ಮೊನಾಲಿಸಾ ನಗೆಯ ಚೆಲುವೆ ಸಾಧನಾ ಶಿವದಾಸನಿ !
ಮೊನಾಲಿಸಾ ನಗೆಯ ಚೆಲುವೆ ಸಾಧನಾ ಶಿವದಾಸನಿ !
Vishwavani News
Jun 13, 2022 10:47 AM
ಯಶೋ ಬೆಳಗು
yashomathy@gmail.com
ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರೂ ಲಭಿಸಿದ ಪ್ರಶಸ್ತಿಗಳು ಮಾತ್ರ ಬೆರಳೆಣಿಕೆಯಷ್ಟು. ದೇವಾ ನಂದ್, ಶಮ್ಮಿ ಕಪೂರ್, ಸುನಿಲ್ ದತ್, ಫಿರೋಜ್ ಖಾನ್ ನಂತಹ ಮೇರು ನಟರೊಂದಿಗೆ ನಟಿಸಿದ್ದರೂ ತಮ್ಮ ಕೊನೆಯ ದಿನಗಳಲ್ಲಿ ಮುಂಬೈನ ಸಾಂತಾಕ್ರೂಸ್‌ನಲ್ಲಿ ಆಶಾ ಭೋಂಸ್ಲೆಯ ಒಡೆತನದ ಮನೆಯಲ್ಲಿ ಬಾಡಿಗೆಗೆ ವಾಸ ವಿರುತ್ತಾರೆ.
ರಾತ್ರಿ ಎಂಟಾಯಿತೆಂದರೆ ರಾಜಕುಮಾರನ ಅರಮನೆಯಿಂದ ಓಡುವ ಸಿಂಡ್ರೆಳಂತೆ ಮನೆಗೆ ಹೊರಡುವ ಚಡಪಡಿಕೆ ಶುರುವಾಗಿ ಬಿಡುತ್ತಿತ್ತು. ತಡವಾದ್ರೆ ಅಮ್ಮ ಬೈತಾರೆ ಅನ್ನುವ ಭಯ. ಒಮ್ಮೊಮ್ಮೆ ಮಾತಿಗೆ ಕೂತಾಗ ಹೊತ್ತು ಹೋಗುತ್ತಿದ್ದುದೇ ತಿಳಿಯು ತ್ತಿರಲಿಲ್ಲ. ಪೆಂಡುಲಮ್‌ನ ಗಂಟೆ ಎಂಟು ಹೊಡೆಯುತ್ತಿದ್ದಂತೆ.... ಅಭೀ ನ ಜಾವೊ ಚೋಡಕೇ ಕೆ ದಿಲ್ ಅಭೀ ಭರಾ ನಹೀ... ಅನ್ನುವ ಹಾಡು ಕೈಹಿಡಿದು ಜಗ್ಗುವಂತೆ ಮಾಡು ತ್ತಿತ್ತು.
ಆ ತುಂಟ ನಗೆಯ ದೇವಾನಂದನ ಪ್ರೀತಿಯ ಒತ್ತಾಯಕ್ಕೆ ಮಣಿಯುತ್ತಾ ತನ್ನ ಆತಂಕ ವನ್ನು ಹೇಳಿಕೊಳ್ಳುವ ಮುಗ್ಧ ನಗುವಿನ ಚೆಲುವೆ ಸಾಧನಾರನ್ನು ಯಾರು ತಾನೇ ಇಷ್ಟ ಪಡದಿರಲು ಸಾಧ್ಯ? ದೇವಾನಂದಾಗಲೀ, ಸಾಧನಾ ಆಗಲೀ ಯಾಕೆ ಇಷ್ಟವಾಗ ಬೇಕು ನಮಗೆ? ಅವರು ಅವರ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ಅಷ್ಟೇ ಅನ್ನುವ ದೃಷ್ಟಿಕೋನ ದಿಂದ ನೋಡಿದರೆ ಅದು ಅಷ್ಟೇ.
ಆದರೆ ಅದನ್ನು ಮೀರಿ ಅವರಲ್ಲಿನ ಯಾವುದೋ ಗುಣದಿಂದಾಗಿ ಅವರೆಡೆಗೆ ಆಕರ್ಷಿತರಾಗುತ್ತೇವೆ. ಅವರೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುತ್ತಾ, ಅವರೇ ನಾವಾಗಿ ಬದಲಾದಂತೆ ಕನಸು ಕಾಣತೊಡಗುತ್ತೇವೆಲ್ಲ? ಅದು ನಮ್ಮನ್ನು ಅವರೆಡೆಯಿಂದ
ಕಣ್ಣು ಕದಲಿಸದಂತೆ ಹಿಡಿದಿಟ್ಟುಬಿಡುತ್ತದೆ. ನಮ್ಮಿಂದಾಗದ ಕೆಲಸಗಳೆಲ್ಲ ಅವರಿಂದಾಗಲಿ ಎಂದು ಬಯಸುತ್ತಾ ಅವರನ್ನು ನಾಯಕ-ನಾಯಕಿಯ ಸ್ಥಾನದಲ್ಲಿ ಕೂರಿಸಿ ಹಾರ ಹಾಕಿ, ಮೆರವಣಿಗೆ ಮಾಡುತ್ತೇವೆ. ಹಾಗಂತ ದಿನಬೆಳಗಾದರೆ ಅವರೊಡನಿದ್ದು ನೋಡಿ ಎಂಥಾ ದೇವಾನಂದನೂ ಸಾಕುಸಾಕೆನಿಸಿಬಿಡುತ್ತಾನೆ. ಅವರು ನಮ್ಮ ಕನಸುಗಳಿಗೆ ಬಣ್ಣ ತುಂಬುತ್ತಾ ನಿಲುಕದ ನಕ್ಷತ್ರ ಗಳಾಗಿದ್ದರೇನೇ ಚೆಂದ.
ಅದರ ಹೆಚ್ಚು ಸಂತೋಷ. ಹೀಗೆಲ್ಲ ಅಂದುಕೊಳ್ಳುತ್ತಲೇ ಸಾಧನಾ ನಟಿಸಿದ ಚಿತ್ರಗೀತೆಗಳ ಹಾಡುಗಳನ್ನೆಲ್ಲ ಒಂದಾದ ಮೇಲೊಂದು ಕೇಳುತ್ತಾ, ನೋಡುತ್ತಾ ಹೋದೆ. ವಕ್ತ್ ಸಿನಿಮಾದ ಕೌನ್ ಆಯಾ ಕಿ ನಿಗಾಹೊ ಮೆ ಚಮಕ್ ಜಾಗ್ ಉಠಿ; ಎಕ್
ಫೂಲ್ ದೋ ಮಾಲಿ ಸಿನಿಮಾದ ಯೆ ಪರದಾ ಹಠಾದೋ ಜರಾ ಮುಖಡಾ ದಿಖಾದೊ, ಹಮ್ ಪ್ಯಾರ್ ಕರ್ನೇವಾಲೆ ಹೈ ಕೊಯಿ ಗೈರ್ ನಹೀ..., ಅಸಲೀ ನಕಲೀ ಸಿನೆಮಾದ ತೇರಾ ಮೇರಾ ಪ್ಯಾರ್ ಅಮರ್ ಫಿರ್ ಕ್ಯು ಮುಜಕೊ ಲಗತಾ ಹೈ ಡರ್, ಮೆರಾ ಸಾಯಾ ಚಿತ್ರದ ತು ಜಹಾ ಜಹಾ ಚಲೇಗಾ ಮೇರಾ ಸಾಯಾ ಸಾಥ್ ಹೋಗಾ ಮತ್ತು ಝುಮ್ಕಾ ಗಿರಾ ರೇ ಬರೇಲಿ ಕಿ ಬಾಜಾರ್ ಮೆ... ರಾಜ್
ಕುಮಾರ್ ಚಿತ್ರದ ಆಜಾ ಆಯಿ ಬಹಾರ್, ದಿಲ್ ಹೆ ಬೇಕರಾರ್... ವೋ ಕೌನ್ ಥಿ ಸಿನೆಮಾದ ನೈನಾ ಬರಸೇ ರಿಮ್ ಜಿಮ್ and ಎಲ್ಲ ಪ್ರೇಮಿಗಳ ಹಂಬಲವಾದ ಲಗಜಾ ಗಲೇ ಫಿರ್ ಯೆ ಹಸೀನ್ ರಾತ್ ನ ಹೋ... ಪರಖ್ ಸಿನೆಮಾದ ಓ ಸಜನಾ ಬರಖಾ ಬಹಾರ್ ಆಯೆ ಅಖಿಯೋ ಮೆ ಪ್ಯಾರ್ ಲಾಯೆ.... ಮೆರೆ ಮೆಹಬೂಬ್ ಸಿನೆಮಾದ ಹಾಡುಗಳೆಲ್ಲ ಒಂದಕ್ಕಿಂತ ಒಂದು ಚೆಂದ.
ನೋಡಿದಷ್ಟೂ ಮತ್ತೆ ಮತ್ತೆ ನೋಡಬೇಕೆನ್ನಿಸುವ ಪ್ರೇಮಗೀತೆಗಳೊಳಗೆ ಭಾವಪೂರ್ಣವಾಗಿ ಅಭಿನಯಿಸಿದ ಎಂಥಾ ಚೆಂದದ ನಟಿ ಸಾಧನಾ! The Mystery Girl ಎಂದೇ ಪ್ರಸಿದ್ಧಿಯಾದ ಆರವತ್ತರ ದಶಕದ ಚೆಲುವೆ ಸಾಧನಾ ಯಾವುದೇ ಅಬ್ಬರವಿಲ್ಲದೆ ತಣ್ಣಗಿನ ಪಾತ್ರಗಳಲ್ಲಿ, ಪ್ರೇಮಭರಿತ ಹಾಡುಗಳಲ್ಲಿ ಇಂದಿಗೂ ಎಲ್ಲ ಚಿತ್ರ ಪ್ರೇಮಿಗಳ ಮನದಲ್ಲಿ ಅಜರಾಮರವಾಗುಳಿದ ಚೆಲುವೆ.
ವಿಶಾಲವಾದ ಹಣೆಯಿರುವ ಹೆಣ್ಣುಮಕ್ಕಳಿಗೆ ಹಣೆ ಮುಚ್ಚುವಂತೆ ಮಾಡಿಸುವ hair cut ಗೆ ಇಂದಿಗೂ ಸಾಧನಾ Hair cut ಎಂದೇ ಹೇಳುವಂತೆ ಭಾರತದ ಫ್ಯಾಷನ್ ಜಗತ್ತಿನಲ್ಲಿ ತಮ್ಮದೇ ಆದ signature style ಸೃಷ್ಟಿಸಿದ style icon ನಟಿ. ಸ್ವಾತಂತ್ರ್ಯ ಪೂರ್ವ ದಲ್ಲಿ ಅಂದರೆ 1941ರ ಸೆಪ್ಟಂಬರ್ ಎರಡನೇ ತಾರಿಕಿನಂದು ಹಿಂದೂಸ್ತಾನದ ಕರಾಚಿಯ ಸಿಂಧ್ ಜನಾಂಗದಲ್ಲಿ ಜನಿಸಿದ ಸಾಧನಾರ ಪೂರ್ಣ ಹೆಸರು ಸಾಧನಾ ಶಿವದಾಸನಿ. ಹಿಂದಿ ಚಿತ್ರರಂಗದಲ್ಲಿ ಆಲದಮರದಂತೆ ಹರಡಿಕೊಂಡಿರುವ ರಾಜ್ ಕಪೂರ್ ಕುಟುಂಬಕ್ಕೆ ಬಹಳ ಹತ್ತಿರದ ನಂಟು. ರಾಜ್‌ಕಪೂರ್‌ರ ಹಿರಿಯ ಮಗ ರಣಧೀರ್ ಕಪೂರ್‌ರನ್ನು ವಿವಾಹವಾದ ಹಾಗೂ ಕರಿಷ್ಮಾ ಕಪೂರ್ ಮತ್ತು ಕರೀನಾ ಕಪೂರ್‌ರ ತಾಯಿ ಬಬಿತಾರ ಖಾಸಾ ದೊಡ್ಡಪ್ಪನ ಮಗಳೇ ಈ ಸಾಧನಾ ಶಿವದಾಸನಿ.
ಸ್ವಾತಂತ್ರ್ಯಾ ನಂತರ ಭಾರತ- ಪಾಕಿಸ್ತಾನದ ವಿಭಜನೆಯ ಸಂಘರ್ಷದ ಸಮಯದಲ್ಲಿ ಭಾರತದ ಮುಂಬೈಗೆ ವಲಸೆ ಬಂದು ನೆಲೆಯಾದಾಗ ಅವರಿಗೆ ಕೇವಲ ಏಳು ವರ್ಷಗಳು! ಬಾಲ್ಯದಿಂದಲೇ ಚಿತ್ರ ನಟಿಯಾಗಬೇಕೆಂಬ ಕನಸು ಕಂಡವರು. ಕಂಡ ಕನಸಿ
ನಂತೆಯೇ ಮೊದಲ ಬಾರಿಗೆ ಚಿತ್ರದಲ್ಲಿ ನಟಿಸಿದಾಗ ಆಕೆಗೆ ಕೇವಲ 14 ವರ್ಷ ವಯಸ್ಸು! ರಾಜ್ ಕಪೂರ್-ನರ್ಗೀಸ್ ಅಭಿನಯದ ಶ್ರೀ 420 ಸಿನಿಮಾದಲ್ಲಿ ಮುಡ್ ಮುಡ್ ಕೆ ನಾ ದೇಖ್ ಹಾಡಿನ ದೃಶ್ಯದಲ್ಲಿ ನಾದಿರಾ ಜತೆಯಲ್ಲಿದ್ದ chorusನಲ್ಲಿ ಒಬ್ಬಳಾಗಿ ಸಂಗೀತಕ್ಕೆ ತಕ್ಕಂತೆ ಲಯಬದ್ಧವಾಗಿ ಹೆಜ್ಜೆ ಕೂಡಿಸುತ್ತಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಾರೆ.
ಅಲ್ಲಿಂದ ಆರಂಭವಾದ ಅವರ ಸಿನಿಮಾ ಪಯಣ ಆರೇಳು ವರ್ಷಗಳ ಅತ್ಯಂತ ಜನಪ್ರಿಯತೆಯನ್ನು ತಂದುಕೊಡುವುದಷ್ಟೇ ಅಲ್ಲದೆ, ಅತ್ಯಂತ ಹೆಚ್ಚಿನ ಸಂಭಾವನೆಯನ್ನು ಪಡೆಯುವ ನಟಿಯಾಗಿಯೂ ಕೂಡ ರೂಪುಗೊಳ್ಳುತ್ತಾರೆ. ಅದು ಸ್ವಾತಂತ್ರ್ಯ ಸಂಘರ್ಷದ ಸಮಯವಾದ್ದರಿಂದ ಮನೆಯಲ್ಲೂ ಅಂತಹ ಅನುಕೂಲಕರ ವಾತಾವರಣವಿರದಿದ್ದ ಕಾರಣ ತಮ್ಮ ಏಳನೇ ವಯಸ್ಸಿನವರೆಗೂ ಅವರ ತಾಯಿಯೇ ಮೊದಲ ಗುರುವಾಗಿ ಕಲಿಸುತ್ತಾರೆ.
ಆನಂತರ ವಡಾಲಾದಲ್ಲಿ ಆಕ್ಸಿಲಿಯಮ್ ಕಾನ್ವೆಂಟಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿ ಜೈ ಹಿಂದ್ ಕಾಲೇಜಿ ನಲ್ಲಿ ತಮ್ಮ ವ್ಯಾಸಂಗವನ್ನು ಪೂರ್ಣಗೊಳಿಸಿಕೊಳ್ಳುತ್ತಾರೆ. ಆನಂತರ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯುವ ಸಲುವಾಗಿ ಪ್ರಚಾರಕ್ಕಾಗಿ ಶ್ರೀ 420ಯಲ್ಲಿನ ನಟನೆಯ ಕುರಿತು ಸ್ಕ್ರೀನ್ ಮ್ಯಾಗಝೀನ್ ನಲ್ಲಿ ಅವರ ಫೋಟೋ ಪ್ರಕಟಿಸುತ್ತಾರೆ. ಅದು, ತಮ್ಮ ಲವ್ ಇನ್ ಶಿಮ್ಲಾ ಚಿತ್ರಕ್ಕೆ ನಾಯಕಿಯ ಪಾತ್ರದ ಹುಡುಕಾಟದಲ್ಲಿದ್ದ ಖ್ಯಾತ ಚಲನಚಿತ್ರ ನಿರ್ಮಾಪಕರಾದ ಶಶಿಧರ ಮುಖರ್ಜಿಯವರ ಕಣ್ಣಿಗೆ ಬೀಳುತ್ತದೆ.
ತಮ್ಮ ಪುತ್ರ ರಾಯ್ ಮುಖರ್ಜಿಯನ್ನು ಆ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸುವ ಆಲೋಚನೆಗೆ ಸೂಕ್ತ ನಾಯಕಿ ದೊರೆತಂತಹ ಸಮಾಧಾನವಾಗುತ್ತದೆ. ಅದಕ್ಕಾಗಿ ಸಾಧನಾರಿಗೆ ತಮ್ಮ ಪುತ್ರ ರಾಯ್ ಮುಖರ್ಜಿಯೊಂದಿಗೆ ‘ಮುಖರ್ಜಿ ಆಕ್ಟಿಂಗ್ ಸ್ಕೂಲ್’ ನಲ್ಲಿ ಇನ್ನಷ್ಟು ಹೆಚ್ಚಿನ ತರಬೇತಿಯನ್ನು ಪಡೆಯಲು ಸೂಚಿಸುತ್ತಾರೆ. ಚಿತ್ರನಿರ್ದೇಶಕರಾಗಿ ಆರ್.ಕೆ.ನಯ್ಯರ್ ಕಾರ್ಯ ನಿರ್ವಹಿಸುತ್ತಾರೆ.
ಪಾತ್ರಕ್ಕೆ ತಕ್ಕಂತೆ ಬ್ರಿಟಿಷ್ ನಟಿ ಆಡ್ರೆ ಹೆಪ್‌ಬರ್ನ್‌ರಿಂದ ಪ್ರೇರಿತರಾಗಿ ಅವರಂತೆ ಸಾಧನಾರ ಕೇಶವಿನ್ಯಾಸವನ್ನು ಬದಲಿಸು ತ್ತಾರೆ. ಇದರಿಂದ ತುಂಟತನದಿಂದ ಕೂಡಿದ ಮಾಡರ್ನ್ ಗ್ಲಾಮರಸ್ ಲುಕ್‌ನಲ್ಲಿ ಸಾಧನಾ ಇನ್ನಷ್ಟುಅಂದವಾಗಿ ಕಾಣುತ್ತಾರೆ. ಮುಂದೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದರೂ ಆ ಕೇಶವಿನ್ಯಾಸ ಅವರೊಂದಿಗೇ ಸ್ಥಿರವಾಗಿ ಉಳಿಯುತ್ತದೆ. ಆ ನಂತರ ಅದು ಸಾಧನಾ ಕಟ್ ಆಗಿ ಒಂದು ಹೊಸ ಟ್ರೇಡ್ ಮಾರ್ಕ್ ಅನ್ನೇ ಸೃಷ್ಟಿಸಿದ್ದು ಈಗ ಇತಿಹಾಸ.
ಆ ಚಿತ್ರದ ಸೆಟ್ಟಿನಲ್ಲಿಯೇ ನಯ್ಯರ್ ಹಾಗೂ ಸಾಧನಾರ ನಡುವೆ ಅರಳಿ ನಿಂತ ಪ್ರೀತಿಯಿಂದಾಗಿ ತಮ್ಮ ಇಪ್ಪತ್ತೊಂದನೆ ವಯಸ್ಸಿ ನಲ್ಲಿ ಮಾರ್ಚ್ 7, 1966ರಂದು ವಿವಾಹವಾಗುತ್ತಾರೆ. ಮನೆಯಲ್ಲಿ ಅವರಿಬ್ಬರ ನಡುವಿನ ಪ್ರೀತಿ ತಿಳಿದಾಗ ಮೊದಲು ಆಕ್ಷೇಪ ವೆದ್ದರೂ ಆನಂತರ ಸಮ್ಮತಿ ದೊರೆಯುತ್ತದೆ. ಸುಮಾರು ಮೂವತ್ತು ವರುಷಗಳ ದಾಂಪತ್ಯವಿದ್ದರೂ ಮಕ್ಕಳಾಗದೇ ಉಳಿಯು ತ್ತಾರೆ.
1995ರಲ್ಲಿ ಅಸ್ತಮಾದಿಂದ ಆರ್.ಕೆ. ನಯ್ಯರ್ ವಿಧಿವಶರಾದ ನಂತರ ಸುಮಾರು ಇಪ್ಪತ್ತು ವರುಷಗಳ ಕಾಲ ಏಕಾಂಗಿ ಯಾಗಿಯೇ ಕಳೆಯುತ್ತಾರೆ. ಸೋದರ ಸಂಬಂಧಿಯಾದ ಬಬಿತಾರೊಡನೆ ಹೆಚ್ಚಿನ ಬಾಂಧವ್ಯವಿರದಿದ್ದರೂ ಸಹನಟಿಯರಾದ ಆಶಾ ಪರೇಖ್, ವಹೀದಾ ರೆಹಮಾನ್, ನಂದಾ ಮತ್ತು ಹೆಲೆನ್ ಅವರಂತಹ ನಟಿಯರೊಂದಿಗೆ ಹೆಚ್ಚಿನ ಒಡನಾಟದಲ್ಲಿರುತ್ತಾರೆ. ಕ್ರಮೇಣ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾದಂತೆಲ್ಲ ಪೋಷಕ ನಟನೆಗೆ ಮನಸ್ಸೊಪ್ಪದೆ ತಮ್ಮದೇ ಆದ ಚಿತ್ರನಿರ್ಮಾಣ ಸಂಸ್ಥೆ ಯನ್ನು ಆರಂಭಿಸುತ್ತಾರೆ.
ಆದರೆ ದುರ್ದೈವವೆಂದರೆ ಅಂಥ ಚೆಂದದ ಮುದ್ದು ನಟಿ ಹೈಪರ್ ಥೈರಾಯಿಡಿಸಂನಿಂದ ಸಾಕಷ್ಟು ನರಳುತ್ತಾರೆ. ಅದರಿಂದಾಗಿ ಚಿತ್ರರಂಗದಿಂದ ಕೆಲವು ಕಾಲ ನಿರ್ಗಮಿಸುತ್ತಾರೆ ಕೂಡ. ಬೋಸ್ಟನ್‌ನಲ್ಲಿ ಚಿಕಿತ್ಸೆ ಪಡೆದು ಮತ್ತೆ ನಟನೆಗೆ ಮರಳುತ್ತಾರಾದರೂ ಹೆಚ್ಚು ಸಮಯ ಕೊಡಲಾಗುವುದಿಲ್ಲ. ಮುಂದೆ ಕಣ್ಣಿನ ಸಮಸ್ಯೆ ಉಲ್ಬಣವಾಗಿ ಅವರು ಶಾಶ್ವತವಾಗಿ ಚಿತ್ರರಂಗದಿಂದ ದೂರ ಸರಿಯುತ್ತಾರೆ. ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರೂ ಲಭಿಸಿದ ಪ್ರಶಸ್ತಿಗಳು ಮಾತ್ರ ಬೆರಳೆಣಿಕೆಯಷ್ಟು.
ದೇವಾನಂದ್, ಶಮ್ಮಿ ಕಪೂರ್, ಮನೋಜ್ ಕುಮಾರ್, ರಾಜೇಂದ್ರ ಕುಮಾರ್, ಸುನಿಲ್ ದತ್, ಫಿರೋಜ್ ಖಾನ್‌ನಂತಹ ಮೇರು
ನಟರೊಂದಿಗೆ ನಟಿಸಿದ್ದರೂ ತಮ್ಮ ಕೊನೆಯ ದಿನಗಳಲ್ಲಿ ಮುಂಬೈನ ಸಾಂತಾಕ್ರೂಸ್‌ನಲ್ಲಿ ಆಶಾ ಭೋಂಸ್ಲೆಯ ಒಡೆತನದ ಮನೆ
ಯಲ್ಲಿ ಬಾಡಿಗೆಗೆ ವಾಸವಿರುತ್ತಾರೆ.
ಡಿಸೆಂಬರ್ 25, 2015 ರಂದು ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಕಾರಿ ಯಾಗದೆ ಚಿರನಿದ್ರೆಗೆ ಜಾರುತ್ತಾರೆ. ಅವರ ಚೆಂದದ ಮುಗುಳ್ನಗೆಯೊಂದಿಗೇ.... ಮುಮ್ಕಿನ್ ನಹೀ ಹೈ ವಕ್ತ್ ಕೀ, ರಫ್ತಾರ್ ರೋಕ್ ಲೇ ಕುಚ್ ಪಲ್ ಠೆಹರ್ ಕೆ ಪ್ಯಾರ್ ಕೀ, ಎಕ್ ಶ್ಯಾಮ್ ಜೀ ತೊ ಲೇ... ಫಿರ್ ಜಿಂದಗಿ ಮೆ ಆಪ್ ಕಾ, ಯೆ ಸಾಥ್ ಹೋ ನಾ ಹೋ ಶಾಯದ್ ಫಿರ್ ಇಸ್ ಜನಮ್ ಮೆ, ಮುಲಾಖಾತ್ ಹೋ ನ ಹೋ... ಅನ್ನುವ ಅವರ ಜನಪ್ರಿಯ ಲಗ್ ಜಾ ಗಲೇ ಹಾಡಿನ
ಮುಂದುವರಿಕೆಯ ಸಾಲುಗಳು ನಿರಂತರವಾಗಿ ಕಾಡುತ್ತಲೇ ಇವೆ.