ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಡಿಕೆಶಿಯವರಿಗೆ ನಾನು ಕೊಡುವ ಆ ಒಂದು ಪುಟ್ಟ ಸಲಹೆ!

ಒಂದು ಕಾಲದ ‘ಗಾರ್ಡನ್ ಸಿಟಿ’ (ಉದ್ಯಾನ ನಗರಿ) ಇಂದು ಜಾಗತಿಕ ಮಟ್ಟದಲ್ಲಿ ‘ಗಾರ್ಬೇಜ್ ಸಿಟಿ’ (ಕಸದ ನಗರಿ) ಎಂಬ ಅಪಖ್ಯಾತಿಗೆ ಒಳಗಾಗುತ್ತಿರುವುದು ಕಹಿ ಸತ್ಯ. ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯು ತ್ತಿದೆ, ಅದರೊಂದಿಗೆ ಇಲ್ಲಿ ಉತ್ಪತ್ತಿಯಾಗುವ ಕಸದ ಪ್ರಮಾಣವೂ ದಿನಕ್ಕೆ 5000 ಟನ್‌ ಗಳಿಗಿಂತ ಹೆಚ್ಚಾಗುತ್ತಿದೆ

ನೂರೆಂಟು ವಿಶ್ವ

‘ಭಟ್ರೇ, ಇಲ್ಲಿ ತನಕ ಯಾರೂ ತೆಗೆದುಕೊಳ್ಳದ ಒಂದು ಸಣ್ಣ, ಆದರೆ ದಿಟ್ಟ ಹಾಗೂ ಕಣ್ಣಿಗೆ ಕಾಣುವ ಒಂದು ಕ್ರಾಂತಿಕಾರಕ ಕ್ರಮವನ್ನು ನಾನು ತೆಗೆದುಕೊಳ್ಳಬೇಕೆಂದು ನೀವು ಬಯಸಿದರೆ, ಆಗ ನನಗೆ ಯಾವ ಸಲಹೆ ನೀಡುತ್ತೀರಿ?’ ಎಂದು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಂದು ವೇಳೆ ನನ್ನನ್ನು ಕೇಳಿದರೆ, ನಾನು ಅವರಿಗೆ ಹೇಳೋದು ಇಷ್ಟೇ - ‘ಕಾನೂನು ಮತ್ತು ಸುವ್ಯವಸ್ಥೆ ಯನ್ನು ಕಾಪಾಡಲು ಪೊಲೀಸರು ಇದ್ದಾರೆ. ಆದರೆ ನಗರದ ಸೌಂದರ್ಯ, ನೈರ್ಮಲ್ಯ, ಸ್ವಚ್ಛತೆ ಕಾಪಾಡಲು ‘ಟ್ರ್ಯಾಶ್ ಪೊಲೀಸ’ರನ್ನು(Trash Police) (ಕಸ, ಅನುಪಯುಕ್ತ ವಸ್ತು) ನೇಮಿಸಿ’.

ಒಂದು ನಗರದ ನಾಗರಿಕ ಪ್ರಜ್ಞೆ ಎನ್ನುವುದು ಅಲ್ಲಿನ ರಸ್ತೆಗಳ ವಿಸ್ತಾರದಲ್ಲಿಲ್ಲ, ಬದಲಿಗೆ ಆ ರಸ್ತೆಯ ಮೂಲೆಯಲ್ಲಿ ಬಿದ್ದಿರುವ ಕಸದ ವಿಲೇವಾರಿಯಲ್ಲಿ ಅಡಗಿದೆ. ಡಿ.ಕೆ.ಶಿವಕುಮಾರ್ ಅವರು ಮುಖ್ಯ ಮಂತ್ರಿಯಾದ ತಕ್ಷಣ ಒಂದು ದಿಟ್ಟ ಹೆಜ್ಜೆ ಇಡಲು ಮುಂದಾದರೆ, ಅವರಿಗೆ ನೀಡಬಹುದಾದ ಅತ್ಯಂತ ಪ್ರಾಯೋಗಿಕ ಮತ್ತು ಕ್ರಾಂತಿಕಾರಿ ಸಲಹೆ ಎಂದರೆ ‘ಬೆಂಗಳೂರು ಟ್ರ್ಯಾಶ್ ಪೊಲೀಸ್’ ( BTP - Bengaluru Trash Police) ಪಡೆಯ ಸ್ಥಾಪನೆ.

ನಾನು ಆ ಸಲಹೆ ನೀಡಲು ಕಾರಣಗಳಿವೆ.

ಒಂದು ಕಾಲದ ‘ಗಾರ್ಡನ್ ಸಿಟಿ’ (ಉದ್ಯಾನ ನಗರಿ) ಇಂದು ಜಾಗತಿಕ ಮಟ್ಟದಲ್ಲಿ ‘ಗಾರ್ಬೇಜ್ ಸಿಟಿ’ (ಕಸದ ನಗರಿ) ಎಂಬ ಅಪಖ್ಯಾತಿಗೆ ಒಳಗಾಗುತ್ತಿರುವುದು ಕಹಿ ಸತ್ಯ. ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಿದೆ, ಅದರೊಂದಿಗೆ ಇಲ್ಲಿ ಉತ್ಪತ್ತಿಯಾಗುವ ಕಸದ ಪ್ರಮಾಣವೂ ದಿನಕ್ಕೆ 5,000 ಟನ್‌ ಗಳಿಗಿಂತ ಹೆಚ್ಚಾಗುತ್ತಿದೆ. ಜಿಬಿಎ (ಗ್ರೇಟರ್ ಬೆಂಗಳೂರು ಅಥಾರಿಟಿ) ಕಸದ ಗಾಡಿಗಳು, ಪೌರ ಕಾರ್ಮಿಕರ ಶ್ರಮದ ಹೊರತಾಗಿಯೂ ಕಣ್ಣಿಗೆ ಕಾಣುವ ರಸ್ತೆ ಮೂಲೆಗಳು, - ಓವರ್‌ಗಳ ಕೆಳಗೆ ಮತ್ತು ಖಾಲಿ ಸೈಟುಗಳು ಕಸದ ರಾಶಿಯಿಂದ ಮುಚ್ಚಿಹೋಗುತ್ತಿವೆ. ಪ್ಲಾಸ್ಟಿಕ್ ನಿಷೇಧ ಕಾಗದದ ಮೇಲಿದೆಯೇ ಹೊರತು ಕಸದ ತೊಟ್ಟಿಯಲ್ಲಲ್ಲ. ಬ್ಲ್ಯಾಕ್ ಸ್ಪಾಟ್‌ಗಳು (ಕಸ ಸುರಿಯುವ ಜಾಗಗಳು) ನಗರದ ಸೌಂದರ್ಯವನ್ನು ಮಾತ್ರವಲ್ಲ, ನಾಗರಿಕರ ಆರೋಗ್ಯವನ್ನೂ ಹಾಳುಮಾಡುತ್ತಿವೆ.

ಇದನ್ನೂ ಓದಿ: Vishweshwar Bhat Column: ಫೇಸ್‌ʼಬುಕ್‌ʼನಲ್ಲಿ ಜವಾಬ್ದಾರಿಯಿಂದ ಕಾಮೆಂಟ್‌ ಮಾಡಬೇಕು, ಏಕೆಂದರೆ...!

ಕಸ ಇಲ್ಲದ ರಸ್ತೆಗಳಿಲ್ಲ. ಕಸ ವಿಲೇವಾರಿ ವ್ಯವಸ್ಥೆ ವಿಫಲವಾದಾಗ ಜನ ಕಂಡಕಂಡಲ್ಲಿ ಕಸ ಎಸೆಯುತ್ತಾರೆ. ಬೆಂಗಳೂರಿನಲ್ಲಿ ಕಸದ ಸಮಸ್ಯೆ ಇರುವುದು ಮೂಲಸೌಕರ್ಯದ ಕೊರತೆಯಿಂದ ಮಾತ್ರವಲ್ಲ, ಬದಲಿಗೆ ದಂಡದ ಭಯವಿಲ್ಲದ ನಾಗರಿಕ ಬೇಜವಾಬ್ದಾರಿಯಿಂದ. ಪೊಲೀಸರು ಕಾನೂನು ಸುವ್ಯವಸ್ಥೆ ನೋಡಿಕೊಳ್ಳುತ್ತಾರೆ, ಆದರೆ ಫುಟ್‌ಪಾತ್ ಮೇಲೆ ಕಸ ಎಸೆಯುವವರನ್ನು ಕೇಳುವವರು ಯಾರೂ ಇಲ್ಲ. ಈ ಹೊಸ ಪಡೆಗೆ ಕಸ ಎಸೆಯುವವರಿಗೆ ಸ್ಥಳದ ದಂಡ ವಿಧಿಸುವ ( Spot Fine) ಮತ್ತು ಪದೇ ಪದೆ ತಪ್ಪು ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರ ಕೊಡಬೇಕು.

ನಗರದ ಸೌಂದರ್ಯವನ್ನು ಹಾಳು ಮಾಡುವ ಪೋಸ್ಟರ್‌ಗಳು, ಅಕ್ರಮವಾಗಿ ರಸ್ತೆ ಬದಿಯಲ್ಲಿ, ರಾತ್ರಿ ಸಮಯದಲ್ಲಿ ಹಾಕುವ ಕಸ ಮತ್ತು ಫ್ಲೆಕ್ಸ್ ಬ್ಯಾನರ್‌ಗಳನ್ನು ನಿಯಂತ್ರಿಸಲು ಇವರು ‘ಸೌಂದರ್ಯ ರಕ್ಷಕರಾಗಿ’ ಕೆಲಸ ಮಾಡಬೇಕು. ಸಿಂಗಾಪುರ ಅಥವಾ ಸ್ವಿಟ್ಜರ್ಲೆಂಡ್‌ನ ಮಾದರಿಯಲ್ಲಿ, ನಗರದ ಒಂದು ಚದರ ಅಡಿ ಜಾಗವೂ ಗಲೀಜಾಗದಂತೆ ನೋಡಿಕೊಳ್ಳುವುದು ಇವರ ಪರಮೋಚ್ಚ ಗುರಿಯಾಗಬೇಕು.‌

ಕಸವನ್ನು ಮೂಲದ ವಿಂಗಡಿಸುವುದು ನಮ್ಮಲ್ಲಿ ಇಂದಿಗೂ ದೊಡ್ಡ ಸವಾಲು. ‘ಟ್ರ್ಯಾಶ್ ಪೊಲೀಸ್’ ತಂಡವು ಪ್ರತಿ ಮನೆಯಿಂದ ಬರುವ ಕಸದ ಚೀಲಗಳನ್ನು ಆಕಸ್ಮಿಕವಾಗಿ ತಪಾಸಣೆ ಮಾಡಬೇಕು. ಹಸಿ ಕಸ ಮತ್ತು ಒಣ ಕಸವನ್ನು ಬೆರೆಸಿದರೆ ದೊಡ್ಡ ಮೊತ್ತದ ದಂಡ ವಿಧಿಸುವ ಪದ್ಧತಿ ಜಾರಿಗೆ ತಂದರೆ, ಕೆಲವೇ ತಿಂಗಳುಗಳಲ್ಲಿ ನಗರವು ಶೇ.100ರಷ್ಟು ಕಸ ವಿಂಗಡಣೆಯ ಗುರಿ ತಲುಪಬಲ್ಲದು. ಕಸದ ವಿಂಗಡಣೆ ಎಂಬುದು ಕೇವಲ ಪರಿಸರದ ಪ್ರಶ್ನೆಯಾಗಿ ಉಳಿಯದೇ, ಅದೊಂದು ಸಾಮಾಜಿಕ ಶಿಸ್ತಿನ ಪರೀಕ್ಷೆಯಾಗಿದೆ. ಇಂದು ನಾವು ಎದುರಿಸುತ್ತಿರುವ ಅತಿ ದೊಡ್ಡ ಸವಾಲೆಂದರೆ, ‘ಕಸ ಕೊಡು ವವನಿಗಿಲ್ಲದ ಜವಾಬ್ದಾರಿ, ಕಸ ಎತ್ತುವವನಿಗಿದೆ’ ಎಂಬ ವಿಪರ್ಯಾಸ. ಈ ಹಂತದಲ್ಲಿ ‘ಟ್ರ್ಯಾಶ್ ಪೊಲೀಸ್’ ಎಂಬ ಪರಿಕಲ್ಪನೆ ಕೇವಲ ಸಲಹೆಯಲ್ಲ, ಅದು ಅನಿವಾರ್ಯವಾದ ಒಂದು ಶಸ್ತ್ರಚಿಕಿತ್ಸೆ.

VB

ಸಾರ್ವಜನಿಕವಾಗಿ ಮನವಿ ಮಾಡುವುದು ಅಥವಾ ಜಾಗೃತಿ ಮೂಡಿಸುವುದು ಒಂದು ಹಂತದವರೆಗೆ ಮಾತ್ರ ಕೆಲಸ ಮಾಡುತ್ತದೆ. ಆದರೆ, ಮನೆಯಿಂದ ಹೊರಬರುವ ಪ್ರತಿಯೊಂದು ಕಸದ ಚೀಲವನ್ನೂ ಆಕಸ್ಮಿಕವಾಗಿ (Random Sampling) ತಪಾಸಣೆ ಮಾಡುವ ಅಧಿಕಾರ ಈ ವಿಶೇಷ ಪಡೆಗೆ ಇರಬೇಕು. ಚೀಲ ಬಿಚ್ಚಿದಾಗ ಹಸಿ ಕಸದ ಜತೆ ಪ್ಲಾಸ್ಟಿಕ್ ಅಥವಾ ಅಪಾಯಕಾರಿ ತ್ಯಾಜ್ಯ ಕಂಡು ಬಂದರೆ, ಅಲ್ಲಿ ಯಾವುದೇ ಮುಲಾಜಿಲ್ಲದೆ ಭಾರಿ ಮೊತ್ತದ ದಂಡ ವಿಧಿಸಬೇಕು. ದಂಡದ ಮೊತ್ತವು ಹೇಗಿರ ಬೇಕೆಂದರೆ, ಮತ್ತೊಮ್ಮೆ ಕಸ ಬೆರೆಸುವ ಆಲೋಚನೆ ಬಂದಾಗ ಜೇಬಿನ ಅಳತೆ ನೆನಪಾಗಬೇಕು.

ಯಾವಾಗ ನಾಗರಿಕರಿಗೆ ತಮ್ಮ ಕಸದ ಚೀಲವು ತಮ್ಮ ವಿಳಾಸ ಮತ್ತು ತಪ್ಪುಗಳನ್ನು ಬಹಿರಂಗ ಪಡಿಸುತ್ತದೆ ಎಂಬ ಭಯ ಶುರುವಾಗುತ್ತದೆಯೋ, ಆಗ ಶೇ.100ರಷ್ಟು ವಿಂಗಡಣೆ ತಾನಾಗಿಯೇ ಸಾಧ್ಯವಾಗುತ್ತದೆ. ಕೇವಲ ಕೆಲವೇ ತಿಂಗಳುಗಳಲ್ಲಿ ನಗರದ ತ್ಯಾಜ್ಯ ವಿಲೇವಾರಿ ಘಟಕಗಳ ಮೇಲಿನ ಹೊರೆ ಕಡಿಮೆಯಾಗಿ, ಬೆಂಗಳೂರು ನಿಜವಾದ ಅರ್ಥದಲ್ಲಿ ‘ಸ್ವಚ್ಛ ನಗರಿ’ಯಾಗಬಲ್ಲದು. ಭಯ ವಿಲ್ಲದ ಶಿಸ್ತು ಹೆಚ್ಚು ಕಾಲ ಉಳಿಯುವುದಿಲ್ಲ. ಆದ್ದರಿಂದ ಈ ‘ದಂಡ ಪ್ರಯೋಗ’ವೇ ಸುಸ್ಥಿರ ಬದಲಾವಣೆಗೆ ಮೊದಲ ಹೆಜ್ಜೆ. ಒಂದು ತೀಕ್ಷ ಸತ್ಯವೇನೆಂದರೆ, ಪ್ರೀತಿಯಿಂದ ಬದಲಾಗದ ಮನಸ್ಸು ಗಳು, ಹೆಚ್ಚಾಗಿ ದಂಡದ ರಶೀದಿಯಿಂದ ಬದಲಾಗುತ್ತವೆ.

ಯಾರಿದು ‘ಟ್ರ್ಯಾಶ್ ಪೊಲೀಸ್’? ಇವರ ಕೆಲಸವೇನು?

‘ಟ್ರ್ಯಾಶ್ ಪೊಲೀಸ್’ ಪಡೆಯ ಪ್ರಾಥಮಿಕ ಕೆಲಸವೆಂದರೆ ನಗರದ ಬ್ಲ್ಯಾಕ್ ಸ್ಪಾಟ್‌ಗಳು (ಕಸ ಸುರಿಯುವ ಜಾಗಗಳು) ಮತ್ತು ಪ್ರಮುಖ ರಸ್ತೆಗಳ ಮೇಲೆ ನಿರಂತರ ಕಣ್ಣಿಡುವುದು. ಬೆಂಗಳೂರಿನ ಪ್ರತಿ ವಾರ್ಡ್, ಪ್ರಮುಖ ವಾಣಿಜ್ಯ ರಸ್ತೆಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಇವರನ್ನು ಪಾಳಿಯ ಆಧಾರದ ಮೇಲೆ ನಿಯೋಜಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ನಡೆದುಕೊಂಡು ಹೋಗುತ್ತಾ ಸಿಗರೇಟ್ ತುಂಡು, ಪ್ಲಾಸ್ಟಿಕ್ ಕವರ್ ಅಥವಾ ತಿಂಡಿಯ ಪೊಟ್ಟಣಗಳನ್ನು ರಸ್ತೆಗೆ ಎಸೆಯುವವರಿಗೆ, ಬೇಕಾಬಿಟ್ಟಿ ಕಂಡಕಂಡಲ್ಲಿ ಉಗುಳುವವರಿಗೆ ಇವರು ಸ್ಥಳದ ದಂಡ ವಿಧಿಸಬೇಕು. ಬೆಂಗಳೂರಿನಲ್ಲಿ ಅತಿ ಹೆಚ್ಚು ಕಸ ಸುರಿಯುವುದು ತಡರಾತ್ರಿ ಅಥವಾ ಮುಂಜಾನೆ. ಬೈಕ್‌ಗಳಲ್ಲಿ ಬಂದು ಕಸದ ಕವರ್‌ ಗಳನ್ನು ರಸ್ತೆ ಬದಿಗೆ ಎಸೆದು ಹೋಗುವ ‘ಕಸದ ಕಳ್ಳ’ರನ್ನು ಹಿಡಿಯಲು ಇವರಿಗೆ ವಿಶೇಷ ಅಧಿಕಾರ ಇರಬೇಕು. ನಿಷೇಧಿತ ಪ್ಲಾಸ್ಟಿಕ್ ಬಳಸುವ ಅಂಗಡಿ ಮುಂಗಟ್ಟುಗಳಿಗೂ ಇವರು ಸ್ಥಳದ ದಂಡ ಹಾಕುವಂತಾಗಬೇಕು. ಪ್ರತಿ ಅಪಾರ್ಟ್ಮೆಂಟ್, ಕಮರ್ಷಿಯಲ್ ಕಾಂಪ್ಲೆಕ್ಸ್ ಮತ್ತು ಮನೆಗಳು ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ನೀಡುತ್ತಿವೆಯೇ ಎಂಬುದನ್ನು ಇವರು ಸೂಕ್ಷ್ಮವಾಗಿ ಗಮನಿಸ ಬೇಕು. ನಿಯಮ ಉಲ್ಲಂಘಿಸುವ ದೊಡ್ಡ ದೊಡ್ಡ ವಾಣಿಜ್ಯ ಸಂಸ್ಥೆಗಳು ಅಥವಾ ಅಪಾರ್ಟ್ಮೆಂಟ್‌ ಗಳಿಗೆ ಮೊದಲ ಹಂತದಲ್ಲಿ ಲಿಖಿತ ಎಚ್ಚರಿಕೆ ಮತ್ತು ಎರಡನೇ ಬಾರಿ ನಿಯಮ ಉಲ್ಲಂಸಿದರೆ ಕಾನೂನಾತ್ಮಕ ನೋಟಿಸ್ ನೀಡುವ ಅಧಿಕಾರ ಇವರಿಗಿರಬೇಕು. ಇದು ಸಾರ್ವಜನಿಕ ರಲ್ಲಿ ಕಸ ನಿರ್ವಹಣೆಯ ಬಗ್ಗೆ ಗಂಭೀರತೆಯನ್ನು ಮೂಡಿಸುತ್ತದೆ. ‌

ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೆ ಹೋಗುವ ಸವಾರನಿಗೆ ದೂರದಲ್ಲಿ ನಿಂತಿರುವ ಖಾಕಿ ಸಮವಸ್ತ್ರದ ಟ್ರಾಫಿಕ್ ಪೊಲೀಸ್ ಕಂಡರೆ ಹೇಗೆ ತಕ್ಷಣ ಗಾಡಿ ನಿಲ್ಲಿಸುವ ಅಥವಾ ನಿಯಮ ಪಾಲಿಸುವ ಭಯ ಮತ್ತು ಶಿಸ್ತು ಬರುತ್ತದೆಯೋ, ಅದೇ ಮಾದರಿಯನ್ನು ಇಲ್ಲಿಯೂ ಅಳವಡಿಸಬೇಕು. ‘ಟ್ರ್ಯಾಶ್ ಪೊಲೀಸ್’ ಪಡೆಗೆ ಪ್ರತ್ಯೇಕವಾದ, ಸುಲಭವಾಗಿ ಗುರುತಿಸಬಹುದಾದ ಸುವಿಶಿಷ್ಟ ಸಮವಸ್ತ್ರ (ಉದಾ ಹರಣೆಗೆ, ಪ್ರಕಾಶಮಾನವಾದ ಹಸಿರು ಅಥವಾ ನೀಲಿ ಬಣ್ಣದ ಜಾಕೆಟ್‌ಗಳು) ಇರಬೇಕು. ರಸ್ತೆಯಲ್ಲಿ ಈ ಸಮವಸ್ತ್ರಧಾರಿಗಳು ಓಡಾಡುವುದನ್ನು ನೋಡಿದಾಗ, ಸಾರ್ವಜನಿಕರಲ್ಲಿ ಕಸ ಎಸೆಯುವ ಕೈಗಳು ಒಂದು ಕ್ಷಣ ನಡುಗಬೇಕು. ‘ಯಾರೋ ನೋಡುತ್ತಿದ್ದಾರೆ, ದಂಡ ಬೀಳುತ್ತದೆ’ ಎನ್ನುವ ಸಣ್ಣ ಭಯವೇ ನಗರದ ಅರ್ಧದಷ್ಟು ಸ್ವಚ್ಛತಾ ಸಮಸ್ಯೆಯನ್ನು ನೀಗಿಸಬಲ್ಲದು.

ಯಾವುದೇ ವಿಶೇಷ ಪಡೆಯ ಯಶಸ್ಸು ಅದರ ದಕ್ಷತೆ ಮತ್ತು ಆ ಪಡೆಯು ಸಮಾಜದ ಮೇಲೆ ಬೀರುವ ಪ್ರಭಾವದ ಮೇಲೆ ನಿರ್ಧರಿತವಾಗುತ್ತದೆ. ‘ಟ್ರ್ಯಾಶ್ ಪೊಲೀಸ್’ ತಂಡಕ್ಕೆ ಯುವಕರ ಜತೆಗೆ ಮಾಜಿ ಸೈನಿಕರನ್ನು ನೇಮಿಸಿಕೊಳ್ಳುವುದು ಅತ್ಯಂತ ಪ್ರಾಯೋಗಿಕ ನಿರ್ಧಾರ. ಶಿಸ್ತು, ಕರ್ತವ್ಯನಿಷ್ಠೆ ಮತ್ತು ಕಠಿಣ ಸಂದರ್ಭಗಳನ್ನು ನಿಭಾಯಿಸುವ ಕಲೆ ಸೈನಿಕರಿಗೆ ಕರಗತವಾಗಿರುತ್ತದೆ. ಅವರಿಗೆ ಆಕರ್ಷಕ ಸಮವಸ್ತ್ರ ನೀಡುವುದರಿಂದ ಸಮಾಜದಲ್ಲಿ ಒಂದು ರೀತಿಯ ಗೌರವ ಮತ್ತು ಅಧಿಕಾರದ ಪ್ರಭಾವ ( Authority) ಮೂಡುತ್ತದೆ. ಕೇವಲ ಸಮವಸ್ತ್ರವಿದ್ದರೆ ಸಾಲದು, ಅವರಿಗೆ ಬಾಡಿ ಕೆಮರಾ ಮತ್ತು ಡಿಜಿಟಲ್ ಫೋನ್ ಮೆಷಿನ್‌ಗಳಂಥ ಆಧುನಿಕ ಉಪಕರಣಗಳನ್ನು ನೀಡಬೇಕು. ಬಾಡಿ ಕೆಮರಾಗಳು ಅಧಿಕಾರಿ ಮತ್ತು ಸಾರ್ವಜನಿಕರ ನಡುವಿನ ಸಂವಹನವನ್ನು ಪಾರದರ್ಶಕ ಗೊಳಿಸುತ್ತವೆ. ಯಾರಾದರೂ ಲಂಚ ನೀಡಲು ಮುಂದಾದರೆ ಅಥವಾ ಉದ್ಧಟತನ ತೋರಿದರೆ ಅದು ದಾಖಲಾಗುತ್ತದೆ. ಡಿಜಿಟಲ್ ಮೆಷಿನ್‌ಗಳ ಮೂಲಕ ಸ್ಥಳದ ದಂಡ ವಿಧಿಸಿ ರಶೀದಿ ನೀಡುವು ದರಿಂದ ಭ್ರಷ್ಟಾಚಾರಕ್ಕೆ ಆಸ್ಪದವಿರುವುದಿಲ್ಲ.

ಈ ನಿರ್ಧಾರದ ಅತ್ಯಂತ ಮುಖ್ಯವಾದ ಅಂಶವೆಂದರೆ ಈ ಪಡೆಯ ‘ಸ್ವಯಂ-ಸುಸ್ಥಿರ’ *(Self-Sustaining ) ಮಾದರಿ. ಇವರ ವೇತನವನ್ನು ಸರಕಾರವು ಬಜೆಟ್‌ನಿಂದ ನೀಡುವ ಬದಲು, ಇವರು ಸಂಗ್ರಹಿಸುವ ದಂಡದ ಮೊತ್ತದ ಒಂದು ನಿರ್ದಿಷ್ಟ ಭಾಗದಿಂದಲೇ ಭರಿಸಬೇಕು. ಇದು ಸರಕಾರಕ್ಕೆ ಆರ್ಥಿಕ ಹೊರೆಯಾಗುವುದನ್ನು ತಪ್ಪಿಸುತ್ತದೆ. ಅಲ್ಲದೇ ಎಷ್ಟು ಹೆಚ್ಚು ತಪ್ಪುಗಳನ್ನು ಪತ್ತೆಹಚ್ಚಿ ದಂಡ ವಸೂಲಿ ಮಾಡುತ್ತಾರೋ, ಅಷ್ಟು ಹೆಚ್ಚು ಪ್ರೋತ್ಸಾಹಧನ ಸಿಬ್ಬಂದಿಗೆ ಸಿಗುವಂತಿದ್ದರೆ ಅವರ ಕಾರ್ಯಕ್ಷಮತೆ (Efficiency) ದ್ವಿಗುಣಗೊಳ್ಳುತ್ತದೆ. ಕೆಲಸ ಮಾಡು ವವರಿಗೆ ಪ್ರತಿಫಲ ಮತ್ತು ತಪ್ಪು ಮಾಡುವವರಿಗೆ ಶಿಕ್ಷೆ - ಈ ಸರಳ ಸೂತ್ರವೇ ನಗರದ ನೈರ್ಮಲ್ಯವನ್ನು ಕ್ರಾಂತಿಕಾರಕವಾಗಿ ಬದಲಿಸಬಲ್ಲದು. ಸೈನಿಕನ ಕೈಯಲ್ಲಿ ಬಂದೂಕಿನ ಬದಲು ‘ಸ್ವಚ್ಛತೆಯ ದಂಡ’ವಿದ್ದರೆ, ನಗರದ ಬೀದಿಗಳು ಯುದ್ಧಭೂಮಿಯಂತೆ ಗಲೀಜಾಗುವುದು ನಿಲ್ಲುತ್ತದೆ.

ಬೆಂಗಳೂರನ್ನು ಸಿಂಗಾಪುರ ಮಾಡುತ್ತೇವೆ ಎನ್ನುವ ಭರವಸೆಗಿಂತ, ಬೆಂಗಳೂರಿನ ಜನರನ್ನು ಸಿಂಗಾ ಪುರದ ನಾಗರಿಕರಂತೆ ಶಿಸ್ತಿನಿಂದ ಇರುವಂತೆ ಮಾಡುವುದು ದೊಡ್ಡ ಸಾಧನೆ. ಬೆಂಗಳೂರನ್ನು ಭೌತಿಕವಾಗಿ ಸಿಂಗಾಪುರವನ್ನಾಗಿ ಪರಿವರ್ತಿಸುವುದು ಕೇವಲ ಹಣ ಮತ್ತು ಇಂಜಿನಿಯರಿಂಗ್‌ನ ವಿಷಯ. ಆದರೆ, ಅಲ್ಲಿನ ಜನರ ಶಿಸ್ತನ್ನು ಇಲ್ಲಿನ ಜನರಲ್ಲಿ ಅಳವಡಿಸುವುದು ದೊಡ್ಡ ಸಾಂಸ್ಕೃತಿಕ ಸವಾಲು. ಸಿಂಗಾಪುರದ ವೈಭವಕ್ಕೆ ಅಲ್ಲಿನ ರಸ್ತೆಗಳಿಗಿಂತ ಹೆಚ್ಚಾಗಿ, ಅಲ್ಲಿನ ನಾಗರಿಕರು ಪಾಲಿಸುವ ‘ದಂಡದ ಭಯ’ ಮತ್ತು ‘ನಾಗರಿಕ ಪ್ರಜ್ಞೆ’ ಕಾರಣ.

ನಮ್ಮಲ್ಲಿ ವಿಶ್ವದರ್ಜೆಯ ವಿಮಾನ ನಿಲ್ದಾಣಗಳಿವೆ, ಆದರೆ ಅದರ ಹೊರಗೆ ಕಸ ಎಸೆಯುವ ಕೈಗಳನ್ನು ತಡೆಯುವವರಿಲ್ಲ. ಈ ವಿಷಯದಲ್ಲಿ ಯಾರಿಗೂ ಕಾನೂನಿನ ಭಯವಿಲ್ಲ. ಮೂಲ ಸೌಕರ್ಯವು ನಗರದ ದೇಹವಾದರೆ, ನಾಗರಿಕ ಶಿಸ್ತು ಅದರ ಆತ್ಮ. ಕಸ ಎಸೆಯದಿರುವುದು, ಸಂಚಾರಿ ನಿಯಮ ಪಾಲಿಸುವುದು ಮತ್ತು ಸಾರ್ವಜನಿಕ ಆಸ್ತಿಯನ್ನು ಗೌರವಿಸುವುದು ಕೇವಲ ಕಾನೂನಿ ನಿಂದ ಬರಬಾರದು, ಅದು ವ್ಯಕ್ತಿತ್ವದ ಭಾಗವಾಗಬೇಕು. ನಗರವನ್ನು ಸುಂದರಗೊಳಿಸಲು ಸಾವಿರಾರು ಕೋಟಿ ರುಪಾಯಿಗಳ ಅನುದಾನ ಬೇಕು, ಆದರೆ ಅದನ್ನು ಸುಂದರವಾಗಿಡಲು ಕೇವಲ ಒಂದು ‘ಶಿಸ್ತಿನ ಮನಸ್ಸು’ ಸಾಕು. ಆದ್ದರಿಂದ, ಸರಕಾರವು ಕಟ್ಟಡಗಳನ್ನು ಕಟ್ಟುವ ಮೊದಲು, ನಾಗರಿಕರಲ್ಲಿ ಜವಾಬ್ದಾರಿಯ ಬೀಜ ಬಿತ್ತುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಶಿಸ್ತಿಲ್ಲದ ಜನರಿರುವ ನಗರವು ಎಷ್ಟೇ ಸುಂದರವಾಗಿದ್ದರೂ ಅದು ಅಲ್ಪಾಯುಷಿ.

‘ಬ್ರ್ಯಾಂಡ್ ಬೆಂಗಳೂರು’ ಎನ್ನುವುದು ಕೇವಲ - ಓವರ್‌ಗಳು ಅಥವಾ ಐಟಿ ಪಾರ್ಕ್‌ಗಳಿಂದ ನಿರ್ಮಾಣವಾಗುವ ಕಲ್ಪನೆಯಲ್ಲ. ಅದು ಜಾಗತಿಕ ಮಟ್ಟದಲ್ಲಿ ನಗರದ ಶಿಸ್ತು ಮತ್ತು ಸೌಂದರ್ಯ ದ ಪ್ರತಿಬಿಂಬವಾಗಬೇಕು. ‘ಟ್ರ್ಯಾಶ್ ಪೊಲೀಸ್’ ವ್ಯವಸ್ಥೆಯು ಒಂದು ಇಲಾಖೆಗಿಂತ ಹೆಚ್ಚಾಗಿ, ನಗರದ ಮರ್ಯಾದೆಯನ್ನು ಉಳಿಸುವ ‘ದಿಟ್ಟ ಶಸ್ತ್ರಚಿಕಿತ್ಸೆ’ಯಂತೆ ಕೆಲಸ ಮಾಡಬೇಕು. ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನದ ಹಬ್ ಆಗಿ ಗುರುತಿಸಿಕೊಂಡಿದ್ದರೂ, ಕಸದ ನಿರ್ವಹಣೆಯ ವಿಚಾರದಲ್ಲಿ ಅನೇಕ ಬಾರಿ ಮುಜುಗರಕ್ಕೆ ಒಳಗಾಗುತ್ತಿದೆ. ಈ ಸಮಸ್ಯೆಯನ್ನು ಸಣ್ಣಪುಟ್ಟ ಸುಧಾರಣೆಗಳಿಂದ ಸರಿಪಡಿಸಲು ಸಾಧ್ಯವಿಲ್ಲ. ಅದಕ್ಕೆ ಆಳವಾದ ಮತ್ತು ಕಠಿಣವಾದ ಕ್ರಮದ ಅಗತ್ಯವಿದೆ. ಈ ವಿಶೇಷ ಪಡೆಯು ನಗರದ ಬೀದಿಗಳನ್ನು ಕಸಮುಕ್ತಗೊಳಿಸುವ ಮೂಲಕ ಬೆಂಗಳೂರಿಗೆ ಹೊಸ ‘ಲುಕ್’ ನೀಡುತ್ತದೆ.

ಒಬ್ಬ ನಾಯಕನಾಗಿ, ನಗರದ ಸೌಂದರ್ಯವನ್ನು ಜಾಗತಿಕ ಮಟ್ಟಕ್ಕೆ ಏರಿಸುವುದು ಅವರ ರಾಜಕೀಯ ಮರ್ಯಾದೆಯ ಪ್ರಶ್ನೆಯೂ ಹೌದು. ಯಾವಾಗ ವಿದೇಶಿ ಹೂಡಿಕೆದಾರರು ಮತ್ತು ಪ್ರವಾಸಿಗರು ಬೆಂಗಳೂರಿನ ರಸ್ತೆಗಳು ಸಿಂಗಾಪುರದಷ್ಟೇ ಸ್ವಚ್ಛವಾಗಿವೆ ಎಂದು ಪ್ರಶಂಸಿಸುತ್ತಾರೋ, ಆಗ ‘ಬ್ರಾಂಡ್ ಬೆಂಗಳೂರು’ ಪರಿಕಲ್ಪನೆಗೆ ನಿಜವಾದ ಅರ್ಥ ಸಿಗುತ್ತದೆ. ಇದು ಕೇವಲ ಕಸ ವಿಲೇವಾರಿಯಲ್ಲ, ಇದು ಬೆಂಗಳೂರಿನ ಘನತೆಯನ್ನು ಜಗತ್ತಿನ ಎದುರು ಎತ್ತಿ ಹಿಡಿಯುವ ಒಂದು ಐತಿಹಾಸಿಕ ಹೆಜ್ಜೆ. ನಗರದ ಹಣೆಬರಹವನ್ನು ಅಲ್ಲಿನ ಕಟ್ಟಡಗಳು, ರಸ್ತೆಗಳು, ಉದ್ಯಾನಗಳು ಬರೆದರೆ, ನಗರದ ಮರ್ಯಾದೆಯನ್ನು ಅಲ್ಲಿನ ನೈರ್ಮಲ್ಯ ಕಾಪಾಡುತ್ತದೆ.

ಟ್ರ್ಯಾಶ್ ಪೊಲೀಸ್ ವ್ಯವಸ್ಥೆ ಜಾರಿಗೆ ದೊಡ್ಡ ದೊಡ್ಡ ಯಂತ್ರಗಳು ಅಥವಾ ಕೋಟ್ಯಂತರ ರುಪಾಯಿ ಗಳ ಬಜೆಟ್ ಬೇಕಿಲ್ಲ. ರಾಜ್ಯದ ಬೊಕ್ಕಸಕ್ಕೆ ಇದು ಹೊರೆಯೂ ಆಗುವುದಿಲ್ಲ. ಅಸಲಿಗೆ ಇದನ್ನು ಆದಾಯ ತರುವ ಮೂಲವಾಗಿಯೂ ಪರಿವರ್ತಿಸಬಹುದು. ನಮಗೆ ಬೇಕಿರುವುದು ಕಟ್ಟುನಿಟ್ಟಾದ ನಿಗಾ ಮತ್ತು ತಳಮಟ್ಟದ ಶಿಸ್ತು. ಅದಕ್ಕಾಗಿಯೇ ‘ಟ್ರ್ಯಾಶ್ ಪೊಲೀಸ್’ ವ್ಯವಸ್ಥೆ ಅತ್ಯಗತ್ಯ. ಜಗತ್ತಿನ ಬಹುತೇಕ ದೇಶಗಳು ಸ್ವಚ್ಛತೆಗೆ ಜಾಗತಿಕ ಮಟ್ಟದಲ್ಲಿ ಹೆಸರಾಗಲು ಅಲ್ಲಿನ ಕಟ್ಟುನಿಟ್ಟಾದ ದಂಡನೆ ಮತ್ತು ಕಾವಲು ವ್ಯವಸ್ಥೆಯೇ ಕಾರಣ. ಬೆಂಗಳೂರಿಗೂ ಇಂದು ಇಂಥದ್ದೇ ಒಂದು ಕ್ರಾಂತಿಕಾರಿ ಹೆಜ್ಜೆಯ ಅಗತ್ಯವಿದೆ. ಇದರಿಂದ ಕಸ ಎಸೆಯುವುದೂ ಮಹಾಪರಾಧ (Crime) ಎಂಬುದನ್ನು ಜನರಿಗೆ ಮಾನವರಿಗೆ ಮಾಡಿಕೊಟ್ಟಂತಾಗುತ್ತದೆ. ಮಾನ್ಯ ಮುಖ್ಯಮಂತ್ರಿ ಗಳು ‘ಟ್ರ್ಯಾಶ್ ಪೊಲೀಸ್’ ಪಡೆಯನ್ನು ಪ್ರಾಯೋಗಿಕವಾಗಿ ಕೆಲವು ವಾರ್ಡ್‌ಗಳಲ್ಲಿ ಜಾರಿಗೆ ತಂದರೂ, ಅದು ಇಡೀ ನಗರದ ನೈರ್ಮಲ್ಯದ ಚಿತ್ರಣವನ್ನೇ ಬದಲಾಯಿಸಬಲ್ಲದು. ಇದು ಕೇವಲ ಒಂದು ಪಡೆಯಲ್ಲ, ‘ಬ್ರ್ಯಾಂಡ್ ಬೆಂಗಳೂರು’ ಕನಸಿಗೆ ಸಿಗುವ ಅತ್ಯಂತ ಶಕ್ತಿಶಾಲಿ ಅಸ್ತ್ರ. ಈ ಪ್ರಯೋಗ ಯಶಸ್ವಿಯಾದರೆ, ನಂತರ ಇದನ್ನು ರಾಜ್ಯದ ಇತರ ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸಬಹುದು.

ಒಂದು ವೇಳೆ ಇಂಥ ವ್ಯವಸ್ಥೆಯನ್ನು ಅವರು ಜಾರಿಗೆ ತಂದಿದ್ದೇ ಆದರೆ, ಬೆಂಗಳೂರು ನಮ್ಮ ದೇಶ ದಲ್ಲಿಯೇ ಇಂಥ ವ್ಯವಸ್ಥೆ ಜಾರಿಗೆ ತಂದ ಮೊದಲ ನಗರವಾಗುತ್ತದೆ. ಆ ಕೀರ್ತಿ ಡಿ.ಕೆ.ಶಿವಕುಮಾರ ಅವರಿಗೆ ಸಲ್ಲುತ್ತದೆ. ಹಾಂ.. ಈ ಐಡಿಯಾವನ್ನು ಕೊಟ್ಟಿದ್ದಕ್ಕೆ ನನಗೇನೂ ಫೀಸು ಕೊಡಬೇಕಿಲ್ಲ.

ಬಿಟಿಪಿ - ಬೆಂಗಳೂರು ಟ್ರ್ಯಾಶ್ ಪೊಲೀಸ್ ಜಾರಿಗೆ ಬಂದ ಆರು ತಿಂಗಳೊಳಗೆ ಬೆಂಗಳೂರಿನ ಖದರು ತನ್ನಷ್ಟಕ್ಕೇ ಬದಲಾಗದಿದ್ದರೆ ಕೇಳಿ. ಡಿಕೆಶಿ ಗಟ್ಟಿ ಮನಸ್ಸು ಮಾಡಬೇಕು.

ವಿಶ್ವೇಶ್ವರ ಭಟ್‌

View all posts by this author