Rangaswamy Mookanahalli Column: ಸಿಸು: ಪರಿಸ್ಥಿತಿ ಎಷ್ಟೇ ಕಠಿಣವಾಗಿದ್ದರೂ ಕುಗ್ಗದ ಧೈರ್ಯ !
ಯಾವಾಗ ಪ್ರಕೃತಿ ನಮಗೆ ಉದಾರತೆಯನ್ನು ತೋರುತ್ತದೆ, ಅದು ನಮಗೆ ಸಹಜವಾಗಿ ಬಿಡುತ್ತದೆ. ನಮಗೆ ಅದರ ಬೆಲೆ ಗೊತ್ತಾಗುವುದಿಲ್ಲ. ಹೀಗಾಗಿ ಮನಷ್ಯನ ಮೂಲಗುಣ ಆಲಸ್ಯ ಮನೆ ಮಾಡಿ ಬಿಡುತ್ತದೆ. ತೀರಾ ವೈಪರೀತ್ಯ ಹವಾಮಾನ ಇರುವ ದೇಶಗಳನ್ನು ನೋಡಿ, ಅವೆಲ್ಲವೂ ಮುಂದುವರಿದ ದೇಶ ಎನ್ನಿಸಿಕೊಂಡಿವೆ.
-
ವಿಶ್ವರಂಗ
ಸಣ್ಣ ಪುಟ್ಟ ವಿಚಾರಗಳಿಗೂ ನಾವು ಕೆಲವೊಮ್ಮೆ ಬೇಸರ ವ್ಯಕ್ತಪಡಿಸುತ್ತೇವೆ. ಅಯ್ಯೋ ಇನ್ನು ನನ್ನಕೈಲಿ ಆಗೋಲ್ಲ ಎನ್ನುವ ಪದವನ್ನು ಉಚ್ಛರಿಸುತ್ತೇವೆ. ಸ್ವಲ್ಪ ತೊಂದರೆ ಹೆಚ್ಚಾದರೆ ಸಾಕು, ನಮ್ಮಲ್ಲಿ ಬಹುತೇಕರು ಸಾಕಪ್ಪ ಎಂದು ಅದನ್ನು ಬಿಟ್ಟು ಬಿಡುತ್ತೇವೆ. ಇದರರ್ಥ ಹಿಡಿದದ್ದನ್ನು ಸಾಧಿಸುವ, ಎಷ್ಟೇ ಕಷ್ಟ ಬರಲಿ ಕೊನೆಯ ತನಕ ಎದೆಗುಂದದೆ ಸಾಗುವ ಮನೋಭಾವ ಬಹುತೇಕರಲ್ಲಿ ಇಲ್ಲ.
ಎಲ್ಲೋ ಬೆರಳೆಣಿಕೆಯಷ್ಟು ಜನ ಮಾತ್ರ ಕೊನೆ ತನಕ ಛಲದಿಂದ ಮುಂದುವರಿಯುತ್ತಾರೆ. ಗಮನಿಸಿ ನೋಡಿ, ನಮ್ಮಲ್ಲಿ ಅಂದರೆ ಭಾರತದಲ್ಲಿ ಹೇಳಿಕೊಳ್ಳುವಂತಹ ಹವಾಮಾನ ವೈಪರೀತ್ಯವಿಲ್ಲ. ಇದು ನಮಗೆ ದೊಡ್ಡ ಪ್ಲಸ್ ಪಾಯಿಂಟ್. ಆದರೆ ನಾವು ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದೇವೆಯೇ ಎನ್ನುವ ಸಂಶಯ ನನ್ನನ್ನು ಸದಾ ಕಾಡುತ್ತದೆ.
ಯಾವಾಗ ಪ್ರಕೃತಿ ನಮಗೆ ಉದಾರತೆಯನ್ನು ತೋರುತ್ತದೆ, ಅದು ನಮಗೆ ಸಹಜವಾಗಿ ಬಿಡುತ್ತದೆ. ನಮಗೆ ಅದರ ಬೆಲೆ ಗೊತ್ತಾಗುವುದಿಲ್ಲ. ಹೀಗಾಗಿ ಮನಷ್ಯನ ಮೂಲಗುಣ ಆಲಸ್ಯ ಮನೆ ಮಾಡಿ ಬಿಡುತ್ತದೆ. ತೀರಾ ವೈಪರೀತ್ಯ ಹವಾಮಾನ ಇರುವ ದೇಶಗಳನ್ನು ನೋಡಿ, ಅವೆಲ್ಲವೂ ಮುಂದುವರಿದ ದೇಶ ಎನ್ನಿಸಿಕೊಂಡಿವೆ.
ಇದನ್ನೂ ಓದಿ: Rangaswamy Mookanahally Column: ಸಮಾನತೆ ಎನ್ನುವುದು ಮಾತಿಗೆ ಸೀಮಿತವಾಗಬಾರದು
ಸದಾ ಭೂಕಂಪದ ಭಯದಲ್ಲಿ ಬದುಕುವ ಜಪಾನ್ ವಿಶ್ವಕ್ಕೆ ಮಾದರಿಯಾಗಿ ಬೆಳೆದು ನಿಂತಿದೆ. ಸುತ್ತಮುತ್ತ ಶತ್ರುಗಳು, ಮರುಭೂಮಿ, ಕಡಿಮೆ ಜನಸಂಖ್ಯೆ, ಹೀಗಿದ್ದೂ ಇಸ್ರೇಲ್ ಭೂಪಟದಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದೆ. ಯುನೈಟೆಡ್ ಅರಬ್ ಎಮಿರೇಟ್ಸನಲ್ಲಿ ಬಿಸಿಲಿನ ಸಾಮ್ರಾಜ್ಯ. ಕೆನಡಾ, ಅಮೇರಿಕಾ, ಯೂರೋಪು ಎಲ್ಲೆಡೆ ಚಳಿಯದ್ದೇ ದರ್ಬಾರು. ಇನ್ನು ನಾರ್ದಿಕ್ ದೇಶಗಳಾದ ಡೆನ್ಮಾರ್ಕ್, ಫಿನ್ಲ್ಯಾಂಡ್, ಐಸ್ಲ್ಯಾಂಡ್, ನಾರ್ವೆ ಮತ್ತು ಸ್ವೀಡನ್ ದೇಶಗಳಲ್ಲಿ ಚಳಿಗಾಲದಲ್ಲಿ ಮೈನಸ್ ಮೂವತ್ತಕ್ಕೆ ಹವಾಮಾನ ಕುಸಿಯುತ್ತದೆ.
ಅಕ್ಟೋಬರ್ ತಿಂಗಳಿಂದ ಡಿಸೆಂಬರ್ ಅಂತ್ಯದವರೆಗೆ ಹಗಲು ಎಂದರೆ ಕೇವಲ ಐದಾರು ಗಂಟೆ ಮಾತ್ರ! ಉಳಿದ 18/19 ತಾಸು ಕತ್ತಲೆಯದ್ದೇ ಸಾಮ್ರಾಜ್ಯ. ಆಗ ನಿದ್ದೆಯಿಂದ ಹಿಡಿದು ಎಲ್ಲವೂ ಬದಲಾಗುತ್ತದೆ. ಬದುಕುವ ರೀತಿ ಬದಲಾಗುತ್ತದೆ. ಬಹಳಷ್ಟು ಜನರಿಗೆ ಸೂರ್ಯನ ಕಿರಣವಿಲ್ಲದ ಕಾರಣ ಅರಿವಿಲ್ಲದೆ ಖಿನ್ನತೆ ಆವರಿಸಿಕೊಳ್ಳುತ್ತದೆ. ಹೀಗಾಗಿ ಇಲ್ಲಿಗೆ ವಲಸೆ ಹೋಗುವ ಮುನ್ನ ಜನ ಬಹಳ ಯೋಚನೆ ಮಾಡುತ್ತಾರೆ.
ವರ್ಷದ ಐದು ತಿಂಗಳು ಶೀತಲ ಚಳಿಯಲ್ಲಿ ಬದುಕುವುದು ಸುಲಭದ ಮಾತಲ್ಲ. ಯೂರೋಪ್ ಮೈನ್ಲ್ಯಾಂಡ್ನಲ್ಲಿ ಎರಡು ದಶಕಗಳ ಕಾಲ ಜೀವನ ಮಾಡಿದ ಅನುಭವ ನನ್ನ ಬೆನ್ನ ಹಿಂದಿಗಿದೆ. ಆದರೆ ಈ ನಾರ್ದಿಕ್ ದೇಶಗಳ ಲೆಕ್ಕಾಚಾರವೇ ಬೇರೆ. ನಮ್ಮಲ್ಲಿ ಜಿಎಸ್ಟಿ ಉಳಿಸಲು ವ್ಯಾಪಾರಸ್ಥರು ಮತ್ತು ಗ್ರಾಹಕರು ಹಣಕೊಟ್ಟು ಖರೀದಿ ಮಾಡುವಂತೆ, ಬಿಲ್ ಬೇಡ ಎನ್ನುವಂತೆ ಯೂರೋಪಿನ ಬಹಳ ದೇಶಗಳಲ್ಲಿ ಕೂಡ ಮಾಡುತ್ತಾರೆ. ಆದರೆ ನಾರ್ದಿಕ್ ದೇಶಗಳ ಎಥಿಕ್ಸ್ ಲೆವೆಲ್ ಇನ್ನೊಂದು ಹಂತದ್ದು!
ನನ್ನ ಪ್ರವಾಸದ ಬಹಳ ಕಡೆ ಕೈಯಲ್ಲಿರುವ ಕಾಸು ಕಸ ಎನ್ನುವ ಭಾವನೆ ಬಂದದ್ದು ಸುಳ್ಳಲ್ಲ. ಎಡೆ ಕಾರ್ಡ್ ಓನ್ಲಿ ಎನ್ನುವ ಬೋರ್ಡ್ ರಾರಾಜಿಸುತ್ತದೆ. ಅಲ್ಲಿ ತೆರಿಗೆ ಉಳಿಸುವ ಹುಚ್ಚಾಟಗಳು ಇಲ್ಲವೇ ಇಲ್ಲ. ಹಣವನ್ನು ನೀಡಿಯೇ ಕೊಳ್ಳಬೇಕು. ನನ್ನ ಬಳಿ ಕಾರ್ಡ್ ಇಲ್ಲವೆಂದರೆ ಅದಕ್ಕೂ ಆಸ್ಪದವಿದೆ. ಆದರೆ ಅದು ಕೆಲವೇ ಕೆಲವು ಅಂಗಡಿಗಳಲ್ಲಿ ಮಾತ್ರ. ನೀವು ಕಾರ್ಡ್ ನೀಡಿ ಕೊಂಡರೆ ಐದು ಯುರೋ ಆಗುತ್ತಿತ್ತು ಎಂದುಕೊಳ್ಳಿ.
ನೀವು ಹಣ ನೀಡಿದರೆ ಐದು ಯುರೋ ಇಪ್ಪತ್ತು ಸೆಂಟು ತೆಗೆದುಕೊಳ್ಳುತ್ತಾರೆ. ಹಣವನ್ನು ಕಾಪಾಡ ಬೇಕು ಮತ್ತು ಅದನ್ನು ಬ್ಯಾಂಕಿಗೆ ಡೆಪಾಸಿಟ್ ಮಾಡಬೇಕು. ಇದು ಅವರಿಗೆ ಹೆಚ್ಚಿನ ಕೆಲಸ ಸೃಷ್ಟಿ ಮಾಡುತ್ತದೆ! ಹೀಗಾಗಿ ನಗದು ವಹಿವಾಟು ಇಲ್ಲವೆನ್ನುವಷ್ಟು ಗೌಣ. ಫಿನ್ಲ್ಯಾಂಡ್ ದೇಶ ಅಕ್ಟೋಬರ್ 15ರ ನಂತರ ಇನ್ನೊಂದು ದೇಶವಾಗಿ ಬದಲಾಗುತ್ತದೆ.
ಮಾರ್ಚ್ ಕೊನೆಯವರೆಗೂ ರಸ್ತೆಯಲ್ಲಿ ಹಿಮ ಪರ್ವತಗಳು ಸೃಷ್ಟಿಯಾಗುತ್ತವೆ. ಈ ಅವಧಿಯ ಪ್ರಥಮ ಮೂರು ತಿಂಗಳು ಹಗಲು ಕೂಡ ಕಡಿಮೆ. ಡಿಸೆಂಬರಿನಲ್ಲಿ ಮಳೆ, ಗಾಳಿ ಕೂಡ ಸೇರಿಕೊಂಡು ವಾತಾವರಣವನ್ನು ಇನ್ನಷ್ಟು ಘಾಸಿಗೊಳಿಸುತ್ತವೆ. ಈ ವೈಪರೀತ್ಯಗಳಲ್ಲಿ ಬದುಕುವುದಕ್ಕೆ, ಕೇವಲ ಬದುಕುವುದು ಮಾತ್ರವಲ್ಲದೆ ಜಗತ್ತು ನಿಬ್ಬೆರಗಾಗಿ ನಿಂತು ನೋಡುವಂತೆ ಮಾಡುವುದಕ್ಕೆ ಮಾನಸಿಕ ಕ್ಷಮತೆ ಬಹಳ ಮುಖ್ಯ.
ಫಿನ್ಲ್ಯಾಂಡಿಗರು ಇಂತಹ ಮನೋಧೈರ್ಯಕ್ಕೆ ‘ಸಿಸು’ (Sisu) ಎನ್ನುತ್ತಾರೆ. ಅವರೇನೋ ಸರಳವಾಗಿ ಸಿಸು ಇರಬೇಕು ಎಂದು ಬಿಟ್ಟರು. ಆದರೆ ಆ ಸಿಸು ಪದಕ್ಕೆ ಅದೆಷ್ಟು ದೊಡ್ಡ ಅರ್ಥ ಮತ್ತು ವಿವರಣೆಯಿದೆ ಎನ್ನುವುದನ್ನು ತಿಳಿದ ನಂತರ ಈ ಶೀತ ಸಾಮ್ರಾಜ್ಯದಲ್ಲೂ ಇವರು ಜಗತ್ ಪ್ರಸಿದ್ಧಿ ಹೊಂದಲು ಇವರ ಮನೋಭಾವವೇ ಕಾರಣ ಎನ್ನುವುದು ಇನ್ನಷ್ಟು ಸ್ಪಷ್ಟವಾಯ್ತು.
ಸಿಸು ಎಂದರೆ ಛಲ, ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಧೃತಿಗೆಡದೆ ಸಾಧಿಸುವ ಹಠ ಅಥವಾ ದೃಢಸಂಕಲ್ಪ. ಸಿಸು ಎಂದರೆ ಪರಿಸ್ಥಿತಿ ಎಷ್ಟೇ ಕಠಿಣವಾಗಿದ್ದರೂ ಕುಗ್ಗದ ಅಸಾಧಾರಣ ಧೈರ್ಯ. ಸಿಸು ಎಂದರೆ ದೈಹಿಕ ಅಥವಾ ಮಾನಸಿಕ ಶಕ್ತಿ ಸಂಪೂರ್ಣವಾಗಿ ಮುಗಿದುಹೋಗಿದೆ ಎನಿಸಿದಾಗಲೂ, ಸೋಲೊಪ್ಪಿಕೊಳ್ಳದೆ ಮುಂದೆ ಸಾಗುವ ಆಂತರಿಕ ಶಕ್ತಿ.
ಒಟ್ಟಾರೆ ಫಿನ್ಲ್ಯಾಂಡಿಗರ ಸಿಸು ಎಂದರೆ, ಪರಿಸ್ಥಿತಿ ಸಂಪೂರ್ಣವಾಗಿ ಕೈಮೀರಿ ಹೋಗಿದೆ ಮತ್ತು ಗೆಲ್ಲಲು ಯಾವುದೇ ದಾರಿಯಿಲ್ಲ ಎಂದಾಗಲೂ, ಮೌನವಾಗಿ ಹೋರಾಡುತ್ತಾ ಮುನ್ನುಗ್ಗುವ ಅದ್ಭುತ ಛಲ ಮತ್ತು ಧೀಃಶಕ್ತಿ. ಎರಡು ದಶಕದ ಯೂರೋಪಿನ ಬದುಕಿನ ಉದ್ದಕ್ಕೂ ಇವರೇಕೆ ಹೀಗೆ? ನಾವೇಕೆ ಹೀಗಿಲ್ಲ? ಎಲ್ಲಿ ತಪ್ಪಾಗುತ್ತಿದೆ? ತಪ್ಪಾಗಿದೆ? ಎನ್ನುವ ಚಿಂತೆ ಕಾಡುತ್ತಿತ್ತು.
ಇವತ್ತಿಗೂ ಅದು ಕಾಡುತ್ತಲೆ ಇದೆ. ಇದಕ್ಕೆ ಉತ್ತರ ಹುಡುಕುವ ಪ್ರಯತ್ನ ಮಾಡಿದಾಗೆ ದೇಹದಲ್ಲಿ ನಿಶ್ಶಕ್ತಿ ಆವರಿಸುತ್ತದೆ. ನಮ್ಮದು ಸೋಗಲಾಡಿ ಸಮಾಜ ಎನ್ನುವುದು ನಾನು ಪದೇ ಪದೆ ಹೇಳುವ ಮಾತು. ನಾವು ಹೇಳಿದಂತೆ ನಡೆಯುವ ಜನ ಅಲ್ಲವೇ ಅಲ್ಲ. ಸಮಾಜದ ಮುಂದೆ ತೋರ್ಪಡಿಕೆಗಾಗಿ ಹೇಳುವ ಮಾತಿಗೂ ನಾವು ಮಾಡುವುದಕ್ಕೂ ಸಂಬಂಧವೇ ಇರುವುದಿಲ್ಲ. ಮಾತಿಗೂ ಕೃತಿಗೂ ಬಹಳ ಅಂತರವಿರುವ ಸಮಾಜ ನಮ್ಮದು.
ಇನ್ನೊಂದು ಪ್ರಮುಖ ಅಂಶ, ನಮಗೆ ನಾವು ಒಂದು, ನಮ್ಮ ದೇಶವೊಂದು ಎನ್ನುವ ಭಾವನೆ ಬರುವುದೇ ಇಲ್ಲ. ಇಡೀ ಭಾರತವನ್ನು ಒಂದು, ನಮ್ಮದು ಎಂದು ನೋಡುವ ಕಲ್ಪನೆ ನಮ್ಮ ಸಮಾಜದ ಅದೆಷ್ಟು ಜನರಿಗೆ ಇದ್ದೀತು/ ನೀವೇ ಯೋಚಿಸಿ ನೋಡಿ. ನಾವೊಂದು ದೇಶ ಎನ್ನುವ ಪರಿಕಲ್ಪನೆಯೇ ನಮ್ಮ ಮನಸ್ಸಿನಲ್ಲಿ ಗಟ್ಟಿಯಾಗಿ ಕೂರದ ಹೊರತು, ಆ ದೇಶವನ್ನು ಮಹಾನ್ ಮಾಡುವುದಾದರೂ ಹೇಗೆ? ಅಲ್ಲಲ್ಲಿ ಅಸಂಘಟಿತ ವ್ಯಕ್ತಿಗಳು, ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದಾರೆ ಎನ್ನುವುದು ಸಮಾಧಾನ ತರುವ ವಿಚಾರವಾದರೂ, ಇಷ್ಟು ದೊಡ್ಡ ಜನಸಂಖ್ಯೆ ಯನ್ನು ಈ ವಿಚಾರವಾಗಿ ತಿಳುವಳಿಕೆ ಉಳ್ಳವರನ್ನಾಗಿ ಮಾಡುವ ತನಕ ನಮ್ಮದು ಈ ವಿಚಾರದಲ್ಲಿ ಬದಲಾಗದ ಕಥೆ.
ನಾವು ವೈಯಕ್ತಿಕವಾಗಿ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ನಮ್ಮ ಬದುಕಿನ ಚುಕ್ಕಾಣಿ ಹಿಡಿಯುವುದಿಲ್ಲ. ಎಲ್ಲವನ್ನೂ ದೈವಕ್ಕೋ, ಹಣೆಬರಹಕ್ಕೋ ಬಿಟ್ಟುಬಿಡುತ್ತೇವೆ. ಹೌದು, ನಮ್ಮ ಪ್ರಯತ್ನವೇನೇ ಇದ್ದರೂ ಕೊನೆಗೂ ಫಲಿತಾಂಶ ನಮ್ಮ ಕೈಲಿಲ್ಲ.
ಹೀಗಾಗಿ ದೈವವನ್ನು ಅಥವಾ ಹಣೆಬರಹವನ್ನು ನಂಬುವುದು ಪೂರ್ಣ ತಪ್ಪಲ್ಲ. ಅದೊಂದು ತರಹ ಔಷಧವಿದ್ದಂತೆ, ಮಾನಸಿಕ ಖಿನ್ನತೆಯಿಂದ ಅದು ನಮ್ಮನ್ನು ರಕ್ಷಿಸುತ್ತದೆ. ಆದರೆ ಮೊದಲಿಗೆ ನಾವು ಕಲಿಯಬೇಕಾದದ್ದು ಮತ್ತು ನಮ್ಮ ಮುಂದಿನ ತಲೆಮಾರಿಗೆ ಕಲಿಸಬೇಕಾದದ್ದು, ಇವತ್ತಿನ ನಮ್ಮ ಪರಿಸ್ಥಿತಿಗೆ ನಾವೇ ಕಾರಣ ಎನ್ನುವುದು. ಇವತ್ತಿನ ನಮ್ಮ ದೈಹಿಕ ಆರೋಗ್ಯಕ್ಕೆ ಈ ಹಿಂದೆ ಸೇವಿಸಿರುವ ಸಾವಿರ ಊಟ ಕಾರಣ. ಅಂದರೆ ಕಳೆದ ಒಂದು ವರ್ಷ ಅಥವಾ ಒಂದೂವರೆ ವರ್ಷದಲ್ಲಿ ನಾವೇನು ಸೇವಿಸಿದ್ದೇವೆ ಎನ್ನುವುದರ ಆಧಾರದ ಮೇಲೆ ನಮ್ಮ ದೈಹಿಕ ಆರೋಗ್ಯ ನಿಂತಿದೆ. ಹಾಗೆ ನಮ್ಮ ಬ್ಯಾಂಕ್ ಬ್ಯಾಲೆನ್ಸ್ ಕೂಡ!
ನೀವು ನಂಬುವುದಿಲ್ಲ, ನಿತ್ಯವೂ ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಬ್ಯಾಂಕ್ ಬ್ಯಾಲೆನ್ಸ್ ಮೇಲೆ ಪರಿಣಾಮ ಬೀರುತ್ತವೆ. ಖರ್ಚಿಲ್ಲದೆ ಒಂದು ಕ್ಷಣ ಕೂಡ ಕಳೆಯಲು ಸಾಧ್ಯವಿಲ್ಲ. ಆದಾಯ ಹೆಚ್ಚಿಸುವ, ಕುಗ್ಗಿಸುವ ನಿರ್ಧಾರಗಳನ್ನು ಕೈಗೊಳ್ಳುವುದು ನಾವೇ! ಹೀಗಾಗಿ ಇಂತಹ ಸಾವಿರಾರು ನಿರ್ಧಾರಗಳು ಇವತ್ತಿನ ನಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಎನ್ನುವುದನ್ನು ನಿರ್ಧರಿಸುತ್ತವೆ.
ಹೀಗೆ ಪ್ರತಿಯೊಂದೂ ಲಿಂಕ್ ಆಗಿರುತ್ತದೆ. ಎಲ್ಲಕ್ಕಿಂತ ಮುಖ್ಯ ಮನಸ್ಥಿತಿ. ಮನಸ್ಥಿತಿ ಬದಲಾಗದೆ ಪರಿಸ್ಥಿತಿ ಎಂದಿಗೂ ಬದಲಾಗುವುದಿಲ್ಲ ಎನ್ನುವುದು ನಾನು ಸದಾ ಹೇಳುವ ಇನ್ನೊಂದು ಮಾತು. ಪ್ರತಿ ನಿತ್ಯ ನಾವಾಡುವ ಮಾತು, ಯಾವುದನ್ನು ಅನುಮೋದಿಸುತ್ತೇವೆ, ಯಾವುದನ್ನು ವಿರೋಧಿಸುತ್ತೇವೆ ಇತ್ಯಾದಿಗಳ ಮೇಲೆ ನಮ್ಮ ಮನಸ್ಥಿತಿ ಸೃಷ್ಟಿಯಾಗುತ್ತಾ ಹೋಗುತ್ತದೆ.
ನಾನು, ನನ್ನ ದೇಶ, ನನ್ನ ಭಾಷೆ, ನನ್ನ ಜನ ಎನ್ನುವ ವಿಶಾಲ ಮನೋಭಾವ ಸೃಷ್ಟಿಯಾಗದ ಹೊರತು ಭಾರತ ಭವ್ಯವಾಗಲು ಸಾಧ್ಯವೇ ಇಲ್ಲ. ಆದರೆ ನಮ್ಮ ಮನೋಭಾವ ನಾವೊಂದು ಎನ್ನುವುದರ ಬದಲಿಗೆ, ನಮ್ಮ ದೇಶವನ್ನು ಸುಧಾರಿಸುವುದು ಹೇಗೆ ಎನ್ನವುದರ ಬದಲಿಗೆ, ಎಲ್ಲಿ ಇಲ್ಲಿಗಿಂತ ಚೆನ್ನಾಗಿದೆ ಅಲ್ಲಿಗೆ ವಲಸೆ ಹೋಗೋಣ ಎನ್ನುವಂತಿದೆ. ಅದರಲ್ಲೂ ವಿದ್ಯಾಭ್ಯಾಸಕ್ಕೆ ಎಂದು ವಿದೇಶಗಳಿಗೆ ಹೋಗುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೆ ಇದೆ.
ನಮ್ಮಲ್ಲಿ ಇರುವ ವಾತಾವರಣ ಇದಕ್ಕೆ ಪ್ರಮುಖ ಕಾರಣ. ನೂರಕ್ಕೆ 99 ತೆಗೆದ ಒಂದಷ್ಟು ಜನರಿಗೆ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಸಿಗುತ್ತದೆ. ಉಳಿದವರ ಪಾಡೇನು? 95 ಅಥವಾ 96 ಪ್ರತಿಶತ ಅಂಕ ಗಳಿಸಿದವರಿಗೂ ಇಲ್ಲಿ ಭವಿಷ್ಯವಿಲ್ಲ ಎಂದಾದರೆ ಅವರೇನು ಮಾಡಬೇಕು? ಚೀನಾ, ಉಕ್ರೈನ್, ರಷ್ಯಾ ಹೀಗೆ ಎ ಸಾಧ್ಯವೋ ಅಲ್ಲಿಗೆ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಭಾರತೀಯ ವಿದ್ಯಾರ್ಥಿಗಳು ಹೋಗುತ್ತಿದ್ದಾರೆ.
ನಮಗೆ ನಮ್ಮಲ್ಲಿರುವ ಬುದ್ಧಿವಂತರನ್ನು ದೇಶ ಕಟ್ಟಲು ಬಳಸಿಕೊಳ್ಳಲು ಬರುವುದೇ ಇಲ್ಲ. ಹೀಗೆ ಹೋದವರು ಅಲ್ಲಿ ಬದುಕು ಕಟ್ಟಿಕೊಳ್ಳಲು ಶುರು ಮಾಡುತ್ತಾರೆ. ಫಿನ್ಲ್ಯಾಂಡ್ನ ಆಲ್ಟೊ ಯೂನಿವರ್ಸಿಟಿಯಲ್ಲಿ ಮಾತಿಗೆ ಸಿಕ್ಕದ್ದು ಟೊಇವೋ ಎನ್ನುವ ಇಪ್ಪತ್ತರ ಆಸುಪಾಸಿನ ಫಿನ್ನಿಷ್ ಯುವಕ. ಆತನೊಂದಿಗೆ ಮಾತಾಡುವಾಗ ‘ನನಗೆ ಬೇರೆ ದೇಶಗಳಿಂದ ಜನ ನಮ್ಮ ದೇಶಕ್ಕೆ ಬರುತ್ತಾರೆ ಎನ್ನುವುದು ಖುಷಿಯ ವಿಚಾರ. ಅದರಲ್ಲೂ ಯೂನಿವರ್ಸಿಟಿಗೆ ಓದಲು ಬರುವವರು ತೀರಾ ಸಾಮಾನ್ಯರಾಗಿರಲು ಸಾಧ್ಯವೇ ಇಲ್ಲ.
ಆರ್ಥಿಕವಾಗಿ ಮತ್ತು ಬೌದ್ಧಿಕವಾಗಿ ಅಬವ್ ಅವರೇಜ್ ಖಂಡಿತ ಇರುತ್ತಾರೆ. ಹೀಗಾಗಿ ಅವರು ಬಂದು ನನ್ನ ದೇಶವನ್ನು ಇನ್ನಷ್ಟು ಉನ್ನತಿಯ ಕಡೆಗೆ ಒಯ್ಯಲು ಕೆಲಸ ಮಾಡುತ್ತಾರೆ, ಅಲ್ಲದೆ ನಮ್ಮ ಸರಕಾರಕ್ಕೆ ಎಷ್ಟು ಜನರನ್ನು ಬಿಟ್ಟು ಕೊಳ್ಳಬೇಕು, ಯಾವಾಗ ನಿಲ್ಲಿಸಬೇಕು ಎನ್ನುವುದು ಗೊತ್ತಿದೆ’ ಎಂದನಾತ. ಒಂದಲ್ಲ ಎರಡಲ್ಲ ಸರಿಸುಮಾರು ನೂರಕ್ಕೂ ಹೆಚ್ಚು ದೇಶಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಓದಲು ಬರುತ್ತಾರೆ ಎನ್ನುವಾಗ ಆತನ ಮುಖದಲ್ಲಿ ತನ್ನ ದೇಶದ ವ್ಯವಸ್ಥೆಯ ಬಗ್ಗೆ ಇಣುಕುತ್ತಿದ್ದ ವಿಶ್ವಾಸ ಹೆಚ್ಚು ಪ್ರಯಾಸ ಪಡದೆ ಕಣ್ಣಿಗೆ ಕಾಣುತ್ತಿತ್ತು.
ಸರಕಾರಕ್ಕೆ ತನ್ನ ಜನಗಳ ಬಗ್ಗೆ ಮತ್ತು ಜನರಿಗೆ ಸರಕಾರದ ಬಗ್ಗೆ ಇರುವ ಈ ನಂಬಿಕೆ ಇದೆಯಲ್ಲ, ಇದನ್ನು ಸೃಷ್ಟಿಸುವುದು ಸುಲಭದ ಮಾತಲ್ಲ. ಅಂತಹ ಒಂದು ನಂಬಿಕೆ ಸೃಷ್ಟಿಯಾಗಿರುವ ಕಾರಣ ನಾರ್ದಿಕ್ ದೇಶಗಳು ಹವಾಮಾನ ವೈಪರೀತ್ಯಗಳ ನಡುವೆ ಕೂಡ ಜಗತ್ತಿನ ಅತ್ಯಂತ ಸುಖಿ ದೇಶಗಳು ಎನ್ನಿಸಿಕೊಂಡಿವೆ. ಜಗತ್ತು ಮೆಚ್ಚಿ ನೋಡುವಷ್ಟು ಯಶಸ್ಸು ಗಳಿಸಿಕೊಂಡಿವೆ.
ಟೊಇವೋನನ್ನು ನಿನ್ನ ಹೆಸರಿನ ಅರ್ಥವೇನು? ಎಂದಿದ್ದೆ. ಆತ ‘ಹೋಪ್’ ಎಂದಿದ್ದ. ನನ್ನ ಭಾರತವೂ ನಿಜಾರ್ಥದಲ್ಲಿ ಭವ್ಯವಾಗುತ್ತದೆ ಎನ್ನುವ ನಂಬಿಕೆಯೊಂದಿಗೆ ವಿರಮಿಸುವೆ.