ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

R T Vittalmurthy Column: ಬೊಮ್ಮಾಯಿ ರೂಪಿಸಿದ ಸಂಕಷ್ಟ ಸೂತ್ರ

ಬಿಜೆಪಿ ಮೂಲಗಳ ಪ್ರಕಾರ, ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಸಂಕಷ್ಟ ಸೂತ್ರ ಬಹುತೇಕ ಎಲ್ಲರಿಗೂ ಒಪ್ಪಿಗೆಯಾಗಿದೆ. ಅರ್ಥಾತ್, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನಿಳಿಸಲು ಎಲ್ಲ ಬಗೆಯ ಹೋರಾಟ ನಡೆಸುವುದು, ಒಂದು ವೇಳೆ ಅದು ಯಶಸ್ವಿಯಾಗದೆ ಇದ್ದರೆ ತಮ್ಮ ತಮ್ಮ ಪಾಳೇಪಟ್ಟುಗಳನ್ನು ಭದ್ರಗೊಳಿಸಿಕೊಂಡು ಹಿತ ಕಾಪಾಡಿ ಕೊಳ್ಳುವುದು ಅನಿವಾರ್ಯ ಎಂಬುದು ಮನದಟ್ಟಾಗಿದೆ.

ಮೂರ್ತಿಪೂಜೆ

ದಿಲ್ಲಿಯ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಸಂಕಷ್ಟ ಸೂತ್ರ ಬಹುತೇಕ ಎಲ್ಲರಿಗೂ ಒಪ್ಪಿಗೆಯಾಗಿದೆ. ಅರ್ಥಾತ್, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನಿಳಿಸಲು ಹೋರಾಡುವದು, ಅದು ಯಶಸ್ವಿಯಾಗದಿದ್ದರೆ ತಮ್ಮ ತಮ್ಮ ಪಾಳೇಪಟ್ಟು ಗಳನ್ನು ಭದ್ರಗೊಳಿಸಿಕೊಳ್ಳುವುದು ಅನಿವಾರ್ಯ ಎಂಬುದು ಮನದಟ್ಟಾಗಿದೆ.

ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ನಾಯಕ ಅಮಿತ್ ಶಾ ಅವರನ್ನು ಕಳೆದ ವಾರ ಭೇಟಿ ಮಾಡಿದ್ದಾರೆ. ಸ್ವತಃ ಅಮಿತ್ ಶಾ ಅವರ ಸೂಚನೆಯ ಹಿನ್ನೆಲೆ ಯಲ್ಲಿ ನಡೆದ ಈ ಭೇಟಿ ಸಂದರ್ಭದಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ಅಂದ ಹಾಗೆ, ಈ ಚರ್ಚೆಯ ಸಂದರ್ಭದಲ್ಲಿ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ವಿಶೇಷವಾಗಿ ಪ್ರಸ್ತಾಪ ವಾಗಿದೆ. ಅಧಿಕಾರ ಹಂಚಿಕೆಯ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಧ್ಯೆ ನಡೆಯುತ್ತಿರುವ ಜುಗಲ್‌ಬಂದಿಯ ಬಗ್ಗೆ ಅಮಿತ್ ಶಾ ಹೆಚ್ಚು ಆಸಕ್ತಿಯಿಂದ ಕುಮಾರಸ್ವಾಮಿಯವರನ್ನು ಕೇಳಿದ್ದಾರೆ.

“ಕುಮಾರ್ ಸೋಮೀಜಿ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆಯ ವಿಷಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಮಧ್ಯೆ ನಡೆಯುತ್ತಿರುವ ಹಗ್ಗಜಗ್ಗಾಟ ಯಾವ ಹಂತ ತಲುಪ ಬಹುದು? ಒಂದು ವೇಳೆ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟು ಕೊಟ್ಟರೆ, ಇಲ್ಲವೇ ಬಿಟ್ಟುಕೊಡದೆ ಹೋದರೆ ಆಗುವ ಪರಿಣಾಮ ಏನು" ಅಂತ ಪ್ರಶ್ನಿಸಿದ್ದಾರೆ.

ಹಾಗೆಯೇ ಮುಂದುವರಿದು, “ನನಗನ್ನಿಸುವ ಪ್ರಕಾರ, ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಟ್ಟರೆ ಸಿದ್ದರಾಮಯ್ಯ ಅವರ ಬೆಂಬಲಿಗರು ಕಾಂಗ್ರೆಸ್‌ನಿಂದ ಹೊರ ಬರುತ್ತಾರೆ. ಒಂದು ವೇಳೆ ಅವರು ಅಧಿಕಾರ ಬಿಟ್ಟುಕೊಡದೆ ಹೋದರೆ ಡಿ.ಕೆ.ಶಿವಕುಮಾರ್ ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ತೊರೆಯುತ್ತಾರೆ.

ಇದನ್ನೂ ಓದಿ: R T Vittalmurthy Column: ಯುದ್ಧಕ್ಕೆ ರೆಡಿಯಾಗಿ ಅಂದ್ರಂತೆ ಸಿದ್ದು

ಹೀಗೆ ಯಾವುದೇ ಬೆಳವಣಿಗೆಗಳು ನಡೆಯಲಿ, ಅದನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಬಿಜೆಪಿಗೆ ಸಾಧ್ಯವಿದೆ ಮತ್ತು ಎನ್‌ಕ್ಯಾಶ್ ಮಾಡಿಕೊಳ್ಳಬೇಕು ಕೂಡಾ. ಹೀಗಾಗಿಯೇ ನಾವು ಕರ್ನಾಟಕದಲ್ಲಿ ಏನಾಗಲಿದೆ ಎಂಬ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಆದರೆ ಈ ವಿಷಯದಲ್ಲಿ ಇನ್ನಷ್ಟು ಸೂಕ್ಷ್ಮ ವಾಗಿ ಗಮನಿಸುವ ಅಗತ್ಯವಿದೆ ಎಂದು ನಿಮ್ಮನ್ನು ಕೇಳುತ್ತಿದ್ದೇನೆ. ನಿಮಗೇನನ್ನಿಸುತ್ತದೆ?" ಎಂದು ಅಮಿತ್ ಶಾ ಸ್ಪಷ್ಟವಾಗಿ ಕೇಳಿದ್ದಾರೆ.

ಯಾವಾಗ ಅಮಿತ್ ಶಾ ಅವರು ಈ ವಿಷಯದ ಬಗ್ಗೆ ಪ್ರಸ್ತಾಪಿಸಿದರೋ ಆಗ ಕುಮಾರಸ್ವಾಮಿ ಅವರು, “ಸರ್, ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುzಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕು ಮಾರ್ ಅವರ ಮಧ್ಯೆ ಸಂಘರ್ಷ ನಡೆಯುತ್ತಿರುವುದೇನೋ ನಿಜ. ಆದರೆ ನನಗನ್ನಿಸುವ ಪ್ರಕಾರ ಅದು ತಾರಕಕ್ಕೆ ಹೋಗುವುದಿಲ್ಲ. ಅಂದರೆ ಸರಕಾರ ಉರುಳುವ ಮಟ್ಟಕ್ಕೆ ಹೋಗುವುದಿಲ್ಲ" ಎಂದಿದ್ದಾರೆ.

ಕುಮಾರಸ್ವಾಮಿಯವರ ಮಾತುಗಳನ್ನು ಕೇಳಿದ ಅಮಿತ್ ಶಾ ಅಚ್ಚರಿಗೊಂಡಿದ್ದಲ್ಲದೆ, “ಅದು ಹೇಗೆ ಕುಮಾರ್ ಸೋಮೀಜಿ, ಅಷ್ಟು ಬಹಿರಂಗವಾಗಿ ಆ ಇಬ್ಬರ ಮಧ್ಯೆ ಕದನ ನಡೆಯುತ್ತಿದೆ. ಇಬ್ಬರಿಗೂ ಹತ್ತಿರವಾದವರು ನಮ್ಮ ಪಕ್ಷದ ಕೆಲ ನಾಯಕರ ಜತೆ ಸಂಪರ್ಕದಲ್ಲಿದ್ದಾರೆ. ಅವರ ಪ್ರಕಾರ, ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟುಕೊಟ್ಟರೂ ಸರಕಾರಕ್ಕೆ ಅಪಾಯವಿದೆ, ಬಿಟ್ಟು ಕೊಡದಿದ್ದರೂ ಕಾಂಗ್ರೆಸ್ ಸರಕಾರ ಅಲುಗಾಡಲಿದೆ" ಎಂದಿದ್ದಾರೆ. ಆದರೆ ಈ ಹಂತದಲ್ಲಿ ಮಾತನಾಡಿದ ಕುಮಾರಸ್ವಾಮಿಯವರು, “ಸರ್, ನಾನು ಸಿದ್ದರಾಮಯ್ಯ ಅವರನ್ನು ಸುದೀರ್ಘ ಕಾಲದಿಂದ ನೋಡಿಕೊಂಡು ಬಂದಿದ್ದೇನೆ. ಎಷ್ಟೇ ಆದರೂ ಅವರು ನಮ್ಮ ಪಕ್ಷದಲ್ಲಿದ್ದವರು. ಅವರು ಯಾವ ಹೆಜ್ಜೆಗಳನ್ನಿಡುತ್ತಾರೆ ಅಂತ ನನಗೆ ಗೊತ್ತಿದೆ. ನನಗಿರುವ ಮಾಹಿತಿಯ ಪ್ರಕಾರ ಯಾವ ಕಾರಣಕ್ಕೂ ಅವರನ್ನು ಬಲವಂತವಾಗಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಸಾಧ್ಯವೇ ಇಲ್ಲ.

2

ಒಂದು ವೇಳೆ ಹಾಗೇನಾದರೂ ಮಾಡಿದರೆ ಸರಕಾರಕ್ಕೆ ಅಪಾಯವಾಗಬಹುದು. ಇದು ಕಾಂಗ್ರೆಸ್ ವರಿಷ್ಠರಿಗೂ ಗೊತ್ತಿದೆ. ಹೀಗಾಗಿ ಅವರು ಬಲವಂತವಾಗಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವು ದಿಲ್ಲ" ಎಂದಿದ್ದಾರೆ. ಆಗೆಲ್ಲ ಅಮಿತ್ ಶಾ ಅವರು, “ಹಾಗೇನಾದರೂ ಕಾಂಗ್ರೆಸ್ ವರಿಷ್ಠರು ಸಿದ್ದರಾ ಮಯ್ಯ ಅವರನ್ನು ಕೆಳಗಿಳಿಸಿ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಕೊಡದಿದ್ದರೆ ಶಿವಕುಮಾರ್ ಅವರು ಕಾಂಗ್ರೆಸ್‌ನಿಂದ ಹೊರಬರುವುದಿಲ್ಲವೇ?" ಎಂದು ಕೇಳಿದ್ದಾರೆ. ಆಗಲೂ ಕೂಲಾಗಿ ಉತ್ತರಿಸಿದ ಕುಮಾರಸ್ವಾಮಿ, “ಯಾವ ಕಾರಣಕ್ಕೂ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷವನ್ನು ತೊರೆಯುವುದಿಲ್ಲ. ಯಾಕೆಂದರೆ ಅವರ ರಾಜಕೀಯದ ಬಳ್ಳಿಗಳು ಕಾಂಗ್ರೆಸ್‌ ನಲ್ಲಿ ಗಟ್ಟಿಯಾಗಿವೆ. ಹೀಗಾಗಿ ಅವರು ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಒತ್ತಡ ಹೇರಿ ಮುಖ್ಯಮಂತ್ರಿ ಹುದ್ದೆ ಪಡೆಯಲು ಬಯಸುತ್ತಾರೆ. ಆದರೆ ಇಂಥ ಒತ್ತಡಗಳು ಕೆಲಸ ಮಾಡದೆ ನಿರಾಶೆಯಾದರೂ ಅವರು ಕಾಂಗ್ರೆಸ್ ಅನ್ನು ತೊರೆಯುವುದಿಲ್ಲ.

ಯಾಕೆಂದರೆ ಇವತ್ತು ಸರಕಾರದ ಮಟ್ಟದಲ್ಲಿ ಅವರು ತುಂಬ ಕಂಫರ್ಟಬಲ್ ಆಗಿದ್ದಾರೆ" ಎಂದು ವಿವರಿಸಿದ್ದಾರೆ. ಹೀಗೆ ಕುಮಾರಸ್ವಾಮಿ ಅವರಾಡಿದ ಮಾತನ್ನು ಕೇಳಿ ಯೋಚನೆಗೆ ಬಿದ್ದ ಅಮಿತ್ ಶಾ ಅವರು, “ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಬಲವಂತವಾಗಿ ಕೆಳಗಿಳಿಸಿದರೆ ಆಗೇನಾಗುತ್ತದೆ?" ಎಂದು ಪ್ರಶ್ನಿಸಿದ್ದಾರೆ.

ಆಗಲೂ ಕುಮಾರಸ್ವಾಮಿಯವರು, “ಸರ್, ಕಾಂಗ್ರೆಸ್ ವರಿಷ್ಠರು ಯಾವ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ಕೆಳಗಿಳಿಸುವುದಿಲ್ಲ. ಯಾಕೆಂದರೆ ಅದರ ಪರಿಣಾಮ ಏನಾಗುತ್ತದೆ ಅಂತ ಅವರಿಗೆ ಗೊತ್ತಿದೆ. ಹೀಗಾಗಿ ಅವರು ಸಿದ್ದರಾಮಯ್ಯ ಅವರ ಮನವೊಲಿಕೆ ಕಾರ್ಯವನ್ನು ಶುರು ಮಾಡುತ್ತಾರೆ. ಈ ಮನವೊಲಿಕೆ ಕಾರ್ಯ ತಕ್ಷಣವೇ ಫಲಪ್ರದವಾಗುತ್ತದೆ ಅಂತಲ್ಲ, ಆದರೆ ಮುಂದಿನ ದಿನಗಳಲ್ಲಿ ಅದು ಫಲಪ್ರದವಾಗಬಹುದು.

ಯಾಕೆಂದರೆ ಸಿದ್ದರಾಮಯ್ಯ ಅವರಿಗೂ ಕಾಂಗ್ರೆಸ್ ವರಿಷ್ಠರ ವಿಷಯದಲ್ಲಿ ಗೌರವವಿದೆ. ಹೀಗಾಗಿ ವರಿಷ್ಠರು ಮನವೊಲಿಸಿದರೆ ಅವರು ಕೆಲ ಕಾಲದ ನಂತರ ಅಧಿಕಾರ ಬಿಟ್ಟುಕೊಡಬಹುದು. ಆದ್ದರಿಂದ ಸದ್ಯದ ಸ್ಥಿತಿಯಲ್ಲಿ ಅವರು ಅಧಿಕಾರ ಬಿಟ್ಟುಕೊಟ್ಟರೂ, ಬಿಟ್ಟುಕೊಡದೆ ಹೋದರೂ ಸರಕಾರಕ್ಕೆ ಯಾವ ಅಪಾಯವೂ ಇಲ್ಲ" ಎಂದು ಹೇಳಿದ್ದಾರೆ.

ಯಾವಾಗ ಕುಮಾರಸ್ವಾಮಿಯವರು ಇಷ್ಟು ಸ್ಪಷ್ಟವಾಗಿ ವಿವರ ನೀಡಿದರೋ ಆಗ ಅಮಿತ್ ಶಾ ಅವರು, “ಪರಿಸ್ಥಿತಿ ಹೀಗಿದ್ದಾಗ ನಾವು ಇನ್ನಷ್ಟು ಕಾಲ ತಾಳ್ಮೆಯಿಂದ ಕಾಯುವುದೇ ಒಳ್ಳೆಯದು" ಎಂದು ಹೇಳಿ ಮೌನವಾದರಂತೆ.

ರಾಹುಲ್ ಮಾಡಿದ ಗೀತೋಪದೇಶ: ಈ ಮಧ್ಯೆ ದಿಲ್ಲಿಯ ಕಾಂಗ್ರೆಸ್ ಕಂಪೋಂಡಿನಿಂದ ಕುತೂ ಹಲಕಾರಿ ಸುದ್ದಿಯೊಂದು ತೇಲಿ ಬಂದಿದೆ. ಕರ್ನಾಟಕದ ಇಬ್ಬರು ಯುವ ನಾಯಕರಿಗೆ ರಾಹುಲ್ ಗಾಂಧಿಯವರು ಗೀತೋಪದೇಶ ಮಾಡಿದ್ದಾರೆ ಎಂಬುದೇ ಆ ಸುದ್ದಿ.

ಅಂದ ಹಾಗೆ, ಕರ್ನಾಟಕದಲ್ಲಿ ಕುರ್ಚಿಯ ಕಿತ್ತಾಟ ತಾರಕಕ್ಕೇರಿತ್ತಲ್ಲ? ಈ ಸಂದರ್ಭದಲ್ಲಿ ಇಲ್ಲಿನ ಬೆಳವಣಿಗೆಗಳ ಬಗ್ಗೆ ರಾಹುಲ್ ಗಾಂಧಿಯವರಿಗೆ ವಿವರ ನೀಡಲು ಮತ್ತು ಅಲ್ಲಿಂದ ಸಂದೇಶ ಹೊತ್ತು ತರಲು ಕರ್ನಾಟಕದ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ರಾದ ಪ್ರಿಯಾಂಕ್ ಖರ್ಗೆ ಆಗಾಗ ದಿಲ್ಲಿಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಈ ಇಬ್ಬರು ನಾಯಕರ ಜತೆ ಪ್ರತ್ಯೇಕವಾಗಿ ಮಾತನಾಡುತ್ತಿದ್ದ ರಾಹುಲ್ ಗಾಂಧಿಯವರು, “ನೀವು ಡಿ.ಕೆ.ಶಿವ ಕುಮಾರ್ ಅವರಿಗೆ ಸೂಕ್ಷ್ಮವಾಗಿ ಮೆಸೇಜು ಕೊಡಿ.ನಾವು ಸಿದ್ದರಾಮಯ್ಯ ಅವರಿಂದ ಬಲವಂತವಾಗಿ ಅಧಿಕಾರ ಕಿತ್ತುಕೊಳ್ಳುವುದು ಅಪಾಯಕಾರಿ.

ಹೀಗಾಗಿ ಮೆಲ್ಲಗೆ ಅವರ ಮನವೊಲಿಸುವ ಕೆಲಸ ಮಾಡೋಣ. ಆಮೇಲೆ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಸಿಗುವಂತೆ ಮಾಡೋಣ" ಎಂದು ಹೇಳುತ್ತಿದ್ದರಂತೆ. ಆದರೆ ಈ ಸಂದರ್ಭದಲ್ಲಿ ಅವರು ಅಧಿಕಾರ ಹಂಚಿಕೆಯ ರಗಳೆಯ ಬಗ್ಗೆ ಮಾತ್ರ ಮಾತನಾಡದೆ ಬೇರೆ ನೆಲೆಗೆ ತಲುಪಿ, “ರೀ, ನೀವು ಮಂತ್ರಿಗಳಾಗಿ ತುಂಬ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಬಗ್ಗೆ ತುಂಬ ಒಳ್ಳೆಯ ರಿಪೋರ್ಟ್ ಇದೆ. ಅದೇ ರೀತಿ ಬಿಜೆಪಿಯನ್ನು ಎದುರಿಸುವ ವಿಷಯದಲ್ಲೂ ನೀವು ಪರ್ ಫೆಕ್ಟ್‌ ಆಗಿದ್ದೀರಿ.

ರಾಜಕಾರಣದಲ್ಲಿ ಇವೆಲ್ಲ ನಿಮಗೆ ಪ್ಲಸ್ ಆಗುತ್ತವೆ ಎಂಬುದೇನೋ ನಿಜ. ಆದರೆ ಅಧಿಕಾರ ರಾಜಕಾರಣಕ್ಕೆ ಇದಿಷ್ಟೇ ಸಾಲುವುದಿಲ್ಲ. ಬದಲಿಗೆ ನಿಮ್ಮ ಬೆಂಬಲಕ್ಕೆ ಶಾಸಕರ ಪಡೆಯೂ ಇರಬೇಕು. ಹೀಗೆ ನಿಮ್ಮನ್ನು ಬಲವಾಗಿ ಬೆಂಬಲಿಸುವ ಶಾಸಕರು ಇಲ್ಲದಿದ್ದರೆ ನಾಳೆ ಮುಖ್ಯಮಂತ್ರಿ ಯಂಥ ಹುದ್ದೆಗೆ ನೀವು ಹೋಗುವುದು ಕಷ್ಟ" ಎಂದು ವಿವರಿಸಿದ್ದಾರೆ.

ಇದೇ ರೀತಿ ಮುಂದುವರಿದಿರುವ ಅವರು, “ನನಗನ್ನಿಸುವ ಪ್ರಕಾರ, ಭವಿಷ್ಯದ ಕರ್ನಾಟಕದ ನೇತೃತ್ವವನ್ನು ವಹಿಸಿಕೊಳ್ಳಲು ನೀವು ಅರ್ಹ ನಾಯಕರು. ಆದರೆ ಇಂಥ ಅರ್ಹತೆಗೆ ಶಾಸಕರ ಬಲವೂ ಇರಬೇಕು. ಹೀಗಾಗಿ ಈಗಿನಿಂದಲೇ ನೀವು ಪಕ್ಷದ ಶಾಸಕರ ವಿಶ್ವಾಸ ಗಿಟ್ಟಿಸುವ ಕೆಲಸವನ್ನು ಶುರು ಮಾಡಿ.

ಮುಂದಿನ ದಿನಗಳಲ್ಲಿ ಅದು ಕಣ್ಣಿಗೆ ಕಾಣುವಷ್ಟು ಪ್ರಖರವಾಗಿದ್ದರೆ ನೀವು ಮುಖ್ಯಮಂತ್ರಿ ಹುದ್ದೆಗೆ ರಬಹುದು. ಹಾಗೆ ನೀವು ಏರಬೇಕು ಎಂಬುದೇ ನನ್ನಾಸೆ" ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಯಾವಾಗ ಅವರು ಹೀಗೆ ಗೀತೋಪದೇಶ ಮಾಡಿದರೋ, ಆಗ ಸಚಿವರಾದ ಕೃಷ್ಣ ಭೈರೇಗೌಡ ಮತ್ತು ಪ್ರಿಯಾಂಕ್ ಖರ್ಗೆ ಯೋಚನೆಗೆ ಬಿದ್ದಿದ್ದಾರೆ ಎಂಬುದು ಲೇಟೆಸ್ಟು ಸುದ್ದಿ.

ಬೊಮ್ಮಾಯಿ ರೂಪಿಸಿದ ಸಂಕಷ್ಟ ಸೂತ್ರ: ಇನ್ನು ಕೆಲ ದಿನಗಳ ಹಿಂದೆ, ದಿಲ್ಲಿಯಲ್ಲಿರುವ ಹಿರಿಯ ನಾಯಕರೊಬ್ಬರ ಮನೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರ ಸಭೆ ನಡೆದಿದೆ. ಈ ಸಭೆಯಲ್ಲಿ ಮಾತನಾಡಿದ ಕೆಲ ನಾಯಕರು, “ಅಲ್ರೀ, ಈ ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಅಂತ ಎಷ್ಟೇ ಹೋರಾಟ ನಡೆದರೂ ಬಿಜೆಪಿಯ ವರಿಷ್ಠರು ಕಿವಿಯ ಮೇಲೆ ಹಾಕಿಕೊಳ್ಳು ತ್ತಿಲ್ಲ. ಹಾಗಂತ ಇದೇ ಸ್ಥಿತಿ ಮುಂದುವರಿದು ವಿಧಾನಸಭಾ ಚುನಾವಣೆಯನ್ನು ವಿಜಯೇಂದ್ರ ಅವರ ನೇತೃತ್ವದ ಎದುರಿಸುವ ಅನಿವಾರ್ಯತೆ ಸೃಷ್ಟಿಯಾದರೆ ನಮ್ಮ ಗತಿ ಏನು?" ಅಂತ ಚಿಂತೆಯಿಂದ ಕೇಳಿದ್ದಾರೆ.

“ಎಷ್ಟೇ ಆದರೂ ಯಡಿಯೂರಪ್ಪ ಅವರು ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾದವರು. ಹೀಗೆ ಅವರು ಮುಖ್ಯಮಂತ್ರಿಗಳಾಗಿದ್ದಾಗ ಆಡಳಿತದ ಮೇಲೆ ದೊಡ್ಡ ಮಟ್ಟದ ಕಂಟ್ರೋಲು ಇಟ್ಟು ಕೊಂಡು ‘ಡಿಫೆಕ್ಟೋ ಚೀಫ್ ಮಿನಿಸ್ಟರ್’ ತರಹ ಇದ್ದವರು ವಿಜಯೇಂದ್ರ. ಯಡಿಯೂರಪ್ಪ ನವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭಕ್ಕೆ ಹೋಲಿಸಿದರೆ, ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಆ ಪೋಸ್ಟಿನಲ್ಲಿ ಸುಪ್ರೀಮ್ ಪವರ್ ಚಲಾಯಿಸಿದವರು ವಿಜಯೇಂದ್ರ.

ಹೀಗಾಗಿ ಸಹಜವಾಗಿಯೇ ಅವರಿಗೆ ದೊಡ್ಡ ಮಟ್ಟದ ಶಕ್ತಿ ಇದೆ. ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ತಮ್ಮದೇ ನೇತೃತ್ವದಲ್ಲಿ ಬಿಜೆಪಿ ಹೋರಾಟ ನಡೆಸುವುದು ಅನಿವಾರ್ಯವಾದರೆ, ಈ ಹೋರಾಟಕ್ಕೆ ಅಗತ್ಯವಾದ ‘ಡೆಡ್ಲಿ’ ಶಸ್ತ್ರಾಸ್ತ್ರಗಳನ್ನು ಒದಗಿಸುವ ಕೋಠಿಗಳೂ ಅವರ ಬಳಿ ಇವೆ. ಹೀಗೆ ಎಲ್ಲ ಶಕ್ತಿ ಇರುವ ವಿಜಯೇಂದ್ರ ಅವರು ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ನೇತೃತ್ವ ವಹಿಸಿಕೊಂಡರೆ ನಮ್ಮ ಗತಿ ಏನು?" ಎಂಬ ಆತಂಕವೂ ವ್ಯಕ್ತವಾಗಿದೆ.

ಆಗೆಲ್ಲ ಮಧ್ಯೆ ಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, “ನೋಡ್ರೀ, ಮುಂದಿನ ಚುನಾವಣೆಯ ಹೊತ್ತಿಗೆ ಬೇರೊಬ್ಬರು ಪಕ್ಷದ ರಾಜ್ಯಾಧ್ಯಕ್ಷರಾಗಬೇಕು ಎಂಬುದು ನಮ್ಮಿಚ್ಛೆ. ಆದರೆ ಅದು ಈಡೇರಿ ಬಿಡುತ್ತದೆ ಅಂತ ಹೇಳಲು ಸಾಧ್ಯವಿಲ್ಲ. ಹಾಗಂತ ವಿಜಯೇಂದ್ರ ಅವರಿಗೆ ಸರೆಂಡರ್ ಆಗಿ ಇರಲೂ ಸಾಧ್ಯವಿಲ್ಲ. ಹೀಗಾಗಿ ಪಕ್ಷದ ರಾಜ್ಯ ಘಟಕಕ್ಕೆ ಬೇರೊಬ್ಬರು ಅಧ್ಯಕ್ಷರಾಗಬೇಕು ಎಂಬ ಹೋರಾಟ ಅದರ ಪಾಡಿಗೆ ನಡೆಯಲಿ. ಆದರೆ ಅದು ಯಶಸ್ವಿಯಾಗ ದಿದ್ದರೆ ನಾವು ಸುಮ್ಮನಿರಲೂ ಸಾಧ್ಯವಿಲ್ಲ.

ಬದಲಿಗೆ, ನಮ್ಮ ನಮ್ಮ ನೆಲೆಗಳಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಿ ಕಂಟ್ರೋಲಿನಲ್ಲಿಟ್ಟುಕೊಳ್ಳುವುದು, ಆ ಮೂಲಕ ಮುಂದಿನ ಚುನಾವಣೆಯಲ್ಲಿ ಪಕ್ಷ ಗೆದ್ದು ಅಧಿಕಾರ ಹಿಡಿಯುವಂತೆ ಮಾಡುವುದು ನಮ್ಮ ಗುರಿಯಾಗಿರಬೇಕು. ಹೀಗೆ ನಮ್ಮ ಗುರಿ ಸ್ಪಷ್ಟವಾಗಿದ್ದರೆ ವಿಜಯೇಂದ್ರ ಅಧ್ಯಕ್ಷರಾಗಿದ್ದರೂ ನಮಗೆ ತೊಂದರೆ ಇಲ್ಲ" ಎಂದಿದ್ದಾರೆ.

ಬಿಜೆಪಿ ಮೂಲಗಳ ಪ್ರಕಾರ, ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಸಂಕಷ್ಟ ಸೂತ್ರ ಬಹುತೇಕ ಎಲ್ಲರಿಗೂ ಒಪ್ಪಿಗೆಯಾಗಿದೆ. ಅರ್ಥಾತ್, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನಿಳಿಸಲು ಎಲ್ಲ ಬಗೆಯ ಹೋರಾಟ ನಡೆಸುವುದು, ಒಂದು ವೇಳೆ ಅದು ಯಶಸ್ವಿಯಾಗದೆ ಇದ್ದರೆ ತಮ್ಮ ತಮ್ಮ ಪಾಳೇಪಟ್ಟುಗಳನ್ನು ಭದ್ರಗೊಳಿಸಿಕೊಂಡು ಹಿತ ಕಾಪಾಡಿ ಕೊಳ್ಳುವುದು ಅನಿವಾರ್ಯ ಎಂಬುದು ಮನದಟ್ಟಾಗಿದೆ.

ಲಾಸ್ಟ್ ಸಿಪ್: ಅಂದ ಹಾಗೆ, ಡಿಕೆಶಿ ಇಂಥ ದಿನ ಸಿಎಂ ಆಗುತ್ತಾರೆ ಅಂತ ಡೇಟು ಕೊಡುತ್ತಲೇ ಬಂದಿರುವ ಡಿಕೆಶಿ ಪಾಳಯ ಈಗ ಜನವರಿ 16 ಇಲ್ಲವೇ 17ರಂದು ಕ್ರಾಂತಿ ಸಂಭವಿಸಲಿದೆ ಎನ್ನುತ್ತಿದೆ. ಆದರೆ ಸಿಎಂ ಪಾಳಯ ಮಾತ್ರ, “ಅಧಿಕಾರ ಹಂಚಿಕೆ ಒಪ್ಪಂದಕ್ಕೆ ನಾನು ರೆಸ್ಪಾನ್ಸಿಬಲ್ ಅಲ್ಲ ಅಂತ ರಾಹುಲ್ ಗಾಂಧಿ ಹೇಳಿದ್ದಾರೆ ಮತ್ತು ಸಂಪುಟ ಪುನಾರಚನೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗಾಗಿ ಜನವರಿ ಅಂತ್ಯದ ಹೊತ್ತಿಗೆ ಪುನಾನರಚನೆ ನಿಶ್ಚಿತ" ಎನ್ನುತ್ತಿದೆ.

ಆರ್‌.ಟಿ. ವಿಠ್ಠಲಮೂರ್ತಿ‌

View all posts by this author