ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokesh Kaayarga Column: ಸೇನೆಯಲ್ಲೂ ಮತಭೇದ ರಾಜಕೀಯ !

ನಮ್ಮ ಗುಪ್ತಚರ ಪಡೆ ಸಿಬ್ಬಂದಿ ತಮ್ಮ ಜೀವವನ್ನು ಲೆಕ್ಕಿಸದೇ ಹೈ ಪ್ರೊಫೈಲ್ ಉಗ್ರರ ಕುರಿತ ಮಾಹಿತಿ ಕಲೆ ಹಾಕಿದ್ದು ದೇಶದ ಮೇಲಿನ ನಿಷ್ಠೆಯಿಂದ. ಈ ಮಾತು ಹೇಳಲು ಕಾರಣವಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಭಾರತೀಯ ಸೇನೆಯು ಜನಸಂಖ್ಯೆಯ ಸುಮಾರು ಶೇ. ೧೦ರಷ್ಟಿರುವ ಮೇಲ್ಜಾತಿಯ ಜನರಿಂದ ನಿಯಂತ್ರಿಸಲ್ಪಡುತ್ತದೆ ಎಂದು ಆರೋಪಿಸಿದ್ದಾರೆ.

ಲೋಕಮತ

ಪ್ರಣಬ್‌ ಮುಖರ್ಜಿಯವರು ದೇಶದ ರಕ್ಷಣಾ ಸಚಿವರಾಗಿದ್ದ ಸಂದರ್ಭದಲ್ಲಿ, ‘ನಿಮ್ಮಲ್ಲಿರುವ ಮುಸ್ಲಿಮರ ಸಂಖ್ಯೆ ಎಷ್ಟು’ ನೇರವಾಗಿಯೇ ಪ್ರಶ್ನಿಸಿದ್ದರು. ಆಗಲೂ ‘ಸೇನೆಯನ್ನು ಧರ್ಮದ ಆಧಾರದಲ್ಲಿ ಒಡೆಯುವ ಕೆಲಸ ಮಾಡಬೇಡಿ’ ಎಂದು ಅಧಿಕಾರಿಗಳು ದಿಟ್ಟ ಉತ್ತರ ನೀಡಿದ್ದರು. ರಾಹುಲ್ ಅವರ ಆರೋಪಕ್ಕೂ ಸೇನೆ ಇದೇ ರೀತಿಯ ಉತ್ತರ ಕೊಟ್ಟಿದೆ.""

ಆರು ವರ್ಷಗಳ ಹಿಂದೆ ಪುಲ್ವಾಮದಲ್ಲಿ ಆತ್ಮಾಹುತಿ ದಾಳಿ ನಡೆಸಿ ಸುಮಾರು 40 ಸಿಆರ್‌ ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡ ಕರಾಳ ಘಟನೆಯನ್ನು ಜನರು ಇನ್ನೂ ಮರೆತಿಲ್ಲ. ಇದೀಗ ರಾಷ್ಟ್ರ ರಾಜಧಾನಿಯ ಮೇಲೆ ಅದೇ ಮಾದರಿಯಲ್ಲಿ ಮತ್ತೊಂದು ದಾಳಿ ನಡೆದಿದೆ. ಈ ಹಿಂದೆ ಹಲವು ಬಾರಿ ಉಗ್ರರ ನೆತ್ತರದೋಕುಳಿಯಲ್ಲಿ ನರಳಿದ ರಾಜಧಾನಿಗೆ ಈ ದಾಳಿ ಹೊಸದೇನೂ ಅಲ್ಲ. ಆದರೆ ಈ ಹಿಂಸಾಕೃತ್ಯದ ಹೊರತಾಗಿಯೂ ನಾವು ನಮ್ಮ ಭದ್ರತಾ ಪಡೆಗಳಿಗೆ, ಪೊಲೀಸರಿಗೆ ಧನ್ಯವಾದ ಹೇಳಬೇಕಿದೆ.

ಈ ಹಿಂಸಾಕೃತ್ಯಕ್ಕೆ ಕೆಲವೇ ಗಂಟೆಗಳ ಮೊದಲು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹರಿಯಾಣದ ಫರಿದಾಬಾದ್‌ನಲ್ಲಿ ಸುಮಾರು ೩ ಸಾವಿರ ಕಿಲೋ ಸ್ಫೋಟಕ, ಎ.ಕೆ 47 ಬಂದೂಕು, ಮದ್ದುಗುಂಡುಗಳನ್ನು ವಶಪಡಿಸಿಕೊಂಡು ಮೂವರು ವೈದ್ಯರನ್ನು ಬಂಧಿಸಿ ದ್ದರು. ಈ ಕಾರ‍್ಯಾಚರಣೆ ನಡೆಯದೇ ಹೋಗಿದ್ದರೆ ದೇಶವ್ಯಾಪಿ ಇದಕ್ಕಿಂತ ನೂರು ಪಟ್ಟು ಹೆಚ್ಚಿನ ಅನಾಹುತ ನಡೆಯುವುದು ಖಚಿತವಿತ್ತು.

ನಮ್ಮ ರಾಜಕೀಯ ನಾಯಕರು ಎಂದಿನಂತೆ ಈ ಬಾರಿಯೂ ದೆಹಲಿ ಘಟನೆ ಸಂಬಂಧ ರಾಜಕೀಯ ಕೆಸರೆರಚಾಟ ಆರಂಭಿಸಿದ್ದಾರೆ. ಕೆಲವರು, ‘ಬಿಹಾರ ಚುನಾವಣೆ ಹೊಸ್ತಿಲಲ್ಲಿ ಮೋದಿ ಸರಕಾರವೇ ಈ ಕೃತ್ಯ ನಡೆಸಿದೆ’ ಎನ್ನುವ ಮಾತನ್ನೂ ಆಡಿದ್ದಾರೆ.

ಇದನ್ನೂ ಓದಿ: Lokesh Kaayarga Column: ವೀರಪ್ಪನ್ ಬದುಕಿದ್ದರೆ ಹೀಗಾಗುತ್ತಿರಲಿಲ್ಲವಂತೆ.... !

ಒಂದು ಕ್ಷಣ ಯೋಚಿಸಿ, ಒಂದು ವೇಳೆ ನಮ್ಮ ಗುಪ್ತಚರ ಪಡೆ, ಸೇನೆ ಮತ್ತು ಪೊಲೀಸರು ಉಗ್ರರ ಜಾತಿ, ಮತ, ಪಂಥಗಳನ್ನು ಗಮನಿಸಿ ದಮನ ಕಾರ‍್ಯಾಚರಣೆಯ ಬಗ್ಗೆ ಹಿಂದೆ ಮುಂದೆ ಯೋಚಿಸಿದ್ದರೆ ಏನಾಗುತ್ತಿತ್ತು? ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿರುವ ಜಮ್ಮು- ಕಾಶ್ಮೀರ ಪೊಲೀಸರು ಪಾತಕಿಗಳನ್ನು ದೇಶವಿರೋಧಿಗಳೆಂಬ ಒಂದೇ ನೆಲೆಯಲ್ಲಿ ಹೆಡೆಮುರಿ ಕಟ್ಟಿದರೇ ಹೊರತು, ಉಗ್ರರ ಧರ್ಮ, ಪಂಥ, ಸಿದ್ಧಾಂತಗಳ ಹಿನ್ನೆಲೆಯಲ್ಲಿ ಅಲ್ಲ.

ನಮ್ಮ ಗುಪ್ತಚರ ಪಡೆ ಸಿಬ್ಬಂದಿ ತಮ್ಮ ಜೀವವನ್ನು ಲೆಕ್ಕಿಸದೇ ಹೈ ಪ್ರೊಫೈಲ್ ಉಗ್ರರ ಕುರಿತ ಮಾಹಿತಿ ಕಲೆ ಹಾಕಿದ್ದು ದೇಶದ ಮೇಲಿನ ನಿಷ್ಠೆಯಿಂದ. ಈ ಮಾತು ಹೇಳಲು ಕಾರಣವಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಭಾರತೀಯ ಸೇನೆಯು ಜನಸಂಖ್ಯೆಯ ಸುಮಾರು ಶೇ. ೧೦ರಷ್ಟಿರುವ ಮೇಲ್ಜಾತಿಯ ಜನರಿಂದ ನಿಯಂತ್ರಿಸಲ್ಪಡುತ್ತದೆ ಎಂದು ಆರೋಪಿಸಿದ್ದಾರೆ.

ಈ ಮೂಲಕ ಸೇನೆಗೂ ‘ಸೆಕ್ಯುಲರ್’ ಸ್ವರೂಪ ಕೊಡುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಸೇನೆಯಲ್ಲಿ ಎಲ್ಲ ಮೇಲ್ಜಾತಿ- ಕೆಳಜಾತಿ ಎಂಬ ಭೇದ ಭಾವವಿಲ್ಲದೆ ಎಲ್ಲ ವರ್ಗದ ಜನರೂ ಇದ್ದಾರೆ. ರಾಹುಲ್ ಅವರ ಮುಖ್ಯ ಆಕ್ಷೇಪವಿರುವುದು ಮುಸ್ಲಿಮರ ಪ್ರಾತಿನಿಧ್ಯದ ಬಗ್ಗೆ.

Army

ರಾಹುಲ್ ಅವರ ಈ ಅರೋಪ ಹೊಸದೇನೂ ಅಲ್ಲ. ಹಿಂದುಳಿದ ವರ್ಗಗಳು, ದಲಿತರು, ಪರಿಶಿಷ್ಟ ಪಂಗಡಗಳು ಮತ್ತು ಇತರ ಅಲ್ಪಸಂಖ್ಯಾತರನ್ನು ಒಳಗೊಂಡ ಶೇ.90ರಷ್ಟು ಭಾರತೀಯರು ಪ್ರಮುಖ ಸ್ಥಾನಗಳಿಂದ ಹೊರಗುಳಿದಿದ್ದಾರೆ ಎಂದು ಅವರು ಈ ಹಿಂದೆ ಯೂ ವಾದಿಸಿದ್ದರು.

ಐಎಎಸ್, ಐಪಿಎಸ್, ಐಎಫ್‌ ಎಸ್ ಸೇರಿದಂತೆ ಭಾರತದ ಆಡಳಿತ ಸೇವೆ, (ಕಾರ‍್ಯಾಂಗ) ನ್ಯಾಯಾಂಗದಲ್ಲಿ ಅಹಿಂದ ವರ್ಗದ ಪ್ರಾತಿನಿಧ್ಯ ತೀರಾ ಕಡಿಮೆ ರಾಹುಲ್ ದೂರಿದ್ದರು. ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ಥಂಭವೆನಿಸಿದ ಮಾಧ್ಯಮವೂ ಶ್ರೀಮಂತರ ಕೈಯಲ್ಲಿದೆ ಎಂದು ಆಕ್ಷೇಪಿಸಿದ್ದರು.

ಅಂಕಿ ಅಂಶಗಳನ್ನು ಮುಂದಿಟ್ಟು ನೋಡಿದರೆ ಕಾಂಗ್ರೆಸ್ ನಾಯಕನ ದೂರಿನಲ್ಲಿ ಸ್ವಲ್ಪ ಮಟ್ಟಿಗೆ ತಥ್ಯವಿದೆ ಎಂದೆನಿಸುವುದು ಸಹಜ. ಆದರೆ ಈ ಎಲ್ಲ ಸೇವೆಗಳನ್ನು ಏಕಾಏಕಿ ಸಾಮಾಜಿಕ ನ್ಯಾಯದ ತಕ್ಕಡಿಯಲ್ಲಿ ತೂಗಿ ನಿರ್ಧರಿಸಲು ಬರುವುದಿಲ್ಲ ಎನ್ನುವುದು ಅಷ್ಟೇ ಸತ್ಯ.

ಸ್ಪರ್ಧಾ ಪರೀಕ್ಷೆಯನ್ನು ಆಧರಿಸಿ ನಡೆಯುವ ಸೇನೆಯ ನೇಮಕ ಪ್ರಕ್ರಿಯೆಯಲ್ಲಿ ದೇಶದ ಯಾವುದೇ ಪ್ರಜೆ ಭಾಗವಹಿಸಲು ಅವಕಾಶವಿದೆ. ಅದಕ್ಕೆ ಬೇಕಾದ ಸೂಕ್ತ ಶಿಕ್ಷಣ, ತರಬೇತಿ, ಮಾರ್ಗದರ್ಶನ ನೀಡುವುದು ಸರಕಾರಗಳ ಕರ್ತವ್ಯ. ಆದರೆ ಈ ಏರುಪೇರನ್ನು ಬಳಸಿ ಕೊಂಡು ದೇಶದ ಸುರಕ್ಷತೆಯ ಹೊಣೆ ಹೊತ್ತ ಸೇನೆಗೆ ಕಳಂಕ ಹಚ್ಚುವುದು ಸರಿಯಲ್ಲ.

ಸೇನೆಯ ಉನ್ನತ ಹುದ್ದೆಗೆ ಏರುವವರಲ್ಲಿ ಬಹುತೇಕರು ಕುಲೀನ ಮನೆತನಕ್ಕೆ ಸೇರಿದವರು. ಸೈನಿಕರ ಹುದ್ದೆಗಳಿಗೆ ಬರುವವರಲ್ಲಿ ಬಹುತೇಕರು ಗ್ರಾಮೀಣ ಪ್ರದೇಶ, ಸಣ್ಣ ಪಟ್ಟಣಗಳು ಮತ್ತು ಮಧ್ಯಮ ಅಥವಾ ಕೆಳ ಮಧ್ಯಮ ವರ್ಗದ ಹಿನ್ನೆಲೆಯವರು ಎಂಬ ದೂರುಗಳಿವೆ. ಇದಕ್ಕೆ ಹಲವು ಕಾರಣಗಳಿವೆ. ಸೇನೆಯ ಅಧಿಕಾರಿ ಹುದ್ದೆ ಪಡೆಯಲು ಬೇಕಾಗುವ ಶಿಕ್ಷಣ, ಕೌಶಲ್ಯ ಮತ್ತು ಆರಂಭಿಕ ತರಬೇತಿಗಾಗಿ ಅಗತ್ಯವಿರುವ ಸಂಪನ್ಮೂಲ ಈ ತನಕ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗಕ್ಕೆ ಮಾತ್ರ ಸಿಗುವಂತಿತ್ತು.

ಹೀಗಾಗಿ ಇಲ್ಲಿ ಉತ್ತಮ ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಯ ಯುವಕರೇ ಹೆಚ್ಚಿನ ಸಂಖ್ಯೆ ಯಲ್ಲಿ ಕಾಣಿಸಿಕೊಳ್ಳುವಂತಾಯಿತು. ಈಗ ಈ ವಿದ್ಯಮಾನ ಬದಲಾಗಿದೆ. ದೇಶದ ಎಲ್ಲ ಭಾಗಗಳಿಂದ, ಎಲ್ಲ ಸ್ತರಗಳಿಗೆ ಸೇರಿದ ಯುವಕರು ಸೇನೆ ಸೇರುತ್ತಿದ್ದಾರೆ. ಇತ್ತೀಚಿನ ವರ್ಷ ಗಳಲ್ಲಿ, ಪ್ರತಿಷ್ಠಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಅಧಿಕಾರಿಗಳ ಮಕ್ಕಳ ಸಂಖ್ಯೆ ಗಿಂತ ಮಿಲಿಟರಿಯೇತರ ಹಿನ್ನೆಲೆಯ ಅಭ್ಯರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ.

‘ನಾವು ಜಾತಿ ಅಥವಾ ಧರ್ಮದ ಮೇಲೆ ಕಾರ್ಯ ನಿರ್ವಹಿಸುವುದಿಲ್ಲ. ದೇಶದ ರಕ್ಷಣೆಗಾಗಿ ಒಗ್ಗಟ್ಟಿನಿಂದ ನಿಲ್ಲುತ್ತೇವೆ’ ಎನ್ನುವುದು ಭಾರತೀಯ ಸೇನೆಯ ಅಧಿಕೃತ ನಿಲುವು. ತೀರಾ ಇತ್ತೀಚೆಗೆ ‘ಆಪರೇಷನ್ ಸಿಂದೂರ’ ನಮ್ಮ ಸೇನೆಯ ನಿಲುವನ್ನು ಜಗತ್ತಿಗೇ ಸಾರಿ ಹೇಳಲಾ ಗಿತ್ತು. ಆಪರೇಶನ್ ಸಿಂದೂರ ವೇಳೆ ಮಾಧ್ಯಮ ಗೋಷ್ಠಿ ನಿರ್ವಹಿಸಿದ ಮಹಿಳಾ ಅಧಿಕಾರಿ ಗಳಾದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಭಾರತೀಯ ಸೇನಾ ಸಮವಸ್ತ್ರಧಾರಿಗಳಾಗಿ ತ್ರಿವರ್ಣ ಧ್ವಜದ ರಕ್ಷಣೆಗಾಗಿ ಪಣ ತೊಟ್ಟಿದ್ದರು.

ಇಬ್ಬರೂ ಧರ್ಮ, ರಾಜಕೀಯದ ಸೋಂಕು ಇಲ್ಲದೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ದ್ದರು. ಪಾಕಿಸ್ತಾನವು ಎಐ ತಂತ್ರಜ್ಞಾನ ಬಳಸಿ ಕರ್ನಲ್ ಸೋಫಿಯಾ ಖುರೇಷಿ ಅವರು ಮೋದಿ ಸರಕಾರದ ವಿರುದ್ಧ ಮಾತನಾಡುವ ರೀತಿಯಲ್ಲಿ ಫೇಕ್ ವಿಡಿಯೋ ಹರಿ ಬಿಟ್ಟಿದ್ದು, ಇವರ ಉಪಸ್ಥಿತಿ ಆ ದೇಶಕ್ಕೆ ಯಾವ ಮಟ್ಟದಲ್ಲಿ ಕಿರಿಕಿರಿ ಮಾಡಿತ್ತು ಎನ್ನುವುದರ ದ್ಯೋತಕ.

ಭಾರತೀಯ ಸೇನೆ ಅತ್ಯಂತ ಶಿಸ್ತು ಬದ್ಧ , ವೃತ್ತಿಪರ ಪಡೆಯೆಂದು ವಿಶ್ವದಲ್ಲಿಯೇ ಮಾನ್ಯತೆ ಪಡೆದಿದೆ. ಜಾತಿ, ಧರ್ಮ, ಭಾಷೆ, ಪ್ರಾಂತ್ಯ ಮತ್ತು ರಾಜಕೀಯದ ಸೋಂಕು ಇಲ್ಲದ ದೇಶದ ಏಕೈಕ ಸಂಘಟನೆಯೆಂದರೆ ಅದು ನಮ್ಮ ಸೇನೆ. ಯಾವುದೇ ದೇಶದಲ್ಲಿ ಶಾಂತಿಪಾಲನಾ ಪಡೆಗೆ ಮೊದಲ ಆಯ್ಕೆ ಭಾರತೀಯ ಸೇನೆ.

ಇರಾಕ್‌ನಿಂದ ಅಮೆರಿಕ ಸೇನೆ ವಾಪಸ್ ಹೊರಟಾಗ ಅಲ್ಲಿ ಶಾಂತಿ ಸ್ಥಾಪನೆ ಹೊಣೆ ಹೊತ್ತಿದ್ದು ಭಾರತೀಯ ಸೇನೆ. ಮುಸ್ಲಿಮರು ಬಹುಸಂಖ್ಯಾತರಾಗಿರುವ ಇಥಿಯೋಪಿಯಾ, ಕಾಂಗೋ, ಕೊಸವೋ ಮುಂತಾದೆಡೆ ಕಾರ್ಯ ನಿರ್ವಹಿಸಿದ ಭಾರತೀಯ ಸೇನೆ ಎಂದೂ ಹೆಸರು ಕೆಡಿಸಿಕೊಂಡಿಲ್ಲ.

ಭಾರತೀಯ ಸೇನೆಗೆ ಸೇರಲು ವಯೋಮಿತಿ, ದೇಹದಾರ್ಡ್ಯತೆಯಂತಹ ಕನಿಷ್ಠ ಅರ್ಹತೆ ಗಳನ್ನು ಹೊರತುಪಡಿಸಿದರೆ, ಇನ್ನಾವುದೇ ಷರತ್ತುಗಳಿಲ್ಲ. ಧರ್ಮ, ಜಾತಿ, ಪ್ರಾಂತ್ಯ, ಭಾಷೆಯ ಬಗ್ಗೆ ಸೇನೆ ಎಂದೂ ತಲೆಕೆಡಿಸಿಕೊಂಡಿಲ್ಲ. ಸಿಖ್ ರೆಜಿಮೆಂಟ್, ಜಾಟ್ ರೆಜಿಮೆಂಟ್, ಮರಾಠಾ ಲೈಟ್ ಇನ್ ಫೆಂಟ್ರಿ, ಹಿಮಾಚಲದ ಡೋಗ್ರಾ ರೆಜಿಮೆಂಟ್, ದಕ್ಷಿಣ ಭಾರತದ ಮದ್ರಾಸ್ ರೆಜಿಮೆಂಟ್, ರಜಪೂತನಾ ರೈಫಲ್ಸ್, ಬಿಹಾರ್ ರೆಜಿಮೆಂಟ್, ನಾಗಾ ರೆಜಿಮೆಂಟ್, ಲಡಾಖ್ ಸ್ಕೌಟ್ಸ್, ಗೂರ್ಖಾ ರೈಫಲ್ಸ್ ಇತ್ಯಾದಿ ದೇಶದ ವಿವಿಧ ಜನಾಂಗ ಮತ್ತು ಪ್ರಾಂತ್ಯದ ಹೆಸರು ಹೊತ್ತ ತುಕಡಿಗಳು ಭಾರತೀಯ ಸೇನೆಯ ಭಾಗವಾಗಿವೆ. ಆದರೆ ಈ ತುಕಡಿಗಳಲ್ಲಿ ದೇಶದ ಎಡೆಯಿಂದ ಬಂದ ಯೋಧರಿದ್ದಾರೆ.

ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‌ನಲ್ಲಿ ಉತ್ತರ ಭಾರತದವರಿದ್ದಾರೆ. ಸಿಖ್ ರೆಜಿಮೆಂಟ್‌ ನಲ್ಲಿ ದಕ್ಷಿಣ ಭಾರತೀಯರಿದ್ದಾರೆ. ಬ್ರಿಟಿಷರು ಇಟ್ಟ ಈ ಹೆಸರುಗಳನ್ನು ಬದಲಾಯಿಸ ಬೇಕೆಂಬ ಆಗ್ರಹವಿದ್ದರೂ ಪರಂಪರೆಗೆ ಮಾನ್ಯತೆ ನೀಡಿ ಸೇನೆ ಈ ಕೆಲಸಕ್ಕೆ ಕೈ ಹಾಕಿಲ್ಲ. ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್ ಫೆಂಟ್ರಿಯಂತಹ ರೆಜಿಮೆಂಟ್‌ಗಳಲ್ಲಿ ಮುಸ್ಲಿಂ ಯೋಧರ ಪ್ರಮಾಣವು ಗಣನೀಯವಾಗಿ ಹೆಚ್ಚಿದೆ. ಆದರೆ ಸೇನೆ ಎಂದೂ ಧರ್ಮ ಆಧಾರಿತ ಅಂಕಿ ಅಂಶಗಳನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.

ಭಾರತೀಯ ಸೇನೆಯಲ್ಲಿ ಮುಸ್ಲಿಮರು, ಸಿಖ್ಖರು, ಕ್ರೈಸ್ತರು ಅತ್ಯುನ್ನತ ಹುದ್ದೆಗೆ ಏರಿದ, ದೇಶದ ಪರವಾಗಿ ಕಾದಾಡಿ ಪ್ರಾಣ ತ್ಯಾಗ ಮಾಡಿದ ಹಲವಾರು ನಿದರ್ಶನಗಳಿವೆ. ಗ್ರೆನೇಡಿ ಯರ‍್ಸ್ ರೆಜಿಮೆಂಟ್ ಭಾಗ ವಾಗಿದ್ದ ಹವಾಲ್ದಾರ್ ಅಬ್ದುಲ್ ಹಮೀದ್ 1965ರ ಯುದ್ಧದಲ್ಲಿ ಪಾಕಿಸ್ತಾನದ ಅಮೆರಿಕ ನಿರ್ಮಿತ ಏಳು ಟ್ಯಾಂಕ್‌ಗಳನ್ನು ಧ್ವಂಸ ಮಾಡಿ ಹುತಾತ್ಮರಾಗಿ ದ್ದರು. ಅವರ ಈ ಅಪ್ರತಿಮ ಸಾಹಸಕ್ಕೆ ಮರಣೋತ್ತರ ಪರಮವೀರ ಚಕ್ರ ಪದಕ ನೀಡಲಾ ಗಿತ್ತು.

78-80ರ ಅವಧಿಯಲ್ಲಿ ಏರ್ ಚೀಫ್ ಮಾರ್ಷಲ್ ಇದ್ರಿಸ್ ಹಸನ್ ಲತೀಫ್ ವಾಯುಪಡೆ ಮುಖ್ಯಸ್ಥರಾಗಿದ್ದರು. ಜನರಲ್ ಒ.ಪಿ. ಮಲ್ಹೋತ್ರಾ ಮತ್ತು ಅಡ್ಮಿರಲ್ ರೋನಿ ಪಿರೇರಾ ಭೂಸೇನೆ ಮತ್ತು ನೌಕಾ ಪಡೆ ಮುಖ್ಯಸ್ಥರಾಗಿ ‘ಅಮರ್, ಅಕ್ಬರ್, ಆಂಥೋನಿ’ ಎಂದು ಹೆಸರಾಗಿದ್ದರು. ‌

ವಿಶ್ವದ ಬೇರೆ ಯಾವುದೇ ಸೇನೆ ಭಾರತೀಯ ಸೇನೆಯಲ್ಲಿರುವ ವೈವಿಧ್ಯತೆ ಹೊಂದಿಲ್ಲ. ಇದು ನಮ್ಮ ಹೆಮ್ಮೆಯೂ ಹೌದು. ಆದರೆ ನಮ್ಮ ರಾಜಕೀಯ ನಾಯಕರಿಗೆ ಆಗಾಗ ಸೇನೆಗೆ ಸೆಕ್ಯು ಲರ್ ಇಮೇಜ್ ನೀಡುವ ಉಮೇದು ಬರುತ್ತದೆ. ಇದು ಹೊಸ ವಿದ್ಯಮಾನವೇನೂ ಅಲ್ಲ. ಭಾರತದ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿಯವರು ದೇಶದ ರಕ್ಷಣಾ ಸಚಿವ ರಾಗಿದ್ದ ಸಂದರ್ಭದಲ್ಲಿ, ‘ನಿಮ್ಮಲ್ಲಿರುವ ಮುಸ್ಲಿಮರ ಸಂಖ್ಯೆ ಎಷ್ಟು’ ನೇರವಾಗಿಯೇ ಪ್ರಶ್ನಿಸಿದ್ದರು.

ಇದಕ್ಕೆ ‘ಸೇನೆಯನ್ನು ಧರ್ಮದ ಆಧಾರದಲ್ಲಿ ಒಡೆಯುವ ಕೆಲಸ ಮಾಡಬೇಡಿ’ ಎಂದು ಅಧಿಕಾರಿಗಳು ದಿಟ್ಟ ಉತ್ತರ ನೀಡಿದ್ದರು. ರಾಹುಲ್ ಅವರ ಆರೋಪಕ್ಕೂ ಸೇನೆ ಇದೇ ರೀತಿಯ ಉತ್ತರ ಕೊಟ್ಟಿದೆ. ಅಮೆರಿಕದ ಎಂಐಟಿ ಅಸಿಸ್ಟೆಂಟ್ ಪ್ರೊಫೆಸರ್ ಉಮರ್ ಖಾಲಿದ್ ಭಾರತೀಯ ಸೇನೆಯ ಬಗ್ಗೆ ಬರೆದ ಪುಸ್ತಕದಲ್ಲಿ, ಮುಸ್ಲಿಮರ ಜನಸಂಖ್ಯೆಗೆ ಹೋಲಿಸಿದರೆ ಸೇನೆಯಲ್ಲಿ ಅವರ ಪ್ರಾತಿನಿಧ್ಯ ಕಡಿಮೆ ಎಂದು ಪ್ರತಿವಾದಿಸಿದ್ದರು.

ಯುಪಿಎ ಸರಕಾರದಿಂದ ದೇಶದ ಮುಸ್ಲಿಮರ ಸ್ಥಿತಿಗತಿ ಅಧ್ಯಯನಕ್ಕೆ ನೇಮಕಗೊಂಡ ನ್ಯಾಯಮೂರ್ತಿ ರಾಜಿಂದರ್ ಸಾಚಾರ್ ಅವರು ಇದೇ ವಾದವನ್ನು ಆಧರಿಸಿ ಸೇನೆಯಲ್ಲಿ ರುವ ಮುಸ್ಲಿಮರ ಸಂಖ್ಯೆಯ ಬಗ್ಗೆ ವಿವರ ಕೋರಿದ್ದರು. ತಮ್ಮ ವರದಿಯಲ್ಲೂ ಈ ಬಗ್ಗೆ ಪ್ರಸ್ತಾಪಿಸ್ದಿರು.

ಅಲ್ಲಿಂದ ಈ ತನಕ ಸೇನೆಯಲ್ಲಿ ‘ಮತಾಧಾರಿತ ಮೀಸಲು’ ಬಗ್ಗೆ ಆಗಾಗ ಚರ್ಚೆ ನಡೆಯು ತ್ತಲೇ ಇದೆ. ಸ್ವಾತಂತ್ರ್ಯಕ್ಕೆ ಮುನ್ನ ಭಾರತೀಯ ಸೇನೆಯಲ್ಲಿ ಮುಸ್ಲಿಂ ಯೋಧರು ಸಾಕಷ್ಟಿ ದ್ದರು. ಆದರೆ ಧರ್ಮದ ಆಧಾರದಲ್ಲಿ ವಿಭಜನೆ ನಡೆದ ಕಾರಣ ಬಹುಸಂಖ್ಯಾತ ಮುಸ್ಲಿಂ ಯೋಧರು ಪಾಕ್ ಪಡೆಯನ್ನು ಸೇರುವಂತಾಯಿತು. ಆದರೂ ಸಾಕಷ್ಟು ಸಂಖ್ಯೆಯ ಮುಸ್ಲಿಂ ಯೋಧರು ಭಾರತದ ಸೇನೆಯನ್ನೇ ಆಯ್ಕೆ ಮಾಡಿಕೊಂಡರು.

ಐತಿಹಾಸಿಕ ಕಾರಣಗಳನ್ನು ಗಣನೆಗೆ ತೆಗೆದುಕೊಳ್ಳದೆ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಸೇನೆಯನ್ನು ಬಳಸಿಕೊಳ್ಳುತ್ತಿರುವುದು ದೇಶದ ಸುರಕ್ಷತೆ ದೃಷ್ಟಿಯಿಂದ ಅಪಾಯಕಾರಿ ವಿದ್ಯಮಾನ. ಸದ್ಯದ ಬೆಳವಣಿಗೆಗಳು ಅಪಾಯವನ್ನು ಸಾರಿ ಹೇಳುವಂತಿವೆ.

ಲೋಕೇಶ್​ ಕಾಯರ್ಗ

View all posts by this author