Kiran Upadhyay Column: ಕಣ್ಣುಕಟ್ಟುವ ವಿದ್ಯೆಯೇ ಇಂದು ಕೆಲಸಕ್ಕೆ ಬಂದಿದೆ !
ಒಂದು ಕಾಲವಿತ್ತು. ಭಾರತ ಎಂದರೆ, ‘ಹಾವಾಡಿಗರ ದೇಶ’, ‘ಬಡವರ, ಭಿಕ್ಷುಕರ ದೇಶ’ ಎಂಬ ಚಿತ್ರಣ ವನ್ನು ಜಗತ್ತಿಗೆ ತೋರಿಸಲಾಗುತ್ತಿತ್ತು. ಜತೆಗೆ, ಭಾರತದಲ್ಲಿ ನಡೆಯುವ ಹೋಮ, ಹವನ, ಮಾಟ, ಮೋಡಿ, ಮಂತ್ರ, ಯಂತ್ರ, ತಂತ್ರ, ಸಮ್ಮೋಹಿನಿ, ಕಣ್ಣುಕಟ್ಟುವ ವಿದ್ಯೆ ಇತ್ಯಾದಿಗಳೇ ಹೆಚ್ಚು ಪ್ರಚಾರ ಪಡೆಯುತ್ತಿದ್ದವು. ದಿನ ಕಳೆದಂತೆ ಹಾವಾಡಿಗರ ದೇಶ ಎನ್ನುವ ಹಣೆಪಟ್ಟಿಯನ್ನು ಭಾರತ ಕಳಚಿ ಕೊಂಡಿತು. ಮಾಟ, ಮಂತ್ರ, ಮೋಡಿ, ತಂತ್ರ ಇತ್ಯಾದಿಗಳು ಕೂಡ ಗಣನೀಯ ಪ್ರಮಾಣದಲ್ಲಿ ಕಡಿಮೆ ಯಾಗತೊಡಗಿದವು.


ವಿದೇಶವಾಸಿ
dhyapaa@gmail.com
ಆಪರೇಷನ್ ಸಿಂದೂರ ಸ್ಥಗಿತಗೊಂಡಿದೆ. ಈಗ ಏನಿದ್ದರೂ ಆಪರೇಷನ್ ಸಿಂದೂರದ ಆಪರೇಷನ್ ನಡೆಯುತ್ತಿದೆ. ಒಂದಂತೂ ಸಾಬೀತಾಗಿದೆ, ಭಾರತದಲ್ಲಿ ಭೂಮಿ ಯುದ್ಧ ನಿಲ್ಲಬಹುದು, ಬಾಯಿ ಯುದ್ಧ ನಿಲ್ಲುವುದಿಲ್ಲ. ಅದರಲ್ಲೂ ರಾಜಕೀಯ ಪಕ್ಷದವರ ಬಾಯಿ ಯುದ್ಧ ಇನ್ನೂ ಎಪ್ಪತ್ತೈದು ವರ್ಷವಾದರೂ ನಿಲ್ಲಲಿಕ್ಕಿಲ್ಲ. ನಮ್ಮ ಜನಸಾಮಾನ್ಯರೂ ಕಮ್ಮಿಯೇನಿಲ್ಲ. ಯುದ್ಧ ಬಿಡಿ, ತನ್ನ ಇಡೀ ಜೀವಮಾನದಲ್ಲಿ ಒಮ್ಮೆಯಾದರೂ ಒಬ್ಬ ಯೋಧನನ್ನು ನೋಡದವನೂ, ಒಮ್ಮೆಯೂ ಯುದ್ಧ ವಿಮಾನವನ್ನು ಕಾಣದವನೂ ಮಿಸೈಲ್ ಬಗ್ಗೆ ಮಾತಾಡುತ್ತಾನೆ.
ಇಂಥವರಿಗೆಲ್ಲ ತಾನು ಏನೇ ಮಾತಾಡಿದರೂ ತನ್ನ ತಲೆಯ ಮೇಲೆ ಮಿಸೈಲ್ ಬೀಳುವುದಿಲ್ಲ ಎಂಬು ದಂತೂ ಖಾತ್ರಿಯಾಗಿರುತ್ತದೆ. ತನ್ನ ಜೀವಮಾನವಿಡೀ ಒಂದೇ ಕೆಲಸ ಮಾಡಿಕೊಂಡು ಬಂದಿದ್ದರೂ ಉದ್ಧಾರ ಆಗದೇ ಇದ್ದವನೂ ಯುದ್ಧದ ಬಗ್ಗೆ ‘ಪುಗ್ಸಟ್ಟೆ ಪ್ರವಚನ’ ಕೊಡುವ ದೇಶ ಏನಾದರೂ ಇದ್ದರೆ ಅದು ಭಾರತವೇ ಇರಬೇಕು. ಈ ವಿಷಯದಲ್ಲಿ ಮಾತ್ರ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಸಮಬಲರು ಎಂಬುದನ್ನು ಮೊನ್ನೆಯ ಕಾರ್ಯಾಚರಣೆ ಸಾಬೀತು ಪಡಿಸಿದೆ. ಕಳೆದ ವಾರದ ಅಂಕಣ ಓದಿ ಕೆಲವರು ಕರೆ ಮಾಡಿ ‘ನಿಮ್ಮ ಪ್ರಕಾರ ಭಾರತ ಏನು ಮಾಡಬೇಕಿತ್ತು?’ ಎಂದು ಕೇಳಿದ್ದರು.
ನನ್ನ ಪ್ರಕಾರ, ‘ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಕೇಳಿಕೊಂಡರು, ನಾವು ಕದನ ವಿರಾಮಕ್ಕೆ ಒಪ್ಪಿದೆವು’ ಎಂದು ಹೇಳುವ ಬದಲು, ‘ಪಾಕಿಸ್ತಾನದ ಡಿಜಿಎಂಒ ಕಡೆ ಯಿಂದಲೇ, ನಾವು ಕದನವಿರಾಮ ಪ್ರಸ್ತಾಪಿಸಿದ್ದೇವೆ, ಭಾರತ ಒಪ್ಪಿದೆ ಎಂದು ಹೇಳಿಸಬೇಕಿತ್ತು’ ಎಂದು ಪುಗ್ಸಟ್ಟೆ ಪ್ರವಚನ ಕೊಟ್ಟೆ. ನನ್ನ ತಲೆಯ ಮೇಲೂ ಮಿಸೈಲ್ ಬೀಳುವುದಿಲ್ಲ ಎಂಬ ಗ್ಯಾರಂಟಿ ನನಗೂ ಇತ್ತು!
ಇದನ್ನೂ ಓದಿ: Kiran Upadhyay Column: ಹಾಂಗ್ ಕಾಂಗ್ ನಲ್ಲಿ ಹರಿಶ್ಚಂದ್ರ...!
ಈ ತಮಾಷೆ, ಹಾಸ್ಯ, ಆರೋಪ, ಪ್ರತ್ಯಾರೋಪಗಳೆಲ್ಲ ಒಂದು ಕಡೆ ಇರಲಿ, ಆಪರೇಷನ್ ಸಿಂದೂರ ದಿಂದ ಭಾರತಕ್ಕೆ ದಕ್ಕಿದ್ದೇನು? ಮಿಕ್ಕಿದ್ದೇನು? ಕೆಲವು ವಿಷಯಗಳನ್ನು ಕಳೆದ ವಾರ ಬರೆದಿದ್ದರಿಂದ ಈಗ ಪುನಃ ಪ್ರಸ್ತಾಪಿಸುವುದಿಲ್ಲ. ಈ ಕಾರ್ಯಾಚರಣೆಯಲ್ಲಿ ಎಷ್ಟು ಜನ ಸತ್ತರು? ಎಷ್ಟು ವಿಮಾನ ಧರೆಗೆ ಉರುಳಿತು? ಇಂಥ ಪ್ರಶ್ನೆಗಳಿಗೆ ಈಗಲೇ ಉತ್ತರಿಸುವುದು ಕಷ್ಟ. ಈ ಎಲ್ಲ ಹೊಯ್ದಾಟಗಳ ನಡುವೆ ಕೆಲವು ಅಂಶಗಳ ಕಡೆಗೆ ಗಮನ ಹರಿಸೋಣ.
ಒಂದು ಕಾಲವಿತ್ತು. ಭಾರತ ಎಂದರೆ, ‘ಹಾವಾಡಿಗರ ದೇಶ’, ‘ಬಡವರ, ಭಿಕ್ಷುಕರ ದೇಶ’ ಎಂಬ ಚಿತ್ರಣ ವನ್ನು ಜಗತ್ತಿಗೆ ತೋರಿಸಲಾಗುತ್ತಿತ್ತು. ಜತೆಗೆ, ಭಾರತದಲ್ಲಿ ನಡೆಯುವ ಹೋಮ, ಹವನ, ಮಾಟ, ಮೋಡಿ, ಮಂತ್ರ, ಯಂತ್ರ, ತಂತ್ರ, ಸಮ್ಮೋಹಿನಿ, ಕಣ್ಣುಕಟ್ಟುವ ವಿದ್ಯೆ ಇತ್ಯಾದಿಗಳೇ ಹೆಚ್ಚು ಪ್ರಚಾರ ಪಡೆಯುತ್ತಿದ್ದವು. ದಿನ ಕಳೆದಂತೆ ಹಾವಾಡಿಗರ ದೇಶ ಎನ್ನುವ ಹಣೆಪಟ್ಟಿಯನ್ನು ಭಾರತ ಕಳಚಿಕೊಂಡಿತು. ಮಾಟ, ಮಂತ್ರ, ಮೋಡಿ, ತಂತ್ರ ಇತ್ಯಾದಿಗಳು ಕೂಡ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗತೊಡಗಿದವು.
ಸಂಮೋಹಿನಿ ಅಥವಾ ಕಣ್ಣುಕಟ್ಟುವ ವಿದ್ಯೆ ಎಷ್ಟು ಕಡಿಮೆಯಾಗಿದೆಯೋ ಗೊತ್ತಿಲ್ಲ, ಆದರೆ ಮೊನ್ನೆ ನಡೆದ ಆಪರೇಷನ್ ಸಿಂದೂರದಲ್ಲಿ ಕಣ್ಣುಕಟ್ಟುವ ವಿದ್ಯೆ ಮಹತ್ತರವಾದ ಪಾತ್ರವನ್ನು ವಹಿಸಿತ್ತು. ಇದೇನು? ಯುದ್ಧದಲ್ಲಿ ಕಣ್ಣುಕಟ್ಟುವ ವಿದ್ಯೆಯೇ ಎಂದು ಕೇಳಿದರೆ, ಹೌದು, ಇದೂ ಒಂದು ರೀತಿಯಲ್ಲಿ ಹಾಗೆಯೇ!
ಇಂದು ಭಾರತದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಪದ ಎಂದರೆ ’ಬ್ರಹ್ಮೋಸ್’. ಇದರ ಕೆಲವು ವಿಶೇಷತೆಗಳ ಪೈಕಿ ಅತ್ಯಂತ ಮಹತ್ತರವಾದ ಒಂದು ಗುಣವೆಂದರೆ, ಇದರ ನಿಖರತೆ, ವೇಗ ಮತ್ತು ಕೊನೆಯ ಕ್ಷಣದವರೆಗೂ ವೈರಿಯ ಕಣ್ಣಿಗೆ ಕಾಣಿಸಿಕೊಳ್ಳದೇ ಇರುವುದು. ವಾಯು, ಭೂಮಿ ಮತ್ತು ಜಲ, ಮೂರೂ ಮಾರ್ಗಗಳಿಂದ ಹಾರಿಸಬಹುದಾದ ಸಾಮರ್ಥ್ಯವನ್ನು ಇದು ಹೊಂದಿದೆ.
ಭೂಮಿಯಿಂದ ಕೇವಲ ಐದರಿಂದ ಹತ್ತು ಮೀಟರ್ ಮೇಲೆ ಹಾರಿದಾಗ ಇದು ಲೇಸರ್ ಕಣ್ಣಿಗೆ ಬೀಳುವ ಸಾಧ್ಯತೆ ಶೂನ್ಯ ಅಥವಾ ತೀರಾ ಕಡಿಮೆ ಎಂದೇ ಹೇಳಬಹುದು. ತನ್ನ ವೇಗದಿಂದಾಗಿ ಬ್ರಹ್ಮೋಸ್ ವೈರಿಯ ಕಣ್ಣಿಗೆ ಕಾಣುವಾಗ ಕೊನೆಯ ಹತ್ತರಿಂದ ಹನ್ನೆರಡು ಸೆಕೆಂಡ್ ಮಾತ್ರ ಉಳಿದಿರುತ್ತದೆ ಎಂಬ ವರದಿಯಿದೆ. ಅಷ್ಟು ಕಮ್ಮಿ ಸಮಯದಲ್ಲಿ ಅದನ್ನು ಹೊಡೆದು ಉರುಳಿಸು ವುದು ಹಾಗಿರಲಿ, ತಮ್ಮನ್ನೇ ತಾವು ಚಾವು ಮಾಡಿಕೊಳ್ಳಲೂ ಸಾಧ್ಯವಿಲ್ಲ.
ಮೊನ್ನೆಯ ಕಾರ್ಯಾಚರಣೆಯಲ್ಲಿ ಕೇವಲ ಇಪ್ಪತ್ಮೂರು ನಿಮಿಷದಲ್ಲಿ ಬ್ರಹ್ಮೋಸ್ ಪಾಕಿಸ್ತಾನಕ್ಕೆ ಸಾಕಷ್ಟು ಪೆಟ್ಟು ಕೊಟ್ಟಿದೆ. ನಿಜವಾಗಿ ಪಾಕಿಸ್ತಾನ ಕೈಕಾಲು ಬಿಟ್ಟಿದ್ದು ನಾಲ್ಕು ದಿನದ ಕಾರ್ಯಾ ಚರಣೆಯಲ್ಲಲ್ಲ, 23 ನಿಮಿಷದ ಬ್ರಹ್ಮೋಸ್ ದಾಳಿಯಲ್ಲಿ. ಬ್ರಹ್ಮೋಸ್ ಒಂದು ರೀತಿಯಲ್ಲಿ ವೈರಿಗಳ ಕಣ್ಣು ಗಳನ್ನು ಕಟ್ಟಿಹಾಕುತ್ತದೆ. ಇದನ್ನು ಆಧುನಿಕ ಕಣ್ಣು ಕಟ್ಟುವ ವಿದ್ಯೆ ಅಥವಾ ಶಸ್ತ್ರ ಎಂದು ಕರೆಯಬಹುದೇ? ನಮ್ಮ ಪುರಾತನ ಕಣ್ಣುಕಟ್ಟುವ ವಿದ್ಯೆಯೇ ನಮ್ಮ ಕೆಲಸಕ್ಕೆ ಬಂದಿತು ಎಂದು ಹೇಳಬಹುದೇ?! ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಸಾಕಷ್ಟು ಹೀರೋಗಳಿದ್ದಾರೆ.
ಅವುಗಳಲ್ಲಿ ಬ್ರಹ್ಮೋಸ್ ಕೂಡ ಒಂದು. ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಮಿಸೈಲ್ ಭಾರತ ಮತ್ತು ರಷ್ಯಾ ಜಂಟಿಯಾಗಿ ತಯಾರಿಸುವ ಒಂದು ಪ್ರಮುಖ ಅಸ್ತ್ರ. ಭಾರತದ ಬ್ರಹ್ಮಪುತ್ರಾ ನದಿಯ ಬ್ರಹ್ಮ ಮತ್ತು ರಷ್ಯಾದ ಮೊಸ್ಕೊವಾ ನದಿಯ ಹೆಸರನ್ನು ಸೇರಿಸಿ ಇಟ್ಟ ಹೆಸರು, ‘ಬ್ರಹ್ಮೋಸ್’. ಅದರಲ್ಲಿ ಭಾರತದ ಐವತ್ತೂವರೆ ಪ್ರತಿಶತ, ರಷ್ಯಾ ನಲವತ್ತೊಂಬತ್ತೂವರೆ ಪ್ರತಿಶತ ಸಹಭಾಗಿತ್ವ ಹೊಂದಿವೆ.
ಆದರೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ಬ್ರಹ್ಮೋಸ್‌ಗೆ ಬೇಕಾಗುವ ಬಿಡಿಭಾಗಗಳು ಮತ್ತು ಉಪಕರಣ ಗಳ ಪೈಕಿ ಎಂಬತ್ತರಿಂದ ಎಂಬತ್ತೈದು ಪ್ರತಿಶತ ಭಾರತದಲ್ಲಿಯೇ ತಯಾರಾಗುತ್ತದೆ. ಆದ್ದರಿಂದ, ನೂರಕ್ಕೆ ನೂರು ಅಲ್ಲದಿದ್ದರೂ ಇದನ್ನು ಭಾರತ ನಿರ್ಮಿತ ಕ್ಷಿಪಣಿ ಎಂದೇ ಪರಿಗಣಿ ಸಲಾಗುತ್ತದೆ. ಮೊನ್ನೆ ಬ್ರಹ್ಮೋಸ್ ಬಳಸಿ ನಡೆಸಿದ ಕಾರ್ಯಾಚರಣೆ ಕೇವಲ ಭಾರತೀಯರನ್ನಷ್ಟೇ ಅಲ್ಲ, ವಿಶ್ವದ ಹತ್ತು ಹಲವು ದೇಶದ ಸಮರತಜ್ಞರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಬೆಳಕಿನ ವೇಗಕ್ಕೇ ಪೈಪೋಟಿ ಕೊಟ್ಟು, ವೇಗವಾಗಿ ಹೋಗಿ ಶತ್ರುಗಳನ್ನು ನಾಶ ಮಾಡುವ ಇಂಥ ಒಂದು ಅಸ್ತ್ರ ಯುದ್ಧಭೂಮಿಯಲ್ಲಿ ಯಾರಿಗೆ ಬೇಡ ಹೇಳಿ? 2022ರಲ್ಲಿ ಫಿಲಿಪೈನ್ಸ್ ಭಾರತದಿಂದ ಸುಮಾರು 375 ಮಿಲಿಯನ್ ಡಾಲರ್ ಮೌಲ್ಯದ ಬ್ರಹ್ಮೋಸ್ ಅಸ್ತ್ರವನ್ನು ಖರೀದಿಸುವ ಒಪ್ಪಂದ ಮಾಡಿ ಕೊಂಡಿದ್ದು, ಎರಡು ಕಂತುಗಳ ಅಸ್ತ್ರವನ್ನು ಭಾರತ ಈಗಾಗಲೇ ವಿತರಿಸಿಯೂ ಆಗಿದೆ. ಇಂಡೋ ನೇಷಿಯಾ 450 ಮಿಲಿಯನ್, ವಿಯೆಟ್ನಾಮ್ 700 ಮಿಲಿಯನ್ ಡಾಲರ್ ಮೌಲ್ಯದ ಬ್ರಹ್ಮೋಸ್ ಖರೀದಿಸಲು ಮಾತುಕತೆ ನಡೆಸಿವೆ.
ಇದರೊಂದಿಗೆ ಸಿಂಗಪೂರ್, ಥೈಲ್ಯಾಂಡ್, ಬ್ರೆಜಿಲ್, ವೆನಿಜುವೆಲಾ, ಈಜಿ, ಸೌದಿ ಅರೇಬಿಯಾ, ಕತಾರ್, ಒಮಾನ್ ಸೇರಿದಂತೆ ಒಟ್ಟೂ ಹದಿನೇಳು ರಾಷ್ಟ್ರಗಳು ಬ್ರಹ್ಮೋಸ್ ಖರೀದಿಸಲು ಉತ್ಸುಕವಾಗಿವೆ ಎಂಬ ವರದಿ ಇದೆ. ಇರಲಿ, ಆಗಲೇ ಹೇಳಿದಂತೆ ಈ ಕಾರ್ಯಾಚರಣೆಯಿಂದ ಭಾರತಕ್ಕೆ ದಕ್ಕಿದ್ದೇನು ಎಂದು ಕೇಳಿದರೆ, ಭಾರತದ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಸಂಸ್ಥೆಗಳ ಷೇರಿನ ದರದಲ್ಲಿ ಭಾರಿ ಏರಿಕೆಯಾಗಿದೆ. ಸಣ್ಣ ಲೆಕ್ಕಾಚಾರ ಹೇಳುವುದಾದರೆ, ಕಳೆದ ಒಂದು ವಾರದಲ್ಲಿ, ಯುದ್ಧ ವಿಮಾನ ಮತ್ತು ಡ್ರೋನ್ ತಯಾರಿಸುವ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಷೇರಿ ನಲ್ಲಿ ಏಳು ಪ್ರತಿ ಶತ ವೃದ್ಧಿಯಾಗಿದೆ. ರೆಡಾರ್ ತಯಾರಿಸುವ ಭಾರತ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ಷೇರಿನಲ್ಲಿ ಸುಮಾರು ಹನ್ನೊಂದು ಪ್ರತಿಶತ, ಮಿಸೈಲ್ ತಯಾರಿಸುವ ಭಾರತ್ ಡೈನಮಿಕ್ಸ್ ಷೇರಿ ನಲ್ಲಿ ಸುಮಾರು ಇಪ್ಪತ್ತು ಪ್ರತಿಶತ ವೃದ್ಧಿಯಾಗಿದೆ. ಬಂದೂಕು ಮತ್ತು ಮುದ್ದುಗುಂಡು ತಯಾರಿ ಸುವ ಭಾರತ್ ಫೋರ್ಜ್ಸ್ ಸಂಸ್ಥೆಯ ಷೇರಿನಲ್ಲಿ ಶೇಕಡ ಹತ್ತು, ಟ್ಯಾಂಕರಗಳನ್ನು ತಯಾರಿಸುವ ಪಾರಸ್ ಡಿಫೆನ್ಸ್ ಸಂಸ್ಥೆಯ ಷೇರಿನಲ್ಲಿ ಶೇಕಡ ಏಳರಷ್ಟು ವೃದ್ಧಿಯಾಗಿದೆ.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಇವೆಲ್ಲ ಶಸ್ತ್ರಾಸ್ತ್ರ ತಯಾರಿಸುವ ‘ಭಾರತೀಯ ಮೂಲ’ದ ಸಂಸ್ಥೆಗಳು. ಕೆಲವು ವರ್ಷಗಳ ಹಿಂದೆ ‘ಮೇಕ್ ಇನ್ ಇಂಡಿಯಾ’ ಅಭಿಯಾನ ಆರಂಭವಾದಾಗ, ಈ ಅಭಿಯಾನವನ್ನು ಸಾಕಷ್ಟು ಜನ ಹೀಗಳೆದಿದ್ದರು. ಇದು ಭಾರತದಂಥ ದೇಶಕ್ಕೆ ಹಡಂಗವಾ ದದ್ದಲ್ಲ, ಇದು ನಮ್ಮ ದೇಶದಲ್ಲಿ ಯಶಸ್ವಿಯಾಗುವುದಿಲ್ಲವೆಂದು ಹೇಳಿದವರು ಈಗಲೂ ಬದು ಕಿದ್ದಾರೆ.
ಆದರೆ, ಅದಕ್ಕೆಲ್ಲ ಉತ್ತರ ಇಂದು ನಮಗೆ ದೊರಕುತ್ತಿದೆ. ಅಂಕಿ-ಅಂಶಗಳು ಅದನ್ನು ದೃಢಪಡಿಸು ತ್ತವೆ. 2014ರ ವೇಳೆಗೆ ಭಾರತ ಸುಮಾರು ಆರುನೂರ ಎಂಬತ್ತು ಕೋಟಿ ರು. ಮೌಲ್ಯದ ಶಸ್ತ್ರಾಸ್ತ್ರ ಗಳನ್ನು, ಯುದ್ಧೋಪಕರಣ ಗಳನ್ನು ರಫ್ತು ಮಾಡುತ್ತಿತ್ತು. ಇಂದು ಇದು ಸುಮಾರು ಮೂವತ್ತೈದು ಪಟ್ಟು ಹೆಚ್ಚಾಗಿ, ಸುಮಾರು ಇಪ್ಪಾತ್ನಾಲ್ಕು ಸಾವಿರ ಕೋಟಿ ದಾಟಿದೆ.
ಮುಂದಿನ ಐದು ವರ್ಷದಲ್ಲಿ ಇದನ್ನು ದ್ವಿಗಣ ಗೊಳಿಸುವ ಇರಾದೆಯನ್ನು ಭಾರತ ಹೊಂದಿದೆ. ಹಾಗೆಯೇ, ಇನ್ನೂ ಎರಡೂವರೆ ದಶಕದ ನಂತರ, ಅಂದರೆ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ನೂರು ವರ್ಷವಾಗುವ ವೇಳೆಗೆ ವಿಶ್ವದಲ್ಲಿಯೇ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ದೇಶವಾಗುವ ಕನಸನ್ನು ಭಾರತ ಕಾಣುತ್ತಿದೆ. ಇದು ನಾವು ಎಣಿಸಿದಷ್ಟು ಸುಲಭದ ಕಾರ್ಯವಲ್ಲ. ಈ ಕಾಲಘಟ್ಟ ದಲ್ಲಿ ಯಾವ ರೀತಿಯ ಬದಲಾವಣೆಯೂ ಆಗಬಹುದು.
ಆದರೆ, ಯಾವುದೇ ಒಂದು ದೇಶಕ್ಕೆ, ಅದರಲ್ಲೂ ಸೇನೆ, ಶಸ್ತ್ರಾಸ್ತ್ರ ಇತ್ಯಾದಿ ವಿಷಯಗಳನ್ನು ಲಕ್ಷ್ಯ ದಲ್ಲಿಟ್ಟುಕೊಂಡಾಗ ಗುರಿ ದೊಡ್ಡದಾಗಿಯೂ, ಸ್ಪಷ್ಟವಾಗಿಯೂ ಇರಬೇಕು. ಇದು ಕಷ್ಟವೇ ಇರಬಹುದು, ಆದರೆ ಅಸಾಧ್ಯವಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ‘ಆಗದು ಎಂದು ಕೈಕಟ್ಟಿ ಕುಳಿತರೆ, ಸಾಗದು ಕೆಲಸವು ಮುಂದೆ...’ ಅಲ್ಲವೇ? ಈ ನಡುವೆ ಭಾರತದ ಡಿಆರ್‌ಡಿಓ ಸಂಸ್ಥೆ ಇನ್ನೊಂದು ಸಂತಸದ ಸುದ್ದಿ ನೀಡಿದೆ.
ಕಳೆದ ಏಪ್ರಿಲ್ ತಿಂಗಳ 13ನೇ ತಾರೀಖಿನಂದು ಲೇಸರ್ ಬಳಸಿ ಡ್ರೋನ್‌ಗಳನ್ನು, ಯುದ್ಧ ವಿಮಾನ ಗಳನ್ನು ಆಕಾಶದಲ್ಲಿಯೇ ಸುಟ್ಟು ಭಸ್ಮ ಮಾಡುವ ತಂತ್ರಜ್ಞಾನವನ್ನು ಕಂಡುಹಿಡಿದಿದೆ. ಇದನ್ನು ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಿಸಲಾಗಿದೆ. ಇದರಿಂದಾಗಿ ಭಾರತ ಈ ಮೊದಲು ಇದೇ ತಂತ್ರಜ್ಞಾನವನ್ನು ಕಂಡುಹಿಡಿದ ಅಮೆರಿಕ, ರಷ್ಯಾ ಮತ್ತು ಚೀನಾದ ಜತೆ ಸೇರಿ, ನಾಲ್ಕನೆಯ ರಾಷ್ಟ್ರವಾಗಿ ನಿಂತಿದೆ. ಅಂದರೆ, ಮುಂದಿನ ದಿನಗಳಲ್ಲಿ ಭಾರತದ ಶಸ್ತ್ರಾಸ್ತ್ರಗಳ ಜತೆಗೆ, ಡ್ರೋನ್ ಮತ್ತು ಯುದ್ಧವಿಮಾನಗಳ ಪ್ರತಿರೋಧಕಗಳಿಗೂ ಹೆಚ್ಚಿನ ಬೇಡಿಕೆ ಬರಲಿದೆ.
ಇಂದು ಇಡೀ ಪ್ರಪಂಚವೇ ಅಮೆರಿಕ, ಚೀನಾದಂಥ ದೇಶವನ್ನು ಅತ್ಯಂತ ಬಲಶಾಲಿ ದೇಶ, ಸೂಪರ್ ಪವರ್ ದೇಶ ಎಂದು ಹೇಳುತ್ತದೆ. ಅದರ ಜತೆಯಲ್ಲಿಯೇ ಅಮೆರಿಕದಲ್ಲಿ ತಯಾರಾದ ಯುದ್ಧ ವಿಮಾನಗಳು, ಚೀನಾದಲ್ಲಿ ತಯಾರಾದ ಶಸ್ತ್ರಾಸ್ತ್ರಗಳ ಗುಣಮಟ್ಟದ ಕುರಿತು ಅಪಸ್ವರವೂ ಕೇಳಿ ಬರುತ್ತಿದೆ. ಆದರೆ, ಚೀನಾಕ್ಕೆ ಸೂಪರ್ ಪವರ್ ಎಂಬ ಬಿರುದು ಅಥವಾ ಸ್ಥಾನ ಲಭಿಸಿದ್ದು ಹೇಗೆ? ಯುದ್ಧ ನೀತಿಯಲ್ಲಿ ಒಂದು ದೇಶ ‘ಸಬಲ’ ಎಂದು ಎನಿಸಿಕೊಳ್ಳಬೇಕಾದರೆ, ಸೇನಾಬಲ ಮತ್ತು ಶಸ್ತ್ರಾಸ್ತ್ರಗಳ ಬಲ ಎರಡರಲ್ಲಿಯೂ ಬಲಶಾಲಿಯಾಗಿರಬೇಕಾಗುತ್ತದೆ. ಆಗ ಮಾತ್ರ ಆ ದೇಶವನ್ನು ಸೂಪರ್ ಪವರ್ ದೇಶ ಎಂದು ಪರಿಗಣಿಸಲಾಗುತ್ತದೆ. ಒಂದು ದೇಶ ಸಬಲವಾಗಬೇಕಾದರೆ, ಅದು ಬೇರೆ ದೇಶದ ಮೇಲೆ ನಿರ್ಭರಿತವಾಗಿರ ಬಾರದು, ಬೇರೆ ದೇಶವನ್ನು ಅವಲಂಬಿಸಿರಬಾರದು.
ಹೆಚ್ಚಿನ ಶಸಾಸಗಳು, ಯುದ್ಧದ ಉಪಕರಣಗಳು ಆ ದೇಶದಲ್ಲಿಯೇ ತಯಾರಾಗಬೇಕೇ ವಿನಾ ಬೇರೆ ದೇಶದದಲ್ಲಲ್ಲ. ಇಂದು ಅಮೆರಿಕವಾಗಲಿ, ಚೀನಾವಾಗಲಿ ಯುದ್ಧದ ಉಪಕರಣಗಳು ಅಥವಾ ಶಸ್ತ್ರಾಸ್ತ್ರಗಳ ವಿಷಯ ಬಂದಾಗ, ಒಂದೋ ಎರಡೋ ಪ್ರತಿಶತದಷ್ಟು ಬೇರೆ ದೇಶವನ್ನು ಅವಲಂಬಿಸಿರಬಹುದು, ಬಿಟ್ಟರೆ ಬಹುತೇಕ ಶಸ್ತ್ರಾಸ್ತ್ರಗಳು ಆಯಾ ದೇಶದಲ್ಲಿಯೇ ತಯಾರಾಗುತ್ತದೆ. ಭಾರತ ತನಗೆ ಬೇಕಾದ ಶಸ್ತ್ರಾಸ್ತ್ರಗಳ ಪೈಕಿ ಅರವತ್ತರಿಂದ ಅರವತ್ತೈದು ಪ್ರತಿಶತದಷ್ಟು ವಿದೇಶ ದಿಂದ ಆಮದು ಮಾಡಿಕೊಳ್ಳುತ್ತದೆ. ಈ ಆಮದಿನ ಸಂಖ್ಯೆ ಶೇಕಡ ಹತ್ತರ ಒಳಗೆ ಬಂದು ನಿಲ್ಲಬೇಕು. ಭಾರತ ತನಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ತಯಾರಿಸಿಕೊಳ್ಳುವುದರ ಜತೆಗೆ ಇತರ ದೇಶಗಳಿಗೆ ರಫ್ತು ಮಾಡುವಂತೆಯೂ ಆಗಬೇಕು. ಅಂದರೆ ಮಾತ್ರ ವಿಶ್ವಗುರು ಆಗಲು ಸಾಧ್ಯ.