ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಾಮಿಯನ್‌ ಬುದ್ಧ ಪ್ರತಿಮೆಗಳಿಗೆ ಆಗಬೇಕಾಗಿದೆ ಕಾಯಕಲ್ಪ..

ಪೂರ್ವ ಪಶ್ಚಿಮಗಳ ಸಂಸ್ಕೃತಿ, ಧರ್ಮ, ವಾಣಿಜ್ಯ ವ್ಯವಹಾರಗಳ ಸಂಪರ್ಕಕೊಂಡಿಯಂತಿದ್ದ ರೇಷ್ಮೆ ಮಾರ್ಗದಲ್ಲಿನ ಬಾಮಿಯನ್ ಕಣಿವೆ ಕ್ರಿಸ್ತಪೂರ್ವ ಕಾಲದಿಂದಲೂ ಜಗತ್ತಿನ ಮಹತ್ವದ ಸಾಂಸ್ಕೃತಿಕ ಕೇಂದ್ರವಾಗಿತ್ತು. ಇಸ್ಲಾಂ ತಲೆಯೆತ್ತುವ ಮುಂಚೆಯೇ ಇಲ್ಲಿ ಬೌದ್ಧಧರ್ಮ ತನ್ನ ಉಚ್ಛ್ರಾಯವನ್ನು ತಲುಪಿತ್ತು.

ಬಾಮಿಯನ್‌ ಬುದ್ಧ ಪ್ರತಿಮೆಗಳಿಗೆ ಆಗಬೇಕಾಗಿದೆ ಕಾಯಕಲ್ಪ..

-

Ashok Nayak Ashok Nayak Oct 24, 2025 10:16 AM

ನೆರೆಹೊರೆ

ಟಿ.ಎನ್.ವಾಸುದೇವಮೂರ್ತಿ

ದ್ವೇಷ, ಕೋಮುವಾದಗಳನ್ನು ಬದಿಗೊತ್ತಿ ವಿಶ್ವ ಸಮುದಾಯದ ವಿಶ್ವಾಸವನ್ನು ಗಳಿಸದೇ ಹೋದಲ್ಲಿ ತಾನು ಉದ್ಧಾರವಾಗುವುದಿಲ್ಲವೆಂದು ಅ-ನಿಸ್ತಾನಕ್ಕೆ ಇಂದು ನಿಧಾನವಾಗಿ ಮನವರಿಕೆ ಯಾಗುತ್ತಿದೆ. ರಸ್ತೆಗಳು ಮತ್ತು ಪಾರ್ಲಿಮೆಂಟ್ ಭವನದ ನಿರ್ಮಾಣ, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ತಾಂತ್ರಿಕ, ಶೈಕ್ಷಣಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಭಾರತವು ಅಫ್ಘಾನಿಸ್ತಾನಕ್ಕೆ ಸಹಕಾರ ನೀಡುತ್ತಲೇ ಬಂದಿದೆ, ಕೋವಿಡ್ ಸಮಯದಲ್ಲೂ ಲಸಿಕೆಗಳ ಸರಬರಾಜು ಮಾಡಿದೆ, ಅಣೆಕಟ್ಟು ನಿರ್ಮಿಸಿಕೊಟ್ಟಿದೆ.

ಪೂರ್ವ ಪಶ್ಚಿಮಗಳ ಸಂಸ್ಕೃತಿ, ಧರ್ಮ, ವಾಣಿಜ್ಯ ವ್ಯವಹಾರಗಳ ಸಂಪರ್ಕಕೊಂಡಿಯಂತಿದ್ದ ರೇಷ್ಮೆ ಮಾರ್ಗದಲ್ಲಿನ ಬಾಮಿಯನ್ ಕಣಿವೆ ಕ್ರಿಸ್ತಪೂರ್ವ ಕಾಲದಿಂದಲೂ ಜಗತ್ತಿನ ಮಹತ್ವದ ಸಾಂಸ್ಕೃತಿಕ ಕೇಂದ್ರವಾಗಿತ್ತು. ಇಸ್ಲಾಂ ತಲೆಯೆತ್ತುವ ಮುಂಚೆಯೇ ಇಲ್ಲಿ ಬೌದ್ಧಧರ್ಮ ತನ್ನ ಉಚ್ಛ್ರಾಯವನ್ನು ತಲುಪಿತ್ತು.

ಮೌರ್ಯರು ಬೌದ್ಧಧರ್ಮವನ್ನು ಭಾರತದಿಂದಾಚೆಗೂ ಪ್ರಚಾರ ಮಾಡಲು ಪ್ರಾರಂಭಿಸಿದಾಗ ಅದು ಮೊತ್ತ ಮೊದಲು ತಲುಪಿದ್ದು ಗಾಂಧಾರ ದೇಶವನ್ನು, ಅಂದರೆ ಇಂದಿನ ಅಫ್ಘಾನಿಸ್ತಾನ ವನ್ನು. ಆಮೇಲಷ್ಟೇ ಅದು ಅಲ್ಲಿಂದ ನೇಪಾಳ, ಟಿಬೆಟ್, ಚೀನಾ, ಕೊರಿಯಾ, ಜಪಾನ್ ದೇಶಗಳಿಗೆ ಪಯಣಿಸಿತು. ಈ ಹಿನ್ನೆಲೆಯಲ್ಲಿ ಭಾರತದ ನಂತರ ಆಫ್ಘಾನಿಸ್ತಾನವೇ ಬೌದ್ಧಧರ್ಮದ ಎರಡನೆಯ ಪ್ರಮುಖ ಕೇಂದ್ರವಾಗಿದೆ.

ಆದರೆ ಕಾಲಾಂತರದಲ್ಲಿ ಮಧ್ಯ ಏಷ್ಯಾದಲ್ಲಿ ಅನ್ಯದಾಳಿಕೋರ ಧರ್ಮಗಳು ಹಾಗೂ ಜನಾಂಗಗಳು ಪ್ರವರ್ಧಮಾನಕ್ಕೆ ಬಂದ ಮೇಲೆ ಬೌದ್ಧಧರ್ಮದ ಪತನ ಪ್ರಾರಂಭವಾಯಿತು. 10ನೇ ಶತಮಾನದ ನಂತರ ಗಾಂಧಾರ ದೇಶದಲ್ಲಿ ಬೌದ್ಧಧರ್ಮ ಸಂಪೂರ್ಣವಾಗಿ ನಿರ್ನಾಮಗೊಂಡು ಅದರ ಕೆಲವು ಪಳೆಯುಳಿಕೆಗಳಷ್ಟೇ ಉಳಿದವು.

ಇದನ್ನೂ ಓದಿ: Keshava Prasad B Column: ಮನೆ ಖರೀದಿಸುತ್ತೀರಾ ? ಕೇಂದ್ರವೇ ಕೊಡುತ್ತೆ 1.80 ಲಕ್ಷ ರೂಪಾಯಿ !

ಅವುಗಳಲ್ಲಿ ಬಾಮಿಯನ್ ಕಣಿವೆಯ ಬುದ್ಧನ ಎರಡು ಬೃಹತ್ ಪ್ರತಿಮೆಗಳು (ವೈರೋಚನ ಬುದ್ಧ ಮತ್ತು ಶಾಕ್ಯಮುನಿ ಬುದ್ಧ) ಪ್ರಮುಖವಾದವು. ಕ್ರಮವಾಗಿ 180 ಅಡಿ ಹಾಗೂ 120 ಅಡಿ ಎತ್ತರವಿದ್ದ ಈ ಪ್ರತಿಮೆಗಳನ್ನು ತಾಲಿಬಾನ್ ಉಗ್ರರು 2001ರಲ್ಲಿ ಧ್ವಂಸಗೊಳಿಸಿದರು.

ಮಂಗೋಲಿಯನ್ ದಾಳಿಕೋರನಾದ ಚೆಂಘೀಸ್ ಖಾನ್ ಇಡೀ ರೇಷ್ಮೆ ಮಾರ್ಗವನ್ನು, ಆ ಮೂಲಕ ಚೀನಾವನ್ನೂ ಒಳಗೊಂಡಂತೆ ಆ ಮಾರ್ಗದ ಎಲ್ಲ ಪ್ರಮುಖ ದೇಶಗಳನ್ನೂ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದ. ಅವನು ರೇಷ್ಮೆ ಮಾರ್ಗದ ಎಲ್ಲ ಬೌದ್ಧ ಕೇಂದ್ರಗಳನ್ನೂ ನಾಮಾವಶೇಷ ಮಾಡಿದ್ದ. ಆದರೆ ಆ ಎರಡು ಬೃಹದಾಕಾರದ ಪ್ರತಿಮೆಗಳನ್ನು ಭಗ್ನಗೊಳಿಸಲು ಅವನಿಂದಾಗಿರ ಲಿಲ್ಲ. ತಾಲಿಬಾನ್ ಉಗ್ರರು ಅವನಿಂದಾಗದಿದ್ದ ಕೆಲಸವನ್ನು ಆಧುನಿಕ ಕ್ಷಿಪಣಿ, ಬಾಂಬುಗಳನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ಮಾಡಿ ಮುಗಿಸಿದರು.

ವಿಪರ್ಯಾಸವೆಂದರೆ ಅಷ್ಟು ಕಾಲ ಸುಮ್ಮನಿದ್ದ ವಿಶ್ವಸಂಸ್ಥೆ ಅವು ದಾಳಿಯಿಂದ ಭಗ್ನಗೊಂಡ ಕೂಡಲೆ ಆ ಸ್ಥಳವನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಿತು. ಅಂದಿನ ಭಾರತ ಸರಕಾರವೂ ಇದೊಂದು ಉಗ್ರಕೃತ್ಯವೆಂದು ಖಂಡಿಸಿತೇ ವಿನಾ ಮತ್ತಾವ ಕ್ರಮವನ್ನೂ ಕೈಗೊಳ್ಳ ಲಿಲ್ಲ.

ಅಂದಿನ ಅಫ್ಘಾನಿಸ್ತಾನದ ಪರಿಸ್ಥಿತಿಯೂ ಹಾಗೆ ಯಾವುದೇ ಕ್ರಮ ಕೈಗೊಳ್ಳಲು ಅನುಕೂಲಕರ ವಾಗಿರಲಿಲ್ಲ. ತಾಲಿಬಾನ್ ಉಗ್ರರು ಆಳುವ ಸರಕಾರವನ್ನು 1996ರ ಅಧಿಕಾರದಿಂದ ಕೆಳಗಿಳಿಸಿ ಅ-ನಿಸ್ತಾನದಲ್ಲಿ ಷರಿಯಾ ಕಾನೂನನ್ನು ಜಾರಿಗೆ ತಂದಿದ್ದರು. ಅಫ್ಘಾನಿಸ್ತಾನದ ರಾಜಕೀಯ ಅಧಿಕಾರವನ್ನು ಅನುಮೋದಿಸದೇ ಜಗತ್ತಿನ ಬಹುತೇಕ ರಾಷ್ಟ್ರಗಳು ಅಫ್ಘಾನಿಸ್ತಾನವನ್ನು ನಿಷೇಧಿಸಿ ದ್ದವು (ಪಾಕಿಸ್ತಾನ, ಸೌದಿ, ಅರಬ್ ದೇಶಗಳನ್ನು ಹೊರತುಪಡಿಸಿ). ಬಡತನ, ಉದ್ವಿಗ್ನ ಸಾಮಾಜಿಕ ಪರಿಸ್ಥಿತಿ,

ಅಸ್ಥಿರತೆ, ಹಿಂಸಾಚಾರಗಳು ಅಲ್ಲಿ ಸರ್ವೇ ಸಾಮಾನ್ಯವಾದ ದೈನಂದಿನ ವಿದ್ಯಮಾನಗಳಾಗಿದ್ದವು. ಆದರೆ ಇಂದು ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಅಲ್ಲಿ ಸದ್ಯಕ್ಕೆ ಪ್ರಜಾಪ್ರಭುತ್ವ ಸ್ಥಾಪನೆ ಆಗಿಲ್ಲ ದಿದ್ದರೂ ಅಂದಿನ ಉದ್ವಿಗ್ನ ಪರಿಸ್ಥಿತಿ ಹಂತ ಹಂತವಾಗಿ ತಹ ಬಂದಿಗೆ ಬರುತ್ತಿದೆ. ಜಗತ್ತಿನ ಎಲ್ಲ ರಾಷ್ಟ್ರಗಳೂ ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ಸುಧಾರಿಸುವತ್ತ ಆಸಕ್ತಿ ತಳೆಯುತ್ತಿವೆ.

2022ರಲ್ಲಿ ಅಫ್ಘಾನಿಸ್ತಾನದಲ್ಲಿ ಭೀಕರವಾದ ಭೂಕಂಪ ಸಂಭವಿಸಿದಾಗ ಭಾರತವನ್ನೂ ಒಳಗೊಂಡಂತೆ ಅನೇಕ ಯುರೋಪಿಯನ್ ಹಾಗೂ ದಕ್ಷಿಣ ಏಷ್ಯಾ ದೇಶಗಳು ಅದಕ್ಕೆ ಸಹಾಯಹಸ್ತ ನೀಡಿದವು. ಇಂದು ರಷ್ಯಾದೇಶ ಅಫ್ಘಾನಿಸ್ತಾನದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ.

ಭಾರತವು ಪ್ರಕೃತಿ ವಿಕೋಪಕ್ಕೆ ನೀಡಿದ ಬೆಂಬಲವಲ್ಲದೇ ಕೋವಿಡ್ ಸಮಯದಲ್ಲೂ ಲಸಿಕೆಗಳ ಸರಬರಾಜು ಮಾಡಿತ್ತು, ಮುನ್ನೂರು ಮಿಲಿಯನ್ ಖರ್ಚು ಮಾಡಿ ಸಲ್ಮಾ ಅಣೆಕಟ್ಟು ನಿರ್ಮಿಸಿ ಕೊಟ್ಟಿತ್ತು. ರಸ್ತೆಗಳು ಮತ್ತು ಪಾರ್ಲಿಮೆಂಟ್ ಭವನದ ನಿರ್ಮಾಣ, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ತಾಂತ್ರಿಕ, ಶೈಕ್ಷಣಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಭಾರತವು ಅಫ್ಘಾನಿಸ್ತಾನಕ್ಕೆ ಸಹಕಾರ ನೀಡುತ್ತಲೇ ಬಂದಿದೆ. ದ್ವೇಷ,

ಕೋಮುವಾದಗಳನ್ನು ಬದಿಗೊತ್ತಿ ವಿಶ್ವ ಸಮುದಾಯದ ವಿಶ್ವಾಸವನ್ನು ಗಳಿಸದೇ ಹೋದಲ್ಲಿ ತಾನು ಉದ್ಧಾರವಾಗುವುದಿಲ್ಲವೆಂದು ಅಫ್ಘಾನಿಸ್ತಾನಕ್ಕೆ ಇಂದು ನಿಧಾನವಾಗಿ ಮನವರಿಕೆ ಯಾಗುತ್ತಿದೆ. ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಇತ್ತೀಚೆಗೆ ಭಾರತಕ್ಕೆ ನೀಡಿದ ಭೇಟಿಯು ಈ ಮನಃಪರಿವರ್ತನೆಗೊಂದು ನಿದರ್ಶನವಾಗಿದೆ. ನಮ್ಮ ವಿದೇಶಾಂಗ ಸಚಿವ ರಾದ ಎಸ್.ಜೈಶಂಕರ್ ಅವರೂ “ಈ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ" ಎಂದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಉಭಯ ರಾಷ್ಟ್ರಗಳ ನಡುವೆ ಸ್ನೇಹಸಂಬಂಧ ಏರ್ಪಟ್ಟಿರುವ ಈ ಸಂದರ್ಭದಲ್ಲಿ ಭಾರತ ಸರಕಾರವು ಬಾಮಿಯನ್ ಬೌದ್ಧ ವಿಗ್ರಹಗಳನ್ನು ಪುನರುಜ್ಜೀವಿಸುವಂತೆ ಅಫ್ಘಾನಿಸ್ತಾನವನ್ನು ಕೋರಿಕೊಳ್ಳಲು ಅಥವಾ ತಾನೇ ಖುದ್ದಾಗಿ ಪುನರುಜ್ಜೀವಿಸುವುದಾಗಿ ಅದರೊಂದಿಗೆ ಮಾತುಕತೆ ನಡೆಸಲು ಇದು ಸಕಾಲವಾಗಿದೆ.

ಇಂಥದೊಂದು ಉಪಕ್ರಮಕ್ಕೆ ಪ್ರಗತಿಪರರೆನಿಸಿದ ಬುದ್ಧಿಜೀವಿಗಳು ಅಡ್ಡಗಾಲು ಹಾಕದಿರುವುದಿಲ್ಲ. “ವಿಗ್ರಹಪೂಜೆ ಒಂದು ಕಂದಾಚಾರವಾಗಿದೆ" ಎಂದು ಹೀಗಳೆಯದಿರುವುದಿಲ್ಲ. “ಇದಕ್ಕೆಲ್ಲ ಕೋಟ್ಯಂತರ ರುಪಾಯಿಗಳು ಖರ್ಚಾಗುತ್ತದೆ. ಆ ಹಣವನ್ನು ಅಲ್ಲಿನ ಸ್ಥಳೀಯರ ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯಗಳಿಗೆ ಸದ್ವಿನಿಯೋಗ ಮಾಡಬಹುದು" ಎಂದು ಬುದ್ಧಿಜೀವಿಗಳು ವಾದಿಸ ಬಹುದು. ಆದರೆ ಬಾಮಿಯನ್ ವಿಗ್ರಹಗಳ ಪುನರುಜ್ಜೀವನಕ್ಕೆ ಇಂಥ ವಿತಂಡವಾದ ಹಾಗೂ ಸರಳ ಸಾಮಾಜಿಕ ಕಾಳಜಿಗಳ ಆಚೆಗಿನ ಮಹತ್ವವಿದೆ.

ಮೊದಲಿಗೆ, ರೇಷ್ಮೆ ಮಾರ್ಗದಲ್ಲಿ ೧೨೦ ಮತ್ತು ೧೮೦ ಅಡಿ ಎತ್ತರದಲ್ಲಿ ನಿಂತಿರುವ ಈ ವಿಗ್ರಹಗಳು ಒಂದು ನಿರ್ದಿಷ್ಟ ದೇಶಕ್ಕಾಗಲಿ ಧರ್ಮಕ್ಕಾಗಲಿ ಸೇರಿದ ಸ್ವತ್ತಲ್ಲ. ಇವು ಸಮಸ್ತ ಮಾನವ ನಾಗರಿಕತೆ ಯ ಅತ್ಯಮೂಲ್ಯ ಆಸ್ತಿಗಳಾಗಿವೆ. ಇವು ಕ್ರಿಸ್ತಪೂರ್ವ ಕಾಲದ ಪೂರ್ವ ಹಾಗೂ ಪಶ್ಚಿಮ ನಾಗರಿಕತೆ ಗಳ ವಾಣಿಜ್ಯ, ಸಾಂಸ್ಕೃತಿಕ, ಆರ್ಥಿಕ, ಕೊಳು-ಕೊಡುಗೆಗಳಿಗೆ ಸಾಕ್ಷಿಗಳಂತೆ ನಿಂತಿರುವ ವಿಗ್ರಹ ಗಳಾಗಿವೆ.

ಎರಡನೆಯದಾಗಿ, ಬೌದ್ಧಧರ್ಮ ಹುಟ್ಟಿದ್ದು ಭಾರತದಲ್ಲಿ; ಆದ್ದರಿಂದ ಬೌದ್ಧಧರ್ಮದ ಪುನರು ಜ್ಜೀವನ ಭಾರತದ ಪ್ರಥಮ ಕರ್ತವ್ಯವಾಗಿದೆ. ಅಲ್ಲದೇ ಭಾರತವು ಗಾಂಧಾರ ದೇಶದೊಂದಿಗೆ ಸಹ ತ್ರೇತಾಯುಗದಿಂದಲೂ ಸಂಬಂಧ ಹೊಂದಿದೆ. ಶೀರಾಮಚಂದ್ರನು ಗಾಂಧಾರ ದೇಶವನ್ನು ತಮ್ಮನಾದ ಭರತನಿಗೆ ವಹಿಸಿಕೊಟ್ಟಿದ್ದನೆಂಬ ಸಂಗತಿ ಕಾಳಿದಾಸನ ‘ರಘುವಂಶ ಕಾವ್ಯ’ದಿಂದ ತಿಳಿದು ಬರುತ್ತದೆ.

ದ್ವಾಪರ ಯುಗದಲ್ಲಿ ಕುರುವಂಶವು ಗಾಂಧಾರದೊಂದಿಗೆ ವೈವಾಹಿಕ ಸಂಬಂಧ ಇರಿಸಿಕೊಂಡಿತ್ತು. ಕೌರವರ ತಾಯಿಯಾದ ಗಾಂಧಾರಿ ಇದೇ ಪ್ರಾಂತ್ಯದವಳು. ಇತ್ತೀಚೆಗೆ ಭಾರತ-ಅಫ್ಘಾನಿಸ್ತಾನಗಳ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ಹೊಸ ಸಂಬಂಧವೇನಲ್ಲ, ಈ ಮಾತುಕತೆ ಹಳೆಯ ಸಂಬಂಧದ ಮುಂದುವರಿಕೆಯಾಗಿದೆ ಎಂಬುದನ್ನು ಭಾರತೀಯರು ಹಾಗೆಯೇ ಆಫ್ಘನ್ನರು ನೆನಪಿಡ ಬೇಕಾಗುತ್ತದೆ.

ಮೂರನೆಯದಾಗಿ, ತನ್ನ ದೈವವಲ್ಲದೇ ಅನ್ಯದೈವವನ್ನು ನಂಬದಿರುವುದು ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿಗತ ಆಯ್ಕೆಯಾಗಿದೆ. ಆದರೆ ತನ್ನ ದೈವವಲ್ಲದ ಅನ್ಯದೈವವು ಈ ಭೂಮಿಯ ಮೇಲೆ ಇರಲೇ ಕೂಡದು ಎಂದು ಭಾವಿಸುವುದು ‘ಮೂಲಭೂತ ವಾದ’ ಆಗುತ್ತದೆ. ಇಂಥ ಮೂಲಭೂತವಾದ ವನ್ನು ಜಗತ್ತಿನ ಯಾವ ಪ್ರಾಚೀನ ಧರ್ಮವೂ ಅನುಮೋದಿಸುವುದಿಲ್ಲ.

ತಮ್ಮಿಚ್ಛೆಯಂತೆ ಧರ್ಮವನ್ನು ಅಪವ್ಯಾಖ್ಯಾನಿಸುವ ಕೆಲವು ಧಾರ್ಮಿಕ ಪಟ್ಟಭದ್ರರು ಹಾಗೆಲ್ಲ ಭಾವಿಸಬಹುದೇನೋ. ಬಾಮಿಯನ್ ಬುದ್ಧ ವಿಗ್ರಹಗಳ ಮರುಸ್ಥಾಪನೆಯಿಂದ ಅಂಥ ಅಪವ್ಯಾಖ್ಯಾನಗಳಿಗೆ ತನ್ಮೂಲಕ ಮೂಲಭೂತವಾದಕ್ಕೆ ಒಂದು ಎಚ್ಚರಿಕೆಯ ಸಂದೇಶ ನೀಡಿದಂತಾಗುತ್ತದೆ.

ಅದು ತಮ್ಮ ದೈವವಲ್ಲದೇ ಅನ್ಯದೈವಗಳು ಭೂಮಿಯ ಮೇಲೆ ಇರಲೇಕೂಡದು ಎಂದು ಯೋಚಿಸುವ ದುಷ್ಟ ಶಕ್ತಿಗಳಿಗೆ (ಅಂಥ ದುಷ್ಟಶಕ್ತಿಗಳು ಎಲ್ಲ ಧರ್ಮಗಳಲ್ಲೂ ಇವೆ, ಪ್ರಮಾಣದಲ್ಲಿ ವ್ಯತ್ಯಾಸವಿರಬಹುದು) ನೀಡಬಹುದಾದ ಒಂದು ದಿಟ್ಟ ಸಂದೇಶವಾಗಿದೆ. ಇಂದು ಇಸ್ಲಾಮಾ-ಬಿಯಾ (ಇಸ್ಲಾಮ್ ದ್ವೇಷ) ಜಗತ್ತಿನಾದ್ಯಂತ ಮಾರಕ ವಿಷದಂತೆ ಹರಡುತ್ತಿದೆ. ಈ ಹಿಂದೆ ಹೇಳಿದಂತೆ ಇಂದು ಅಫ್ಘಾನಿಸ್ತಾನವು ತನ್ನ ಕೂಪಮಂಡೂ ಕತನದಿಂದ ಹೊರಬಂದು ವಿಶ್ವಸಮುದಾಯದೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸಿಕೊಳ್ಳಲು ಹಾತೊರೆಯುತ್ತಿರುವಾಗ ಈ ಬುದ್ಧ ವಿಗ್ರಹಗಳ ಸ್ಥಾಪನೆಯಿಂದ ಜಗತ್ತು ಇಸ್ಲಾಂ ಧರ್ಮವನ್ನುನೋಡುವ ದೃಷ್ಟಿಯೂ ಬದಲಾಗುತ್ತದೆ.

ನಾಲ್ಕನೆಯದಾಗಿ, ಈ ಎರಡು ಬೃಹತ್ ವಿಗ್ರಹಗಳ ಮರುಸ್ಥಾಪನೆಯಿಂದ ಅಫ್ಘಾನಿಸ್ತಾನದ ಪ್ರವಾಸೋದ್ಯಮವೂ ಪ್ರವಽಸುತ್ತದೆ. ಜಗತ್ತಿನಲ್ಲಿ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡ ಹಲವು ಸಣ್ಣಪುಟ್ಟ ರಾಷ್ಟ್ರಗಳುಂಟು. ಅಂಥದ್ದರಲ್ಲಿ ಬಹುತೇಕ ಮರುಭೂಮಿಯಿಂದಲೇ ಕೂಡಿರುವ, ಆರ್ಥಿಕವಾಗಿ ಹೀನಾಯ ಸ್ಥಿತಿಯಲ್ಲಿರುವ ಆಫ್ಘಾನಿಸ್ತಾನಕ್ಕೆ ಈ ವಿಗ್ರಹಗಳ ಪುನರುಜ್ಜೀವನದಿಂದ ಲಾಭವಾಗುವುದರಲ್ಲಿ ಸಂಶಯವಿಲ್ಲ.

ಮೋದಿ ಸರಕಾರವು ಬಾಮಿಯನ್ ಬೌದ್ಧ ವಿಗ್ರಹಗಳಿಗಿಂತಲೂ ಎತ್ತರವಾದ ಸರ್ದಾರ್ ಪಟೇಲ್, ರಾಮಾನುಜಾಚಾರ್ಯ, ಶಂಕರಾಚಾರ್ಯ, ಶಿವಾಜಿ, ಬಿರ್ಸಾ ಮುಂಡಾ‌ ಮುಂತಾದ ಮಹಾಪುರುಷರ ವಿಗ್ರಹಗಳನ್ನು ನಿರ್ಮಿಸಿದೆ. ನಮ್ಮ ಸರಕಾರವು ಈ ಪರಂಪರೆಯ ಮುಂದು ವರಿಕೆಯಾಗಿ ಬಾಮಿಯನ್ ಬುದ್ಧ ವಿಗ್ರಹಗಳ ಪುನರುಜ್ಜೀವನವನ್ನು ಪರಿಭಾವಿಸಬೇಕಾಗಿದೆ.

ಥಾಯ್ಲೆಂಡ್, ವಿಯೆಟ್ನಾಂ, ಶ್ರೀಲಂಕಾ, ಕೊರಿಯಾ, ಜಪಾನ್ ಮುಂತಾದ ದೇಶಗಳು ಭಾರತಕ್ಕೆ ಬಂದು ಸಾರನಾಥದ ಬೌದ್ಧ ಅವಶೇಷಗಳನ್ನು ತಮ್ಮ ಖರ್ಚಿನಲ್ಲಿ ಪುನರುತ್ಥಾನಗೊಳಿಸಿದವು. ಆದರೆ ಬಾಮಿಯನ್ ವಿಗ್ರಹಗಳು ಧ್ವಂಸವಾದಾಗ ಈ ಬೌದ್ಧ ದೇಶಗಳು ಪುನರುತ್ಥಾನಕ್ಕೆ ಮುಂದಾಗದೇ ಒಳಗೇ ಕಣ್ಣೀರಿಟ್ಟವು; ಅಂಥದೇ ನಮೂನೆಯ ವಿಗ್ರಹಗಳನ್ನು ತಮ್ಮ ತಮ್ಮ ದೇಶಗಳಲ್ಲಿ ಸ್ಥಾಪಿಸಿಕೊಂಡು ಸಮಾಧಾನ ಮಾಡಿಕೊಂಡವೇ ವಿನಾ ಆಫ್ಘನ್ ನೆಲಕ್ಕೆ ಹೋಗಿ ಧ್ವಂಸಗೊಂಡ ವಿಗ್ರಹಗಳನ್ನು ಮರುಸ್ಥಾಪಿಸುವ ಧೈರ್ಯ ಮಾಡಲಿಲ್ಲ,

ಆ ಸಾಮರ್ಥ್ಯವೂ ಅವಕ್ಕಿಲ್ಲ. ಆದರೆ ಭಾರತವಿಂದು ವಿಶ್ವಗುರುವಾಗಿದೆ. ಅಫ್ಘಾನಿಸ್ತಾನ ಚಿರಕಾಲ ಭಾರತಕ್ಕೆ ಋಣಿಯಾಗಿರುವಷ್ಟು ಆ ದೇಶ ನಮ್ಮಿಂದ ಸಹಾಯ ಪಡೆದಿದೆ. ಪರಿಸ್ಥಿತಿ ಹೀಗಿರುವಾಗ ಆ-ನ್ನರ ಸಮ್ಮತಿಯ ಮೇರೆಗೆ ಬಾಮಿಯನ್ ವಿಗ್ರಹಗಳನ್ನು ಮರುಸ್ಥಾಪಿಸುವ ಸ್ಥಾನದಲ್ಲಿಂದು ಭಾರತವಿದೆ.

ಅನ್ಯರ ನೆಲಕ್ಕೆ ಹೋಗಿ ನಂಬಿಕೆ, ಸಿದ್ಧಾಂತದ ಹೆಸರಿನಲ್ಲಿ ನಮ್ಮದೇ ಕಾರುಬಾರು ನಡೆಸುವುದು ಅಽಕ ಪ್ರಸಂಗತನವಾಗುವುದಿಲ್ಲವೇ? ಹಾಗೆ ಮಾಡುವುದರಿಂದ ವಿದೇಶಾಂಗ ನೀತಿ-ನಿಯಮಗಳ ಉಲ್ಲಂಘನೆಯಾಗುವುದಿಲ್ಲವೇ? ಎಂಬ ಪ್ರಶ್ನೆಗಳು ಉದ್ಭವಿಸಬಹುದು. ಆದರೆ ಈ ಹಿಂದೆ ಗಮನಿಸಿದಂತೆ ಸೌಹಾರ್ದಯುತ ಮಾತುಕತೆಯಿಂದ ದಕ್ಷಿಣ ಏಷ್ಯಾದ ಇತರೆ ಬೌದ್ಧ ದೇಶಗಳು ಸಾರನಾಥದಲ್ಲಿ ತಮ್ಮ ಧಾರ್ಮಿಕ ಕ್ಷೇತ್ರಗಳನ್ನು ನಿರ್ಮಿಸಿಕೊಂಡವು.

ಇದೇ ಮೇಲ್ಪಂಕ್ತಿಯನ್ನು ಭಾರತವೂ ಅನುಸರಿಸಬಹುದು. ಅಫ್ಘಾನಿಸ್ತಾನದ ವಿದೇಶಾಂಗ ಸಚಿವರಾದ ಅಮೀರ್ ಖಾನ್ ಮುತ್ತಾಕಿ ಅವರು ಇತ್ತೀಚೆಗೆ ತಮ್ಮ ದೂತಾವಾಸ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಒಂದು ವಿವಾದಕ್ಕೆ ಕಾರಣವಾಯಿತು. ಪತ್ರಕರ್ತೆಯರ ಭಾಗವಹಿಸುವಿಕೆಗೆ ಅವಕಾಶ ನೀಡಲಿಲ್ಲವೆಂದು ಆಕ್ಷೇಪದ ಧ್ವನಿ ಕೇಳಿ ಬಂದಿತು. ಆಗ ಭಾರತ ಸರಕಾರ ಈ ವಿವಾದದಿಂದ ಅಂತರ ಕಾಯ್ದುಕೊಂಡಿತು.

“ಇದು ಅಫ್ಘಾನಿಸ್ತಾನದ ವಿದೇಶಾಂಗ ಇಲಾಖೆಯವರು ಅವರ ದೂತಾವಾಸ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಾಗಿದೆ. ಭಾರತೀಯ ವಿದೇಶಾಂಗ ಇಲಾಖೆಗೂ ಇದಕ್ಕೂ ಸಂಬಂಧವಿಲ್ಲ" ಎಂದಿತು. ಒಂದು ರಾಷ್ಟ್ರವು ಹೊರರಾಷ್ಟ್ರದ ಒಂದು ನಿರ್ದಿಷ್ಟ ಭೂಮಿಯಲ್ಲಿ ತನ್ನ ನಂಬಿಕೆ ಹಾಗೂ ಕಾನೂನನ್ನು ಜಾರಿಗೊಳಿಸುವುದು ರಾಜಕೀಯವಾಗಿ ನ್ಯಾಯ ಸಮ್ಮತ ಎನಿಸಬಹುದಾದರೆ ಆ ದೇಶದ ಒಂದು ನಿರ್ದಿಷ್ಟ ಭೂಮಿಯಲ್ಲಿ ತನ್ನ ಸಾಂಸ್ಕೃತಿಕ, ಧಾರ್ಮಿಕ ನಂಬಿಕೆಯನ್ನು ಪಾಲಿಸಿಕೊಂಡರೆ ಅದೇಕೆ ನ್ಯಾಯ ಸಮ್ಮತವೆನಿಸಬಾರದು? ಆದ್ದರಿಂದ ಭಾರತವು ಬಾಮಿಯನ್ ಬುದ್ಧವಿಗ್ರಹಗಳನ್ನು ಮರುಸ್ಥಾಪಿಸಿದರೆ ಅದು ಯಾವ ದೃಷ್ಟಿಯಿಂದಲೂ ಉದ್ಧಟತನ ವಾಗುವುದಿಲ್ಲ, ವ್ಯರ್ಥ ಖರ್ಚಾಗುವುದಿಲ್ಲ.

ಭಾರತದಿಂದ ಹತ್ತು ಹಲವು ಸಹಾಯಗಳನ್ನು ಪಡೆದುಕೊಂಡಿರುವ, ಭವಿಷ್ಯದಲ್ಲಿ ಸಹ ಇನ್ನೂ ಹೆಚ್ಚು ಹೆಚ್ಚು ಸಹಾಯ-ಸಹಕಾರಗಳನ್ನು ನಿರೀಕ್ಷಿಸುತ್ತಿರುವ ಅಫ್ಘಾನಿಸ್ತಾನ ಇಂಥ ಉಪಕ್ರಮ ವನ್ನು ಖಂಡಿತವಾಗಿ ವಿರೋಧಿಸುವುದಿಲ್ಲ.

(ಲೇಖಕರು ಸಹ ಪ್ರಾಧ್ಯಾಪಕರು)