ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hithesh Jain Column: ಸ್ವತಂತ್ರ ನ್ಯಾಯಾಂಗವು ಜವಾಬ್ದಾರಿಯುತ ವ್ಯವಸ್ಥೆಯೂ ಆಗಿರಬೇಕಲ್ಲವೇ ?

ಸರಕಾರಿ ಕಾರ್ಯನೀತಿಗಳು, ಕಾರ್ಪೊರೇಟ್ ವಿವಾದಗಳು ಹಾಗೂ ಮೂಲಭೂತ ಹಕ್ಕುಗಳ ಕುರಿತಾಗಿ ತೀರ್ಪು ನೀಡುವಂಥ ವಿಶೇಷಾಧಿಕಾರವನ್ನು ನ್ಯಾಯಾಧೀಶರು ಹೊಂದಿರುತ್ತಾರೆ. ಹೀಗಾಗಿ ಅವರ ಕರ್ತವ್ಯ ನಿರ್ವಹಣೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಮತ್ತು ವ್ಯವ ಸ್ಥೆಯು ಆ ಮಹತ್ವದ ಹುದ್ದೆಯಿಂದ ಪ್ರಾಮಾಣಿಕತೆಯನ್ನೂ ನಿರೀಕ್ಷಿಸುತ್ತದೆ.

ಸ್ವತಂತ್ರ ನ್ಯಾಯಾಂಗವು ಜವಾಬ್ದಾರಿಯುತ ವ್ಯವಸ್ಥೆಯೂ ಆಗಿರಬೇಕಲ್ಲವೇ ?

ಅಂಕಣಕಾರ ಹಿತೇಶ್‌ ಜೈನ್

Profile Ashok Nayak Mar 28, 2025 7:35 AM

ನ್ಯಾಯದ ತಕ್ಕಡಿ

ಹಿತೇಶ್‌ ಜೈನ್

ಕೆಲವು ದಿನಗಳ ಹಿಂದಷ್ಟೇ ದೆಹಲಿಯ ಗಣ್ಯರೊಬ್ಬರ ಮನೆಯಲ್ಲಿ ಬೆಂಕಿ ಕಾಣಿಸಿ ಕೊಂಡಿತು; ವಿಪರ್ಯಾಸವೆಂದರೆ, ಅದು ದಹಿಸಿದ್ದಕ್ಕಿಂತ ಸ್ವತಃ ಬಹಿರಂಗ ಪಡಿಸಿದ್ದೇ ಹೆಚ್ಚು ಎನ್ನಬೇಕು! ದೆಹಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಅಗ್ನಿ ಅವಘಡವೊಂದು ಸಂಭವಿಸಿದ್ದು, ಅದನ್ನು ತಣಿಸಲು ಹೋದ ಅಗ್ನಿಶಾಮಕ ದಳದ ಸಿಬ್ಬಂದಿಗೆ ಅವಘಡದ ತಾಣದಲ್ಲಿ ದೊಡ್ಡ ಪ್ರಮಾಣದ ನಗದು ರಾಶಿ ಗೋಚರಿಸಿದ್ದು ಇವೆ ಈಗ ಜಗಜ್ಜಾಹೀರು. ಹಾಗೆ ನೋಡಿದರೆ, ಹಾಲಿ ನ್ಯಾಯ ಮೂರ್ತಿಯೊಬ್ಬರ ಮನೆಯಲ್ಲಿ ಹೀಗೆ ಅಪಾರ ಪ್ರಮಾ ಣದ ಹಾಗೂ ವಿವರಿಸಲಾಗದ ಅಕ್ರಮ ಹಣದ ಪತ್ತೆಯಾದಾಗ, ‘ಸದ್ಯದಲ್ಲೇ ಗಂಭೀರ ಸ್ವರೂಪದ ತನಿಖೆಗೆ ಚಾಲನೆ ನೀಡ ಲಾಗುತ್ತದೆ’ ಎಂಬುದು ಬಹುತೇಕರ ನಿರೀಕ್ಷೆಯಾಗಿರುತ್ತದೆ. ಆದರೆ, ಈ ಪ್ರಕರಣದಲ್ಲಿ ನಡೆದಿದ್ದೇ ಬೇರೆ!

ತನಿಖೆಗೆ ಚಾಲನೆ ಸಿಗುವುದರ ಬದಲಿಗೆ, ಸುಪ್ರೀಂ ಕೋರ್ಟ್ ಕೊಲಿಜಿಯಂ ಸದರಿ ನ್ಯಾಯ ಮೂರ್ತಿಯನ್ನು ವಿಚಿತ್ರವೆಂಬಂತೆ ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ತ್ವರಿತವಾಗಿ ಮರಳಿ ವರ್ಗಾಯಿಸಿಬಿಟ್ಟಿತು (ಈ ಲೇಖನವನ್ನು ಬರೆಯುವ ಸಮಯದಲ್ಲಿ, ವರ್ಗಾವಣೆಗೆ ಸಂಬಂಧಿಸಿದ ತನ್ನ ನಿರ್ಣಯವನ್ನು ಕೊಲಿಜಿಯಂ ಪ್ರಕಟಿಸುವುದಿನ್ನೂ ಬಾಕಿಯಿತ್ತು ಎನ್ನಿ).

ಈ ‘ಕುಶಲಕಾರ್ಯ’ದ ಪರಿಣಾಮಕಾರಿತ್ವವು ಸಂಶಯಾಸ್ಪದವಾಗಿರುವುದು ಮಾತ್ರವಲ್ಲದೆ, ‘ನಿಭಾಯಿಸಲು ತೀರಾ ದುಸ್ತರವಾದ ಸಮಸ್ಯೆ ಧುತ್ತನೆ ಎದುರಾದಾಗ, ಅದನ್ನು ಹಾಗೇ ಸುಮ್ಮನೆ ಮತ್ತೆಲ್ಲಿಗಾದರೂ ವರ್ಗಾಯಿಸಿಬಿಡಿ’ ಎಂಬ ಜನಮೇಜಯರಾಯನ ಕಾಲದ ಕಾರ್ಯತಂತ್ರವನ್ನೂ ಅದು ನೆನಪಿಸುತ್ತದೆ. ಹಾಗೆ ನೋಡಿದರೆ, ಭಾರತದ ನ್ಯಾಯಾಂಗ ವ್ಯವಸ್ಥೆಯ ಮೂಲಭೂತ ಅಂಶಗಳ ಕುರಿತಾದ ಗಂಭೀರ ಸ್ವರೂಪದ ಚರ್ಚೆಗೆ ಈ ಒಂದಿ ಡೀ ಪ್ರಸಂಗವು ಮರುಚಾಲನೆ ನೀಡಿದೆ ಎನ್ನಬೇಕು.

ಇದನ್ನೂ ಓದಿ: Roopa Gururaj Column: ಹೇಗೆ ಬದುಕುತ್ತೇವೆ ಎನ್ನುವುದು ಮುಖ್ಯ !

ಇಲ್ಲಿ ನಿಜಕ್ಕೂ ಸ್ವಾತಂತ್ರ್ಯ ಕೊನೆಯಾಗುವುದೆಲ್ಲಿ ಮತ್ತು ಹೊಣೆಗಾರಿಕೆ ಶುರುವಾಗುವು ದೆಲ್ಲಿಂದ? ಸೈದ್ಧಾಂತಿಕವಾಗಿ ನೋಡುವುದಾದರೆ, ನ್ಯಾಯಾಂಗ ವ್ಯವಸ್ಥೆಯ ಉತ್ತರದಾ ಯಿತ್ವವನ್ನು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತವು ಹತ್ತು ಹಲವು ಕಾರ್ಯ ವಿಧಾನ ಗಳನ್ನು ಹೊಂದಿದೆ.

ಆದಾಗ್ಯೂ, ಈ ಕಾರ್ಯವಿಧಾನಗಳು ಒಂದೋ ವಿರಳವಾಗಿ ಬಳಕೆಯಾಗುತ್ತವೆ, ಇಲ್ಲವೇ ಜಾರಿಗೆ ತರುವ ನಿಟ್ಟಿನಲ್ಲಿ ಅವು ತೀರಾ ಜಟಿಲವಾಗಿವೆ ಎನ್ನಲಡ್ಡಿಯಿಲ್ಲ. ಮೊದಲನೆಯ ದಾಗಿ, ಕೊಲಿಜಿಯಂ ಒಂದರ ಮೂಲಕ ನ್ಯಾಯಾಧೀಶರನ್ನು ನೇಮಿಸುವುದಕ್ಕೆ ಸಂಬಂಧಿಸಿ ಪ್ರಸ್ತುತ ಚಾಲ್ತಿಯಲ್ಲಿರುವ ಪದ್ಧತಿಯು ಸುದೀರ್ಘ ಕಾಲದಿಂದ ಚರ್ಚೆಯ ಕೇಂದ್ರ ಬಿಂದು ವಾಗಿದೆ.

ಸರಕಾರದ ಹಸ್ತಕ್ಷೇಪವನ್ನು ಕೋರುವ ಸಂವಿಧಾನದಲ್ಲಿ ಈ ಪದ್ಧತಿಯ ಬೇರುಗಳಿಲ್ಲ, ಆದರೆ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪುಗಳ ಮೂಲಕ ಇಂಥದೊಂದು ಪದ್ಧತಿ ಯ ಸ್ಥಾಪನೆಗೆ ಅನುವುಮಾಡಿಕೊಟ್ಟಿದೆ. ಇದು ತನ್ನ ರಹಸ್ಯಾತ್ಮಕ ಸ್ವರೂಪದ ಕಾರಣ ದಿಂದಾಗಿ, ಬಹುತೇಕ ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲಿ ಅನುಸರಿಸಲಾಗುವ ಪದ್ಧತಿ ಗಳಿಗಿಂತ ಭಿನ್ನವಾಗಿದೆ.

ಏಕೆಂದರೆ, ಇಂಥ ನೇಮಕಾತಿಗಳು, ಬಡ್ತಿಗಳು ಅಥವಾ ವರ್ಗಾವಣೆಗೆ ಸಂಬಂಧಿಸಿದಂತೆ ಕೊಲಿಜಿಯಂ ಯಾವುದೇ ಮಾನದಂಡಗಳನ್ನು ಪ್ರಕಟಿಸುವುದಿಲ್ಲ ಹಾಗೂ ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲಿತ ಚರ್ಚೆಗಳಾಗಲೀ, ಸಾರ್ವಜನಿಕ ವಿವರಣೆಗಳಾಗಲೀ ಲಭ್ಯವಿಲ್ಲ. ಉದಾಹರಣೆಗೆ, ಸರ್ವೋಚ್ಚ ನ್ಯಾಯಾಲಯದ ಸೇವೆಗೆ ಬಡ್ತಿ ನೀಡುವ ವಿಷಯ ದಲ್ಲಿ ನ್ಯಾಯಾಧೀಶರೊಬ್ಬರು ನಿರ್ಲಕ್ಷಿಸಲ್ಪಟ್ಟಾಗ, ಈ ಸಂಬಂಧವಾಗಿ ಯಾವುದೇ ಕಾರಣ ವನ್ನು ಒದಗಿಸುವ ಬಾಧ್ಯತೆ ಕೊಲಿಜಿಯಂಗೆ ಇಲ್ಲ.

ನ್ಯಾಯಾಂಗ ವ್ಯವಸ್ಥೆಯಲ್ಲಿನ ಯಾವುದೇ ನೇಮಕಾತಿಗಳು, ನೈಜ ಅರ್ಹತೆ/ಯೋಗ್ಯತೆಗಿಂತ ವೈಯಕ್ತಿಕ ನಿಷ್ಠೆಗಳು, ಸೈದ್ಧಾಂತಿಕ ಹೊಂದಾಣಿಕೆಗಳು ಮತ್ತು ಆಂತರಿಕ ರಾಜಕೀಯವನ್ನು ಆಧರಿಸಿವೆಯೇ ಎಂಬ ಅನುಮಾನಗಳು ಹುಟ್ಟಿಕೊಳ್ಳುವುದಕ್ಕೆ ಈ ಗೌಪ್ಯತೆಯು ಅನುವು ಮಾಡಿಕೊಡುತ್ತದೆ.

ಹಾಗೆ ನೋಡಿದರೆ, 2015ರಲ್ಲಿ ಈ ವಿಷಯದಲ್ಲಿ ಒಂದು ಸುಧಾರಣೆಯಾಗುವ ಅವಕಾಶ ಒದಗಿತ್ತು; ನ್ಯಾಯಾಂಗ ವ್ಯವಸ್ಥೆಯಲ್ಲಿನ ನೇಮಕಾತಿಗಳಿಗೆ ಸಂಬಂಧಿಸಿ ಪಾರದರ್ಶಕ ಮತ್ತು ವ್ಯಾಪಕ ಪ್ರಾತಿನಿಧ್ಯವನ್ನು ಪರಿಚಯಿಸಲು ಯತ್ನಿಸಿದ ಒಂದು ಸಂಸ್ಥಾ ಘಟಕ ವಾದ ‘ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ’ವು ( National Judicial Appoint ments Commission- NJAC) ಮುನ್ನೆಲೆಗೆ ಬಂದಿದ್ದು ಆಗಲೇ.

ಸಂಸತ್ತಿನಲ್ಲಿ ಭಾರಿ ಬಹುಮತದಿಂದ ಅಂಗೀಕರಿಸಲ್ಪಟ್ಟ ಹಾಗೂ 20 ರಾಜ್ಯಗಳ ಶಾಸಕಾಂಗ ಗಳಿಂದ ಅನುಮೋದಿಸಲ್ಪಟ್ಟ ಸದರಿ NJAC ಘಟಕವು, ನ್ಯಾಯಾಂಗ ವ್ಯವಸ್ಥೆಯ ಸ್ವಾತಂತ್ರ್ಯ ಮತ್ತು ಪ್ರಜಾಸತ್ತಾತ್ಮಕ ಹೊಣೆಗಾರಿಕೆಯ ನಡುವಿನ ಸಮತೋಲನವನ್ನು ಖಾತ್ರಿ ಪಡಿಸಿತು.

ಇಷ್ಟಾಗಿಯೂ, ಈ ಸುಧಾರಣಾ ವ್ಯವಸ್ಥೆಯು ಅಂಗೀಕರಿಸಲ್ಪಡುತ್ತಿದ್ದಂತೆ, ನ್ಯಾಯಾಂಗದ ಸ್ವಾತಂತ್ರ್ಯದ ಕಾರಣವನ್ನು ಮುಂದುಮಾಡಿ ಸರ್ವೋಚ್ಚ ನ್ಯಾಯಾಲಯವು ಅದನ್ನು ರದ್ದುಪಡಿಸಿತು. ನ್ಯಾಯಾಂಗ ವ್ಯವಸ್ಥೆಗೆ ಆಗುವ ನೇಮಕಾತಿಗಳ ಜತೆಜತೆಗೆ, ವಕೀಲರಿಗೆ ‘ಹಿರಿಯ ವಕೀಲರು’ ಎಂಬುದಾಗಿ ಬಡ್ತಿ ನೀಡುವ ಪ್ರಕ್ರಿಯೆಗಳು ಕೂಡ ಮುಚ್ಚಿದ ಬಾಗಿಲು ಗಳ ಹಿಂದೆ ಸುಸ್ಪಷ್ಟವಾಗಿ ನಿರ್ವಹಿಸಲ್ಪಡುತ್ತಿವೆ.

ವಕೀಲರೊಬ್ಬರಿಗೆ ಏಕೆ ಬಡ್ತಿ ನೀಡಲಾಗುತ್ತಿದೆ ಅಥವಾ ಅದನ್ನು ತಡೆ ಹಿಡಿಯಲಾಗುತ್ತಿದೆ ಎಂಬುದಕ್ಕೆ ಇಲ್ಲಿ ಯಾವುದೇ ಕಾರಣವನ್ನು ಒದಗಿಸಲಾಗುವುದಿಲ್ಲ ಎಂಬುದನ್ನು ನೀವು ಗಮನಿಸಬೇಕು. ಹೀಗಾಗಿ, ರಾಜಕೀಯದ ಪಡಸಾಲೆಯಿಂದ ಪ್ರೇರಿತಗೊಂಡು ಇಂಥ ಬಡ್ತಿ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ ಹಾಗೂ ಇದರಿಂದಾಗಿ ವಿವರಣೆಗೆ ನಿಲುಕದ ಪ್ರತ್ಯೇಕತೆ ಸೃಷ್ಟಿಯಾಗುತ್ತಿದೆ ಎಂಬುದು ಏಕಪ್ರಕಾರವಾಗಿ ಕೇಳಿಬರುತ್ತಿರುವ ಟೀಕೆ-ಟಿಪ್ಪಣಿಯಾಗಿದೆ.

ಇನ್ನು, ನ್ಯಾಯಾಂಗ ವ್ಯವಸ್ಥೆಯಲ್ಲಿನ ಸದಸ್ಯರು ಹೊಂದಿರುವ ಆಸ್ತಿಪಾಸ್ತಿಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕೆಂಬ ವಿಷಯವು ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ಹಾಗೆ ನೋಡಿದರೆ, ‘ಲೋಕಪಾಲ್ ಮತ್ತು ಲೋಕಾಯುಕ್ತರ ಕಾಯ್ದೆ, 2013’ರ ಅನುಸಾರ, ಸಾರ್ವಜನಿಕ ಸೇವೆಯಲ್ಲಿರುವವರು ತಮ್ಮ, ತಮ್ಮ ಬಾಳಸಂಗಾತಿಯ ಹಾಗೂ ಅವಲಂಬಿತ ಮಕ್ಕಳ ಆಸ್ತಿಪಾಸ್ತಿಗಳು ಮತ್ತು ಬಾಧ್ಯತೆಗಳನ್ನು ಘೋಷಿಸುವುದು ಕಡ್ಡಾಯವಾಗಿದೆ.

ಸಾರ್ವಜನಿಕ ಸೇವೆಯಲ್ಲಿರುವವರು ಎಂದರೆ, ಸರಕಾರಿ ಸೇವೆಯಲ್ಲಿರುವ ಅಥವಾ ಸಾರ್ವ ಜನಿಕ ಕರ್ತವ್ಯದ ನಿರ್ವಹಣೆಗಾಗಿ ಸರಕಾರದಿಂದ ಸಂಭಾವನೆ ಪಡೆಯುತ್ತಿರುವ ಯಾವುದೇ ವ್ಯಕ್ತಿ ಎಂದರ್ಥ. ಇದರ ವ್ಯಾಪ್ತಿಯಲ್ಲಿ ಸಂಸದರು ಹಾಗೂ ಮಿಲಿಟರಿ ಸಿಬ್ಬಂದಿಗಳು ಸೇರಿರುವಂತೆಯೇ, ನ್ಯಾಯಾಂಗದ ಚಟುವಟಿಕೆಗಳನ್ನು ನಿರ್ವಹಿಸಲೆಂದು ವಿಧಿಬದ್ಧವಾದ ಅಧಿಕಾರ ಪಡೆದಿರುವ ವ್ಯಕ್ತಿಗಳು ಕೂಡ ಸೇರಿದ್ದಾರೆ.

ಹೀಗಾಗಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಅಡಕವಾಗಿರುವ ಎಲ್ಲಾ ಸ್ತರದ ನ್ಯಾಯಾಧೀಶರಿಗೂ ಈ ನಿಯಮ ಅನ್ವಯವಾಗುತ್ತದೆ. ನ್ಯಾಯಾಧೀಶರು ತಮ್ಮ ಆಸ್ತಿಪಾಸ್ತಿಗಳ ವಿವರವನ್ನು ಬಹಿರಂಗಪಡಿಸುತ್ತಾರಾದರೂ, ಆ ಪರಿಪಾಠವು ಮಿಕ್ಕ ಸಾರ್ವಜನಿಕ ಸೇವಕರಿಗಿಂತ ಭಿನ್ನ ವಾಗಿರುತ್ತದೆ; ಅಂದರೆ, ಆ ವಿವರಗಳು ಸಾರ್ವಜನಿಕರಿಗೆ ತಾನೇತಾನಾಗಿ ಲಭ್ಯವಾಗುವುದಿಲ್ಲ.

2024ರ ಅಧಿಕೃತ ಅಂಕಿ-ಅಂಶವು ಹೇಳುವ ಪ್ರಕಾರ, 25 ಉಚ್ಚ ನ್ಯಾಯಾಲಯಗಳಲ್ಲಿ ಪ್ರಸ್ತುತ ನೇಮಕಗೊಂಡಿರುವ 749 ನ್ಯಾಯಾಧೀಶರ ಪೈಕಿ 98 ಮಂದಿಯ ಆಸ್ತಿಪಾಸ್ತಿಯ ವಿವರಗಳು ಮಾತ್ರವೇ ಸಾರ್ವಜನಿಕರಿಗೆ ಲಭ್ಯವಿವೆ. ಸಾರ್ವಜನಿಕ ಸೇವಕರು ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಹೀಗೆ ಭಿನ್ನರೀತಿಯಲ್ಲಿ ನಡೆಸಿಕೊಳ್ಳುತ್ತಿರುವ ಪರಿ ಅಥವಾ ಇಂಥದೊಂದು ಭೇದಕಲ್ಪನೆ ಒಂದು ವರ್ಗದೊಳಗೆ ಮತ್ತೊಂದು ವರ್ಗವನ್ನು ಸೃಷ್ಟಿಸಿಬಿಡುತ್ತದೆ ಎಂಬುದರಲ್ಲಿ ಅನುಮಾನವಿಲ್ಲ; ಇಂಥ ದೊಂದು ಅಸ್ತಿತ್ವ ನಿರಾಧಾರವಾದುದು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ವಿಶ್ವದ ಬಹಳಷ್ಟು ದೇಶಗಳಲ್ಲಿ ಇಂಥ ಪರಿಸ್ಥಿತಿಯಿಲ್ಲ, ನ್ಯಾಯಾಧೀಶರು ತಮ್ಮ ಆಸ್ತಿಪಾಸ್ತಿ ಗಳ ವಿವರವನ್ನುಸಾರ್ವಜನಿಕವಾಗಿ ಬಹಿರಂಗಪಡಿಸುವುದು ಅಲ್ಲ ಕಡ್ಡಾಯವಾಗಿದೆ. ಅಮೆರಿಕವನ್ನೇ ತೆಗೆದುಕೊಳ್ಳಿ, ಅಲ್ಲಿ ‘ವಾಟರ್‌ಗೇಟ್ ಹಗರಣ’ ನಡೆದ ನಂತರ, ಸರಕಾರಿ ಸೇವೆಯಲ್ಲಿನ ನೈತಿಕತೆಗೆ ಸಂಬಂಧಿಸಿದ ಕಾಯ್ದೆಯ ಅನುಸಾರ ಹಣಕಾಸು ಸ್ಥಿತಿಗತಿಯ ವರದಿಗಳ ಬಹಿರಂಗಪಡಿಸುವಿಕೆಯನ್ನು ಕಡ್ಡಾಯಗೊಳಿಸಲಾಯಿತು.

ಅದರಂತೆ, ನ್ಯಾಯಾಧೀಶರು ಮತ್ತು ಅವರ ಸಂಬಂಧಿಕರ ಹಣಕಾಸಿನ ಸ್ಥಿತಿಗತಿಗಳ ಬಹಿರಂಗ ವರದಿಗಳು ಅಮೆರಿಕದ ನ್ಯಾಯಾಲಯಗಳ ಜಾಲತಾಣಗಳಲ್ಲಿ ಸಾರ್ವಜನಿಕರ ಅವಗಾಹನೆಗೆ ಲಭ್ಯವಿವೆ. ಎಲ್ಲಕ್ಕಿಂತ ಮುಖ್ಯವಾಗಿ, ‘ಸಾರ್ವಜನಿಕ ಪ್ರಸಾರಕ್ಕೆ ಸಂಬಂಧಿಸಿದ ಸುದ್ದಿ ಮತ್ತು ಸಂವಹನ ಮಾಧ್ಯಮಗಳನ್ನು ಹೊರತುಪಡಿಸಿದ ಬೇರಾವುದೇ ಕಾನೂನು ಬಾಹಿರ ಉದ್ದೇಶ ಅಥವಾ ವಾಣಿಜ್ಯಿಕ ಉದ್ದೇಶಕ್ಕಾಗಿ ಈ ಹಣಕಾಸು ಸ್ಥಿತಿಗತಿಯ ವರದಿ ಗಳನ್ನು ಬಳಸುವುದು ಅಕ್ರಮವಾಗಿರುತ್ತದೆ’ ಎಂಬುದಾಗಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಮೂಲಕ ನ್ಯಾಯಾಧೀಶರನ್ನು ಅಲ್ಲಿ ರಕ್ಷಿಸಲಾಗುತ್ತದೆ ಎಂಬುದನ್ನೂ ಗಮನಿಸ ಬೇಕು.

ಶಾಸನಸಭೆಗಳಿಗೆ ಚುನಾಯಿತರಾದವರು, ಸರಕಾರಿ ಅಧಿಕಾರಿಗಳು, ನ್ಯಾಯಾಧೀಶರನ್ನು ಒಳಗೊಂಡಂತೆ ಸೂಕ್ತ ಸಾರ್ವಜನಿಕ ಸೇವಕರಿಗೆ ಆಸ್ತಿಪಾಸ್ತಿಗಳ ಘೋಷಣೆಗಳು ಸಂಬಂಧ ಪಟ್ಟಿದ್ದರೆ, ಆಯಾ ಕುಟುಂಬದ ಸದಸ್ಯರ ಕುರಿತಾದ ಇಂಥ ಅಂಕಿ-ಅಂಶಗಳನ್ನು ಪ್ರಕಟಿಸು ವುದು ಕಡ್ಡಾಯವಾಗಿರುತ್ತದೆ ಎಂಬುದನ್ನು ಐರೋಪ್ಯ ಒಕ್ಕೂಟದ ನ್ಯಾಯಾಲಯ ಕೂಡ 2022ರ ಆಗಸ್ಟ್ ನಲ್ಲಿ ಒಪ್ಪಿಕೊಂಡಿತು.

ಸಂಪತ್ತಿನ ಸಂಗ್ರಹಣೆಯನ್ನು ಪತ್ತೆಹಚ್ಚುವುದು ಮಾತ್ರವೇ ಇಂಥ ಬಹಿರಂಗಪಡಿಸುವಿಕೆಯ ಪರಿಪಾಠದ ಉದ್ದೇಶವಲ್ಲ, ಹಿತಾಸಕ್ತಿಯ ಸಂಘರ್ಷದಂಥ ಚರ್ಚಾವಿಷಯಗಳು/ಸಮಸ್ಯೆ ಗಳನ್ನು ನಿರ್ಣಯಿಸುವುದು ಕೂಡ ಅದರಲ್ಲಿ ಸೇರಿದೆ. ಇದನ್ನು ಪರಿಗಣನೆಗೆ ತೆಗೆದುಕೊಂಡರೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ತಮ್ಮ ಆಸ್ತಿಪಾಸ್ತಿ ಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸುವುದರ ಕುರಿತಾಗಿ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಗೆ ಸಂಬಂಧಿಸಿದ ಭಾರತದ ಸಂಸದೀಯ ಸ್ಥಾಯಿ ಸಮಿತಿ ಹಾಗೂ ಕೇಂದ್ರ ಸರಕಾರವು ಮಾಡಿರುವ ಶಿಫಾರಸುಗಳು ಅಸಾಮಾನ್ಯವೇನಲ್ಲ.

ಈ ಪ್ರಸ್ತಾವಗಳು ಸರ್ವೋಚ್ಚ ನ್ಯಾಯಾಲಯದ ನಿರ್ಧಾರಕ್ಕಾಗಿ ಕಾಯುತ್ತಿರುವುದರಿಂದ ಸ್ಥಗಿತಗೊಂಡಿವೆ ಎಂದು ಅದು ಹೇಳುತ್ತಿದೆ. ನ್ಯಾಯಾಂಗದ ಸೇವೆಯಲ್ಲಿರುವವರ ಆಸ್ತಿಪಾಸ್ತಿ ಗಳನ್ನು ಬಹಿರಂಗಪಡಿಸುವ ವರದಿಗಳು ಸಾರ್ವಜನಿಕರಿಗೆ ಲಭ್ಯವಾಗು ವಂತಾಗಬೇಕು ಎಂಬ ಆಶಯ ಸ್ವೀಕಾರಾರ್ಹವಾದರೂ, ಈ ನಿಟ್ಟಿನಲ್ಲಿ ಸೂಕ್ತವಾದ ಸುರಕ್ಷತಾ ಕ್ರಮ ಗಳನ್ನೂ ಕೈಗೊಳ್ಳಬೇಕು ಎಂಬ ಗ್ರಹಿಕೆಗೂ ವ್ಯಾಪಕ ಮನ್ನಣೆ ಸಿಕ್ಕಿದೆ.

ಅದರಲ್ಲೂ ನಿರ್ದಿಷ್ಟವಾಗಿ, ಸೂಕ್ಷ್ಮವೆನಿಸಬಹುದಾದ ವೈಯಕ್ತಿಕ ಮಾಹಿತಿಯನ್ನು ವಿಹಿತ ರೂಪದಲ್ಲಿ ತಯಾರಿಸಬೇಕು ಹಾಗೂ ಈ ಮಾಹಿತಿಯನ್ನು ಅವಲೋಕಿಸಲು ಬಯಸು ವವರು, ತಮ್ಮ ಹೆಸರು, ವಿಳಾಸ ಹಾಗೂ ಗುರುತನ್ನು ಒಳಗೊಂಡ ‘ಮಾಹಿತಿ’ ಒದಗಿಸುವು ದನ್ನು ಕಡ್ಡಾಯವಾಗಿಸಬೇಕು. ಹೀಗೆ ಮಾಡು ವುದರಿಂದ, ನ್ಯಾಯಾಂಗ ವ್ಯವಸ್ಥೆಯಲ್ಲಿನ ಸಾರ್ವಜನಿಕರ ನಂಬಿಕೆಗೆ ಆಧಾರವಾಗಿರುವ ಪಾರದರ್ಶಕತೆಯನ್ನು ಕಾಪಾಡುವುದರ ಜತೆಗೆ, ಮಾಹಿತಿಯ ದುರುಪಯೋಗವನ್ನು ತಡೆಯಬಲ್ಲಂಥ ಉತ್ತರದಾಯಿ ಕಾರ್ಯ ವಿಧಾನವನ್ನೂ ಹುಟ್ಟುಹಾಕಿದಂತಾಗುತ್ತದೆ.

ಇಷ್ಟಿದ್ದರೂ, ನ್ಯಾಯಾಂಗ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವವರು, ತಮ್ಮ ಸ್ವತ್ತಿನ ವಿವರಗಳನ್ನುಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕಾಗುವ ಅಗತ್ಯವನ್ನು ನಿರಂತರ ವಾಗಿ ವಿರೋಧಿಸುತ್ತಲೇ ಬಂದಿದ್ದಾರೆ; ಈ ಕುರಿತಾಗಿ ಅವರು ನೀಡಿರುವ ಕಾರಣಗಳು ಅಥವಾ ಸಮರ್ಥನೆಗಳು ಅಸಮರ್ಪಕವಾಗಿವೆ ಎನ್ನಲಡ್ಡಿಯಿಲ್ಲ.

ನ್ಯಾಯಾಧೀಶರಿಗೆ ಅವರದ್ದೇ ಆದ ವಿಶೇಷಾಧಿಕಾರಗಳಿವೆ; ಸರಕಾರಿ ಕಾರ್ಯನೀತಿಗಳು, ಕಾರ್ಪೊರೇಟ್ ವಿವಾದಗಳು ಹಾಗೂ ಮೂಲಭೂತ ಹಕ್ಕುಗಳ ಕುರಿತಾಗಿ ತೀರ್ಪು ನೀಡು ವಂಥ ವಿಶೇಷಾಽಕಾರವನ್ನು ನ್ಯಾಯಾಧೀಶರು ಹೊಂದಿರುತ್ತಾರೆ. ಹೀಗಾಗಿ ಅವರ ಕರ್ತವ್ಯ ನಿರ್ವಹಣೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಮತ್ತು ವ್ಯವಸ್ಥೆಯೂ ಆ ಮಹತ್ವದ ಹುದ್ದೆಯಿಂದ ಪ್ರಾಮಾಣಿಕತೆಯನ್ನು ನಿರೀಕ್ಷಿಸುತ್ತದೆ.

ಹೀಗಾಗಿ, ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ವಿಷಯದಲ್ಲಿ ಇತ್ತೀಚೆಗೆ ವರದಿ ಯಾಗಿರುವ ಘಟನೆಯು, ಸುದೀರ್ಘ ಕಾಲದಿಂದ ಬಾಕಿ ಉಳಿದಿರುವ ನ್ಯಾಯಾಂಗ ವ್ಯವಸ್ಥೆಯ ಸುಧಾರಣೆಗಳ ವಿಷಯದಲ್ಲಿ ಒಂದು ‘ಜ್ಞಾಪಕಕಾರಿ’ ಆಗಿ ಮಾತ್ರವಲ್ಲದೆ, ಆ ಸುಧಾರಣೆಗಳ ಜಾರಿಯಲ್ಲಿ ವೇಗವರ್ಧಕವಾಗಿಯೂ ಕಾರ್ಯನಿರ್ವಹಿಸಬೇಕು.

ನ್ಯಾಯಾಂಗ ವ್ಯವಸ್ಥೆಯಲ್ಲಿನ ಶಿಷ್ಟಾಚಾರಗಳನ್ನು ಮತ್ತಷ್ಟು ಸ್ಪಷ್ಟವಾಗಿಸಬೇಕಿದೆ, ದೃಢವಾಗಿಸಬೇಕಿದೆ. ಅಂಥದೊಂದು ಚೌಕಟ್ಟನ್ನು ಅದಕ್ಕೆ ಒದಗಿಸಬೇಕಿದೆ. ನ್ಯಾಯಾಂಗದ ಸೇವೆಯಲ್ಲಿರುವವರಿಂದ ಯಾವುದೇ ತೆರನಾದ ದುರ್ನಡತೆ ಅಥವಾ ದಿಕ್ಚ್ಯುತಿ ಹೊಮ್ಮಿದರೆ, ವರ್ಗಾವಣೆಗಳ ಮೂಲಕ ಸದ್ದಿಲ್ಲದೆ ಅವಕ್ಕೆ ತೇಪೆ ಹಚ್ಚಿ ಕೈತೊಳೆದುಕೊಳ್ಳುವ ಬದಲಿಗೆ, ಅಂಥವರ ಔಪಚಾರಿಕ ವಿಚಾರಣೆಗಳನ್ನು ಕಡ್ಡಾಯಗೊಳಿಸುವಂಥ ಉಪಕ್ರಮ/ನಿಯ ಮಾವಳಿಯನ್ನು ಈ ಶಿಷ್ಟಾಚಾರಗಳಲ್ಲಿ ಸೇರ್ಪಡೆ ಮಾಡಬೇಕಿದೆ.

ಇಷ್ಟು ಮಾತ್ರವಲ್ಲದೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ನಡೆಯುವ ನೇಮಕಾತಿ ಪ್ರಕ್ರಿಯೆಯಲ್ಲಿ ಒಂದಷ್ಟು ಸಕಾರಾತ್ಮಕ ಮತ್ತು ಸ್ವೀಕಾರಾರ್ಹ ರೂಪಾಂತರ ಆಗಬೇಕಿದೆ. ಸ್ಥಾನಗಳ ಬಡ್ತಿ ಗಳಿಗೆ ಸಂಬಂಧಿಸಿ ಪಾರದರ್ಶಕ ಮಾನದಂಡಗಳನ್ನು ಸ್ಥಾಪಿಸಬೇಕಿದೆ ಹಾಗೂ ಈ ಸಂಬಂಧ ಕೊಲಿಜಿಯಂ ವತಿಯಿಂದ ವಿಸ್ತೃತ ಸಮರ್ಥನೆಗಳು ಪ್ರಕಟವಾಗಬೇಕಿವೆ.

ನ್ಯಾಯಾಧೀಶರು ಮಾಡುವ ಆಸ್ತಿಪಾಸ್ತಿಯ ಘೋಷಣೆಗಳನ್ನು ಸೂಕ್ತ ಗೌಪ್ಯತಾ ಸುರಕ್ಷತಾ ಕ್ರಮಗಳೊಂದಿಗೆ ಪ್ರಕಟಿಸುವ ನಿಟ್ಟಿನಲ್ಲಿ ಗಮನಹರಿಸಬೇಕಿದೆ. ಇಂಥ ಉಪಕ್ರಮಗಳನ್ನು ಹಸ್ತಕ್ಷೇಪವೆಂದು ಭಾವಿಸದೆ, ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಕಾಪಿಟ್ಟುಕೊಳ್ಳು ವಲ್ಲಿನ ಅಗತ್ಯ ಸಾಧನಗಳಾಗಿ ನೋಡಬೇಕಿದೆ.

ಈ ಶಿಫಾರಸುಗಳು ಮೇಲ್ನೋಟಕ್ಕೆ ಉತ್ತಮವಾಗಿದ್ದರೂ, ಅವುಗಳ ಅನುಷ್ಠಾನ ಮತ್ತು ಪರಿಣಾಮಕಾರಿತ್ವವು ಅಂತಿಮವಾಗಿ ನ್ಯಾಯಾಂಗ ವ್ಯವಸ್ಥೆಯ ಅನುಮೋದನೆಯ ಮೇಲೆ ಅವಲಂಬಿತವಾಗಿರುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದು ಇಲ್ಲವಾದಲ್ಲಿ, ಒಂದು ಕಾನೂನು ವ್ಯವಸ್ಥೆಯು ಮೂಲತಃ ಎಷ್ಟೇ ಸಮಗ್ರವಾಗಿದ್ದರೂ-ವ್ಯಾಪಕವಾಗಿ ದ್ದರೂ ಅರ್ಥಹೀನ ಎನಿಸಿಕೊಂಡುಬಿಡುತ್ತದೆ.

ಆದ್ದರಿಂದ ಅರ್ಥಪೂರ್ಣ ಸುಧಾರಣೆ ಎಂಬ ಸಂಕಲ್ಪವು ಸ್ವತಃ ನ್ಯಾಯಾಂಗ ವ್ಯವಸ್ಥೆಯ ಒಳಗಿನಿಂದಲೇ ಹೊರಹೊಮ್ಮಬೇಕು. ಮೊನ್ನಿನ ಘಟನೆಯನ್ನು ಉದ್ದೇಶಿಸಿ ಹೇಳುವು ದಾದರೆ, ಸತ್ಯವು ತಪ್ಪಿಸಿಕೊಳ್ಳಲಾಗದು, ಅದು ಬಯಲಾಗಲೇಬೇಕು. ಋಜುತ್ವವಿಲ್ಲದೆ ಸ್ವಾತಂತ್ರ್ಯವಿಲ್ಲ; ಮಾತ್ರವಲ್ಲ, ಪ್ರಾಮಾಣಿಕತೆ ಯನ್ನು ಖಾತ್ರಿಪಡಿಸುವ ಕಾನೂನು ಕಾರ್ಯವಿಧಾನಗಳು ನ್ಯಾಯಾಂಗ ವ್ಯವಸ್ಥೆಯ ಸ್ವಾಯತ್ತತೆಯನ್ನು ರಕ್ಷಿಸುತ್ತವೆಯೇ ವಿನಾ ಅದಕ್ಕೆ ಬೆದರಿಕೆ ಹಾಕುವುದಿಲ್ಲ ಎಂಬುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

(ಲೇಖಕರು ಪರಿಣಾಮ್ ಲಾ ಅಸೋಸಿಯೇಟ್ಸ್ ಸಂಸ್ಥೆಯ ವ್ಯವಸ್ಥಾಪಕ ಪಾಲುದಾ ರರು ಹಾಗೂ ಮುಂಬೈ ಬಿಜೆಪಿ ಘಟಕದ ಉಪಾಧ್ಯಕ್ಷರು)