Roopa Gururaj Column: ಅಂತರಂಗದ ಅಯೋಧ್ಯೆ ಮತ್ತು ಪರಮ ಸತ್ಯದ ಸಾಕ್ಷಾತ್ಕಾರ
ಮುಕ್ತಿಯನ್ನು ಮರಳಿ ಪಡೆಯಲು ನಮಗೆ ಮದವೆಂಬ ‘ವಾಲಿ’ಯ ಭಯ ಕಳೆದುಕೊಂಡ‘ ಸುಗ್ರೀವ’ ನೆಂಬ ಶುದ್ಧ ಮನಸ್ಸು ಮತ್ತು ‘ಹನು ಮಂತ’ನೆಂಬ ತೀಕ್ಷ ಶುದ್ಧ ಬುದ್ಧಿಯ ನೆರವು ಬೇಕು. ಪರಿಶುದ್ಧ ಬುದ್ಧಿ ಮಾತ್ರ ಅಜ್ಞಾನದ ಲಂಕೆಯನ್ನು ಹೊಕ್ಕು ಸತ್ಯದ ನೆಲೆ ಕಂಡುಕೊಳ್ಳಬಲ್ಲದು. ಮುಂದೆ ಎಪ್ಪತ್ತೆ ರಡು ಸಾವಿರ ನರನಾಡಿಗಳೆಂಬ ವಾನರ ಶಕ್ತಿಯಿಂದ ‘ಭಕ್ತಿ’ಯೆಂಬ ಸೇತುವೆ ಕಟ್ಟಿ, ಸತ್ಯವನ್ನು ಒಪ್ಪುವ ‘ವಿವೇಕ’ವೆಂಬ ವಿಭೀಷಣನ ಆಸರೆ ಪಡೆದು, ಕಾಮ-ಕ್ರೋಧಗಳೆಂಬ ಅರಿಷಡ್ವರ್ಗ ‘ರಾಕ್ಷಸ’ರನ್ನು ಸಂಹರಿಸಬೇಕು.
-
ಒಂದೊಳ್ಳೆ ಮಾತು
ರಾಮಾಯಣವೆಂದರೆ ಕೇವಲ ತ್ರೇತಾಯುಗದ ಇತಿಹಾಸವೋ, ಪುರಾಣದ ಕಥೆ ಮಾತ್ರವಲ್ಲ; ಅದು ಪ್ರತಿಕ್ಷಣವೂ ನಮ್ಮ ಅಂತರಂಗದಲ್ಲಿ ನಡೆಯುವ ಜ್ಞಾನ ಮತ್ತು ಅಜ್ಞಾನಗಳ ನಡುವಿನ ನಿರಂತರ ಹೋರಾಟ. ಈ ಆಂತರಿಕ ತತ್ತ್ವದ ಮಹತ್ವವನ್ನು ನಮಗೆ ಮೊದಲು ಸ್ಪಷ್ಟವಾಗಿ ತೆರೆದಿಟ್ಟಿದ್ದು ‘ಬ್ರಹ್ಮಾಂಡ ಪುರಾಣ’ದ ಅಂತರ್ಗತ ಭಾಗವಾದ ಅಧ್ಯಾತ್ಮ ರಾಮಾಯಣ ಹಾಗೂ ಅದ್ವೈತ ತತ್ತ್ವದ ಸಾರವನ್ನು ಸಾರುವ ಯೋಗವಾಸಿಷ್ಠ. ನಂತರದ ದಿನಗಳಲ್ಲಿ ಸಂತ ಕಬೀರರು, ತುಳಸೀದಾಸರು, ಸಮರ್ಥ ರಾಮ ದಾಸರು ಮತ್ತು ನಮ್ಮ ದಾಸ-ಶರಣ ಪರಂಪರೆಯ ಅನುಭಾವಿಗಳು ಇದೇ ಲಕ್ಷ್ಯಾರ್ಥವನ್ನು ತಮ್ಮ ಕೀರ್ತನೆಗಳಲ್ಲಿ ಜನಸಾಮಾನ್ಯರಿಗೆ ಮುಟ್ಟಿಸಿದರು.
ಈ ಪ್ರಾಚೀನ ವೇದಾಂತದ ಒಳನೋಟವನ್ನು ನಮ್ಮ ಬದುಕಿನ ಕನ್ನಡಿಯಾಗಿ ನೋಡಿದಾಗ ರಾಮಾಯಣದ ನಿಜವಾದ ಸೌಂದರ್ಯ ಅರಿವಾಗುತ್ತದೆ. ನಮ್ಮ ಪರಿಶುದ್ಧವಾದ, ದ್ವಂದ್ವಗಳಿಲ್ಲದ ‘ಹೃದ ಯವೇ ಅಯೋಧ್ಯೆ’. ಎಲ್ಲಿ ಕಾಮ-ಕ್ರೋಧಾದಿ ಕಲಹಗಳಿಲ್ಲವೋ ಅದೇ ಅಯೋಧ್ಯಾ ನಗರ. ಈ ಹೃದಯದ ಮೂಲ ಚೈತನ್ಯವೇ ‘ದಶರಥ’ ಎಂಬ ಶುದ್ಧ ಪರಬ್ರಹ್ಮ. ಆತನ ಮೂವರು ಪತ್ನಿಯರು ನಮ್ಮೊಳಗಿನ ಮೂರು ಶಕ್ತಿಗಳು- ಜ್ಞಾನಶಕ್ತಿ (ಕೌಸಲ್ಯೆ), ಇಚ್ಛಾಶಕ್ತಿ (ಕೈಕೇಯಿ) ಮತ್ತು ಕ್ರಿಯಾಶಕ್ತಿ (ಸುಮಿತ್ರೆ).
ಇದನ್ನೂ ಓದಿ: Roopa Gururaj Column: ಉಲೂಪಿಯ ಕಥನ ಕಲಿಸುವ ಜೀವನ ಪಾಠ
ಜ್ಞಾನಶಕ್ತಿಯಿಂದ ಉದಯಿಸುವ ಸಚ್ಚಿದಾನಂದ ಸ್ವರೂಪವೇ ಆತ್ಮಜ್ಯೋತಿಯಾದ ‘ಶ್ರೀರಾಮ’. ಶಾಂತeನ ಮತ್ತು ತಪೋಜ್ಞಾನಗಳ ಪ್ರತೀಕವಾದ ವಸಿಷ್ಠ -ವಿಶ್ವಾಮಿತ್ರರು ಈ ಆತ್ಮಜ್ಯೋತಿಗೆ ‘ಮುಕ್ತಿಕಾಂತೆ’ಯಾದ ಸೀತೆಯನ್ನು ತಂದು ವಿವಾಹ ಮಾಡಿಸುತ್ತಾರೆ. ಆತ್ಮವು ಮುಕ್ತಿಯೊಂದಿಗೆ ಒಂದಾ ಗುವುದೇ ನಿಜವಾದ ಜೀವಮಾನದ ಪೂರ್ಣತೆ. ಆದರೆ ಸಂಸಾರಯಾನದಲ್ಲಿ ಪೂರ್ವ ಕರ್ಮದ ದುರ್ವಾಸನೆಯೆಂಬ ‘ಮಂಥರೆ’ ನಮ್ಮ ಇಚ್ಛಾಶಕ್ತಿಯನ್ನು ದಿಕ್ಕು ತಪ್ಪಿಸಿದಾಗ, ಆತ್ಮವು ಕಷ್ಟ- ಸಾಧನೆಗಳೆಂಬ ‘ಕಾಡಿಗೆ’ ಸಾಗಬೇಕಾಗುತ್ತದೆ.
ಆತ್ಮದೆಡೆಗೆ ಮುಕ್ತಿ ಮತ್ತು ನಿಷ್ಕಾಮ ಕರ್ಮವಾದ ‘ಕ್ರಿಯಾಶುದ್ಧಿ’ (ಲಕ್ಷ ಣ) ಸದಾ ಜೊತೆಯಾಗಿರು ತ್ತವೆ. ಸಾಧನಾ ಪಥದಲ್ಲಿ ‘ಮಾಯಾಜಿಂಕೆ’ಯೆಂಬ ಕ್ಷಣಿಕ ಲೌಕಿಕ ಭೋಗಾಸಕ್ತಿ ಎದುರಾದಾಗ, ಮುಕ್ತಿಯ ಅಪಹರಣವಾಗುತ್ತದೆ. ಸಪ್ತಧಾತುಗಳ ಈ ಕಾಯದೊಳಗಿರುವ ಅಜ್ಞಾನವೇ ‘ಲಂಕೆ’. ಅಲ್ಲಿ ‘ದಶ ಮಮಕಾರ’ಗಳೇ ತಲೆಯಾಗಿರುವ, ‘ನಾನೇ ಸರ್ವ’ ಎಂಬ ಅಹಂಕಾರದ ಸಾಕಾರ ರೂಪವೇ ಹತ್ತು ತಲೆಯ ‘ರಾವಣ’. ಆ ಅಹಂಕಾರ ನಮ್ಮ ಮುಕ್ತಿಯನ್ನು ದುಃಖದ ಅಶೋಕವನದಲ್ಲಿ ಕೂಡಿಹಾಕುತ್ತದೆ.
ಮುಕ್ತಿಯನ್ನು ಮರಳಿ ಪಡೆಯಲು ನಮಗೆ ಮದವೆಂಬ ‘ವಾಲಿ’ಯ ಭಯ ಕಳೆದುಕೊಂಡ‘ ಸುಗ್ರೀವ’ ನೆಂಬ ಶುದ್ಧ ಮನಸ್ಸು ಮತ್ತು ‘ಹನು ಮಂತ’ನೆಂಬ ತೀಕ್ಷ ಶುದ್ಧ ಬುದ್ಧಿಯ ನೆರವು ಬೇಕು. ಪರಿಶುದ್ಧ ಬುದ್ಧಿ ಮಾತ್ರ ಅಜ್ಞಾನದ ಲಂಕೆಯನ್ನು ಹೊಕ್ಕು ಸತ್ಯದ ನೆಲೆ ಕಂಡುಕೊಳ್ಳಬಲ್ಲದು. ಮುಂದೆ ಎಪ್ಪತ್ತೆರಡು ಸಾವಿರ ನರನಾಡಿಗಳೆಂಬ ವಾನರ ಶಕ್ತಿಯಿಂದ ‘ಭಕ್ತಿ’ಯೆಂಬ ಸೇತುವೆ ಕಟ್ಟಿ, ಸತ್ಯವನ್ನು ಒಪ್ಪುವ ‘ವಿವೇಕ’ವೆಂಬ ವಿಭೀಷಣನ ಆಸರೆ ಪಡೆದು, ಕಾಮ-ಕ್ರೋಧಗಳೆಂಬ ಅರಿಷಡ್ವರ್ಗ ‘ರಾಕ್ಷಸ’ರನ್ನು ಸಂಹರಿಸಬೇಕು.
ಕೊನೆಗೆ ಆತ್ಮಜ್ಯೋತಿ ‘ಶ್ರೀರಾಮನು ಅಹಂಕಾರದ ರಾವಣ ನನ್ನು ಮಣ್ಣುಮುಕ್ಕಿಸಿ ಮುಕ್ತಿಯನ್ನು ಪುನಃ ತನ್ನದಾಗಿಸಿಕೊಳ್ಳುತ್ತಾನೆ. ಅಜ್ಞಾನದ ಕತ್ತಲೆ ಕಳೆದು, ಮುಕ್ತಿಯೊಂದಿಗೆ ಶುದ್ಧ ಹೃದಯವೆಂಬ ಅಯೋಧ್ಯೆಗೆ ಮರಳಿ ನೆಲೆಸು ವುದೇ ನಿಜವಾದ ‘ಪಟ್ಟಾಭಿಷೇಕ’. ವೇದಾಂತ ಸಾರುವ ‘ಜೀವನ್ಮುಕ್ತಿ’ ಅಥವಾ ‘ಸಹಜ ಸಮಾಧಿ’ ಸ್ಥಿತಿಯೇ ಇದು. ಇಂದಿನ ದಿನಗಳಲ್ಲಿ ಸದಾ ಒಂದಲ್ಲ ಒಂದು ಆತಂಕ ಧಾವಂತ ಖಿನ್ನತೆಯಿಂದ ಬಳಲುವ ನಾವು, ಎಲ್ಲರಂತಾಗಬೇಕು ಎನ್ನುವ ಹಂಬಲದಲ್ಲಿ ನಮ್ಮನ್ನೇ ನಾವು ಕಳೆದುಕೊಂಡು ಬಿಡುತ್ತೇವೆ.
ನಮ್ಮೊಳಗೆ ಇರುವ ಆತ್ಮ ಶಕ್ತಿಯನ್ನು ಗುರುತಿಸಿ, ಅದನ್ನು ಬಲಪಡಿಸಿಕೊಂಡು ಪ್ರಪಂಚವನ್ನು ಎದುರಿಸುವ ಪ್ರಯತ್ನ ಮಾಡಿದಾಗ ನಮ್ಮೊಳಗಿರುವ ಶಾಂತಿಯೇ ಹೊರಗೂ ಕೂಡ ಪ್ರತಿಫಲಿಸು ತ್ತದೆ. ಹೊರಗಿನ ಜಗತ್ತಿನಲ್ಲಿ ಶಾಂತಿಯನ್ನು ಹುಡುಕುವ ಬದಲು, ನಮ್ಮೊಳಗಿನ ಅಹಂಕಾರವನ್ನು ಅಳಿಸಿ, ಭಕ್ತಿ ಮತ್ತು ಬುದ್ಧಿಯನ್ನು ಜಾಗೃತಗೊಳಿಸಿಕೊಳ್ಳಬೇಕು. ಅಂತರಂಗದ ಕಲ್ಮಷಗಳು ಕರಗಿ ವಿವೇಕ ನೆಲೆಸಿದಾಗ ನಮ್ಮ ಹೃದಯವೇ ಅಯೋಧ್ಯೆಯಾಗುತ್ತದೆ; ಅ ಶಾಶ್ವತ ನೆಮ್ಮದಿಯ ಆತ್ಮಜ್ಯೋತಿ ಬೆಳಗುತ್ತದೆ.
ಇಂತಹ ನೆಮ್ಮದಿಯನ್ನು ಎಲ್ಲೂ ಹುಡುಕುವ ಬದಲು ನಮ್ಮೊಳಗೆ ಕಂಡುಕೊಳ್ಳುವ ಪ್ರಯತ್ನ ಮಾಡೋಣ. ನಮ್ಮ ಸಂತೋಷಕ್ಕೆ ದುಃಖಕ್ಕೆ ಹೊರಗಿನವರ್ಯಾರೂ ಕಾರಣರಲ್ಲ. ಅದು ನಾವು ಅವರಿಗೆ ಕೊಟ್ಟಿರುವ ಶಕ್ತಿ ಮಾತ್ರ. ಎಂದಿಗೂ ಅದು ನಮ್ಮೊಳಗೆ ಹುಟ್ಟಿ ನಮ್ಮನ್ನು ತಣಿಸುವ ಶಕ್ತಿ ಇರುವಂತೆ ಭಾವ. ಆದ್ದರಿಂದಲೇ ಮೊದಲು ನಾವು ಆಂತರಿಕವಾಗಿ ಗಟ್ಟಿಯಾಗೋಣ, ಸ್ವಾವಲಂಬಿ ಗಳಾಗೋಣ, ಆಗ ಜಗತ್ತೇ ನಮ್ಮದಾಗುತ್ತದೆ