ್ವ ಕೊಡಲಾರೆ. ಸಂಗೀತದಲ್ಲಿ ದೇವರನ್ನು ಅನುಭವಿಸು ವುದಕ್ಕಾಗಿ ಹಾಡುತ್ತೇನೆ" ಎನ್ನುತ್ತಾರೆ ಅವರು.