ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dr Sadhanashree Column: ಆಚರಣೆಯಿಂದ ಅರಿವಿಗೆ: ಎಳ್ಳಿನ ಸಂಕ್ರಾಂತಿಯ ಸಂದೇಶ

ಗೋಶಾಲೆಯಲ್ಲಿ ಹಸುಗಳಿಗೆ ಸ್ನಾನ ಮಾಡಿಸಿ, ಕೊಂಬುಗಳಿಗೆ ನೀಲಿ ಬಣ್ಣ ಹಚ್ಚಿ, ಪೂಜೆ ನಡೆಯುತ್ತದೆ. ರೈತರಿಗೆ ಇದು ಕೇವಲ ಹಬ್ಬವಲ್ಲ; ಅದು ಭೂಮಿಗೆ, ಸೂರ್ಯನಿಗೆ ಮತ್ತು ಪ್ರಕೃತಿಗೆ ಸಲ್ಲಿಸುವ ಕೃತಜ್ಞತೆ ಯ ದಿನ. ಆಕಾಶದಲ್ಲಿ ಸೂರ್ಯ ಉತ್ತರಾಯಣಕ್ಕೆ ಪಯಣ ಆರಂಭಿಸಿದಂತೆ, ಮನೆಗಳಲ್ಲೂ ಹೊಸ ಉತ್ಸಾಹ, ಹೊಸ ತಾಪಮಾನ ಮತ್ತು ಹೊಸ ಸಮತೋಲನ ಪ್ರವೇಶಿಸುತ್ತದೆ.

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಬೆಳಗಿನ ಮಂಜು ಇನ್ನೂ ಕಂಗೊಳಿಸುತ್ತಿರುವ ಚಳಿಗಾಲದ ಒಂದು ದಿನ. ಸೂರ್ಯ ಉದಯಿಸುವ ಮೊದಲೇ ಮನೆಮನೆಯಲ್ಲೂ ಚಟುವಟಿಕೆ ಆರಂಭವಾಗಿರುತ್ತದೆ. ಅಂಗಳದಲ್ಲಿ ಹೊಸದಾಗಿ ಹಾಕಿದ ಗೋಮಯ-ಮಣ್ಣು ಇನ್ನೂ ತೇವವಾಗಿದ್ದು, ಅದರ ಮೇಲೆ ಬಿಳಿ-ಕೆಂಪು ರಂಗೋಲಿಗಳು ಮೂಡುತ್ತಿವೆ. ಅಡುಗೆಮನೆಯೊಳಗೆ ಕಬ್ಬಿನ ಸಿಹಿಯ ವಾಸನೆ, ಕರಗುತ್ತಿರುವ ಬೆಲ್ಲದ ಘಮ, ಹುರಿಯುತ್ತಿರುವ ಎಳ್ಳಿನ ಸುಗಂಧ- ಎಲ್ಲವೂ ಸೇರಿ ‘ಇಂದು ಸಂಕ್ರಾಂತಿ’ ಎಂದು ಘೋಷಿಸುವಂತೆ ಇರುತ್ತದೆ.

ಹಿರಿಯರು ಸ್ನಾನ-ಸಂಧ್ಯಾವಂದನೆಯ ನಂತರ ದೇವರಿಗೆ ಎಳ್ಳು-ಬೆಲ್ಲ ಸಮರ್ಪಿಸಿ, ‘ಎಳ್ಳು-ಬೆಲ್ಲ ತಿನ್ನಿ, ಒಳ್ಳೆ ಮಾತಾಡಿ’ ಎಂದು ಆಶೀರ್ವಾದ ನೀಡುತ್ತಾರೆ. ನೆರೆಹೊರೆಯ ಮನೆಗಳಿಗೆ ಎಳ್ಳು-ಬೆಲ್ಲ, ಕಬ್ಬು, ಕಡಲೆ, ಗೆಣಸು, ಕೊಬ್ಬರಿ ಹಂಚಿಕೊಳ್ಳುವಾಗ ಕೇವಲ ಆಹಾರವಲ್ಲ, ಸಂಬಂಧಗಳೂ ವಿನಿಮಯವಾಗುತ್ತವೆ.

ಗೋಶಾಲೆಯಲ್ಲಿ ಹಸುಗಳಿಗೆ ಸ್ನಾನ ಮಾಡಿಸಿ, ಕೊಂಬುಗಳಿಗೆ ನೀಲಿ ಬಣ್ಣ ಹಚ್ಚಿ, ಪೂಜೆ ನಡೆಯು ತ್ತದೆ. ರೈತರಿಗೆ ಇದು ಕೇವಲ ಹಬ್ಬವಲ್ಲ; ಅದು ಭೂಮಿಗೆ, ಸೂರ್ಯನಿಗೆ ಮತ್ತು ಪ್ರಕೃತಿಗೆ ಸಲ್ಲಿಸುವ ಕೃತಜ್ಞತೆಯ ದಿನ. ಆಕಾಶದಲ್ಲಿ ಸೂರ್ಯ ಉತ್ತರಾಯಣಕ್ಕೆ ಪಯಣ ಆರಂಭಿಸಿದಂತೆ, ಮನೆಗಳಲ್ಲೂ ಹೊಸ ಉತ್ಸಾಹ, ಹೊಸ ತಾಪಮಾನ ಮತ್ತು ಹೊಸ ಸಮತೋಲನ ಪ್ರವೇಶಿಸುತ್ತದೆ.

ಇದನ್ನೂ ಓದಿ: Dr Sadhanashree Column: ಆಯುರ್ವೇದದ ಕುರಿತಾದ ಆತ್ಮಪರಿಶೀಲನೆ

ಈ ಎಲ್ಲ ಸಂಪ್ರದಾಯಗಳ ನಡುವೆ ಒಂದು ಸಾಮಾನ್ಯ ನಾಡಿ ಹರಿಯುತ್ತದೆ- ಅದು ಋತುಚಕ್ರಕ್ಕೆ ಹೊಂದಿಕೊಂಡ ಜೀವನಜ್ಞಾನ. ನಮ್ಮ ಪೂರ್ವಜರು ಹಬ್ಬವನ್ನು ಹೃದಯದಿಂದ ಆಚರಿಸುತ್ತಾ, ಅದರಲ್ಲಿ ಆರೋಗ್ಯ, ಆಹಾರ ಮತ್ತು ಆತ್ಮಶುದ್ಧಿಯ ಸೂಕ್ಷ್ಮ ಸಂದೇಶಗಳನ್ನು ಜೋಡಿಸಿದ್ದರು.

ಸಂಕ್ರಾಂತಿಯ ಎಳ್ಳು-ಬೆಲ್ಲವೂ ಅಂಥ ಒಂದು ಮೌನವಾದ ಉಪದೇಶವೇ. ಚಳಿಗಾಲದ ಕೊನೆಯ ಹಂತವಾಗಿರುವ ಸಂಕ್ರಾಂತಿಯ ಸಮಯದಲ್ಲಿ ದೇಹದಲ್ಲಿ ವಾತದೋಷ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಶೀತ ಗುಣ ಮತ್ತು ರೂಕ್ಷತೆಯ ಹೆಚ್ಚಳ. ಈ ವೇಳೆ ದೇಹಕ್ಕೆ ಉಷ್ಣ, ಪೋಷಕ ಹಾಗೂ ಶಕ್ತಿದಾಯಕ ಆಹಾರ ಅಗತ್ಯವಾಗುತ್ತದೆ. ಎಳ್ಳು ಸ್ವಭಾವತಃ ಉಷ್ಣವೀರ್ಯ ಹೊಂದಿದ್ದು, ವಾತ ವನ್ನು ಸಮತೋಲನಗೊಳಿಸುತ್ತದೆ.

ಎಳ್ಳು ಸೇವನೆಯಿಂದ ಸಂಧಿವಾತ, ಸ್ನಾಯು ನೋವು, ಒಣಗುವಿಕೆ ಹಾಗೂ ದೌರ್ಬಲ್ಯ ಕಡಿಮೆ ಯಾಗುತ್ತದೆ. ಬೆಲ್ಲದೊಂದಿಗೆ ಸೇರಿದಾಗ ಇದು ತಕ್ಷಣ ಶಕ್ತಿಯನ್ನು ನೀಡುವ ಜತೆಗೆ ಜೀರ್ಣಶಕ್ತಿ ಯನ್ನೂ ಬಲಪಡಿಸುತ್ತದೆ.ಆಯುರ್ವೇದದಲ್ಲಿ ಎಳ್ಳನ್ನು ‘ತಿಲ’ ಎಂದು ಕರೆಯಲಾಗುತ್ತದೆ.

ತಿಲವು ಶಕ್ತಿವರ್ಧಕ, ಬಲವರ್ಧಕ ಮತ್ತು ಪುನರುಜ್ಜೀವಕ ಗುಣಗಳನ್ನು ಹೊಂದಿದೆ ಎಂದು ಶಾಸ್ತ್ರ ಗಳು ವಿವರಿಸುತ್ತವೆ. ಎಳ್ಳಿನ ಎಣ್ಣೆ ದೇಹಾಭ್ಯಂಗಕ್ಕೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಚಳಿಗಾಲ ದಲ್ಲಿ ಎಳ್ಳೆಣ್ಣೆಯ ಅಭ್ಯಂಗ ಮಾಡುವುದರಿಂದ ಚರ್ಮದ ರೂಕ್ಷತೆ ಕಡಿಮೆಯಾಗುತ್ತದೆ, ರಕ್ತ ಸಂಚಾರ ಸುಧಾರಿಸುತ್ತದೆ ಮತ್ತು ದೇಹಕ್ಕೆ ಸ್ಥೈರ್ಯ ದೊರೆಯುತ್ತದೆ.

sankan

ಸಂಕ್ರಾಂತಿಯಂದು ನಡೆಯುವ ಅನೇಕ ಆಚರಣೆಗಳಲ್ಲಿ ಎಳ್ಳಿನ ಬಳಕೆ ಕಾಣಸಿಗುತ್ತದೆ. ಪಿತೃ ತರ್ಪಣ, ದಾನ, ಹೋಮ-ಹವನಗಳಲ್ಲಿ ಎಳ್ಳಿಗೆ ವಿಶೇಷ ಸ್ಥಾನವಿದೆ. ‘ತಿಲದಾನಂ ಮಹಾದಾನಂ’ ಎಂಬ ಮಾತು ಇದನ್ನೇ ಸೂಚಿಸುತ್ತದೆ. ಎಳ್ಳು ದಾನ ಮಾಡುವುದರಿಂದ ಪಿತೃಗಳು ತೃಪ್ತರಾಗುತ್ತಾರೆ ಎಂಬ ನಂಬಿಕೆ ಇದೆ. ಇದಲ್ಲದೆ, ಸಮಾಜದಲ್ಲಿ ಪರಸ್ಪರ ಸೌಹಾರ್ದ ಮತ್ತು ಹಂಚಿಕೆಯ ಭಾವನೆ ಬೆಳೆಸುವಲ್ಲಿ ಈ ಆಚರಣೆಗಳು ಸಹಕಾರಿ.

ಆಯುರ್ವೇದದಲ್ಲಿ ಎಳ್ಳು (ತಿಲ) ಅತ್ಯಂತ ಮಹತ್ವದ ಧಾನ್ಯವಾಗಿ ಪರಿಗಣಿಸಲ್ಪಟ್ಟಿದೆ. ಭಾವ ಪ್ರಕಾಶ ನಿಘಂಟಿನಲ್ಲಿ ಎಳ್ಳಿನ ಸ್ವಭಾವ, ಗುಣ ಹಾಗೂ ಉಪಯೋಗಗಳನ್ನು ಸ್ಪಷ್ಟವಾಗಿ ವಿವರಿಸ ಲಾಗಿದೆ. ಎಳ್ಳಿನಲ್ಲಿ ಮುಖ್ಯವಾಗಿ ಕಪ್ಪು ಎಳ್ಳು,ಬಿಳಿ ಎಳ್ಳು ಮತ್ತು ಕೆಂಪು ಎಳ್ಳು ಎಂಬ ಮೂರು ವಿಧಗಳಿವೆ. ಕಾಡು ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಎಳ್ಳನ್ನು ‘ವನ್ಯತಿಲ’ ಹಾಗೂ ಕೃಷಿ ಮೂಲಕ ಬೆಳೆಯುವ ಎಳ್ಳನ್ನು ‘ಅಲ್ಪತಿಲ’ ಎಂದು ಕರೆಯಲಾಗುತ್ತದೆ.

ರುಚಿಯ ದೃಷ್ಟಿಯಿಂದ ಎಳ್ಳು ತಿಕ್ತ (ಕಹಿ), ಕಟು (ಖಾರ), ಮಧುರ (ಸಿಹಿ) ಮತ್ತು ಕಷಾಯ (ಒಗರು) ರಸಗಳನ್ನು ಹೊಂದಿದೆ. ಜೀರ್ಣಾನಂತರ ಇದರ ರಸ ಕಟುಸ್ವಭಾವದ್ದಾಗಿರುತ್ತದೆ. ಎಳ್ಳು ಗುರು (ಜೀರ್ಣಕ್ಕೆ ಜಡ), ಸ್ನಿಗ್ಧ (ಜಿಡ್ಡು ಯುಕ್ತ), ಉಷ್ಣ (ತಾಪಕಾರಕ) ಗುಣಗಳನ್ನು ಹೊಂದಿದ್ದು ದೇಹಕ್ಕೆ ಶಕ್ತಿ ನೀಡುತ್ತದೆ.

ಎಳ್ಳು ಕಫ ಮತ್ತು ವಾತ ದೋಷಗಳನ್ನು ಶಮನಗೊಳಿಸಿ, ದೇಹದ ಬಲವರ್ಧನೆಗೆ ಸಹಕಾರಿ. ಕೂದಲು ಹಾಗೂ ಚರ್ಮದ ಆರೋಗ್ಯಕ್ಕೆ ಎಳ್ಳು ಅತ್ಯಂತ ಉಪಯುಕ್ತವಾಗಿದ್ದು, ಎದೆ ಹಾಲನ್ನು ಮತ್ತು ವರ್ಣವನ್ನು ಹೆಚ್ಚಿಸುತ್ತದೆ ಹಾಗೂ ಗಾಯಗಳ ಗುಣಮುಖತೆಗೆ ಸಹಾಯ ಮಾಡುತ್ತದೆ. ದಂತ ಸಂಬಂಧಿ ಸಮಸ್ಯೆಗಳ ನಿವಾರಣೆಯಲ್ಲಿಯೂ ಎಳ್ಳು ಸಹಕಾರಿಯಾಗುತ್ತದೆ.

ಇದು ಮೂತ್ರದ ಪ್ರಮಾಣವನ್ನು ಕಡಿಮೆ ಮಾಡಿ, ಮಲವನ್ನು ಬದ್ಧಗೊಳಿಸುವ ಸಾಧ್ಯತೆಯಿದೆ. ಹಸಿವನ್ನು ಉತ್ತೇಜಿಸುವುದರೊಂದಿಗೆ ಸ್ಮರಣಶಕ್ತಿಯನ್ನು ವೃದ್ಧಿಸುತ್ತದೆ.

ಎಳ್ಳಿನ ವಿಧಗಳಲ್ಲಿ ಕಪ್ಪು ಎಳ್ಳು ಅತ್ಯುತ್ತಮ ಗುಣಮಟ್ಟದ್ದಾಗಿದ್ದು, ವೃಷ್ಯ (ಪ್ರಜನನ ಶಕ್ತಿವರ್ಧಕ) ಗುಣವನ್ನು ಹೊಂದಿದೆ. ಬಿಳಿ ಎಳ್ಳು ಮಧ್ಯಮ ಗುಣಮಟ್ಟದ್ದಾಗಿದ್ದು, ಕೆಂಪು ಎಳ್ಳು ಸೇರಿದಂತೆ ಇತರೆ ಬಣ್ಣಗಳ ಎಳ್ಳುಗಳು ತೌಲನಿಕವಾಗಿ ಕಡಿಮೆ ಗುಣಮಟ್ಟದ್ದೆಂದು ಆಯುರ್ವೇದವು ಗ್ರಂಥ ಗಳಲ್ಲಿ ವಿವರಿಸಲಾಗಿದೆ.

ಸ್ತ್ರೀ ಸ್ವಾಸ್ಥ್ಯದಲ್ಲಿ ಎಳ್ಳಿನ ಪ್ರಾಮುಖ್ಯ: ಸ್ತ್ರೀಯರ 8 ರೀತಿಯ ಮುಟ್ಟಿನ ತೊಂದರೆಗಳಿಗೆ ಮತ್ತು ಸ್ತ್ರೀ ಜನನಾಂಗದ ವಿವಿಧ ರೀತಿಯ ವಿಕೃತಿಗಳಿಗೆ ಎಳ್ಳು ಮತ್ತು ಎಳ್ಳೆಣ್ಣೆ ಉತ್ತಮ ಔಷಧವಾಗುತ್ತದೆ. ಇದು ಗರ್ಭಾಶಯವನ್ನು ಬಲಗೊಳಿಸಲು ಮತ್ತು ಋತುಚಕ್ರವನ್ನು ಸಕಾಲಕ್ಕೆ ತರಲು, ಮುಟ್ಟಿನ ಸ್ರಾವದ ಪ್ರಮಾಣವನ್ನು ಸರಿದೂಗಿಸಲು, ಜನನಾಂಗದ ಆರೋಗ್ಯವನ್ನು ರಕ್ಷಿಸಲು ಅತ್ಯಂತ ಮುಖ್ಯ.

ಸಾಮಾನ್ಯವಾಗಿ ಹೆಣ್ಣು ಮಕ್ಕಳು ಮೈ ನೆರೆದರೆ ಗರ್ಭಾಶಯ ಶುದ್ದಿಗೆ ಮತ್ತು ಬಲಕ್ಕೆ ಎಳ್ಳೆಣ್ಣೆಯನ್ನು ಜೀರ್ಣವಾಗುವಷ್ಟು ಕುಡಿಸುವ ಸಂಪ್ರದಾಯವಿರುತ್ತದೆ. ಅಂತೆಯೇ ಎಳ್ಳು ದಾಂಪತ್ಯ ಮತ್ತು ಸಂತಾನೋತ್ಪತ್ತಿಗೂ ಸಹಾಯಕಾರಿ. ಮಕ್ಕಳನ್ನು ಪಡೆಯಲು ಇಚ್ಛೆ ಇರುವ ದಂಪತಿಗಳ ಶರೀರ ವನ್ನು ಚಿಕಿತ್ಸೆಯ ಮೂಲಕ ಶುದ್ಧಗೊಳಿಸಿ ನಂತರ ಒಂದು ಋತುಚಕ್ರವಿಡೀ, ಗರ್ಭಿಣಿಯಾಗ ಬಯಸುವ ಸ್ತ್ರೀಗೆ ಎಳ್ಳೆಣ್ಣೆ, ಎಳ್ಳಿನ ವಿವಿಧ ಆಹಾರಗಳನ್ನು ಪ್ರಯೋಗಿಸಲಾಗುತ್ತದೆ.

ಇದು ದೇಹವನ್ನು ಗರ್ಭಧಾರಣೆಗೆ ಸಿದ್ಧಗೊಳಿಸಿ, ಅಗತ್ಯವಾದ ಪೌಷ್ಟಿಕತೆಯನ್ನು ನೀಡುತ್ತದೆ. ಇಂದಿನ ವೇಗದ ಜೀವನಶೈಲಿ, ಅಕಾಲಿಕ ಆಹಾರ ಪದ್ಧತಿ, ಒಣ ಆಹಾರ ಸೇವನೆ, ನಿರಂತರ ಒತ್ತಡ- ಇವೆಲ್ಲವೂ ವಾತ ದೋಷವನ್ನು ಹೆಚ್ಚಿಸುತ್ತವೆ. ವಾತದೋಷ ಹೆಚ್ಚಾದಾಗ ಸಂಧಿನೋವು, ಒಣತನ, ನಿದ್ರಾಹೀನತೆ, ಆತಂಕ, ಜೀರ್ಣಕ್ರಿಯೆಯ ದುರ್ಬಲತೆ, ಪ್ರಜನನ ಶಕ್ತಿಯ ಕುಂದುವಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಇಂಥ ಸಂದರ್ಭದಲ್ಲಿ ಎಳ್ಳು ದೇಹಕ್ಕೆ ಅಗತ್ಯವಾದ ಸ್ನಿಗ್ಧತೆ ಮತ್ತು ತಾಪವನ್ನು ನೀಡುವ ಮೂಲಕ ಸಮತೋಲನವನ್ನು ಪುನಃಸ್ಥಾಪಿಸುತ್ತದೆ. ಆಧುನಿಕ ಪೌಷ್ಟಿಕಶಾಸ್ತ್ರದ ದೃಷ್ಟಿಯಿಂದಲೂ ಎಳ್ಳು ಅತ್ಯಂತ ಶ್ರೇಷ್ಠ ಆಹಾರ. ಇದರಲ್ಲಿ, ಉತ್ತಮ ಗುಣಮಟ್ಟದ ಕ್ಯಾಲ್ಸಿಯಂ- ಅಸ್ಥಿ ಮತ್ತು ದಂತಗಳ ಬಲಕ್ಕಾಗಿ, ಕಬ್ಬಿಣ- ರಕ್ತವರ್ಧಕ, ಮ್ಯಾಗ್ನೀಶಿಯಂ ಮತ್ತು ಫಾಸ್ಪರಸ್- ನರ ಮತ್ತು ಸ್ನಾಯುಗಳ ಆರೋಗ್ಯಕ್ಕೆ, ಒಳ್ಳೆಯ ಕೊಬ್ಬುಗಳು- ಹೃದಯ ಆರೋಗ್ಯಕ್ಕೆ , ಶಕ್ತಿಯುತ ಆಂಟಿ ಆಕ್ಸಿಡೆಂಟ್ಸ್- ವಯೋವೃದ್ಧಿ ತಡೆಗೆ.

ಈ ಎಲ್ಲಾ ಗುಣಗಳಿಂದ ಎಳ್ಳು ನಿತ್ಯಾರೋಗ್ಯದ ರಕ್ಷಣೆಗೆ ಸಹಾಯಕ ಆಹಾರವಾಗುತ್ತದ ಮಕರ ಸಂಕ್ರಾಂತಿ ಅಂದರೆ ಸೂರ್ಯ ಉತ್ತರಾಯಣಕ್ಕೆ ಪ್ರವೇಶಿಸುವ ಸಮಯ. ಇದು ಚಳಿಗಾಲದ ಮಧ್ಯ ಭಾಗ. ಚಳಿಗಾಲದಲ್ಲಿ ವಾತಾವರಣದಲ್ಲಿ ಶೀತ ಹೆಚ್ಚಿದ್ದರೂ, ನಮ್ಮ ಒಳಗೆ ಅಗ್ನಿ (ಜೀರ್ಣಶಕ್ತಿ) ಬಲವಾಗಿರುತ್ತದೆ ಎಂದು ಆಯುರ್ವೇದ ಹೇಳುತ್ತದೆ.

ಈ ಸಮಯದಲ್ಲಿ ದೇಹಕ್ಕೆ ಉಷ್ಣ, ಸ್ನಿಗ್ಧ ಮತ್ತು ಪೌಷ್ಟಿಕ ಆಹಾರ ಬೇಕಾಗುತ್ತವೆ. ಎಳ್ಳು ಈ ಮೂರೂ ಗುಣಗಳನ್ನು ಹೊಂದಿದೆ: ಉಷ್ಣತೆಯನ್ನು ನೀಡುತ್ತದೆ, ದೇಹಕ್ಕೆ ಸ್ನಿಗ್ಧತೆಯ ಪೋಷಣೆ ಯನ್ನು ನೀಡುತ್ತದೆ, ಶಕ್ತಿ ಮತ್ತು ಬಲವನ್ನು ಒದಗಿಸುತ್ತದೆ.

ಅದಕ್ಕಾಗಿಯೇ ಸಂಕ್ರಾಂತಿ ಕಾಲದಲ್ಲಿ ಎಳ್ಳು ಸೇವಿಸುವುದು ಋತುಸಮ್ಮತ ಮತ್ತು ವೈeನಿಕ. ಎಳ್ಳಿನ ಜತೆ ಬೆಲ್ಲ, ಕೇವಲ ಸಿಹಿ ಅಲ್ಲ, ಅದು ಸಮತೋಲನಕ್ಕಾಗಿ. ಬೆಲ್ಲ ದೇಹಕ್ಕೆ ತಕ್ಷಣದ ಶಕ್ತಿ ನೀಡುತ್ತದೆ, ರಕ್ತವನ್ನು ಶುದ್ಧಗೊಳಿಸುತ್ತದೆ, ಶೀತವನ್ನು ತಗ್ಗಿಸುತ್ತದೆ. ಇದು ಎಳ್ಳಿನ ಸೇವನೆಯಿಂದ ಆಗಬಹು ದಾದ ಮಲಬದ್ಧತೆಯನ್ನು ಶಮನಗೊಳಿಸುತ್ತದೆ.

ಎಳ್ಳಿನ ಉಷ್ಣತೆ ಮತ್ತು ಬೆಲ್ಲದ ಸೌಮ್ಯ ಸಿಹಿತನ ಎರಡೂ ಸೇರಿ ದೇಹದಲ್ಲಿ ಸಮತೋಲನವನ್ನು ನಿರ್ಮಿಸುತ್ತವೆ. ಇದು ಕೇವಲ ರುಚಿಯ ಸಂಯೋಜನೆ ಅಲ್ಲ; ಅದು ಆಯುರ್ವೇದೀಯ ಸಮನ್ವಯ.

ಜತೆಗೆ ಸೇರುವ ಕೊಬ್ಬರಿ, ಕಡ್ಲೆಬೀಜ, ಗೆಣಸು, ಕಬ್ಬು - ಎಲ್ಲವೂ ಚಳಿಗಾಲದಲ್ಲಿ ದೇಹೇಂದ್ರಿಯಗಳಿಗೆ ಬೇಕಾದ ಪೋಷಣೆಯನ್ನು ನೀಡುತ್ತವೆ. ಎಳ್ಳು-ಬೆಲ್ಲವನ್ನು ಪರಸ್ಪರ ಹಂಚಿಕೊಳ್ಳುವ ಸಂಪ್ರದಾಯ ನಮ್ಮ ಸಮಾಜದ ಒಳಾರ್ಥವನ್ನು ಹೇಳುತ್ತದೆ. ಎಳ್ಳಿನಂತೆ ಕೆಲವೊಮ್ಮೆ ಜೀವನ ಕಹಿಯಾಗಿರ ಬಹುದು, ಬೆಲ್ಲದಂತೆ ಕೆಲವೊಮ್ಮೆ ಸಿಹಿಯಾಗಿರಬಹುದು.

ಆದರೆ ಎರಡನ್ನೂ ಒಟ್ಟಿಗೆ ಸ್ವೀಕರಿಸಿ, ಪರಸ್ಪರ ಸೌಹಾರ್ದ, ಸಹನೆ ಮತ್ತು ಸಿಹಿಮಾತುಗಳಿಂದ ಬದುಕನ್ನು ಸಾಗಿಸುವ ಸಂದೇಶ ಇದರಲ್ಲಿ ಅಡಗಿದೆ. ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಒತ್ತಡ, ವೈಮನಸ್ಸು, ಅಸಹನೆ- ಇವೆಲ್ಲಕ್ಕೆ ಈ ಸಂಪ್ರದಾಯ ಒಂದು ಮೌನವಾದ ಔಷಧಿಯಂತಿದೆ.

ಎಳ್ಳು ಆರೋಗ್ಯಕರವಾದರೂ, ಪ್ರಮಾಣ ಮತ್ತು ವಿಧಾನ ಮುಖ್ಯ. ಅತಿಯಾಗಿ ಸೇವಿಸಿದರೆ ಜೀರ್ಣ ಕ್ರಿಯೆಗೆ ಭಾರವಾಗಬಹುದು. ಅಜೀರ್ಣವಾಗಬಹುದು. ಹೋಗುತ್ತಾ-ಬರುತ್ತಾ ಎಳ್ಳು-ಬೆಲ್ಲವನ್ನು ಮೇಯುತ್ತಲೇ ಇದ್ದರೆ ತೊಂದರೆ ತಪ್ಪದು. ವಿಶೇಷವಾಗಿ ಪಿತ್ತ ಪ್ರಕೃತಿಯವರು ಮತ್ತು ಉಷ್ಣ ಸಮಸ್ಯೆ ಇರುವವರು ಎಚ್ಚರಿಕೆಯಿಂದ ಬಳಸಬೇಕು.

ಎಳ್ಳನ್ನು ಚಳಿಗಾಲದಲ್ಲಿ ಜೀರ್ಣಶಕ್ತಿಗೆ ತಕ್ಕಂತೆ ಬಳಸಬಹುದು ಆದರೆ ಬೇಸಿಗೆಯಲ್ಲಿ ಎಚ್ಚರದಿಂದ ಬಳಸಬೇಕು. ರಥಸಪ್ತಮಿಯ ನಂತರ ಕ್ರಮೇಣ ಎಳ್ಳಿನ ಪ್ರಮಾಣವನ್ನು ಕಡಿಮೆಮಾಡಬಹುದು. ಸ್ನೇಹಿತರೇ, ನಮ್ಮ ಹಬ್ಬಗಳು ಅಂಧಶ್ರದ್ಧೆಗಳಲ್ಲ; ಅವು ಸಾವಿರಾರು ವರ್ಷಗಳ ಅನುಭವದಿಂದ ರೂಪುಗೊಂಡ ಜೀವನ ವಿಜ್ಞಾನಗಳು.

ಎಳ್ಳು ಮತ್ತು ಸಂಕ್ರಾಂತಿ ಇದರ ಒಂದು ಸುಂದರ ಉದಾಹರಣೆ. ಇಂದಿನ ತಲೆಮಾರಿಗೆ ಈ ಆಚರಣೆ ಗಳ ಹಿಂದೆ ಇರುವ ಆರೋಗ್ಯ ಮತ್ತು ತಾತ್ವಿಕ ಅರ್ಥವನ್ನು ತಿಳಿಸುವುದು ಅತ್ಯಂತ ಅಗತ್ಯ. ಎಳ್ಳು-ಬೆಲ್ಲ ಸೇವಿಸುವ ಮೂಲಕ ನಾವು ಕೇವಲ ಹಬ್ಬ ಆಚರಿಸುವುದಿಲ್ಲ; ದೇಹ, ಮನಸ್ಸು ಮತ್ತು ಸಮಾಜದ ಸಮತೋಲನವನ್ನು ಆಚರಿಸುತ್ತೇವೆ.

ಸಂಕ್ರಾಂತಿ ನಮಗೆ ಕೇವಲ ಋತು ಬದಲಾವಣೆಯ ಹಬ್ಬವಲ್ಲ; ಅದು ಬದುಕನ್ನು ಹೊಸ ಸಮತೋಲನಕ್ಕೆ ಕರೆದೊಯ್ಯುವ ನೆನಪಿನ ಗಂಟೆ. ಎಳ್ಳು-ಬೆಲ್ಲದಂತೆ ಜೀವನವೂ ಕಹಿ-ಸಿಹಿಯ ಸಂಯೋಜನೆಯೇ. ಕಹಿಯನ್ನು ತಳ್ಳಿ ಹಾಕದೆ, ಸಿಹಿಯನ್ನು ಅತಿಯಾಗಿ ಅಪ್ಪಿಕೊಳ್ಳದೆ- ಎರಡನ್ನೂ ಸಮಬುದ್ಧಿಯಿಂದ ಸ್ವೀಕರಿಸುವುದು ಭಾರತೀಯ ಚಿಂತನೆಯ ಸಾರ.

ಎಳ್ಳಿನ ಸಣ್ಣ ಬೀಜದಲ್ಲಿ ಅಪಾರ ಶಕ್ತಿ ಅಡಗಿರುವಂತೆ, ನಮ್ಮ ದಿನನಿತ್ಯದ ಸರಳ ಆಚರಣೆಗಳಲ್ಲೂ ಆಳವಾದ ಜ್ಞಾನ ಅಡಗಿದೆ. ಅವುಗಳನ್ನು ಅಂಧಾನುಕರಣವಲ್ಲದೆ ಅರಿವಿನಿಂದ ಆಚರಿಸಿದಾಗ ಮಾತ್ರ ಅವು ಜೀವನ ವಿಜ್ಞಾನವಾಗುತ್ತವೆ. ಪ್ರಕೃತಿಯ ಋತುಚಕ್ರಕ್ಕೆ ಹೊಂದಿಕೊಂಡು ಬದುಕು ವುದು, ದೇಹದ ಅಗತ್ಯಗಳನ್ನು ಗೌರವಿಸುವುದು ಮತ್ತು ಸಮಾಜದೊಂದಿಗೆ ಸೌಹಾರ್ದವನ್ನು ಬೆಳೆಸುವುದು- ಇದುವೇ ನಮ್ಮ ಸಂಸ್ಕೃತಿಯ ಮೌಲ್ಯ.

ಇಂದಿನ ವೇಗದ ಬದುಕಿನಲ್ಲಿ ನಾವು ಆರೋಗ್ಯವನ್ನು ಔಷಧಿಯಲ್ಲಿ ಹುಡುಕುತ್ತೇವೆ, ಶಾಂತಿಯನ್ನು ಹೊರಗಡೆ ಅನ್ವೇಷಿಸುತ್ತೇವೆ. ಆದರೆ ನಮ್ಮ ಪೂರ್ವಜರು ಉತ್ತರವನ್ನು ಆಹಾರದಲ್ಲಿ, ಆಚರಣೆ ಯಲ್ಲಿ ಮತ್ತು ಪರಸ್ಪರ ಸಂಬಂಧಗಳಲ್ಲಿ ಬಿತ್ತಿದ್ದರು. ಎಳ್ಳು-ಬೆಲ್ಲ ಹಂಚುವ ಕ್ಷಣದಲ್ಲಿ ಆರೋಗ್ಯ, ಕೃತಜ್ಞತೆ ಮತ್ತು ಮಾನವೀಯತೆ ಒಂದಾಗಿ ಹರಿಯುತ್ತವೆ.

ಸಂಕ್ರಾಂತಿ ನಮಗೆ ಹೇಳುವುದೇ ಇದು- ಜೀವನವನ್ನು ಪ್ರಕೃತಿಗೆ ವಿರುದ್ಧವಾಗಿ ಅಲ್ಲ, ಪ್ರಕೃತಿ ಯೊಂದಿಗೆ ಕೈಜೋಡಿಸಿ ಸಾಗಿಸಬೇಕು. ಅಲ್ಲಿ ಆರೋಗ್ಯ ಸಹಜವಾಗುತ್ತದೆ, ಸಂಬಂಧಗಳು ಮಧುರ ವಾಗುತ್ತವೆ ಮತ್ತು ಬದುಕು ಅರ್ಥಪೂರ್ಣವಾಗುತ್ತದೆ. ಎಳ್ಳು ಬೀರಲಿ, ಕೇವಲ ನೆಲದಲ್ಲಿ ಅಲ್ಲ; ನಮ್ಮ ಅರಿವಿನಲ್ಲಿ, ನಮ್ಮ ಬದುಕಿನಲ್ಲಿ, ನಮ್ಮ ಮೌಲ್ಯಗಳಲ್ಲಿ.

ಡಾ. ಸಾಧನಾಶ್ರೀ ಪಿ,

View all posts by this author