ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokesh Kaayarga Column: ಗಣತಿ ಪ್ರಹಸನ ಬದಲು ಬೇರೆ ಆಯ್ಕೆಗಳಿಲ್ಲವೇ ?

ಗ್ರಾಹಕರಿಗೆ ಸಾಲ ಕೊಡುವ ಬ್ಯಾಂಕ್‌ಗಳು ಕೇವಲ ಪ್ಯಾನ್ ಕಾರ್ಡ್ ಆಧಾರದಿಂದಲೇ ಕೆಲವೇ ನಿಮಿಷ ಗಳಲ್ಲಿ ನಮ್ಮ ಸಾಲದ ಅರ್ಹತೆಯನ್ನು ನಿರ್ಧರಿಸಲು ಸಾಧ್ಯ ಎಂದಾದರೆ ಸರಕಾರಕ್ಕೆ ಇಂಥದ್ದೇ ಸಾಫ್ಟ್‌ ವೇರ್‌ವೊಂದನ್ನು ರಚಿಸಿ ನಮ್ಮ ಪೂರ್ವಾಪರ ಕಲೆ ಹಾಕುವುದು ಕಷ್ಟದ ವಿಚಾರವೇನಲ್ಲ. ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ ಕಂಪನಿಗಳು ತಮ್ಮ ವ್ಯವಹಾರ ಆರಂಭಕ್ಕೆ ಮುನ್ನ ಈ ರೀತಿಯ ಎಲ್ಲ ಕಸರತ್ತುಗಳನ್ನು ನಡೆಸುತ್ತವೆ. ಈ ಕಾಲದಲ್ಲಿ ಮನೆಮನೆಗೆ ಶಿಕ್ಷಕರನ್ನು ಕಳುಹಿಸಿ ಮಾಹಿತಿ ಸಂಗ್ರಹಿಸುವ ಅಗತ್ಯವಿದೆಯೇ ಎಂದು ಸರಕಾರ ಮರು ಚಿಂತನೆ ನಡೆಸಬೇಕಾಗಿದೆ.

Lokesh Kaayarga Column: ಗಣತಿ ಪ್ರಹಸನ ಬದಲು ಬೇರೆ ಆಯ್ಕೆಗಳಿಲ್ಲವೇ ?

-

ಲೋಕಮತ

ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದಲ್ಲಿ ನಡೆಸಲಾಗುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಈಗ ಕೊನೆಯ ಘಟ್ಟಕ್ಕೆ ತಲುಪಿದೆ. ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಅಕ್ಟೋಬರ್ 24ರೊಳಗೆ ಸಮೀಕ್ಷೆ ಪೂರ್ಣಗೊಳಿಸುವ ಗುರಿ ನೀಡಲಾಗಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಗಣತಿ ಪೂರ್ಣಗೊಂಡಿದೆ ಎಂದು ಆಯೋಗ ಹೇಳಿದೆ. ಆದರೆ ಸದ್ಯಕ್ಕೆ ಇದಾವುದೂ ಅಂತಿಮವಲ್ಲ. ರಾಜ್ಯ ಹೈಕೋರ್ಟ್‌ನಲ್ಲಿ ಗಣತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ತೀರ್ಪು ಬರುವ ತನಕವೂ ಕೋಟ್ಯಂತರ ರುಪಾಯಿ ಖರ್ಚು ಮಾಡಿ ನಡೆಸಿದ ಗಣತಿಯ ಮೇಲೊಂದು ತೂಗುಗತ್ತಿ ಇದ್ದೇ ಇರುತ್ತದೆ. ಒಂದು ವೇಳೆ ಹೈಕೋರ್ಟ್ ಗಣತಿಯ ಸಿಂಧುತ್ವವನ್ನು ಎತ್ತಿ ಹಿಡಿದರೂ ಅಪಸ್ವರಗಳು ನಿಲ್ಲುವುದಿಲ್ಲ. ಇದು ಸಮಗ್ರ ವರದಿ ಅಲ್ಲ ಎಂದು ದೂರಲು ಕಾರಣಗಳು ಬೇಕಾದಷ್ಟಿವೆ. ಆಯಾ ಸರಕಾರ/ನಾಯಕರ ಮರ್ಜಿಗೆ ತಕ್ಕಂತೆ ಈ ಸಮೀಕ್ಷೆಯನ್ನು ಒಪ್ಪಿಕೊಳ್ಳಬಹುದು, ಒಪ್ಪಿಕೊಳ್ಳದೇ ಇರಬಹುದು. ಈ ಹಿಂದೆ ಕಾಂತರಾಜು ಆಯೋಗದ ವರದಿ ಯನ್ನು ಶೈತ್ಯಾಗಾರಕ್ಕೆ ತಳ್ಳಿದ್ದನ್ನು ನಾವು ಮರೆಯುವಂತಿಲ್ಲ.

‘ಜಾತ್ಯತೀತ’ ದೇಶದಲ್ಲಿ ಜಾತಿಯನ್ನು ಮುಂದಿಟ್ಟುಕೊಂಡು ಅಭಿವೃದ್ಧಿಯ ಮಾಪನವನ್ನು ಅಳೆಯುವ ಈ ಗಣತಿಯೇ ಒಂದು ಪ್ರಹಸನ. ಜಾತಿ ವ್ಯವಸ್ಥೆಯನ್ನು ತೊಡೆದುಹಾಕಬೇಕೆಂದು ಭಾಷಣ ಬಿಗಿಯುತ್ತಲೇ ಜಾತಿ ಸಂಕೋಲೆಗಳನ್ನು ಬಿಗಿ ಮಾಡಿಕೊಳ್ಳಲು ಈ ಗಣತಿ ಮತ್ತೊಮ್ಮೆ ಅನುವು ಮಾಡಿಕೊಟ್ಟಿದೆ. ಆರಂಭದಿಂದಲೂ ನಡೆದ ಒಟ್ಟಾರೆ ಪ್ರಕ್ರಿಯೆಯನ್ನೊಮ್ಮೆ ಗಮನಿಸಿ. ಪ್ರಬಲ ಜಾತಿ ಎಂದು ಕರೆಸಿಕೊಳ್ಳುವ ಸಮುದಾಯ ಜಾತಿ ಗಣತಿಯನ್ನು ವಿರೋಧಿಸುತ್ತಲೇ ಬಂದಿವೆ. ಒಂದು ಬಾರಿ ಗಣತಿ ನಡೆಯುವುದು ಖಚಿತ ಎಂದಾದ ಬಳಿಕ ಪ್ರಬಲ ಸಮುದಾಯದ ಸ್ವಾಮೀಜಿಗಳು, ರಾಜಕೀಯ ನಾಯಕರು, ಚಿಂತಕರು ಒಟ್ಟು ಸೇರಿ ಗಣತಿಯ ವೇಳೆ ಹೀಗೆಯೇ ನಮೂದಿಸಬೇಕೆಂದು ತಮ್ಮವರಿಗೆ ಸೂಚನೆ ನೀಡಿಸಿದರು. ಈ ತನಕ ರಾಜ್ಯದ ಬೇರೆ ಬೇರೆ ಭಾಗದಲ್ಲಿ ವಾಸವಿದ್ದು ತಮ್ಮದೇ ಅನನ್ಯತೆಯನ್ನು ಕಾಪಾಡಿಕೊಂಡು ಬಂದಿದ್ದ, ಪರಸ್ಪರ ಕೊಡು-ಕೊಳ್ಳು ಸಂಬಂಧ ಇಲ್ಲದ ಕೆಲವು ಜಾತಿಗಳೂ ಈ ಬಾರಿ ಪ್ರಬಲ ಜಾತಿಗಳ ಜತೆ ವಿಲೀನಗೊಳ್ಳಲು ಮುಂದಾಗಿವೆ.

ಆದರೆ ಮಠ, ಸ್ವಾಮೀಜಿಗಳ ನೇತೃತ್ವವಿಲ್ಲದ, ತಮ್ಮನ್ನು ಪ್ರತಿನಿಧಿಸುವ ಒಬ್ಬ ರಾಜಕೀಯ ನಾಯಕ ನನ್ನೂ ಹೊಂದಿರದ ನೂರಾರು ಜಾತಿಗಳ ಜನರಿಗೆ ತಾವೇನು ಮಾಡಬೇಕೆಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಗಣತಿ ಪಟ್ಟಿಯಲ್ಲಿಯೇ ಇಲ್ಲದ ಜಾತಿಗಳಲ್ಲಿ ಹುಟ್ಟಿದವರಿಗೆ ‘ಇತರೆ’ ಎಂದು ನಮೂದಿಸು ವುದು ಬಿಟ್ಟು ಬೇರೆ ಆಯ್ಕೆಗಳಿರಲಿಲ್ಲ. ಇಷ್ಟರ ನಡುವೆ ಕ್ರೈಸ್ತ ಧರ್ಮಕ್ಕೆ ಮತಾಂತರ ಆದವರಿಗೆ ಪೂರ್ವಾಶ್ರಮದ ಜಾತಿಯಿಂದ ಗುರುತಿಸಿಕೊಳ್ಳುವ ವಿಶೇಷ ಸೌಲಭ್ಯವನ್ನೂ ಆಯೋಗ ನೀಡಿತ್ತು. ಆದರೆ ತೀವ್ರ ವಿರೋಧ ವ್ಯಕ್ತವಾದ ಬಳಿಕ ಈ ಕಾಲಂ ಕೈ ಬಿಡುವ ನಿರ್ಧಾರಕ್ಕೆ ಬರಲಾಯಿತು. ಸಾಂವಿಧಾನಿಕ ಸಂಸ್ಥೆಯೊಂದು ಯಾವುದೇ ಪ್ರಕ್ರಿಯೆ ನಡೆಸಬೇಕಾದರೆ ಎಲ್ಲರ ಹಿತರಕ್ಷಣೆಯೂ ಮುಖ್ಯವಾಗಬೇಕು.

ಇದನ್ನೂ ಓದಿ: Lokesh Kaayarga Column: ಔಷಧ ನಕಲಿ, ವೈದ್ಯರೂ ನಕಲಿ; ಜೀವಕ್ಕೆಲ್ಲಿ ಖಾತ್ರಿ ?

ಮಾತ್ರವಲ್ಲ ಯಾರ ಹಕ್ಕೂ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು. ಕ್ರೈಸ್ತ ಧರ್ಮಕ್ಕೆ ಮತಾಂತರ ಆದವರಿಗೆ ಜಾತಿ ಉಳಿಸಿಕೊಳ್ಳುವ ಅವಕಾಶ ನೀಡಿದ ಆಯೋಗ ಉಳಿದ ಧರ್ಮದವರಿಗೆ ಈ ಅವಕಾಶ ನೀಡಿರಲಿಲ್ಲ. ಇದೇ ರೀತಿ ಹಿಂದು, ಇಸ್ಲಾಂ, ಬೌದ್ಧ ಮೊದಲಾದ ನಾನಾ ಧರ್ಮಕ್ಕೆ ಮತಾಂತರವಾದವರಿಗೆ ತಮ್ಮ ಹಿಂದಿನ ಜಾತಿ ಉಳಿಸಿಕೊಳ್ಳುವ ಅವಕಾಶ ನೀಡಿದ್ದರೆ ಆಯೋಗದ ನಡೆಗೆ ಸಮರ್ಥನೆ ಇರುತ್ತಿತ್ತು. ಜಾತಿ ಪದ್ಧತಿ ಪ್ರಧಾನವಾಗಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ್ದು. ಈ ಧರ್ಮವನ್ನು ತೊರೆದ ಬಳಿಕವೂ ಜಾತಿಲೇಪ ಇಟ್ಟುಕೊಳ್ಳಲು ಹೇಗೆ ಸಾಧ್ಯ? ಈ ಬಗ್ಗೆ ಆಯೋಗ ಯೋಚಿಸಬೇಕಿತ್ತು.

ಹೈಕೋರ್ಟ್ ವಿಚಾರಣೆ ಹಿನ್ನೆಲೆಯಲ್ಲಿ ಗಣತಿಯ ಭವಿಷ್ಯ ಇನ್ನೂ ತೂಗುಯ್ಯಾಲೆಯಲ್ಲಿದೆ. ಗಣತಿಯನ್ನು ಪ್ರಶ್ನಿಸಿದ ಅರ್ಜಿ ಇತ್ಯರ್ಥವಾಗುವ ತನಕ ಆಯೋಗವು ಸಮೀಕ್ಷೆಯನ್ನು ಮುಂದೂಡ ಬಹುದಿತ್ತು. ಹೈಕೋರ್ಟ್ ಗಣತಿಗೆ ಸಮ್ಮತಿಸಿದ್ದರೆ ಹೆಚ್ಚಿನ ಸ್ಪಷ್ಟತೆಯೊಂದಿಗೆ ಈ ಕೆಲಸಕ್ಕೆ ಕೈ ಹಾಕಬಹುದಿತ್ತು. ಆದರೆ ಆಯೋಗವು ಗಣತಿ ನಡೆಸಲೇಬೇಕೆಂಬ ತರಾತುರಿಯಲ್ಲಿದ್ದಂತಿತ್ತು. ಗಣತಿಯಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಐಚ್ಛಿಕ ಎಂದು ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ತಿಳಿಸಿದ ಬಳಿಕ ಆಯೋಗದ ಈ ಪ್ರಕ್ರಿಯೆ ತನ್ನ ಪ್ರಾಮುಖ್ಯತೆಯನ್ನೇ ಕಳೆದು ಕೊಂಡಿತ್ತು. ಕೋರ್ಟ್ ತೀರ್ಪಿನ ಅರಿವಿದ್ದವರು ತಮಗೆ ಬೇಕಾದ ಮಾಹಿತಿಯನ್ನಷ್ಟೇ ನೀಡಿದರು. ಕೆಲವರು ಗಣತಿಯಿಂದಲೇ ದೂರವುಳಿದರು. ಅದಕ್ಕೆ ಸರಿಯಾಗಿ ಗಣತಿ ಕಾರ್ಯಕ್ಕೆ ಬಳಸಿದ್ದ ಸಾಫ್ಟ್‌ವೇರ್ ದೋಷಕ್ಕೆ ಕೊನೆಯವರೆಗೂ ಪರಿಹಾರ ಸಿಗಲಿಲ್ಲ. ಹಲವು ಮನೆಗಳಲ್ಲಿ ಆಧಾರ್ ಲಿಂಕ್ ಆಗದ ಕಾರಣಕ್ಕೆ ಕೆಲವು ಸದಸ್ಯರನ್ನು ಬಿಟ್ಟು ಗಣತಿ ಪೂರ್ಣಗೊಳಿಸಬೇಕಾಯಿತು.

Lokesh K 15

ಸರಕಾರ ಈ ಗಣತಿಗೆ 420 ಕೋಟಿಯಿಂದ ₹ 425 ಕೋಟಿ ಹಣವನ್ನು ನಿಗದಿಪಡಿಸಿದೆ. ಇದರಲ್ಲಿ ಸಮೀಕ್ಷೆ ನಡೆಸುವವರಿಗೆ ನೀಡಲಾಗುವ ಗೌರವಧನವೇ ಸುಮಾರು 325 ಕೋಟಿಗಳಷ್ಟಿದೆ. ಅಂತಿಮ ವಾಗಿ ಈ ಮೊತ್ತ ಇನ್ನೂ ಏರಬಹುದು. ಈ ಹಿಂದೆ 2015 ರಲ್ಲಿ ಕಾಂತರಾಜು ಆಯೋಗದ ಸಮೀಕ್ಷೆಗೆ ಸುಮಾರು 165ರಿಂದ 170 ಕೋಟಿ ಹಣವನ್ನು ವ್ಯಯಿಸಲಾಗಿತ್ತು. ಬಳಿಕ ಜಯಪ್ರಕಾಶ್ ಹೆಗ್ಡೆ ಅವರ ವರದಿ ಮಂಡನೆಗೂ ಸಾಕಷ್ಟು ಹಣ ವ್ಯಯಿಸಲಾಗಿತ್ತು. ಈ ವರದಿಗಳು ಜಾರಿಯಾಗಿಲ್ಲ ಎಂದರೆ ತೆರಿಗೆದಾರರ ಹಣವು ಪೋಲಾಯಿತೆಂದರ್ಥ. ಈಗಲೂ ಅಷ್ಟೇ, ಒಂದು ವೇಳೆ ಹೈಕೋರ್ಟ್‌ ನಲ್ಲಿ ವಿರುದ್ಧ ತೀರ್ಪು ಬಂದರೆ ಒಟ್ಟಾರೆ ಕಸರತ್ತು, ಶ್ರಮ ಎಲ್ಲವೂ ವ್ಯರ್ಥ ಎನಿಸಲಿವೆ.

ಒಂದು ವೇಳೆ ನಾಯಕರು ಎಡಬಿಡಂಗಿ ಹೇಳಿಕೆಗಳನ್ನು ಕೊಡದೇ ಹೋಗಿದ್ದರೆ ಜನರು ಈ ಗಣತಿ ಯನ್ನು ಗಂಭೀರವಾಗಿ ಪರಿಗಣಿಸಿ ಪ್ರಾಮಾಣಿಕವಾಗಿ ಉತ್ತರ ನೀಡುತ್ತಿದ್ದರೇನೋ ?. ಕೆಲವು ಹಿರಿಯ ನಾಯಕರು ಗಣತಿಯನ್ನೇ ಬಹಿಷ್ಕರಿಸುವಂತೆ ಕರೆ ನೀಡಿದರು. ಇನ್ನು ಕೆಲವರು ಆಯ್ದ ಮಾಹಿತಿ ಗಳನ್ನು ಮಾತ್ರ ನೀಡುವಂತೆ ಸಲಹೆ ನೀಡಿದರು. ಸಾಂವಿಧಾನಿಕ ಅಂಗವೊಂದು ನಡೆಸುವ ಕೆಲಸ ದಲ್ಲಿ ಯಾರು ಬೇಕಾದರೂ ಮಧ್ಯಪ್ರವೇಶ ಮಾಡುವ ಹಾಗಿದ್ದರೆ ಆಯೋಗಕ್ಕೂ ಸರಕಾರಿ ಇಲಾಖೆ ಗೂ ವ್ಯತ್ಯಾಸವೇ ಉಳಿಯುವುದಿಲ್ಲ. ಆದರೆ ಆಯೋಗ ಎಲ್ಲೂ ಇವರನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ತಮ್ಮ ಸಂಪುಟದ ಸಚಿವರೇ ಗಣತಿ ಬಗ್ಗೆ ಹಗುರವಾಗಿ ಮಾತನಾಡಿದಾಗಲೂ ಸಿಎಂ ಸಿದ್ದರಾಮಯ್ಯ ಮೌನ ವಹಿಸಿದ್ದರು.

ದೇಶದ ಸಂವಿಧಾನದ ಪ್ರಕಾರ ಜನಗಣತಿ ನಡೆಸುವ ಅಧಿಕಾರವು ಕೇಂದ್ರ ಸರಕಾರದ ವ್ಯಾಪ್ತಿಗೆ ಸೇರಿದ್ದು. ರಾಜ್ಯ ಸರಕಾರಕ್ಕೆ ‘ಜನಗಣತಿ’ ನಡೆಸಲು ಅಧಿಕಾರವಿಲ್ಲ. ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ವೆಳೆ ನಮ್ಮದು ‘ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ’ ಮಾತ್ರ ಹಿಂದುಳಿದ ವರ್ಗಗಳ ಆಯೋಗವು ಎಂದು ಹೇಳಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಇದನ್ನೇ ಹೇಳಿದ್ದಾರೆ. ಆದರೆ ಕೇಂದ್ರ ಸರಕಾರ ನಡೆಸುವ ಜನಗಣತಿಯಲ್ಲಿ ಕೇಳುವ ಎಲ್ಲ ಪ್ರಶ್ನೆಗಳು ಅಥವಾ ಅದಕ್ಕಿಂತ ಹೆಚ್ಚಿನ ಪ್ರಶ್ನೆಗಳು ಈ ಗಣತಿಯಲ್ಲಿ ಅಡಕವಾಗಿದ್ದವು. ಇದರ ಮೂಲ ಉದ್ದೇಶ ‘ಜಾತಿ ಗಣತಿ’ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಸಂವಿಧಾನದ 340ನೇ ವಿಧಿ ಪ್ರಕಾರ, ಹಿಂದುಳಿದ ವರ್ಗಗಳನ್ನು ಗುರುತಿಸಲು ರಾಜ್ಯ ಸರಕಾರಗಳಿಗೆ ಅಧಿಕಾರವಿದೆ. ಹಿಂದುಳಿದ ವರ್ಗಗಳ ಆಯೋಗದ ಕಾಯಿದೆಯಡಿಯಲ್ಲಿ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಮತ್ತು ಸೂಕ್ತ ಶಿಫಾರಸುಗಳನ್ನು ಮಾಡಲು ಆಯೋಗಕ್ಕೆ ಅಧಿಕಾರವಿದೆ. ಆದರೆ ಈ ದತ್ತಾಂಶಗಳನ್ನು ಹೇಗೆ ಬಳಸಿಕೊಳ್ಳಬೇಕೆನ್ನುವುದು ಸರಕಾರದ ವಿವೇಚನೆಗೆ ಸೇರಿದ್ದು. ಜನರ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಿಂತಲೂ, ಚುನಾವಣೆಗೆ ಸಜ್ಜಾಗುವ ಸರಕಾರಕ್ಕೆ ಯಾವ ಜಾತಿಯವರು ಎಷ್ಟಿದ್ದಾರೆ ? ಯಾವ ಪ್ರದೇಶದಲ್ಲಿ ತನಗೆ ವೋಟ್ ಬ್ಯಾಂಕ್ ಆಗಬಹುದಾದ ಜನರಿದ್ದಾರೆ ? ಯಾವ ಜಾತಿ, ಧರ್ಮದ ಜನರನ್ನು ಓಲೈಸಿದರೆ ಭವಿಷ್ಯದಲ್ಲಿ ಅಧಿಕಾರ ಹಿಡಿಯಬಹುದೆನ್ನುವುದು ಹೆಚ್ಚು ಮುಖ್ಯವಾಗುತ್ತದೆ.

ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲಕ್ಕೆ ಪ್ರಾಮುಖ್ಯತೆ. ರಾಜಕೀಯ ಪಕ್ಷಗಳಿಗೆ ಹೆಚ್ಚು ಜನರು ಇರುವ ಸಮುದಾಯಗಳು ಹೆಚ್ಚು ಆಪ್ತವಾಗುತ್ತವೆ. ರಾಜಕೀಯ ಪ್ರಾತಿನಿಧ್ಯ, ಸರಕಾರದ ಯೋಜನೆಗಳು, ಸವಲತ್ತುಗಳು ಈ ಜನರನ್ನೇ ಹೆಚ್ಚು ಕೇಂದ್ರೀಕರಿಸುತ್ತವೆ. ಈ ನಡುವೆ ಧ್ವನಿಯೇ ಇಲ್ಲದ ಜಾತಿಗಳಿಗೆ, ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಮರೀಚಿಕೆಯಾಗುತ್ತದೆ. ಜನರ ಅಭ್ಯುದಯವನ್ನಷ್ಟೇ ಬಯಸುವ ಸರಕಾರಕ್ಕೆ ಈ ಜನರ ಸಂಕಷ್ಟ ಅರಿಯಲು ಬೇರೆ, ಬೇರೆ ಮಾರ್ಗಗಳಿವೆ. ಅದಕ್ಕೆ ಜಾತಿ ಗಣತಿಯ ಲೇಬಲ್ ಅಗತ್ಯವಿರುವುದಿಲ್ಲ.

ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ನಮ್ಮ ಪ್ರತಿಯೊಂದು ದತ್ತಾಂಶಗಳನ್ನು ಸರಕಾರ ಬೇರೆ, ಬೇರೆ ಸಂದರ್ಭಗಳಲ್ಲಿ ಸಂಗ್ರಹಿಸುತ್ತಲೇ ಇರುತ್ತದೆ. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಡಿತರ ಚೀಟಿ, ಡ್ರೈವಿಂಗ್ ಲೈಸೆನ್ಸ್‌, ಮತದಾರರ ಚೀಟಿ, ಪಾಸ್ ಪೋರ್ಟ್, ಬ್ಯಾಂಕ್ ಖಾತೆ, ಉದ್ಯೋಗ ಖಾತರಿ ಚೀಟಿ ಇತ್ಯಾದಿಗಳನ್ನು ಪಡೆದುಕೊಳ್ಳುವಾಗ ವೈಯಕ್ತಿಕ ಮತ್ತು ಕುಟುಂಬದ ವಿವರಗಳು ಸರಕಾರಕ್ಕೆ ಸಲ್ಲಿಕೆಯಾಗುತ್ತವೆ. ಕಂದಾಯ ಪಾವತಿ, ಆದಾಯಕರ ಪಾವತಿ, ಜಮೀನು, ಮನೆ ಖರೀದಿ, ನೋಂದಣಿ, ಶಾಲಾ ಮಕ್ಕಳ ದಾಖಲಾತಿ, ವಾಹನ ಖರೀದಿ, ವಿವಾಹ ನೋಂದಣಿ ಇವೇ ಮೊದಲಾದ ಪ್ರತಿಯೊಂದು ಸಂದರ್ಭದಲ್ಲೂ ನಮ್ಮ ವಿವರಗಳು ಸರಕಾರಕ್ಕೆ ಲಭ್ಯವಾಗುತ್ತಲೇ ಇರುತ್ತವೆ.

ಗ್ರಾಹಕರಿಗೆ ಸಾಲ ಕೊಡುವ ಬ್ಯಾಂಕ್‌ಗಳು ಕೇವಲ ಪ್ಯಾನ್ ಕಾರ್ಡ್ ಆಧಾರದಿಂದಲೇ ಕೆಲವೇ ನಿಮಿಷಗಳಲ್ಲಿ ನಮ್ಮ ಸಾಲದ ಅರ್ಹತೆಯನ್ನು ನಿರ್ಧರಿಸಲು ಸಾಧ್ಯ ಎಂದಾದರೆ ಸರಕಾರಕ್ಕೆ ಇಂಥದ್ದೇ ಸಾಫ್ಟ್‌ವೇರ್‌ವೊಂದನ್ನು ರಚಿಸಿ ನಮ್ಮ ಪೂರ್ವಾಪರ ಕಲೆ ಹಾಕುವುದು ಕಷ್ಟದ ವಿಚಾರವೇನಲ್ಲ. ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ ಕಂಪನಿಗಳು ತಮ್ಮ ವ್ಯವಹಾರ ಆರಂಭಕ್ಕೆ ಮುನ್ನ ಈ ರೀತಿಯ ಎಲ್ಲ ಕಸರತ್ತುಗಳನ್ನು ನಡೆಸುತ್ತವೆ. ಈ ಕಾಲದಲ್ಲಿ ಮನೆಮನೆಗೆ ಶಿಕ್ಷಕರನ್ನು ಕಳುಹಿಸಿ ಮಾಹಿತಿ ಸಂಗ್ರಹಿಸುವ ಅಗತ್ಯವಿದೆಯೇ ಎಂದು ಸರಕಾರ ಮರು ಚಿಂತನೆ ನಡೆಸ ಬೇಕಾಗಿದೆ.

ಇಷ್ಟಕ್ಕೂ ಜಾತಿಗಣತಿ ವೇಳೆ ಗಣತಿದಾರರು ಕೇಳಿದ ಪ್ರಶ್ನೆಗಳಿಗೆ ಕರಾರುವಕ್ಕಾಗಿ ಉತ್ತರ ಬಂದಿದೆ ಎನ್ನಲು ಯಾವುದೇ ಗ್ಯಾರಂಟಿ ಇಲ್ಲ. ತಮ್ಮ ಆದಾಯ, ಆಸ್ತಿಪಾಸ್ತಿ ವಿವರಗಳನ್ನು ನೀಡುವಾಗ ಬಹುತೇಕರು, ನೈಜ ಚಿತ್ರಣ ನೀಡಲು ಹಿಂಜರಿಯುತ್ತಾರೆ. ಇದಕ್ಕೆ ಬೇರೆ, ಬೇರೆ ಕಾರಣಗಳಿರಬಹುದು. ಸ್ವತ: ಡಿಸಿಎಂ ಶಿವಕುಮಾರ್ ಅವರು ಈ ವಿವರಗಳನ್ನು ಕೇಳಿದ ಗಣತಿದಾರರ ಮೇಲೆ ಸಿಟ್ಟಾಗಿದ್ದನ್ನು ನಾವು ಕಂಡಿದ್ದೇವೆ. ಜನರೂ ಹೀಗೆಯೇ ಯೋಚಿಸುವುದು ಸಹಜವಲ್ಲವೇ ?

ಜನರಿಗೆ ಸ್ವಯಂ ಘೋಷಣೆಯ ಪತ್ರವೊಂದನ್ನು ನೀಡಿ ಆನ್‌ಲೈನ್ ಮೂಲಕವೇ ಕಡ್ಡಾಯವಾಗಿ ತುಂಬಿ ಕಳುಹಿಸಲು ಸೂಚಿಸಬಹುದು. ಗ್ರಾಮ ಮಟ್ಟದಲ್ಲಿ ಆಯಾ ಪಂಚಾಯಿತಿಗಳಲ್ಲಿ ಈ ಫಾರ್ಮ್ ತುಂಬಿದರೆ ಜನರು ಸುಳ್ಳು ಮಾಹಿತಿ ನೀಡಲು ಸಾಧ್ಯವಿಲ್ಲ. ಸರಕಾರಿ ಮತ್ತು ಖಾಸಗಿ ಉದ್ಯೋಗಸ್ಥರ ಮಾಹಿತಿಗಳನ್ನು ಸುಲಭವಾಗಿಯೇ ಸಂಗ್ರಹಿಸಬಹುದು. ನಾಗರಿಕರು ಸರಕಾರಕ್ಕೆ ಸಲ್ಲಿಸುವ ಪ್ರತಿಯೊಂದು ಮಾಹಿತಿಯನ್ನೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಸೋಸಿ ತೆಗೆದರೆ ಪ್ರತಿಯೊಬ್ಬ ನಾಗರಿಕನ ಮಾಹಿತಿಯನ್ನು ಸರಕಾರ ತನ್ನ ಕಣ್ಣಳತೆಯಲ್ಲಿ ಪಡೆದುಕೊಳ್ಳಲು ಸಾಧ್ಯವಿದೆ. ಆಗ ಸಿರಿತನ, ಬಡತನವನ್ನು ಅಳೆಯಲು ಜಾತಿ ಮಾನದಂಡವಾಗಬೇಕಿಲ್ಲ. ಸರಕಾರ ವೊಂದು ವ್ಯಕ್ತಿಯ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಕಂಡುಕೊಂಡು ಆತನ ಸಹಾಯಕ್ಕೆ ನಿಲ್ಲುವುದು ಹೆಚ್ಚು ಅಗತ್ಯ. ಇವೆರಡೂ ಸುಧಾರಣೆ ಕಂಡರೆ ಸಹಜವಾಗಿಯೇ ಸಮಾಜದಲ್ಲಿ ಆತನಿಗೆ ಗೌರವ, ಅಂತಸ್ತು ಪ್ರಾಪ್ತಿಯಾಗುತ್ತದೆ.

ಇದರಿಂದ ಶಿಕ್ಷಕರು ಪಾಠ, ಪ್ರವಚನ ಬಿಟ್ಟು ಮನೆಮನೆ ಅಡ್ಡಾಡುವ ತಾಪತ್ರಯವೂ ಇರುವುದಿಲ್ಲ. ಅವರಿಗೆ ಸಂಭಾವನೆ ನೆಪದಲ್ಲಿ ಕೋಟ್ಯಂತರ ರುಪಾಯಿ ಖರ್ಚು ಮಾಡುವ ಅಗತ್ಯವೂ ಇರುವು ದಿಲ್ಲ. ಆದರೆ ಸರಕಾರ ಸದುದ್ದೇಶದಿಂದಲೇ ಈ ಕೆಲಸ ಮಾಡಬೇಕು. ಈ ಡೇಟಾ ಎಲ್ಲೂ ಸೋರಿಕೆ ಯಾಗದಂತೆ ನೋಡಿಕೊಳ್ಳಬೇಕು. ಖಾಸಗಿ ಏಜೆನ್ಸಿಗಳ ಮೂಲಕ ತಮ್ಮನ್ನು ಬೆಂಬಲಿಸುವ ಮತದಾರರ ಇಂಚಿಂಚು ಮಾಹಿತಿಯನ್ನೂ ಪಡೆದುಕೊಳ್ಳುವ ರಾಜಕೀಯ ಪಕ್ಷಗಳ ನೇತಾರರಿಗೆ ಇವು ತಿಳಿಯದ ವಿಷಯವೇನಲ್ಲ. ಆದರೆ ಅಧಿಕಾರಕ್ಕಾಗಿ ಒಡೆದು ಆಳುವ ನೀತಿ ಅನುಸರಿಸಲು ಮುಂದಾದರೆ ಈ ವಿವರಗಳು ಪ್ರಯೋಜನಕ್ಕೆ ಬರಲಾರವು.