ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಫೇಸ್‌ʼಬುಕ್‌ʼನಲ್ಲಿ ಜವಾಬ್ದಾರಿಯಿಂದ ಕಾಮೆಂಟ್‌ ಮಾಡಬೇಕು, ಏಕೆಂದರೆ...!

ಒಂದು ಬರಹದ ಸಾರಾಂಶ, ಅದರ ಆಳ ಮತ್ತು ಲೇಖಕರು ಹೇಳ ಹೊರಟಿರುವ ನಿಜವಾದ ಆಶಯ ಏನು ಎಂಬುದು ತಿಳಿಯಬೇಕಾದರೆ ಮೊದಲು ಆ ಲೇಖನವನ್ನು ಪೂರ್ತಿಯಾಗಿ ಓದಬೇಕು. ‘ನಾಳೆ ಲೇಖನ ಬಂದ ಬಳಿಕ, ಅದನ್ನು ಓದಿ, ಅರ್ಥೈಸಿಕೊಂಡು ನಂತರ ಕಾಮೆಂಟ್ ಮಾಡಬೇಕು’ ಎಂಬ ಪ್ರಾಥಮಿಕ ತಿಳಿವಳಿಕೆ ಮತ್ತು ಕನಿಷ್ಠ ಸೌಜನ್ಯವೂ ಇಂದಿನ ಅನೇಕ ಜಾಲತಾಣ ಬಳಕೆದಾರರಲ್ಲಿ ಇಲ್ಲದಂತಿರುವುದು ನಿಜಕ್ಕೂ ಬೇಸರದ ಸಂಗತಿ.

ಫೇಸ್‌ʼಬುಕ್‌ʼನಲ್ಲಿ ಜವಾಬ್ದಾರಿಯಿಂದ ಕಾಮೆಂಟ್‌ ಮಾಡಬೇಕು, ಏಕೆಂದರೆ...!

-

ಇದೇ ಅಂತರಂಗ ಸುದ್ದಿ

ಫೇಸ್‌ಬುಕ್‌ನಲ್ಲಿ ಕೆಲವರ ಕಾಮೆಂಟ್‌ಗಳನ್ನು ನೋಡಿದರೆ ನಗಬೇಕೋ ಅಥವಾ ಅಳಬೇಕೋ ಎಂಬುದು ಗೊತ್ತಾಗುವುದಿಲ್ಲ. ನಾಳೆ ಪ್ರಕಟವಾಗಲಿರುವ ಲೇಖನದ ಒಂದು ಪ್ರೋಮೋ ಅಥವಾ ಶೀರ್ಷಿಕೆಯನ್ನು ಇಂದೇ ನೋಡಿ, ಇಡೀ ಲೇಖನವನ್ನೇ ಓದಿದವರಂತೆ ವಿಚಿತ್ರವಾಗಿ ಕಾಮೆಂಟ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಒಂದು ಬರಹದ ಸಾರಾಂಶ, ಅದರ ಆಳ ಮತ್ತು ಲೇಖಕರು ಹೇಳ ಹೊರಟಿರುವ ನಿಜವಾದ ಆಶಯ ಏನು ಎಂಬುದು ತಿಳಿಯಬೇಕಾದರೆ ಮೊದಲು ಆ ಲೇಖನವನ್ನು ಪೂರ್ತಿಯಾಗಿ ಓದಬೇಕು. ‘ನಾಳೆ ಲೇಖನ ಬಂದ ಬಳಿಕ, ಅದನ್ನು ಓದಿ, ಅರ್ಥೈಸಿಕೊಂಡು ನಂತರ ಕಾಮೆಂಟ್ ಮಾಡಬೇಕು’ ಎಂಬ ಪ್ರಾಥಮಿಕ ತಿಳಿವಳಿಕೆ ಮತ್ತು ಕನಿಷ್ಠ ಸೌಜನ್ಯವೂ ಇಂದಿನ ಅನೇಕ ಜಾಲತಾಣ ಬಳಕೆದಾರರಲ್ಲಿ ಇಲ್ಲದಂತಿರುವುದು ನಿಜಕ್ಕೂ ಬೇಸರದ ಸಂಗತಿ.

‘ಪುಸ್ತಕದ ಮುಖಪುಟ ನೋಡಿ ಇಡೀ ಕಥೆಯನ್ನು ನಿರ್ಧರಿಸಬೇಡಿ’ ಎಂಬ ಹಳೆಯ ಗಾದೆ ಮಾತಿದೆ. ಆದರೆ ಇಂದು ಜನರು ಮುಖಪುಟದ ಶೀರ್ಷಿಕೆಯನ್ನೂ ಸರಿಯಾಗಿ ಓದದೇ, ಕೇವಲ ತಮ್ಮ ಮನಸ್ಸಿಗೆ ತೋಚಿದ್ದನ್ನು, ತಲೆಬುಡವಿಲ್ಲದಂತೆ ಬರೆಯುತ್ತಿದ್ದಾರೆ. ಇದು ಕೇವಲ ಸಾಮಾನ್ಯ ಜ್ಞಾನದ (ಕಾಮನ್ ಸೆನ್ಸ್) ಕೊರತೆಯಷ್ಟೇ ಅಲ್ಲ, ತಾವೇ ಎಲ್ಲವನ್ನು ಬಲ್ಲವರೆಂಬಭ್ರಮೆಯ ಪ್ರದರ್ಶನವೂ ಹೌದು.

ಯಾವುದೇ ವಿಷಯದ ಬಗ್ಗೆ ಅನಿಸಿಕೆ ವ್ಯಕ್ತಪಡಿಸುವ ಮುನ್ನ, ಆ ವಿಷಯದ ಬಗ್ಗೆ ಕನಿಷ್ಠ ಜ್ಞಾನ ವಿರಬೇಕು ತಾನೇ? ಓದುವ ತಾಳ್ಮೆ ಇಲ್ಲದವರು ಕೇವಲ ಲೈಕ್ಸ್ ಮತ್ತು ಅಟೆನ್ಶನ್‌ಗಾಗಿ ಇಂಥ ಅವಿವೇಕದ ಕಾಮೆಂಟ್‌ʼಗಳನ್ನು ಮಾಡುತ್ತಾರೆ. ಇಂಥ ‘ಅತಿಜ್ಞಾನಿ’ಗಳ ಕಾಮೆಂಟ್ ಓದಿದಾಗ ಅವರ ಬಗ್ಗೆ ಕನಿಕರ ಮೂಡುತ್ತದೆ.

ಇದನ್ನೂ ಓದಿ: Vishweshwar Bhat Column: ತೈಲ, ಚಿನ್ನಕ್ಕಿಂತಲೂ ಅತ್ಯುತ್ತಮ ದುಬಾರಿಯಾದುದು ಮನುಷ್ಯನ ಗಮನ!

ನಾನು ಈ ಮಾತನ್ನು ಹೇಳಲು ಕಾರಣವಿದೆ. ಇತ್ತೀಚೆಗೆ ನನ್ನ ಸ್ನೇಹಿತರಾದ ಸತ್ಯಮೂರ್ತಿಯವರು ತಮ್ಮ ಫೇಸ್‌ಬುಕ್‌ನಲ್ಲಿ ನಾಯಿಯ ಪ್ರತಿಮೆಯೊಂದರ ಮುಂದೆ ನಿಂತ ತಮ್ಮ ಫೋಟೋವನ್ನು ಪೋ ಮಾಡಿದ್ದರು. ‘ಈ ನಾಯಿಯ ಬಗ್ಗೆ ಬರೆಯುವುದು ಬಹಳ ಇದೆ, ಸದ್ಯದ ಬರೆಯುವೆ’ ಎಂದೂ ಬರೆದಿದ್ದರು.

ನಾನು ನೋಡುವ ಹೊತ್ತಿಗೆ ಈ ಪೋಸ್ಟಿಗೆ ಸುಮಾರು ನಲವತ್ತೆರಡು ಕಾಮೆಂಟುಗಳು ಬಂದಿದ್ದವು. ‘ನಮಗೆ ಈ ನಾಯಿಯ ಬಗ್ಗೆ ತಿಳಿದುಕೊಳ್ಳುವ ಆಸೆಯಿದೆ, ಬೇಗ ಬರೆಯಿರಿ’ ಎಂದು ಮೂವರು ಬರೆದಿದ್ದನ್ನು ಬಿಟ್ಟರೆ, ಉಳಿದವರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು.

‘ಮನುಷ್ಯರ ಬಗ್ಗೆ ಹೇಳಿ, ವಿದೇಶಿ ನಾಯಿಯ ಬಗ್ಗೆ ಹೇಳಬೇಕಿಲ್ಲ. ನಮಗೆ ತಿಳಿದುಕೊಳ್ಳುವ ಆಸೆಯೂ ಇಲ್ಲ’ ಎಂದು ಒಂದಿಬ್ಬರು ಪ್ರತಿಕ್ರಿಯಿಸಿದ್ದರು. ‘ವಿದೇಶಕ್ಕೆ ಹೋದಾಗ ಅಲ್ಲಿನ ನಾಯಿ ಪ್ರತಿಮೆ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುವ ನಿಮ್ಮ ತೆವಲು ಕಟ್ಟಿಕೊಂಡು ನಮಗೇ ನಾಗಬೇಕು?’ ಎಂದು ಒಬ್ಬರು ಬರೆದಿದ್ದರು.

‘ನಿಮ್ಮಂಥವರಿಗೆ ವಿದೇಶದ ನಾಯಿಗಳೂ ಚೆಂದವಾಗಿಯೇ ಕಾಣುತ್ತವೆ’ ಎಂದು ಒಬ್ಬ ಬರೆದಿದ್ದ. ಉಳಿದ ಕಾಮೆಂಟ್‌ಗಳು ಹೆಚ್ಚು- ಕಮ್ಮಿ ಇದೇ ಧಾಟಿಯಲ್ಲಿದ್ದವು. ಈ ಕಾಮೆಂಟುಗಳನ್ನು ಓದಿ ನನಗೆ ಅತೀವ ಖೇದವಾಯಿತು.

6

ನಾನು ರಷ್ಯಾ ರಾಜಧಾನಿ ಮಾಸ್ಕೋಕ್ಕೆ ಹೋದಾಗ ಈ ನಾಯಿಯ ಪ್ರತಿಮೆ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದೆ. ಸಾಮಾನ್ಯವಾಗಿ ಈ ನಾಯಿಯ ಬಗ್ಗೆ ತಿಳಿದುಕೊಂಡವರು ಆ ಪ್ರತಿಮೆ ನೋಡದೇ ಬರುವುದಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನದ ಇತಿಹಾಸದಲ್ಲಿ ಮಾನವನ ಸಾಹಸಗಾಥೆ ಗಳಿಗೆ ಎಷ್ಟು ಪ್ರಾಮುಖ್ಯ ಇದೆಯೋ, ಅಷ್ಟೇ ಪ್ರಾಮುಖ್ಯ ವಿಜ್ಞಾನದ ಬೆಳವಣಿಗೆಗಾಗಿ ಅರಿವಿಲ್ಲದೆ ಯೇ ಪ್ರಾಣತ್ಯಾಗ ಮಾಡಿದ ಮೂಕ ಜೀವಿಗಳಿಗೂ ಇದೆ. ಅಂಥ ಜೀವಿಗಳ ಸಾಲಿನಲ್ಲಿ ಅಗ್ರಪಂಕ್ತಿ ಯಲ್ಲಿ ನಿಲ್ಲುವ ಹೆಸರು ‘ಲೈಕಾ’.

ಭೂಮಿಯ ಕಕ್ಷೆಯನ್ನು ತಲುಪಿದ ಜಗತ್ತಿನ ಮೊದಲ ಜೀವಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಮಾಸ್ಕೋದ ಬೀದಿನಾಯಿಯ ಕಥೆ ಎಷ್ಟು ರೋಮಾಂಚನಕಾರಿಯೋ, ಅಷ್ಟೇ ಭಾವುಕವಾದುದು. ಮಾನವನ ಬಾಹ್ಯಾಕಾಶ ಯಾನಕ್ಕೆ ದಾರಿ ಮಾಡಿಕೊಟ್ಟ ಲೈಕಾಳ ನೆನಪನ್ನು ಶಾಶ್ವತವಾಗಿ ಉಳಿಸಲು ರಷ್ಯಾದ ಮಾಸ್ಕೋದಲ್ಲಿ ಆಕೆಯ ವಿಶಿಷ್ಟ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

1950ರ ದಶಕದಲ್ಲಿ ಅಮೆರಿಕ ಮತ್ತು ಸೋವಿಯತ್ ರಷ್ಯಾ ನಡುವೆ ಬಾಹ್ಯಾಕಾಶ ಪೈಪೋಟಿ ತಾರಕ ಕ್ಕೇರಿತ್ತು. ಯಾರು ಮೊದಲು ಬಾಹ್ಯಾಕಾಶವನ್ನು ಜಯಿಸುತ್ತಾರೆ ಎಂಬ ಸ್ಪರ್ಧೆ ನಡೆದಿತ್ತು. ಮನುಷ್ಯ ನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮುನ್ನ, ಅಲ್ಲಿನ ಶೂನ್ಯ ಗುರುತ್ವಾಕರ್ಷಣೆ ಮತ್ತು ವಾತಾವರಣ ವನ್ನು ಜೀವಿಗಳು ತಡೆದುಕೊಳ್ಳಬಲ್ಲವೇ ಎಂಬುದನ್ನು ಪರೀಕ್ಷಿಸುವುದು ವಿಜ್ಞಾನಿಗಳಿಗೆ ಅನಿವಾರ್ಯವಾಗಿತ್ತು.

ಈ ಪ್ರಯೋಗಕ್ಕಾಗಿ ರಷ್ಯಾದ ವಿಜ್ಞಾನಿಗಳು ಮಾಸ್ಕೋದ ಬೀದಿಗಳಲ್ಲಿ ಅಲೆಯುತ್ತಿದ್ದ ನಾಯಿ ಗಳನ್ನು ಆಯ್ದುಕೊಂಡರು ಬೀದಿ ನಾಯಿಗಳು ಕಷ್ಟಕರವಾದ ಹವಾಮಾನ, ಹಸಿವು ಮತ್ತು ಚಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ ಎಂಬುದು ವಿಜ್ಞಾನಿಗಳ ಯೋಚನೆ ಯಾಗಿತ್ತು.

ಹಾಗೆ ಸಿಕ್ಕ ಮೂರು ವರ್ಷದ ಸಾಧಾರಣ ಹೆಣ್ಣು ನಾಯಿಯೇ ಈ ಲೈಕಾ. ಆಕೆಯ ಶಾಂತ ಸ್ವಭಾವ ಮತ್ತು ಬುದ್ಧಿವಂತಿಕೆಯನ್ನು ಕಂಡು ವಿಜ್ಞಾನಿಗಳು ಆಕೆಯನ್ನು ಬಾಹ್ಯಾಕಾಶದ ಮೊದಲ ಪ್ರಯಾಣಿಕಳನ್ನಾಗಿ ಆಯ್ಕೆ ಮಾಡಿದರು.

ನವೆಂಬರ್ 3, 1957. ಸೋವಿಯತ್ ರಷ್ಯಾ ‘ಸ್ಪುಟ್ನಿಕ್-2’ ನೌಕೆಯ ಮೂಲಕ ಲೈಕಾಳನ್ನು ಬಾಹ್ಯಾ ಕಾಶಕ್ಕೆ ಉಡಾವಣೆ ಮಾಡಿತು. ಇಡೀ ಜಗತ್ತೇ ವಿಸ್ಮಯದಿಂದ ಈ ಘಟನೆಯನ್ನು ವೀಕ್ಷಿಸಿತು. ಲೈಕಾ ಯಶಸ್ವಿಯಾಗಿ ಭೂಮಿಯ ಕಕ್ಷೆಯನ್ನು ತಲುಪಿದಳು. ಆಕೆಯ ಹೃದಯ ಬಡಿತ, ಉಸಿರಾಟದ ವೇಗವನ್ನು ಭೂಮಿಯಲ್ಲಿದ್ದ ನಿಯಂತ್ರಣ ಕೊಠಡಿಯಿಂದ ವಿಜ್ಞಾನಿಗಳು ಗಮನಿಸುತ್ತಿದ್ದರು.

ಆದರೆ, ಆ ಕಾಲದಲ್ಲಿ ತಂತ್ರಜ್ಞಾನವು ಬಾಹ್ಯಾಕಾಶ ನೌಕೆಯನ್ನು ಮರಳಿ ಭೂಮಿಗೆ ಸುರಕ್ಷಿತವಾಗಿ ಕರೆತರುವಷ್ಟು ಮುಂದುವರಿದಿರಲಿಲ್ಲ. ಲೈಕಾ ಮರಳಿ ಬರಲಾರದ ಯಾನಕ್ಕೆ ತೆರಳಿದ್ದಾಳೆ ಎಂಬ ಕಹಿ ಸತ್ಯ ವಿಜ್ಞಾನಿಗಳಿಗೆ ಮೊದಲೇ ತಿಳಿದಿತ್ತು.

ನೌಕೆಯು ಕಕ್ಷೆ ತಲುಪಿದ ಕೆಲವು ಗಂಟೆಗಳ ನಂತರ, ಅದರಲ್ಲಿನ ತಾಪಮಾನ ನಿಯಂತ್ರಣ ವ್ಯವಸ್ಥೆ ಯು ವಿಫಲಗೊಂಡು ಉಷ್ಣತೆ ವಿಪರೀತವಾಗಿ ಹೆಚ್ಚಾಯಿತು. ಅತಿಯಾದ ಶಾಖ ಮತ್ತು ಆತಂಕ ದಿಂದಾಗಿ ಲೈಕಾ ಉಡಾವಣೆಯಾದ ಕೆಲವೇ ಗಂಟೆಗಳಲ್ಲಿ ಕೊನೆಯುಸಿರೆಳೆದಳು. ಆಕೆ ಮೃತ ಪಟ್ಟರೂ, ಜೀವಿಗಳು ಬಾಹ್ಯಾಕಾಶದಲ್ಲಿ ಬದುಕಬಲ್ಲವು ಎಂಬ ಅತ್ಯಮೂಲ್ಯ ದತ್ತಾಂಶವನ್ನು ಜಗತ್ತಿಗೆ ನೀಡಿದಳು.

ಲೈಕಾಳ ಮರಣದ ನಂತರ ದಶಕಗಳ ಕಾಲ ಆಕೆಯ ತ್ಯಾಗವನ್ನು ಕೇವಲ ಇತಿಹಾಸದ ಪುಟಗಳಲ್ಲಿ ಮಾತ್ರ ಸ್ಮರಿಸಲಾಗುತ್ತಿತ್ತು. ಆದರೆ, ಆಕೆಗೆ ಸೂಕ್ತ ಗೌರವ ಸಲ್ಲಿಕೆಯಾಗಬೇಕು ಎಂಬ ಕೂಗು ಜಾಗತಿಕ ವಾಗಿ ಕೇಳಿ ಬಂತು. ಕೊನೆಗೆ, ಆಕೆಯ ಐತಿಹಾಸಿಕ ಯಾನದ 50 ವರ್ಷಗಳ ನೆನಪಿಗಾಗಿ

2008ರ ಏಪ್ರಿಲ್ 11ರಂದು ಮಾಸ್ಕೋದಲ್ಲಿ ಲೈಕಾಳ ಅಧಿಕೃತ ಮತ್ತು ಭವ್ಯವಾದ ಕಂಚಿನ ಪ್ರತಿಮೆ ಯನ್ನು ಅನಾವರಣಗೊಳಿಸಲಾಯಿತು. ಈ ಪ್ರತಿಮೆಯನ್ನು ಮಾಸ್ಕೋದಲ್ಲಿರುವ ‘ಮಿಲಿಟರಿ ಮೆಡಿಸಿನ್ ಸಂಸ್ಥೆ’ಯ ಆವರಣದಲ್ಲಿ ಸ್ಥಾಪಿಸಲಾಗಿದೆ. ಇದೇ ಸಂಸ್ಥೆಯಲ್ಲಿ 1957ರಲ್ಲಿ ವಿಜ್ಞಾನಿಗಳು ಲೈಕಾಳಿಗೆ ಬಾಹ್ಯಾಕಾಶ ಪ್ರಯಾಣಕ್ಕಾಗಿ ಕಠಿಣ ತರಬೇತಿಯನ್ನು ನೀಡಿದ್ದರು. ಆಕೆ ಓಡಾಡಿದ ಜಾಗದ ಆಕೆಯ ಸ್ಮಾರಕ ತಲೆ ಎತ್ತಿ ನಿಂತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ.

ಲೈಕಾಳ ಪ್ರತಿಮೆಯು ಕೇವಲ ಒಂದು ಸಾಮಾನ್ಯ ನಾಯಿಯ ಮೂರ್ತಿಯಲ್ಲ. ಅದು ಅತ್ಯಂತ ಕಲಾತ್ಮಕ ಮತ್ತು ಆಳವಾದ ಅರ್ಥವನ್ನು ಒಳಗೊಂಡಿರುವ ವಿನ್ಯಾಸವಾಗಿದೆ. ಇದನ್ನು ವಿನ್ಯಾಸ ಗೊಳಿಸಿದವರು ಪ್ರಸಿದ್ಧ ಶಿಲ್ಪಿ ಪಾವೆಲ್ ಮೆಡ್ವೆಡೇವ್.

ಈ ಪ್ರತಿಮೆಯ ಕೆಳಭಾಗವು ಬಾಹ್ಯಾಕಾಶ ರಾಕೆಟ್‌ನ ಆಕಾರದಲ್ಲಿದೆ. ಆ ರಾಕೆಟ್ ಮೇಲಕ್ಕೆ ಏರುತ್ತಿದ್ದಂತೆ, ಅದು ಹಂತಹಂತವಾಗಿ ರೂಪಾಂತರಗೊಂಡು ಮನುಷ್ಯನ ತೆರೆದ ಹಸ್ತದ (ಕೈಯ) ಆಕಾರವನ್ನು ಪಡೆದುಕೊಳ್ಳುತ್ತದೆ. ಇದು ಮಾನವನ ಬುದ್ಧಿಶಕ್ತಿ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ದ ಕಡೆಗೆ ಚಾಚಿದ ಮಾನವನ ಹಸ್ತವನ್ನು ಸಂಕೇತಿಸುತ್ತದೆ. ಆ ಹಸ್ತದ ಮಧ್ಯಭಾಗದಲ್ಲಿ ಲೈಕಾ ಅತ್ಯಂತ ಗಂಭೀರವಾಗಿ, ಹೆಮ್ಮೆಯಿಂದ ಆಕಾಶದ ಕಡೆಗೆ ಮುಖ ಮಾಡಿ ನಿಂತಿದ್ದಾಳೆ.

ಆಕೆಯ ಮುಖದಲ್ಲಿ ಯಾವುದೇ ಭಯವಿರದೆ, ವಿಜ್ಞಾನದ ವಿಜಯದ ಸಂಕೇತವಾಗಿ ಆಕೆ ಕಂಗೊಳಿಸುತ್ತಿದ್ದಾಳೆ. ಈ ಇಡೀ ಸ್ಮಾರಕದ ಎತ್ತರ ಸುಮಾರು 2 ಮೀಟರ್. ಕಂಚಿನಿಂದ ಮಾಡಲಾದ ಈ ಪ್ರತಿಮೆಯು ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಅದು ಮೂಡಿಸುವ ಭಾವನೆ ಮತ್ತು ಗೌರವ ಮಾತ್ರ ಅಪಾರ.

ಈ ಪ್ರತಿಮೆಯು ಕೇವಲ ರಷ್ಯಾದ ವಿಜ್ಞಾನದ ಸಾಧನೆಯನ್ನು ಸಾರುವುದಿಲ್ಲ, ಬದಲಿಗೆ ಅದು ಮಾನವ ಜನಾಂಗದ ಪಶ್ಚಾತ್ತಾಪ ಮತ್ತು ಕೃತಜ್ಞತೆಯ ಸಂಕೇತ. ಮನುಷ್ಯನು ತನ್ನ ಸ್ವಾರ್ಥ ಮತ್ತು ಜ್ಞಾನದ ಹಸಿವಿಗಾಗಿ ಪ್ರಕೃತಿಯನ್ನು ಹಾಗೂ ಇತರೆ ಜೀವಿಗಳನ್ನು ಬಳಸಿಕೊಳ್ಳುತ್ತಾನೆ. ಆದರೆ ಲೈಕಾಳ ಪ್ರತಿಮೆಯು, ವಿಜ್ಞಾನದ ಇಷ್ಟೊಂದು ದೊಡ್ಡ ಬೆಳವಣಿಗೆಯ ಹಿಂದೆ ಒಂದು ಮೂಕ ಜೀವಿಯ ಪ್ರಾಣದ ಬೆಲೆ ಇದೆ ಎಂಬುದನ್ನು ಮನುಕುಲಕ್ಕೆ ಸದಾ ನೆನಪಿಸುತ್ತದೆ.

ಇಂದಿಗೂ ಮಾಸ್ಕೋಗೆ ಭೇಟಿ ನೀಡುವ ಪ್ರವಾಸಿಗರು, ಪ್ರಾಣಿ ಪ್ರೇಮಿಗಳು ಮತ್ತು ವಿಜ್ಞಾನಿಗಳು ಈ ಪ್ರತಿಮೆಯ ಬಳಿ ಬಂದು ಲೈಕಾಳಿಗೆ ನಮಿಸುತ್ತಾರೆ. ಪ್ರತಿಮೆಯ ಪಾದದ ಬಳಿ ಸದಾ ತಾಜಾ ಹೂವು ಗಳನ್ನು ಇಟ್ಟು ಗೌರವ ಸಲ್ಲಿಸಲಾಗುತ್ತದೆ. ಜಗತ್ತಿನ ಹಲವಾರು ದೇಶಗಳು (ರಷ್ಯಾ, ರೊಮೇನಿಯಾ, ಹಂಗೇರಿ ಮುಂತಾದವು) ಲೈಕಾಳ ಚಿತ್ರವಿರುವ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿವೆ.

ಲೈಕಾ ಭೂಮಿಯಿಂದ ಹಾರಿ ಹೋಗಿ ದಶಕಗಳೇ ಕಳೆದಿರಬಹುದು. ಆಕೆಯ ಯಾನದ ನಂತರವೇ ಯೂರಿ ಗಗಾರಿನ್ ಬಾಹ್ಯಾಕಾಶಕ್ಕೆ ಹೋದ ಮೊದಲ ಮಾನವನಾದರು, ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟರು. ಇಂದು ಮಾನವ ಮಂಗಳ ಗ್ರಹದ ಮೇಲೆ ಮನೆ ಕಟ್ಟುವ ಕನಸು ಕಾಣುತ್ತಿದ್ದಾನೆ ಎಂದರೆ, ಅದಕ್ಕೆ ಅಡಿಪಾಯ ಹಾಕಿಕೊಟ್ಟಿದ್ದು ಲೈಕಾಳ ಆ ಏಕಮುಖ ಪ್ರಯಾಣ.

‘ಸಾಧನೆಯ ಶಿಖರವನ್ನು ಏರುವಾಗ, ಆ ಶಿಖರಕ್ಕೆ ಏಣಿಯಾದವರನ್ನು ಎಂದಿಗೂ ಮರೆಯ ಬಾರದು.’ ಲೈಕಾಳ ತ್ಯಾಗದ ಎತ್ತರಕ್ಕೆ ಯಾವುದೇ ಮಿತಿಗಳಿಲ್ಲ, ಆಕೆ ಬಾಹ್ಯಾಕಾಶದ ನಕ್ಷತ್ರಗಳ ನಡುವೆ ಇತಿಹಾಸದ ಧ್ರುವತಾರೆಯಾಗಿ ಎಂದಿಗೂ ಮಿನುಗುತ್ತಿರುತ್ತಾಳೆ. ಫೇಸ್‌ಬುಕ್ ಬಳಕೆದಾರರು ಕಾಮೆಂಟ್ ಮಾಡುವಾಗ ಜವಾಬ್ದಾರಿಯನ್ನು ಮೆರೆಯಬೇಕು!

ಕೈಗೆ ಬಬಲ್ ರ‍್ಯಾಪ್ ಸಿಕ್ಕಾಗ ಕಳೆದ ವಾರ ಊರ್ವಶಿ ಎಂಬುವವರು ನನ್ನೊಂದಿಗೆ ಪಾಡ್‌ಕಾಸ್ಟ್ ಸಂದರ್ಶನ ಮಾಡಿದರು. ಸುಮಾರು ಒಂದೂಕಾಲು ಗಂಟೆ ನಮ್ಮ ಮಾತುಕತೆ ನಡೆಯಿತು. ಕೊನೆ ಯಲ್ಲಿ ಆಕೆ, ‘ನಿಮಗೆ ಇಷ್ಟವಾದ, ಅನಾಯಾಸದ ಚಟುವಟಿಕೆ ಅಥವಾ ಹವ್ಯಾಸ ಯಾವುದು?’ ಎಂದು ಕೇಳಿದರು. ಅದಕ್ಕೆ ನಾನು ಏನೂ ಯೋಚಿಸದೇ ಥಟ್ಟನೆ ಹೇಳಿದೆ- ‘ಬಬಲ್ ರ‍್ಯಾಪ್ (Bubble Wrap -ಪ್ಲಾಸ್ಟಿಕ್ ಗುಳ್ಳೆ ಕಾಗದ)ನ ಗುಳ್ಳೆಗಳನ್ನು ಒಡೆಯುವುದು.’ ಇದನ್ನು ಕೇಳಿದ ಆಕೆ, ಒಂದೇ ಸಮನೆ ಜೋರಾಗಿ ನಗಲಾರಂಭಿಸಿದಳು.

‘ನಾನು ಇಂಥದ್ದೊಂದು ಚಟುವಟಿಕೆಯನ್ನು ಹವ್ಯಾಸ ಮಾಡಿಕೊಳ್ಳಬಹುದು ಎಂದು ಕನಸಿ ನಲ್ಲಿಯೂ ಯೋಚಿಸಿರಲಿಲ್ಲ’ ಎಂದು ಹೇಳಿದಳು. ‘ನೀವು ಕೇಳಿದಿರಲ್ಲ, ನಿಮ್ಮ ಅನಾಯಾಸಕರ ವಾದ ಹವ್ಯಾಸ ಅಂದ್ರೆ ಯಾವುದು? ಅಂತ, ಅದಕ್ಕೆ ಹಾಗೆ ಹೇಳಿದೆ’ ಎಂದೆ. ಆದರೂ ಅವಳ ನಗು ನಿಂತಿರಲಿಲ್ಲ.

ಅದಕ್ಕೆ ನಾನು ಅವಳಿಗೆ ಹೇಳಿದೆ- ‘ನಾನು ನಿಮಗೆ ಒಂದು ಬಬ್ಬಲ್ ಶೀಟ್ ಕೊಡ್ತೇನೆ. ನೀವು ಅದನ್ನು ಹಿಡಿದೂ, ಒಂದೇ ಒಂದು ಗುಳ್ಳೆಯನ್ನು ಒಡೆಯಬಾರದು ಅಂದ್ರೆ ಒಡೆಯದಿರಲು ಸಾಧ್ಯವೇ ಇಲ್ಲ. ಬೇಕಾದರೆ ಪ್ರಯತ್ನಿಸಿ.’

‘ಹೌದು, ಬಬಲ್ ಶೀಟ್ ಸಿಕ್ಕಾಗ, ನಾನೂ ಅದರ ಗುಳ್ಳೆಗಳನ್ನು ಅದುಮಿ ಒಡೆಯುತ್ತೇನೆ’ ಎಂದು ಹೇಳಿದಳು. ಬಬಲ್ ರ‍್ಯಾಪ್ ಕೈಗೆ ಸಿಕ್ಕರೆ ಸಾಕು, ಜಗತ್ತನ್ನು ಮರೆತು ಅದನ್ನು ಪಟ ಪಟ ಎಂದು ಒಡೆಯದವರೇ ಇಲ್ಲ. ಎದುರಿಗೊಂದು ಬಬಲ್ ರ‍್ಯಾಪ್ ಹಾಳೆ ಇದ್ದರೆ, ಎಷ್ಟೇ ವಯಸ್ಸಾದವರೂ ಕೂಡ ತಮ್ಮ ಗಾಂಭೀರ್ಯವನ್ನು ಮರೆತು ಮಗುವಿನಂತೆ ಅದರಲ್ಲಿ ಮುಳುಗಿ ಹೋಗುತ್ತಾರೆ. ಇದೊಂದುಮನುಷ್ಯನ ಸಾರ್ವತ್ರಿಕ ಸಹಜ ಗುಣ.

‘ಕೇವಲ ಪ್ಲಾಸ್ಟಿಕ್ ಗುಳ್ಳೆಗಳನ್ನು ಒಡೆಯುವುದರಲ್ಲಿ ನಮಗೆ ಅಷ್ಟೊಂದು ಆನಂದ ಏಕೆ ಸಿಗುತ್ತದೆ? ಇದರ ಹಿಂದೆ ಕೇವಲ ಮೋಜು ಮಾತ್ರವಿದೆಯೇ ಅಥವಾ ಯಾವುದಾದರೂ ವಿಜ್ಞಾನ ಅಡಗಿದೆಯೇ?’ ಎಂದು ಆಕೆ ಕೇಳಿದಳು.

ಖಂಡಿತವಾಗಿಯೂ ಇದೆ. ಬಬಲ್ ರ‍್ಯಾಪ್ ಒಡೆಯುವ ಕ್ರಿಯೆಯ ಹಿಂದೆ ಬಲವಾದ ಮನೋ ವಿಜ್ಞಾನ ಮತ್ತು ನರವಿಜ್ಞಾನ ಕೆಲಸ ಮಾಡುತ್ತದೆ ಎಂದು ಹೇಳಿದೆ. ಮನುಷ್ಯನ ಇತಿಹಾಸವನ್ನು ಗಮನಿಸಿದರೆ, ನಮ್ಮ ಪೂರ್ವಜರು ತಮ್ಮ ಕೈಗಳ ಸ್ಪರ್ಶ ಜ್ಞಾನವನ್ನು (Tactile Sense) ಹೆಚ್ಚಾಗಿ ನಂಬಿದ್ದರು.

ಯಾವುದಾದರೂ ವಸ್ತುವನ್ನು ಮುಟ್ಟಿದಾಗ ಸಿಗುವ ಪ್ರತಿಕ್ರಿಯೆ ಅವರಿಗೆ ಪರಿಸರದ ಅರಿವು ಮೂಡಿಸುತ್ತಿತ್ತು. ಬಬಲ್ ರ‍್ಯಾಪ್ ಅನ್ನು ಕೈಯಲ್ಲಿ ಹಿಡಿದಾಗ ನಮ್ಮ ಮಿದುಳಿಗೆ ಒಂದು ವಿಶಿಷ್ಟ ವಾದ ಸ್ಪರ್ಶದ ಅನುಭವ ಸಿಗುತ್ತದೆ. ಆ ಗುಳ್ಳೆಯನ್ನು ಒತ್ತಿದಾಗ ಸಿಗುವ ಪ್ರತಿರೋಧ ಮತ್ತು ಅದು ಒಡೆದಾಗ ಉಂಟಾಗುವ ತೃಪ್ತಿ, ನಮ್ಮ ಮಿದುಳಿನ ಪುರಾತನ ವಿಕಾಸಾತ್ಮಕ ಪ್ರವೃತ್ತಿಯನ್ನು ಜಾಗೃತ ಗೊಳಿಸುತ್ತದೆ.

ನಮಗೆ ತಿಳಿಯದೆಯೇ ನಾವು ಆ ಸ್ಪರ್ಶ ಸುಖಕ್ಕೆ ಶರಣಾಗುತ್ತೇವೆ.ಆಧುನಿಕ ಮನೋವಿಜ್ಞಾನದ ಪ್ರಕಾರ, ಬಬಲ್ ರ‍್ಯಾಪ್ ಒಡೆಯುವುದು ಅತ್ಯುತ್ತಮ ‘ಸ್ಟ್ರೆಸ್ ಬಸ್ಟರ್’ (Stress Buster) ಆಗಿದೆ. ನಾವು ಆತಂಕ ಅಥವಾ ಒತ್ತಡದಲ್ಲಿದ್ದಾಗ ನಮ್ಮ ಸ್ನಾಯುಗಳಲ್ಲಿ ಒಂದು ರೀತಿಯ ಬಿಗಿತ ಉಂಟಾಗುತ್ತದೆ.

ಬಬಲ್ ರ‍್ಯಾಪ್ ಒಡೆಯಲು ನಾವು ಬೆರಳುಗಳಿಂದ ಕೊಡುವ ಸಣ್ಣ ಒತ್ತಡವು, ಆ ಸ್ನಾಯುಗಳ ಬಿಗಿತವನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ.

ನಮ್ಮ ಮಿದುಳಿನಲ್ಲಿ ‘ಡೋಪಮೈನ್’ ಎಂಬ ರಾಸಾಯನಿಕವಿದೆ. ಇದನ್ನು ‘ಫೀಲ್-ಗುಡ್’ ಹಾರ್ಮೋನ್ ಎಂದೂ ಕರೆಯುತ್ತಾರೆ. ನಾವು ಯಾವುದೇ ಕೆಲಸವನ್ನು ಯಶಸ್ವಿಯಾಗಿ ಮುಗಿಸಿದಾಗ ಮಿದುಳು ಈ ಡೋಪಮೈನ್ ಅನ್ನು ಬಿಡುಗಡೆ ಮಾಡಿ ನಮಗೆ ಸಂತೋಷದ ಭಾವನೆ ನೀಡುತ್ತದೆ.

ಬಬಲ್ ರ‍್ಯಾಪ್ ಒಡೆಯುವಾಗ ಏನಾಗುತ್ತದೆ? ಪ್ರತಿ ಬಾರಿ ನೀವು ಒಂದು ಗುಳ್ಳೆಯನ್ನು ಒತ್ತಿದಾಗ, ಅದೊಂದು ಸಣ್ಣ ಸವಾಲಿನಂತೆ (ಟಾಸ್ಕ್) ಇರುತ್ತದೆ. ಅದು ‘ಪಟ’ ಎಂದು ಒಡೆದ ತಕ್ಷಣ, ಆ ಸವಾಲು ಯಶಸ್ವಿಯಾಗಿ ಮುಗಿದಂತಾಗುತ್ತದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸಿಗುವ ಈ ಯಶಸ್ಸಿಗೆ ಮಿದುಳು ಸಣ್ಣ ಪ್ರಮಾಣದ ಡೋಪಮೈನ್ ಅನ್ನು ಬಿಡುಗಡೆ ಮಾಡುತ್ತದೆ. ಈ ತಕ್ಷಣದ ತೃಪ್ತಿಯು ನಮಗೆ ಮತ್ತೊಂದು ಗುಳ್ಳೆಯನ್ನು ಒಡೆಯಲು ಪ್ರೇರೇಪಿಸುತ್ತದೆ. ಹೀಗೆ ಇಡೀ ಹಾಳೆ ಖಾಲಿಯಾಗು‌ ವವರೆಗೆ ನಾವು ನಿಲ್ಲಿಸುವುದೇ ಇಲ್ಲ!

ಕೇವಲ ಸ್ಪರ್ಶ ಮಾತ್ರವಲ್ಲ, ಬಬಲ್ ರ‍್ಯಾಪ್ ಒಡೆಯುವಾಗ ಬರುವ ‘ಪಟ ಪಟ’ ಅಥವಾ ‘ಪಾಪ್’ ಶಬ್ದ ಕೂಡ ನಮ್ಮ ಮಿದುಳಿಗೆ ಹಿತ ನೀಡುತ್ತದೆ. ಶಬ್ದ ವಿಜ್ಞಾನದ ಪ್ರಕಾರ, ಇಂಥ ನಿಖರವಾದ ಮತ್ತು ಗರಿಗರಿಯಾದ ಸೌಂಡ್‌ಗಳು ಮಿದುಳಿನಲ್ಲಿ ಸಮಾಧಾನದ ತರಂಗಗಳನ್ನು ಸೃಷ್ಟಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್‌ನಲ್ಲಿ ಜಗತ್ಪ್ರಸಿದ್ಧವಾಗಿರುವ ASMR (Autonomous Sensory Meridian Response) ಪರಿಕಲ್ಪನೆಗೆ ಬಬಲ್ ರ‍್ಯಾಪ್ ಒಡೆಯುವ ಶಬ್ದವೇ ಅತ್ಯುತ್ತಮ ಉದಾಹರಣೆ. ಈ ಶಬ್ದವು ಮಿದುಳಿಗೆ ತೃಪ್ತಿ ನೀಡುವುದರಿಂದ ಆತಂಕ ತಾನಾಗಿಯೇ ದೂರವಾಗುತ್ತದೆ.

ಕೆಲವೊಮ್ಮೆ ನಮ್ಮ ಮಿದುಳಿಗೆ ಯಾವುದೇ ಆಳವಾದ ಆಲೋಚನೆಗಳಿಲ್ಲದ ವಿಶ್ರಾಂತಿ ಬೇಕಿರುತ್ತದೆ. ಬಬಲ್ ರ‍್ಯಾಪ್ ಒಡೆಯಲು ಯಾವುದೇ ಕೌಶಲ, ಬುದ್ಧಿವಂತಿಕೆ ಅಥವಾ ದೈಹಿಕ ಶ್ರಮದ ಅಗತ್ಯ ವಿಲ್ಲ. ಇದನ್ನು ‘ಮೈಂಡ್‌ಲೆಸ್ ಆಕ್ಟಿವಿಟಿ’ ಎನ್ನಬಹುದು.

ನಾವು ಟಿವಿ ನೋಡುತ್ತಾ, ಫೋನ್‌ನಲ್ಲಿ ಮಾತನಾಡುತ್ತಾ ಅಥವಾ ಯಾವುದೋ ಯೋಚನೆ ಯಲ್ಲಿದ್ದಾಗ ಬೆರಳುಗಳು ತಾವಾಗಿಯೇ ಬಬಲ್ ರ‍್ಯಾಪ್ ಒಡೆಯುತ್ತಿರುತ್ತವೆ. ಇದು ನಮ್ಮ ಗಮನ ವನ್ನು ಬೇರೆಡೆ ಸೆಳೆಯದೇ, ಒಳಮನಸ್ಸಿನ ಚಡಪಡಿಕೆಯನ್ನು ಶಾಂತಗೊಳಿಸುವ ಒಂದು ಅದ್ಭುತ ವಿಧಾನ.

ಇದು ಇಂದಿನ ಆಧುನಿಕ ‘ಫಿಡ್ಜೆಟ್ ಟಾಯ್ಸ್’ (ಉದಾಹರಣೆಗೆ Pop- it ಆಟಿಕೆಗಳು) ಪರಿಕಲ್ಪನೆಗೆ ಮುನ್ನುಡಿ ಬರೆದಿದೆ.ಬಬಲ್ ರ‍್ಯಾಪ್ ಒಡೆಯುವುದು ಕೇವಲ ಒಂದು ಸಮಯ ಕಳೆಯುವ ಆಟ ವಲ್ಲ; ಅದು ನಮ್ಮ ದೇಹ ಮತ್ತು ಮನಸ್ಸನ್ನು ಸಮತೋಲನಕ್ಕೆ ತರಲು ಪ್ರಕೃತಿಯು (ಅಥವಾ ವಿಜ್ಞಾನವು) ನಮಗೆ ನೀಡಿದ ಒಂದು ಉಚಿತ ಥೆರಪಿ! ಕೈಗೆ ಸಿಕ್ಕ ಸಣ್ಣ ಪ್ಲಾಸ್ಟಿಕ್ ಚೂರನ್ನು ಒಡೆಯುವ ಮೂಲಕ ನಾವು ನಮ್ಮ ದೈನಂದಿನ ಜಂಜಾಟಗಳಿಂದ ಕೆಲ ನಿಮಿಷಗಳ ಕಾಲ ಮುಕ್ತಿ ಪಡೆಯುತ್ತೇವೆ.

ಆನ್‌ಲೈನ್‌ನಲ್ಲಿ ತರಿಸಿದ ಯಾವುದಾದರೂ ವಸ್ತು ಬಬಲ್ ರ‍್ಯಾಪ್ ಸುತ್ತಿಕೊಂಡು ಬಂದರೆ ಅದನ್ನು ಒಡೆಯಲು ಯಾವುದೇ ಸಂಕೋಚ ಪಡಬೇಡಿ. ಏಕೆಂದರೆ, ಅದು ನಿಮ್ಮ ಮಿದುಳನ್ನು ರೀಚಾರ್ಜ್ ಮಾಡುತ್ತಿರುತ್ತದೆ.

ಹೀಗೊಂದು ಹೆಡ್‌ಲೈನ್

ಇತ್ತೀಚೆಗೆ ಲಂಡನ್‌ನ ಪತ್ರಿಕೆಯೊಂದರಲ್ಲಿ ಒಂದು ಹೆಡ್‌ಲೈನ್ ಪ್ರಕಟವಾಗಿತ್ತು- When Doves Cry, Boeings Sigh. ಭಾಷಾ ಚಮತ್ಕಾರ ಮತ್ತು ಕಾವ್ಯಾತ್ಮಕತೆಗೆ ಪತ್ರಿಕೋದ್ಯಮದ ಇತಿಹಾಸದಲ್ಲಿ ಇದೊಂದು ಅತ್ಯುತ್ತಮ ಉದಾಹರಣೆ. ಹಕ್ಕಿಗಳ ದಾಳಿಯಿಂದ (Bird Strike) ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ ಗಂಭೀರ ಸುದ್ದಿಯನ್ನು ಈ ಶೀರ್ಷಿಕೆ ಕೇವಲ ಐದೇ ಪದಗಳಲ್ಲಿ ಅತ್ಯಂತ ಕಲಾತ್ಮಕವಾಗಿ ಹಿಡಿದಿಟ್ಟಿದೆ.

ಈ ಹೆಡ್‌ಲೈನ್‌ನ ಮೊದಲ ಸೌಂದರ್ಯವಿರುವುದು ಅದರ Wordplay ಅಥವಾ ಶಬ್ದ ಚಮತ್ಕಾರ ದಲ್ಲಿ. ಪಾಪ್ ಗಾಯಕ ಪ್ರಿನ್ಸ್ ಅವರ ಜಾಗತಿಕ ಪ್ರಸಿದ್ಧ ಗೀತೆ ’ When Doves Cry’ ಸಾಲನ್ನು ಇಲ್ಲಿ ಜಾಣ್ಮೆಯಿಂದ ಬಳಸಿಕೊಳ್ಳಲಾಗಿದೆ. ಇಲ್ಲಿ ‘ಡೋವ್ಸ್’ (ಪಾರಿವಾಳ/ಹಕ್ಕಿ) ಕೇವಲ ಹಾಡಿನ ನೆನಪಲ್ಲ, ವಿಮಾನಕ್ಕೆ ಡಿಕ್ಕಿ ಹೊಡೆದ ನೈಜ ಹಕ್ಕಿಗಳ ಸಂಕೇತವೂ ಹೌದು.

ಇನ್ನು ಎರಡನೇ ಭಾಗವಾದ ‘Boeings Sigh’ ಭಾಷೆಯ ಉನ್ನತ ಮಟ್ಟದ ಅಭಿವ್ಯಕ್ತಿ. ಬೋಯಿಂಗ್ ವಿಮಾನವು ಸುರಕ್ಷಿತವಾಗಿ ಭೂಮಿಗೆ ಇಳಿದಾಗ ಇಂಜಿನ್‌ನಿಂದ ಹೊರಬರುವ ಆವಿಯ ಶಬ್ದವನ್ನು, ಅಪಾಯದಿಂದ ಪಾರಾದಾಗ ಮನುಷ್ಯ ಬಿಡುವ ‘ನಿಟ್ಟುಸಿರಿಗೆ’ (Sigh) ಹೋಲಿಸಲಾಗಿದೆ. ನಿರ್ಜೀವ ವಿಮಾನಕ್ಕೆ ಜೀವಂತ ಭಾವನೆ ತುಂಬಿದ ಈ ಶೈಲಿ ಅನನ್ಯ. ‘ Cry ’ ಮತ್ತು ’Sigh’ ಪದಗಳ ನಡುವಿನ ಪ್ರಾಸ (Rhyme) ಓದುಗನಿಗೆ ಒಂದು ಸುಂದರ ಲಯವನ್ನು ನೀಡುತ್ತದೆ. ಗಾಬರಿ ಹುಟ್ಟಿಸಬಹುದಾದ ಸುದ್ದಿಯೊಂದನ್ನು ಸಾಹಿತ್ಯಿಕ ಮೌಲ್ಯದೊಂದಿಗೆ ಪ್ರಸ್ತುತಪಡಿಸಿದ ಅಪರೂಪದ ಹೆಡ್‌ಲೈನ್ ಇದು.