Vinayaka V Bhat Column: ನೀತಿಯುತ ರಾಮಪಥ, ಇಂದಿಗೂ ಪ್ರಸ್ತುತ
ರಾಮ ತನ್ನ ಜೀವಿತಾವಧಿಯಲ್ಲಿ ಈ ಮಾತನ್ನು ಸರ್ವಥಾ ಪಾಲಿಸಿಕೊಂಡು ಬಂದಿರುವುದು ಅವನ ಚರಿತ್ರೆಯಿಂದ ನಮಗೆ ಅರಿವಾಗುತ್ತದೆ ಮತ್ತು ಆ ಕಾರಣಕ್ಕೇ ಜನ ಅವನನ್ನು ಆರಾಧಿಸು ತ್ತಾರೆ. ‘ಅಪಿ ಸ್ವರ್ಣಮಯೀ ಲಂಕಾ ನಮೇ ರೋಚತೆ ಲಕ್ಷ್ಮಣ, ಜನನೀ ಜನ್ಮ ಭೂಮಿಶ್ಚ ಸ್ವರ್ಗಾ ದಪಿ ಗರೀಯಸಿ’ ಅಂದರೆ, ‘ಲಂಕೆಯು ಸ್ವರ್ಣಮಯವಾಗಿದ್ದರೂ ನನ್ನ ಜನ್ಮಭೂಮಿಯ ಮುಂದೆ ಇದು ನನ್ನನ್ನು ಆಕರ್ಷಿತವಾಗುವಂತೆ ಮಾಡುವುದಿಲ್ಲ


ವಿದ್ಯಮಾನ
ರಾಮೋ ವಿಗ್ರಹವಾನ್ ಧರ್ಮಃ’ ಎಂಬ ಪ್ರಸಿದ್ಧ ಮಾತೊಂದಿದೆ. ಧರ್ಮವು ವಿಗ್ರಹ ರೂಪ ವನ್ನು ತಾಳಿದರೆ ಅದು ಶ್ರೀರಾಮನಂತಿರುತ್ತಿತ್ತು’ ಎನ್ನುವುದು ಇದರರ್ಥ. ಹಾಗಾದರೆ ಧರ್ಮವೆಂದರೇನು? ಎಂದು ಕೇಳಿದರೆ ವಿಸ್ತೃತ ವ್ಯಾಖ್ಯಾನವನ್ನೇ ಹೇಳಬೇಕಾಗುತ್ತದೆ. ಅದು ನಾವಂದುಕೊಂಡ ಹಿಂದೂ, ಇಸ್ಲಾಂ ಅಥವಾ ಕ್ರೈಸ್ತ ಧರ್ಮಗಳಲ್ಲ. ಸರಳವಾಗಿ ಹೇಳುವು ದಾದರೆ, ತನಗಿರುವ ಉಪಾಧಿಯನ್ನು ಶಾಸ್ತ್ರಾನುಸಾರ ಪರಿಪಾಲಿಸುವುದೇ ಧರ್ಮ. ಆ ‘ಧರ್ಮ’ವೆನ್ನುವಂಥದ್ದು ತಂದೆಗೆ, ಮಗನಿಗೆ, ಪತ್ನಿಗೆ, ಪತಿಗೆ, ತಾಯಿಗೆ, ರಾಜನಿಗೆ ಹೀಗೆ ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿರುತ್ತದೆ. ಹಾಗೆ ಈ ಎಲ್ಲಾ ಉಪಾಧಿಗಳನ್ನೂ ವಿಧಿ ನಿಷಿದ್ಧ ಕ್ಕೊಳಪಟ್ಟು ಸಕ್ಷಮವಾಗಿ ನಿರ್ವಹಿಸಿರುವುದು ಮನುಷ್ಯ ಶ್ರೇಷ್ಠನಾದ ಶ್ರೀರಾಮನ ಹೆಗ್ಗಳಿಕೆ. ಅದರಲ್ಲೂ ಅವನ ರಾಜಧರ್ಮದ ಪರಿಪಾಲನೆಯ ಪರಿಯು ಅಧಿಕಾರಸ್ಥರಿಗೆ ಇಂದಿಗೂ ‘ಮಾರ್ಗದರ್ಶಕ ನಿರೂಪಣೆ’ಯಾಗಿದೆ.
‘ಸಕೃದೇವ ಪ್ರಪನ್ನಾಯ ತವಾಸ್ಮೀತಿಚ ಯಾಚತೇ ಅಭಯಂ ಸರ್ವಭೂತೇಭ್ಯೋ ದದಾಮಿ ವಚನಂ ಮಮ’- ಇದು ರಾಮನ ವಾಗ್ದಾನ. ಒಂದು ಬಾರಿ ನನ್ನಲ್ಲಿ ಶರಣಾಗಿ, ‘ನಾನು ನಿನ್ನ ವನು, ನನ್ನನ್ನು ರಕ್ಷಿಸು’ ಎಂದು ಬೇಡಿಕೊಂಡವರನ್ನು, ಅದು ಮನುಷ್ಯನಾಗಿರಲಿ, ಪ್ರಾಣಿ-ಪಕ್ಷಿಗಳಾಗಿರಲಿ ರಕ್ಷಿಸುವುದೇ ನನ್ನ ವ್ರತ ಎಂಬುದು ಇದರ ಸಾರಾಂಶ.
ರಾಮ ತನ್ನ ಜೀವಿತಾವಧಿಯಲ್ಲಿ ಈ ಮಾತನ್ನು ಸರ್ವಥಾ ಪಾಲಿಸಿಕೊಂಡು ಬಂದಿರುವುದು ಅವನ ಚರಿತ್ರೆಯಿಂದ ನಮಗೆ ಅರಿವಾಗುತ್ತದೆ ಮತ್ತು ಆ ಕಾರಣಕ್ಕೇ ಜನ ಅವನನ್ನು ಆರಾಧಿಸುತ್ತಾರೆ. ‘ಅಪಿ ಸ್ವರ್ಣಮಯೀ ಲಂಕಾ ನಮೇ ರೋಚತೆ ಲಕ್ಷ್ಮಣ, ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಅಂದರೆ, ‘ಲಂಕೆಯು ಸ್ವರ್ಣಮಯವಾಗಿದ್ದರೂ ನನ್ನ ಜನ್ಮಭೂಮಿಯ ಮುಂದೆ ಇದು ನನ್ನನ್ನು ಆಕರ್ಷಿತವಾಗುವಂತೆ ಮಾಡುವುದಿಲ್ಲ; ವಿಭೀ ಷಣನೇ ಇಲ್ಲಿಯ ರಾಜ್ಯಭಾರ ಮಾಡಲಿ, ನಮಗಿದು ಬೇಡ’ ಎಂದು ಯುದ್ಧಾಂತ್ಯದಲ್ಲಿ ರಾಮನು ಲಕ್ಷ್ಮಣನಿಗೆ ಹೇಳುವ ಮೂಲಕ ಅನ್ಯದೇಶಗಳ ಮೇಲೆ ಅತಿಕ್ರಮಣ ಮಾಡದ ಸಂಪ್ರದಾಯಕ್ಕೆ ನಾಂದಿ ಹಾಡಿದ್ದ.
ಇದನ್ನೂ ಓದಿ: Vinayaka Bhat Column: ಹವ್ಯಾಸಿ ರಂಗಸ್ಥಳದ ಸವಾಲುಗಳು ಮತ್ತು ಪರಿಹಾರ
ಇಂದಿನ ನಮ್ಮ ವಿದೇಶಾಂಗ ನೀತಿಯೂ ಹೀಗೆಯೇ- ನಾವು ಯಾರ ತಂಟೆಗೂ ಹೋಗುವು ದಿಲ್ಲ; ಆದರೆ, ನಮ್ಮ ಸಾರ್ವಭೌಮತೆಗೆ ಧಕ್ಕೆಯಾದರೆ ನಮ್ಮನ್ನು ಸಮರ್ಥವಾಗಿ ರಕ್ಷಿಸಿ ಕೊಳ್ಳುತ್ತೇವೆ. ಈ ಪರಿಪಾಠವನ್ನು ಶ್ರೀರಾಮನೇ ಹಾಕಿಕೊಟ್ಟಿದ್ದಿರಬೇಕು.
ಹೀಗೆ, ಸತ್ಯ, ಸದಾಚಾರ, ನಿಸ್ವಾರ್ಥತೆ, ಧರ್ಮಪರತೆ, ಪತಿತ ಪಾವನತ್ವ, ಸಮಾಜದ ಒಳಿತಿ ಗಾಗಿ ಸ್ವಸುಖ ತ್ಯಾಗ ಮುಂತಾದ ಗುಣಗಳಿಗೆ ಶ್ರೀರಾಮ ಮೂರ್ತರೂಪನಾಗಿದ್ದರೂ, ಲೋಕ ದಲ್ಲಿ ಅವನ ವ್ಯಕ್ತಿತ್ವವನ್ನು ಪ್ರಶ್ನಿಸಿದಷ್ಟು ಇನ್ನಾವ ಪೌರಾಣಿಕ ವ್ಯಕ್ತಿತ್ವವನ್ನೂ ಪರೀಕ್ಷೆಗೆ ಒಳಪಡಿಸಿರಲಿಕ್ಕಿಲ್ಲ.
ವಾಲಿ-ಶಂಭೂಕರ ವಧೆ, ಸೀತಾ ಪರಿತ್ಯಾಗ ಮತ್ತು ಅಗ್ನಿಪರೀಕ್ಷೆ ಮುಂತಾದ ರಾಮನ ಕಾರ್ಯಗಳು ಅನಾದಿಯಿಂದ ಪ್ರಶ್ನೆಗೊಳಪಟ್ಟಿವೆ ಮತ್ತು ಅವಕ್ಕೆ ಸಮರ್ಥ ಸಮಾಧಾನ ವನ್ನೂ ಸಾತ್ವಿಕರು ಕಂಡುಕೊಂಡಿದ್ದಾಗಿದೆ. ಡಿವಿಜಿಯವರು ‘ಶ್ರೀರಾಮ ಪರಿಚಕ್ಷಣಂ’ ಎಂಬ ತಮ್ಮ ಕಿರುಹೊತ್ತಿಗೆಯಲ್ಲಿ, ಶ್ರೀರಾಮನ ಚಾರಿತ್ರ್ಯದ ಕುರಿತಾದ ಬಹುತೇಕ ಸಂದೇಹ ಗಳಿಗೆ ಸಮಾಧಾನವನ್ನು ಸಮರ್ಥವಾಗಿ ಪ್ರತಿಪಾದಿಸಿರುವುದನ್ನು ಗಮನಿಸಬಹುದು.

ರಾಮಾಯಣ ಕಾಲಘಟ್ಟದಿಂದ ಮೊದಲ್ಗೊಂಡು ಇಂದಿನವರೆಗೂ ಜನರು ರಾಮನ ಗುಣಗಳನ್ನು ವಿಮರ್ಶಿಸುತ್ತಿದ್ದಾರೆ. ತಂದೆಯಾಗಿ, ಅಣ್ಣನಾಗಿ, ಸ್ವಾಮಿಯಾಗಿ, ವಿಶೇಷವಾಗಿ ರಾಜನಾಗಿ ಅವನು ಮೈಗೂಡಿಸಿಕೊಂಡಿದ್ದ ಆದರ್ಶಗಳನ್ನು ರೂಢಿಸಿಕೊಳ್ಳಲು ನಾವು ಯತ್ನಿಸದಿದ್ದರೂ, ಅವನ ಗುಣವನ್ನು ಮಾತ್ರ ವಿಮರ್ಶಿಸುತ್ತಿದ್ದೇವೆ. ಈ ಎಲ್ಲ ವಿಮರ್ಶೆ ಗಳನ್ನು ಮೀರಿ ನಿಂತಿದ್ದರಿಂದಲೇ ಆತ ಜಗನ್ಮಾನ್ಯನಾಗಿ, ಭಾರತೀಯರ ಅಸ್ಮಿತೆಯಾಗಿ ಇನ್ನೂ ನಿಂತಿರುವುದು ಇರಬೇಕು. ಇತಿಹಾಸದುದ್ದಕ್ಕೂ ನಾವು ಬಹಳ ರಾಜರುಗಳ ಉತ್ತಮ ಆಡಳಿತವನ್ನು ನೋಡಿದ್ದೇ ವಾದರೂ, ‘ರಾಮರಾಜ್ಯ’ ಎಂಬ ಪರಿಕಲ್ಪನೆಯು ಇಂದಿಗೂ ಸಂತೃಪ್ತ, ಪರಿಪೂರ್ಣ ಸಮಾ ಜಕ್ಕೆ ಸಮಾನಾರ್ಥಕವಾಗಿ ಬಳಕೆಯಲ್ಲಿದೆ.
ಶ್ರೀರಾಮನ ದೈವತ್ವ ಅಥವಾ ಅವತಾರವನ್ನು ಗಣಿಸಿದರೂ, ಬೇರೆಲ್ಲ ದೇವತೆಗಳು/ಅವತಾರಿಗಳಿಗೆ ಹೋಲಿಸಿದರೆ ರಾಮನಷ್ಟು ಜನಾಕರ್ಷಣೆಯನ್ನು, ಜಾತಿ-ಧರ್ಮ ಮೀರಿದ ಜನಮನ್ನಣೆಯನ್ನು ಹೊಂದಿರುವ ದೇವತೆಗಳು ಯಾರೂ ಇಲ್ಲವೆಂದು ನನ್ನ ಭಾವನೆ. ಬಹುತೇಕ ಎಲ್ಲಾ ಹಿಂದೂ ಸಮುದಾಯಗಳೂ ತಮ್ಮ ನಡುವಿನ ಮತ-ವೈರುಧ್ಯಗಳನ್ನು ಮೀರಿ ನಿಂತು ಪೂಜಿಸುವ ದೇವರಾಗಿದ್ದಾನೆ ಶ್ರೀರಾಮ.
ಹಾಗಾಗಿ, ಒಟ್ಟಾರೆಯಾದ ಆದರ್ಶ ಹಿಂದೂ ಸಮಾಜವನ್ನು ಆತ ಪ್ರತಿನಿಧಿಸುತ್ತಾನೆ ಎನ್ನಬಹುದು. ಪ್ರಾಚೀನ ಸಂಪ್ರದಾಯಗಳು ಮತ್ತು ಆಧ್ಯಾತ್ಮಿಕ ಜ್ಞಾನದಲ್ಲಿ ಮುಳುಗಿರುವ ಭಾರತವು, ಕಾಲಾತೀತ ಮಹಾಕಾವ್ಯವಾದ ರಾಮಾಯಣದಲ್ಲಿ ತನ್ನ ಸಾಂಸ್ಕೃತಿಕ ಕೇಂದ್ರ ಬಿಂದುವನ್ನು ಇಂದಿಗೂ ಕಂಡುಕೊಳ್ಳುತ್ತದೆ. ಈ ಐತಿಹಾಸಿಕ ನಿರೂಪಣೆಯ ಹೃದಯ ಭಾಗದಲ್ಲಿ ಸದ್ಗುಣ, ನೀತಿ ಮತ್ತು ಧರ್ಮದ ಮೂಲತತ್ವದ ಸಾಕಾರ ರೂಪವಾದ ಶ್ರೀರಾಮ ನಿಲ್ಲುತ್ತಾನೆ. ಈ ವ್ಯಾಪಕ ಅನ್ವೇಷಣೆಯಲ್ಲಿ ನಾವು ಆತನ ವ್ಯಕ್ತಿತ್ವದ ಬಹುಮುಖಿ ಅಂಶ ಗಳನ್ನು ಕಾಣುತ್ತೇವೆ.
ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಸಾಮಾಜಿಕ ನೀತಿಗಳ ಮೇಲಿನ ಆತನ ಪ್ರಭಾವ ವನ್ನು ನಿತ್ಯವೂ ಅನುಭವಿಸುತ್ತೇವೆ. ರಾಮನು ಅಯೋಧ್ಯೆಯಲ್ಲಿ ಜನಿಸಿದಾಗಿನಿಂದ ಮೊದ ಲ್ಗೊಂಡು, ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಮರಳುವವರೆಗಿನ ನೈತಿಕ ಸಂದಿಗ್ಧತೆ ಗಳು, ಕೌಟುಂಬಿಕ ಬಂಧಗಳು ಮತ್ತು ದೈವಿಕ ಮಧ್ಯಸ್ಥಿಕೆಗಳೊಂದಿಗೆ ಬೆಸೆದು ಕೊಂಡಿರುವ ಈ ಮಹಾಕಾವ್ಯವು ಲಕ್ಷಾಂತರ ಹಿಂದೂಗಳ ಜೀವನಕ್ಕೆ ಮಾರ್ಗದರ್ಶಿ ಸೂತ್ರವನ್ನು ಒದಗಿ ಸುವ ಗ್ರಂಥವಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದೆ.
ನೀತಿ ಮತ್ತು ಕರ್ತವ್ಯವನ್ನು ಒಳಗೊಂಡ ಧರ್ಮದ ಪರಿಕಲ್ಪನೆಯು ರಾಮನ ಜೀವನದಲ್ಲಿ ತನ್ನ ಅತ್ಯುನ್ನತ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತದೆ. ಆತ ವೈಯಕ್ತಿಕ ಸುಖಗಳನ್ನು ತ್ಯಾಗ ಮಾಡುತ್ತಾ ಕರ್ತವ್ಯಕ್ಕೆ ಬದ್ಧನಾಗಿರುವುದು ಕಾಲಾಬಾಧಿತವಾಗಿ ಅಳಿಸಲಾಗದ ಉದಾಹರಣೆಯಾಗಿ ನಮ್ಮ ಮುಂದೆ ನಿಲ್ಲುತ್ತದೆ. ರಾಮನು ಮಗನಾಗಿ, ಗಂಡನಾಗಿ, ಅಣ್ಣ ನಾಗಿ ಮತ್ತು ರಾಜನಾಗಿ ತನ್ನ ಪಾತ್ರಗಳನ್ನು ನಿಷ್ಕಳಂಕ ಸಮಗ್ರತೆಯೊಂದಿಗೆ ಸಮತೋಲನಗೊಳಿಸಿದ್ದಕ್ಕಾಗಿಯೇ ‘ಮರ್ಯಾದಾ ಪುರುಷೋತ್ತಮ’ ಎಂದು ಕರೆಸಿ ಕೊಳ್ಳುತ್ತಾನೆ.
ನ್ಯಾಯ, ಸಮಾನತೆ ಮತ್ತು ಸಹಾನುಭೂತಿಯ ತತ್ವಗಳು ಅವನ ಆಳ್ವಿಕೆಗೆ ಆಧಾರವಾಗಿ ದ್ದರಿಂದ ಅದನ್ನು ‘ಆದರ್ಶ ಆಡಳಿತ’ವೆಂದು ಸಾರಲಾಗಿದೆ. ಗಾಂಧೀಜಿ ಕೂಡ ಸದಾ ಹಂಬಲಿಸುತ್ತಿದ್ದ ‘ರಾಮರಾಜ್ಯ’ದ ಪರಿಕಲ್ಪನೆಯನ್ನು ಅನುಕರಿಸಲು ಯತ್ನಿಸುವ ಮೂಲಕ ಅನೇಕ ಆಡಳಿತಗಾರರು ರಾಮನ ನಾಯಕತ್ವ ಶೈಲಿಯಿಂದ ಸ್ಪೂರ್ತಿ ಪಡೆದಿ ದ್ದಾರೆ.
ಭಾರತೀಯ ಸಂಸ್ಕೃತಿಯ ಮೇಲಿನ ರಾಮನ ಛಾಪು, ಅವನಿಗೆ ಸಮರ್ಪಿತವಾದ ಹಬ್ಬ-ಸಂಪ್ರದಾಯ-ಆಚರಣೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ರಾವಣನನ್ನು ಸೋಲಿಸಿದ ನಂತರ ರಾಮನು ಅಯೋಧ್ಯೆಗೆ ಮರಳಿದ ನೆನಪನ್ನು ದೀಪಾವಳಿ ಹಬ್ಬವು ನೀಡಿದರೆ, ಶ್ರೀರಾಮನವಮಿಯು ಅವನ ಹುಟ್ಟನ್ನು ಸಂಭ್ರಮಿಸುವ ಹಬ್ಬವಾಗಿದೆ.
ಲೌಕಿಕತೆಯನ್ನೂ ಮೀರಿದ ಆಳವಾದ ಆಧ್ಯಾತ್ಮಿಕ ಮಹತ್ವವನ್ನೂ ಹೊಂದಿರುವ ರಾಮ ನನ್ನು ಭಾರತದಲ್ಲಿ ಐತಿಹಾಸಿಕವಾಗಿ ಮಾತ್ರವಲ್ಲದೆ ದೈವಿಕತೆಯ ಸಾಕಾರರೂಪ ವಾಗಿ ಯೂ ಗ್ರಹಿಸಲಾಗುತ್ತದೆ. ‘ಶ್ರೀರಾಮ ಜಯರಾಮ ಜಯಜಯರಾಮ’ ಎಂಬ ತ್ರಯೋದಶಾ ಕ್ಷರೀ ಮಂತ್ರದ ಪಠಣ/ಜಪವನ್ನು ಪ್ರಬಲ ಆಧ್ಯಾತ್ಮಿಕ ಅಭ್ಯಾಸವೆಂದು ಪರಿಗಣಿಸಲಾಗು ತ್ತದೆ ಮತ್ತು ಇದನ್ನು 13 ಕೋಟಿ ಬಾರಿ ಜಪಿಸಿದರೆ ಶ್ರೀರಾಮನ ಸಾಕ್ಷಾತ್ಕಾರವಾಗುತ್ತದೆ ಎಂದೂ ನಂಬಲಾಗುತ್ತದೆ.
ಅಯೋಧ್ಯೆ ಸೇರಿದಂತೆ ರಾಮನಿಗೆ ಸಮರ್ಪಿತವಾದ ಹಲವಾರು ದೇಗುಲಗಳು ಭಾರತ ದಾದ್ಯಂತ ಇದ್ದು, ಲಕ್ಷಾಂತರ ಜನರ ಪಾಲಿಗೆ ಅವು ಆಧ್ಯಾತ್ಮಿಕ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತವೆ. ಆಳವಾದ ತಾತ್ವಿಕ ಪರಿಣಾಮಗಳನ್ನು ಹೊಂದಿರುವ ರಾಮನ ಜೀವನ ಬೋಧನೆಗಳು ಭಾರತೀಯ ತತ್ವಶಾಸ್ತ್ರದ ಶ್ರೀಮಂತಿಕೆಗೆ ಮಹತ್ವದ ಕೊಡುಗೆ ನೀಡಿವೆ.
ರಾಮಾಯಣವು ನೈತಿಕ ಮತ್ತು ತಾತ್ವಿಕ ಪ್ರತಿಬಿಂಬಗಳ ಮೂಲವಾಗಿ ಕಾರ್ಯ ನಿರ್ವಹಿ ಸುತ್ತದೆ. ಈ ಕುರಿತು ತತ್ವಜ್ಞಾನಿಗಳು, ವಿದ್ವಾಂಸರು ಅನಾದಿಯಿಂದಲೂ ವ್ಯಾಪಕ ಸಂವಾದ ಗಳಲ್ಲಿ ತೊಡಗಿಸಿಕೊಂಡಿದ್ದಿದೆ. ರಾಮಾಯಣ, ಅಂದರೆ ರಾಮ ಸವೆಸಿದ ಹಾದಿಯನ್ನು ಸತ್ಯ ಮತ್ತು ಸದುದ್ದೇಶದ ಮಾನವ ಅನ್ವೇಷಣೆಯ ರೂಪಕವೆಂದು ವ್ಯಾಖ್ಯಾ ನಿಸಿದ್ದಾರೆ.
ರಾಮನ ಪ್ರಭಾವವು ಧಾರ್ಮಿಕ ಮತ್ತು ತಾತ್ವಿಕ ಕ್ಷೇತ್ರಗಳನ್ನೂ ಮೀರಿ ಕಲೆ-ಸಾಹಿತ್ಯ ಗಳಿಗೂ ವಿಸ್ತರಿಸಿದೆ. ರಾಮನ ಕಥೆಯನ್ನು ವಾಲ್ಮೀಕಿಯ ಮಹಾಕಾವ್ಯದಿಂದ ಹಿಡಿದು ತುಳಸೀದಾಸರ ‘ರಾಮಚರಿತಮಾನಸ’ದವರೆಗಿನ ಅಸಂಖ್ಯಾತ ಶೈಲಿಗಳು ಮತ್ತು ಭಾಷೆ ಗಳಲ್ಲಿ ಪುನರಾವರ್ತಿಸಲಾಗಿದೆ. ರಾಮನ ಪಾತ್ರದ ಕಾಲಾತೀತ ಆಕರ್ಷಣೆಯು ತಲೆಮಾರು ಗಳಿಂದ ಕವಿಗಳು, ಬರಹಗಾರರು, ಕಲಾವಿದರಿಗೆ ಸ್ಪೂರ್ತಿ ನೀಡಿದೆ.
ಸಾಹಿತ್ಯ, ಯಕ್ಷಗಾನ, ನಾಟಕದಂಥ ವೈವಿಧ್ಯಮಯ ನಿರೂಪಣಾ ಮಾಧ್ಯಮಗಳಲ್ಲಿ ರಾಮಾ ಯಣವು ಶಾಶ್ವತ ಪರಂಪರೆಯನ್ನು ಸೃಷ್ಟಿಸಿದೆ, ರಾಮನ ಕುರಿತು ಪೂಜ್ಯಭಾವನೆಯನ್ನು ಮೂಡಿಸಿದೆ. ಹಾಗಂತ ಅದು ವಿವಾದಗಳು ಮತ್ತು ಚರ್ಚೆಗಳಿಂದ ಮುಕ್ತವಾಗಿಲ್ಲ. ಸೀತೆಯ ವನವಾಸ ಮತ್ತು ಅಗ್ನಿಪರೀಕ್ಷೆಯಂಥ ಪ್ರಸಂಗಗಳ ವ್ಯಾಖ್ಯಾನಗಳು ಲಿಂಗ, ನೈತಿಕತೆ ಮತ್ತು ಸಾಮಾಜಿಕ ಕಟ್ಟುಪಾಡುಗಳ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದ್ದಿದೆ.
ಈ ಕುರಿತು ಸಮಕಾಲೀನ ವಿದ್ವಾಂಸರು ವಿಮರ್ಶಾತ್ಮಕ ವಿಶ್ಲೇಷಣೆಗಳಲ್ಲಿ ತೊಡಗುತ್ತಾರೆ, ಪ್ರಾಚೀನ ನಿರೂಪಣೆಯನ್ನು ಆಧುನಿಕ ದೃಷ್ಟಿಕೋನಗಳೊಂದಿಗೆ ಸಮನ್ವಯಗೊಳಿಸಲು ಯತ್ನಿಸುತ್ತಾರೆ. ರಾಮನ ಪ್ರಭಾವವು ಭೌಗೋಳಿಕ ಎಲ್ಲೆಯನ್ನೂ ಮೀರಿ ವಿಶ್ವಾದ್ಯಂತದ ಜನರೊಂದಿಗೆ ಅನುರಣಿಸುತ್ತದೆ.
ರಾಮಾಯಣದಲ್ಲಿ ಹುದುಗಿರುವ ಪ್ರೀತಿ, ಕರ್ತವ್ಯ, ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ ಮುಂತಾದ ಸಂಗತಿಗಳು, ರಾಮನು ಕೇವಲ ಹಿಂದೂ ದೇವರು ಎನ್ನುವುದಕ್ಕಿಂತ ಒಬ್ಬ ಮಹಾಮಾನವ ಎಂಬುದಾಗಿ ಬಿಂಬಿಸುತ್ತವೆ. ರಾಮನನ್ನು ‘ಪರಿಪೂರ್ಣ ನೈತಿಕ ಮತ್ತು ಸಾಮಾಜಿಕ ನಡವಳಿಕೆಯನ್ನು ಪ್ರದರ್ಶಿಸುವ ವ್ಯಕ್ತಿ’ ಎಂದು ಸರಳವಾಗಿ ವಿವರಿಸಬಹುದು.
“ರಾಮನು ಸತ್ಯ ಮತ್ತು ನೈತಿಕತೆಯ ಪ್ರತಿರೂಪ, ಆದರ್ಶ ಪುತ್ರ, ಆದರ್ಶ ಪತಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆದರ್ಶ ರಾಜನ ಸಾಕಾರರೂಪ" ಎಂದಿದ್ದಾರೆ ಸ್ವಾಮಿ ವಿವೇಕಾ ನಂದರು. ಅವನ ಪೌರುಷವು ದುಷ್ಟರ ಮೇಲಿನ ವಿಜಯದ ಸಂಕೇತವಾಗಿದ್ದರೆ, ಮನುಷ್ಯ ನೊಬ್ಬ ತನ್ನ ನೈತಿಕ ಬದ್ಧತೆಗಳನ್ನು ಹೇಗೆ ಪೂರೈಸಬೇಕು, ಸಾಮಾಜಿಕ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ತನ್ನ ಮಿತಿಗಳನ್ನು ಹೇಗೆ ಕಟ್ಟುನಿಟ್ಟಾಗಿ ಅನುಸರಿಸ ಬೇಕು ಎಂಬು ದನ್ನು ಅವನ ಜೀವನಶೈಲಿಯು ನಿರೂಪಿಸುತ್ತದೆ.
ಹಾಗಾಗಿ ಸಾಮಾನ್ಯರು ಅನುಸರಿಸಲೂ ಅದು ಯೋಗ್ಯವಾಗಿದೆ ಎಂದು ಪರಿಗಣಿಸಲಾಗಿದೆ. ರಾಮನನ್ನು ಸುತ್ತುವರಿದಿರುವ ಮೌಲ್ಯ ವ್ಯವಸ್ಥೆಯನ್ನು ನಮ್ಮ ಸಮಾಜವು ಸ್ವಲ್ಪ ಮಟ್ಟಿಗೆ ಅರಿತಿದೆ ಎನ್ನಬಹುದು. ನಮ್ಮ ಸಮಾಜದಲ್ಲಿಂದು ನೈತಿಕ ಬಿಕ್ಕಟ್ಟು ತಲೆದೋರಿದ್ದು, ಭ್ರಷ್ಟಾಚಾರ, ಅಪ್ರಾಮಾಣಿಕತೆ, ಹಿಂಸೆ, ಮೋಸಗಳ ಪಿಡುಗು ಹಾಸು ಹೊಕ್ಕಾಗಿಬಿಟ್ಟಿದೆ.
ಅತ್ಯಾಚಾರದ ಘಟನೆಗಳು ಹೆಚ್ಚುತ್ತಿವೆ, ಭ್ರಷ್ಟಾಚಾರವು ಎಲ್ಲಾ ಹಂತಗಳಲ್ಲೂ ಬೇರೂರಿದೆ, ಹಿಂಸಾಚಾರವು ಸ್ವೀಕಾರಾರ್ಹವಾಗುತ್ತಿದೆ. ಹೀಗಾಗಿ ನಾವಿಂದು ರಾಮನ ದೈವತ್ವದ ಪಾತ್ರ ಕ್ಕಿಂತ ಅವನ ಮಾನವೀಯ ಗುಣಗಳು ಮತ್ತು ಧರ್ಮಪರಿಪಾಲನೆಯ ಕುರಿತಾಗಿ ಚರ್ಚಿಸ ಬೇಕಾಗಿದೆ. ಹೋರಾಟಗಳಿಗೆ ತತ್ವದ ನೆಲೆಗಟ್ಟು ನೀಡಬೇಕಿದೆ; ಅಸ್ಮಿತೆಗಾಗಿ ಹೋರಾಡುವ ಬದಲು, ಸತ್ಯಸಂಧತೆ, ಸಮಗ್ರತೆ, ಪ್ರಾಮಾಣಿಕತೆಗಳನ್ನು ಸಮಾಜದಲ್ಲಿ ಪುನರುಜ್ಜೀವನ ಗೊಳಿಸುವುದಕ್ಕಾಗಿ ಹೋರಾಡಬೇಕಿದೆ.
ಅನೈತಿಕತೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತಗಳು ಹಿಂದೂ ಮೌಲ್ಯಗಳಲ್ಲ. ಹಾಗಾದರೆ ನಾವು ಇಷ್ಟು ದೊಡ್ಡ ಮಟ್ಟದಲ್ಲಿ ಅವನ್ನು ಹೇಗೆ ಸಹಿಸಲಾದೀತು? ಅವುಗಳ ಕುರಿತಾದ ಚರ್ಚೆಗೆ ನಾವು ರಾಮನನ್ನೇಕೆ ಕರೆತರುತ್ತಿಲ್ಲ? ನಿಸ್ವಾರ್ಥಿ ರಾಜನಾಗಿದ್ದ ರಾಮನು ತನಗಿಂತ ತನ್ನ ಜನರ ಬಗ್ಗೆ ಮೊದಲು ಯೋಚಿಸುತ್ತಿದ್ದ ಎಂಬುದನ್ನು ನಾವು ಮರೆತಿದ್ದೇಕೆ? ಜನರಿಂದು ರಾಮನ ಹೆಸರನ್ನಷ್ಟೇ ಅನುಸಂಧಾನ ಮಾಡುತ್ತಾ ಅವನ ‘ಧರ್ಮ’ವನ್ನು ಮರೆತು ಬಿಟ್ಟಿದ್ದಾರೆ.
ಆತ ಸ್ಥಾಪಿಸಿದ ‘ಮರ್ಯಾದೆ’ಯನ್ನು ನಿಯತವಾಗಿ ಉಲ್ಲಂಘಿಸಲಾಗುತ್ತಿದೆ. ಹಾಗಾಗಬಾರ ದಲ್ಲವೇ? ಭಾರತೀಯ ಸಂಸ್ಕೃತಿಯ ವಿಶಾಲ ವಿಸ್ತಾರದಲ್ಲಿ ಇಂದಿಗೂ ದಾರಿದೀಪವಾಗಿ ನಿಂತಿರುವ ರಾಮನು, ನೀತಿ ಮತ್ತು ಸದ್ಗುಣಗಳ ಮಾರ್ಗವನ್ನು ಬೆಳಗಿಸುತ್ತಿದ್ದಾನೆ. ಧರ್ಮ ಗ್ರಂಥಗಳು, ಹಬ್ಬಗಳು, ಸಂಪ್ರದಾಯಗಳು ಮತ್ತು ಕಲಾತ್ಮಕ ಅಭಿವ್ಯಕ್ತಿಗಳಲ್ಲಿನ ಅವನ ಪರಂಪರೆಯು ಆಧ್ಯಾತ್ಮಿಕತೆ ಮತ್ತು ನೈತಿಕತೆಯಲ್ಲಿ ಆಳವಾಗಿ ಬೇರೂರಿರುವ ರಾಷ್ಟ್ರದ ನೀತಿಗಳನ್ನು ರೂಪಿಸುತ್ತಲೇ ಇವೆ. ಭಾರತವು ವಿಕಸನಗೊಳ್ಳುತ್ತಿದ್ದಂತೆ ರಾಮನ ಕಾಲಾತೀತ ಆದರ್ಶಗಳು ಸ್ಪೂರ್ತಿಯ ಮೂಲವಾಗಿ ಪ್ರಸ್ತುತತೆಯನ್ನು ಉಳಿಸಿಕೊಂಡಿವೆ.
ಅವನ್ನು ಮುಂದುವರಿಸಿಕೊಂಡು ಹೋಗಲು ಕಠಿಣವಾಗಿ ಹೋರಾಡಬೇಕಿದೆ. ಶ್ರೀರಾಮನ ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ನಮ್ಮ ಇಂದಿನ ಅನೇಕ ಸಂಕೀರ್ಣ ಸಮಸ್ಯೆಗಳು ದೂರವಾಗುವುದರಲ್ಲಿ ಸಂಶಯವಿಲ್ಲ. ಹಾಗೆ ನಾವು ರಾಮನ ಆದರ್ಶಗಳನ್ನು ಕಿಂಚಿತ್ತಾ ದರೂ ಅಳವಡಿಸಿಕೊಂಡರೆ ಮಾತ್ರವೇ ಶ್ರೀರಾಮನವಮಿಯ ಆಚರಣೆಯು ಅರ್ಥ ಪೂರ್ಣ ವಾಗುತ್ತದೆ.