ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

R T Vittalmurthy Column: ಯುದ್ಧಕ್ಕೆ ರೆಡಿಯಾಗಿ ಅಂದ್ರಂತೆ ಸಿದ್ದು

ಎಲ್ಲಕ್ಕಿಂತ ಮುಖ್ಯವಾಗಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಿಂದ ಹಿಡಿದು, ಜೂನ್ ಹೊತ್ತಿಗೆ ಕರ್ನಾಟಕ ವಿಧಾನಪರಿಷತ್ತಿನ ಹಲವು ಸ್ಥಾನಗಳಿಗೆ ಮತ್ತು ವಿಧಾನಸಭೆಯಿಂದ ರಾಜ್ಯ ಸಭೆಯ ಕೆಲವು ಸ್ಥಾನಗಳಿಗೆ ಚುನಾವಣೆ ನಡೆಯುವುದರಿಂದ ಅಲ್ಲಿಯ ತನಕ ಅಧಿಕಾರ ಹಸ್ತಾಂತರದ ಮಾತಿಗೆ ಬ್ರೇಕ್ ಬಿದ್ದಿದೆ ಎಂಬುದು ಮೂಲಗಳ ಹೇಳಿಕೆ.

R T Vittalmurthy Column: ಯುದ್ಧಕ್ಕೆ ರೆಡಿಯಾಗಿ ಅಂದ್ರಂತೆ ಸಿದ್ದು

-

ಮೂರ್ತಿಪೂಜೆ

ಅಧಿಕಾರ ಹಂಚಿಕೆಯ ಮಾತು ಕಾವು ಕಳೆದುಕೊಳ್ಳುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಯುದ್ಧಕ್ಕೆ ಅಣಿಯಾಗುತ್ತಿದ್ದಾರೆ. ಬರುವ ಏಪ್ರಿಲ್-ಮೇ ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗಳನ್ನು ಮುಗಿಸುವುದು ಅವರ ಇರಾದೆ.

ಅಂದ ಹಾಗೆ, ಸಿಎಂ ಹುದ್ದೆಯ ವಿಷಯದಲ್ಲಿ ಡಿ.ಕೆ.ಶಿವಕುಮಾರ್ ಹಾಕಿದ ಪಟ್ಟಿಗೆ ಪ್ರತಿ ಪಟ್ಟು ಹಾಕುವಲ್ಲಿ ಸಿದ್ದರಾಮಯ್ಯ ತಲ್ಲೀನರಾಗಿದ್ದರಲ್ಲ? ಈ ತಲ್ಲೀನತೆ ಕಳೆದೊಂದು ವಾರದಿಂದ ಕಡಿಮೆಯಾಗಿದೆ. ಕಾರಣ? ಅಧಿಕಾರ ಬಿಟ್ಟುಕೊಡಿ ಅಂತ ಸಿದ್ದರಾಮಯ್ಯ ಅವರನ್ನು ರಾಹುಲ್ ಗಾಂಧಿಯವರು ಕೇಳುತ್ತಿಲ್ಲ ಅಥವಾ ಆ ವಿಷಯವನ್ನು ಪ್ರಸ್ತಾಪಿಸಲು ಅವರು ಬಯಸುತ್ತಿಲ್ಲ.

ಈ ಮಧ್ಯೆ ಸಿದ್ದರಾಮಯ್ಯ ಅವರ ಮನ ಒಲಿಸಿದ ನಂತರವೇ ಅಧಿಕಾರ ಹಸ್ತಾಂತರ ಎಂಬ ಮಾತು ಕಾಂಗ್ರೆಸ್ ಹೈಕಮಾಂಡ್ ಪಡಸಾಲೆಯಲ್ಲಿ ಅನುರಣಿಸುತ್ತಿರುವುದರಿಂದ ಇತ್ತ ಡಿಕೆಶಿ ಪಾಳಯಕ್ಕೂ ಪಾಸಿಟಿವ್ ಸಂದೇಶಗಳು ತಲುಪುತ್ತಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಿಂದ ಹಿಡಿದು, ಜೂನ್ ಹೊತ್ತಿಗೆ ಕರ್ನಾಟಕ ವಿಧಾನಪರಿಷತ್ತಿನ ಹಲವು ಸ್ಥಾನಗಳಿಗೆ ಮತ್ತು ವಿಧಾನಸಭೆಯಿಂದ ರಾಜ್ಯಸಭೆಯ ಕೆಲವು ಸ್ಥಾನಗಳಿಗೆ ಚುನಾವಣೆ ನಡೆಯುವುದರಿಂದ ಅಲ್ಲಿಯ ತನಕ ಅಧಿಕಾರ ಹಸ್ತಾಂತರದ ಮಾತಿಗೆ ಬ್ರೇಕ್ ಬಿದ್ದಿದೆ ಎಂಬುದು ಮೂಲಗಳ ಹೇಳಿಕೆ.

ಇದನ್ನೂ ಓದಿ: R T Vittalmurthy Column: ಜನವರಿ ಒಂಬತ್ತಕ್ಕೆ ದಿಲ್ಲಿಯಲ್ಲಿ ಫೈನಲ್

ಪರಿಣಾಮ? ಸಿದ್ದರಾಮಯ್ಯ ಹೊಸ ಉತ್ಸಾಹದಿಂದ ಮೇಲೆದ್ದಿದ್ದಾರೆ. ಜನವರಿ 15ರ ಹೊತ್ತಿಗೆ 2026-27ನೇ ಸಾಲಿನ ಬಜೆಟ್‌ಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಗಳನ್ನು ಆರಂಭಿಸಲು ನಿರ್ಧರಿಸಿರುವ ಅವರು, ಬಜೆಟ್‌ಗೆ ಮೂಲಶಕ್ತಿ ಒದಗಿಸುವ ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ, ಗಣಿ ಸೇರಿದಂತೆ ಪ್ರಮುಖ ಇಲಾಖೆಗಳ ಸಭೆ ನಡೆಸುವ ಲೆಕ್ಕಾಚಾರವನ್ನು ಇಟ್ಟುಕೊಂಡಿದ್ದಾರೆ. ಇದೇ ರೀತಿ ಬಜೆಟ್‌ಗೆ ಹೆಚ್ಚುವರಿ ಆದಾಯದೊಂದಿಗೆ ಹೊಸರೂಪ ನೀಡಲು ಬಯಸಿರುವ ಅವರು ಸರಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಬಲವಿತ್ತು ಜನಸಾಮಾನ್ಯರಿಗೆ ಭರವಸೆ ತುಂಬಲು ನಿರ್ಧರಿಸಿ ದ್ದಾರೆ. ಅರ್ಥಾತ್, ಬಡ-ಮಧ್ಯಮ ವರ್ಗಕ್ಕೆ ಬಲ ತುಂಬುವ ಬಜೆಟ್ ಮಂಡಿಸಿ, ಅದರ ಆಧಾರದ ಮೇಲೆ ಏಪ್ರಿಲ್-ಮೇ ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ, ಬೆಂಗಳೂರಿನ ಐದು ಮಹಾನಗರ ಪಾಲಿಕೆಗಳ ಚುನಾವಣೆಗೆ ಹೋಗಲು ಬಯಸಿದ್ದಾರೆ. ‌

ಹೇಗಿದ್ದರೂ ಎದುರಾಳಿ ಬಿಜೆಪಿ-ಜೆಡಿಎಸ್ ಮಿತ್ರಕೂಟ ಸ್ಥಳೀಯ ಸಂಸ್ಥೆಗಳ ಚುನಾವಣೆ ಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತದೆ. ಇಂಥ ಹೊತ್ತಿನಲ್ಲಿ ದಿಢೀರನೇ ಮುನ್ನುಗ್ಗಿದರೆ ಕಾಂಗ್ರೆಸ್ ಜಯಭೇರಿ ಬಾರಿಸುವುದು ನಿಶ್ಚಿತ. ಹೀಗೆ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದರೆ ಪಕ್ಷದ ವರಿಷ್ಠರಿಗೆ ತಲುಪುವ ಮೆಸೇಜು ಸಾಲಿಡ್ಡಾಗಿರುತ್ತದೆ. ಹಾಗಂತಲೇ ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ, ತಳಮಟ್ಟದಲ್ಲಿ ಪಕ್ಷದ ಶಕ್ತಿಯನ್ನು ಹೆಚ್ಚಿಸುವ ಈ ಯುದ್ಧಕ್ಕೆ ರೆಡಿಯಾಗುವ ಮಾತುಗಳನ್ನಾಡಿದ್ದಾರೆ ಎಂಬುದು ಮೂಲಗಳ ಮಾತು.

ಫೈನಲ್ ಮಾತಾಡಲಿ ರಾಹುಲ್

ಇನ್ನು ಅಧಿಕಾರ ಹಸ್ತಾಂತರದ ಮಾತು ಶಕ್ತಿ ಕಳೆದುಕೊಳ್ಳುತ್ತಿದ್ದರೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಾಳಯದಲ್ಲಿ ಆಸೆ ಜೀವಂತವಾಗಿಯೇ ಇದೆ. ಈ ಪಾಳಯ ದಿಂದ ಕೇಳಿ ಬರುತ್ತಿರುವ ಮಾತಿನ ಪ್ರಕಾರ, ರಾಹುಲ್ ಗಾಂಧಿಯವರಿಗೆ ಡಿ.ಕೆ.ಶಿವಕುಮಾರ್ ಅವರಿಂದ ಸ್ಪಷ್ಟ ಸಂದೇಶ ರವಾನೆಯಾಗಿದೆ.

Nabil and venu

ಅದೆಂದರೆ, “ನನ್ನನ್ನು ಮತ್ತು ಸಿದ್ದರಾಮಯ್ಯ ಅವರನ್ನು ದಿಲ್ಲಿಗೆ ಕರೆಸಿ. ನಿಮ್ಮ ಸಮ್ಮುಖದ ಸಭೆ ನಡೆಯಲಿ. ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅಧಿಕಾರ ಹಂಚಿಕೆಯ ಒಪ್ಪಂದ ಆಗಿತ್ತೋ ಇಲ್ಲವೋ? ಅಂತ ಕನ್ ಫರ್ಮ್ ಮಾಡಿಕೊಳ್ಳಿ. ಇದಾದ ನಂತರ ನೀವು ಏನು ತೀರ್ಮಾನ ತೆಗೆದುಕೊಳ್ಳುತ್ತೀರೋ ತೆಗೆದುಕೊಳ್ಳಿ" ಎಂಬುದು.

ಡಿ.ಕೆ.ಶಿವಕುಮಾರ್ ಅವರ ಈ ಸಂದೇಶಕ್ಕೆ ರಾಹುಲ್ ಗಾಂಧಿಯವರು ಸ್ಪಂದಿಸುವುದು ಅನಿವಾರ್ಯ, ಮತ್ತವರು ಸ್ಪಂದಿಸುತ್ತಾರೆ ಕೂಡಾ. ಹೀಗಾಗಿ ಆದಷ್ಟು ಬೇಗ ಸಿಎಂ ಮತ್ತು ಡಿಸಿಎಂ ಜತೆ ರಾಹುಲ್ ಗಾಂಧಿ ಸಭೆ ನಡೆಸಲಿದ್ದಾರೆ. ಈ ಸಭೆಯ ನಂತರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವ ಗಳಿಗೆ ಹತ್ತಿರವಾಗಲಿದೆ ಎಂಬುದು ಡಿಕೆಶಿ ಕ್ಯಾಂಪಿನ ಮಾತು.

ಸಂಪುಟ ಪುನಾರಚನೆಗೆ ಮತ್ತೆ ಬ್ರೇಕ್?

ಈ ಮಧ್ಯೆ ಗರಿಗೆದರಿದ್ದ ರಾಜ್ಯ ಸಚಿವ ಸಂಪುಟದ ಪುನಾರಚನೆ ಮಾತು ಪುನಃ ತಣ್ಣಗಾಗ ತೊಡಗಿದೆ. ಅಂದ ಹಾಗೆ, ಇತ್ತೀಚೆಗೆ ದಿಲ್ಲಿಗೆ ಹೋಗಿದ್ದ ಸಿದ್ದರಾಮಯ್ಯ ಅವರು, ಸಂಪುಟ ಪುನಾರಚನೆಯ ಬಗ್ಗೆ ರಾಹುಲ್ ಮುಂದೆ ಪ್ರಸ್ತಾಪ ಮಾಡಿದ್ದರು. ಆಗೆಲ್ಲ ಸಿದ್ದರಾಮಯ್ಯ ಅವರ ಮಾತಿಗೆ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ ಅವರು, “ಖಂಡಿತ ಮಾಡಿ. ಸಂಪುಟ ಪುನಾರಚನೆಯ ಸ್ವರೂಪ ಹೇಗಿರಬೇಕು? ಸಂಪುಟಕ್ಕೆ ಸೇರ್ಪಡೆ ಆಗಬೇಕಾದವರು ಯಾರು? ಹೊರಬೀಳಬೇಕಾದವರು ಯಾರು? ಅಂತ ಡಿಟೈಲಾಗಿ ಚರ್ಚಿಸಿ ಪಟ್ಟಿ ರೆಡಿ ಮಾಡಿಕೊಂಡು ಬನ್ನಿ. ಫೈನಲ್ ಮಾಡೋಣ" ಎಂದಿದ್ದರು.

ರಾಹುಲ್ ಗಾಂಧಿಯವರಾಡಿದ ಮಾತು ಕೇಳಿ ಸಿದ್ದರಾಮಯ್ಯ ಅವರು ನಿರಾಳರಾಗಿ ದ್ದೇನೋ ನಿಜ. ಆದರೆ ಇದಾದ ನಂತರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು “ಸದ್ಯಕ್ಕೆ ಸಂಪುಟ ಪುನಾರಚನೆ ಬೇಡ ಸಿದ್ದರಾಮಯ್ಯಾಜೀ" ಎಂದಿದ್ದಾರಂತೆ.

“ನೀವೀಗ ಬಜೆಟ್‌ಗೆ ಸಿದ್ಧತೆ ಮಾಡಿಕೊಳ್ಳಬೇಕು. ಲೋಕಲ್ ಬಾಡಿ ಎಲೆಕ್ಷನ್ನಿಗೆ ರೆಡಿಯಾಗ ಬೇಕು. ರಾಜ್ಯಸಭೆ, ವಿಧಾನ ಪರಿಷತ್ತಿನ ಚುನಾವಣೆಗಳಿಗೆ ರೆಡಿಯಾಗಬೇಕು. ಹೀಗೆ ಒಂದರ ಹಿಂದೆ ಒಂದು ಸವಾಲು ಇರುವಾಗ ಸಂಪುಟ ಪುನಾರಚನೆಗೆ ಕೈ ಹಾಕಿ ತಲೆನೋವು ಏಕೆ ತಂದುಕೊಳ್ಳುತ್ತೀರಿ?" ಎಂಬುದು ಕೆ.ಸಿ.ವೇಣುಗೋಪಾಲ್ ಅವರ ವಾದ.

ಹೀಗೆ ಕೆ.ಸಿ.ವೇಣುಗೋಪಾಲ್ ಅವರು ಒಂದು ದಿಕ್ಕಿನಿಂದ ಮಾತನಾಡಿದರೆ, ಮತ್ತೊಂದೆಡೆ ಯಿಂದ ಸಿದ್ದರಾಮಯ್ಯ ಅವರ ಆಪ್ತರು, “ಅಯ್ಯೋ ಪುನಾರಚನೆಯ ಗೋಜಲಿಗೆ ಸದ್ಯ ಕೈಹಾಕುವುದು ಬೇಡ ಸರ್.

ಯಾಕೆಂದರೆ ಈಗಷ್ಟೇ ಅಧಿಕಾರ ಹಸ್ತಾಂತರದ ಕಿರಿಕಿರಿ ಕಡಿಮೆ ಆಗಿದೆ. ಇಂಥ ಟೈಮಿನಲ್ಲಿ ಸಂಪುಟ ಪುನಾರಚನೆಗೆ ಕೈಹಾಕಿದರೆ ಸಹಜವಾಗಿಯೇ ಪಕ್ಷದ ವರಿಷ್ಠರು ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚು ಪ್ರಾಮಿನೆನ್ಸು ಕೊಡುತ್ತಾರೆ. ಹೀಗೆ ಅವರಿಗೆ ಪ್ರಾಮಿನೆನ್ಸು ಕೊಟ್ಟರೆ ಸಂಪುಟದಲ್ಲಿ ನಮ್ಮ ಪವರ್ರು ಕಡಿಮೆಯಾಗುತ್ತದೆ" ಅನ್ನತೊಡಗಿದ್ದಾರೆ.

ಹೀಗೆ ಇಕ್ಕೆಲಗಳಿಂದಲೂ ಸಚಿವ ಸಂಪುಟ ಪುನಾರಚನೆಗೆ ನೆಗೆಟಿವ್ ಮಾತುಗಳು ಕೇಳಿ ಬರುತ್ತಿರುವುದರಿಂದ ಸಿದ್ದರಾಮಯ್ಯ ಅವರ ಉತ್ಸಾಹವೂ ಕಡಿಮೆಯಾಗಿದೆ. ಮೂಲಗಳ ಪ್ರಕಾರ, ಜನವರಿ ಒಂಬತ್ತಕ್ಕೆ ಸಿದ್ದರಾಮಯ್ಯನವರು ದಿಲ್ಲಿಗೆ ಹೋದರೂ, ರಾಹುಲ್ ಗಾಂಧಿಯವರ ಜತೆ ಮಾತುಕತೆ ನಡೆಸಿದರೂ ಸಂಪುಟ ಪುನಾರಚನೆಗೆ ಡೇಟು ಫಿಕ್ಸಾಗುವುದು ಅನುಮಾನ.

ಬಿಜೆಪಿ ಪಾಳಯದಲ್ಲಿ ಮೌನ

ಇನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಬಿಹಾರದ ನಿತಿನ್ ನಬಿನ್ ನೇಮಕ ಗೊಂಡರಲ್ಲ? ಈ ಬೆಳವಣಿಗೆ ರಾಜ್ಯ ಬಿಜೆಪಿಯಲ್ಲಿ ಉತ್ಸಾಹ ಮೂಡಿಸಿದಂತೆ ಕಾಣುತ್ತಿಲ್ಲ. ಇವತ್ತು ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ನಿತೀನ್ ನಬಿನ್ ಮುಂದೆ ಪಕ್ಷದ ಅಧ್ಯಕ್ಷ ರೇನೋ ಆಗುತ್ತಾರೆ. ಆದರೆ ಅವರು ರಾಜ್ಯ ಬಿಜೆಪಿಗೆ ಪವರ್ ತುಂಬುತ್ತಾರೆ ಅಂತ ಯಾರಿಗೂ ಅನ್ನಿಸುತ್ತಿಲ್ಲ.

ಅಂದ ಹಾಗೆ, ರಾಷ್ಟ್ರ ಮಟ್ಟದಲ್ಲಿ ಪಕ್ಷದ ಚುಕ್ಕಾಣಿ ಹಿಡಿದವರಿಗೆ ದೇಶದ ಎಲ್ಲ ರಾಜ್ಯಗಳ ರಾಜಕೀಯ ಸ್ವರೂಪ ಗೊತ್ತಿರಬೇಕು. ಈ ಹಿಂದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಆಡ್ವಾಣಿ ಅವರಿಂದ ಹಿಡಿದು ಬಹುತೇಕ ಎಲ್ಲರಿಗೂ ಕರ್ನಾಟಕದ ರಾಜಕೀಯ ಸ್ವರೂಪ ಗೊತ್ತಿತ್ತು ಮತ್ತು ಅದರ ಆಧಾರದ ಮೇಲೆ ಪಕ್ಷಕ್ಕೆ ಶಕ್ತಿ ತುಂಬುವ ಕೌಶಲವಿತ್ತು.

ಅರ್ಥಾತ್, ಕರ್ನಾಟಕದ ಸಾಮಾಜಿಕ ಸ್ವರೂಪ ಹೇಗಿದೆ ಮತ್ತು ಅದನ್ನು ಪಕ್ಷ ಸಂಘಟನೆಗೆ ನಾವು ಹೇಗೆ ಬಳಸಿಕೊಳ್ಳಬಹುದು? ಯಾವ ಮಾರ್ಗ ಅನುಸರಿಸಿದರೆ ಅದನ್ನು ಎನ್‌ಕ್ಯಾಶ್ ಮಾಡಿಕೊಳ್ಳಬಹುದು? ಅಂತ ಅವರು ಸಲಹೆ ನೀಡಿದರೆ ಯಡಿಯೂರಪ್ಪ, ಅನಂತ ಕುಮಾರ್ ಅವರಂಥ ನಾಯಕರು ಅದನ್ನು ಅರ್ಥಮಾಡಿಕೊಂಡು ಫೀಲ್ಡಿಗಿಳಿಯುತ್ತಿದ್ದರು. ಅರುಣ್ ಜೇಟ್ಲಿ, ಧರ್ಮೇಂದ್ರ ಪ್ರಧಾನ್ ಅವರಂಥ ನಾಯಕರು ಕೂಡ ಅವರಿಗೆ ಹೊಸ ಹೊಸ ದಾರಿ ತೋರಿಸುತ್ತಿದ್ದರು.

ಆದರೆ ಇತ್ತೀಚಿನ ದಿನಗಳಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಂದ ಹಿಡಿದು ಇಲ್ಲಿ ಪಕ್ಷದ ಕೆಲಸಕ್ಕೆ ನಿಯೋಜಿತರಾಗುತ್ತಿರುವವರು ರಾಜ್ಯ ಬಿಜೆಪಿಗೆ ಬಲ ತುಂಬುತ್ತಿಲ್ಲ. ರಾಜ್ಯ ಬಿಜೆಪಿಯ ಉಸ್ತುವಾರಿ ಹೊಣೆ ಹೊತ್ತುಕೊಂಡಿರುವ ರಾಧಾಮೋಹನದಾಸ್ ಅಗರ್ವಾಲ್ ಅವರು ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಒಂದಷ್ಟು ಖದರಿನಿಂದ ಕೆಲಸ ಮಾಡಿದರೂ ಈಗ ಅವರಲ್ಲಿ ಉತ್ಸಾಹ ಉಳಿದಂತೆ ಕಾಣುತ್ತಿಲ್ಲ.

“ಅದೇನ್ರೀ ರಾಜ್ಯ ಬಿಜೆಪಿಯ ಸ್ಥಿತಿ? ಅಲ್ಲಿ ತಾಳ-ಮೇಳ ಕೂಡುತ್ತಿಲ್ಲ" ಅಂತ ನಡ್ಡಾ ಅವರೋ, ಅಮಿತ್ ಶಾ ಅವರೋ ಹೇಳಿದರೆ ಕರ್ನಾಟಕಕ್ಕೆ ಓಡೋಡಿ ಬರುವ ರಾಧಾ ಮೋಹನದಾಸ್ ಅಗರ್ವಾಲ್, ಆನಂತರ ಕರ್ನಾಟಕ ಬಿಜೆಪಿಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

ಇಂಥ ಹೊತ್ತಿನಲ್ಲಿ ರಾಷ್ಟ್ರೀಯ ಬಿಜೆಪಿಗೆ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ನಿತಿನ್ ನಬಿನ್ ಅವರು ಕೂಡಾ ಕರ್ನಾಟಕ ಬಿಜೆಪಿಯ ಚಹರೆಪಟ್ಟಿಯನ್ನು ಗಮನಿಸುವ ಉಸಾಬರಿಗೂ ಹೋಗಿಲ್ಲ. ಹೀಗಾಗಿ ಅವರ ವಿಷಯದಲ್ಲಿ ರಾಜ್ಯ ಬಿಜೆಪಿ ಪಾಳಯದಲ್ಲಿ ಸಣ್ಣ ಕುತೂಹಲವೂ ಕಾಣಿಸುತ್ತಿಲ್ಲ.

ಲಾಸ್ಟ್ ಸಿಪ್: ಜನವರಿ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ದಾಖಲೆ ಬರೆಯಲಿದ್ದಾರೆ. ಅರ್ಥಾತ್, ಅವರು ಈ ರಾಜ್ಯ ಕಂಡ ಸುದೀರ್ಘಾವಧಿಯ ಮುಖ್ಯಮಂತ್ರಿ ಅನ್ನಿಸಿಕೊಳ್ಳಲಿದ್ದಾರೆ. ಅಂದ ಹಾಗೆ, ರಾಜ್ಯವನ್ನು ಸುದೀರ್ಘ ಕಾಲ ಆಳಿದ ಮುಖ್ಯಮಂತ್ರಿ ಎಂಬ ದಾಖಲೆ ಇದುವರೆಗೆ ದೇವರಾಜ ಅರಸರ ಹೆಸರಿನಲ್ಲಿತ್ತು. ಆದರೆ ಇದೀಗ ಆ ದಾಖಲೆ ಸಿದ್ದರಾಮಯ್ಯ ಅವರಿಗೆ ಸಲ್ಲಲಿದೆ.

ಕುತೂಹಲದ ಸಂಗತಿ ಎಂದರೆ ಈ ರೀತಿ ಸುದೀರ್ಘ ಕಾಲ ರಾಜ್ಯದ ಮುಖ್ಯಮಂತ್ರಿಗಳಾದ ದಾಖಲೆ ಬರೆದಿದ್ದ ಅರಸರು ಮತ್ತು ಈಗ ಬರೆಯಲಿರುವ ಸಿದ್ದರಾಮಯ್ಯ ಅವರಿಬ್ಬರೂ ಒಂದೇ ಜಿಲ್ಲೆಯವರು ಮತ್ತು ಇಬ್ಬರೂ ಹಿಂದುಳಿದ ವರ್ಗಗಳಿಂದ ಬಂದವರು. ಹೀಗೆ ತಳಸಮುದಾಯಗಳಿಂದ ಬಂದ ನಾಯಕರು ಇಂಥ ದಾಖಲೆ ಬರೆಯಲು ಸಾಧ್ಯವಾಗಿದ್ದರೆ ಅದಕ್ಕೆ ಈ ನಾಯಕರ ರಾಜಕೀಯ ಚಾತುರ್ಯ ಹೇಗೆ ಕಾರಣವೋ, ಹಾಗೆಯೇ ಕರ್ನಾಟಕ ದಲ್ಲಿ ಸಮಾಜವಾದಿ ಮನಃಸ್ಥಿತಿ ಇನ್ನೂ ಪ್ರಬಲವಾಗಿದೆ ಎಂಬುದೂ ಕಾರಣ.