ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Harish Kera Column: ಖಗೋಳ-ಭೂಗೋಳ ಬೆಸೆದ ಶ್ರೀನಿವಾಸ

ಸಿಹಿ ಸುದ್ದಿ ಏನೆಂದರೆ ಭಾರತ ಮೂಲದ ಖಗೋಳ ವಿಜ್ಞಾನಿ ಶ್ರೀನಿವಾಸ ಆರ್.ಕುಲಕರ್ಣಿ ಅವರಿಗೆ ಲಂಡನ್ನಿನ ಪ್ರತಿಷ್ಠಿತ ‘ರಾಯಲ್ ಅಸ್ಟ್ರೋನಾಮಿಕಲ್ ಸೊಸೈಟಿ’ ಕೊಡುವ 2026ನೇ ಸಾಲಿನ ಚಿನ್ನದ ಪದಕ ದೊರೆತಿದೆ. ಈ ಪ್ರಶಸ್ತಿಗೆ 200 ವರ್ಷಗಳ ಇತಿಹಾಸ. ಆಲ್ಬರ್ಟ್ ಐನ್ʼಸ್ಟೈನ್, ಸ್ಟೀಫನ್ ಹಾಕಿಂಗ್ ಮತ್ತು ಎಡ್ವಿನ್ ಹಬಲ್ʼರಂತಹ ಮಹಾನ್ ವಿಜ್ಞಾನಿಗಳು ಇದನ್ನು ಈ ಹಿಂದೆ ಪಡೆದವರು ಎಂದರೆ ಸಾಕಲ್ಲ. ಈ ಶ್ರೀನಿವಾಸ ಕುಲಕರ್ಣಿಯವರು ನಮ್ಮ ಹುಬ್ಬಳ್ಳಿಯವರು.

ಕಾಡುದಾರಿ

ವೆನೆಜುವೆಲಾವನ್ನು ನುಂಗಿ ನೊಣೆದು ಈಗ ಇರಾನನ್ನು ಮುಕ್ಕಿ ಮುಗಿಸಲು ಅಮೆರಿಕದ ಹೊಂಚು. ಸಿರಿಯಾದ ಮೇಲೆ ಮುಗಿಬಿದ್ದ ಇಸ್ರೇಲ. ಉಕ್ರೇನನ್ನು ಧೂಳೀಪಟ ಮಾಡುತ್ತಿರುವ ರಷ್ಯಾ. ಇದೆಲ್ಲ ದರ ಮಧ್ಯೆ ದೇಶ- ದೇಶಗಳನ್ನು ಪರಸ್ಪರ ಎತ್ತಿ ಕಟ್ಟಿ ತನ್ನ ಲಾಭ ಮಾಡಿಕೊಳ್ಳುತ್ತಿರುವ ಚೀನಾ. ಅಂತರ್ಯುದ್ಧದಿಂದ ಬೆದರಿರುವ ಯುರೋಪ್.

ತೀವ್ರ ವೇಗದಲ್ಲಿ ಮುಗಿಯುತ್ತಿರುವ ತೈಲನಿಕ್ಷೇಪದ ಮೇಲೆ ಗಾಬರಿಯಿಂದ ಕಣ್ಣು ಹಾಯಿಸುತ್ತಿರುವ ಗಲ್ಫ್ ದೇಶಗಳು. ಜನಾಂಗಹತ್ಯೆಗಳಿಂದ ಕಂಗಾಲಾಗಿರುವ ಆಫ್ರಿಕ, ಲ್ಯಾಟಿನ್ ಅಮೆರಿಕದ ದೇಶಗಳು. ಎಲ್ಲ ಕಡೆ ಒಬ್ಬರು ಇನ್ನೊಬ್ಬರನ್ನು ನಂಬಲಾಗದ, ಕತ್ತಿ ಮಸೆಯುತ್ತಿರುವ ಸ್ಥಿತಿ. ‌ಈ ನಡುವೆ ನಿಜಕ್ಕೂ ಮಾನವ ಜನಾಂಗವನ್ನು ತುಸುವಾದರೂ ಒಂದು ಮಾಡುತ್ತಿರುವವರು ವಿಜ್ಞಾನಿಗಳು ಮಾತ್ರ. ಅದರಲ್ಲೂ ಖಗೋಳಶಾಸ್ತ್ರಜ್ಞರು, ಖಭೌತಜ್ಞರು.

ಸಿಹಿ ಸುದ್ದಿ ಏನೆಂದರೆ ಭಾರತ ಮೂಲದ ಖಗೋಳ ವಿಜ್ಞಾನಿ ಶ್ರೀನಿವಾಸ ಆರ್.ಕುಲಕರ್ಣಿ ಅವರಿಗೆ ಲಂಡನ್ನಿನ ಪ್ರತಿಷ್ಠಿತ ‘ರಾಯಲ್ ಅಸ್ಟ್ರೋನಾಮಿಕಲ್ ಸೊಸೈಟಿ’ ಕೊಡುವ 2026ನೇ ಸಾಲಿನ ಚಿನ್ನದ ಪದಕ ದೊರೆತಿದೆ. ಈ ಪ್ರಶಸ್ತಿಗೆ 200 ವರ್ಷಗಳ ಇತಿಹಾಸ. ಆಲ್ಬರ್ಟ್ ಐನ್ʼಸ್ಟೈನ್, ಸ್ಟೀಫನ್ ಹಾಕಿಂಗ್ ಮತ್ತು ಎಡ್ವಿನ್ ಹಬಲ್ʼರಂತಹ ಮಹಾನ್ ವಿಜ್ಞಾನಿಗಳು ಇದನ್ನು ಈ ಹಿಂದೆ ಪಡೆದವರು ಎಂದರೆ ಸಾಕಲ್ಲ. ಈ ಶ್ರೀನಿವಾಸ ಕುಲಕರ್ಣಿಯವರು ನಮ್ಮ ಹುಬ್ಬಳ್ಳಿಯವರು.

ಇದನ್ನೂ ಓದಿ: Harish Kera Column: ಪಶ್ಚಿಮ ಘಟ್ಟಗಳ ʼಗಾಡ್‌ʼಗೀಳ್‌ ಇನ್ನು ನೆನಪು ಮಾತ್ರ

ಸುಧಾ ಮೂರ್ತಿ ಅವರ ಸಹೋದರ. ಕೆಲವು ತಿಂಗಳ ಹಿಂದೆ ವಿಶ್ವವಾಣಿ ಪತ್ರಿಕೆ ಹಾಗೂ ವಿಶ್ವವಾಣಿ ಟಿವಿ ವಾಹಿನಿಯು ಶ್ರೀನಿವಾಸ ಕುಲಕರ್ಣಿಯವರ ಸಂದರ್ಶನ ಮಾಡಿತ್ತು. ಆಗ ಅವರಿಗೆ ಖಗೋಳ ಶಾಸ್ತ್ರದಲ್ಲಿ ನೀಡಿದ ಕೊಡುಗೆಗಾಗಿ 2024ರ ಪ್ರತಿಷ್ಠಿತ ‘ಶಾ’ ಪ್ರಶಸ್ತಿ (Shaw Prize) ಸಂದಿತ್ತು. ಅದು ನೊಬೆಲ್ ಆಫ್ ದಿ ಈಸ್ಟ್ ಎಂದೇ ಖ್ಯಾತ.

ಕುಲಕರ್ಣಿಯವರು ಕ್ಯಾಲಿಫೋರ್ನಿಯಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್. ರಾಯಲ್ ಸೊಸೈಟಿ ಆಫ್ ಲಂಡನ್, ಅಮೆರಿಕದ ಹಾಗೂ ಭಾರತದ ವೈಜ್ಞಾನಿಕ ಅಕಾಡೆಮಿಗಳ ಸದಸ್ಯರೂ ಹೌದು. ಹುಟ್ಟಿದ್ದು ಭಾರತದಲ್ಲಿ, ನೆಲೆಸಿರುವುದು ಅಮೆರಿಕದಲ್ಲಿ, ಪಡೆದಿರುವುದು ಇಂಗ್ಲೆಂಡ್‌ನ ಪುರಸ್ಕಾರ. ವಿಜ್ಞಾನಿಗಳು, ಕಲಾವಿದರಷ್ಟೇ ಹೀಗೆ ಮನುಷ್ಯ ನಿರ್ಮಿತ ಸೀಮೆಗಳನ್ನು ಮೀರುತ್ತಾರೆ.

ಹುಬ್ಬಳ್ಳಿ ಸೆಂಟ್ರಲ್ ಸ್ಕೂಲ್, ಧಾರವಾಡ ಯೂನಿವರ್ಸಿಟಿಯಲ್ಲಿ ಓದಿ ಕಲಿತ ಶ್ರೀನಿವಾಸ್, ಬೆಂಗಳೂರಿನ ರಾಮನ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದ ವಿಜ್ಞಾನ ಪ್ರದರ್ಶನಕ್ಕೆ ಹೋಗಿ ಅಲ್ಲಿ ಖಗೋಳ ವಿಜ್ಞಾನವೇ ನನ್ನ ಕ್ಷೇತ್ರ ಎಂಬ ಪ್ರೇರಣೆ ಪಡೆದು, ನಂತರ ಬರ್ಕ್ಲಿಗೆ ಹೋಗಿ ರೇಡಿಯೋ ಆಸ್ಟ್ರೋನಮಿ ಅಧ್ಯಯನ ಮಾಡಿ, ಬ್ರಹ್ಮಾಂಡದ ಮೇಲೆ ಸದಾ ಕಾಲ ದೂರದರ್ಶಕಗಳ ಕಣ್ಣಿಟ್ಟು ನಾನಾ ಸಂಶೋಧನೆಗಳನ್ನು ಮಾಡಿ ನೊಬೆಲ್‌ಗೆ ಸಮಾನವಾದ ಪ್ರಶಸ್ತಿ ಪಡೆದದ್ದು ರೋಚಕ ಕತೆ.

ನಿಮ್ಮ ಜೀವನಕತೆ ಬರೆಯಿರಿ ಎಂದು ವಿಶ್ವವಾಣಿ ಹೇಳಿದಾಗ ಈ ವಿನಯವಂತ ಮನುಷ್ಯ ಹೇಳಿದ್ದಿಷ್ಟು-‘ಆತ್ಮಕತೆ ಬರೆಯುವ ಯೋಚನೆ ಇಲ್ಲ. ಐನ್‌ಸ್ಟೈನ್ ಅಂಥವರಾದರೆ ಬರೆಯಬೇಕು. ನಾನು ಅವರ ಸಾವಿರದ ಒಂದಂಶವೂ ಇಲ್ಲ’.

Prof.-Shrinivas-Kulkarni-̄-scaled ok

ಬ್ರಹ್ಮಾಂಡದಲ್ಲಿ ಕಂಡುಬರುವ ಕಂದು ಕುಬ್ಜಗಳ ( Brown Dwarfs) ಬಗ್ಗೆ ಕುಲಕರ್ಣಿಯವರ ಅಧ್ಯಯನ ಮಹತ್ವದ್ದು. ನಮ್ಮ ಸೂರ್ಯ, ಗುರು ಗ್ರಹ ಇವೆಲ್ಲ ಅನಿಲಗಳ ಮೊತ್ತ. ಸೂರ್ಯ ನೊಳಗೆ ಇರುವ ಜಲಜನಕ, ಹೀಲಿಯಂ ಮತ್ತಿತರ ಅನಿಲಗಳು ಗುರುವಿನೊಳಗೂ ಇವೆ. ಆದರೆ ಸೂರ್ಯನಿಂದ ಬೃಹತ್ ಶಕ್ತಿ ಹಾಗೂ ಬೆಳಕು ಹೊಮ್ಮುತ್ತದೆ. ಇದಕ್ಕೆ ಕಾರಣ, ಸೂರ್ಯನಲ್ಲಿ ನ್ಯೂಕ್ಲಿಯರ್ ಫ್ಯೂಶನ್ ಆಗಿ ಜಲಜನಕ ಹೀಲಿಯಂ ಆಗಿ ಪರಿವರ್ತನೆಯಾಗುತ್ತದೆ.

ಇದು ಶಕ್ತಿ ಹಾಗೂ ಬೆಳಕನ್ನು ಹೊಮ್ಮಿಸುತ್ತದೆ. ಆದರೆ ಗುರುವೆಂಬ ಅನಿಲದ ಉಂಡೆ ತಣ್ಣಗಾಗುತ್ತ ಹೊರಟಿದೆ. ಭಾರತೀಯ ಮೂಲದ ಶಿವಕುಮಾರ್ ಎಂಬ ಖಗೋಳಶಾಸ್ತ್ರಜ್ಞ ಒಂದು ಪ್ರಮೇಯ ಮಂಡಿಸಿದ್ದರು- ಸೂರ್ಯ ತನ್ನ ಗಾತ್ರದ ಹತ್ತನೇ ಒಂದರಷ್ಟು ಸಣ್ಣದಾದರೆ ಅದರ ಶಕ್ತಿ, ಬೆಳಕು ಅಷ್ಟು ಕಡಿಮೆಯಾಗುತ್ತದೆ. ಅದನ್ನು ಕಂದು ಕುಬ್ಜ ಎನ್ನಲಾಗುತ್ತದೆ.

ಇದು ಥಿಯರಿ ಆಗಿ ಇತ್ತು. ಶ್ರೀನಿವಾಸ ಅವರ ತಂಡ ಅಧ್ಯಯನದ ಮೂಲಕ 1995ರಲ್ಲಿ ಇದನ್ನು ನಿಜ ಎಂದು ತೋರಿಸಿತು. ಗುರು ಎಂದರೆ ಸೂರ್ಯನ ಸಾವಿರದ ಒಂದನೇ ಭಾಗ, ಕಂದು ಕುಬ್ಜ ಅಂದರೆ ಹತ್ತನೇ ಒಂದು ಭಾಗ. ನಕ್ಷತ್ರಗಳಲ್ಲಿ ವಿವಿಧ ಹಂತಗಳನ್ನು ನಿರೂಪಿಸಲು ಈ ಅಧ್ಯಯನ ನೆರವಾಯಿತು.

ನಕ್ಷತ್ರಗಳ ಅಂತಿಮಹಂತವಾದ ಸೂಪರ್ ನೋವಾಗಳ ಬಗೆಗೂ ಕುಲಕರ್ಣಿ ಅಧ್ಯಯನ ಮಾಡಿ ದ್ದಾರೆ. ಸೂರ್ಯನಿಗಿಂತ ಹತ್ತು ಪಟ್ಟು ಗಾತ್ರದ ನಕ್ಷತ್ರಗಳು ಅಷ್ಟೇ ಪ್ರಮಾಣದ ಶಕ್ತಿ ಉತ್ಪಾದಿಸು ತ್ತವೆ. ಆದರೆ ಅವುಗಳ ನ್ಯೂಕ್ಲಿಯರ್ ಫ್ಯೂಶನ್ ಆಗಿ ನ್ಯೂಟ್ರಾನ್ ಸ್ಟಾರ್ ಆಗುತ್ತದೆ. ನ್ಯೂಟ್ರಾನ್ ಸ್ಟಾರ್ ಅಂದರೆ ಅಲ್ಲಿ ಬರೀ ನ್ಯೂಟ್ರಾನ್ ಇರುತ್ತದೆ.

ಅದರ ತೂಕ ಸೂರ್ಯನಷ್ಟೇ ಇರಬಹುದು, ಆದರೆ ಗಾತ್ರ ಬೆಂಗಳೂರಿಗಿಂತ ಕಡಿಮೆ ಇರುತ್ತದೆ. ಅಂತಿಮವಾಗಿ ಇದು ಸ್ಫೋಟಿಸುವುದೇ ಸೂಪರ್ ನೋವಾ. ಇದು ನಕ್ಷತ್ರದ ಕೊನೆಯ ಹಂತ. ಸೂಪರ್‌ನೋವಾ ಅನ್ನು ಗುರುತಿಸುವುದು ಹೇಗೆಂದರೆ, ಭೂಮಿಯಿಂದ ದೂರದರ್ಶಕದ ಮೂಲಕ ಪ್ರತಿನಿತ್ಯ ಅವುಗಳ ಚಿತ್ರ ತೆಗೆಯುವುದು ಮತ್ತು ಅವುಗಳಲ್ಲಿ ಆಗುವ ಬದಲಾವಣೆ ಗುರುತಿಸುವುದು.

ಸ್ಫೋಟಗೊಂಡ ನಂತರದ ನಕ್ಷತ್ರ ಶತಕೋಟಿ ಪಟ್ಟು ಹೆಚ್ಚಿನ ಬೆಳಕು ಸೂಸುತ್ತದೆ. 2015ಕ್ಕೂ ಮೊದಲು ವಿಶ್ವದಲ್ಲಿ ವರ್ಷಕ್ಕೆ ನೂರು ಸೂಪರ್‌ನೋವಾ ಕಾಣಸಿಗುತ್ತಿತ್ತಂತೆ. ಈಗ ಪ್ರತಿರಾತ್ರಿ ಕನಿಷ್ಠ 10 ಕಾಣ ಸಿಗುತ್ತದಂತೆ. ಇನ್ನು ನಾವಿರುವ ನಕ್ಷತ್ರಪಥದಲ್ಲಿ (Galaxy) ಸುಮಾರು ನೂರು ವರ್ಷಕ್ಕೊಂದು ಸೂಪರ್‌ನೋವಾ ಸಂಭವಿಸಬಹುದು ಅಷ್ಟೆ.

ಈ ಸೂಪರ್‌ನೋವಾ ಸೂರ್ಯನಿಗೂ ಸಂಭವಿಸಬಹುದು ಎಂಬುದರಲ್ಲಿ ಅನುಮಾನವಿಲ್ಲ. ಹಾಗೆ ಆದರೆ ಅದನ್ನು ಸೌರವ್ಯೂಹದ ಕೊನೆ ಎನ್ನಬಹುದು. ಅದಕ್ಕೆ ಇನ್ನೂ ಐನೂರು ಕೋಟಿ ವರ್ಷ ಗಳಾಗಬಹುದು. ಆದರೆ ಅದಕ್ಕೂ ಮೊದಲೇ ನಮ್ಮ ಭೂಮಿ ಬೇರೆ ಬೇರೆ ಕಾರಣಗಳಿಗಾಗಿ ನಾಶ ಆಗುತ್ತದೆ. ಕ್ಷುದ್ರಗ್ರಹಗಳ ಡಿಕ್ಕಿಯಿಂದ ಇರಬಹುದು, ಡೈನೋಸಾರ್‌ಗಳ ನಾಶ ಆದದ್ದು ಹಾಗೆಯೇ. ಕ್ಷುದ್ರ ಗ್ರಹಗಳು ಯಾವಾಗ ಭೂಮಿಗೆ ಅಪ್ಪಳಿಸಬಹುದು ಎಂದು ತಿಳಿಯಲು ನೂರು ಶೇಕಡಾ ನಿಖರ ತಂತ್ರಜ್ಞಾನ ನಮಗಿನ್ನೂ ಲಭ್ಯವಾಗಿಲ್ಲ.

ಜಾಗತಿಕ ತಾಪಮಾನದಿಂದಲೋ, ಪರಮಾಣು ಬಾಂಬ್‌ಗಳ ಬಳಕೆಯಿಂದಲೋ ನಾಶವಾಗ ಬಹುದು- ಎನ್ನುತ್ತಾರೆ ಶ್ರೀನಿವಾಸ ಕುಲಕರ್ಣಿ. ಬಹುಶಃ ಅಣ್ವಸ್ತ್ರಶಕ್ತ ರಾಷ್ಟ್ರಗಳು ವರ್ತಿಸುತ್ತಿರುವ ರೀತಿ ನೋಡಿದರೆ ಭೂಗ್ರಹದ ನಾಶಕ್ಕೆ ಇನ್ನು ನೂರು ವರ್ಷ ಕೂಡ ಕಾಯಬೇಕಿಲ್ಲ ಅನಿಸುತ್ತದೆ.

ಶ್ರೀನಿವಾಸ ಕುಲಕರ್ಣಿ ಅವರು ಯಾವಾಗಲೂ ಬೃಹತ್ ದೂರದರ್ಶಕಗಳಲ್ಲಿ ಬ್ರಹ್ಮಾಂಡದತ್ತ ಕಣ್ಣು ನೆಟ್ಟು ಕೂತಿರುತ್ತಾರೆ. ಅಲ್ಲಿ ಉಂಟಾಗುವ ಸಣ್ಣಪುಟ್ಟ ಚಲನೆಗಳೂ ಬ್ರಹ್ಮಾಂಡದ ಮಹತ್ವದ ಬೆಳವಣಿಗೆಗಳನ್ನು ಸಂಕೇತಿಸಬಲ್ಲವು.

ಉದಾಹರಣೆಗೆ, ಏಲಿಯನ್ಗಳಿಂದ ಬರಬಹುದಾದ ರೇಡಿಯೋ ಸಿಗ್ನಲ್‌ಗಳ ಬಗೆಗೆ ಸೆಟಿ (ಸರ್ಚ್ ಫಾರ್ ಎಕ್ಸ್ಟ್ರಾ ಟೆರೆಸ್ಟ್ರಿಯಲ್ ಒಬ್ಜೆಕ್ಸ್) ಎಂಬ ಸಂಸ್ಥೆ ಅಧ್ಯಯನ ಮಾಡುತ್ತಿದೆ. ಈಗ ನಾವು ದೂರದಿಂದ ಭೂಮಿಯನ್ನು ನೋಡಿದರೆ ಇಲ್ಲಿ ವಿಶಿಷ್ಟ ಅನಿಲಗಳು ಇರುವುದನ್ನು ಹೇಳಬಹುದು- ಆಮ್ಲಜನಕ, ಜಲಜನಕ, ಮೀಥೇನ್ ಹೀಗೆ. ಇಂಥ ಕಾಂಬಿನೇಶನ್ ಜೀವ ಬದುಕುಳಿಯಲು ಅಗತ್ಯ.

‘ನನ್ನನ್ನೂ ಸೇರಿದಂತೆ ತುಂಬಾ ವಿಜ್ಞಾನಿಗಳು, ಇತರ ಗ್ರಹಗಳಲ್ಲಿ ಜೀವಿಗಳಿರಬಹುದು ಎಂಬು ದನ್ನು ನಂಬುತ್ತೇವೆ. ನಮ್ಮ ಗ್ಯಾಲಾಕ್ಸಿಯ ಇರಬಹುದು. ಆದರೆ ದೂರಪ್ರಯಾಣ ಅಸಾಧ್ಯವಾದ್ದ ರಿಂದ ಸಂಪರ್ಕಿಸಲು ಸಾಧ್ಯವಾಗಿಲ್ಲ. ನಮ್ಮ ಅತೀ ಹತ್ತಿರದ ನಕ್ಷತ್ರವೇ ನಮ್ಮಿಂದ ನಾಲ್ಕು ಬೆಳಕಿನ ವರ್ಷಗಳಷ್ಟು ದೂರವಿದೆ.

ಇನ್ನು ಜೀವಾಂಶ ಇರುವ ಹತ್ತಿರದ ಇನ್ನೊಂದು ಗ್ರಹ ನಮಗಿಂತ ಸಾವಿರ ಬೆಳಕಿನ ವರ್ಷ ದೂರ ವಿರಬಹುದು. ಆದರೆ ಅಷ್ಟು ವರ್ಷ ಭೂಮಿಯ ಮೇಲೆ ನಾವೇ ಇರುತ್ತೇವೋ ಇಲ್ಲವೋ ಹೇಳಲಾ ಗದು. ಇಂದಿಗೆ ಹತ್ತು ಸಾವಿರ ವರ್ಷಗಳ ಹಿಂದೆ ಮನುಷ್ಯರೇ ಈಗಿರುವಂತೆ ಇರಲಿಲ್ಲ’ ಎನ್ನುತ್ತಾರೆ.

ಭಾರತದಿಂದ ಕಲಿತು ಹೋದ ಕುಲಕರ್ಣಿ ಅವರಿಗೆ ಭಾರತಕ್ಕಾಗಿ ಏನಾದರೂ ಮಾಡಬೇಕೆಂಬ ಆಸೆ ಪ್ರಬಲವಾಗಿದೆ. ಇನೋಸಿಸ್ ಸೈನ್ಸ್ ಫೌಂಡೇಶನ್‌ನಲ್ಲೂ ಇವರಿದ್ದಾರೆ. 30 ಮೀಟರ್‌ನ ವಿಶ್ವದ ಬೃಹತ್ ಆಪ್ಟಿಕಲ್ ಟೆಲಿಸ್ಕೋಪ್ ಪ್ರಾಜೆಕ್ಟ್ ಹವಾಯಿಯಲ್ಲಿ ನಿರ್ಮಾಣವಾಗುತ್ತಿದೆ. ಅದರ ಸೂಕ್ಷ್ಮ ಬಿಡಿಭಾಗಗಳು ಬೆಂಗಳೂರಿನ ಹೊಸಕೋಟೆ ಬಳಿ ತಯಾರಾಗಿ ಹೋಗಬೇಕು.

2010ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರಕಾರ ಇದ್ದಾಗ ‘ಈ ವಿಷಯದಲ್ಲಿ ನಾವು ಅಮೆರಿಕ, ಚೀನಾ ಜಪಾನ್ ಗಿಂತ ಯಾವಾಗಲೂ ಹಿಂದೆ ಬೀಳುತ್ತೇವೆ. ರಿಸ್ಕ್ ತಗೊಂಡು ಮಾಡೋಣ’ ಎಂದು ಕುಲಕರ್ಣಿಯವರು ಸಿಂಗ್ ಮನವೊಲಿಸಿದ್ದರು. ಹೊಸಕೋಟೆಯಲ್ಲಿ ತಯಾರಿ ಕೆಲಸ ಮುಂದು ವರಿದಿದೆ. ಇದರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಜತೆಗೆ ಇನ್ನೂ 70 ಸಂಸ್ಥೆಗಳು ಸೇರಿಕೊಂಡಿವೆ. ‌

ಇದು ಪೂರ್ಣ ಕಾರ್ಯಸಾಧ್ಯವಾದಾಗ ಭಾರತದ್ದೇ ಸ್ವಂತ ಆಧುನಿಕ ಟೆಲಿಸ್ಕೋಪ್ ಅಧ್ಯಯನಕ್ಕೆ ಲಭ್ಯವಾಗುತ್ತದೆ. ಜಪಾನ್, ಅಮೆರಿಕ ಮೊದಲಾದ ರಾಷ್ಟ್ರಗಳಿಗೆ ಈ ವಲಯದಲ್ಲಿ ನಾವು ಆಗ ಸರಿಗಟ್ಟಬಹುದು. ಕುಲಕರ್ಣಿಯವರ ಪ್ರಕಾರ ಸರಕಾರಗಳು ಮೂಲವಿಜ್ಞಾನದ ಕಲಿಕೆಯನ್ನು ಆದ್ಯತೆಯಾಗಿ ತೆಗೆದುಕೊಳ್ಳಬೇಕು.

ಪ್ರಾಥಮಿಕ ಶಾಲೆಯಿಂದಲೇ ಖಗೋಳಶಾಸ್ತ್ರ ಕಲಿಸಬೇಕು. ಜಪಾನ್, ಕೊರಿಯಾ, ತೈವಾನ್‌ನಂಥ ಸಣ್ಣ ದೇಶಗಳು ಕೂಡ ತುಂಬಾ ವೇಗದಲ್ಲಿ ಈ ಕ್ಷೇತ್ರದಲ್ಲಿ ಮುಂದುವರಿಯುತ್ತಿವೆ. ನಮಗಿರುವ ಈ ಅಂತರವನ್ನು ಗುರುತಿಸಿ ಸರಿಪಡಿಸಿಕೊಳ್ಳಬೇಕು. 50 ವರ್ಷದ ಹಿಂದೆ ನಮಗೆ ನಮ್ಮದೇ ಸಂಪರ್ಕ ವ್ಯವಸ್ಥೆಗಾಗಿ ಹಾಗೂ ಕೃಷಿ ಸುಧಾರಣೆಗಾಗಿ ಉಪಗ್ರಹಗಳು ಬೇಕು ಅಂದಾಗ ಸರಕಾರ ದೃಢನಿಶ್ಚಯ ಮಾಡಿತು.

ಇಸ್ರೋ ಸಾಕಷ್ಟು ಕೆಲಸ ಮಾಡಿತು. ಅದು ರಾಕೆಟ್ ವ್ಯವಸ್ಥೆ, ಸಂಪರ್ಕ ಉಪಗ್ರಹ ವ್ಯವಸ್ಥೆ ಇದರಲ್ಲ ಉತ್ಕೃಷ್ಟತೆ ಸಾಧಿಸಿತು. ಪರಮಾಣು ಶಕ್ತಿಯ ಬಗ್ಗೆಯೂ ಹೀಗೇ ಆಯಿತು. ಆದರೆ ನಾವು ರಿಸರ್ಚ್‌ ನಲ್ಲಿ ಇನ್ನಷ್ಟು ಉತ್ಕೃಷ್ಟತೆ ಸಾಧಿಸಬೇಕಿದೆ ಅನ್ನುತ್ತಾರೆ.

ವಿಜ್ಞಾನಿಗಳಿಗೆ ಸ್ಪಷ್ಟವಾಗಿ ಗೊತ್ತಿದೆ- ಜಗತ್ತು ಸುಖವಾಗಿ, ನೆಮ್ಮದಿಯಾಗಿರಲು ವೈಜ್ಞಾನಿಕ ಮನೋಭಾವಕ್ಕಿಂತ ಬೇರೆ ಮಾರ್ಗವೇ ಇಲ್ಲ. ಅದಕ್ಕೆ ಎಲ್ಲ ದೇಶಗಳ ಸಹಕಾರ ಅಗತ್ಯ. ಉದಾ ಹರಣೆಗೆ, ನಾನಾ ದೇಶಗಳ ವಿeನಿಗಳ ಮಟ್ಟದಲ್ಲಿ ಸಹಕಾರ ಇರುವ ಕಾರಣಕ್ಕಾಗಿಯೇ ಅಂತಾ ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ಸರಿಯಾಗಿ ನಡೆಯುತ್ತಿದೆ.

ಅಲ್ಲಿ ಹಲವು ದೇಶಗಳ ಗಗನಯಾತ್ರಿಗಳು ಸಾಮರಸ್ಯದಿಂದ ಅಧ್ಯಯನಗಳಲ್ಲಿ ತೊಡಗಿಕೊಂಡಿ ದ್ದಾರೆ. ರಾಜಕಾರಣಿಗಳಿಗೇ ಬಿಟ್ಟಿದ್ದರೆ ಅದೂ ನೂರು ಚೂರುಗಳಾಗಿರುತ್ತಿತ್ತು. ಕುಲಕರ್ಣಿಯವರಂಥ ವಿಜ್ಞಾನಿಗಳು ಸಾವಿರಾರು ವರ್ಷ ಹೆಣಗಾಡಿ ಕಟ್ಟಿಕೊಂಡ ವಿಜ್ಞಾನದ ಶಿಖರಗಳನ್ನು ಟ್ರಂಪ್, ಪುಟಿನ್, ಕ್ಸಿಯಂಥ ಮೂರ್ಖ ಸರ್ವಾಧಿಕಾರಿಗಳು ಕ್ಷಣಾರ್ಧದಲ್ಲಿ ಸರ್ವನಾಶ ಮಾಡಬಲ್ಲರು. ಅಕ್ಷರಸ್ಥರಂತೆ ಕಂಡರೂ ಒಳಗೊಳಗೇ ಮೆದುಳು ಕೊಳೆತ ಇವರು ಹಾಳು ಗೆಡವಿದ್ದನ್ನೆಲ್ಲ ಮರಳಿ ಕಟ್ಟಲು ಮತ್ತೆ ಸಹಸ್ರಮಾನಗಳೇ ಬೇಕಾದೀತು.

ಹರೀಶ್‌ ಕೇರ

View all posts by this author