ಸಂಪಾದಕರ ಸದ್ಯಶೋಧನೆ
ಸುಮನ್ ಕಲ್ಯಾಣಪುರ ಅವರ ಧ್ವನಿಯೆಂದರೆ ಅದು ಮುಂಜಾವಿನ ಮಂಜಿನ ಹಸಿರೆಲೆ ಮೇಲೆ ಬಿದ್ದ ಹನಿಯ ಹಾಗೆ. ಅಲ್ಲಿ ಅಬ್ಬರವಿಲ್ಲ, ಕೇವಲ ಒಂದು ಆರ್ದ್ರತೆಯಿದೆ. ಮುಂಬೈ ನ ಸಮುದ್ರತೀರದ ಮರಳಿನ ಮೇಲೆ ಅಲೆಗಳು ಬಂದು ಹೋದ ಮೇಲೆ ಉಳಿಯುವ ಒಂದು ತೇವದಂತೆ ಅವರ ಹಾಡುಗಳು ನಮ್ಮ ಸಂಜೆಗಳನ್ನು ಆವರಿಸಿಕೊಳ್ಳುತ್ತವೆ.
ಅವರ ವ್ಯಕ್ತಿತ್ವವೂ ಅಷ್ಟೇ, ಯಾರಿಗೂ ಭಾರವಾಗದಂತೆ ಅರಳಿದ ಚೈತನ್ಯವದು. ಜೀವನ ಎನ್ನುವುದು ಒಂದು ಅನಿರೀಕ್ಷಿತ ತಿರುವುಗಳ ಸರಣಿ. ಕೈಯಲ್ಲಿ ಬಣ್ಣದ ಕುಂಚ ಹಿಡಿದು ಕ್ಯಾನ್ವಾಸ್ ಮೇಲೆ ಲೋಕವನ್ನು ಬಿಡಿಸಬೇಕೆಂದು ಕನಸು ಕಂಡ ಹುಡುಗಿ, ಅಕಸ್ಮಾತ್ತಾಗಿ ಮೈಕ್ ಮುಂದೆ ಬಂದು ನಿಂತಿದ್ದು ಒಂದು ಸೋಜಿಗ.
ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್‌ನ ಗಿಜಿಗುಟ್ಟುವ ಕಾರಿಡಾರ್‌ಗಳಿಂದ ಸಂಗೀತದ ಸ್ಟುಡಿಯೋಗಳ ಏಕಾಂತಕ್ಕೆ ಅವರು ಬಂದ ಹಾದಿಯಲ್ಲಿ ಎಲ್ಲೂ ಆತುರವಿದ್ದಂತಿಲ್ಲ. ಅವರ ಸ್ವರದ ಬಣ್ಣಗಳು ಕುಂಚದ ಬಣ್ಣಗಳಿಗಿಂತಲೂ ಗಾಢವಾಗಿ ಜನಮನದ ಭಿತ್ತಿಯ ಮೇಲೆ ಉಳಿದು ಬಿಟ್ಟವು.
ಸುಮನ್ ಅವರದ್ದು ಒಂದು ವಿಚಿತ್ರವಾದ ಸಂಯಮ. ಬಾಲಿವುಡ್‌ನಂತಹ ಗದ್ದಲದ ಲೋಕದಲ್ಲಿ ತನ್ನನ್ನು ತಾನು ಕಳೆದುಕೊಳ್ಳದೇ, ‘ನಾನು’ ಎನ್ನುವ ಅಹಂಕಾರದ ನೆರಳೂ ಸೋಕದಂತೆ ಬದುಕಿದವರು. ಅವರ ಮುಖದ ಮೇಲಿನ ಆ ದೊಡ್ಡ ಬೊಟ್ಟು ಮತ್ತು ಸದಾ ಮಂದಹಾಸ ಬೀರುವ ಕಣ್ಣುಗಳು, ನಮ್ಮ ಯಾವುದೋ ಹಳೆಯ ಕಾಲದ ಆತ್ಮೀಯ ನೆಂಟಸ್ತಿಕೆಯನ್ನು ನೆನಪಿಸುತ್ತವೆ.
ಇದನ್ನೂ ಓದಿ: Vishweshwar Bhat Column: ದೌರ್ಬಲ್ಯವನ್ನೇ ಶಕ್ತಿಯಾಗಿಸಿಕೊಳ್ಳುವುದು
ದೊಡ್ಡ ತಾರೆಗಳ ನಡುವೆಯೂ ಅವರು ತಮ್ಮದೇ ಆದ ಒಂದು ಮೌನದ ದ್ವೀಪವನ್ನು ನಿರ್ಮಿಸಿಕೊಂಡಿದ್ದರು. ಜನರು ಸುಲಭಕ್ಕೆ ಹೋಲಿಕೆ ಮಾಡಿಬಿಡುತ್ತಾರೆ. ಲತಾ ಮಂಗೇ ಶ್ಕರ್ ಅವರ ಧ್ವನಿಗೆ ಹತ್ತಿರವಿದೆ ಎಂಬ ಕಾರಣಕ್ಕೆ ಸುಮನ್ ಅವರ ಸ್ವಂತಿಕೆಯನ್ನು ಗುರುತಿಸಲು ಕೆಲವರು ಮರೆತರು. ಆದರೆ ಸುಮನ್ ಅವರಿಗೆ ಆ ಬಗ್ಗೆ ವಿಷಾದವಿರಲಿಲ್ಲ. ಅಕ್ಕಪಕ್ಕದ ಗಿಡದಲ್ಲಿ ಅರಳಿದ ಎರಡು ಗುಲಾಬಿಗಳಲ್ಲಿ ಒಂದು ಸ್ವಲ್ಪ ಹೆಚ್ಚು ಕೆಂಪಿರ ಬಹುದು, ಆದರೆ ಎರಡರ ಪರಿಮಳವೂ ಪ್ರತ್ಯೇಕವೇ ಅಲ್ಲವೇ? ಲತಾ ಅವರ ಧ್ವನಿಯಲ್ಲಿ ಒಂದು ಹೊಳಪಿದ್ದರೆ, ಸುಮನ್ ಧ್ವನಿಯಲ್ಲಿ ಒಂದು ಮಣ್ಣಿನ ಘಮವಿತ್ತು, ಒಂದು ಬಗೆಯ ವಿಷಾದದ ಮಾಧುರ್ಯವಿತ್ತು.
ನಮ್ಮ ಕರುನಾಡಿನ ಮಣ್ಣಿನ ಸೊಗಡನ್ನು ಅವರು ಮರಾಠಿ ಅಥವಾ ಕೊಂಕಣಿ ಉಚ್ಚಾರಣೆಯ ಸೋಂಕಿಲ್ಲದೆ ಹಾಡಿದ್ದು ಒಂದು ಜಾದೂ. ಭಾಷೆಯ ಮೇಲೆ ಅವರಿಗಿದ್ದ ಹಿಡಿತ ಮತ್ತು ಪ್ರೀತಿ, ಗಡಿಗಳನ್ನು ಮೀರಿ ಸಂಗೀತ ಹೇಗೆ ನಮ್ಮನ್ನು ಬೆಸೆಯುತ್ತದೆ ಎಂಬುದಕ್ಕೆ ಸಾಕ್ಷಿ. ರಫಿ ಜತೆ ಅವರು ಹಾಡಿದ ಯುಗಳ ಗೀತೆಗಳನ್ನು ಕೇಳುವುದೆಂದರೆ ಅದೊಂದು ದೈವಿಕ ಅನುಭವ. ರಫಿಯವರ ಗಾಂಭೀರ್ಯಕ್ಕೆ ಸುಮನ್ ಅವರ ನವಿರುತನ ಸಾಥ್ ನೀಡಿದಾಗ, ಅದು ಹಾಲಿನಲ್ಲಿ ಸಕ್ಕರೆ ಬೆರೆತಂತೆ. ಸ್ಟುಡಿಯೋದಲ್ಲಿ ದೊಡ್ಡ ದೊಡ್ಡ ಸಂಗೀತನಿರ್ದೇಶಕರ ಎದುರು ನಿಂತಾಗಲೂ ಅವರು ತಮ್ಮೊಳಗಿನ ಶಾಂತತೆಯನ್ನು ಬಿಟ್ಟುಕೊಡಲಿಲ್ಲ. ಅವರ ಹಾಡುಗಳಲ್ಲಿ ಒಂದು ಬಗೆಯ ‘ಹೋಮ್ ವರ್ಕ್’ ಇರುತ್ತಿರಲಿಲ್ಲ, ಬದಲಿಗೆ ಒಂದು ಸಹಜವಾದ ‘ಹರಿಯುವಿಕೆ’ ಇರುತ್ತಿತ್ತು.
ಸುಮನ್ ಹಾಡುಗಳಲ್ಲಿ ಒಂದು ಬಗೆಯ ‘ವಿರಹ’ದ ಎಳೆಯಿದೆ. ಅದು ಕೇವಲ ಪ್ರೇಮದ ವಿರಹವಲ್ಲ, ಬದಲಿಗೆ ಅಧ್ಯಾತ್ಮದ ಹಂಬಲ. ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ಅವರು ಸಂಸಾರಕ್ಕೆ ಹೆಚ್ಚು ಒತ್ತು ನೀಡಿದ್ದು ಅವರ ಜೀವನಪ್ರೀತಿಗೆ ಸಾಕ್ಷಿ. ಚಿತ್ರರಂಗದ ಹೊಳಪಿಗಿಂತ ಅವರಿಗೆ ಮನೆಯ ಮೂಲೆಯ ದೀಪದ ಬೆಳಕು ಮುಖ್ಯವಾಗಿತ್ತು.
ರಾಮಾನಂದ ಕಲ್ಯಾಣಪುರ ಅವರ ಜತೆಗಿನ ಆಕೆಯ ಬದುಕು ಒಂದು ಸುಂದರ ಕವಿತೆ ಯಂತೆ ಸಾಗಿತು. ಸ್ಟಾರ್‌ಡಮ್ ಬೆನ್ನತ್ತಿ ಹೋಗದೇ, ಬದುಕಿನ ಸಣ್ಣಪುಟ್ಟ ಸಂತೋಷ ಗಳಲ್ಲಿ ಅವರು ನೆಮ್ಮದಿ ಕಂಡುಕೊಂಡರು. ಇಂದು ಎಲೆಕ್ಟ್ರಾನಿಕ್ ಸಂಗೀತದ ಗದ್ದಲದಲ್ಲಿ ಸುಮನ್ ಅವರ ಹಾಡುಗಳು ಒಂದು ತಂಪಾದ ಗಾಳಿಯಂತೆ ಬರುತ್ತವೆ. ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ತಡವಾಗಿ ಬಂದಿರಬಹುದು, ಆದರೆ ಜನರ ಪ್ರೀತಿ ಅವರಿಗೆ ಯಾವತ್ತೂ ಕಡಿಮೆಯಾಗಿಲ್ಲ.
ಪದ್ಮಭೂಷಣದಂಥ ಗೌರವಗಳು ಅವರ ಸಜ್ಜನಿಕೆಗೆ ಸಂದ ಗೌರವಗಳು. ಅವರು ಯಾವತ್ತೂ ಪ್ರಚಾರಕ್ಕಾಗಿ ಹಾತೊರೆದವರಲ್ಲ, ಅವರ ಹಾಡುಗಳೇ ಅವರ ಪರವಾಗಿ ಮಾತನಾಡುತ್ತಿವೆ. ನಮ್ಮ ಒಂಟಿತನದ ರಾತ್ರಿಗಳಲ್ಲಿ, ಪ್ರಯಾಣದ ದಣಿವುಗಳಲ್ಲಿ ಸುಮನ್ ಕಲ್ಯಾಣಪುರ ಹಾಡುಗಳು ಒಂದು ಆಸರೆಯಾಗಿ ನಿಲ್ಲುತ್ತವೆ. ಅವರು ಕೇವಲ ಗಾಯಕಿ ಯಲ್ಲ, ನಮ್ಮ ಕಾಲದ ಒಂದು ಮಧುರ ನೆನಪು.