ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ವರುಣದೇವನ ಅಹಂಕಾರ ಮುರಿದ ಉತಥ್ಯ ಮಹರ್ಷಿಗಳ ತಪಶ್ಯಕ್ತಿ

ಸಕಲ ಜೀವಜಾಲವೂ ಹನಿ ನೀರಿಗಾಗಿ ಹಾಹಾಕಾರ ಪಡಲಾರಂಭಿಸಿತು. ಅಷ್ಟಕ್ಕೇ ನಿಲ್ಲದೆ, ವರುಣನ ಆಶ್ರಯ ತಾಣವಾಗಿದ್ದ ಅಗಾಧ ಜಲಸಾಮ್ರಾಜ್ಯವೇ ಒಣಗಿ ಬೋಳು ಮರಳುಗಾಡಾಗಿ ಮಾರ್ಪಟ್ಟಿತು. ನೀರಿನ ದೇವತೆಯೇ ಜೀವಜಲವಿಲ್ಲದೆ ಉಸಿರುಗಟ್ಟುವ ದಯನೀಯ ಸ್ಥಿತಿ ತಲುಪಿದನು. ಆಗ ವರುಣನಿಗೆ ಸತ್ಯದ ದರ್ಶನವಾಯಿತು.

ಒಂದೊಳ್ಳೆ ಮಾತು

ಅಧಿಕಾರ, ಸಂಪತ್ತು ಅಥವಾ ಭೌತಿಕ ಸಾಮರ್ಥ್ಯ ಕೈಯಲ್ಲಿದೆ ಎಂದ ಮಾತ್ರಕ್ಕೆ ಧರ್ಮದ ಗೆರೆ ದಾಟಿದರೆ ಎಂತಹ ಬಲಾಢ್ಯನಿಗೂ ಪತನ ಕಟ್ಟಿಟ್ಟ ಬುತ್ತಿ. ಅಹಂಕಾರವು ಮನುಷ್ಯನ ವಿವೇಕವನ್ನು ಮರೆಮಾಚಿ ಅಧರ್ಮದ ಹಾದಿ ಹಿಡಿಯುವಂತೆ ಮಾಡುತ್ತದೆ. ಸತ್ಯ ಮತ್ತು ನೀತಿಯ ತಳಹದಿ ಇಲ್ಲದ ಭೌತಿಕ ಶಕ್ತಿ, ನಿಜವಾದ ಆಂತರಿಕ ತಪೋಬಲದ ಮುಂದೆ ಎಂದಿಗೂ ನಿಲ್ಲಲಾರದು ಎಂಬುದಕ್ಕೆ ಮಹಾಭಾರತದ ಅನು ಶಾಸನ ಪರ್ವದಲ್ಲಿ ಬರುವ ಉತಥ್ಯ ಮಹರ್ಷಿ ಹಾಗೂ ವರುಣದೇವನ ಪ್ರಸಂಗ ಅತ್ಯಂತ ಮಾರ್ಮಿಕ ನಿದರ್ಶನ.

ಮಹರ್ಷಿ ಅಂಗಿರಸರ ಜ್ಯೇಷ್ಠ ಪುತ್ರ ಹಾಗೂ ದೇವಗುರು ಬೃಹಸ್ಪತಿಯ ಅಣ್ಣನಾದ ಉತಥ್ಯರು ಅಪಾರ ಜ್ಞಾನಿ, ಧರ್ಮನಿಷ್ಠ ಹಾಗೂ ಉಗ್ರ ತಪಸ್ವಿ. ಇವರ ಧರ್ಮಪತ್ನಿ ಚಂದ್ರದೇವನಾದ ಸೋಮನ ಪರಮ ಸುಂದರಿ ಮಗಳು ಭದ್ರಾ. ತಂದೆಯ ಆಶೀರ್ವಾದದೊಂದಿಗೆ ಈ ದಂಪತಿ ಗಳು ಧರ್ಮಮಾರ್ಗದಲ್ಲಿ ಸುಖಜೀವನ ನಡೆಸು ತ್ತಿದ್ದರು. ಆದರೆ ಜಲರಾಶಿಯ ಅಧಿಪತಿಯಾದ ವರುಣ ದೇವನಿಗೆ ಮೊದಲಿನಿಂದಲೂ ಭದ್ರೆಯ ಸೌಂದರ್ಯದ ಮೇಲೆ ಅಪಾರ ವ್ಯಾಮೋಹವಿತ್ತು.

ಇದನ್ನೂ ಓದಿ: Roopa Gururaj Column: ಅಂತರಂಗದ ಅಯೋಧ್ಯೆ ಮತ್ತು ಪರಮ ಸತ್ಯದ ಸಾಕ್ಷಾತ್ಕಾರ

ಕಾಮೋದ್ರೇಕದಿಂದ ಕುರುಡಾದ ಆತನು ಒಳ್ಳೆಯ- ಕೆಟ್ಟದ್ದರ ಅರಿವನ್ನು ಕಳೆದುಕೊಂಡನು. ಒಂದು ದಿನ ಉತಥ್ಯ ಮುನಿಗಳು ಆಶ್ರಮದಲ್ಲಿ ಇಲ್ಲದ ಸಮಯ ಸಾಧಿಸಿ, ವರುಣನು ಭದ್ರೆಯನ್ನು ಅಪಹರಿಸಿ ತನ್ನ ಜಲಸಾಮ್ರಾಜ್ಯದ ಪಾತಾಳಲೋಕಕ್ಕೆ ಕರೆದೊಯ್ದು ಬಚ್ಚಿಟ್ಟನು. ಆಶ್ರಮಕ್ಕೆ ಮರಳಿದ ಉತಥ್ಯರಿಗೆ ಪತ್ನಿಯ ಅಪಹರಣದ ವಿಷಯ ತಿಳಿಯಿತು. ಆದರೂ ಅವರು ಕೂಡಲೇ ಉದ್ವೇಗಕ್ಕೆ ಒಳಗಾಗಲಿಲ್ಲ. ಸಜ್ಜನರು ಎಂದಿಗೂ ಮೊದಲು ಶಾಂತಿ ಮತ್ತು ಸೌಹಾರ್ದತೆಯ ಮಾರ್ಗವನ್ನೇ ಆಯ್ದುಕೊಳ್ಳುತ್ತಾರೆ.

ಮುನಿಗಳು ದೇವರ್ಷಿ ನಾರದರನ್ನು ಕರೆದು, ವರುಣನ ಬಳಿಗೆ ಸಂದೇಶ ಕಳುಹಿಸಿದರು: ವರುಣಾ, ನೀನು ಲೋಕಪಾಲಕ. ಪರಸ್ತ್ರೀಯನ್ನು, ಅದರಲ್ಲೂ ಋಷಿಪತ್ನಿಯನ್ನು ಅಪಹರಿಸುವುದು ಘೋರ ಅಧರ್ಮ. ಅಹಂಕಾರ ಬಿಟ್ಟು ತಪ್ಪನ್ನು ತಿದ್ದಿಕೋ, ಭದ್ರೆಯನ್ನು ಗೌರವದಿಂದ ಮರಳಿ ಒಪ್ಪಿಸು. ಆದರೆ ಸಮಸ್ತ ಜಲರಾಶಿಯ ಒಡೆಯ ನೆಂಬ ಗರ್ವದಲ್ಲಿದ್ದ ವರುಣನಿಗೆ ನಾರದರ ಮಾತು ಕಿವಿಗೇರಲಿಲ್ಲ. ಆತ ಮುನಿಯ ಶಾಂತತೆ ಯನ್ನು ಅಸಹಾಯಕತೆ ಎಂದು ಭಾವಿಸಿ, ನಾರದ ರನ್ನೇ ಅಣಕಿಸಿ ಕಳುಹಿಸಿದನು.

ಸಜ್ಜನರ ಸೌಜನ್ಯವನ್ನು ಅವರ ದೌರ್ಬಲ್ಯವೆಂದು ಭಾವಿಸುವುದೇ ಅಹಂಕಾರಿಗಳ ಮೊದಲ ಹಾಗೂ ಮಹಾ ಪ್ರಮಾದ. ವರುಣನ ದುರ್ವರ್ತನೆ ಹಾಗೂ ಅಧರ್ಮದ ಹಠವನ್ನು ಕಂಡ ಉತಥ್ಯರು ಅವನ ಗರ್ವಭಂಗ ಮಾಡಲು ಸಂಕಲ್ಪಿಸಿದರು. ತಮ್ಮ ಪ್ರಚಂಡ ತಪೋಬಲವನ್ನು ಆವಾಹಿಸಿಕೊಂಡ ಮುನಿಗಳು, ಭೂಮಿಯ ಸಮಸ್ತ ಜಲರಾಶಿಯನ್ನು ಆಪೋಷನ ತೆಗೆದು ಕೊಂಡು ಹೀರಿಕೊಳ್ಳಲು ಆರಂಭಿಸಿದರು. ಕ್ಷಣಾರ್ಧದಲ್ಲಿ ನದಿಗಳು ಇಂಗಿಹೋದವು, ಕೆರೆ-ಕೊಳಗಳು ಒಣಗಿದವು, ಸಾಗರಗಳು ಬತ್ತಿ ಹೋಗತೊಡಗಿದವು.

ಸಕಲ ಜೀವಜಾಲವೂ ಹನಿ ನೀರಿಗಾಗಿ ಹಾಹಾಕಾರ ಪಡಲಾರಂಭಿಸಿತು. ಅಷ್ಟಕ್ಕೇ ನಿಲ್ಲದೆ, ವರುಣನ ಆಶ್ರಯ ತಾಣವಾಗಿದ್ದ ಅಗಾಧ ಜಲಸಾಮ್ರಾಜ್ಯವೇ ಒಣಗಿ ಬೋಳು ಮರಳುಗಾಡಾಗಿ ಮಾರ್ಪ ಟ್ಟಿತು. ನೀರಿನ ದೇವತೆಯೇ ಜೀವಜಲವಿಲ್ಲದೆ ಉಸಿರುಗಟ್ಟುವ ದಯನೀಯ ಸ್ಥಿತಿ ತಲುಪಿದನು. ಆಗ ವರುಣನಿಗೆ ಸತ್ಯದ ದರ್ಶನವಾಯಿತು.

ಎಷ್ಟೇ ಪ್ರಾಕೃತಿಕ ಸಂಪತ್ತು ಕೈಯಲ್ಲಿದ್ದರೂ, ಅಧರ್ಮದ ಹಾದಿಯಲ್ಲಿ ನಿಂತಾಗ ಧರ್ಮನಿಷ್ಠ ತಪಸ್ಸಿನ ಮುಂದೆ ತನ್ನ ಶಕ್ತಿ ತೃಣಸಮಾನ ಎಂಬುದು ಅವನಿಗೆ ಮನವರಿಕೆಯಾಯಿತು. ತನ್ನ ಸರ್ವಸ್ವವೂ ನಾಶ ವಾಗುವ ಅಂಚಿಗೆ ತಲುಪಿದಾಗ, ಭಯಭೀತನಾದ ವರುಣನು ಓಡೋಡಿ ಬಂದು ಉತಥ್ಯ ಮಹರ್ಷಿಗಳ ಪಾದಗಳಿಗೆ ಬಿದ್ದು ಕಣ್ಣೀರಿಡುತ್ತಾ ಕ್ಷಮೆ ಯಾಚಿಸಿದನು. ಭದ್ರಾದೇವಿಯನ್ನು ಅತ್ಯಂತ ವಿನಮ್ರತೆಯಿಂದ ಮುನಿಗಳ ಮಡಿಲಿಗೆ ಒಪ್ಪಿಸಿದನು. ಶರಣು ಬಂದ ವೈರಿಯನ್ನೂ ಕ್ಷಮಿಸುವುದು ಸತ್ಪುರುಷರ ಉದಾತ್ತ ಗುಣ. ಅಂತೆಯೇ ಉತಥ್ಯರು ವರುಣನನ್ನು ಕ್ಷಮಿಸಿ, ತಮ್ಮ ಶಕ್ತಿಯಿಂದ ಭೂಮಿಯಲ್ಲಿ ಮತ್ತೆ ಜೀವಜಲ ತುಂಬಿ ಹರಿಯುವಂತೆ ಅನುಗ್ರಹಿಸಿದರು.

ಅಧಿಕಾರ, ಐಶ್ವರ್ಯ ಅಥವಾ ಪ್ರಭಾವ ಇದೆ ಎಂಬ ಕಾರಣಕ್ಕೆ ಇತರರನ್ನು ಕೀಳಾಗಿ ಕಾಣ ಬಾರದು. ಸೌಜನ್ಯದಿಂದ ನಡೆದುಕೊಳ್ಳುವ ವ್ಯಕ್ತಿಯ ಶಾಂತತೆಯನ್ನು ಅವರ ಅಸಾಮರ್ಥ್ಯ ವೆಂದು ತಪ್ಪಾಗಿ ಭಾವಿಸಿದರೆ, ಅದರ ಪರಿಣಾಮ ವನ್ನ ನಾವು ಖಂಡಿತ ಎದುರಿಸಬೇಕಾಗುತ್ತದೆ. ಅಹಂಕಾರಕ್ಕೆ ಕಾಲವೇ ತಕ್ಕ ಉತ್ತರ ನೀಡುತ್ತದೆ. ಬದುಕಿನಲ್ಲಿ ವಿನಮ್ರತೆ ಮತ್ತು ಪ್ರಾಮಾಣಿಕತೆ ಇದ್ದಾಗ ಮಾತ್ರ ಮನುಷ್ಯನಿಗೆ ಹೇಳಿಕೆ ಮತ್ತು ಗೌರವ ಪ್ರಾಪ್ತಿ.

ರೂಪಾ ಗುರುರಾಜ್

View all posts by this author