ನಾರದ ಸಂಚಾರ
ಪಹಲ್ಗಾಮ್‌ನಲ್ಲಿ ಪೈಶಾಚಿಕ ಕೃತ್ಯವನ್ನು ಮೆರೆದು 26 ಮಂದಿ ಅಮಾಯಕರ ಮಾರಣಹೋಮಕ್ಕೆ ಕಾರಣರಾದ ಪಾಕಿಸ್ತಾನ-ಕೃಪಾಪೋಷಿತ ಉಗ್ರರನ್ನು ಮಟ್ಟ ಹಾಕುವುದಕ್ಕೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವ್ಯೂಹಾತ್ಮಕ ಕಾರ್ಯಾಚರಣೆಯನ್ನು ನಡೆಸಲು ನಿರ್ಧರಿಸಿದ್ದು ಮತ್ತು ಅದಕ್ಕೆ ‘ಆಪರೇಷನ್ ಸಿಂದೂರ’ ಎಂದು ಸ್ವತಃ ನಾಮಕರಣ ಮಾಡಿದ್ದು ಇವೆಲ್ಲಾ ನಿಮಗೆ ಗೊತ್ತಿರುವ ಸಂಗತಿಯೇ. ಅಂತೆಯೇ, ಈ ಕಾರ್ಯಾಚರಣೆಯು ಅಂದುಕೊಂಡಂತೆಯೇ ನಡೆದಿದ್ದರ ಫಲವಾಗಿ, ಪಾಕಿಸ್ತಾನದ ಮಡಿಲಲ್ಲಿ ನೆಮ್ಮದಿಯಾಗಿ ಪಾಚ್ಕೊಂಡಿದ್ದ ಉಗ್ರರ ಹಲವಾರು ನೆಲೆಗಳು ಉಡೀಸ್ ಆಗಿದ್ದು ಕೂಡ ಈಗ ಜಗಜ್ಜಾಹೀರು.
ಭಾರತದ ಈ ರುದ್ರತಾಂಡವಕ್ಕೆ ಗಡಗಡ ನಡುಗಿದ ಪಾಕಿಸ್ತಾನ, “ಮಾಫ್ ಕರೋ ಭಾಯಿಜಾನ್, ಐಸೀ ಗಲತಿ ಫಿರ್ ನಹೀ ಕರೂಂಗಾ" ಅಂತ ಗೋಗರೆದು, ಅವರಿವರ ಹತ್ತಿರವೆಲ್ಲಾ ವಶೀಲಿ ಮಾಡಿಸಿ, ಕದನವಿರಾಮದ ಘೋಷಣೆಯಾಗುವುದಕ್ಕೆ ಕಾರಣವಾಯಿತು ಅನ್ನೋ ಸಂಗತಿ ಯನ್ನೂ ನೀವು ಈಗಾಗಲೇ ಮಾಧ್ಯಮಗಳಿಂದ ತಿಳಿದುಕೊಂಡಿದ್ದೀರಿ.
ಇದನ್ನೂ ಓದಿ: Operation Sindoor: ಆಪರೇಶನ್ ಸಿಂದೂರ್ ವೇಳೆ ಪಾಕ್ ಪರ ಘೋಷಣೆ ಕೂಗಿದ ವ್ಯಕ್ತಿ ಸೆರೆ
ತರುವಾಯದಲ್ಲಿ, ಪ್ರಧಾನಿ ಮೋದಿಯವರು ಮೊನ್ನೆ ರಾತ್ರಿ ದೇಶವನ್ನುದ್ದೇಶಿಸಿ ಭಾಷಣ ಮಾಡು ವಾಗ, “ಇನ್ನೊಂದು ಸಲ ಹೀಗೆ ಬಾಲ ಬಿಚ್ಚಿದರೆ, ಪರಿಣಾಮ ಇದಕ್ಕಿಂತಲೂ ಘೋರ ವಾಗಿರುತ್ತೆ" ಅಂತ ಉಗ್ರರಿಗೆ/ಪಾಕಿಸ್ತಾನಕ್ಕೆ ಮಾತಿನಲ್ಲೇ ತಪರಾಕಿ ನೀಡಿಬಿಟ್ಟರಲ್ಲಾ, ಅದನ್ನು ಕೇಳಿ ಅಳಿದುಳಿದ ಉಗ್ರರು ಪೈಜಾಮಾದಲ್ಲೇ ‘ಸುಸು’ ಮಾಡ್ಕೊಂಡುಬಿಟ್ರಂತೆ. ಅವರಲ್ಲಿ ಕೆಲವರಂತೂ ಪರಸ್ಪರರನ್ನು ತಬ್ಬಿಕೊಂಡು, “ಭಾಯಿಜಾನ್, ನಮಗೆ ಬಂದೂಕು- ಬುಲೆಟ್ಟು-ಬಾಂಬು ಬಳಸೋದು ಬಿಟ್ರೆ ಬೇರೆ ಕಸುಬು ಗೊತ್ತಿಲ್ಲ.
ಈಗ ಈ ಮೋದಿ ಸಾಹೇಬ್ರು ಬೇರೆ ‘ಇನ್ಮೇಲೆ ಬಾಲ ಬಿಚ್ಚಿದ್ರೆ ಗತಿ ಕಾಣಿಸಿಬಿಡ್ತೀನಿ’ ಅಂತ ಆವಾಜ್ ಹಾಕಿಬಿಟ್ಟಿದ್ದಾರೆ. ನಾವೀಗ ನಿರುದ್ಯೋಗಿಗಳಾಗಿಬಿಟ್ವಿ.... ಮುಂದೆ ಹೊಟ್ಟೆಪಾಡಿಗೆ ಏನಣ್ಣಾ ಗತಿ?" ಅಂತ ರೋದಿಸುತ್ತಾ, ಬಕೆಟ್‌ಗಟ್ಟಲೆ ಕಣ್ಣೀರು ಸುರಿಸತೊಡಗಿದರಂತೆ.
ಆಗ ಅವರ ನೆರವಿಗೆ ಬಂದ ಪಾಕಿಸ್ತಾನದ ಮಿಲಿಟರಿ ಅಧಿಕಾರಿಯೊಬ್ಬರು, “ಹಂಗೆಲ್ಲಾ ಅಳಬಾರದು ಭಾಯಿಜಾನ್... ನೀವೇ ಹಿಂಗೆ ಕುಸಿದುಹೋದ್ರೆ ಏನು ಗತಿ? ನಿಮ್ಮ ಸಮಸ್ಯೆಗೆ ನನ್ನಲ್ಲೊಂದು ಪರಿಹಾ ರವಿದೆ" ಎಂದು ಹುಮ್ಮಸ್ಸು ತುಂಬಿದರಂತೆ. ಮ್ಯಾನ್‌ಹೋಲ್‌ನಲ್ಲಿ ಬಿದ್ದು ಮೇಲೆ ಬರಲಾಗದೆ ಒದ್ದಾಡುತ್ತಿದ್ದವರಿಗೆ, ಚರಂಡಿಯ ಪೈಪೊಂದು ಆಸರೆಯಾಗಿ ಸಿಕ್ಕಹಾಗೆ ಧೈರ್ಯ ತಂದುಕೊಂಡ ಆ ನಿರುದ್ಯೋಗಿ ಉಗ್ರರು, “ಅದೇನು ಪರಿಹಾರ ಅಂತ ಹೇಳಿ ಪುಣ್ಯ ಕಟ್ಟಿಕೊಳ್ಳಿ ಸಾಬ್...." ಎಂದು ಗೋಗರೆದರಂತೆ.
ಆಗ ಸದರಿ ಮಿಲಿಟರಿ ಅಧಿಕಾರಿ ಬಾಯಲ್ಲಿ ‘ತೀಸ್ ನಂಬರ್’ ಬೀಡಿ ಕಚ್ಕೊಂಡು ಒಮ್ಮೆ ಗಾಢವಾಗಿ ದಮ್ ಎಳೆದು, ದಟ್ಟನೆಯ ಹೊಗೆಯನ್ನು ಹೊರಗೆ ಬಿಡುತ್ತಾ, “ಇಷ್ಟು ದಿನವೂ ನಾನು ಭಾರತದ ಬಾಲಿವುಡ್ ಸಿನಿಮಾಗಳನ್ನೇ ನೋಡ್ತಾ ಇದ್ದೆ, ಅದರ ಹಾಡುಗಳು ಮಾತ್ರವೇ ನನಗೆ ಕಂಠಪಾಠ ಆಗಿಹೋಗಿದ್ದವು. ಇತ್ತೀಚೆಗೆ ಒಂದು ಕನ್ನಡ ಸಿನಿಮಾವನ್ನು ನೋಡೋ ಅವಕಾಶ ಸಿಕ್ತು.
ಅದರಲ್ಲಿರೋ ಒಂದು ಹಾಡು ನನಗೆ ತುಂಬಾ ಹಿಡಿಸಿಬಿಡ್ತು. ನೀವೂ ಆ ಹಾಡನ್ನ ಚೆನ್ನಾಗಿ ಪ್ರಾಕ್ಟೀ ಸ್ ಮಾಡಿ ಕಲಿತುಕೊಂಡುಬಿಟ್ರೆ ನೋಡ್ರಪ್ಪಾ ಹೊಟ್ಟೆಪಾಡಿಗೊಂದು ದಾರಿ ಆಗುತ್ತೆ" ಎಂದು ಹೇಳಿ ಮತ್ತೊಮ್ಮೆ ‘ಬುಸುಬುಸು’ ಅಂತ ಬೀಡಿ ಹೊಗೆಯನ್ನು ಹೊರಗೆ ಬಿಟ್ರಂತೆ.
ಇದನ್ನು ಕೇಳಿಸಿಕೊಂಡ ಆ ನಿರುದ್ಯೋಗಿ ಉಗ್ರರು, “ಅರೆ ಇಸ್ಕಿ! ಅದ್ಯಾವ ಹಾಡು ಅಂತ ಹೇಳಿ ಪುಣ್ಯ ಕಟ್ಕೊಳ್ಳಿ ಸಾಬ್" ಅಂತ ಪೀಡಿಸಿದ್ದಕ್ಕೆ ಪಾಕಿಸ್ತಾನದ ಆ ಸೇನಾಧಿಕಾರಿ ಆ ಹಾಡನ್ನು ಮೊಬೈಲ್‌ನಲ್ಲಿ ತೋರಿಸಿ, “ಇದನ್ನು ನೀವು ಪೂರ್ತಿ ಕಲಿಯೋದೇನೂ ಬೇಡ. ಒಂದು ಸಾಲನ್ನು ಮಾತ್ರ ಕಲಿತರೆ ಸಾಕು" ಅಂತ ಹೇಳಿ ಅವರೆಲ್ಲರಿಗೂ ಅದನ್ನು ಕಂಠಪಾಠ ಮಾಡಿಸಿದರಂತೆ. ಉಗ್ರರು ಆ ಸಾಲನ್ನು ಮತ್ತೆ ಮತ್ತೆ ಹೇಳಿಕೊಳ್ಳುತ್ತಾ, “ಅಬ್ಬಾ! ಅನ್ನಕ್ಕೊಂದು ದಾರಿ ಸಿಕ್ತು" ಎನ್ನುತ್ತಾ ಕುಣಿದಾಡ ತೊಡಗಿದರಂತೆ. ಅಂದ್ಹಾಗೆ, ಆ ಹಾಡಿನ ಸಾಲು ಯಾವುದು ಗೊತ್ತಾ- “ಹಳೆ ಪಾತ್ರೆ, ಹಳೆ ಕಬ್‌ಣಾ, ಹಳೆ ಪೇಪರ್ ಥರ ಹೋಯಿ..."!!