Shishir Hegde Column: ಈ ಆನೆ ಹುಲಿಯ ಮೋಟು ಬಾಲ ಹಾಗೇ ಇರಲಿ ಬಿಡಿ !
ಚಿತ್ರವನ್ನು ಸ್ವಲ್ಪ ಹೊತ್ತು ನೋಡುತ್ತ ‘ಬೇಡ ಅಪ್ಪಾ, ಇದು ಹಾಗೆಯೇ ಇರಲಿ. ನಾನು ಆ ವಯಸ್ಸಿನಲ್ಲಿ ದ್ದಾಗ ಹೀಗೆ ಚಿತ್ರ ಬಿಡಿಸಿz. ಈ ತಪ್ಪುಗಳು ಹಾಗೆಯೇ ಇರಲಿ’ ಎಂದು ಮುಂದಿನ ಚಿತ್ರ ಕೈಗೆತ್ತಿಕೊಂಡಳು. ಹನ್ನೆರಡು ವರ್ಷದ ಅವಳಿಂದ ಇಂತಹ ಉತ್ತರವನ್ನು ನಾನು ನಿರೀಕ್ಷಿಸಿರಲಿಲ್ಲ. ಮುಖಕ್ಕೆ ತಣ್ಣೀರು ತೋಕಿದಂತಾಯ್ತು! ಇಷ್ಟು ಹೊತ್ತು ಅವಳೇನು ನೋಡುತ್ತಿದ್ದಳು? ನಾನೇನು ನೋಡುತ್ತಿದ್ದೆ? ನಮ್ಮ ಮಕ್ಕಳು ಕೂಡ ನಮಗೆ ಶಿಕ್ಷಕರು, ಅವರಿಂದ ಕಲಿಯಬೇಕಾದ ಪಾಠ ಹಲವಾರು- ಎಂದು ಪಾಲಕ ಸಮೂಹವೇ ಹೇಳಿಕೊಂಡು ತಿರುಗಾಡುತ್ತಿರುತ್ತದೆ
-
ಶಿಶಿರಕಾಲ
ಆ ದಿನ- ನಾಲ್ಕೆಂಟು ವರ್ಷದ ಹಿಂದೆ ಅವಳೇ ಬಿಡಿಸಿದ ಚಿತ್ರಗಳನ್ನು ನೋಡುತ್ತಾ ಕುಳಿತಿದ್ದಳು ಮೈನಾ. ನಾನು ಅ ಸ್ವಲ್ಪ ದೂರದಲ್ಲಿ ಏನನ್ನೋ ಓದುತ್ತ ಕೂತಿದ್ದೆ. ಚಿತ್ರದ ಚಿಕ್ಕ ಕಟ್ಟುಗಳನ್ನು ಬಿಡಿಸುತ್ತ- ಒಂದೊಂದೇ ಚಿತ್ರವನ್ನು ಹಿಡಿದು ಮುಸಿ ಮುಸಿ ನಗುತ್ತಿದ್ದಳು. ಈ ಒಂಟೆಯ ಕುತ್ತಿಗೆ ನೋಡಿದರೆ ಇದಕ್ಕೆ ಜಿರಾಫೆ ಹತ್ತಿರದ ಸಂಬಂಧವಿರಬಹುದು, ಈ ಚಿರತೆಗೆ ಮೈ ಹುಣ್ಣಾದಂತಿದೆ ಎಂದೆಲ್ಲ ಹೇಳುತ್ತಾ ತನ್ನನ್ನು ತಾನೇ ರೋಸ್ಟ್ ಹಾಸ್ಯ ಮಾಡಿಕೊಳ್ಳುತ್ತಿದ್ದಳು.
ಚಿತ್ರಗಳಲ್ಲಿ ವಸ್ತುಗಳು ಅವುಗಳ ಮಹತ್ವಕ್ಕನುಗುಣವಾಗಿ ಗಾತ್ರ ಪಡೆದುಕೊಂಡಂತಿದ್ದವು. ಕೋಳಿ ಮನೆಗಿಂತ ಎತ್ತರ ಬೆಳೆದುನಿಂತಿತ್ತು, ಕೋಡಗನ ಕೋಳಿ ನುಂಗಿತ್ತ ಹೌದೆನ್ನುವಷ್ಟು! ಚಿತ್ರಗಳನ್ನು ಹಿಡಿದು ಅಣಕಿಸಿಕೊಳ್ಳುವಾಗ ಈ ‘ಬಾಲ್ಯ’ವನ್ನು ನಾನು ಮೀರಿ ಬೆಳೆದಿದ್ದೇನೆ ಎಂಬ ಹೆಮ್ಮೆ ಅವಳಲ್ಲಿದ್ದಂತಿತ್ತು. ಅವಳು ಮತ್ತು ನಾನು ಜೊತೆ ಸೇರಿ ಬಾಲ್ಯದ ಅವಳನ್ನು ಮೂರನೆಯ ವ್ಯಕ್ತಿಯಾಗಿ ವಿಡಂಬನೆಗೆ ಗುರಿಯಾಗಿಸಿzವು. ಅಂದು ಆನೆ ಮತ್ತು ಹುಲಿಯ ಚಿತ್ರವಿತ್ತು. ಈ ಎರಡೂ ಪ್ರಾಣಿಯ ಅಂಗ ಸೌಷ್ಠವ ದೇವರು ಕೊಟ್ಟ ಅಳತೆಗೆ ಹೋಲುವಂತೆಯೇ ಇದ್ದುವು. ಆದರೆ ಎರಡೂ ಪ್ರಾಣಿಗಳಿಗೆ ಬಾಲ ಮಾತ್ರ ಮೋಟುದ್ದ. ಅದನ್ನು ನೋಡಿದ ನನಗೇಕೆ ಹಾಗನ್ನಬೇಕೆನ್ನಿಸಿತೋ ಗೊತ್ತಿಲ್ಲ- ಅಲ್ಲಿಯೇ ಇದ್ದ ಸ್ಕೆಚ್ ಪೆನ್ ಅವಳಿಗೆ ತೂರುತ್ತ ‘ಈ ಪ್ರಾಣಿಗಳ ಬಾಲವನ್ನು ಈಗ ಸರಿ ಮಾಡಬಹುದು- ಸ್ವಲ್ಪ ಉದ್ದಕ್ಕೆಎಳೆದರಾಯ್ತು’ ಎಂದೆ. ಸರಿಪಡಿಸಬಹುದು ಎಂದು ಸಲಹೆ ಕೊಟ್ಟೆ.
ಚಿತ್ರವನ್ನು ಸ್ವಲ್ಪ ಹೊತ್ತು ನೋಡುತ್ತ ‘ಬೇಡ ಅಪ್ಪಾ, ಇದು ಹಾಗೆಯೇ ಇರಲಿ. ನಾನು ಆ ವಯಸ್ಸಿನಲ್ಲಿ ದ್ದಾಗ ಹೀಗೆ ಚಿತ್ರ ಬಿಡಿಸಿz. ಈ ತಪ್ಪುಗಳು ಹಾಗೆಯೇ ಇರಲಿ’ ಎಂದು ಮುಂದಿನ ಚಿತ್ರ ಕೈಗೆತ್ತಿಕೊಂಡಳು. ಹನ್ನೆರಡು ವರ್ಷದ ಅವಳಿಂದ ಇಂತಹ ಉತ್ತರವನ್ನು ನಾನು ನಿರೀಕ್ಷಿಸಿರಲಿಲ್ಲ. ಮುಖಕ್ಕೆ ತಣ್ಣೀರು ತೋಕಿದಂತಾಯ್ತು! ಇಷ್ಟು ಹೊತ್ತು ಅವಳೇನು ನೋಡುತ್ತಿದ್ದಳು? ನಾನೇನು ನೋಡುತ್ತಿದ್ದೆ? ನಮ್ಮ ಮಕ್ಕಳು ಕೂಡ ನಮಗೆ ಶಿಕ್ಷಕರು, ಅವರಿಂದ ಕಲಿಯಬೇಕಾದ ಪಾಠ ಹಲವಾರು- ಎಂದು ಪಾಲಕ ಸಮೂಹವೇ ಹೇಳಿಕೊಂಡು ತಿರುಗಾಡುತ್ತಿರುತ್ತದೆ. ಆದರೆ ಅದೇ ಪಾಲಕರು ಮಕ್ಕಳು ಪಾಠ ಮಾಡುವಾಗ ಮಾತ್ರ ವಿದ್ಯಾರ್ಥಿಗಳಾಗುವುದಿಲ್ಲ, ಪಾಲಕರಾಗಿಯೇ ಉಳಿದುಬಿಡುತ್ತಾರೆ!
ಇದನ್ನೂ ಓದಿ: Shishir Hegde Column: ದಾಸರಳ್ಳಿ ದಾಟದ ನಿರ್ದೇಶಕರು-ಮಲಯಾಳಂ ಚಿತ್ರ ನೆಚ್ಚುವ ಪ್ರೇಕ್ಷಕರು
ನಾವು ಏನನ್ನಾದರೂ ಕಲಿಯಬೇಕೆಂದರೆ ನಮಗಿಂತ ಹಿರಿಯರು, ಹೆಚ್ಚು ಅನುಭವ ಇರುವವರು, ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡವರು ನಮಗೆ ಮಾರ್ಗದರ್ಶನ ಮಾಡಬಹುದು ಎಂದು ಭಾವಿಸುತ್ತೇವೆ. ನಾವು ಜ್ಞಾನಿಗಳ ಪುಸ್ತಕ ಓದುತ್ತೇವೆ, ತಜ್ಞರ ಮಾತು ಕೇಳುತ್ತೇವೆ, ನಮಗಿಂತ ಹೆಚ್ಚು ದೂರ- ದೇಶ ತಿರುಗಿದವರ ಸಲಹೆ ಕೇಳುತ್ತೇವೆ. ಆದರೆ ನಮ್ಮದೇ ಮಕ್ಕಳು ಅನಿರೀಕ್ಷಿತವಾಗಿ ಏನಾದರೂ ಬುದ್ಧಿ ಮಾತು ಹೇಳಿದಾಗ? ಅದನ್ನು ನಮ್ಮದೇ ವಂಶವಾಹಿ ಬುದ್ಧಿಯ ವಿಸ್ತೃತ ರೂಪದಂತೆ ಕಂಡು ಹೆಮ್ಮೆ ಪಡುತ್ತೇವೆ. ಅದನ್ನು ಬೇರೆಯವರ ಜೊತೆಗೂ ಹೇಳಿ ಸಂಭ್ರಮಿಸುತ್ತೇವೆ. ಹೊರತು ಪಾಠ ಕಲಿಯುವುದಿಲ್ಲ, ಅವರ ಮಾತನ್ನು, ಯೋಚನೆಯನ್ನು ಜಿಜ್ಞಾಸೆಗೊಳಪಡಿಸಿ ಕೊಳ್ಳುವುದಿಲ್ಲ. ಆಗೆಲ್ಲ ನಮ್ಮೊಳಗಿನ ಪಾಲಕ ಪಾತ್ರ ಜಾಗೃತನಾಗುತ್ತಾನೆ.
ಓಹ್- ಅಮ್ಮ ಅಪ್ಪನೇ ಮೊದಲ ಶಿಕ್ಷಕ, ಅಜ್ಜ ಅಜ್ಜಿ- ಹೆಡ್ಮಾಸ್ಟರ್, ಮನೆಯೇ ಮೊದಲ ಪಾಠ ಶಾಲೆ- ಎಂಬೆಲ್ಲ ಮಾತು ನೆನಪಾಗುತ್ತದೆ. ಮನೆಯೆಂಬುದು ಮೊದಲ ಪಾಠಶಾಲೆ- ಮಕ್ಕಳಿಗೆ ಮಾತ್ರ ಎಂದು ಕರಾರು ಮಾಡಿ ಕೂತಿದ್ದೇವೆ! ಪ್ರತಿಯೊಂದನ್ನೂ ಪ್ರಶ್ನಿಸುವುದು, ಸನ್ನಿವೇಶಗಳನ್ನು ವಿಶ್ಲೇಷಿಸುವುದು, ಕಾರಣ ಹುಡುಕುವುದು ನಮಗೆ ಅಭ್ಯಾಸವಾಗಿಬಿಟ್ಟಿದೆ.
ಯಾವುದು ಸರಿ, ಯಾವುದು ತಪ್ಪು, ಯಾವುದು ಉಪಯುಕ್ತ, ಯಾವುದು ಅನಗತ್ಯ ಎಂಬುದರ ಬಗ್ಗೆ ನಮ್ಮದೇ ಆದ ಅಭಿಪ್ರಾಯಗಳನ್ನು ಅನುಭವಗಳಿಂದ ನಾವು ಬೆಳೆಸಿಕೊಂಡಿದ್ದೇವೆ. ಆದರೆ ಮಕ್ಕಳಲ್ಲಿ ಹಾಗಲ್ಲ. ಅಲ್ಲಿ ಯಾವುದನ್ನೂ ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ. ಹಾಗಾಗಿಯೇ ಮಕ್ಕಳು ಬಹುತೇಕ ವಿಷಯಗಳನ್ನು ಇದ್ದಹಾಗೆಯೇ ನೋಡಬಲ್ಲರು. ಮಕ್ಕಳ ವಿಚಾರಗಳಿಗೆ ಅನುಭವದ ಹಂಗಿನಾಚೆಯ ಸ್ವಾತಂತ್ರ್ಯವಿದೆ.
ನನಗೆ ಮೈನಾಳ ಚಿತ್ರಗಳ ಕೊರತೆಗಳಲ್ಲಿ ಅವಳ ಬಾಲ್ಯದ ಮುಗ್ಧತೆ ಕಾಣಿಸುತ್ತಿತ್ತು. ಅದೇ ಸಮಯ ದಲ್ಲಿ ನನ್ನ ಒಳಮನಸ್ಸು ತಪ್ಪು ಸರಿಪಡಿಸಲು ಸಾಧ್ಯವಾದರೆ ಸರಿಪಡಿಸಿಬಿಡಬೇಕು ಎನ್ನುತ್ತಿತ್ತು. ಆದರೆ ಅವಳಿಗೆ ಅವು ತಪ್ಪುಗಳಾಗಿರಲಿಲ್ಲ. ಅವುಗಳು ಅವಳ ಬದುಕಿನ ಒಂದು ನಿರ್ದಿಷ್ಟ ವಯಸ್ಸಿನ ನೆನಪಾಗಿತ್ತು. ಆ ಕಾರಣಕ್ಕೆ ಅದನ್ನು ಬದಲಾಯಿಸಲು ಅವಳು ಒಪ್ಪಲಿಲ್ಲ. ಅವಳು ಹಿಂದೆ ಚಿತ್ರಗಳಲ್ಲಿ ಮಾಡಿದ ಯಾವುದೇ ತಪ್ಪುಗಳು- ಅವಳಿಗೆ ಅಸಲಿಗೆ ತಪ್ಪುಗಳೇ ಆಗಿರಲಿಲ್ಲ!
ನಮ್ಮ ಹಿಂದಿನ ತಪ್ಪುಗಳನ್ನು ಮಕ್ಕಳಂತೆ ಇಷ್ಟು ಸುಲಭವಾಗಿ ಒಪ್ಪಿಕೊಳ್ಳಲು ನಮ್ಮಲ್ಲಿ ಎಷ್ಟು ಜನರಿಗೆ ಸಾಧ್ಯ? ನಾವು ಯಾವತ್ತೋ ನಡೆದ ಹಳೆಯ ಮಾತುಕತೆಯನ್ನು, ಜಗಳವನ್ನು ನೆನಪಿಸಿಕೊಳ್ಳುತ್ತೇವೆ. ಆ ದಿನ ಅದಕ್ಕಿಂತ ಚೆನ್ನಾಗಿ ವ್ಯವಹರಿಸಬಹುದಿತ್ತು ಎಂದುಕೊಳ್ಳುತ್ತೇವೆ. ಯಾವತ್ತೋ ತೆಗೆದುಕೊಂಡ ನಿರ್ಧಾರಗಳನ್ನು ನೆನಪಿಸಿ, ಬೇರೆ ಆಯ್ಕೆ ಮಾಡಿಕೊಂಡರೆ ಎಷ್ಟು ಚೆನ್ನಾಗಿತ್ತು ಎಂದು ಪಶ್ಚಾತ್ತಾಪ ಪಡುತ್ತೇವೆ.
ಹಳೆಯ ಫೋಟೋಗಳು, ಮೆಸೇಜ್ಗಳು, ಸಂಬಂಧಗಳು, ಅದೆಷ್ಟೋ ಬಾರಿ ನಮ್ಮದೇ ಹಿಂದಿನ ವ್ಯಕ್ತಿತ್ವ ವನ್ನು ಅತ್ಯಂತ ಮುಜುಗರದಿಂದ ನೋಡುತ್ತೇವೆ. ಆಗ ನನಗೆ ಇವತ್ತಿನಷ್ಟು ತಿಳುವಳಿಕೆ ಇದ್ದಿದ್ದರೆ? ಛೇ, ಆ ಅವಕಾಶವನ್ನು ಕಳೆದುಕೊಳ್ಳಬಾರದಿತ್ತು, ಆ ಮಾತನ್ನು ಹೇಳಬಾರದಿತ್ತು, ಇನ್ನೂ ಸ್ವಲ್ಪ ದಿನ ಕಾಯಬೇಕಿತ್ತು, ಉಳಿಯಬೇಕಿತ್ತು, ಸ್ವಲ್ಪ ಬೇಗ ಹೊರಡಬೇಕಿತ್ತು, ಬೇರೆ ಕೆಲಸ ಕೋರ್ಸ್ ಮಾಡಬೇಕಿತ್ತು, ಬೇರೆ ಆಯ್ಕೆ ಮಾಡಿಕೊಳ್ಳಬೇಕಿತ್ತು, ಅಲ್ಲಿ ಹೂಡಿಕೆ ಮಾಡಬಾರದಿತ್ತು ಇತ್ಯಾದಿ.
ಇಲ್ಲಿ ಆಗ ಸೈಟಿಗೆ ಎರಡೇ ಲಕ್ಷ ರೂಪಾಯಿ ಇತ್ತು- ಈಗ ನಾಲ್ಕು ಕೋಟಿ ರೂಪಾಯಿಯಾಗಿದೆ. ಅದನ್ನು ಹೇಗಾದರೂ ಮಾಡಿ ಖರೀದಿಸಿದ್ದರೆ ಈಗ ಆರಾಮಾಗಿರಬಹುದಿತ್ತು. ಹೀಗೆ ನಾವು ಬದಲಾಯಿಸ ಬೇಕೆಂದುಕೊಳ್ಳುವ ಸಂಗತಿಗಳಿಗೆ ಕೊನೆ ಎನ್ನುವುದೇ ಇಲ್ಲ. ಏನೂ ಮಾಡಲು ಸಾಧ್ಯವಿಲ್ಲದಿದ್ದರೂ ಕೆಲವು ನೆನಪುಗಳು ವರ್ಷಗಟ್ಟಲೆ ನಮ್ಮನ್ನು ಕಾಡುತ್ತಲೇ ಇರುತ್ತವೆ. ಮರುಮೌಲ್ಯಮಾಪನ- ರಿಕೌಂಟ್ ಮಾಡುತ್ತಲೇ ಇರುತ್ತೇವೆ.
ಇದೊಂದು ವಿಚಿತ್ರ ಮನುಷ್ಯ ಸ್ವಭಾವ. ತಪ್ಪುಗಳು ನಮಗೆ ಪಾಠ ಕಲಿಸುತ್ತವೆ ಎನ್ನುವುದು ನಮ್ಮೆಲ್ಲರ ನಂಬಿಕೆ. ಇದು ಮನುಷ್ಯ ಇತಿಹಾಸದ ಬಹುಕಾಲ ನಿಜವೇ ಆಗಿತ್ತು. ಆದರೆ ಈ ಗುಣ ಇಂದಿನ ದಿನಮಾನಸಕ್ಕೆ ಹೊಂದಿಕೆಯಾಗುವುದಕ್ಕಿಂತ ಅಪಸವ್ಯವೆನಿಸುವುದೇ ಜಾಸ್ತಿ. ಬಹಳ ಜಾರಿಕೆಯಿರುವ ಜಾಗದಲ್ಲಿ ಇಪ್ಪತ್ತು ವರ್ಷ ಹಿಂದೆ ಜಾರಿ ಬಿದ್ದದ್ದು ಈಗ ನೆನಪಾಗಿ ಜಾಗೃತವಾಗುವುದು ಒಳ್ಳೆಯ ಗುಣಲಕ್ಷಣವೇ. ಬಿದ್ದದ್ದು, ಬಿದ್ದ ಪೆಟ್ಟು ಮರೆಯಬಾರದೆನ್ನುವ ಜಾಗೃತೆ ಒಳ್ಳೆಯದು. ಆದರೆ ಅದೇ ಗಣಿತಸೂತ್ರವನ್ನು ಇಪ್ಪತ್ತೈದನೇ ವಯಸ್ಸಿನಲ್ಲಿ ತೆಗೆದುಕೊಂಡ ‘ತಪ್ಪು’ ವೃತ್ತಿಯ ನಿರ್ಧಾರವನ್ನು ನಲವತ್ತನೇ ವಯಸ್ಸಿನಲ್ಲಿ ಅಳೆಯುವಾಗ ಬಳಸಿಕೊಂಡರೆ ಅಲ್ಲಿ ಲೆಕ್ಕಾಚಾರ ತಪ್ಪುತ್ತದೆ.
ಸಂಬಂಧದಲ್ಲಿದ್ದ ಸಮಸ್ಯೆಯನ್ನು ಆಗಲೇ ಏಕೆ ಗುರುತಿಸಲಿಲ್ಲ ಎಂದು ನಮ್ಮನ್ನೇ ಪ್ರಶ್ನಿಸಿಕೊಳ್ಳುವಾಗ ಈ ಲೆಕ್ಕಾಚಾರ ಬುಡಮೇಲು ರೂಪ ಪಡೆಯುತ್ತದೆ! ನಾವು ಬದುಕಿದ ಬದುಕನ್ನು, ಬದುಕದ ಮತ್ತೊಂದು ಕಾಲ್ಪನಿಕ ಬದುಕಿನ ಜೊತೆ ಹೋಲಿಸಿಕೊಳ್ಳುವಾಗ ನಾವು ಯಾವುದೇ ಪಾಠ ಕಲಿಯುತ್ತಿರುವುದಿಲ್ಲ. ನಮ್ಮನ್ನೇ ಹಿಂಸಿಸಿಕೊಳ್ಳುತ್ತೇವೆ. ಆ ಬದುಕಿನಲ್ಲಿ ಕೆಲಸ ಚೆನ್ನಾಗಿರುತ್ತಿತ್ತು, ವೈವಾಹಿಕ ಜೀವನ ಸುಖ ವಾಗಿರುತ್ತಿತ್ತು, ಹೂಡಿಕೆಯಿಂದ ಹೆಚ್ಚು ಲಾಭ ಬರುತ್ತಿತ್ತು, ವಾಸಿಸುವ ಊರು ಇನ್ನಷ್ಟು ಆಕರ್ಷಕ ವಾಗಿರುತ್ತಿತ್ತು.
ಒಟ್ಟಾರೆ- ನಾವು ಬದುಕದೇ ಉಳಿದ ಬದುಕು, ನಾವು ಬದುಕುತ್ತಿರುವ ಬದುಕಿಗಿಂತ ಯಾವಾಗಲೂ ಚೆನ್ನಾಗಿಯೇ ಕಾಣಿಸುತ್ತಿರುತ್ತದೆ! ಹಾಗೆಂದ ಮಾತ್ರಕ್ಕೆ ಎಲ್ಲ ತಪ್ಪುಗಳನ್ನೂ ನಿರ್ಲಕ್ಷಿಸಬೇಕು ಎಂದಲ್ಲ. ನಮ್ಮಿಂದ ಯಾರಿಗಾದರೂ ನೋವಾಗಿದ್ದರೆ ಅದನ್ನು ಒಪ್ಪಿಕೊಂಡು ಕ್ಷಮೆ ಕೇಳುವುದು, ಏನಾದರೂ ಹಾನಿಯಾಗಿದ್ದರೆ ಅದನ್ನು ಸರಿಪಡಿಸಲು ಪ್ರಯತ್ನಿಸುವುದು- ಇವೆಲ್ಲ ಬೇಕು.
ಜವಾಬ್ದಾರಿ ತೆಗೆದುಕೊಳ್ಳುವುದು ಬೇರೆ, ಏನೂ ಆಗಿಲ್ಲವೆಂದು ನಾವೇ ನಂಬಿ ಅಲಕ್ಷಿಸುವುದು ಬೇರೆ. ಆದರೆ ಜವಾಬ್ದಾರಿ ತೆಗೆದುಕೊಳ್ಳುವುದಕ್ಕೂ ಜೀವನಪೂರ್ತಿ ನಮ್ಮನ್ನೇ ಪ್ರಶ್ನಿಸಿ, ಹಂಗಿಸಿ- ಶಿಕ್ಷಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ.
ಒಂದು ಕೆಟ್ಟ ನಿರ್ಧಾರದಿಂದ ಪಾಠ ಕಲಿಯಬೇಕಾದ ಪರಿಸ್ಥಿತಿ ಬಂದಿರಬಹುದು. ಆದರೆ ಅದೇ ನಿರ್ಧಾರ ನಮ್ಮ ಇಡೀ ಬದುಕಿನ ಗುರುತಾಗಬೇಕಿಲ್ಲ. ಯಾವುದೋ ಸಂಗತಿಯ ಬಗ್ಗೆ ಪಶ್ಚಾತ್ತಾಪಪಡಬಹುದು. ಆದರೆ ಆ ಪಶ್ಚಾತ್ತಾಪವೇ ನಮ್ಮ ಜೊತೆ ಶಾಶ್ವತವಾಗಿ ಬದುಕಬೇಕಿಲ್ಲ. ಒಂದು ಹಂತದಲ್ಲಿ ನಾವು ಕಲಿಯ ಬೇಕಾದ ಪಾಠ ಕಲಿತಿರುತ್ತೇವೆ. ಅದೇ ಪರೀಕ್ಷೆಯನ್ನು ಮತ್ತೆ ಮತ್ತೆ ಬರೆದರೆ ಹೆಚ್ಚು ಬುದ್ಧಿವಂತರಾಗುತ್ತೇವೆ ಎಂದೇನಿಲ್ಲವಲ್ಲ. ಯಾವ ತಪ್ಪನ್ನು ಸರಿಪಡಿಸಬೇಕು, ಯಾವುದನ್ನು ನಮ್ಮ ಬದುಕಿನ ಒಂದು ಭಾಗವೆಂದು ಒಪ್ಪಿಕೊಂಡು ಬಿಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಲ್ಲವೇ? ಜಪಾನಿ ನಲ್ಲಿರುವ ಕಿಂಟ್ಸುಗಿ ಎಂಬ ಹವ್ಯಾಸ, ಕಲೆ- ಪರಿಕಲ್ಪನೆಯ ಬಗ್ಗೆ ನೀವು ಕೇಳಿರಬಹುದು.
ಸಾಮಾನ್ಯವಾಗಿ ಮನೆಯಲ್ಲಿ ಪಿಂಗಾಣಿ ಪಾತ್ರೆ ಕೈಜಾರಿ ಬಿದ್ದು ಒಡೆದು ಹೋದರೆ ನಾವೇನು ಮಾಡುತ್ತೇವೆ? ಒಡೆದ ಜಾಗದಲ್ಲಿ- ತಕ್ಷಣ ಮಕ್ಕಳಿಗೆ ಅತ್ತ ಸುಳಿಯದಂತೆ ‘ಕರ್ಫ್ಯೂ’ ಹೇರಿ, ಕಸಬರಿಗೆ ತಂದು ಜಾಗರೂಕತೆ ಯಿಂದ ಗುಡಿಸುತ್ತೇವೆ. ಅತ್ಯಂತ ಎಚ್ಚರಿಕೆಯಿಂದ ಚದುರಿದ ತುಂಡುಗಳನ್ನು ಒಟ್ಟು ಹಾಕಿ ಕಸದ ಬುಟ್ಟಿಗೆ ಎಸೆಯುತ್ತೇವೆ. ಚಿಕ್ಕ ಚೂರುಗಳು ಇನ್ನೆದರೂ ಉಳಿದುಹೋಯ್ತಾ ಎಂದು ಮೂಲೆ ಮೂಲೆ ಹುಡುಕುತ್ತೇವೆ. ಒಟ್ಟಾರೆ ಒಡೆದುಹೋದ ಪಿಂಗಾಣಿಯ ಸಾಕ್ಷ್ಯ ಸರ್ವನಾಶ ಮಾಡಿದ ಮೇಲೆಯೇ ನಮಗೆ ಸಮಾಧಾನ.
ಆದರೆ ಕಿಂಟ್ಸುಗಿ ಹಾಗಲ್ಲ. ಆ ಚೂರುಗಳನ್ನು ಎತ್ತಿಕೊಂಡು ಪುನಃ ಜೋಡಿಸುವ ಒಂದು ವಿಶಿಷ್ಟ ವಿಧಾನ. ಜೋಡಿರುವ ಉದ್ದೇಶ ಪಿಂಗಾಣಿ ಪಾತ್ರೆಯನ್ನು ಮೊದಲಿನಂತೆ ಮಾಡುವುದಲ್ಲ. ಒಡೆದ ಬಿರುಕುಗಳಿಗೆ ಮೇಣ ಹಚ್ಚಿ ಆಕಾರ ಕೊಡಲಾಗುತ್ತದೆ. ಜೊತೆಯಲ್ಲಿ ಬಿಟ್ಟ ಬಿರುಕುಗಳನ್ನು ಜೋಡಿಸಿದ ಜಾಗದಲ್ಲಿ ಚಿನ್ನದ ಪುಡಿಯ ಲೇಪನ ಮಾಡಲಾಗುತ್ತದೆ. ಆಗ ಪಾತ್ರೆಯ ಮೇಲಿನ ಬಿರುಕುಗಳು ಮುಚ್ಚಿಹೋಗುವು ದಿಲ್ಲ. ಬದಲಿಗೆ ಚಿನ್ನದ ಗೆರೆಗಳಾಗಿ ಎದ್ದು ಕಾಣುತ್ತವೆ.
ಒಡೆದು ಹೋಗಿದ್ದ ಪಾತ್ರೆ ಮೊದಲಿಗಿಂತಲೂ ವಿಭಿನ್ನವಾಗಿ, ತನ್ನದೇ ಆದ ಹೊಸ ಸೌಂದರ್ಯ ದೊಂದಿಗೆ ಕಾಣುತ್ತದೆ. ಇದರ ಹಿಂದಿರುವ ಯೋಚನೆ ಅಷ್ಟೇ ಸುಂದರವಾಗಿದೆ. ಒಂದು ವಸ್ತು ಒಡೆದಿದೆ ಎಂಬ ಕಾರಣಕ್ಕೆ ಅದರ ಮೌಲ್ಯ ಕಡಿಮೆಯಾಗುವುದಿಲ್ಲ. ಅದು ಅನುಭವಿಸಿದ ಒಡೆತ, ಬಿರುಕು ಮತ್ತು ದುರಸ್ತಿಯೂ ಅದರ ಈ ಹೊಸ ರೂಪದ- ಮರುಜೀವದ ಇತಿಹಾಸದ ಭಾಗವೇ. ಇದನ್ನು ನಮ್ಮ ಬದುಕಿಗೂ ಅನ್ವಯಿಸಿಕೊಳ್ಳಬಹುದು ಎನ್ನುವುದರ ಸೂಚಕ ಅದು.
ನಾವು ಮಾಡಿದ ತಪ್ಪುಗಳು, ತೆಗೆದುಕೊಂಡ ತಪ್ಪು ನಿರ್ಧಾರಗಳು, ಎದುರಿಸಿದ ನೋವುಗಳು ನಮ್ಮ ಬದುಕಿನಲ್ಲಿರುವ ಬಿರುಕುಗಳಿದ್ದಂತೆ. ಅವುಗಳನ್ನು ಅಳಿಸಿಹಾಕಿ, ಏನೂ ಆಗಿಯೇ ಇಲ್ಲವೆಂಬಂತೆ ಬದುಕಬೇಕೆಂದಿಲ್ಲ. ಸಾಕ್ಷ್ಯ ಸರ್ವನಾಶ ಮಾಡಬೇಕೆಂದಿಲ್ಲ. ಬದಲಿಗೆ ಅವುಗಳಿಂದ ಕಲಿತು ಮುಂದೆ ಸಾಗಬೇಕು. ಆಗ ಒಡೆದ ಒಡಕಿಗೆ ಚಿನ್ನದ ಲೇಪನ ಕೊಟ್ಟಂತೆ. ಆ ಒಡಕನ್ನು ಮರೆಮಾಚಬೇಕಿಲ್ಲ- ಮರೆಯಬೇಕೆಂದೂ ಇಲ್ಲ.
ನಮ್ಮ ಬದುಕಿನ ಮೌಲ್ಯವನ್ನು ನಿರ್ಧರಿಸುವುದು ನಾವು ಎಂದಿಗೂ ತಪ್ಪೇ ಮಾಡಿಲ್ಲ ಎಂಬುದಲ್ಲ; ಆ ತಪ್ಪುಗಳ ನಂತರವೂ ನಾವು ಹೇಗೆ ಬದುಕನ್ನು ಮುಂದುವರಿಸಿದ್ದೇವೆ ಎನ್ನುವುದು. ಆಗಲೇ ಚಿನ್ನ ಲೇಪಿಸಿದ ಕಿಂಟ್ಸುಗಿ ಬೆಲೆ ಎಲ್ಲಾ ರೀತಿಯಲ್ಲೂ ಮೊದಲ ಪಿಂಗಾಣಿಗಿಂತ ಹೆಚ್ಚಿನ ಬೆಲೆಯನ್ನು ಪಡೆಯುತ್ತದೆ. ಆದರೆ ನಮ್ಮ ಬದುಕಿನ ಪ್ರತಿಯೊಂದು ಬಿರುಕಿಗೂ ಕಿಂಟ್ಸುಗಿಯ ಚಿನ್ನದ ಲೇಪನ ಬೇಕೆಂದೇನಿಲ್ಲ. ಕೆಲವು ತಪ್ಪುಗಳನ್ನು ಸರಿಪಡಿಸಬೇಕು, ಕೆಲವು ಅನುಭವಗಳಿಂದ ಪಾಠ ಕಲಿಯ ಬೇಕು, ಮತ್ತೆ ಕೆಲವು ನೆನಪುಗಳನ್ನು ಅವು ಇದ್ದಂತೆಯೇ ಉಳಿಸಿಕೊಳ್ಳಬೇಕು.
ನಾವು ಹಿಂದೆ ಮಾಡಿದ ತಪ್ಪುಗಳನ್ನು ನೆನಪಿಸಿಕೊಂಡಾಗಲೆಲ್ಲ ಅವುಗಳನ್ನು ಇಂದಿನ ನಮ್ಮ ತಿಳುವಳಿಕೆಯ ಅಳತೆಗೋಲಿನಲ್ಲಿ ಅಳೆಯುವ ಅಗತ್ಯವಿಲ್ಲ. ಆ ದಿನ ನಮಗೆ ಗೊತ್ತಿದ್ದಷ್ಟು ತಿಳುವಳಿಕೆ, ಇದ್ದಷ್ಟು ಧೈರ್ಯ, ಇದ್ದಷ್ಟು ಅನುಭವದೊಂದಿಗೆ ನಾವು ನಿರ್ಧಾರ ತೆಗೆದುಕೊಂಡಿ ದ್ದೆವು. ಇಂದು ನಮಗೆ ಹೆಚ್ಚು ತಿಳಿದಿದೆ ಎಂದರೆ ನಿನ್ನೆಯ ನಾವು ಮೂರ್ಖರಾಗಿದ್ದೆವು ಎಂದರ್ಥವಲ್ಲ. ಅದು ನಾವು ಬೆಳೆದಿದ್ದೇವೆ ಎನ್ನುವುದರ ಸೂಚನೆ. ನಮ್ಮ ಹಿಂದಿನ ವ್ಯಕ್ತಿತ್ವದ ಬಗ್ಗೆ ಸ್ವಲ್ಪ ಸಹಾನುಭೂತಿ, ಸ್ವಲ್ಪ ಪ್ರೀತಿ ಬೆಳೆಸಿಕೊಳ್ಳುವುದೂ ಬೆಳವಣಿಗೆಯ ಒಂದು ಭಾಗವೇ. ಈಗ ಮೈನಾಳ ಆ ಹಳೆಯ ಚಿತ್ರಗಳು ಮತ್ತೆ ನೆನಪಾಗುತ್ತದೆ. ಅವಳಿಗೆ ಈಗ ಆನೆ ಮತ್ತು ಹುಲಿಯ ಬಾಲವನ್ನು ಸರಿಯಾಗಿ ಬಿಡಿಸಲು ಬರುತ್ತದೆ. ಆದರೆ ಅಂದು ಬಿಡಿಸಿದ ಆ ಚಿತ್ರಗಳನ್ನು ಹಾಗೆಯೇ ಉಳಿಸಿಕೊಳ್ಳಲು ಅವಳು ನಿರ್ಧರಿಸಿದ್ದಾಳೆ.
ಮುಂದೆ ಯಾವತ್ತೋ ಅವುಗಳನ್ನು ನೋಡಿದಾಗ ಅವಳಿಗೆ ತನ್ನ ಬಾಲ್ಯದ ಹಾಗೆಯೇ ನೆನಪು ಬರುತ್ತದೆ. ಆಗ ಅವಳು ಚಿತ್ರಗಳನ್ನು ನೋಡಿ ಮತ್ತೆ ನಗುತ್ತಾಳೆ, ಬೇಸರಿಸಿಕೊಳ್ಳುವುದಿಲ್ಲ. ಆ ಚಿತ್ರಗಳಲ್ಲಿರುವ ತಪ್ಪುಗಳು ಅವಳಿಗೆ ಮುಜುಗರದ ಸಂಗಾತಿಗಳಲ್ಲ. ಅವು ಅವಳು ಬೆಳೆದು ಬಂದ ಬದುಕಿನ ಗುರುತುಗಳು. ಕೆಲವು ತಪ್ಪುಗಳು ನಮ್ಮನ್ನು ಬದಲಾಯಿಸಿರಬಹುದು, ಕೆಲವು ಅನುಭವಗಳು ನಮ್ಮನ್ನು ಬೆಳೆಸಿರಬಹುದು. ಅವೆಲ್ಲವನ್ನೂ ಅಳಿಸಿಹಾಕಿದರೆ ನಮ್ಮ ಬದುಕಿನ ಕಥೆಯ ಒಂದು ಭಾಗವನ್ನೇ ಅಳಿಸಿದಂತಾಗುತ್ತದೆ.
ಪ್ರತಿಯೊಂದು ಅಪೂರ್ಣತೆಯನ್ನೂ ಸರಿಪಡಿಸಬೇಕಿಲ್ಲ. ಮಾಡಿದ ತಪ್ಪುಗಳ ನೆನಪುಗಳು ಮುಗುಳ್ನಾಗ ಲಿಕ್ಕೆ ವಿನಃ ವ್ಯಥೆ ಪಡಲಿಕ್ಕಂತು ಅಲ್ಲವೇ ಅಲ್ಲ! ಆ ಹುಲಿ- ಆನೆಯ ಬಾಲ ಹಾಗೆಯೇ ಇರಲಿ ಬಿಡಿ!