ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

T N Vasudevamurthy Column: ಶಂಕರ- ಮಧ್ವ: ಯಾರು ಪರಮಸತ್ಯದ ವಾರಸುದಾರರು?

ಶ್ರೀ ಶಂಕರರ ಕುರಿತ ಈ ಬಗೆಯ ಅವಹೇಳನದ ಮಾತು ಹೊಸತೇನಲ್ಲ, 15ನೇ ಶತಮಾನದ ಕವಿ ನಾರಾಯಣ ಪಂಡಿತರ ‘ಮಣಿಮಂಜರಿ’ ಎಂಬ ಕಾವ್ಯವನ್ನು ಉಲ್ಲೇಖಿಸುತ್ತ ಉಡುಪಿ ಮಠದವರು ಆಗಾಗ ವಿವಾದ ಎಬ್ಬಿಸುತ್ತಲೇ ಇರುತ್ತಾರೆ ಮತ್ತು ಇದಕ್ಕೆ ಶಂಕರಾಚಾರ್ಯರ ಅನುಯಾಯಿಗಳು ಕೆರಳಿ ಪ್ರತಿಕ್ರಿಯಿಸುತ್ತಿರುತ್ತಾರೆ. ಬಳಿಕ ಅವರಿಗೆ ಪ್ರತಿಯಾಗಿ ಇವರು ಮತ್ತೊಂದು ಪತ್ರಿಕಾ ಹೇಳಿಕೆ ಹೊರಡಿಸಿ ಸುಮ್ಮನಾಗುತ್ತಾರೆ.

ಧರ್ಮಜಿಜ್ಞಾಸೆ

ಟಿ.ಎನ್.ವಾಸುದೇವಮೂರ್ತಿ

ಉಡುಪಿಯ ಶ್ರೀ ಶೀರೂರು ಮಠವು ಏರ್ಪಡಿಸಿದ ಹರಿಕಥೆಯ ಸಂದರ್ಭದಲ್ಲಿ ಇಬ್ಬರು ಬಾಲಕಿ ಯರು ಶ್ರೀ ಶಂಕರಾಚಾರ್ಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಇಬ್ಬರು ಬಾಲಕಿ ಯರಿಂದ ಕ್ಷಮಾಪಣೆ ಕೇಳಿಸಿರುವುದಾಗಿ ಮಠದವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಇಲ್ಲಿ ಆ ಬಾಲಕಿಯರು ಮಾತ್ರ ಕ್ಷಮೆ ಕೇಳಬೇಕೆ? ಕಾರ್ಯಕ್ರಮ ಆಯೋಜಿಸಿದವರು, ಅವರು ಅವಹೇಳನ ಕಾರಿಯಾಗಿ ಮಾತನಾಡಲು ಕಾರಣ ವಾದ ಗ್ರಂಥ ರಚನಾಕಾರರು, ಗ್ರಂಥದ ಪ್ರಕಟಣಾಕಾರರು, ಗ್ರಂಥದ ಬೋಧಕರು ಇವರೆಲ್ಲ ಕ್ಷಮಾತೀತರೇ?

ಶ್ರೀ ಶಂಕರರ ಕುರಿತ ಈ ಬಗೆಯ ಅವಹೇಳನದ ಮಾತು ಹೊಸತೇನಲ್ಲ, 15ನೇ ಶತಮಾನದ ಕವಿ ನಾರಾಯಣ ಪಂಡಿತರ ‘ಮಣಿಮಂಜರಿ’ ಎಂಬ ಕಾವ್ಯವನ್ನು ಉಲ್ಲೇಖಿಸುತ್ತ ಉಡುಪಿ ಮಠದವರು ಆಗಾಗ ವಿವಾದ ಎಬ್ಬಿಸುತ್ತಲೇ ಇರುತ್ತಾರೆ ಮತ್ತು ಇದಕ್ಕೆ ಶಂಕರಾಚಾರ್ಯರ ಅನುಯಾಯಿಗಳು ಕೆರಳಿ ಪ್ರತಿಕ್ರಿಯಿಸುತ್ತಿರುತ್ತಾರೆ. ಬಳಿಕ ಅವರಿಗೆ ಪ್ರತಿಯಾಗಿ ಇವರು ಮತ್ತೊಂದು ಪತ್ರಿಕಾ ಹೇಳಿಕೆ ಹೊರಡಿಸಿ ಸುಮ್ಮನಾಗುತ್ತಾರೆ. ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸುವ ಆಸಕ್ತಿ ಉಭಯ ಮತದವರಿಗೂ ಇದ್ದಂತಿಲ್ಲ. ತಾರ್ಕಿಕ ಅಂತ್ಯ ಕಂಡುಬಿಟ್ಟರೆ ಜಗಳ ಮುಂದುವರಿಸಲು ಅವಕಾಶವೇ ಆಗುವುದಿಲ್ಲವಲ್ಲ! ಈ ಜಗಳ, ವಿವಾದಗಳು ಸದಾಕಾಲ ಜಾರಿಯಲ್ಲಿರಬೇಕೆಂಬುದೇ ಉಭಯ ಬಣಗಳ ಉದ್ದೇಶವಿದ್ದಂತಿದೆ.

ಭಾರತೀಯ ತಾತ್ವಿಕ ಚಿಂತನೆಯಲ್ಲಿ ಒಂದು ಪಂಥದವರು ಮತ್ತೊಂದು ಪಂಥದವರನ್ನು ಟೀಕಿಸುವ ಪದ್ಧತಿಗೆ ಅತ್ಯಂತ ಪ್ರಾಚೀನ ಇತಿಹಾಸವಿದೆ. ಭಾರತದ ಎಲ್ಲ ದರ್ಶನಗಳೂ ಚಾರ್ವಾಕ ರನ್ನು ಸಮಾನವಾಗಿ ಟೀಕಿಸಿದ್ದವು. ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ವೇದಾಂತ, ಮೀಮಾಂಸಾ ಎಂಬ ಷಡ್ದರ್ಶನಗಳು ಶ್ರಮಣ ಧಾರೆಗಳಾದ ಬೌದ್ಧ-ಜೈನ ದರ್ಶನಗಳನ್ನು ಟೀಕಿಸಿ ಕೊಂಡೇ ಬಂದಿವೆ. ವೇದಾಂತದೊಳಗೂ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಮತಗಳು ಪರಸ್ಪರ ಭಿನ್ನಾಭಿಪ್ರಾಯ ವ್ಯಕ್ತಪಡಿಸಿಕೊಂಡು ವಾಗ್ವಾದ ನಡೆಸಿವೆ. ನಮ್ಮ ಶರಣ ಸಾಹಿತ್ಯದಲ್ಲೂ ವಿಷ್ಣು ವನ್ನು, ವಿಷ್ಣುಭಕ್ತರನ್ನು ನಿಂದಿಸುವ ವಚನಗಳನ್ನು ಹೇರಳವಾಗಿ ಕಾಣಬಹುದು.

ಇದನ್ನೂ ಓದಿ: T N Vasudevmurthy Column: ಕಾವ್ಯಪ್ರತಿಮೆಗಳ ಬಳಕೆ ಮತ್ತು ದುರ್ಬಳಕೆ

ಈ ನಡುವೆ ಎಲ್ಲ ದಾರ್ಶನಿಕ ಚಿಂತನೆಗಳನ್ನೂ ಸಮಾನವಾಗಿ ಗೌರವಿಸಿ ವಿವಾದ ಶಮನ ಮಾಡುವ ಕದನ ವಿರಾಮದ ಆಶಯದೊಂದಿಗೆ ಹಲವು ಗ್ರಂಥಗಳು ಮಧ್ಯಯುಗದಲ್ಲಿ ಬಂದವು. ಅದ್ವೈತ ವಾದಿಯಾದ ಸಾಯಣ ಮಾಧವರ ಸರ್ವದರ್ಶನ ಸಂಗ್ರಹ, ಜೈನ ದಾರ್ಶನಿಕ ಹರಿಭದ್ರ ಸೂರಿಯ ಸರ್ವದರ್ಶನ ಸಮುಚ್ಚಯ, ಶ್ರೀವೈಷ್ಣವ ದೇಶಿಕರಾದ ಯಾಮುನಾಚಾರ್ಯರ ಸಿದ್ಧಿತ್ರಯ ಮುಂತಾ ದವನ್ನು ಇಲ್ಲಿ ಉದಾಹರಿಸಬಹುದು. ಇವರುಗಳು ತಮ್ಮ ಕೃತಿಗಳಲ್ಲಿ ಎಲ್ಲ ದರ್ಶನಗಳನ್ನೂ ಸಮಾನ ಗೌರವದಿಂದ ಪರಿಚಯಿಸಿದರೂ ಅಂತಿಮವಾಗಿ ತಾವು ನಂಬಿರುವ ಸಿದ್ಧಾಂತವೇ ಉಳಿದೆಲ್ಲವುಗಳಿಗಿಂತಲೂ ಶ್ರೇಷ್ಠವಾದುದು ಎಂಬ ತೀರ್ಮಾನದೊಂದಿಗೆ ತಮ್ಮ ತಮ್ಮ ಕೃತಿಯನ್ನು ಉಪಸಂಹರಿಸುತ್ತಾರೆ.

ಆಧುನಿಕ ಯುಗದಲ್ಲಿಯೂ ಈ ಪರಿಪಾಠ ಮುಂದುವರಿದಿದೆ. ದಯಾನಂದ ಸರಸ್ವತಿ, ವಿವೇಕಾ ನಂದ, ಶ್ರೀ ರಾಮಕೃಷ್ಣ, ಗಾಂಧೀಜಿ, ಅಂಬೇಡ್ಕರ್ ಮುಂತಾದ ಯಾವ ದಾರ್ಶನಿಕರೂ ಈ ಬಗೆಯ ನಿಂದನೆ, ಟೀಕೆಗಳಿಂದ ಮುಕ್ತರಾದವರಲ್ಲ. ಆದರೆ ಆಧುನಿಕ ಯುಗದಲ್ಲಿ ಈ ಟೀಕೆ-ವಾಗ್ವಾದಗಳು ಎರಡು ಬಗೆಯ ವಿಕೃತ ರೂಪ ಪಡೆದುಕೊಂಡಿತು. ಮೊದಲನೆಯದು, ವೈಚಾರಿಕ ಭಿನ್ನಾಭಿಪ್ರಾಯ ವೈಯಕ್ತಿಕ ನಿಂದನೆ, ದಾಳಿಗಳಾಗಿ ರೂಪಾಂತರಗೊಂಡಿದ್ದು. ಗಾಂಧೀಜಿ ಹತ್ಯೆಯನ್ನು ನಾವು ಈ ಹಿನ್ನೆಲೆಯಲ್ಲಿ ಪರಿಭಾವಿಸಬೇಕಾಗಿದೆ. ಇನ್ನು ಎರಡನೆಯದಾಗಿ ಎರಡು eನಪ್ರಸ್ಥಾನಗಳ ನಡುವಿನ ಘರ್ಷಣೆ ಎರಡು ಜಾತಿ-ಪಂಥಗಳ ನಡುವಿನ ಘರ್ಷಣೆಯ ಮಟ್ಟಕ್ಕೆ ಇಳಿದದ್ದು. ಇದಕ್ಕೆ ಪ್ರಸ್ತುತ ವಿವಾದವೇ ಜ್ವಲಂತ ನಿದರ್ಶನವಾಗಿದೆ.

ಶ್ರೀ ಮಧ್ವಾಚಾರ್ಯರು ಜಾತಿಯ ಅಥವಾ ಪಂಥದ ಕಾರಣಕ್ಕೆ ಅದ್ವೈತವನ್ನು ಟೀಕಿಸಿದವರಲ್ಲ, ಅದೊಂದು ಶುದ್ಧ ತಾತ್ವಿಕ ಭಿನ್ನಾಭಿಪ್ರಾಯವಾಗಿತ್ತು. ತಮ್ಮ ಟೀಕೆಯಲ್ಲಿಯೂ ಸಹ ಅವರು ಎಲ್ಲಿಯೂ ಆದಿಶಂಕರರನ್ನು ನೇರವಾಗಿ ಗುರಿಯಾಗಿಸಿಕೊಂಡು ಟೀಕಿಸಿಲ್ಲ. ಮಾತ್ರವಲ್ಲ, ಅದ್ವೈತ ಸಿದ್ಧಾಂತವನ್ನು ಖಂಡಿಸುವಾಗ ಅವರು ಎಲ್ಲಿಯೂ ಆದಿಶಂಕರರ ವಾಕ್ಯಗಳನ್ನು ಉದ್ಧರಿಸುವು ದಿಲ್ಲ. ಬದಲಾಗಿ ತಮ್ಮ ಸಮಕಾಲೀನ ಅದ್ವೈತ ಗ್ರಂಥಗಳನ್ನು ಉದಾಹರಿಸುತ್ತಾರೆ.

Screenshot_12 ಒಕ

ಶಂಕರರು ತಮ್ಮ ಅದ್ವೈತ ವೇದಾಂತವನ್ನು ಪ್ರಚಾರ ಮಾಡಿ 300 ವರ್ಷಗಳಾದ ಮೇಲೆ ಮಧ್ವಾ ಚಾರ್ಯರು ಅವತರಿಸಿದರು. ಈ ಮುನ್ನೂರು ವರ್ಷಗಳ ಅವಧಿಯಲ್ಲಿ ಶಾಂಕರ ಪ್ರತಿಪಾದಿತ ಅದ್ವೈತ ಸಿದ್ಧಾಂತ ಹಳಿ ತಪ್ಪಿತ್ತು, ಹಳಸಿತ್ತು. ಅದು ಮಧ್ವಾಚಾರ್ಯರ ಕಾಲಘಟ್ಟದಲ್ಲಿ ರಚನೆ ಯಾದ ಅದ್ವೈತ ಕೃತಿಗಳಲ್ಲಿ ಸ್ಪಷ್ಟ ವಾಗಿಯೇ ಗೋಚರಿಸುತ್ತದೆ. ಮಧ್ವಾಚಾರ್ಯರು ಅದ್ವೈತ ಮತದ ಖಂಡನೆಗೆ ಉಲ್ಲೇಖಿಸುತ್ತಿದ್ದುದು ಇಂತಹ ದ್ವಿತೀಯ ದರ್ಜೆಯ ಕೃತಿಗಳನ್ನೇ ವಿನಾ ಆದಿಶಂಕರರ ಭಾಷ್ಯಗ್ರಂಥಗಳನ್ನಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕಾಗುತ್ತದೆ.

ಅದೇ ರೀತಿ ಆದಿಶಂಕರರೂ ಸಹ ಬೌದ್ಧಮತವನ್ನು ಖಂಡಿಸಿದ್ದು ಗೌತಮಬುದ್ಧನ ಅವತಾರಾಂತ್ಯ ವಾಗಿ ಸಾವಿರದ ಮುನ್ನೂರು ವರ್ಷಗಳಾದ ಮೇಲೆ. ಬೌದ್ಧದರ್ಶನ ಬುದ್ಧನ ಬೋಧನೆಗಳಿಂದ ಬಹುದೂರ ಸರಿದು ಭ್ರಷ್ಟವಾದಾಗ ಅದಕ್ಕೆ ಶಂಕರರಂತಹ ದಾರ್ಶನಿಕರ ಚಿಕಿತ್ಸೆಯ ಅಗತ್ಯವಿತ್ತು. ಪ್ರತಿಯೊಂದು ಸಿದ್ಧಾಂತವೂ ಆಳದಲ್ಲಿ ಅನುಭಾವಿಯೋರ್ವನ ಸಾರ್ವಕಾಲಿಕ ಉಪದೇಶಗಳನ್ನು ಆಧರಿಸಿರುತ್ತದೆ. ಆದರೆ ಅವರ ನಿರ್ವಾಣದ ನಂತರ ಸಿದ್ಧಾಂತಗಳು ಜಡಗೊಳ್ಳುತ್ತವೆ. ಯಾವುದೇ ಸಿದ್ಧಾಂತದ ವಾರಸುದಾರಿಕೆ ವಹಿಸಿಕೊಳ್ಳುವವರು ಕಾಲಕಾಲಕ್ಕೆ ಅನುಗುಣವಾಗಿ ತಮ್ಮ ಸಿದ್ಧಾಂತ ದಲ್ಲಿ ಪರಿಷ್ಕರಣೆ ಮಾಡಿಕೊಳ್ಳುತ್ತಿರ ಬೇಕಾಗುತ್ತದೆ. ಬುದ್ಧ, ಬಸವ, ಗಾಂಧೀಜಿಯಂತಹ ಎಲ್ಲ ದಾರ್ಶನಿಕರೂ ಅಂತಹ ಪರಿವರ್ತನೆಗೆ, ಪರಿಷ್ಕರಣೆಗೆ ಸಿದ್ಧರಾಗಿದ್ದರು. ಆದರೆ ಅನುಯಾಯಿ ಗಳಾದರೂ ಸಿದ್ಧಾಂತ ಜಡರಾಗಿರುತ್ತಾರೆ.

ಹಿಂದೊಮ್ಮೆ, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಬದುಕಿದ್ದಾಗಲೂ ಈ ವಿವಾದ ಭುಗಿಲೆದ್ದಿತ್ತು. ಆಗ ಆದಿಶಂಕರರ ನಿಂದನೆ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿ ವಿವಾದ ವೆದ್ದಿತ್ತು. ಆ ಸಂದರ್ಭದಲ್ಲಿ ಶ್ರೀವಿಶ್ವೇಶತೀರ್ಥರು ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ಸ್ಪಷ್ಟನೆ ನೀಡಿದ್ದರು. ಮಣಿಮಂಜರಿ ಕೃತಿಯ ಕಾಲ ಈಗ ಹೊರಟು ಹೋಗಿದೆ. ನಾವಿಂದು ಆ ಕೃತಿಯನ್ನು ಅಧ್ಯಯಿಸುವ ಕಾಲಘಟ್ಟದಲ್ಲಿ ಇಲ್ಲ ಎಂದು ಸ್ಪಷ್ಟವಾಗಿ ನುಡಿದಿದ್ದರು.

ಅವರ ನುಡಿಗಳಿಗೆ ಹೋಲಿಸಿದರೆ ಶೀರೂರು ಮಠ ನೀಡಿರುವ ಸ್ಪಷ್ಟನೆ ಅಡ್ಡಗೋಡೆಯ ಮೇಲಿನ ದೀಪದಂತಿದೆ. ಅವರಿಬ್ಬರಿಗೂ ಕ್ಷಮಾಪಣೆ ಕೋರಲು ಸೂಚಿಸಿದ್ದು ಅವರು ಕ್ಷಮೆ ಯಾಚಿಸಿzರೆ, ಈ ಅನಪೇಕ್ಷಿತ ಘಟನೆಗೆ ಶ್ರೀಮಠವು ತೀವ್ರ ವಿಷಾದ ವ್ಯಕ್ತಪಡಿಸುತ್ತದೆ ಎಂದು ಹೇಳಿಕೆ ನೀಡಿದೆ. ಪತ್ರಿಕಾ ಹೇಳಿಕೆಯ ಒಕ್ಕಣೆ ಹೇಗೆ ಇರತಕ್ಕದ್ದು ಎಂಬುದು ಇಲ್ಲಿ ಪ್ರಶ್ನೆಯಲ್ಲ. ಆದರೆ ಒಂದು ದಾರ್ಶನಿಕ ವಾಗ್ವಾದ ಹೀನ ಅಭಿರುಚಿಯ ವ್ಯಕ್ತಿನಿಂದನೆಯ ಮಟ್ಟಕ್ಕೆ ಇಳಿದಿರುವುದು ಮತ್ತು ವಾಗ್ವಾದ ನಡೆಸು ವವರು ಬೌದ್ಧಿಕ ಅಧಃಪತನಕ್ಕೆ ತಲುಪಿರುವುದು ಈ ಪಂಥಗಳ ವಾರಸುದಾರರಿಗೆ ವಿಷಾದಕರ ಎನಿಸದಿರುವುದು ಶೋಚನೀಯ ಸಂಗತಿಯಾಗಿದೆ.

ಕಾಲಾಂತರದಲ್ಲಿ ಜೀವ ಕಳೆದುಕೊಂಡ ಅಂತಹ ಎಷ್ಟೋ ಗ್ರಂಥಗಳು ಎಲ್ಲ ಮತಪಂಥಗಳಲ್ಲಿಯೂ ಇವೆ. ಅಂತಹ ಗ್ರಂಥದಲ್ಲಿನ ವಿಚಾರಗಳು ಇಂದಿನ ಆಧುನಿಕ ಯುಗದಲ್ಲಿ ಯಾವುದೇ ಮತಪಂಥಕ್ಕೆ ಕಳಂಕ ಪ್ರಾಯವಾದ ವಿಚಾರಗಳಾಗಿರುತ್ತವೆ. ಅಂತಹ ಸೈದ್ಧಾಂತಿಕ ಕೃತಿಗಳನ್ನು ಶೈವ, ವೈಷ್ಣವ, ಮಾಧ್ವ, ಶಾಂಕರ, ಜೈನ, ಬೌದ್ಧ, ಇಸ್ಲಾಂ, ಕ್ರಿಶ್ಚಿಯಾನಿಟಿ ಮುಂತಾದ ಎಲ್ಲ ಪಂಥಗಳಲ್ಲೂ ಕಾಣಬಹುದು. ಉದಾಹರಣೆಗೆ ಆದಿಶಂಕರರ ವಿವೇಕಚೂಡಾಮಣಿಯಲ್ಲಿ ಜನ್ಮಗಳಲ್ಲಿ ಮನುಷ್ಯ ಜನ್ಮ ದುರ್ಲಭ, ಮನುಷ್ಯ ಜನ್ಮದಲ್ಲೂ ಪುರುಷರಾಗಿ ಹುಟ್ಟುವುದು ದುರ್ಲಭ, ಪುರುಷರಾಗಿ ಹುಟ್ಟಿಯೂ ಬ್ರಾಹ್ಮಣರಾಗಿ ಜನಿಸುವುದು ಇನ್ನೂ ದುರ್ಲಭ, ಬ್ರಾಹ್ಮಣರಾಗಿ ಜನಿಸಿ ವೈದಿಕ ಧರ್ಮ ದಲ್ಲಿ ಪ್ರವೃತ್ತಿ ಬೆಳೆಸಿಕೊಳ್ಳುವುದು ಅತಿ ದುರ್ಲಭ ಎಂಬ ಸಾಲುಗಳಿವೆ.

ಇದು ಇಂದಿನ ಕಾಲದ ಶಂಕರರ ಅನುಯಾಯಿಗಳು ಕೈಬಿಡಬೇಕಾದ ಸಾಲುಗಳಾಗಿವೆ. ಏಕೆಂದರೆ ವಿದುರ, ಧರ್ಮವ್ಯಾಧ ಮುಂತಾದವರನ್ನು ಉದಾಹರಿಸಿ ಶೂದ್ರರೂ ಬ್ರಹ್ಮಜ್ಞಾನಕ್ಕೆ ಅರ್ಹರು ಎಂದು ನುಡಿದಿದ್ದ, ಚಾಂಡಾಲನಲ್ಲೂ ಪರಶಿವನನ್ನು ಕಂಡು ಅವನಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿದ್ದ ಆದಿಶಂಕರರು ಇಂತಹ ಸಾಲುಗಳನ್ನು ಖಂಡಿತವಾಗಿ ಬರೆದಿರಲಾರರು.

ಇಂತಹ ಹಲವು ಸಾಲುಗಳು ಮತ್ತು ಸೌಂದರ್ಯಲಹರಿಯನ್ನೂ ಒಳಗೊಂಡಂತೆ ಅವರ ಸ್ತೋತ್ರ ಸಾಹಿತ್ಯಗಳು ಪ್ರಕ್ಷೇಪಗಳಾಗಿವೆ. ಅವನ್ನು ಅವರ ನಂತರ ಯಾರೋ ಕೆಲವರು ಅವರ ಹೆಸರಿನಲ್ಲಿ ಪ್ರಚಾರ ಮಾಡಿರಬಹುದು ಎಂದು ಶಂಕರರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಹೊಳೆನರಸೀಪುರದ ಅವಧೂತರಾದ ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳು ಪ್ರಬಲವಾಗಿ ವಾದಿಸುತ್ತಾರೆ. ಇಂದು ಅನ್ಯಮತದವರು ಶಂಕರರನ್ನು ಟೀಕಿಸುತ್ತಿರುವುದು ಸಹ ಇಂತಹ ಪ್ರಕ್ಷೇಪ ಸಾಹಿತ್ಯವನ್ನು ಉದ್ಧರಿಸಿಯೇ ವಿನಾ ಶಂಕರರ ಪ್ರಸ್ಥಾನತ್ರಯ ಭಾಷ್ಯವನ್ನಲ್ಲ ಎಂಬುದನ್ನು ಶಂಕರರ ಅನುಯಾಯಿಗಳು ಗಮನಿಸಬೇಕಾಗುತ್ತದೆ. ಅನ್ಯಪಂಥದವರು ಮಾಯಾವಾದವನ್ನು ಖಂಡಿಸಿದರೂ ಶಂಕರರನ್ನು ಉದ್ಧರಿಸದೇ ಅವರ ನಂತರ ಬಂದ ಎರಡನೆಯ ದರ್ಜೆಯ ವಿದ್ವಾಂಸರ ಕೃತಿಗಳನ್ನು ಉಲ್ಲೇಖಿಸಿ ಖಂಡಿಸುತ್ತಾರೆ.

ಇಂತಹ ವಿವಾದಗಳು ತಲೆಯೆತ್ತಬಾರದೆಂದೇ ವ್ಯಾಟಿಕನ್ ಚರ್ಚ್ ಆಗಾಗ ತನ್ನ ಆಧಾರ ಗ್ರಂಥ ಗಳನ್ನು ಪರಿಷ್ಕರಿಸುತ್ತಿರುತ್ತದೆ. ಯೇಸುವಿನ ಬೋಧನೆಗಳಿಗೆ ಹೊಂದದ, ವರ್ತಮಾನಕ್ಕೆ ಒಗ್ಗದ ಅಂತಹ ಅದೆಷ್ಟೋ ಥಿಯಾಲಜಿ ಕೃತಿಗಳನ್ನು ವ್ಯಾಟಿಕನ್ ಬಹಿಷ್ಕರಿಸಿವೆ. ಹೀಗೆ ಮಾಡುವುದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವೇನೂ ಆಗುವುದಿಲ್ಲ. ಬೇಕಿದ್ದವರು ಓದಿಕೊಳ್ಳಬಹುದು ಆದರೆ ನಮ್ಮ ಚರ್ಚ್‌ನ ಸಂಪ್ರದಾಯ ಅದನ್ನು ಅಧಿಕೃತವಾಗಿ ತಮ್ಮದೆಂದು ಅಂಗೀಕರಿಸಿಲ್ಲ ಎಂಬು ದಷ್ಟೇ ವ್ಯಾಟಿಕನ್ನಿನ ಪ್ರಕಟಣೆಯಾಗಿರುತ್ತದೆ.

ನಮ್ಮ ಮತಪಂಥದ ಗ್ರಂಥದಲ್ಲಿರುವುದೇ ಪರಮಸತ್ಯ, ನಮ್ಮ ಪಂಥದ ಸಿದ್ಧಾಂತ ಪ್ರಶ್ನಾತೀತ, ಪರಿಷ್ಕರಣಾತೀತ ಎಂಬ ಧೋರಣೆ ಮೂಲಭೂತವಾದಿತನದ್ದು. ಏಕೆಂದರೆ ಇಂತಹ ನಂಬಿಕೆ ಉಳ್ಳವರು ಅಲ್ಪಮಾತ್ರದ ಟೀಕೆಯನ್ನೂ ಸಹಿಸದಷ್ಟು ಅಸಹಿಷ್ಣುತೆ ಬೆಳೆಸಿಕೊಳ್ಳುತ್ತಾರೆ. ಒಂದು ಗ್ರಂಥವನ್ನು, ಒಂದು ಸಿದ್ಧಾಂತವನ್ನು ಕೇಂದ್ರವಾಗಿಸಿಕೊಂಡು ಅದರ ಸುತ್ತ ಬೆಳೆಯುವ ಧಾರ್ಮಿಕ ಸಮುದಾಯ ಎಷ್ಟು ಅಪಾಯಕಾರಿಯಾಗಿ ಪರಿಣಮಿಸುತ್ತದೆ ಎಂಬ ಸಂಗತಿಯನ್ನು ಇತಿಹಾಸದಲ್ಲಿ ಕಂಡೂ ನಾವು ಪಾಠ ಕಲಿಯದಿರುವುದು ದುರದೃಷ್ಟಕರ. ನಾಸದೀಯ ಸೂಕ್ತದ ಒಂದು ಸಾಲು ಇಲ್ಲಿ ಮನನೀಯ: ಈ ಸೃಷ್ಟಿ ಹೇಗಾಯಿತು? ಯಾರು ಮಾಡಿದರು? ನಮ್ಮನ್ನೆಲ್ಲ ಪೋಷಿಸುತ್ತಿರುವ ಆ ಪರಮ ಚೈತನ್ಯಕ್ಕೆ ಇದು ಗೊತ್ತಿದೆಯೇ ಅಥವಾ ಅದಕ್ಕಾದರೂ ತಿಳಿದಿದೆಯೋ ಇಲ್ಲವೋ ಯಾರು ಬಲ್ಲರು?

ಈ ಉಪನಿಷತ್ತಿನ ಋಷಿ ತನ್ನನ್ನು ಮಾತ್ರವಲ್ಲ, ತನ್ನನ್ನು ಸೃಷ್ಟಿಸಿರುವ, ತಾನು ಪೂಜಿಸುತ್ತಿರುವ ಆ ಪರಮಚೈತನ್ಯವನ್ನೂ ಅನುಮಾನಿಸುತ್ತಿರುವನು. ಈ ಸೃಷ್ಟಿಯ ನಿಗೂಢ ಆ ಪರಮ ಚೈತನ್ಯಕ್ಕೂ ತಿಳಿದಿದೆಯೋ ಇಲ್ಲವೋ ಬಲ್ಲವರಾರು? ಎಂದು ಕೇಳುತ್ತಿರುವನು. ಪರಮಸತ್ಯವನ್ನು ನಿರ್ವಚಿಸು ವಲ್ಲಿ ಋಗ್ವೇದವೇ ಹೀಗೆ ವಿನಯದಿಂದ ಹಿಂಜರಿಯುವಾಗ ಆಗ ಹುಟ್ಟಿ ಬೇಗ ಸಾಯುವ ಸರ್ವೇ ಸಾಧಾರಣವಾದ ಸಿದ್ಧಾಂತಗಳು, ಸಿದ್ಧಾಂತವಾದಿಗಳು ತಮ್ಮ ಮತವೇ ಪರಮಸತ್ಯ, ಪರಮತ ಮಿಥ್ಯೆ ಎಂದು ಆರ್ಭಟಿಸುವುದನ್ನು ನೋಡಿದರೆ ಇಂಥವರಿಂದ ನಮ್ಮ ಸನಾತನ ದಾರ್ಶನಿಕ ಚರ್ಚೆ ಮತ್ತು ಜಿಜ್ಞಾಸೆ ಇನ್ನೂ ಉನ್ನತ ಹಂತಗಳನ್ನು ತಲುಪಬಹುದೆಂದು ನಿರೀಕ್ಷಿಸುವುದು ಕನಸಿನ ಮಾತೇ ಸರಿ.