ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shishir Hegde Column: ಬಸವ ಮಂಟಪವೂ, ಅಂಕಣಗಳ ಅಗ್ನಿದಿವ್ಯವೂ

ನಾವು ಮೊದಲೂ ಹೀಗೆಯೇ ಇದ್ದಿರಬಹುದು ಎಂದೆನಿಸುವುದಿಲ್ಲವೇ? ಇವತ್ತಿಗೂ ನಮ್ಮೊಳಗಿನ ಅರ್ಥವೇ ಇಲ್ಲದ ಒಡಕುಗಳನ್ನು ಕಾಣುವಾಗ ಏನನಿಸುತ್ತದೆ? ರವಿ ಹಂಜ್ ಅವರ ಸಂದರ್ಶನ, ಪುಸ್ತಕ ಬಿಡುಗಡೆ- ಈ ಘಟನೆ ಪಡೆದುಕೊಂಡ ರೂಪ-ವಿಕಾರಗಳು, ಅದನ್ನು ರಾಜಕೀಯವಾಗಿ ಬಳಸಿ ಕೊಳ್ಳುತ್ತಿರುವ ಧುರೀಣರು, ರಾಜಕೀಯ- ಕುಣಿಸಿದಂತೆ ಕುಣಿಯುವ ಸಮಾಜ.

ಶಿಶಿರಕಾಲ

ನಾವು ಏಕೆ ಹೀಗಾಗಿ ಬಿಟ್ಟಿದ್ದೇವೆ? ನಾವು ಏಕೆ ಈ ರೀತಿ ಆಡುತ್ತೇವೆ? ನಮಗೆ ಎಂತಹ ಪತ್ರಿಕೋದ್ಯಮ ಬೇಕು? ನಮ್ಮ ಭಾರತದ ಇತಿಹಾಸವನ್ನು ಓದುವಾಗ ಒಂದು ಪ್ರಶ್ನೆ ಎದುರಾಗುತ್ತದೆ. ಭಾರತ ದಂತಹ ಬುದ್ಧಿವಂತರ ದೇಶವನ್ನು ಬ್ರಿಟಿಷರು ಅದು ಹೇಗೆ ವಶ ಮಾಡಿಕೊಂಡರು? ಇಲ್ಲಿ ಸಂಪತ್ತು, ಜ್ಞಾನ, ಬುದ್ಧಿವಂತಿಕೆ ಹೀಗೆ ಗಟ್ಟಿ ಸಮಾಜ ಕಟ್ಟಲು ಬೇಕಾಗುವ ಸಾಮಗ್ರಿಗಳೆಲ್ಲ ಲಭ್ಯವಿದ್ದರೂ ನಾವು ಏಕೆ- ಹೇಗೆ ಅವರ ಮುಂದೆ ಸೋತು ನಿಲ್ಲುವಂತಾಯಿತು? ಬಹುಷಃ ಬ್ರಿಟೀಷರು ನಮಗಿಂತ ಹೆಚ್ಚಿನ ಬುದ್ಧಿವಂತರೇ ಇದ್ದಿರಬಹುದು ಅಲ್ಲವೇ? ಅಲ್ಲದಿದ್ದರೆ? ಕೆಲವೊಂದು ಸೆನ್ಸಿಟಿವ್- ರಾಜಕೀಯ- ಜಾತಿ ಧರ್ಮದ ವಿಚಾರಗಳಲ್ಲಿ ಇವತ್ತು ನಾವು ವ್ಯವಹರಿಸುವ- ಪ್ರತಿಕ್ರಿಯಿಸುವ ರೀತಿಯನ್ನು ಒಮ್ಮೆ ಗಮನಿಸಿ.

ನಾವು ಮೊದಲೂ ಹೀಗೆಯೇ ಇದ್ದಿರಬಹುದು ಎಂದೆನಿಸುವುದಿಲ್ಲವೇ? ಇವತ್ತಿಗೂ ನಮ್ಮೊಳಗಿನ ಅರ್ಥವೇ ಇಲ್ಲದ ಒಡಕುಗಳನ್ನು ಕಾಣುವಾಗ ಏನನಿಸುತ್ತದೆ? ರವಿ ಹಂಜ್ ಅವರ ಸಂದರ್ಶನ, ಪುಸ್ತಕ ಬಿಡುಗಡೆ- ಈ ಘಟನೆ ಪಡೆದುಕೊಂಡ ರೂಪ-ವಿಕಾರಗಳು, ಅದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಧುರೀಣರು, ರಾಜಕೀಯ- ಕುಣಿಸಿದಂತೆ ಕುಣಿಯುವ ಸಮಾಜ.

ಇದನ್ನೆಲ್ಲ ಕಂಡಾಗ ಬ್ರಿಟಿಷರು ನಮ್ಮನ್ನು ಒಡೆದಾಳಲು ಬಹಳ ಕಷ್ಟ ಪಟ್ಟಿರಲಿಕ್ಕಿಲ್ಲ ಎನಿಸುವು ದಿಲ್ಲವೇ? ನಾವು ಇಂತಹ ವಿಚಾರಗಳು ಚರ್ಚೆಗೆ ಬಂದಾಗ ಇಂದಿಗೂ ನೀರಿನ ಮೇಲೆ ಗಂಧಕ ಹಾಕಿದಂತೆ ಆಡುವುದು ಏಕೆ? ಅಂಬೇಡ್ಕರ್ ಸಂವಿಧಾನ ರಚನಾ ಸಭೆಯ ಭಾಷಣದಲ್ಲಿ India has once before lost her independence, but she lost it by the infidelity and treachery of some of her own people. Will history repeat itself?- ಭಾರತ ತನ್ನದೇ ಜನರ ವಿಶ್ವಾಸದ್ರೋಹ ಮತ್ತು ಒಡಕಿನಿಂದಾಗಿ ಒಮ್ಮೆ ಸ್ವಾತಂತ್ರ್ಯವನ್ನು ಕಳೆದುಕೊಂಡಿತ್ತು ಎಂದು ಹೇಳುತ್ತ, ಇತಿಹಾಸ ಮರುಕಳಿಸಬಹುದೇ? ಎಂದು ಆಗಲೇ ಪ್ರಶ್ನಿಸಿದ್ದರು.

ಇದನ್ನೂ ಓದಿ: Shishir Hegde Column: ಈ ಆನೆ ಹುಲಿಯ ಮೋಟು ಬಾಲ ಹಾಗೇ ಇರಲಿ ಬಿಡಿ !

ಅವರು ಹೇಳಿದ ಕಳೆದುಕೊಳ್ಳುವ ಸ್ವಾತಂತ್ರ್ಯ ಯಾವುದಿರಬಹುದು? ನಿಮಗೊಂದು ಪ್ರಶ್ನೆ- ಕರ್ನಾಟಕ ದಲ್ಲಿ ರಾಜ್ಯಮಟ್ಟದ ಎಷ್ಟು ಪತ್ರಿಕೆಗಳಿವೆ? ಸರಕಾರಿ ಲೆಕ್ಕದ ಪ್ರಕಾರ ಸುಮಾರು 534 ನಿತ್ಯ ಪ್ರಕಟವಾಗುವ ಕನ್ನಡ ಪತ್ರಿಕೆಗಳು ಇವೆಯಂತೆ. ಆದರೆ ನಮ್ಮ ನಿಮ್ಮ ಲೆಕ್ಕಕ್ಕೆ ಸಿಗುವ, ಬಹುತೇಕರು ಓದುವ, ಚಾಲ್ತಿಯಲ್ಲಿರುವ ದಿನಪತ್ರಿಕೆಗಳು ಎಷ್ಟು? ಹತ್ತು- ಹನ್ನೆರಡು. ಇಷ್ಟು ಪತ್ರಿಕೆಗಳಿವೆಯಲ್ಲ, ಇವುಗಳಲ್ಲಿ ಇವತ್ತು ಲೇಖನಗಳನ್ನು ಎಷ್ಟು ಪತ್ರಿಕೆಗಳು ಪ್ರಕಟಿಸುತ್ತವೆ? ಪ್ರಕಟಿಸಿದರೂ- ಪೂರ್ತಿ ಎರಡು ಪುಟಗಳಲ್ಲಿ (ಎಡಿಟೋರಿಯಲ್ ಮತ್ತು ಒಪ್-ಎಡ್) ಲೇಖನಗಳು ಯಾವ ಪತ್ರಿಕೆಯಲ್ಲಿ ಪ್ರಕಟವಾಗುತ್ತವೆ? ಈಗೀಗ ಬಹುತೇಕ ಪತ್ರಿಕೆಗಳಲ್ಲಿ ಲೇಖನಗಳು- ಅಂಕಣ ಮಾಯವಾಗಿಬಿಟ್ಟಿವೆ, ಗಮನಿಸಿದ್ದೀರಾ? ನಿಮ್ಮ ಪ್ರಕಾರ ಅದಕ್ಕೆ ಕಾರಣ ಏನಿರಬಹುದು? ಓದುಗರಿಗೆ ಲೇಖನ ಬೇಕಾಗಿಲ್ಲವೇ? ನಿಮಗೊಂದು ಸತ್ಯ ವಿಷಯ ಹೇಳಬೇಕು.

ಕನ್ನಡದ ಯಾವ ಪತ್ರಿಕೆಗಳೂ ಜಾಗ ಕಡಿಮೆಯಾಗಿ ಲೇಖನ ಕಡಿಮೆ ಮಾಡಿದ್ದಲ್ಲ. ಓದುವವರಿಲ್ಲ ಎಂದು ನಿಲ್ಲಿಸಿದ್ದಲ್ಲ. ಅಂಕಣಗಳು ಪತ್ರಿಕೆಗಳಲ್ಲಿ ಕ್ಷೀಣಿಸಲು ಬೇರೆಯದೇ ಕಾರಣಗಳಿವೆ. ಮೊದಲನೆ ಯದು ಅಂಕಣಕಾರರ ಕೊರತೆ. ನಿಜ. ಕನ್ನಡದಲ್ಲಿ ಬರೆಯುವವರು ಸಾಕಷ್ಟಿದ್ದಾರೆ. ಚಂದವಾಗಿ ಓದಿಸಿಕೊಂಡು ಹೋಗುವಂತೆ ಬರೆಯುವ ನೂರಾರು ಜನರಿದ್ದಾರೆ. ಆದರೆ ನಿರಂತರ- ವಾರಕ್ಕೊಮ್ಮೆ ಅಂಕಣ ಬರೆಯಲು ಒಪ್ಪುವ ಬರಹಗಾರರ ಕೊರತೆ ನಮ್ಮಲ್ಲಿದೆ. ಇದನ್ನು ಬೇರೆ ಯಾರೂ ಅಲ್ಲ- ಸ್ವತಃ ಕನ್ನಡ ಪತ್ರಿಕೆಗಳ ಸಂಪಾದಕರೇ ಮಾತನಾಡಿಕೊಳ್ಳುವುದನ್ನು ನಾನೇ ಕೇಳಿಸಿಕೊಂಡಿದ್ದೇನೆ.

ಘಟಾನುಘಟಿ ಬರಹಗಾರರು ಕೂಡ ಅಂಕಣ ಎಂದಾಗ ಕಂಗಾಲಾಗುತ್ತಾರೆ. ಭೈರಪ್ಪನಂತಹ ಭೈರಪ್ಪ ನವರೇ ಅಂಕಣದ ಉಸಾಬರಿ ಬೇಡ ಎಂದು ಕೈಬಿಟ್ಟದ್ದರು. ಇದು ಅಷ್ಟು ಕಷ್ಟದ ಬದ್ಧತೆ- ಕಮಿಟ್ಮೆಂಟ. ನಿರಂತರತೆ, ತಯಾರಿ, ಜೊತೆಯಲ್ಲಿ ನಾವೇ ನಿಗದಿಮಾಡಿಕೊಂಡ ಗುಣಮಟ್ಟ ಕಾಪಾಡಿಕೊಂಡು ಹೋಗುವುದು ಸುಲಭವಲ್ಲ.

61 ok

ಯಾವತ್ತೋ ಒಂದೆರಡು ಲೇಖನ ಬರೆದುಬಿಡಬಹುದು- ಆದರೆ ವಾರ ವಾರ? ಎಲ್ಲರಂತೆ ಅಂಕಣ ಕಾರನಿಗೂ ಕಣ್ಣು ಮುಚ್ಚಿ ಬಿಡುವುದರೊಳಗೆ ವಾರ ಕಳೆದುಹೋಗಿರುತ್ತದೆ - ಬದುಕು ಓಡುತ್ತಿರು ತ್ತದೆ. ಪ್ರತೀ ವಾರ- ಗಾಣಕ್ಕೆ ಕಬ್ಬು ಕೊಟ್ಟಂತೆ ವಿಚಾರಗಳನ್ನು ಕೊಟ್ಟು ಇಲ್ಲಿ ಬಸಿಯಬೇಕು. ನಿರಂತರ ಬರೆಯುತ್ತ- ಓದುಗರ ಜೊತೆ ನೇರ ಸಂಬಂಧ ನಿಭಾಯಿಸುವುದು ಬೇರೆಯದೇ ತೆರನಾದ ಸಾಹಿತ್ಯ. ಇಲ್ಲಿ ಬೊಗಳೆ ಬಿಟ್ಟು ಮಾಯವಾಗುವಂತಿಲ್ಲ. ವಾರಕ್ಕೊಮ್ಮೆ ಬಂದು ಮುಖ ತೋರಿಸ ಬೇಕು. ಗುಣಮಟ್ಟವನ್ನು ವಾರದಿಂದ ವಾರಕ್ಕೆ ಹೆಚ್ಚಿಸಿಕೊಳ್ಳುತ್ತ, ಹಿಗ್ಗಿಸಿಕೊಳ್ಳುತ್ತ ಹೋಗಬೇಕು.

ವಾರಕ್ಕೊಮ್ಮೆ ಪ್ರಾಣದ ತುಂಡೊಂದನ್ನು ಬೇಡುವ ಕೆಲಸ ಇದು. ಸಾಹಿತಿಗಳು ಈ ಕೆಲಸಕ್ಕೆ ಕೈ ಹಾಕಲು ಹಿಂಜರಿಯಲು ಇನ್ನೊಂದು ಧರ್ಮ ಸೂಕ್ಷ್ಮವಿದೆ. ಅಂಕಣವೆಂದರೆ ಅಭಿಪ್ರಾಯ- ನಮ್ಮೊಳಗಿನ ವಿಚಾರ. ಸಾಹಿತಿಗಳಿಗೆ ತಲೆಬಿಸಿಯೆಂದರೆ- ತಮ್ಮ ಒಳಗಿನ ವಿಚಾರಗಳನ್ನು ಹೇಳಿ ಬಿಟ್ಟರೆ ಸಮಾಜ ಅವರನ್ನು ಒಂದು ಬಣಕ್ಕೆ ಸೇರಿಸಿಬಿಡುತ್ತದೆ. ಸಾಹಿತ್ಯದಾಚೆಯ ಲೆಕ್ಕಾಚಾರ ತಪ್ಪುತ್ತದೆ. ಅಲ್ಲದೆ ಅಂಕಣ ಸಾಹಿತ್ಯದಲ್ಲಿ ತೊಡಗಿಸಿಕೊಂಡರೆ ಬೇರೆ ಸಾಹಿತ್ಯದಲ್ಲಿ ತೊಡಗಿಸಿ ಕೊಳ್ಳುವುದು ಕಷ್ಟ. ಶ್ರಮದ ಕೆಲಸ.

ವಾರಕ್ಕೊಮ್ಮೆ ಪ್ರಸವ. ಇಂತಹ ಕಾರಣಗಳಿಂದ ಸಾಹಿತಿಗಳು ಅಂಕಣದಿಂದ ನಾಲ್ಕು ಫುಟ್ ದೂರ ಉಳಿದುಬಿಡುತ್ತಾರೆ. ಎರಡನೇ ಕಾರಣ. ಅಂಕಣಗಳೆಂದರೆ ಸಂಪಾದಕರಿಗೆ, ಪತ್ರಿಕೆಗೆ ಕೂಡ ಮೂರ್ನಾಲ್ಕು ರೀತಿಯ ತಲೆಬಿಸಿ- ಕಿರಿಕಿರಿಗಳು. ಅಂಕಣಗಳೆಂದರೆ ಏನು? ಅಭಿಪ್ರಾಯಗಳು, ದೃಷ್ಟಿಕೋನ ಅಲ್ಲವೇ? ಅಭಿಪ್ರಾಯವೆಂದಾಕ್ಷಣ ಅಲ್ಲಿ ಪರ ವಿರೋಧ ಸಹಜ.

ಸಂಪಾದಕರು ಅವೆಲ್ಲವನ್ನೂ ಧೈರ್ಯದಲ್ಲಿ ಪ್ರಕಟಿಸಿದರೂ ಗಲಾಟೆಗಳಾಗುತ್ತವೆ. ಪರ- ವಿರೋಧ ವಿಚಾರ ಗಳಿಗೆ ಸಮಾನ ಅವಕಾಶ ಕೊಡಬೇಕು. ಆಗ ಎರಡೂ ವಿಚಾರದವರಿಗೂ ಬೇಸರ, ಅಸಹನೆ ಇತ್ಯಾದಿ. ಲೇಖನ ಪ್ರಕಟಿಸಿದ್ದಕ್ಕೆ ಒಂದು ಬಣದವರು ಬಂದು ಪತ್ರಿಕೆಯ ಕಚೇರಿಗೆ ಮುತ್ತಿಗೆ ಹಾಕಬಹುದು. ಕೇಸ್ ಮಾಡಬಹುದು. ಕಲ್ಲು ಹೊಡೆಯಬಹುದು.

ಅದು ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯ - ನಮ್ಮಲ್ಲಿ. ಹೆಚ್ಚಿನ ಪತ್ರಿಕೆಗಳಲ್ಲಿ ಸಂಪಾದಕ ಕೂಡ ಒಬ್ಬ ಉದ್ಯೋಗಿ. ಯಾರಿಗೆ ಬೇಕು ಊರ ಉಸಾಬರಿ? ಕೇಸು ನಡೆಸುವ ಖರ್ಚು ಬೇರೆ. ಮೇಲಿನವರಿಗೆ ಉತ್ತರಿಸಬೇಕು. ಹಾಗಾಗಿ ಇಂದಿನ ಬಹುತೇಕ ಕನ್ನಡ ಸಂಪಾದಕರು ಒಂದೋ ಲೇಖನ ಪ್ರಕಟಿಸು ವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಅಥವಾ ಕಾಟಾಚಾರಕ್ಕೆ ಒಂದು- ಎರಡು ಚಿಕ್ಕ 500-600 ಶಬ್ದಗಳ ಲೇಖನ ಪ್ರಕಟಿಸಿ ಅದರಲ್ಲಿಯೇ ಪತ್ರಿಕೋದ್ಯಮದ ಕರ್ತವ್ಯ ನೀಗಿಸಿದ ಸಂತೃಪ್ತಿ ಹೊಂದುತ್ತಿದ್ದಾರೆ.

ನನಗೆ ಕನ್ನಡದ ನಾಲ್ಕು ಮುಖ್ಯ ಪತ್ರಿಕೆಗಳ ಸಂಪಾದಕರ ನೇರ ಪರಿಚಯವಿದೆ. ಅವರೆಲ್ಲರಲ್ಲೂ ನಾನು ನಿಮ್ಮಲ್ಲಿ ಅಂಕಣಗಳೇಕೆ ಪ್ರಕಟವಾಗುವುದಿಲ್ಲ ಎಂದು ಕುತೂಹಲದಿಂದ ಪ್ರಶ್ನಿಸಿದ್ದೇನೆ. ಕರ್ನಾಟಕದ ಎರಡನೇ ಅತಿಹೆಚ್ಚು ಪ್ರಿಂಟ್ ಆಗುವ ಪತ್ರಿಕೆಯ ಸಂಪಾದಕರಲ್ಲಿ ಹೀಗೆ ಕೇಳಿದಾಗ, ‘ನಾವೆಲ್ಲರೂ ಅಂಕಣದ ಉಸಾಬರಿಯನ್ನು ಭಟ್ಟರಿಗೆ ವಹಿಸಿಕೊಟ್ಟಿದ್ದೇವೆ. ಅದರ ಸುತ್ತಲಿನ ತಲೆಬಿಸಿಗಳು ಯಾರಿಗೆ ಬೇಕು? ಅವರು ಹೇಗೆ ನಿಭಾಯಿಸುತ್ತಾರೋ ಗೊತ್ತಿಲ್ಲ. ಯಾರೂ ಬರೆದಿಲ್ಲ ಎಂದರೆ ಅವರೇ ನಿತ್ಯ ಎರಡು ಪೇಜ್ ಬರೆದು ತುಂಬಿಸುತ್ತಾರೆ.

ಅವರಿಗೆ ಅಂಕಣಕಾರರನ್ನು ಸಂಭಾಳಿಸುವ ಒಂದು ವಿಶೇಷ ಶಕ್ತಿಯಿದೆ- ನಮ್ಮ ಹತ್ತಿರ ಇದೆಲ್ಲ ಸಾಧ್ಯವಿಲ್ಲ’ ಎಂದು ಯಥಾವತ್ತು ಇದೇ ವಾಕ್ಯವನ್ನು ಹೇಳಿದ್ದರು. ವಿಶ್ವೇಶ್ವರ ಭಟ್ಟರು ಮೊದಲಿ ನಿಂದಲೂ ಅಂಕಣಕ್ಕೆ ಎಲ್ಲಿಲ್ಲದ ಮಹತ್ವ ಕೊಟ್ಟುಕೊಂಡು ಬಂದವರು- ನಿಮಗೆ ಗೊತ್ತು. ಉಳಿದ ಕನ್ನಡ ಪತ್ರಿಕೆಗಳು ಕೈಸೋತು ಅಂಕಣಗಳ ಜಾಗವನ್ನು ಜಾಹೀರಾತಿಗೆ ಕೊಟ್ಟು ಆರಾಮು ಮಾಡಿಕೊಂಡರೆ ವಿಶ್ವವಾಣಿಯಲ್ಲಿ ಇದು ಇಂದಿಗೂ ಬದಲಾಗಿಲ್ಲ. ನಿಮಗೆ ಇನ್ನೊಂದು ಲೆಕ್ಕಾಚಾರ ಕೊಡುತ್ತೇನೆ. ಈ ಲೇಖನ ಪ್ರಕಟವಾದ ಈ ಪುಟ ಮತ್ತು ಪಕ್ಕದ ಪುಟವನ್ನೊಮ್ಮೆ ನೋಡಿ.

ಎಷ್ಟು ಲೇಖನಗಳಿವೆ? ಐದು ಲೇಖನಗಳು? ಇದರ ಜೊತೆಯಲ್ಲಿ ಸಂಪಾದಕೀಯ, ಸೊಂಪಾ ದಕೀಯ, ಸಂಪಾದಕರ ಸದ್ಯಶೋಧನೆ, ಭಟ್ಟರ್ ಸ್ಕಾಚ್- ಹೀಗೆ ಒಟ್ಟೂ ಏಳು. ಲೆಕ್ಕ ಹಾಕಿ- ವಾರದ ಏಳೂ ದಿನ ಐದು ಲೇಖನ ಪ್ರಕಟವಾಗಬೇಕೆಂದರೆ ಕನಿಷ್ಠ 35 ಲೇಖನಗಳು- ಲೇಖಕರು ಬೇಕಾಯ್ತು ಅಲ್ಲವೇ. ನಿರಂತರ ಬರೆಯುವ ನಮ್ಮಂಥವರಿಂದ ಲೇಖನ ತರಿಸಿಕೊಳ್ಳಬೇಕು, ಅದನ್ನು ಸಂಪಾದಿಸಿ ಪ್ರಕಟಿಸಬೇಕು.

ಜೊತೆಯಲ್ಲಿ ಆಗೀಗ, ಅಥವಾ ಯಾವತ್ತೋ ಒಮ್ಮೆ ಬರೆಯುವ ಲೇಖನಗಳನ್ನು ಹೊಂದಿಸಿಕೊಳ್ಳ ಬೇಕು. ಸಮಾಜದ ಪ್ರತಿಕ್ರಿಯೆಯನ್ನು ಸಮಗ್ರವಾಗಿ ಜೋಡಿಸಬೇಕು. ಇದೆಲ್ಲ ನಡೆಯಬೇಕೆಂದರೆ ಈ ಪ್ರಮಾಣದ ‘ಬರವಣಿಗೆಯನ್ನು ಮಾಡಿಸಬೇಕು’. ಜೊತೆಯಲ್ಲಿ ಮೂರರಿಂದ ನಾಲ್ಕು ಮಾಧ್ಯಮ ಕೆಲಸಗಾರರು ಇದೆಲ್ಲವನ್ನೂ ಪತ್ರಿಕೆಯಲ್ಲಿ ಜೋಡಿಸಲು- ಹೊಂದಿಸಲು ಕೆಲಸ ಮಾಡಬೇಕು. ಇಷ್ಟೊಂದು ಶ್ರಮ- ಯಾರಿಗೆ ಬೇಕು? ಹಾಗಾಗಿ ಅಂಕಣಗಳು ಕಾಣೆಯಾಗುತ್ತಿವೆ.

ನಾನೀಗ ಅಂಕಣಗಳ ಮಹತ್ವದ ಬಗ್ಗೆ ನಿಮಗೆ ಹೇಳಲು ಹೊರಟರೆ- ಊಟ ಮಾಡುತ್ತಿರುವವರಲ್ಲಿ ತಿನ್ನುವುದು ಏಕೆ ಮುಖ್ಯ ಎಂದು ವಿವರಿಸಲು ಹೊರಟಂತಾಗುತ್ತದೆ. ಅಂಕಣಗಳ ಮಹತ್ವದ ಅರಿವಿದ್ದೇ ನೀವು ನನ್ನ- ಇಲ್ಲಿನ ಉಳಿದ ಅಂಕಣಗಳನ್ನು ಓದುತ್ತೀರಿ. ಇದನ್ನು ನಾನು ಬರೆಯುತ್ತೇ ನೆಂಬ ಕಾರಣಕ್ಕೆ ಹೇಳುತ್ತಿಲ್ಲ. ಅಂಕಣಗಳು ಮುಖ್ಯವೆನಿಸಿದ್ದಕ್ಕೇ ನಾನು ಬರೆಯುತ್ತೇನೆ. ಸುದ್ದಿ ಪತ್ರಿಕೆಗಳು ಕೇವಲ ಸುದ್ದಿ ಕೊಟ್ಟರೆ ಮಾತ್ರ ಸಾಲದು ಎನ್ನುವುದು ನನ್ನ ಗಟ್ಟಿ ಅನಿಸಿಕೆ.

ತಲಕಾವೇರಿಯಲ್ಲಿ ಮುಖ್ಯಮಂತ್ರಿ ಬಾಗಿನ ಕೊಟ್ಟರು, ಡೊನಾಲ್ಡ್ ಟ್ರಂಪ್ ಈ ದೇಶದ ಮೇಲೆ ಇಷ್ಟು ಸುಂಕ ಹಾಕಿದ, ಯಡಿಯೂರಪ್ಪ ಹೀಗೆಂದರು, ದೇವೇಗೌಡರು ಹಾಗೆಂದು ಕಣ್ಣೀರಿಟ್ಟರು, ಇಲ್ಲಿ ಉದ್ಘಾಟನೆ- ಅಲ್ಲಿ ದರೋಡೆ- ಇವೆಲ್ಲ ಸುದ್ದಿಗಳು. ಸುದ್ದಿಗಳೆಂದರೆ ಮಾಹಿತಿ. ಆ ಮಾಹಿತಿಯ ಹಿನ್ನೆಲೆ, ಪರಾಮರ್ಶೆ, ದೃಷ್ಟಿಕೋನವೊಂದನ್ನು ಸೃಷ್ಟಿಸಿಕೊಳ್ಳಲು ಅವಕಾಶ ಮಾಡಿಕೊಡುವುದು ಅಂಕಣದ- ಲೇಖನದ ಕೆಲಸ. ‌

ಒಂದು ಒಳ್ಳೆಯ ಅಂಕಣವು ನಾವು ನೂರಾರು ಬಾರಿ ನೋಡಿರುವ ಸಂಗತಿಯೊಂದನ್ನೇ ಸಂಪೂರ್ಣ ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡಬಲ್ಲದು. ಇಂದು ಪ್ರತಿ ನಿಮಿಷವೂ ಸಾವಿರಾರು ಸಂಗತಿಗಳು ನಮ್ಮ ಗಮನ ಸೆಳೆಯಲು ಪೈಪೋಟಿ ನಡೆಸುತ್ತವೆ. ಆದರೆ, ಮಾಹಿತಿ ಇದ್ದ ಮಾತ್ರಕ್ಕೆ ನಮಗೆ ಎಲ್ಲವೂ ಅರ್ಥವಾಗುತ್ತದೆ ಎಂದಲ್ಲ. ಆ ಮಾಹಿತಿಯ ಹಿಂದಿನ ಅರ್ಥವನ್ನು ಕಂಡುಕೊಳ್ಳುವ, ಬಿಡಿಬಿಡಿಯಾಗಿರುವ ಸಂಗತಿಗಳನ್ನು ಬೆಸೆಯುವ, ನಮ್ಮ ನಂಬಿಕೆಗಳನ್ನೇ ಪ್ರಶ್ನಿಸುವ ಮತ್ತು ಹೊಸ ನೋಟವನ್ನು ನೀಡುವ ಕೆಲಸ ಅಂಕಣಗಳದ್ದು. ದಿನಪತ್ರಿಕೆ ಅದೇ ದಿನ ಸಂಜೆಯಾಗುವುದರೊಳಗೆ ರದ್ದಿಯಾಗಿಬಿಡುತ್ತದೆ ಎನ್ನುತ್ತಾರೆ.

ಏನದರ ಅರ್ಥ? ಅಲ್ಲಿರುವ ಸುದ್ದಿಗಳಿಗೆ ಬೆಳಗ್ಗೆಯಿದ್ದ ಮಹತ್ವ ಸಂಜೆಯೊಳಗೆ ಸವಕಳಿ ಯಾಗಿರುತ್ತದೆ. ಆದರೆ, ಅಂಕಣಗಳು ಹಾಗಲ್ಲ- ಅವು ಮನಸ್ಸಿನೊಳಗೆ ಕೂರುತ್ತವೆ. ದಶಕಗಳ ಹಿಂದೆ ಬರೆದ ಒಂದು ಪ್ಯಾರಾ ಇಂದಿಗೂ ನೆನಪಾಗಿ, ಓದುಗನಿಗೆ ಅಂಥದ್ದೇ ಸುದ್ದಿ ಕಂಡಾಗ ಪ್ರಸ್ತುತ ವಾಗುತ್ತದೆ. ಆ ಕಾರಣಕ್ಕೇ ಒಳ್ಳೆಯ ಲೇಖನ ಕಂಡಾಗ ಓದುಗರು ಅದನ್ನು ಕತ್ತರಿಸಿ ಇಟ್ಟುಕೊಂಡು ಜೋಪಾನ ಮಾಡುವುದಿದೆ. ‘ನೀವು ಈ ವಿಷಯದ ಬಗ್ಗೆ ಹೀಗೆ ಹಿಂದೆ ಬರೆದಿದ್ದಿರಿ. ನನಗೆ ಆ ಲೇಖನ ಯಾವತ್ತೂ ಮರೆತು ಹೋಗುವುದಿಲ್ಲ’ ಎಂದು ಓದುಗರು ಹೇಳುವುದು ಆ ಕಾರಣಕ್ಕೆ. ಒಟ್ಟಾರೆ ಸುದ್ದಿ- ಬೆಳವಣಿಗೆ ಇವೆಲ್ಲವನ್ನು- ಸುತ್ತಲಿನ ಜಗತ್ತನ್ನು ಸಮಗ್ರವಾಗಿ ಗ್ರಹಿಸುವ ಗ್ರಾಹ್ಯಗುಣವನ್ನು ಲೇಖನ ಸೃಷ್ಟಿಸುತ್ತದೆ.

ಸುದ್ದಿಗಳ ಜೊತೆ ಲೇಖನಗಳು- ಅಭಿಪ್ರಾಯಗಳು ಸೇರಿದಾಗಲೇ ಪತ್ರಿಕೆ ಪೂರ್ಣವೆನಿಸುವುದು. ಅಂಕಣಕಾರನಿಗೆ ಒಂದು ವಿಶಿಷ್ಟವಾದ ಅವಕಾಶವನ್ನು ಪತ್ರಿಕೆ ಸೃಷ್ಟಿಸಿ ಕೊಡುತ್ತದೆ. ಪ್ರತಿವಾರ ಒಬ್ಬ ವ್ಯಕ್ತಿಗೆ ಒಂದಷ್ಟು ಜಾಗ ನೀಡಿ, ಸಾವಿರಾರು ಓದುಗರ ಮನಸ್ಸುಗಳನ್ನು ತಲುಪುವ ಅವಕಾಶ ಕಲ್ಪಿಸಿಕೊಡುತ್ತದೆ. ಆದರೆ ಆ ಜಾಗವನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದು ಸಂಪೂರ್ಣ ಲೇಖಕನಿಗೆ ಬಿಟ್ಟದ್ದು. ಮಾಹಿತಿ ನೀಡಲಿಕ್ಕೋ? ಮನರಂಜಿಸಲಿಕ್ಕೋ? ಅಥವಾ ಕೆಣಕಲೋ? ಪ್ರಶ್ನಿಸಲೋ? ಸಮಾಧಾನ ಹೇಳಲೋ? ಅಥವಾ ಓದುಗನನ್ನು ಒಂದು ಕ್ಷಣ ನಿಲ್ಲಿಸಿ, ಯೋಚಿಸು ವಂತೆ ಮಾಡಲೋ? ನೀಡಿದ ಜಾಗವನ್ನು ಸಮರ್ಥವಾಗಿ ಬಳಸಿಕೊಂಡ ಲೇಖಕ ಉಳಿದುಕೊಳ್ಳು ತ್ತಾನೆ.

ಅಲ್ಲಿ ಸೋತವನನ್ನು ಪತ್ರಿಕೆ ಗೌರವಯುತವಾಗಿಯೇ ಬೀಳ್ಕೊಡುತ್ತದೆ- ಸದ್ದಿಲ್ಲದೆ. ಸಾಮಾನ್ಯವಾಗಿ ಎರಡು ರೀತಿಯ ಅಂಕಣಗಳನ್ನು ನೋಡಬಹುದು. ಮೊದಲನೆಯದು- ನಮ್ಮಂಥವರ ಅಂಕಣ ಗಳು. ಒಂದಿಷ್ಟು ವಿಚಾರ, ಜಿಜ್ಞಾಸೆ ಇತ್ಯಾದಿ. ಅಪರೂಪಕ್ಕೆ ಉಪ್ಪಿನಕಾಯಿಯಷ್ಟು ರಾಜಕೀಯ. ಹೆಚ್ಚಾಗಿ ರಾಜಕೀಯ ಗುಣ ಲೇಪನಗಳಾಚೆಯ ವಿಷಯಗಳು.

ಎರಡನೆಯವು ವಿಭಿನ್ನ ರೀತಿಯ ಇನ್‌ಸ್ಟಿಗೇಟ್ ಮಾಡಬಲ್ಲ- ಕೆಣಕಬಲ್ಲ ಲೇಖನಗಳು. ಸಮಾಜದ ಅಂಕುಡೊಂಕನ್ನು, ನಮ್ಮ ಬಹುಕಾಲದ ನಂಬಿಕೆಗಳನ್ನು ಸಾಕ್ಷ್ಯ ಇಟ್ಟು ಪ್ರಶ್ನಿಸುವ ಲೇಖನಗಳು. ಕೆಲವು ಲೇಖಕರಿಗೆ ಸಮಾಜವನ್ನು ಸ್ವಲ್ಪ ಚಿವುಟುವ ಉದ್ದೇಶವಿರುತ್ತದೆ. ಇನ್ನು ಕೆಲವರಿಗೆ ಓದುಗನಿಗೊಂದು ಒಳ್ಳೆಯ ಓದನ್ನು ಕೊಡೋಣ ಎಂಬ ಉದ್ದೇಶವಿರುತ್ತದೆ. ಯಾವ ಉದ್ದೇಶವೂ ಕೆಟ್ಟದಲ್ಲ- ತಪ್ಪಲ್ಲ, ಅದುವೇ ಸರಿ. ಅದುವೆ ಅಭಿವ್ಯಕ್ತಿ ಸ್ವಾತಂತ್ರ್ಯ. ಓದುಗನನ್ನು ಪ್ರಶ್ನಿಸದ, ಯೋಚಿಸುವಂತೆ ಮಾಡದ ಯಾವುದೇ ಲೇಖನ ಬೆಳಿಗ್ಗೆಯೇ ರದ್ದಿಯನಿಸಿಬಿಡುತ್ತದೆ.

ಕೆಲವರು ಭಟ್ಟರೇ ಇಂತಹ ಲೇಖನವನ್ನು ಪ್ರಚೋದಿಸಿ ಬರೆಸಿದ್ದಾರೆ ಎಂದು ಆಪಾದಿಸುತ್ತಿದ್ದಾರೆ. ಹೌದಿರಬಹುದಾ? ನಾನು ಕಳೆದ ಏಳು ವರ್ಷದಿಂದ ಅಂಕಣ ಬರೆದುಕೊಂಡು ಬಂದಿದ್ದೇನೆ. ಲೇಖನ ಹೀಗೆ ಬರೆಯಿರಿ, ಈ ರೀತಿ ಬರೆಯಿರಿ ಎಂದು ಎಷ್ಟು ಬಾರಿ ಹೇಳಿರಬಹುದು? ಜೀರೋ. ಇಲ್ಲಿಯ ವರೆಗೂ ನನಗೆ ಭಟ್ಟರಾಗಲಿ ಅಥವಾ ವಿಶ್ವವಾಣಿಯ ಯಾವುದೇ ಸಿಬ್ಬಂದಿಯಾಗಿರಲಿ, ಹಾಗೆ ಹೇಳಿದ್ದು ಇಲ್ಲವಲ್ಲ! ಒಮ್ಮೆ ಹೀಗಾಯ್ತು. ನಾನು ಅಷ್ಟಾಗಿ ರಾಜಕಾರಣದ ವಿಚಾರ ಬರೆಯುವು ದಿಲ್ಲ. ಒಮ್ಮೆ ಒಬ್ಬ ರಾಜಕಾರಣಿಯನ್ನು ನನ್ನ ಲೇಖನದ ಎರಡು ಪ್ಯಾರಾದಲ್ಲಿ ಕಟುವಾಗಿ ಪ್ರಶ್ನಿಸಿದ್ದೆ, ಟೀಕಿಸಿದ್ದೆ.

ಆ ದಿನ ಇನ್ನೇನು ಲೇಖನ ಕಳುಹಿಸಬೇಕು, ಫೇಸ್ಬುಕ್‌ನಲ್ಲಿ ಭಟ್ಟರು ಅದೇ ರಾಜಕಾರಣಿಯ ಜೊತೆ ಕೂತು ಚಹಾ ಕುಡಿಯುತ್ತಿರುವ ಫೋಟೋ ಹಾಕಿದ್ದರು- ಕಾಣಿಸಿತು. ಅದನ್ನು ಕಂಡು ಭಟ್ಟರ ನ್ನೊಮ್ಮೆ ಪರೀಕ್ಷಿಸಬೇಕೆನ್ನಿಸಿತು. ಅವರಿಗೆ ಫೋನ್ ಮಾಡಿ ‘ಭಟ್ಟರೇ, ನೀವು ಚಾ ಕುಡಿಯುತ್ತಿದ್ದ ರಾಜಕಾರಣಿಯ ಬಗ್ಗೆಯೇ ಈಗ ಬರೆದಿದ್ದೇನೆ’ ಎಂದೆ.

ಭಟ್ಟರು ‘ಓಹ್ ಹೌದಾ, ಕಳುಹಿಸಿ. ಹಾಗೆಯೇ ತೆಗೆದುಕೊಳ್ಳುತ್ತೇವೆ’ ಎಂದರು. ನಾನು ಏನು ಬರೆದಿದ್ದೇನೆ ಎಂದು ಕೂಡ ಪ್ರಶ್ನಿಸಲಿಲ್ಲ. ಆಶ್ಚರ್ಯವಾಯಿತು, ಸ್ವಲ್ಪ ಭಯವೂ ಆಯ್ತು. ಮಾರನೆಯ ದಿನ ಲೇಖನ ಹಾಗೆಯೇ ಪ್ರಕಟವಾಯಿತು. ಭಟ್ಟರು ಅಂಕಣಕಾರರ ಮೇಲೆ ಇಡುವ ನಂಬಿಕೆ ಅಂಥದ್ದು. ನೀವು ಈ ಮಾತನ್ನು ನಾನು ಹೇಳುತ್ತೇನೆಂದು ನಂಬಬೇಕಿಲ್ಲ. ಹಿಂದೆ ವಿಶ್ವವಾಣಿಯಲ್ಲಿ ಲೇಖನ ಬರೆಯುತ್ತಿದ್ದವರನ್ನೇ ಕೇಳಿ. ಹಾಗೆಯೇ ಭಟ್ಟರು ನಮ್ಮ ವಿಚಾರಗಳನ್ನು ಪ್ರಶ್ನಿಸುವ ಪ್ರತಿಕ್ರಿಯೆಯ ಲೇಖನ ಬಂದರೆ ಅದನ್ನೂ ಬಂದಂತೆಯೇ ಪ್ರಕಟಿಸುತ್ತಾರೆ. ಬರೆದು ಬಿಟ್ಟರೆ ಮುಗಿದು ಹೋಗಲಿಲ್ಲ- ಅಂಕಣಕಾರನೂ ಪ್ರಶ್ನಾರ್ಹ ಇಲ್ಲಿ.

ರವಿ ಹಂಜ್ ಅವರ ಲೇಖನಗಳು ಪ್ರಕಟವಾಗುವಾಗಲೇ ಅದಕ್ಕೆ ವಿರೋಧವಾಗಿ ಬಂದ ಜಾಮದಾರ್ ಮತ್ತಿತರರ ಲೇಖನ ಪ್ರಕಟಿಸಲಿಲ್ಲವೇ? ಎಲ್ಲವೂ ಬರಹಗಾರರ ವಿಚಾರಗಳೇ- ಅದೆಲ್ಲದಕ್ಕೂ ಬರಹಗಾರನೇ ಜವಾಬ್ದಾರಿ ಅಲ್ಲವೇ? ಈಗ ಹೇಳಿ- ಮಾಧ್ಯಮ ಎಂದರೆ ಇನ್ನು ಹೇಗಿರಬೇಕಿತ್ತು? ಈಗ ಲೇಖನ ಬರೆಯುವಾಗ ನಾವೆಲ್ಲ ಹೆದರಿಕೊಳ್ಳಬೇಕೆ? ಸಭ್ಯ ಸಮಾಜ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಡೆಸಿಕೊಳ್ಳುವ ರೀತಿಯೇ ಇದು? ಇಲ್ಲಿ ಎಲ್ಲರಿಗೂ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುವುದೇ ಉದ್ದೇಶವೆನಿಸುವುದು ಈ ಕಾರಣಕ್ಕೆ.

ಹೆಚ್ಚಿನವರಿಗೆ ಜನಮನ್ನಣೆ ಪಡೆಯಲು, ತಾವಿರುವಲ್ಲಿಂದ ಒಂದು ರಾಜಕೀಯ ಮುಂಬಡ್ತಿ ಪಡೆಯಲು ಇದೊಂದು ರಾಜಕೀಯ ಅವಕಾಶ. ಜೊತೆಯಲ್ಲಿ ಇನ್ನೊಂದು ವರ್ಗವಿದೆ- ಇದೇ ಮಾಧ್ಯಮದ್ದೇ ಒಂದು ಭಾಗ. ಅವರಿಗೆ ಅವರದೇ ಕಾರಣಕ್ಕೆ ಇಂಥದ್ದೊಂದು ಪತ್ರಿಕೋದ್ಯಮದ ಮೇಲೆ ಹೊಟ್ಟೆಯುರಿ- ಅಸೂಯೆಗಳಿವೆ. ಉದರ ನಿಮಿತ್ತಂ ಬಹುಕೃತ ವೇಷಂ. ಒಬ್ಬ ಪ್ರಾಜ್ಞ ಓದುಗನಿಗೆ ಇದೆಲ್ಲವೂ ಅರ್ಥವಾಗುತ್ತದೆ! ಆಲ್‌ರೈಟ್- ಮುಂದಕ್ಕೆ ಹೋಗೋಣ.

ಶಿಶಿರ್‌ ಹೆಗಡೆ

View all posts by this author