ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಭಾರತದ ಚರಿತ್ರೆಯ ಮಹಾ ತಿರುವಿನ ತಾಣದಲ್ಲಿ ನಿಂತಾಗ..!

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಭಾರತಕ್ಕೆ ಬಂದಾಗ ಅದರ ಪ್ರಾಥಮಿಕ ಉದ್ದೇಶ ಕೇವಲ ‘ವ್ಯಾಪಾರ’ವಾಗಿತ್ತು. ಆದರೆ, ಹದಿನೆಂಟನೇ ಶತಮಾನದ ಬಂಗಾಳದ ರಾಜಕೀಯ ಅಸ್ಥಿರತೆಯು ಅವರಲ್ಲಿ ಆಡಳಿತದ ಆಸೆಯನ್ನು ಚಿಗುರಿಸಿತು. ಸಿರಾಜ್-ಉದ್-ದೌಲನ ಆಪ್ತ ವಲಯದಲ್ಲಿ ಉಂಟಾದ ಬಿರುಕನ್ನು ಬ್ರಿಟಿಷರು ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಳ್ಳಲು ಹೊಂಚು ಹಾಕಿತು.

ನೂರೆಂಟು ವಿಶ್ವ

ಬೆಂಗಳೂರಿನಿಂದ ಎರಡೂವರೆ ತಾಸು ವಿಮಾನ ಪ್ರಯಾಣ ಮಾಡಿ ಕೋಲ್ಕತಾದಲ್ಲಿ ಇಳಿದು, ಅಲ್ಲಿಂದ ರಸ್ತೆ ಮಾರ್ಗವಾಗಿ ಸುಮಾರು ಮೂರೂವರೆ ಗಂಟೆ ಪ್ರಯಾಣ ಮಾಡಿ ದಾಗ, ಭಾರತ ಇತಿಹಾಸವನ್ನು ಬದಲಿಸಿದ ಒಂದು ಐತಿಹಾಸಿಕ ತಾಣದಲ್ಲಿದೆ. ಅಲ್ಲಿನ ಗಾಳಿಯಲ್ಲಿ ಈಗ ಯುದ್ಧದ ಕಿರುಚಾಟವಿಲ್ಲ, ಬದಲಿಗೆ ಮಾವಿನ ತೋಪುಗಳ ನಡುವೆ ಹಳೆ ನೆನಪಿನ ಘಮವಷ್ಟೇ ಬಾಕಿ ಉಳಿದಿದೆ.

ನಾನು ಹೈಸ್ಕೂಲಿನಲ್ಲಿದ್ದಾಗ ಕೇಳಿದ, ಓದಿದ ಹೆಸರದು. ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಭದ್ರವಾಗಿ ನೆಲೆಯೂರಲು ನಾಂದಿ ಹಾಕಿದ ಕದನಕ್ಕೆ ಸಾಕ್ಷಿಯಾದ ಊರು ಅದು. ಭಾಗೀರಥಿ ನದಿಯ ದಂಡೆಯ ಮೇಲಿರುವ ಈ ಊರು, ಇಂದು ಮಂಪರು ನಿದ್ದೆಯಲ್ಲಿರುವ ಹಳ್ಳಿ ಯಂತೆ ಕಂಡರೂ, ಅದು ಅಂದು ಇಡೀ ದೇಶದ ಹಣೆಬರಹವನ್ನು ಬದಲಿಸಿದ ಕದನಕ್ಕೆ ಸಾಕ್ಷಿಯಾಗಿತ್ತು.

ಅಲ್ಲಿನ ಪಲಾಶ ಹೂಗಳು ಈಗಲೂ ಅಷ್ಟೇ ಕೆಂಪಾಗಿ ಅರಳಿ ನಿಂತಿವೆ. ಬಹುಶಃ ಅಂದು ಹರಿದ ಸೈನಿಕರ ರಕ್ತದ ಬಣ್ಣವನ್ನೇ ಈ ಮಣ್ಣು ಹೀರಿಕೊಂಡು ಇಂದಿಗೂ ಕಾಪಾಡಿ ಕೊಂಡಿದೆಯೇನೋ ಎಂಬ ಗುಮಾನಿ ಕಾಡುತ್ತದೆ. ಭಾರತದ ಇತಿಹಾಸದ ಗತಿಯನ್ನೇ ಬದಲಿಸಿದ, ದೇಶದ ಚರಿತ್ರೆಯಲ್ಲಿ ಬಹುಚರ್ಚಿತವಾದ ಊರಿನಲ್ಲಿ ಇದ್ದೇನೆ ಎಂದು ನನ್ನನ್ನೇ ನಂಬಿಸಿಕೊಳ್ಳಲು ತುಸು ಸಮಯ ಹಿಡಿಯಿತು.

ಪ್ಲಾಸಿ! ಇಂದಿಗೂ ಸ್ಥಳೀಯರ ಬಾಯಲ್ಲಿ ‘ಪಲಾಸಿ’ ಎಂದೇ ಕರೆಯಿಸಿಕೊಳ್ಳುವ ಈ ಊರು 269 ವರ್ಷಗಳ ಹಿಂದೆ, ಒಂದು ಭೀಕರ ಕದನ (ಪ್ಲಾಸಿ ಕದನವೆಂದೇ ಕುಖ್ಯಾತ)ಕ್ಕೆ ಮೂಕ ಸಾಕ್ಷಿಯಾಗಿತ್ತು. ಅಂದು ಈ ಕದನದಲ್ಲಿ ಬ್ರಿಟಿಷರು ಸೋತಿದ್ದರೆ ಈ ದೇಶದ ನಕ್ಷೆ ಹೇಗಿರು ತ್ತಿತ್ತು ಎಂದು ಯೋಚಿಸುವುದು, ತಪ್ಪಿಹೋದ ರೈಲನ್ನು ನೆನಪಿಸಿಕೊಂಡು ಪ್ಲಾಟ್ ಫಾರ್ಮ್ ಮೇಲೆ ಸುಮ್ಮನೆ ಕೂತ ಹಾಗೆ. ಆದರೆ ಅಂದು ಆಗಿದ್ದೇ ಬೇರೆ.

ಇದನ್ನೂ ಓದಿ: Vishweshwar Bhat Column: ಬಿಗ್ ಮ್ಯಾಕ್ ಇಂಡೆಕ್ಸ್ ಎಂದರೇನು?

ಔರಂಗಜೇಬನ ಮರಣದ (1707ರಲ್ಲಿ) ನಂತರ ಮೊಘಲ್ ಸಾಮ್ರಾಜ್ಯವು ಕ್ಷೀಣಿಸತೊಡ ಗಿತು. ಕೇಂದ್ರ ಆಡಳಿತ ದುರ್ಬಲವಾದಂತೆ, ದೂರದ ಪ್ರಾಂತ್ಯಗಳ ಸುಬೇದಾರರು ಸ್ವತಂತ್ರ ರಾಗತೊಡಗಿದರು. ಬಂಗಾಳವು ಭಾರತದ ಅತ್ಯಂತ ಶ್ರೀಮಂತ ಪ್ರಾಂತ್ಯವಾಗಿತ್ತು,

ಅಲ್ಲಿ ನವಾಬರ ಆಳ್ವಿಕೆ ಆರಂಭವಾಗಿತ್ತು. ಮುರ್ಷಿದ್ ಕುಲಿ ಖಾನ್‌ನಿಂದ ಆರಂಭವಾಗಿ ಅಲಿವರ್ದಿ ಖಾನ್‌ವರೆಗೆ ಬಂಗಾಳವು ಸಮೃದ್ಧವಾಗಿತ್ತು. ಅಲಿವರ್ದಿ ಖಾನ್ ಒಬ್ಬ ದಕ್ಷ ಆಡಳಿತಗಾರನಾಗಿದ್ದ. ಅವನು ಯುರೋಪಿಯನ್ ವ್ಯಾಪಾರಿಗಳ (ಬ್ರಿಟಿಷ್ ಮತ್ತು ಫ್ರೆಂಚ್) ಬಗ್ಗೆ ಜಾಗರೂಕನಾಗಿದ್ದ.

ಅವನು ಅವರನ್ನು ‘ಜೇನುಗೂಡಿನ ಜೇನ್ನೊಣ’ಗಳಿಗೆ ಹೋಲಿಸುತ್ತಿದ್ದ -‘ಅವುಗಳನ್ನು ಕೆಣಕದಿದ್ದರೆ ಜೇನು ತುಪ್ಪ ಕೊಡುತ್ತವೆ, ಕೆಣಕಿದರೆ ಕಚ್ಚಿ ಸಾಯಿಸುತ್ತವೆ’ ಎಂದು ಹೇಳುತ್ತಿದ್ದ.

1756ರಲ್ಲಿ ಅಲಿವರ್ದಿ ಖಾನ್ ಮರಣ ಹೊಂದಿದಾಗ, ಅವನ ಮೊಮ್ಮಗ ಸಿರಾಜ್-ಉದ್-ದೌಲ ನವಾಬನಾದ. ಅತಿ ಮುಂಗೋಪಿಯಾಗಿದ್ದ ಸಿರಾಜ್‌ನ ಅಧಿಕಾರ ಸ್ವೀಕಾರವು ಸುಗಮ ವಾಗಿರಲಿಲ್ಲ. ಉತ್ತರಾಧಿಕಾರದ ವಿವಾದವು ಬ್ರಿಟಿಷರಿಗೆ ಭಾರತದ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಲು ಸುಸಂದರ್ಭವನ್ನು ಒದಗಿಸಿಕೊಟ್ಟಿತು.

Bhat

ಅಲಿವರ್ದಿ ಖಾನ್‌ಗೆ ಮೂವರು ಹೆಣ್ಣು ಮಕ್ಕಳಿದ್ದರು, ಗಂಡು ಮಕ್ಕಳಿರಲಿಲ್ಲ. ಇವರಲ್ಲಿ ಕಿರಿಯ ಮಗಳ ಮಗನಾದ ಸಿರಾಜ್-ಉದ್-ದೌಲನನ್ನು ಅಲಿವರ್ದಿ ಖಾನ್ ತನ್ನ ಉತ್ತರಾಧಿ ಕಾರಿಯನ್ನಾಗಿ ಘೋಷಿಸಿದ್ದ. ಆದರೆ ಇದು ಕುಟುಂಬದ ಇತರ ಸದಸ್ಯರಲ್ಲಿ ತೀವ್ರ ಅಸಮಾ ಧಾನ ಮೂಡಿಸಿತು. ಅಲಿವರ್ದಿ ಖಾನ್‌ನ ಹಿರಿಯ ಮಗಳಾದ ಘಸೇಟಿ ಬೇಗಂ ಅತ್ಯಂತ ಮಹತ್ವಾಕಾಂಕ್ಷಿಯಾಗಿದ್ದಳು. ಸಿರಾಜ್ ನವಾಬನಾಗುವುದನ್ನು ಅವಳು ಸಹಿಸಲಿಲ್ಲ. ಅವಳು ತನ್ನ ಮಗನಾದ ಮುರಾದ್-ಉದ್-ದೌಲನನ್ನು ಸಿಂಹಾಸನದ ಮೇಲೆ ಕೂರಿಸಲು ಬಯಸಿದ್ದಳು.

ಸೋದರಸಂಬಂಧಿ ಶೌಕತ್ ಜಂಗ್ ಪೂರ್ಣಿಯಾದ ಗವರ್ನರ್ ಆಗಿದ್ದ. ಈತ ತಾನೇ ಬಂಗಾಳದ ನಿಜವಾದ ವಾರಸುದಾರ ಎಂದು ಪ್ರತಿಪಾದಿಸಿ ಸಿರಾಜ್ ವಿರುದ್ಧ ದಂಗೆ ಎದ್ದಿದ್ದ. ಈ ಆಂತರಿಕ ವಿರೋಧಿಗಳು ನವಾಬನ ಆಸ್ಥಾನದ ಪ್ರಮುಖ ಅಧಿಕಾರಿಗಳಾದ ರಾಜ್‌ ಬಲ್ಲಬ್‌ನ ಮತ್ತು ಜಗತ್ ಸೇಠ್‌ರ ಬೆಂಬಲವನ್ನು ಪಡೆದಿದ್ದರು. ಶೌಕತ್ ಜಂಗ್ ಮತ್ತು ಘಸೇಟಿ ಬೇಗಂ, ಸಿರಾಜ-ಉದ್-ದೌಲನ ವಿರುದ್ಧ ಸಂಚು ರೂಪಿಸುತ್ತಿದ್ದರು. ಈ ಆಂತರಿಕ ಕಲಹವನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ತನ್ನ ಲಾಭಕ್ಕೆ ಬಳಸಿಕೊಳ್ಳಲು ಮುಂದಾಯಿತು.

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಭಾರತಕ್ಕೆ ಬಂದಾಗ ಅದರ ಪ್ರಾಥಮಿಕ ಉದ್ದೇಶ ಕೇವಲ ‘ವ್ಯಾಪಾರ’ವಾಗಿತ್ತು. ಆದರೆ, ಹದಿನೆಂಟನೇ ಶತಮಾನದ ಬಂಗಾಳದ ರಾಜಕೀಯ ಅಸ್ಥಿರತೆಯು ಅವರಲ್ಲಿ ಆಡಳಿತದ ಆಸೆಯನ್ನು ಚಿಗುರಿಸಿತು. ಸಿರಾಜ್-ಉದ್-ದೌಲನ ಆಪ್ತವಲಯದಲ್ಲಿ ಉಂಟಾದ ಬಿರುಕನ್ನು ಬ್ರಿಟಿಷರು ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಳ್ಳಲು ಹೊಂಚು ಹಾಕಿತು.

ನವಾಬನ ಆಸ್ಥಾನದ ರಹಸ್ಯಗಳನ್ನು ತಿಳಿಯಲು ಅವರು ಈ ಕೌಟುಂಬಿಕ ಕಲಹವನ್ನು ಕಿಟಕಿಯನ್ನಾಗಿ ಮಾಡಿಕೊಂಡರು. ಬಂಗಾಳದ ಶ್ರೀಮಂತ ವ್ಯಾಪಾರಿಗಳಾದ ಜಗತ್ ಸೇಠ್ ಮತ್ತು ಅಧಿಕಾರಿಗಳಾದ ರಾಜ್‌ಬಲ್ಲಭ್‌ಗೆ ಸಿರಾಜ್‌ನ ಕಠಿಣ ಧೋರಣೆಗಳು ಇಷ್ಟವಿರಲಿಲ್ಲ.

ಬ್ರಿಟಿಷರು ಈ ಶ್ರೀಮಂತರೊಂದಿಗೆ ಸ್ನೇಹ ಬೆಳೆಸಿದರು. ನವಾಬನ ಆಸ್ಥಾನದಲ್ಲಿ ಯಾರು ಅತೃಪ್ತರಾಗಿದ್ದಾರೆ ಎಂಬುದನ್ನು ಪಟ್ಟಿ ಮಾಡಿ, ಅವರಿಗೆ ಆಮಿಷಗಳನ್ನು ಒಡ್ಡಿದರು. ಘಸೇಟಿ ಬೇಗಂನ ಆಪ್ತನಾದ ರಾಜ್‌ಬಲ್ಲಭ್‌ನ ಮಗ ಕೃಷ್ಣದತ್ತನು ಭಾರೀ ಪ್ರಮಾಣದ ಹಣದೊಂದಿಗೆ ಬ್ರಿಟಿಷರ ಬಳಿ ಆಶ್ರಯ ಪಡೆದಾಗ, ಸಿರಾಜ್ ಅವನನ್ನು ಹಿಂತಿರುಗಿಸುವಂತೆ ಆದೇಶಿಸಿದ. ಆದರೆ ಬ್ರಿಟಿಷರು ಈ ಆದೇಶವನ್ನು ತಿರಸ್ಕರಿಸುವ ಮೂಲಕ ನವಾಬನಿಗೆ ನೇರ ಸವಾಲು ಹಾಕಿದರು.

ಯುವಕನಾಗಿದ್ದ ಸಿರಾಜ್-ಉದ್-ದೌಲನಿಗೆ ಅನುಭವದ ಕೊರತೆಯಿದ್ದರೂ, ಸ್ವಾಭಿಮಾನ ಮತ್ತು ಧೈರ್ಯ ಹೆಚ್ಚಿತ್ತು. ಬ್ರಿಟಿಷರು ತನ್ನ ಶತ್ರುಗಳಾದ ಘಸೇಟಿ ಬೇಗಂ ಮತ್ತು ಶೌಕತ್ ಜಂಗ್‌ಗೆ ಸಹಾಯ ಮಾಡುತ್ತಿರುವುದು ತನ್ನ ಸಾರ್ವಭೌಮತ್ವಕ್ಕೆ ಮಾಡಿದ ಅವಮಾನ ಎಂದು ಆತ ಭಾವಿಸಿದ. ತನ್ನ ಕುಟುಂಬ ಸದಸ್ಯರು ತನ್ನ ವಿರುದ್ಧ ಕಾರಸ್ಥಾನ ಮಾಡುವು ದನ್ನು ನೋಡಿ ಆತ ಸುಮ್ಮನೆ ಕೈಕಟ್ಟಿ ಕೂರುವುದು ಸಾಧ್ಯವೇ ಇರಲಿಲ್ಲ.

ದೊಡ್ಡಮ್ಮ ಘಸೇಟಿ ಬೇಗಂಳನ್ನು ಗೃಹಬಂಧನದಲ್ಲಿಟ್ಟ. ಅವಳ ಸಂಪತ್ತನ್ನು ವಶಪಡಿಸಿ ಕೊಂಡು ಅವಳ ರಾಜಕೀಯ ಶಕ್ತಿಯನ್ನು ಕುಂದಿಸಿದ. 756ರ ಅಕ್ಟೋಬರ್‌ನಲ್ಲಿ ನಡೆದ ‘ಮಣಿಹಾರಿ’ ಕದನದಲ್ಲಿ ಶೌಕತ್ ಜಂಗ್‌ನನ್ನು ಕೊಲ್ಲುವ ಮೂಲಕ ತನ್ನ ಆಂತರಿಕ ವಿರೋಧಿಯನ್ನು ಹತ್ತಿಕ್ಕಿದ.

ಈ ಮಧ್ಯೆ, ಬ್ರಿಟಿಷರಿಗೆ ಬಂಗಾಳದಲ್ಲಿ ತೆರಿಗೆ ರಹಿತ ವ್ಯಾಪಾರ ಮಾಡಲು ‘ದಸ್ತಕ್’ (ಪರವಾನಗಿ) ನೀಡಲಾಗಿತ್ತು. ಆದರೆ, ಕಂಪನಿಯ ಅಧಿಕಾರಿಗಳು ಈ ದಸ್ತಕ್‌ಗಳನ್ನು ತಮ್ಮ ವೈಯಕ್ತಿಕ ವ್ಯಾಪಾರಕ್ಕೂ ಬಳಸಲಾರಂಭಿಸಿದರು. ಇದರಿಂದ ಬಂಗಾಳದ ಸರಕಾರಕ್ಕೆ ಬರಬೇಕಿದ್ದ ಕಂದಾಯದಲ್ಲಿ ಭಾರಿ ಇಳಿಕೆಯಾಯಿತು.

ಸ್ಥಳೀಯ ವ್ಯಾಪಾರಿಗಳು ತೆರಿಗೆ ಕಟ್ಟುತ್ತಿದ್ದರು, ಆದರೆ ಬ್ರಿಟಿಷರು ಉಚಿತವಾಗಿ ವ್ಯಾಪಾರ ಮಾಡುತ್ತಿದ್ದರು. ಇದನ್ನು ಸಿರಾಜ್-ಉದ್-ದೌಲ ಕಟ್ಟುನಿಟ್ಟಾಗಿ ವಿರೋಧಿಸಿದ. ಇದು ಕಂಪನಿ ಮತ್ತು ನವಾಬನ ನಡುವಿನ ಮೊದಲ ಸಂಘರ್ಷಕ್ಕೆ ಕಾರಣವಾಗಿತ್ತು. ಈ ಸಮಯ ದಲ್ಲಿ ಯುರೋಪಿನಲ್ಲಿ ಬ್ರಿಟಿಷರು ಮತ್ತು ಫ್ರೆಂಚರ ನಡುವೆ ‘ಸಪ್ತವಾರ್ಷಿಕ ಯುದ್ಧ’ ಆರಂಭವಾಗಿತ್ತು.

ಅದರ ಪ್ರಭಾವದಿಂದ ಭಾರತದಲ್ಲೂ ಇವರು ಯುದ್ಧಕ್ಕೆ ಸಿದ್ಧತೆ ನಡೆಸಿದರು. ಬ್ರಿಟಿಷರು ತಮ್ಮ ವ್ಯಾಪಾರ ಕೇಂದ್ರವಾದ ಕೋಲ್ಕತಾದ ಪೋರ್ಟ್ ವಿಲಿಯಂ ಕೋಟೆಯನ್ನು ಬಲಪಡಿಸಲು ಮತ್ತು ಸುತ್ತಲೂ ಕಂದಕಗಳನ್ನು ತೋಡಲು ಆರಂಭಿಸಿದರು.

ಇದನ್ನು ಗಮನಿಸಿದ ಸಿರಾಜ್, ತನ್ನ ಅನುಮತಿಯಿಲ್ಲದೇ ತನ್ನ ರಾಜ್ಯದಲ್ಲಿ ಕೋಟೆ ಕಟ್ಟುವುದು ಸಾರ್ವಭೌಮತ್ವಕ್ಕೆ ಧಕ್ಕೆ ಎಂದು ಭಾವಿಸಿ, ಕೋಟೆ ನಿರ್ಮಾಣ ನಿಲ್ಲಿಸಲು ಆದೇಶಿಸಿದನು. ಫ್ರೆಂಚರು ಒಪ್ಪಿದರು, ಆದರೆ ಬ್ರಿಟಿಷರು ನವಾಬನ ಆಜ್ಞೆಯನ್ನು ಧಿಕ್ಕರಿಸಿ ದರು.

ಬ್ರಿಟಿಷರ ಅಹಂಕಾರದಿಂದ ಕೆರಳಿದ ಸಿರಾಜ್-ಉದ್-ದೌಲ್, 1756ರ ಜೂನ್‌ನಲ್ಲಿ ಕೋಲ್ಕತಾದ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡ. ನವಾಬ 146 ಬ್ರಿಟಿಷ್ ಕೈದಿಗಳನ್ನು ಒಂದು ಸಣ್ಣ, ಕಿಟಕಿಗಳಿಲ್ಲದ ಕೋಣೆಯಲ್ಲಿ ಬಂಧಿಸಿದ್ದ. ಮರುದಿನ ಬೆಳಗ್ಗೆ ಉಸಿರುಗಟ್ಟಿ 123 ಜನರು ಸಾವನ್ನಪ್ಪಿದ್ದರು. ಈ ಘಟನೆಯು ಬ್ರಿಟಿಷರಲ್ಲಿ ಆಕ್ರೋಶ ವನ್ನುಂಟು ಮಾಡಿತು. ‌

ಕೋಲ್ಕತಾದ ಸೋಲಿನ ಸುದ್ದಿಯನ್ನು ಕೇಳಿದ ಬ್ರಿಟಿಷರು ಮದ್ರಾಸ್‌ನಿಂದ ರಾಬರ್ಟ್ ಕ್ಲೈವ್ ಮತ್ತು ಅಡ್ಮಿರಲ್ ವ್ಯಾಟ್ಸನ್ ನೇತೃತ್ವದಲ್ಲಿ ಸೈನ್ಯವನ್ನು ಕಳುಹಿಸಿದರು. ಕ್ಲೈವ್ ಕೋಲ್ಕತಾವನ್ನು ಮರುವಶಪಡಿಸಿಕೊಂಡ. ಅನಿವಾರ್ಯವಾಗಿ ಸಿರಾಜ್ 1757ರ ಫೆಬ್ರವರಿ ಯಲ್ಲಿ ‘ಅಲಿ ನಗರ ಒಪ್ಪಂದ’ಕ್ಕೆ ಸಹಿ ಹಾಕಬೇಕಾಯಿತು.

ಈ ಒಪ್ಪಂದದ ಪ್ರಕಾರ ಬ್ರಿಟಿಷರಿಗೆ ಮೊದಲಿನ ಎಲ್ಲ ಸವಲತ್ತುಗಳನ್ನು ನೀಡಲಾಯಿತು. ಆದರೆ ಇದು ಯುದ್ಧದ ಅಂತ್ಯವಾಗಿರಲಿಲ್ಲ, ಕೇವಲ ವಿಶ್ರಾಂತಿಯಾಗಿತ್ತು. ಸಿರಾಜ-ಉದ್-ದೌಲನನ್ನು ನೇರ ಯುದ್ಧದಲ್ಲಿ ಸೋಲಿಸುವುದು ಕಷ್ಟವೆಂದು ಅರಿತ ಕ್ಲೈವ್, ಸ್ಕೆಚ್ ಹಾಕಲಾರಂಭಿಸಿದ. ಆತ ಒಬ್ಬ ಚಾಣಾಕ್ಷ ಅಧಿಕಾರಿಯಾಗಿದ್ದ.

ಸಿರಾಜ್‌ನ ಬಳಿ 50000ಕ್ಕೂ ಹೆಚ್ಚು ಸೈನಿಕರಿದ್ದಾರೆ ಮತ್ತು ತಮ್ಮ ಬಳಿ ಕೇವಲ 3000 ಸೈನಿಕರಿದ್ದಾರೆ ಎಂದು ತಿಳಿದಿದ್ದ ಕ್ಲೈವ್, ಯುದ್ಧದ ಮೈದಾನಕ್ಕಿಳಿಯುವ ಮುನ್ನವೇ ನವಾಬನ ಆಸ್ಥಾನವನ್ನು ಒಳಗಿನಿಂದಲೇ ಟೊಳ್ಳು ಮಾಡಲು ನಿರ್ಧರಿಸಿದ.

ಮೀರ್ ಜಾಫರ್ ಸಿರಾಜ್‌ನ ಮುಖ್ಯ ಸೇನಾಪತಿಯಾಗಿದ್ದ. ಅವನಿಗೆ ಬಂಗಾಳದ ನವಾಬ ನಾಗಬೇಕೆಂಬ ಆಸೆಯಿತ್ತು. ಕ್ಲೈವ್ ಈ ದೌರ್ಬಲ್ಯವನ್ನು ಬಳಸಿಕೊಂಡ. ಆತನ ತಲೆಯಲ್ಲಿ ‘ಬಂಗಾಳದ ನವಾಬಗಿರಿ’ ಹುಳಬಿಟ್ಟ. ಯುದ್ಧದ ಸಮಯದಲ್ಲಿ ನೀನು ನಿಮ್ಮ ಸೈನ್ಯ ದೊಂದಿಗೆ ತಟಸ್ಥವಾಗಿ ಉಳಿಯಬೇಕು ಮತ್ತು ಬ್ರಿಟಿಷರಿಗೆ ಬೆಂಬಲ ನೀಡಬೇಕು. ಇದಕ್ಕೆ ಬಹುಮಾನವಾಗಿ ಸಿರಾಜ್‌ನ ಪತನದ ನಂತರ ನಾವು ನಿನ್ನನ್ನು ಬಂಗಾಳದ ನವಾಬ ನನ್ನಾಗಿ ಮಾಡುತ್ತೇವೆ ಎಂಬ ಭರವಸೆಯನ್ನು ಮೀರ್ ಜಾಫರ್‌ಗೆ ಕ್ಲೈವ್ ನೀಡಿದ.

ಅಮಿಚಂದ್ ಎಂಬ ಶ್ರೀಮಂತ ವ್ಯಾಪಾರಿ, ಬ್ರಿಟಿಷರು ಮತ್ತು ನವಾಬನ ಆಸ್ಥಾನದ ಸಂಚುಕೋರರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಿದ. ಈ ಸಂಚು ಯಶಸ್ವಿ ಯಾದರೆ ತನಗೆ ಭಾರಿ ಮೊತ್ತದ ಹಣ ಬೇಕೆಂದು ಅಮಿಚಂದ್ ಬೇಡಿಕೆಯಿಟ್ಟಿದ್ದ. ಆದರೆ ಕ್ಲೈವ್ ಅವನನ್ನೂ ವಂಚಿಸಿದ. ಕ್ಲೈವ್ ಎರಡು ಒಪ್ಪಂದ ಪತ್ರಗಳನ್ನು ತಯಾರಿಸಿದ -ಒಂದು ಅಸಲಿ (ಬಿಳಿ ಪತ್ರ) ಮತ್ತು ಇನ್ನೊಂದು ನಕಲಿ (ಕೆಂಪು ಪತ್ರ). ನಕಲಿ ಪತ್ರದಲ್ಲಿ ಅಮಿಚಂದ್‌ಗೆ ಹಣ ಕೊಡುವುದಾಗಿ ಬರೆದು ಅವನನ್ನು ನಂಬಿಸಿ ಸಂಚಿನಲ್ಲಿ ಭಾಗಿಯಾಗು ವಂತೆ ಮಾಡಿದ.

ರಾಯ್ ದುರ್ಲಭ್ ನವಾಬನ ಸೈನ್ಯದ ಒಂದು ದೊಡ್ಡ ವಿಭಾಗದ ಕಮಾಂಡರ್ ಆಗಿದ್ದ. ಇವನೂ ಕೂಡ ಮೀರ್ ಜಾಫರ್ ಮತ್ತು ಜಗತ್ ಸೇಠ್‌ರ ಗುಂಪಿಗೆ ಸೇರಿಕೊಂಡಿದ್ದ. ಯುದ್ಧದ ಸಮಯದಲ್ಲಿ ಇವನು ಸಹ ತನ್ನ ಸೈನಿಕರಿಗೆ ಯುದ್ಧ ಮಾಡದಂತೆ ತಡೆದ. ಇದು ಸಿರಾಜ್‌ನನ್ನು ಅಸಹಾಯಕನನ್ನಾಗಿ ಮಾಡಿತು.

ಕ್ಲೈವ್ ರೂಪಿಸಿದ ಈ ಕುತಂತ್ರವು ಯುದ್ಧ ಆರಂಭವಾಗುವ ಮೊದಲೇ ಬ್ರಿಟಿಷರ ಜಯ ವನ್ನು ಖಚಿತಪಡಿಸಿತ್ತು. ಜೂನ್ 23, 1757ರಂದು ಪ್ಲಾಸಿಯ ಮೈದಾನದಲ್ಲಿ ಯುದ್ಧ ಆರಂಭವಾಯಿತು. ಒಂದು ಕಡೆ ನವಾಬನ 50000 ಸೈನಿಕರ ಬೃಹತ್ ಸೈನ್ಯವಿದ್ದರೆ, ಇನ್ನೊಂದು ಕಡೆ ರಾಬರ್ಟ್ ಕ್ಲೈವ್ ನೇತೃತ್ವದ ಕೇವಲ 3000 ಬ್ರಿಟಿಷ್ ಸೈನಿಕರಿದ್ದರು.

ಮೀರ್ ಜಾಫರ್ ಒಳಒಪ್ಪಂದದಂತೆ ಬ್ರಿಟಿಷರೊಂದಿಗೆ ಕೈಜೋಡಿಸಿದ. ಯುದ್ಧದ ಮಧ್ಯೆ ಹಠಾತ್ ಮಳೆ ಸುರಿಯಿತು. ಬ್ರಿಟಿಷರು ತಮ್ಮ ಮದ್ದುಗುಂಡುಗಳನ್ನು ಟಾರ್ಪಾಲಿನ್ ಬಳಸಿ ಸುರಕ್ಷಿತವಾಗಿರಿಸಿದ್ದರು. ಆದರೆ ನವಾಬನ ಮದ್ದುಗುಂಡುಗಳು ಒದ್ದೆಯಾಗಿ ಉಪಯೋಗಕ್ಕೆ ಬಾರದಂತಾದವು.

ಸಿರಾಜ್‌ನ ನಿಷ್ಠಾವಂತ ಸೇನಾಪತಿ ಮೀರ್ ಮದನ್ ಮರಣ ಹೊಂದಿದಾಗ ನವಾಬ ಕಂಗೆಟ್ಟ. ಬ್ರಿಟಿಷರ ವಿರುದ್ಧ ಪ್ರಹಾರ ತೀಕ್ಷ್ಣಗೊಳಿಸುವಂತೆ ಆದೇಶಿಸಿದಾಗ, ಮುಖ್ಯ ಸೇನಾಪತಿ ಮೀರ್ ಜಾಫರ್ ತನ್ನ ಸೈನ್ಯದೊಂದಿಗೆ ನಿಷ್ಕ್ರಿಯನಾಗಿ ಉಳಿದುಬಿಟ್ಟ. ಇದು ಸಿರಾಜ್‌ನ ಸೈನ್ಯದಲ್ಲಿ ಗೊಂದಲ ಮೂಡಿಸಿತು.

ಕೆಲ ಕ್ಷಣದಲ್ಲಿ ಸೈನಿಕರು ಚದುರಿಹೋದರು. ಇದಾದ ಬಳಿಕ ನವಾಬನ ಸೈನ್ಯ ಸೋಲೊಪ್ಪಿ ಕೊಂಡಿತು. ಅಷ್ಟೊತ್ತಿಗೆ ಸಿರಾಜ್‌ಗೆ ಇಡೀ ಸಂಚಿನ ಮರ್ಮ ಗೊತ್ತಾಗಿತ್ತು. ಆದರೆ ಕಾಲ ಮಿಂಚಿ ಹೋಗಿತ್ತು. ಸೈನಿಕರು ದಿಕ್ಕಾಪಾಲಾಗಿ ಓಡಿ ಹೋಗಿದ್ದರು. ನಂಬುಗಸ್ಥರೆಲ್ಲ ಕೈಕೊಟ್ಟಿದ್ದರು. ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಸಿರಾಜ್ ಯುದ್ಧ ಭೂಮಿಯಿಂದ ಮುರ್ಷಿದಾಬಾದ್‌ಗೆ ಪಲಾಯನ ಮಾಡಿದ. ಆದರೆ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸು ತ್ತಿದ್ದಾಗ ಮೀರ್ ಜಾಫರ್‌ನ ಮಗ ಮೀರನ್ ಸಿರಾಜ್‌ನನ್ನು ಸೆರೆಹಿಡಿದು ಅತ್ಯಂತ ಕ್ರೂರವಾಗಿ ಕೊಂದು ಹಾಕಿದ.

ಪ್ಲಾಸಿ ಕದನವು ಕೇವಲ ಒಂದು ಸಣ್ಣ ಯುದ್ಧವಾಗಿರಲಿಲ್ಲ, ಅದು ಭಾರತದ ದಾಸ್ಯದ ಆರಂಭವಾಗಿತ್ತು. ಬ್ರಿಟಿಷರು ಮೀರ್ ಜಾಫರ್‌ನನ್ನು ಬಂಗಾಳದ ‘ಗೊಂಬೆ ನವಾಬ’ನನ್ನಾಗಿ ಮಾಡಿದರು. ಇದರೊಂದಿಗೆ ಬಂಗಾಳದ ಆಡಳಿತವು ಪರೋಕ್ಷವಾಗಿ ಬ್ರಿಟಿಷರ ಕೈವಶ ವಾಯಿತು.

ಬಂಗಾಳದ ಅಪಾರ ಸಂಪತ್ತನ್ನು ಬ್ರಿಟಿಷರು ಲಂಡನ್‌ಗೆ ಸಾಗಿಸಲು ಶುರು ಮಾಡಿದರು. ಇದು ಭಾರತದ ಆರ್ಥಿಕ ಕುಸಿತಕ್ಕೆ ನಾಂದಿಯಾಯಿತು. ಪ್ಲಾಸಿಯ ಗೆಲುವಿನಿಂದ ಬಂದ ಆತ್ಮವಿಶ್ವಾಸ ಮತ್ತು ಹಣದ ಬಲದಿಂದ ಬ್ರಿಟಿಷರು ಇಡೀ ಭಾರತವನ್ನು ಗೆಲ್ಲುವ ಕನಸು ಕಂಡರು.

ಭಾಗೀರಥಿ ನದಿಯ ಮಂದಗತಿಯ ಹರಿವನ್ನು ನೋಡುತ್ತಾ ನಿಂತಾಗ, ಈ ಮಣ್ಣು ಅಂದು ಎಷ್ಟು ರಕ್ತವನ್ನು ಹೀರಿತ್ತು ಮತ್ತು ಎಷ್ಟು ದ್ರೋಹಕ್ಕೆ ಸಾಕ್ಷಿಯಾಗಿತ್ತು ಎಂಬ ಕಹಿ ಸತ್ಯ ಎದೆಯನ್ನು ಭಾರವಾಗಿಸುತ್ತದೆ. ಇಂದು ಪ್ಲಾಸಿ ಕೇವಲ ಒಂದು ಸ್ಮಾರಕವಾಗಿ, ಹಸಿರು ಹೊಲಗಳ ನಡುವೆ ಮೌನವಾಗಿ ಮಲಗಿರಬಹುದು. ಆದರೆ ಅಂದು ಇಲ್ಲಿ ನಡೆದ ಕೆಲವು ಗಂಟೆಗಳ ನಾಟಕವು ಭಾರತವನ್ನು ಸುಮಾರು ಎರಡು ಶತಮಾನಗಳ ಕಾಲ ಬ್ರಿಟಿಷರ ಗುಲಾಮಗಿರಿಗೆ ತಳ್ಳಿತು ಎಂಬುದು ಕಠೋರ ಸತ್ಯ. ಅಂದು ಪ್ಲಾಸಿಯಲ್ಲಿ ನಿಂತಾಗ ಈ ಎಲ್ಲ ನೆನಪುಗಳು ಮರುಕಳಿಸಿದವು.

ವಿಶ್ವೇಶ್ವರ ಭಟ್‌

View all posts by this author