ಸಂಪಾದಕೀಯ ಸದ್ಯಶೋಧನೆ
ಎಲಿಜಬೆತ್ ಗೌಬಾ ಅವರು ಇಂದಿರಾ ಗಾಂಧಿಯವರ ಆರಂಭಿಕ ಜೀವನದಲ್ಲಿ ಅತ್ಯಂತ ನಿಕಟ ವಾಗಿದ್ದರೂ, ಇತಿಹಾಸದ ಪುಟಗಳಲ್ಲಿ ಅಷ್ಟಾಗಿ ದಾಖಲಾಗದ ಜರ್ಮನ್ ಮೂಲದ ಅಸಾಧಾರಣ ಮಹಿಳೆ. 1950ರ ದಶಕದಲ್ಲಿ ದೆಹಲಿಯ ಗಣ್ಯವಲಯದಲ್ಲಿ ತಮ್ಮ ಕ್ರಾಂತಿಕಾರಿ ಶಿಕ್ಷಣ ಪದ್ಧತಿ ಯಿಂದ ಮನ್ನಣೆ ಗಳಿಸಿದ್ದ ಇವರು, ಕೇವಲ ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿಯವರ ಮೊದಲ ಶಿಕ್ಷಕಿಯಾಗಷ್ಟೇ ಅಲ್ಲ, ಪ್ರಧಾನಿ ನೆಹರು ನಿವಾಸದೊಳಗೆ ಮುಕ್ತ ಪ್ರವೇಶ ಹೊಂದಿದ್ದ ಇಂದಿರಾ ಆಪ್ತ ಗೆಳತಿಯೂ ಆಗಿದ್ದರು. ಮೂಲತಃ ಜರ್ಮನಿಯವರಾಗಿದ್ದ ಎಲಿಜಬೆತ್, ಪ್ರಸಿದ್ಧ ಭಾರತೀಯ ಬ್ಯಾರಿಸ್ಟರ್ ಮತ್ತು ಲೇಖಕ ಕೆ.ಎಲ್.ಗೌಬಾ ಅವರನ್ನು ವಿವಾಹವಾಗಿ ಭಾರತಕ್ಕೆ ಬಂದರು.
ಪಾಶ್ಚಿಮಾತ್ಯ ಶಿಕ್ಷಣ, ಕಲೆ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದಿದ್ದ ಇವರು, ದೆಹಲಿಯಲ್ಲಿ ಸ್ವತಂತ್ರ ವ್ಯಕ್ತಿತ್ವದ ಮಹಿಳೆಯಾಗಿ ಗುರುತಿಸಿಕೊಂಡರು. ಕಲೆ, ಸಾಹಿತ್ಯ ಮತ್ತು ಬೋಧನೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರು ಆ ಕಾಲದ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯನ್ನು ಮೀರಿ ಹೊಸ ಮಾದರಿಯನ್ನು ರೂಪಿಸಲು ಮುಂದಾದರು.
ಇದನ್ನೂ ಓದಿ: Vishweshwar Bhat Column: ಅನ್ನಬ್ರಹ್ಮನ ನಾನಾ ಅವತಾರ: ಎಲ್ಲವೂ ಇನ್ನೆಲ್ಲೋ ಆಹಾರ
ದೆಹಲಿಯ ಹ್ಯಾಲಿ ರೋಡ್‌ನಲ್ಲಿ ಎಲಿಜಬೆತ್ ಗೌಬಾ ‘ಶಿವ ನಿಕೇತನ’ ಎಂಬ ಹೆಸರಿನ ಪೂರ್ವ ಪ್ರಾಥಮಿಕ ಶಾಲೆಯನ್ನು ಆರಂಭಿಸಿದರು. ಈ ಶಾಲೆಯು ಕೇವಲ ಪಠ್ಯಪುಸ್ತಕದ ಕಲಿಕೆಗೆ ಸೀಮಿತವಾಗಿರದೆದೇ, ಮಾಂಟೆಸ್ಸರಿ ಪದ್ಧತಿ, ಮುಕ್ತ ನೃತ್ಯ, ನಾಟಕ, ಸಂಗೀತ ಮತ್ತು ಮಣ್ಣಿನ ಕೆಲಸಗಳಂಥ ಸೃಜನಶೀಲ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿತ್ತು.
ದೆಹಲಿಯ ರಾಜತಾಂತ್ರಿಕರು, ಉನ್ನತ ಅಧಿಕಾರಿಗಳು ಹಾಗೂ ಪ್ರಭಾವಿ ರಾಜಕಾರಣಿಗಳ ಮಕ್ಕಳಿಗೆ ಈ ಶಾಲೆ ಅಚ್ಚುಮೆಚ್ಚಿನ ತಾಣವಾಗಿ ಮಾರ್ಪಟ್ಟಿತು. ನೆಹರು ಅವರ ತೀನ್ ಮೂರ್ತಿ ಭವನದಲ್ಲಿದ್ದ ಇಂದಿರಾ ಗಾಂಧಿ ತಮ್ಮ ಪುತ್ರರಾದ ರಾಜೀವ್ ಮತ್ತು ಸಂಜಯ್ ಅವರ ಆರಂಭಿಕ ವಿದ್ಯಾಭ್ಯಾಸ ಕ್ಕಾಗಿ ಗೌಬಾ ಅವರ ಶಾಲೆಯನ್ನೇ ಆಯ್ದುಕೊಂಡರು. ಮಕ್ಕಳ ಪಾಲನೆ, ಅವರ ಮಾನಸಿಕ ಬೆಳವಣಿಗೆ ಹಾಗೂ ಕಲೆಯ ಬಗೆಗಿನ ಅಭಿರುಚಿಯ ವಿಷಯದಲ್ಲಿ ಇಂದಿರಾ ಮತ್ತು ಎಲಿಜಬೆತ್ ಅವರ ಆಲೋಚನೆಗಳು ಒಂದೇ ತೆರನಾಗಿದ್ದವು.
ಹೀಗಾಗಿ, ಶಾಲೆಯ ಮೂಲಕ ಆರಂಭವಾದ ಈ ಸಂಬಂಧವು ಶೀಘ್ರದ ಅತ್ಯಂತ ಗಾಢವಾದ ವೈಯಕ್ತಿಕ ಸ್ನೇಹವಾಗಿ ಪರಿವರ್ತನೆಗೊಂಡಿತು. ಪತಿ ಫಿರೋಜ್ ಗಾಂಧಿಯವರಿಂದ ದೂರವಿದ್ದು, ತಂದೆಯ ರಾಜಕೀಯ ಜವಾಬ್ದಾರಿಗಳನ್ನು ಹೊತ್ತು ಏಕಾಂಗಿತನ ಅನುಭವಿಸುತ್ತಿದ್ದ ಇಂದಿರಾಗೆ ಎಲಿಜಬೆತ್ ಉತ್ತಮ ಒಡನಾಡಿಯಾದರು.
ಪಾಶ್ಚಿಮಾತ್ಯ ಸಂಸ್ಕೃತಿ, ಆಧುನಿಕ ವಿಚಾರಗಳು ಮತ್ತು ಭಾಷೆಗಳ ಪರಿಚಯವಿದ್ದ ಎಲಿಜಬೆತ್ ಜತೆ ಇಂದಿರಾ ತಮ್ಮ ರಾಜಕೀಯೇತರ ಆಸಕ್ತಿಗಳನ್ನು ಹಂಚಿಕೊಳ್ಳುತ್ತಿದ್ದರು. ಇಂದಿರಾ ಸಂಕೋಚದ ಸ್ವಭಾವವನ್ನು ಮೀರಿ, ಅವರೊಂದಿಗೆ ಯಾವುದೇ ಬಿಗುಮಾನವಿಲ್ಲದೇ ಬೆರೆಯುವ ಕೆಲವೇ ಕೆಲವು ಗೆಳತಿಯರಲ್ಲಿ ಗೌಬಾ ಪ್ರಮುಖರಾಗಿದ್ದರು.
ಎಲಿಜಬೆತ್ ತೀಕ್ಷ್ಣವಾದ ಬುದ್ಧಿಮತ್ತೆ ಹೊಂದಿದ್ದರೂ, ಸ್ವಭಾವತಃ ಅತಿಯಾದ ಭಾವೋದ್ರೇಕ ಮತ್ತು ಹಠಾತ್ ಕೋಪಕ್ಕೆ ಒಳಗಾಗುವ ವ್ಯಕ್ತಿಯಾಗಿದ್ದರು. ತಮ್ಮ ಸಿದ್ಧಾಂತ, ಬೋಧನಾ ವಿಧಾನ ಹಾಗೂ ವೈಯಕ್ತಿಕ ನಿಲುವುಗಳ ವಿಷಯದಲ್ಲಿ ಅವರು ಕಿಂಚಿತ್ತೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಎಷ್ಟೋ ಬಾರಿ ತಮ್ಮ ಶಾಲೆಗೆ ಬರುತ್ತಿದ್ದ ಗಣ್ಯ ವ್ಯಕ್ತಿಗಳು ಮತ್ತು ಪೋಷಕರ ನಡೆವಳಿಕೆಯನ್ನು ಮುಖಾ ಮುಖಿಯಾಗಿಯೇ ಕಟುವಾಗಿ ಟೀಕಿಸುತ್ತಿದ್ದ ಅವರ ಮುಂಗೋಪ ದೆಹಲಿಯ ವಲಯದಲ್ಲಿ ಪ್ರಸಿದ್ಧವಾಗಿತ್ತು. ಈ ಮುಂಗೋಪ ಮತ್ತು ತೀವ್ರ ಸ್ವಭಾವವೇ ಅಂತಿಮವಾಗಿ ಇಂದಿರಾ ಮತ್ತು ಎಲಿಜಬೆತ್ ಸುದೀರ್ಘ ಸ್ನೇಹಕ್ಕೆ ಅನಿರೀಕ್ಷಿತ ಅಂತ್ಯ ಹಾಡಿತು.
ಒಮ್ಮೆ ಇಂದಿರಾ ನಿವಾಸದಲ್ಲಿ ಯಾವುದೋ ವೈಯಕ್ತಿಕ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯದ ಕುರಿತು ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಮಾತಿಗೆ ಮಾತು ಬೆಳೆದು ಪರಸ್ಪರ ನಿಯಂತ್ರಣ ಕಳೆದುಕೊಂಡಾಗ, ತೀವ್ರ ಆಕ್ರೋಶಗೊಂಡ ಗೌಬಾ, ಇಂದಿರಾ ಕೆನ್ನೆಗೆ ಬಾರಿಸಿದರು. ಈ ಆಘಾತಕಾರಿ ಘಟನೆಯು ಅವರ ನಡುವಿನ ಸಂಬಂಧವನ್ನು ಶಾಶ್ವತವಾಗಿ ಕಡಿದುಹಾಕಿತು. ತಮ್ಮ ಆತ್ಮಾಭಿಮಾನಕ್ಕೆ ಧಕ್ಕೆ ಬಂದ ಆ ಕ್ಷಣದ ನಂತರ ಇಂದಿರಾ, ಎಲಿಜಬೆತ್ ಜತೆಗಿನ ಎಲ್ಲ ಸಂಬಂಧ ಗಳನ್ನು ಸಂಪೂರ್ಣವಾಗಿ ಕಡಿದುಕೊಂಡರು.
ಮಕ್ಕಳನ್ನು ಆ ಶಾಲೆಯಿಂದ ಬೇರೆಡೆಗೆ ವರ್ಗಾಯಿಸಲಾಯಿತು ಮತ್ತು ಪ್ರಧಾನಿ ನಿವಾಸಕ್ಕೆ ಗೌಬಾ ಅವರ ಪ್ರವೇಶ ನಿಂತುಹೋಯಿತು. ಅಧಿಕಾರ ಮತ್ತು ಸಾರ್ವಜನಿಕ ಜೀವನದಲ್ಲಿ ಶಿಸ್ತಿಗೆ ಹೆಸರಾಗಿದ್ದ ಇಂದಿರಾ, ತಮ್ಮ ಆಪ್ತ ಗೆಳತಿಯಿಂದಾದ ಈ ಅವಮಾನವನ್ನು ಎಂದಿಗೂ ಕ್ಷಮಿಸಲಿಲ್ಲ ಹಾಗೂ ಮತ್ತೆ ಅವರ ಮುಖವನ್ನೂ ನೋಡಲಿಲ್ಲ.