ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

T N Vasudevmurthy Column: ಕಾವ್ಯಪ್ರತಿಮೆಗಳ ಬಳಕೆ ಮತ್ತು ದುರ್ಬಳಕೆ

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಹಿನ್ನೆಲೆ, ಅನುಭವ, ಪ್ರೌಢಿಮೆ, ಪ್ರಭಾವ, ತಿಳಿವಳಿಕೆ, ಸಂಸ್ಕಾರಗಳಿಗೆ ಅನುಗುಣವಾಗಿ ಒಂದು ಮಾತಿನಿಂದ ವಿವಿಧ ಅರ್ಥಗಳನ್ನು ಸೃಷ್ಟಿಸಿಕೊಳ್ಳುತ್ತಾನೆ. ಅಂತಹ ಸಮಸ್ತ ಅರ್ಥಚ್ಛಾಯೆಗಳನ್ನೂ ಒಳಗೊಳ್ಳಬಲ್ಲ ಸಾಮರ್ಥ್ಯ ಸಾಮಾನ್ಯ ಆಡುಮಾತಿಗಿರುವುದಿಲ್ಲ, ಕಾವ್ಯ ಪ್ರತಿಮೆಗಳಿಗೆ ಆ ಸಮಸ್ತ ಅರ್ಥಗಳನ್ನೂ ಧರಿಸಬಲ್ಲ ಶಕ್ತಿ ಇರುತ್ತದೆ.

T N Vasudevmurthy Column: ಕಾವ್ಯಪ್ರತಿಮೆಗಳ ಬಳಕೆ ಮತ್ತು ದುರ್ಬಳಕೆ

-

Profile
Ashok Nayak Jun 10, 2026 9:05 PM

ರೂಪಕ ಲೋಕ

ಟಿ.ಎನ್.ವಾಸುದೇವಮೂರ್ತಿ

ಸಾಮಾನ್ಯ ಸುದ್ದಿ ಮಾಹಿತಿಗೆ ಕಾವ್ಯ-ಕಲೆಗಳ ಲೇಪನ ಸಿಕ್ಕಾಗ ಅದಕ್ಕೆ ಒಂದು ವಿಶೇಷವಾದ ಶಕ್ತಿ ಲಭಿಸುತ್ತದೆ. ಪ್ರತಿಮೆ-ರೂಪಕಗಳಿಗೆ ಅಂಥದೊಂದು ಅಂತಃಸತ್ವವಿದೆ. ಏಕೆಂದರೆ ಒಂದು ವಸ್ತು-ವಿಷಯದ ಹತ್ತು ಹಲವು ಅರ್ಥಗಳನ್ನು ಏಕತ್ರ ಹಿಡಿದಿಡಬಲ್ಲ ಸಾಮರ್ಥ್ಯ ಕಾವ್ಯ ಪ್ರತಿಮೆಗಳಿಗೆ ಇರುತ್ತವೆ.

ಮಾತಿಗೆ ಒಂದು ಅರ್ಥವಿರುತ್ತದೆ ಎಂಬುದು ಸರಿ, ಅದು ಬಿಟ್ಟು ಒಂದಲ್ಲದೇ ಹಲವು ಅರ್ಥಗಳಿವೆ ಎಂದಾಗ ಮಾತುಕತೆಯ ಸಂವಹನದಲ್ಲಿ ಗೊಂದಲ ಮೂಡುವುದಿಲ್ಲವೇ ಎಂಬ ಪ್ರಶ್ನೆ ಏಳದಿರದು. ಮಾತಿಗಿರುವುದು ಒಂದೇ ಅರ್ಥವಾದರೂ ಆ ಮಾತನ್ನು ಗ್ರಹಿಸುವ ವ್ಯಕ್ತಿಗಳು ಹಲವರಿರುವ ಕಾರಣ ಅವರಿಂದ ಹಲವು ಅರ್ಥಗಳು ನಿಷ್ಪನ್ನವಾಗುತ್ತವೆ.

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಹಿನ್ನೆಲೆ, ಅನುಭವ, ಪ್ರೌಢಿಮೆ, ಪ್ರಭಾವ, ತಿಳಿವಳಿಕೆ, ಸಂಸ್ಕಾರಗಳಿಗೆ ಅನುಗುಣವಾಗಿ ಒಂದು ಮಾತಿನಿಂದ ವಿವಿಧ ಅರ್ಥಗಳನ್ನು ಸೃಷ್ಟಿಸಿಕೊಳ್ಳುತ್ತಾನೆ. ಅಂತಹ ಸಮಸ್ತ ಅರ್ಥಚ್ಛಾಯೆಗಳನ್ನೂ ಒಳಗೊಳ್ಳಬಲ್ಲ ಸಾಮರ್ಥ್ಯ ಸಾಮಾನ್ಯ ಆಡುಮಾತಿಗಿರುವುದಿಲ್ಲ, ಕಾವ್ಯ ಪ್ರತಿಮೆಗಳಿಗೆ ಆ ಸಮಸ್ತ ಅರ್ಥಗಳನ್ನೂ ಧರಿಸಬಲ್ಲ ಶಕ್ತಿ ಇರುತ್ತದೆ.

ಎಷ್ಟೋ ಸಲ ಕಾವ್ಯಪ್ರತಿಮೆಗಳು ಶಬ್ದವನ್ನು ಅರ್ಥದಿಂದ, ಯಥಾರ್ಥದಿಂದ, ದೂರಕ್ಕೆ ಸೆಳೆದೊ ಯ್ಯುವ ಅಪಾಯವುಂಟು. ಯಥಾರ್ಥವನ್ನು ವಿಪರೀತಾರ್ಥವನ್ನಾಗಿ ಪರಿವರ್ತಿಸುವುದೂ ಉಂಟು. ಖ್ಯಾತ ಅಮೆರಿಕನ್ ತತ್ವಜ್ಞಾನಿ ಮಾರ್ಷಲ್ ಮ್ಯಾಕ್ ಲುಹಾನ್ ಆಧುನಿಕ ಮಾಧ್ಯಮ ಗಳಲ್ಲಿ ಕಾವ್ಯಪ್ರತಿಮೆ ಎಂಬುದು ಬರ್ಗರ್ ತಿನಿಸಿನ ಒಳಗೆ ಹುದುಗಿಸಿಟ್ಟಿರುವ ಮಾಂಸದ ತುಣುಕಿ ನಂತೆ. ಈ ಮಾಂಸದ ತುಣುಕು ಮನುಷ್ಯ ವಿವೇಕವೆಂಬ ಕಾವಲು ನಾಯಿಯ ಗಮನವನ್ನು ಬೇರೆಡೆಗೆ ಸೆಳೆಯಬಲ್ಲದು ಎಂದು ಎಚ್ಚರಿಸುತ್ತಾನೆ.

ಇದನ್ನೂ ಓದಿ: T N Vasudevamurthy Column: ಎಲ್ಲರೊಳಗೊಂದಾಗು ಮಂಕುತಿಮ್ಮʼ ಇದು ಧರ್ಮದ ತಿರುಳು

ಆದರೆ ಮಾರ್ಷಲ್ ಮ್ಯಾಕ್ ಲುಹಾನ್ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಕುವೆಂಪು ಆಲೋಚಿಸುತ್ತಾರೆ. ಅವರು ಕಾವ್ಯಪ್ರತಿಮೆಗಳನ್ನು ವಿಶೇಷವಾಗಿ ವೈಭವೀಕರಿಸುತ್ತಾರೆ. ಬದುಕಿನ ಪರಮ ಸತ್ಯವನ್ನು ಕಾವ್ಯಪ್ರತಿಮೆಗಳು ಪ್ರತೀತಗೊಳಿಸಬಲ್ಲವು ಎನ್ನುತ್ತಾರೆ. ಕುವೆಂಪು ಪ್ರಕಾರ ಕಾವ್ಯಪ್ರತಿಮೆ ಎಂಬುದು ಒಂದು ಘಟನೆಯ ವರದಿಯಲ್ಲ, ಆ ಘಟನೆ ವ್ಯಕ್ತಿಯ ಮನಸ್ಸಿನೊಳಗೆ ಉಂಟು ಮಾಡುವ ಅನುಭವದ ಮರುಸೃಷ್ಟಿಯಾಗಿದೆ. ಹಾಗೆ ಮರುಸೃಷ್ಟಿಸುವವರು ಸಮಸ್ತ ಮಾನವಕುಲವನ್ನೇ ಪ್ರತಿನಿಧಿಸಬಲ್ಲ ವ್ಯಕ್ತಿಯಾದಾಗ, ಋಷಿ ಸದೃಶನಾದಾಗ, ಅವರ ಕಾವ್ಯಪ್ರತಿಮೆ ಬದುಕಿನ ಶಾಶ್ವತ ಸತ್ಯವನ್ನು ಒಳಗೊಳ್ಳಬಲ್ಲದು ಎನ್ನುತ್ತಾರೆ. ಇದಕ್ಕೆ ಕುವೆಂಪು ಉಪನಿಷತ್ತಿನ ಸಾಲುಗಳನ್ನು ಉದಾಹರಿಸುತ್ತಾರೆ (ನಾನೃಷಿಃ ಕುರುತೇ ಕಾವ್ಯಮ್ - ಋಷಿಯಲ್ಲದವನು ಕಾವ್ಯವನ್ನು ಸೃಷ್ಟಿಸ ಲಾರ).

ಕಾವ್ಯಪ್ರತಿಮೆಗಳು ಹೇಗೆ ಮನುಷ್ಯ ಚಿತ್ತವನ್ನು ಬದುಕಿನ ಪರಮ ಸತ್ಯದ ಸಮೀಪಕ್ಕೆ ಕರೆದೊಯ್ಯ ಬಲ್ಲದು ಎಂಬುದನ್ನು ಹಲವು ನಿದರ್ಶನಗಳೊಂದಿಗೆ ವಿವರಿಸುತ್ತಾರೆ. ಕವಿಗಳು ಸುಳ್ಳು ಹೇಳುವ ಕಾರಣ ಅವರನ್ನು ಆದರ್ಶ ಗಣರಾಜ್ಯದಿಂದ ಉಚ್ಚಾಟಿಸಲಾಗುವುದು ಎಂದು ಪ್ಲೇಟೋ ನುಡಿದಿದ್ದ.

ಕಾವ್ಯಪ್ರತಿಮೆಗಳು ಸಮಾಜಕ್ಕೆ ಸತ್ಯವನ್ನು ದರ್ಶಿಸುತ್ತವೆಯೋ ಅಥವಾ ಸಮಾಜವು ಸತ್ಯದಿಂದ ವಿಮುಖವಾಗುವಂತೆ ಮಾಡುತ್ತದೆಯೋ ಎಂಬ ಚರ್ಚೆ ಇನ್ನೂ ಬಗೆಹರಿದಿಲ್ಲ. ಆದರೆ ಸಮಾಜದಲ್ಲಿ ಕಾವ್ಯಪ್ರತಿಮೆಗಳ ಸದ್ಬಳಕೆ ಮತ್ತು ದುರ್ಬಳಕೆಗಳು ಮಾತ್ರ ವ್ಯಾಪಕವಾಗಿ ನಡೆದಿರುವುದನ್ನು ನಾವು ಕಾಣುತ್ತೇವೆ. ಯಾವುದು ಸದ್ಬಳಕೆ ಮತ್ತು ಯಾವುದು ದುರ್ಬಳಕೆ? ಒಂದು ಕಾವ್ಯ-ಕಲಾ ಪ್ರತಿಮೆ ಯನ್ನು ಪ್ರಯೋಗಿಸಿದಾಗ ಅದು ಸದ್ಬಳಕೆಯಾಗುತ್ತದೋ ಅಥವಾ ದುರ್ಬಳಕೆ ಎನಿಸುತ್ತದೋ ಎಂದು ನಿರ್ಧರಿಸುವವರು ಯಾರು? ಇದಕ್ಕೆ ಉತ್ತರ ತುಂಬ ಸರಳ.

ಯಾವ ಕಾವ್ಯ-ಕಲಾ ಪ್ರತಿಮೆಗಳು ಮಾನವೀಯವಾದುದೋ, ಮಾನವರ ಸಮಷ್ಟಿ ಪ್ರಜ್ಞೆಯನ್ನು ಪ್ರತಿನಿಧಿಸುವುದೋ, ಬದುಕಿನ ಶಾಶ್ವತ ಸತ್ಯವನ್ನು ಪ್ರತೀತಗೊಳಿಸುವುದೋ ಅದು ಸಾರ್ಥಕ ಕಾವ್ಯ ಪ್ರತಿಮೆಯಾಗುತ್ತದೆ. ಒಂದು ಜನಾಂಗದ ವಿವೇಕ, ವಿವೇಚನೆಗಳ ಅವಿಭಾಜ್ಯವಾದ ಅಂಗವಾಗುತ್ತದೆ. ಆ ಮೂಲಕ ಅದು ಕಾವ್ಯ ಪ್ರತಿಮೆಯ ಸದ್ಬಳಕೆ ಎನಿಸಿಕೊಳ್ಳುತ್ತದೆ.

7

ಶತಶತಮಾನಗಳಿಂದಲೂ ಉಳಿದುಕೊಂಡು ಬಂದಿರುವ ನಮ್ಮ ಅಭಿಜಾತ ಕಾವ್ಯಪರಂಪರೆಗಳು, ಜಾನಪದ ಕಾವ್ಯ, ಗಾದೆ, ತ್ರಿಪದಿಗಳು ಇದಕ್ಕೆ ನಿದರ್ಶನವಾಗಿದೆ. ಮಾನವೀಯ ಸಂವೇದನೆಯನ್ನು, ಮಾನವರ ಸಮಷ್ಟಿ ಪ್ರಜ್ಞೆಯನ್ನು ಪ್ರತಿನಿಧಿಸದ ಪ್ರತಿಮಾ ಪ್ರಯೋಗಗಳು ಕಾವ್ಯಪ್ರತಿಮೆಯ ದುರ್ಬಳಕೆಯಾಗಿದೆ. ಇಂತಹ ಕಾವ್ಯಪ್ರತಿಮೆಗಳು ಮನುಷ್ಯ ಕುಲಕ್ಕೆ ಹಾನಿಯನ್ನೇನೂ ಮಾಡುವು ದಿಲ್ಲ. ಆದರೆ ಮನುಷ್ಯಕುಲವೇ ಅದನ್ನು ತಿರಸ್ಕರಿಸುತ್ತದೆ. ಅವು ಅಲ್ಪಾಯುಷಿಯಾಗಿರುತ್ತವೆ, ಬಹುಬೇಗನೆ ಸಮುದಾಯದ ನೆನಪಿನಿಂದ ವಿಸ್ಮೃತಿಗೆ ಸರಿದು ಬಿಡುತ್ತದೆ.

ಸದ್ಯಕ್ಕೆ ಆಡಳಿತ ವಿರೋಧಿ ಅಲೆ ಎಂದು ಬಿಂಬಿಸಿಕೊಳ್ಳುತ್ತಿರುವ ಜಿರಳೆ ಪಾರ್ಟಿಯ ಸುದ್ದಿ ಮತ್ತು ಡಿಕೆಶಿಗೆ ಶಿವನ ವೇಷಧಾರಣೆ ಮಾಡಿದ ವಿಶ್ವವಾಣಿಯ ಮುಖಪುಟ ಸುದ್ದಿ ಈ ಎರಡೂ ಪ್ರತಿಮೆಗಳು ಅತಿ ಹೆಚ್ಚು ಸದ್ದು ಮಾಡುತ್ತಿದೆ. ಜಿರಳೆ ಮಲಿನವಾದ ಗಟಾರದಲ್ಲಿ ಬೆಳೆಯುವ ಒಂದು ಕೀಟವಾಗಿದೆ.

ಆಡಳಿತ ಪಕ್ಷವು ಭ್ರಷ್ಟಾಚಾರ, ಕೋಮುವಾದ ಎಂಬ ಗಟಾರವನ್ನು ಸೃಷ್ಟಿಸಿದ್ದು ನಾವು ಈ ಗಟಾರ ದಿಂದ ಹುಟ್ಟಿ ಬಂದಿರುವ ಜಿರಳೆಗಳಾಗಿದ್ದೇವೆ ಎಂಬುದು ಸದರಿ ಜಿರಳೆ ಜನತಾ ಪಾರ್ಟಿಯ ಹೋರಾಟಗಾರರ ಘೋಷಣೆಯಾಗಿದೆ.

ಆಡಳಿತ ಪಕ್ಷದ ವಿರುದ್ಧದ ಬಂಡಾಯವಾಗಿ ಹುಟ್ಟಿಕೊಂಡಿರುವ ಈ ಚಳವಳಿ ರಾಜಕೀಯ ಪ್ರೇರಿತವಾದುದೇ ಅಥವಾ ಜನಸಮುದಾಯದಿಂದಲೇ ಹುಟ್ಟಿಕೊಂಡ ಹೋರಾಟವೇ ಎಂಬ ಚರ್ಚೆ ಒತ್ತಟ್ಟಿಗಿರಲಿ. ಆದರೆ ಮನುಷ್ಯರನ್ನು ಸೊಳ್ಳೆ, ತಿಗಣೆ, ಜಿರಳೆಯಂತಹ ಕೀಟಗಳ ನೆಲೆಗೆ ಇಳಿಸುವ ಪ್ರತಿಮೆಗಳು ಮನುಷ್ಯ ಜಾತಿಯ ಸಮಷ್ಟಿ ಪ್ರeಯನ್ನು ಪ್ರತಿನಿಧಿಸಬಲ್ಲುದೇ? ಕುವೆಂಪು ಪ್ರತಿಪಾದಿಸುವಂತೆ ಮನುಷ್ಯ ಸಂವೇದನೆಯನ್ನು, ಬದುಕಿನ ಶಾಶ್ವತ ಸತ್ಯವನ್ನು, ಪ್ರತೀತ ಗೊಳಿಸಬಲ್ಲುದೇ ಎಂಬ ಪ್ರಶ್ನೆಗೆ ಇಲ್ಲವೆಂದೇ ಉತ್ತರಿಸಬೇಕಾಗುತ್ತದೆ.

ಪ್ರತಿಯೊಬ್ಬ ಮನುಷ್ಯರ ಆಂತರ್ಯದಲ್ಲೂ ದಿವ್ಯತ್ವ ನೆಲೆಸಿರುತ್ತದೆ ಎಂಬುದು ಸನಾತನ ಭಾರತೀಯ ವಿವೇಕವಾಗಿದೆ. ಮನುಷ್ಯ ವಿಕಾಸ ಮೃಣ್ಮಯ ನೆಲೆಯಿಂದ ಚಿನ್ಮಯ ನೆಲೆಗೇರುವ ಮಾರ್ಗದ್ದಾಗಿದೆ. ಆದರೆ ಮನುಷ್ಯ ಜೀವಿಯನ್ನು ರೋಗ ರುಜಿನಗಳನ್ನು ಹರಡುವ ಜಿರಳೆಯಂತಹ ಕೀಟದ ನೆಲೆಗಿಳಿಸುವ ಪ್ರತಿಮೆ ಮನುಷ್ಯರ ಸಮಷ್ಟಿ ಪ್ರಜ್ಞೆಯೊಳಗೆ ಜೀವಂತವಾಗಿರುವ ಸನಾತನ ವಿವೇಕವನ್ನೇ ತಿರಸ್ಕರಿಸುವಂತಹ ಪ್ರತಿಮೆಯಾಗಿದೆ. ಇಂತಹ ಪ್ರತಿಮೆಗಳು ಜನಮಾನಸದಲ್ಲಿ ಬಹುಕಾಲ ಉಳಿಯಲಾರವು.

ನಮ್ಮ ಕಾವ್ಯ ಪ್ರಪಂಚದಲ್ಲಿ ಸೊಳ್ಳೆ, ತಿಗಣೆ, ಜಿರಳೆಯಂತಹ ಕೀಟಗಳನ್ನು ಕಾವ್ಯಪ್ರತಿಮೆಯನ್ನಾಗಿ ಬಳಸಿರುವ ನಿದರ್ಶನ ಇಲ್ಲವೆಂದೇನೂ ಇಲ್ಲ. ಮಧುರಚೆನ್ನರು ತಮ್ಮ ಕಾವ್ಯದಲ್ಲಿ ಸೊಳ್ಳೆ, ತಿಗಣೆಗಳನ್ನು ಕಾವ್ಯಪ್ರತಿಮೆಯನ್ನಾಗಿ ಬಳಸಿರುವರು. ಅಜ್ಞಾನದ ನಿದ್ರೆಯಲ್ಲಿದ್ದ ನನ್ನನ್ನು ತಿಗಣೆ ಕಚ್ಚಿ ಎಬ್ಬಿಸಿತು. ತಿಗಣೆಯೇ ನನ್ನ ಪಾಲಿನ ಗುರು, ನಶ್ವರ ಪ್ರಪಂಚದ ಗದ್ದಲದಲ್ಲಿ ಮುಳುಗಿದ್ದ ನನ್ನನ್ನು ಸೊಳ್ಳೆಯ ನಾದ ಎಚ್ಚರಿಸಿತು, ಆದ್ದರಿಂದ ಸೊಳ್ಳೆಯೇ ನನ್ನ ಗುರು ಎಂಬರ್ಥದ ಸಾಲುಗಳನ್ನು ಅವರು ಬರೆದಿದ್ದಾರೆ (ಜಗದೊಳುಂಡು ಜಗದೊಳುಟ್ಟು | ಜಗದೊಳಿದ್ದು ಜಗವರಿಯದೆ | ಮಿಗಿಲುನಿದ್ದೆಗೆಯ್ಯುತಿರಲು | ತಗಣಿನಾಥನೆಚ್ಚರಿಸಿದ || ಸುಳ್ಳು ಸತ್ಯವೆಂಬುದನ್ನು | ಬಳ್ಳುಮಾಡಿ ತೋರದಂತೆ | ಒಳ್ಳೆ ಮಬ್ಬುಗತ್ತಲಲ್ಲಿ | ಬಳ್ಳಿಯಾಗಿ ಬೆಳೆಯುತಿರಲು | ಕೊಳ್ಳದಲ್ಲಿ ಹರಣ ಹಾಕಿ | ಸೊಳ್ಳೆದಾಸನೆಬ್ಬಿಸಿದನು || - ಹೂಂ, ನನ್ನನಲ್ಲ, 1933).

ನಾವು ಬಳಸುವ ಪ್ರತಿಮೆಗಳು ಮನುಷ್ಯ ವಿಕಾಸದ ಸೂಚಿಯಾದಾಗ, ಮನುಷ್ಯ ಸ್ವಭಾವದ ಮೂಲ ಸ್ವರೂಪವನ್ನು ಪರಿಚಯಿಸಿದಾಗ ಅಂತಹ ಪ್ರತಿಮೆಗಳು ಸಾರ್ಥಕವಾಗುತ್ತವೆ. ಮನುಷ್ಯರನ್ನು ಜಿರಳೆಯ ಮಟ್ಟಕ್ಕೆ ಇಳಿಸುವುದು ಮನುಷ್ಯ ವಿಕಾಸದ ಸೂಚಕವಲ್ಲ, ಅದೊಂದು ಅಮಾನವೀಯ ಪ್ರತಿಮೆಯಾಗಿದೆ, ಅಂತಹ ಪ್ರತಿಮೆಗಳು ಜಿರಳೆಯಂತೆ ರೋಗ ರುಜಿನಗಳನ್ನು ಹರಡುವುದೇ ಮನುಷ್ಯ ಸ್ವಭಾವವಾಗಿದೆ ಎಂಬ ತಪ್ಪಾದ ಸಂದೇಶವನ್ನು ನೀಡುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ, ಒಂದು ನಿರ್ದಿಷ್ಟ ಪಕ್ಷ ಅಧಿಕಾರ ವಹಿಸಿಕೊಳ್ಳುವ ಮುನ್ನ ದೇಶದಲ್ಲಿ ಗಟಾರಗಳು ಇರಲಿಲ್ಲವೇ, ಗಟಾರದೊಳಗೆ ಜಿರಳೆಗಳ ಉತ್ಪತ್ತಿ ಆಗುತ್ತಿರಲಿಲ್ಲವೇ ಎಂಬ ಪ್ರಶ್ನೆಗೂ ಇಂತಹ ಪ್ರತಿಮೆಗಳಲ್ಲಿ ಉತ್ತರ ಸಿಗುವುದಿಲ್ಲ. ಜಿರಳೆ ಪಕ್ಷದ ಚಳವಳಿ ಸಫಲವೋ, ವಿಫಲವೋ ಎಂಬ ಚರ್ಚೆಗೆ ಇದು ಸ್ಥಳವಲ್ಲ. ಆದರೆ ಯಾವುದೇ ಚಳವಳಿಗೆ ಅಂತಃಶಕ್ತಿ ನೀಡುವ ಕಾವ್ಯ ಪ್ರತಿಮೆಯ ಬಳಕೆಯಲ್ಲಿ ಇದೊಂದು ವಿಫಲ ಪ್ರತಿಮೆಯಾಗಿದೆ.

ನಲವತ್ತರ ದಶಕದಲ್ಲಿ ಕುವೆಂಪು ಗೊಬ್ಬರ ಪದ್ಯ ಬರೆದಾಗಲೂ, ಹಾಗೆಯೇ ಎಪ್ಪತ್ತರ ದಶಕದಲ್ಲಿ ಸಿದ್ಧಲಿಂಗಯ್ಯನವರು ಇಕ್ರಲಾ ವದೀರ್ಲಾ, ಈ ಸೂಳೆ ಮಕ್ಳ ಮೂಳೆ ಮುರೀರ್ಲಾ ಎಂಬ ಸಾಲುಗಳನ್ನು ರಚಿಸಿದಾಗಲೂ ನಾಡಿನಲ್ಲಿ ಇಂತಹುದೇ ಸಂಚಲನ ಮೂಡಿತ್ತು. ಇಂತಹ ಪ್ರಯೋಗಗಳು ಕಾವ್ಯಪ್ರಿಯರನ್ನು ಬೆಚ್ಚಿ ಬೀಳಿಸಿತ್ತು. ಆದರೆ ಆ ಕಾವ್ಯ ಪ್ರತಿಮೆಗಳು ಸಮಷ್ಟಿ ಪ್ರಜ್ಞೆಯ ಆಂತರ್ಯವನ್ನು ಸಮರ್ಥವಾಗಿ ಧ್ವನಿಸುತ್ತಿದ್ದುದರಿಂದ ಅವು ಎಷ್ಟೇ ಪ್ರತಿರೋಧ ಎದುರಿಸಿದರೂ ಕಾಲನ ಅಗ್ನಿ ಪರೀಕ್ಷೆಯನ್ನು ಯಶಸ್ವಿಯಾಗಿ ಹಾದು ಬಂದವು; ಕನ್ನಡಿಗರ ಸ್ಮೃತಿಯಲ್ಲಿ ಶಾಶ್ವತವಾಗಿ ಉಳಿದುಕೊಂಡವು, ನಮ್ಮ ಸಾಮಾಜಿಕ ಹೋರಾಟದ ಅಂತಃಶಕ್ತಿ ಯಾದವು.

ಗೊಬ್ಬರವೂ ಮೇಲ್ನೋಟಕ್ಕೆ ಮಲಿನವಾಗಿ ತೋರಿದರೂ ಜಿರಳೆಯ ಮಾಲಿನ್ಯಕ್ಕೂ, ಗೊಬ್ಬರಕ್ಕೂ ವ್ಯತ್ಯಾಸವಿದೆ. ಗೊಬ್ಬರದ ವಾಸನೆಯೇ ಹೂವಿಗೂ ಸುಗಂಧ ನೀಡುವುದೆಂಬ ಧ್ವನಿಶಕ್ತಿ ಗೊಬ್ಬರ ಪದ್ಯವನ್ನು ಗೆಲ್ಲಿಸಿದೆ. ಜಿರಳೆಯ ಪ್ರತಿಮೆಯಲ್ಲಿ ಅಂತಹ ಮೆಟಮಾ-ಸಿಸ್ (ರೂಪಪರಿವರ್ತನೆ) ಯಾವುದಿದೆ?ಇನ್ನು ವಿಶ್ವವಾಣಿಯ ಮುಖಪುಟದಲ್ಲಿ ಪ್ರಕಟವಾದ ಹೊಸ ಮುಖ್ಯಮಂತ್ರಿಯ ಶಿವನ ವೇಷವೂ ಒಂದು ಕಲಾಪ್ರತಿಮೆಯೇ ಆಗಿದೆ. ಈ ಕಲಾಚಿತ್ರಣ ಹೊಸ ಮುಖ್ಯಮಂತ್ರಿಯ ಅಭಿಮಾನಿ ಗಳಿಗೆ ಮುದ ನೀಡಿದರೆ, ಅವರ ವಿರೋಧಿಗಳಲ್ಲಿ ಬೇಸರ ಮೂಡಿಸಿತು.

ಇನ್ನು ಕಲಹಪ್ರಿಯ ಕುತ್ಸಿತ ಮನಸ್ಸಿನವರು ಇದು ಹಿಂದೂಗಳಿಗೆ ಮಾಡಿದ ಅವಮಾನ ಎಂಬ ಹೊಸ ವಿವಾದವನ್ನು ಹುಟ್ಟು ಹಾಕುವ ಹುನ್ನಾರದಲ್ಲಿದ್ದರು. ಹಿಂದೂ ದೇವರಿಗೂ ಸೆಮೆಟಿಕ್ ಧರ್ಮದ ದೇವರುಗಳಿಗೂ ಅಪಾರವಾದ ವ್ಯತ್ಯಾಸವಿದೆ. ಸೆಮೆಟಿಕ್ ಧರ್ಮದ ನಂಬಿಕೆಯಂತೆ ದೇವರ ವೇಷ ಧರಿಸುವುದು ಅಪರಾಧ. ಆದರೆ ಹಿಂದೂಗಳಲ್ಲಿ ದೇವರ ವೇಷ ಧರಿಸಿದಾಗ, ದೇವರ ಹೆಸರು ಇಟ್ಟುಕೊಂಡಾಗ, ತಾನೇ ಸ್ವಯಂ ದೇವರೆಂದು ಘೋಷಿಸಿಕೊಂಡಾಗ ಅದು ದೇವರಿಗೆ ಅಪಚಾರ ಮಾಡಿದಂತೇನೂ ಆಗುವುದಿಲ್ಲ. ಅಲ್ಲದೇ ಹಿಂದೂ ದೇವರುಗಳು ಮಾನವೀಯ ಸಂವೇದನೆಯವರು; ಸಮಸ್ತ ಮಾನವೀಯ ಸ್ವಭಾವವನ್ನು ಒಳಗೊಂಡವರು. ಆದ್ದರಿಂದ ಇವರ ಹುನ್ನಾರ ಸಫಲವಾಗಲಿಲ್ಲ.

ಒಟ್ಟಿನಲ್ಲಿ ಆ ಚಿತ್ರ ಹಲವು ಮನಸ್ಥಿತಿಯ ಜನಗಳ ಗಮನವನ್ನು ತನ್ನತ್ತ ಆಕರ್ಷಿಸುವ ಮಟ್ಟಿಗೇನೋ ಯಶಸ್ವಿಯಾಯಿತು, ಸರಿ. ಆದರೆ ಮಾಧ್ಯಮದಲ್ಲಿ ಒಂದು ಕಲಾರೂಪಕವಾಗಿ ಆ ಪ್ರಯೋಗ ಗೆದ್ದಿತೇ ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ.

ಒಬ್ಬ ಭಾವೀ ಮುಖ್ಯಮಂತ್ರಿಯನ್ನು ರಾಮಾಯಣದ ಸುಮಂತ್ರನಿಗೋ ಅಥವಾ ಮಹಾಭಾರತದ ವಿದುರನಿಗೋ ಹೋಲಿಸಿದರೆ ಅದು ಸಾರ್ಥಕವಾಗುತ್ತದೆ, ಅಥವಾ ರಾಜನಾದರೆ ಅವನನ್ನು ಶ್ರೀರಾಮನಿಗೋ ಅಥವಾ ಜನಕ ಮಹಾರಾಜನಿಗೋ ಹೋಲಿಸಿದಾಗ ಅದು ಅರ್ಥಪೂರ್ಣ ವಾಗುತ್ತದೆ. ಆದರೆ ಮುಖ್ಯಮಂತ್ರಿಗಳ ಹೆಸರಿನಲ್ಲಿ ಶಿವನಿದ್ದಾನೆ ಎಂಬ ಒಂದೇ ಕಾರಣಕ್ಕೆಶಿವನ ವೇಷ ತೊಡಿಸಿದರೆ ಏನರ್ಥ? ಶಿವ ರಾಜನಲ್ಲ, ಅವನಿಗೆ ಪ್ರಜೆಗಳಿಲ್ಲ. ದಕ್ಷಬ್ರಹ್ಮನು ತನ್ನ ಮಗಳು ದಾಕ್ಷಾಯಿಣಿಯನ್ನು ಶಿವನಿಗೆ ಕೊಟ್ಟು ಮದುವೆ ಮಾಡಲು ನಿರಾಕರಿಸಿದಾಗ ಶ್ಮಶಾನವೇ ಅವನ ಸಾಮ್ರಾಜ್ಯ, ಭೂತ ಪ್ರೇತಗಳೇ ಅವನ ಪ್ರಜೆಗಳು ಎಂದಿದ್ದ. ಅಲ್ಲದೇ ಶಿವ ಓರ್ವ ಭಿಕ್ಷುಕ (ಶಿವನು ಭಿಕ್ಷಕೆ ಬಂದ ನೀಡು ಬಾರೇ ತಂಗಿ, ಅವನಿಗಿಂತ ಚೆಲುವನಿಲ್ಲ ನೋಡು ಬಾರೇ ತಂಗಿ! ಎಂದು ನಮ್ಮ ಜಾನಪದರೂ ಹಾಡಿದ್ದಾರೆ).

ನಮ್ಮ ಮುಖ್ಯಮಂತ್ರಿಗಳಾದರೂ ದೇಶದ ಮುಖ್ಯಮಂತ್ರಿಗಳ ಅತ್ಯಂತ ಶ್ರೀಮಂತರು. ಆದ್ದರಿಂದ ಅಂದು ಮುಖಪುಟದಲ್ಲಿ ಪ್ರಕಟವಾಗಿದ್ದ ಆ ಕಲಾರೂಪಕ ಕಲಾತ್ಮಕತೆಯ ದೃಷ್ಟಿಯಿಂದ ಒಂದು ವಿಫಲ ಪ್ರಯೋಗವೇ ಆದರೂ ಜನಾಕರ್ಷಣೆಯ ದೃಷ್ಟಿಯಿಂದ ಯಶಸ್ವಿಯಾಯಿತು. ಸಂಪಾದಕರ ಉದ್ದೇಶವೂ ಜನಾಕರ್ಷಣೆಗೇ ಸೀಮಿತವಾಗಿತ್ತೇನೋ, ತಿಳಿಯದು.

ಒಟ್ಟಿನಲ್ಲಿ ಕಾವ್ಯ ಪ್ರಯೋಗದ ಶಕ್ತಿ ಅಗಾಧವಾದುದು. ಅದು ವಿಫಲವಾದಾಗ ಜನರಿಗೆ ಮನರಂಜನೆ ನೀಡಿ ವಿಸ್ಮೃತಿಗೆ ಸರಿಯುತ್ತದೆ, ಒಂದು ವೇಳೆ ಸಫಲವಾದಲ್ಲಿ ಒಂದು ದೊಡ್ಡ ಜನಾಂದೋಲನ ವನ್ನೇ ಹುಟ್ಟುಹಾಕುತ್ತದೆ. ಇದನ್ನು ಬಂಕಿಮಚಂದ್ರರ ವಂದೇ ಮಾತರಂನಿಂದ ಹಿಡಿದು ಸಿದ್ಧಲಿಂಗಯ್ಯನವರ ಇಕ್ರಲಾ ವದೀರ್ಲಾ ಸಾಲುಗಳವರೆಗೆ ಇತಿಹಾಸ ಮತ್ತೆ ಮತ್ತೆ ರುಜುವಾತು ಪಡಿಸಿದೆ.

ಈ ಹಿನ್ನೆಲೆಯಲ್ಲಿ ಪ್ರಾಚೀನ ಸಂಸ್ಕೃತ ಕವಿಯೋರ್ವನ ಈ ಮಾತುಗಳು ಮನನೀಯ: ರಾವಣನ ಯಶಸ್ಸು ಕ್ಷೀಣಿಸಿತು ಮತ್ತು ರಾಮ ಎಡೆ ಪೂಜ್ಯನಾದ, ಕೀರ್ತಿಶಾಲಿಯಾದ. ಇಬ್ಬರೂ ಸಮಾನ ಶಕ್ತರು, ಸಮಾನ ಯೋಗ್ಯರು. ತಮ್ಮ ತಮ್ಮ ಕುಲದ ಏಳಿಗೆಗಾಗಿ ಇಬ್ಬರೂ ಸಮಾನವಾಗಿ ಶ್ರಮಿಸಿದವರು. ಯೋಗ್ಯತೆಯಲ್ಲಿ ಸರಿಸಮಾನರಾದರೂ ಕೀರ್ತಿಯಲ್ಲಿ ವ್ಯತ್ಯಾಸವಾಯಿತು. ಇದಕ್ಕೆ ಕವಿ ವಾಲ್ಮೀಕಿಯ ಪವಾಡಸದೃಶ ಪ್ರತಿಭೆಯೇ ಕಾರಣ. ಎಲೈ ರಾಜ ಮಹಾರಾಜರುಗಳೇ, ಕವಿಗಳ ವಿಷಯದಲ್ಲಿ ಎಚ್ಚರದಿಂದಿರಿ. ನೀವು ಏನಾಗಿದ್ದೀರೋ ಅದು ಮುಖ್ಯವಲ್ಲ. ಅವರು ನಿಮ್ಮನ್ನು ಹೇಗೆ ಬಿಂಬಿಸುತ್ತಾರೋ ಅದು ಮುಖ್ಯ.

ನೀವು ಜೀವಿತಾವಧಿಯಲ್ಲಿ ಸಾಧಿಸಿದ್ದು ಈ ಕ್ಷಣದ ನಾಶವಾಗಿಬಿಡಬಹುದು. ಆದರೆ ಕವಿ ಕೃತಿಗಳಲ್ಲಿ ದಾಖಲಾಗುವ ಸಾಧನೆಗಳು ಅಜರಾಮರವಾಗಿಬಿಡುತ್ತವೆ. ಅವರ ಕೃತಿಗಳಲ್ಲಿ ನೀವು ಹೇಗೆ ಬಿಂಬಿತರಾಗುತ್ತೀರೋ ಅದೇ ಪರಮ ಸತ್ಯವಾಗಿ ಕೊನೆ ತನಕ ಉಳಿದುಬಿಡುತ್ತದೆ. (ಲಂಕಾಪತೇಃ ಸಂಕುಚಿತಂ ಯಶೋ ಯದ್ಯತ್ಕೀರ್ತಿಪಾತ್ರಂ ರಘುರಾಜಪುತ್ರಃ | ಸ ಸರ್ವ ಏವಾದಿಕವೇಃ ಪ್ರಭಾವೋ ನ ವಂಚನೀಯಾ ಕವಯಃ ಕ್ಷಿತೀಂದ್ರೆಃ | ಮಹೀಪತೇ ಸಂತಿ ನ ಯಸ್ಯ ಪಾರ್ಶ್ವೇ ಕವೀಶ್ವರಾಸ್ತಸ್ಯ ಕುತೋ ಯಶಾಂಸಿ | ಭೂಪಾಃ ಕಿಯಂತೋ ನ ಬಭೂವುರುರ್ವ್ಯಾಂ ನಾಮಾಪಿ ಜಾನಾತಿ ನ ಕ್ಣೋಪಿ ತೇಷಾಮ).