ವಿಶ್ವರಂಗ
ಈಗ ನಾನು ಹೇಳಲು ಹೊರಟಿರುವ ಘಟನೆ ನಡೆದು ಸರಿಸುಮಾರು ಮೂರು ದಶಕ ಕಳೆದು ಹೋಗಿದೆ. ಅವತ್ತಿನ ದಿನಗಳಲ್ಲಿ ನನ್ನಪ್ಪ ಒಂದು ಸಣ್ಣ ಉದ್ಯಮ ನಡೆಸುತ್ತಿದ್ದರು. ಹದಿನೈದು ಜನಕ್ಕೆ ಅಪ್ಪ ಕೆಲಸ ಕೊಟ್ಟಿದ್ದರು. ಹೊರಗಿನಿಂದ ನೋಡುವವರಿಗೆ ‘ಇವರಿಗೇನು ಕಡಿಮೆ?’ ಎನ್ನು ವಂತೆ ಕಾಣುತ್ತಿತ್ತು. ಆದರೆ ಅಪ್ಪ ಫ್ಯಾಕ್ಟರಿ ನಡೆಸಲು ಹರಸಾಹಸ ಪಡುತ್ತಿದ್ದರು.
ಕೆಲಸಗಾರರ ಸಂಬಳವನ್ನು ತಿಂಗಳ ಮೊದಲ ವಾರದಲ್ಲಿ ಸಂದಾಯ ಮಾಡುತ್ತಿದ್ದರು. ಆದರೆ ನಮ್ಮ ಮನೆಗೆ ಹಣ ಬರುತ್ತಿದ್ದದ್ದು ಎರಡನೇ ವಾರ, ಮೂರನೇ ವಾರ ಮತ್ತೂ ಕೆಲವೊಮ್ಮೆ ಏನೂ ಇರುತ್ತಿರಲಿಲ್ಲ. ಒಬ್ಬ ಉದ್ಯಮಿಯ ಬಾಳು ಅದೆಷ್ಟು ಕಷ್ಟದ್ದಾಗಿರಬಹುದು ಎನ್ನುವುದನ್ನು ಕಣ್ಣಾರೆ ಕಂಡಿದ್ದೇನೆ. ಈ ದಾರಿಯಲ್ಲಿ ಬಂದಾಗಿದೆ, ಇದನ್ನು ಬಿಟ್ಟು ಮತ್ತೊಂದು ದಾರಿ ಎಂದರೆ, ಮತ್ತೆ ಎಲ್ಲವನ್ನೂ ಹೊಸದಾಗಿ ಪ್ರಾರಂಭಿಸಬೇಕು.
ಹೀಗಾಗಿ ‘ಈಸಬೇಕು, ಇದ್ದು ಜೈಸಬೇಕು’ ಎನ್ನುವುದು ಅಣ್ಣನ (ಅಪ್ಪನನ್ನು ಅಣ್ಣ ಎಂದು ಕರೆದು ಅಭ್ಯಾಸ) ಅಭಿಮತವಾಗಿತ್ತು. ಅಪ್ಪ ಪ್ರೀತಿಯಿಂದ ಕಟ್ಟಿದ ವುಡ್ ಫ್ಯಾಕ್ಟರಿ ಉಳಿವಿಗಾಗಿ ಸಾಕಷ್ಟು ಸರ್ಕಸ್ ಮಾಡುತ್ತಿದ್ದರು. ಫರ್ನಿಚರ್ ಚೀಟಿ ಅವುಗಳಲ್ಲಿ ಒಂದು! ಹನ್ನೆರಡು ತಿಂಗಳು ಚೀಟಿ ಕಟ್ಟಬೇಕು. ಪ್ರತಿ ತಿಂಗಳೂ ಲಕ್ಕಿ ಡಿಪ್ ಎತ್ತಲಾಗುತಿತ್ತು.
ಯಾರಿಗೆ ಅದು ಸಿಗುತ್ತೆ, ಅವರು ಮುಂದಿನ ಕಂತುಗಳನ್ನು ಕಟ್ಟುವಂತಿರಲಿಲ್ಲ. ನಮಗೆ ಲಕ್ಕಿ ಡಿಪ್ ಹೊಡೆಯಬಹುದು ಎನ್ನುವ ಆಸೆಯಿಂದ ಬಹಳಷ್ಟು ಜನ ಚೀಟಿ ಹಾಕಿದ್ದರು. ಅವು ಗೂಗಲ್ ಪೇ, ಫೋನ್ ಪೇ ಅಥವಾ ಪೆಟಿಎಂ ಇಲ್ಲದ ದಿನಗಳು.
ಇದನ್ನೂ ಓದಿ: Rangaswamy Mookanahalli Column: ರಿಜೆಕ್ಟ್ ದಿ ರಿಜೆಕ್ಷನ್: ನಿರಾಕರಣೆಯನ್ನು ನಿರಾಕರಿಸಿ !
ಅಪ್ಪ ಪ್ರತಿ ಭಾನುವಾರ ಹತ್ತಾರು ಮನೆಯನ್ನು ಅಲೆದು ಚೀಟಿ ದುಡ್ಡು ಸಂಗ್ರಹಣೆ ಮಾಡುತ್ತಿದ್ದರು. ತಿಂಗಳ ನಾಲ್ಕೂ ಭಾನುವಾರ ವರ್ಷಾನುಗಟ್ಟಲೆ ಅಪ್ಪನ ಜೀವನ ಹೀಗೆ ಕಳೆದುಹೋಯ್ತು. ಒಂದು ಭಾನುವಾರ ಅಪ್ಪನ ಜತೆ ನಾನೂ ಹೋಗಿz. ಕೆಲವು ಕಡೆ ಸಾಮಾನ್ಯವಾಗಿರುತ್ತಿತ್ತು, ಕೆಲವು ಕಡೆ ಗೌರವ ಸಿಗುತ್ತಿತ್ತು. ಇನ್ನೂ ಕೆಲವು ಕಡೆ ನಿಕೃಷ್ಟವಾಗಿ ಕೂಡ ಕಾಣುತ್ತಿದ್ದರು.
ನನ್ನಪ್ಪನಿಗಿಂತ ಹತ್ತಾರು ವರ್ಷ ಕಡಿಮೆ ವಯಸ್ಸಿನವರು ಅವರನ್ನು ಏಕವಚನದಲ್ಲಿ ಮಾತಾಡಿ ಸುವುದನ್ನು ಕಂಡು ಮನಸ್ಸು ಕುಗ್ಗಿ ಹೋಗಿತ್ತು. ಅಪ್ಪ ತನ್ನ ಉದ್ದಿಮೆ ಉಳಿಸಿಕೊಳ್ಳುವ ಸಲುವಾಗಿ ಎಲ್ಲವನ್ನೂ ವಿಷಕಂಠನಂತೆ ಸಹಿಸಿಕೊಂಡಿದ್ದರು.
ಹೀಗೆ ಅಪ್ಪನನ್ನು ಏಕವಚನದಲ್ಲಿ ಕರೆದವರು ಉದ್ಯಮಿಯಾಗಿರಲಿಲ್ಲ, ಅವರು ಪ್ರಸಿದ್ಧ ಸಂಸ್ಥೆ ಯಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಇವತ್ತಿಗೆ ಅವರ ಮನೋಭಾವ ನೆನೆದು ನಗು ಬರುತ್ತದೆ. ನಿಜವಾದ ಮನುಷ್ಯ, ಅದರಲ್ಲೂ ಯಶಸ್ವಿ ಮನುಷ್ಯ ಎಲ್ಲರಿಗೂ ಗೌರವ ನೀಡುತ್ತಾರೆ. ಆದರೆ ಅವತ್ತು ದುಃಖವಾಗಿತ್ತು.
ನನ್ನಪ್ಪನನ್ನು ಏಕವಚನದಲ್ಲಿ ಕರೆದುಬಿಟ್ಟರಲ್ಲ ಎನ್ನುವ ನೋವು ಇಂದಿಗೂ ಕಾಡುತ್ತಿದೆ. ಆ ವ್ಯಕ್ತಿ ಇವತ್ತಿಗೂ ಉತ್ತಮ ಬದುಕನ್ನು ಬದುಕುತ್ತಿದ್ದಾರೆ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಆದರೆ ಅವರಲ್ಲಿ ಒಂದು ಬದಲಾವಣೆಯಾಗಿದೆ. ಇವತ್ತಿಗೆ ನಾನು ಎದುರಿಗೆ ಸಿಕ್ಕರೆ ಪ್ರೀತಿಯಿಂದ, ಗೌರವ ದಿಂದ, ಬಹುವಚನದಲ್ಲಿ ಮಾತಾಡಿಸುತ್ತಾರೆ!
ಇದನ್ನೂ ಓದಿ: Rangaswamy Mookanahalli Column: ಇರಾನಿನಲ್ಲಿ ಏನಾಗುತ್ತಿದೆ ? ಏಕಾಗುತ್ತಿದೆ ?
ಮೂವತ್ತು ವರ್ಷದ ಹಿಂದಿನ ಘಟನೆ ನೆನಪಾಗಲು, ಇಂದು ಬೆಳಗ್ಗೆ ನಡೆದ ಒಂದು ಘಟನೆ ಕಾರಣ ವಾಯ್ತು. ಮನೆಯ ಕಸವನ್ನು ತೆಗೆದುಕೊಂಡು ಹೋಗಲು ನಗರಪಾಲಿಕೆ ಕಡೆಯಿಂದ ಒಂದು ಆಟೋದಲ್ಲಿ ಇಬ್ಬರು ಹುಡುಗರು ಬರುತ್ತಾರೆ. ನಮ್ಮ ಮನೆಯ ಸಾಲಿನಲ್ಲಿರುವ ಒಬ್ಬ ವ್ಯಕ್ತಿ ಅವರನ್ನು ಏಕವಚನದಲ್ಲಿ ಮಾತಾಡಿಸುತ್ತಿದ್ದರು.
ಮನಸ್ಸು ಒಂದು ಕ್ಷಣ ವಿಚಲಿತವಾಯ್ತು. ಅವರನ್ನು ಏಕ ವಚನದಲ್ಲಿ ಮಾತಾಡಿಸುವ ಹಕ್ಕು ಕೊಟ್ಟದ್ದು ಯಾರು? ಅವರ ವೃತ್ತಿ, ಅಷ್ಟೇನೂ ಯಶಸ್ಸು ಕಾಣದ ಅವರ ಬದುಕು! ಆಶ್ಚರ್ಯ ಎನ್ನಿಸುತ್ತೆ. ಆದರೆ ನಮ್ಮ ಸಮಾಜದಲ್ಲಿ ವಿದ್ಯಾವಂತರು, ಬುದ್ಧಿವಂತರು, ಯಶಸ್ವಿಗಳು ಎನ್ನಿಸಿ ಕೊಂಡವರು ನಡೆದುಕೊಳ್ಳುವುದು ಹೀಗೆ.
ಸಮಾಜದ ಕೆಲ ವರ್ಗದಲ್ಲಿ ದುಡಿಯುವ ಜನರನ್ನು ಏಕವಚನದಲ್ಲಿ ಕರೆಯುವುದು ಅತಿ ಸಾಮಾನ್ಯ ಎನ್ನಿಸಿಕೊಂಡು ಬಿಟ್ಟಿದೆ. ಇದು ತಪ್ಪು ಎನ್ನುವ ಭಾವನೆ ಕೂಡ ಸಮಾಜದಲ್ಲಿ ಸತ್ತು ಹೋಗಿದೆ. ಮೂರು ದಶಕದಲ್ಲಿ ಭಾರತದಲ್ಲಿ ಬಹಳಷ್ಟು ನೀರು ಹರಿದುಹೋಗಿದೆ. ಆದರೆ ಕೆಲವು ವಿಚಾರಗಳಲ್ಲಿ ಮಾತ್ರ ಯಾವುದೇ ಬದಲಾವಣೆಯಿಲ್ಲ.
ಮೂರು ದಶಕದಲ್ಲಿ ಬದಲಾಗದಿರುವ ಇನ್ನೊಂದು ಪ್ರಮುಖ ಅಂಶ ವ್ಯಾಪಾರಸ್ಥರ ಬಗ್ಗೆ ನಮಗಿ ರುವ ಭಾವನೆ. ಅವತ್ತಿನ ದಿನಗಳಲ್ಲಿ ಸ್ವಂತ ವ್ಯಾಪಾರ, ಉದ್ದಿಮೆ ನಡೆಸುತ್ತಿದ್ದಾರೆ ಎಂದರೆ ‘ಅಯ್ಯೋ ಪಾಪ’ ಎನ್ನುವಂತೆ ನೋಡುತ್ತಿದ್ದರು. ಬೇರೆಲ್ಲೂ ಕೆಲಸ ಸಿಗದೇ ವೇಸ್ಟ್ ಬಾಡಿ ಎನ್ನುವಂತೆ ಸಮಾಜ ಅವರನ್ನು ನೋಡುತ್ತಿತ್ತು.
ನನ್ನಪ್ಪನಿಗೆ ಸಿಕ್ಕ ಗೌರವ, ಮರ್ಯಾದೆ ಈ ಮಾತುಗಳನ್ನು ಬರೆಸುತ್ತಿದೆ. ಎಲ್ಲರೂ ಪ್ರಖ್ಯಾತ, ಯಶಸ್ವಿ ಉದ್ಯಮಿಯಾಗುವುದು ಸಾಧ್ಯವಿಲ್ಲದ ಮಾತು. ಆದರೆ ನನ್ನಪ್ಪನಂಥ ಕೋಟ್ಯಂತರ ಜನ ಕೆಲಸ ಎಂದು ಕೈಚಾಚದೆ, ತಮಗೆ ಕೆಲಸ ಕೊಟ್ಟು ಕೊಂಡದ್ದೂ ಅಲ್ಲದೆ, ಹತ್ತಾರು ಜನರಿಗೆ ಕೆಲಸ ಕೂಡ ನೀಡಿದ್ದರು, ನೀಡುತ್ತಿದ್ದಾರೆ.
ಎಲ್ಲರೂ ಕೆಲಸ ಎಂದು ಕೈಚಾಚಿದರೆ ಕೆಲಸ ಕೊಡುವವರು ಯಾರು? ಸಮಾಜದಲ್ಲಿ ಒಂದು ಲಯ ಸ್ಥಿರವಾಗಿರಬೇಕು ಎಂದರೆ ಉದ್ಯಮಿಗಳು ಬೇಕು. ಕೆಲಸ ಮಾಡುವುದು ತಪ್ಪಲ್ಲ. ಹಾಗೆ ಉದ್ಯಮ ಮಾಡುವುದು ಕೂಡ ತಪ್ಪಲ್ಲ. ಸಮಾಜಕ್ಕೆ ಇಬ್ಬರೂ ಬೇಕು. ಆದರೆ ನಮ್ಮ ಸಮಾಜ ಇವತ್ತಿಗೂ ಉದ್ದಿಮೆದಾರರನ್ನು ಸಂಶಯದ ಕಣ್ಣಿನಿಂದ ನೋಡುತ್ತದೆ.
ಆತನಿಗೆ ನೀಡಬೇಕಾದ, ಸಿಗಬೇಕಾದ ಗೌರವವನ್ನು ನಾವು ನೀಡುತ್ತಿಲ್ಲ. ನಮ್ಮ ಸಮಾಜವು ರೈತ ರನ್ನು, ಸೈನಿಕರನ್ನು ಅತ್ಯಂತ ಗೌರವದಿಂದ ಕಾಣುತ್ತದೆ. ಆದರೆ ಭಾರತದ ಜಿಡಿಪಿಯ 40 ಪ್ರತಿಶತ ದೇಣಿಗೆ ನೀಡುವ ಸಣ್ಣಗಾತ್ರದ ಉದ್ದಿಮೆದಾರರ ಬಗ್ಗೆ ಮಾತ್ರ ಅಸಡ್ಡೆ ತೋರಿಸುತ್ತದೆ.
ಸಾವಿರ ಸಂಕಷ್ಟಗಳನ್ನು ದಾಟಿ ಅವರು ಅಂಬಾನಿ, ಅದಾನಿ ಮಟ್ಟಕ್ಕೆ ಅಲ್ಲದಿದ್ದರೂ ಪರವಾಗಿಲ್ಲ ಎನ್ನುವ ಮಟ್ಟಕ್ಕೆ ಬೆಳೆದು ಬಿಟ್ಟರೆ ಆಗ ಕೂಡ ಆತನ ಬಗ್ಗೆ ಏಕವಚನದಲ್ಲಿ ಮಾತಾಡಲು ಶುರು ಮಾಡಿ ಬಿಡುತ್ತದೆ. ಯಶಸ್ಸಿನ ಏಣಿ ಏರುತ್ತಾ ಹೋದಂತೆ ವ್ಯಕ್ತಿ ನಮ್ಮ ದೇಶದಲ್ಲಿ ಸಾರ್ವಜನಿಕ ಆಸ್ತಿಯಾಗಿ ಬದಲಾಗಿ ಬಿಡುತ್ತಾರೆ. ಆತ ಏರಿದ ಯಶಸ್ಸಿನ ಸಾವಿರದ ಒಂದು ಭಾಗ ಬೇಡ, ಲಕ್ಷದ ಒಂದು ಭಾಗ ಕೂಡ ಸಾಧಿಸಲಾಗದ ವ್ಯಕ್ತಿ ಕೂಡ ಆತನ ಬಗ್ಗೆ ಏಕವಚನದಲ್ಲಿ, ಆತನ ಬಗ್ಗೆ ಎಲ್ಲಾ ತಿಳಿದಿರುವಂತೆ ಮಾತಾಡಲು ಶುರುಮಾಡುತ್ತಾರೆ.
ಇನ್ನೊಂದು ವರ್ಗದ ಜನ ನಾವು ಸುಮ್ಮನೆ ಕುಳಿತು ಬಿಟ್ಟರೆ ಸಮಾಜದಲ್ಲಿ ಆಗುತ್ತಿರುವುದು ನಮ ಗೇನೂ ಗೊತ್ತಿಲ್ಲ ಎಂದುಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಈ ರೀತಿಯ ಗಾಸಿಪ್ ಮಾಡಲು ಶುರು ಮಾಡುತ್ತಾರೆ. ಒಟ್ಟಿನಲ್ಲಿ ಭಾರತದಲ್ಲಿ ವ್ಯಕ್ತಿ, ಅದರಲ್ಲೂ ಒಬ್ಬ ಉದ್ಯಮಿ ಗೆದ್ದರೂ, ಸೋತರೂ ಅವಮಾನ, ಹೀಯಾಳಿಕೆ ತಪ್ಪಿದ್ದಲ್ಲ.
ಕಾನಿಡೆಂಟ್ ಗ್ರೂಪಿನ ಸಿ.ಜೆ.ರಾಯ್ ಅವರು ಮೊನ್ನೆ ಆತ್ಮಹತ್ಯೆ ಮಾಡಿಕೊಂಡದ್ದು ಸುದ್ದಿ ಯಾಯ್ತು. ಆತನ ಸಾವಿನ ನಂತರ ಸೋಷಿಯಲ್ ಮೀಡಿಯಾ ರಿಯಾಕ್ಟ್ ಮಾಡಿದ ರೀತಿ ಬೆಚ್ಚಿ ಬೀಳಿಸುವಂತೆ ಮಾಡಿತು. ಆತ ಯಾವುದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಲಿ ಅದಕ್ಕೆ ನಿಜವಾದ ಕಾರಣ ನಮಗಂತೂ ಗೊತ್ತಿಲ್ಲ ಅಲ್ಲವೇ? ಆತ್ಮಸಾಕ್ಷಿ ಕೇಳಿಕೊಂಡು ನೋಡಿ, ನಮ್ಮಲ್ಲಿ 99 ಪ್ರತಿಶತಕ್ಕಿಂತ ಹೆಚ್ಚಿನ ಜನರಿಗೆ ಆತನ ಬಗ್ಗೆ ಪೂರ್ಣ ವಿವರಗಳು ಗೊತ್ತಿರಲಿಲ್ಲ.
ಇವತ್ತಿಗೆ ಎಲ್ಲರೂ ಜಡ್ಜ್‌ಮೆಂಟ್ ಪಾಸ್ ಮಾಡುತ್ತಿದ್ದಾರೆ. ನಮಗೆ ಗೊತ್ತಿಲ್ಲದ ವಿಚಾರ, ನಮ್ಮದಲ್ಲದ ವಿಚಾರಕ್ಕೆ ನಾವೇಕೆ ಮೂಗು ತೋರಿಸಬೇಕು ಎನ್ನುವ ಪರಿಜ್ಞಾನ ನಮ್ಮಲ್ಲಿ ಮರೆಯಾಗುತ್ತಿದೆ. ನಾವು ಟಿವಿ ಚಾನಲ್‌ಗಳನ್ನು ‘ಬ್ರೇಕಿಂಗ್ ನ್ಯೂಸ್ ಎಂದು ಬಡಿದಾಡುತ್ತಾರೆ’ ಎನ್ನುತ್ತೇವೆ.
ಸೋಷಿಯಲ್ ಮೀಡಿಯಾ ತುಂಬಾ ನಾವು ಮಾಡುತ್ತಿರುವುದಾರೂ ಏನು? ನನಗೇನೋ ಹೆಚ್ಚಿನದು ಗೊತ್ತು ಎಂದು ತೋರ್ಪಡಿಸಿಕೊಳ್ಳುವ ಹಪಾಹಪಿ. ಆತ ಸತ್ತದರ ಕಾರಣ ಹುಡುಕಲು ಅದಕ್ಕೆ ಯೋಗ್ಯರಾದ ಜನರಿದ್ದಾರೆ. ನಮ್ಮ ಕೆಲಸ ಬಿಟ್ಟು ಬೇರೆಲ್ಲದರಲ್ಲೂ ನಮಗೆ ಅತೀವ ಆಸಕ್ತಿ.
ವ್ಯಕ್ತಿ ಸತ್ತ ಎಂದಲ್ಲ, ಬದುಕಿದ್ದಾಗಲೂ ಅಷ್ಟೇ, ಹೆಚ್ಚು ಪ್ರಸಿದ್ಧ, ಹಣವಂತನಾದರೆ ಸಾಕು ಸಮಾಜ ಆತನ ಬಗ್ಗೆ ಮಾತಾಡುವಾಗ ಏಕವಚನ ಬಳಸಲು ಶುರುಮಾಡಿಬಿಡುತ್ತದೆ. ಗೊತ್ತಿರುವವರಿಗೆ, ಎದುರಿಗಿದ್ದಾಗ ತೋರಿಸುವ ಗೌರವ ಹಿಂದೆ ಮಾತಾಡುವಾಗ ಮರೆಯಾಗಿ ಬಿಡುತ್ತದೆ.
ಹೀಗೇಕೆ? ನಮ್ಮ ಸಮಾಜ ಜಗತ್ತಿನ ಇತರ ಸಮಾಜಕ್ಕಿಂತ ಅತ್ಯಂತ ಹೆಚ್ಚು ಸಂಕ್ಲಿಷ್ಟವಾದದ್ದು. ಇಲ್ಲಿ ವ್ಯಾಪಾರ ಮಾಡಿ ಗೆದ್ದರೆ, ಸಾಹುಕಾರರಾದರೆ ಅದಕ್ಕೊಂದು ಕುಹುಕದ ಮಾತು ಸಿದ್ಧವಿರುತ್ತದೆ. ಸಾಹುಕಾರರನ್ನು, ಉದ್ದಿಮೆದಾರರನ್ನು, ಕೆಲಸ ಸೃಷ್ಟಿ ಮಾಡಿದವವರನ್ನು ನಾವು ಗುಮಾನಿ ಕಣ್ಣಿನಿಂದ ನೋಡುತ್ತೇವೆ. ಅವರು ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಉದ್ದಿಮೆ ಕಟ್ಟಿ, ಕೆಲಸ ಕೊಟ್ಟರೆ ಆಗ ಆತನನ್ನು ಸಾಹುಕಾರನನ್ನಾಗಿಸಲು ನಮ್ಮ ವೇಳೆಯನ್ನು ಬಲಿಕೊಡುತ್ತಿದ್ದೇವೆ ಎನ್ನುವ ಮಾತುಗಳನ್ನು ಆಡುತ್ತೇವೆ.
ಯಶಸ್ಸಿನ ಹಿಂದೆಯೇ ಆತನ ಬಗ್ಗೆ ಕೆಟ್ಟ ಮಾತುಗಳು, ಆರೋಪಗಳು ಜತೆಯಾಗುತ್ತವೆ. ಇನ್ನು ಸೋತರೆ ಇಲ್ಲಿ ಬದುಕುವ ಹಕ್ಕನ್ನು ಸಹ ನಾವು ಕಳೆದುಕೊಂಡುಬಿಡುತ್ತೇವೆ. ಹೆತ್ತವರಿಂದ ಹಿಡಿದು, ಬಂಧು-ಮಿತ್ರರು, ಎಲ್ಲರೂ ಬುದ್ದಿವಾದ ಹೇಳಲು ಶುರುಮಾಡುತ್ತಾರೆ.
‘ಸಹಾಯಕ್ಕೆ ನಿಲ್ಲಿ, ಮತ್ತೆ ಮರಳಿ ಉದ್ದಿಮೆ ಕಟ್ಟುವೆ’ ಎನ್ನುವವರಿಗೆ ಯಾರೂ ಸಹಾಯಹಸ್ತವನ್ನು ಚಾಚುವುದಿಲ್ಲ. ಗೆದ್ದರೂ, ಸೋತರೂ ಉದ್ದಿಮೆದಾರನಿಗೆ ಬೆಲೆ ಇಲ್ಲದಿರುವುದು ಭಾರತದಲ್ಲಿ ಮಾತ್ರ. ಮಾರುಕಟ್ಟೆಯಲ್ಲಿ ಭದ್ರವಾಗಿ ನೆಲೆ ನಿಲ್ಲಲು ಪ್ರತಿಸ್ಪರ್ಧಿಗಳು ಹಲವಾರು ಕಸರತ್ತು ನಡೆಸುತ್ತಾರೆ. ಇದರ ಜತೆಗೆ ಸರಕಾರದ ನಿಯಮಗಳು ಬದಲಾಗುತ್ತಿರುತ್ತವೆ.
ಜಾಗತಿಕ ಮಟ್ಟದಲ್ಲಿ ಉಂಟಾಗಬಹುದಾದ ತಲ್ಲಣಗಳು ಕೂಡ ಉದ್ದಿಮೆಯ ಮೇಲೆ ಪರಿಣಾಮ ಬೀರುತ್ತವೆ. ಇವೆಲ್ಲವುಗಳ ನಡುವೆ ಸಂಸ್ಥೆಯನ್ನು ಕೆಲವು ನಂಬಿಕೆ, ಸಿದ್ಧಾಂತದ ಆಧಾರದ ಮೇಲೆ ಕಟ್ಟಲಾಗಿರುತ್ತದೆ. ಅದನ್ನು ಉಳಿಸಿಕೊಂಡು ಹೋಗುವುದು ಇಂದಿನ ದಿನದಲ್ಲಿ ಅತಿ ದೊಡ್ಡ ಸಮಸ್ಯೆ. ಇವೆಲ್ಲವನ್ನು ಗೆದ್ದರೂ ಇವುಗಳನ್ನು ಮೀರಿದ ರಾಜಕೀಯ, ಆರ್ಥಿಕ ಅಥವಾ ಮತ್ಯಾ ವುದೋ ಕಾರಣ ಉದ್ಯಮಿಯ ಜೀವವನ್ನು ಬಲಿ ಪಡೆದುಕೊಂಡುಬಿಡಬಹುದು.
ಭಾರತದಲ್ಲಿ ಇಂದಿಗೂ ಉದ್ದಿಮೆದಾರನಿಗೆ ಸರಿಯಾದ ಯಾವ ಸೌಲಭ್ಯವೂ ಇಲ್ಲ. ಹೂಡಿಕೆದಾರ ಹೇಗೋ ಬದುಕಿಕೊಳ್ಳುತ್ತಾರೆ. ಉದ್ದಿಮೆ ಕಟ್ಟಿದವರ ಪರಿಸ್ಥಿತಿ ಮಾತ್ರ ಭಾರತದಲ್ಲಿ ಕಷ್ಟ. ತೀರಾ ದೊಡ್ಡ ಉದ್ದಿಮೆದಾರರ ಪರಿಸ್ಥಿತಿ ಪರವಾಗಿಲ್ಲ. ಏಕೆಂದರೆ ಅವರಿಗೆ ರಾಜಕೀಯ ನೇತಾರರ ಅಥವಾ ಅಧಿಕಾರಸ್ಥರ ಸಹಾಯವಿರುತ್ತದೆ ಎನ್ನುವ ಮಾತನ್ನು ನಾವು ಆಡುತ್ತೇವೆ. ಅಲ್ಲಿ ಕೂಡ ಸನ್ನಿವೇಶ ಗಳು ಬದಲಾದರೆ ಗಳಿಸಿದ ಹಣ, ಕಟ್ಟಿದ ಉದ್ಯಮ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ. ಇದರ ಜತೆಗೆ ಸಣ್ಣ ಉದ್ದಿಮೆದಾರರ ಸ್ಥಿತಿ ಶತ್ರುವಿಗೂ ಬೇಡ ಎನ್ನುವಂತಿದೆ.
ತೆರಿಗೆ ಮಾತ್ರ ಸಮಯಕ್ಕೆ ಸರಿಯಾಗಿ ಕಟ್ಟಿಬಿಡಬೇಕು. ಇಲ್ಲದಿದ್ದರೆ ದಿನದ ಲೆಕ್ಕಾಚಾರದಲ್ಲಿ ಅದರ ಮೇಲೆ ಬಡ್ಡಿ ಹಾಕಲಾಗುತ್ತದೆ. ಸಣ್ಣ ಉದ್ದಿಮೆಗಳ ಉಳಿವಿಗೆ, ಬೆಳವಣಿಗೆಗೆ ಸರಕಾರಗಳ ಕೊಡುಗೆ ಮಾತ್ರ ಶೂನ್ಯ ಎಂದು ಹೇಳಬಹುದು. ಸಮಾಜದ ಭಾಗವಾಗಿ ನಾವು ಇನ್ನೊಂದು ಸಮಸ್ಯೆ ಸೃಷ್ಟಿಸು ವುದು ಬೇಡ. ಗಾಸಿಪ್ ಮಾಡದೆ ಸುಮ್ಮನಿದ್ದರೆ ಅದು ಸಮಾಜಕ್ಕೆ ನಾವು ನೀಡಿದ ಕಾಣಿಕೆ. ಮಾತಾ ಡುವ ಮುನ್ನ ಚಿಂತಿಸೋಣ. ಅನವಶ್ಯಕ ಎನ್ನಿಸಿದ ಮಾತುಗಳನ್ನು ಆಡದಿರೋಣ. ಕೊನೆಗೂ ವ್ಯಕ್ತಿಯ ಸಾವು, ಸೋಲು, ಗೆಲುವು ಯಾವುದರಲ್ಲೂ ನಿಖರ ಕಾರಣ ತಿಳಿಯದೆ ತೀರ್ಮಾನ ಹೇಳುವ ದುಡುಕಿನ ಬುದ್ಧಿಗೆ ಕಡಿವಾಣ ಹಾಕಿಕೊಳ್ಳೋಣವೇ?