ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Raghava Sharma Nidle Column: ಬಾಂಗ್ಲಾ ಹಿಂದೂ ಹತ್ಯೆಗಳ ಕರಿನೆರಳಲ್ಲಿ ಬಂಗಾಳ ಕದನ

2019ರ ಲೋಕಸಭೆ ಫಲಿತಾಂಶಗಳು 2021ರ ವಿಧಾನಸಭೆ ಚುನಾವಣೆ ಹೋರಾಟಕ್ಕೆ ಬಿಜೆಪಿಯ ನೈತಿಕ ಸ್ಥೈರ್ಯವನ್ನು ದ್ವಿಗುಣಗೊಳಿಸಿತ್ತು. ಈ ಬಾರಿ ಬಂಗಾಳ ಹೋರಾಟವನ್ನು ಮಾಡು ಇಲ್ಲವೇ ಮಡಿ ಎಂಬಂತೆ ಪರಿಗಣಿಸಿರುವ ಬಿಜೆಪಿ, ಈ ಸಲ ಗೆಲ್ಲದಿದ್ದರೆ ಮುಂದೆಂದೂ ಗೆಲ್ಲಲಾರೆವು ಎನ್ನುತ್ತಾ ಕಾರ್ಯಕರ್ತರ ಹುಮ್ಮಸ್ಸನ್ನು ಹೆಚ್ಚಿಸಿ, ಆ ಮೂಲಕ ಮತದಾರ ಮಹಾಪ್ರಭುವಿನ ಹೃದಯ ಪ್ರವೇಶಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

ಬಾಂಗ್ಲಾ ಹಿಂದೂ ಹತ್ಯೆಗಳ ಕರಿನೆರಳಲ್ಲಿ ಬಂಗಾಳ ಕದನ

-

ಜನಪಥ

ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಘಟನೆಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶಿ ಗರನ್ನು ಬಂಗಾಳಿಗರು ನೋಡುವ ದೃಷ್ಟಿಕೋನ ಬದಲಾಗುತ್ತಿದೆ ಎಂಬ ಮಾತು ಗಳು ಕೇಳಿ ಬರುತ್ತಿವೆ. ಇದು ನಿಜವೇ ಆಗಿದ್ದರೆ, ಬಂಗಾಳ ಚುನಾವಣೆ ಮೇಲೆ ಅದು ಖಂಡಿತಾ ಪರಿಣಾಮ ಬೀರಲಿದೆ. ಇದಕ್ಕೆ ತಕ್ಕಂತೆ ಬಿಜೆಪಿಯೂ ತನ್ನ ಕಾರ್ಯತಂತ್ರ ವನ್ನು ಈಗಾಗಲೇ ಸಿದ್ಧಮಾಡಿಕೊಂಡಿದೆ.

ಬಿಹಾರ ವಿಧಾನಸಭೆ ಚುನಾವಣೆಯನ್ನು ಅಭೂತಪೂರ್ವ ರೀತಿಯಲ್ಲಿ ಗೆದ್ದ ದಿನದಂದೇ ದೆಹಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ನಮ್ಮ ಮುಂದಿನ ಗುರಿ ಪಶ್ಚಿಮ ಬಂಗಾಳ ಎನ್ನುವುದನ್ನು ಸ್ಪಷ್ಟಪಡಿಸಿದ್ದರು. ಬಿಹಾರದಿಂದ ಹರಿದು ಹೋಗುವ ಗಂಗಾ ಮಾತೆ (ನದಿ) ಬಂಗಾಳ ಮೂಲಕವೇ ಸಮುದ್ರ ಸೇರುತ್ತಾಳೆ ಎಂದು ಮಾರ್ಮಿಕವಾಗಿ ನುಡಿದಿದ್ದ ಪಿಎಂ ಮೋದಿ, ಬಂಗಾಳದಲ್ಲಿ ಬಿಜೆಪಿಯ ಗೆಲುವಿಗೆ ಬಿಹಾರವೇ ನಾಂದಿ ಹಾಡಿದೆ ಎಂದು ಕೇಸರಿ ಕೇಂದ್ರ ಕಚೇರಿಯಿಂದಲೇ ಬಂಗಾಳದ ಸಿಎಂ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಗೆ ಸವಾಲು ಹಾಕಿದ್ದರು.

2021ರ ವಿಧಾನಸಭೆ ಚುನಾವಣೆಯನ್ನು ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿರಲಿಲ್ಲ. ಆದರೆ, 2016ರಲ್ಲಿ ಕೇವಲ 3 ಶಾಸಕರನ್ನು ಹೊಂದಿದ್ದ ಕೇಸರಿಪಡೆ, ಐದೇ ವರ್ಷದಲ್ಲಿ 77 ಶಾಸಕ ಸ್ಥಾನಗಳನ್ನು ತನ್ನದಾಗಿಸಿಕೊಂಡು ರಾಜ್ಯದ ಪ್ರಮುಖ ವಿಪಕ್ಷವಾಗಿ ಬದಲಾಗಿದ್ದು ಸಾಮಾನ್ಯ ಸಾಧನೆಯೇನಲ್ಲ.

2016ರ ಪೂರ್ವದಲ್ಲಿ ಬಿಜೆಪಿಗೆ ಇಲ್ಲಿ ಸಂಘಟನೆಯೇ ಇರಲಿಲ್ಲ. ಹಾಗಾಗಿ ಪಕ್ಷಕ್ಕೆ ರಾಜಕೀಯ ನೆಲೆಯೂ ಇರಲಿಲ್ಲ. ಆದರೆ, 2021ರ ಫಲಿತಾಂಶ ಟಿಎಂಸಿ ಭದ್ರಕೋಟೆಯನ್ನು ಅಲುಗಾಡಿಸಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಒಂದೊಮ್ಮೆ ಮಮತಾ ಬ್ಯಾನರ್ಜಿ ಬಲಗೈ ಬಂಟನಾಗಿದ್ದ ಸುವೇಂದು ಅಧಿಕಾರಿ, ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಸೇರ್ಪಡೆಯಾಗಿ ನಂದಿಗ್ರಾಮ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾರನ್ನು ಸೋಲಿಸಿ ಹೊಸ ಇತಿಹಾಸ ಸೃಷ್ಟಿಸಿದ್ದರು.

ಶಿಷ್ಯನಿಂದಲೇ ಸೋಲನುಭವಿಸಿದ್ದ ದೀದಿ, ನಂತರ ಕೊಲ್ಕತ್ತಾದ ಭವಾನಿಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಚುನಾವಣೆ ಗೆದ್ದು, ವಿಧಾನಸಭೆಯನ್ನು ಅಧಿಕೃತ ವಾಗಿ ಪ್ರವೇಶಿಸಿದ್ದರು. ನಂದಿಗ್ರಾಮ ಫಲಿತಾಂಶವನ್ನು ಅವರು ಕಲ್ಕತ್ತಾ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು ಮತ್ತು ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ.

ಬಂಗಾಳವನ್ನು ಈ ಬಾರಿ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿಗೆ, ಹಿಂದೂ ಮತಗಳ ಪ್ರಬಲ ಕ್ರೋಢೀಕರಣದಿಂದ ಮಾತ್ರ ಇದು ಸಾಧ್ಯ ಎಂಬ ಸ್ಪಷ್ಟ ಅರಿವಿದೆ. ಅದೇ ಕಾರಣಕ್ಕಾಗಿ 2016ರ ವಿಧಾನಸಭೆ, 2019ರ ಲೋಕಸಭೆ, 2021ರ ವಿಧಾನಸಭೆ ಮತ್ತು 2024ರ ಲೋಕಸಭೆ ಚುನಾವಣೆಗಳಲ್ಲಿ ಕೂಡ ಹಿಂದೂ ಮತಗಳನ್ನು ಗುರಿಯಾಗಿಸಿಕೊಂಡೇ ತನ್ನ ರಣನೀತಿಗಳನ್ನು ರೂಪಿಸಿತ್ತು. ಈ ಸಲವೂ ಹಿಂದೂಗಳ ವೋಟಿಗಾಗಿ ಕಾರ್ಯಾಚರಣೆ ನಡೆಸಲಾಗಿದ್ದು, ಅದರ ಭಾಗ ವಾಗಿಯೇ ಕಳೆದ 6 ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರು ಬಂಗಾಳಕ್ಕೆ 4 ಬಾರಿ ಪ್ರವಾಸ ಕೈಗೊಂಡಿದ್ದಾರೆ. ಗೃಹಸಚಿವ ಅಮಿತ್ ಶಾ ಅವರಂತೂ ಆಗಿಂದಾಗ್ಗೆ ಬಂಗಾಳಕ್ಕೆ ಭೇಟಿ ನೀಡುತ್ತಿದ್ದು, ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿರುವ ಟಿಎಂಸಿಯಿಂದಾಗಿ ಬಂಗಾಳ ಹೇಗೆ ಅಭಿವೃದ್ಧಿವಂಚಿತವಾಗಿದೆ ಎಂಬುದನ್ನು ಜನರಿಗೆ ಮನದಟ್ಟು ಮಾಡಿ ಎಂಬುದನ್ನು ಕಾರ್ಯಕರ್ತರಿಗೆ ತಿಳಿಸುತ್ತಾ, ಆ ಮೂಲಕ ಮತದಾರರನ್ನು ಬಿಜೆಪಿ ಕಡೆ ಸೆಳೆಯುವ ಯತ್ನ ಮಾಡುತ್ತಿದ್ದಾರೆ.

2019ರ ಲೋಕಸಭೆ ಮತ್ತು ಕೊರೊನಾ ಮಹಾಮಾರಿ ಕಾಲದಲ್ಲಿ ನಡೆದಿದ್ದ 2021ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಾನು ಬಂಗಾಳಕ್ಕೆ ತೆರಳಿ ಚುನಾವಣಾ ವರದಿ ಗಳನ್ನು ಮಾಡಿದ್ದೆ. 2014ರಲ್ಲಿ ಕೇವಲ 2 ಲೋಕಸಭೆ ಸೀಟುಗಳನ್ನು ಹೊಂದಿದ್ದ ಬಿಜೆಪಿ 2019ರಲ್ಲಿ 18 ಸೀಟುಗಳನ್ನು ಬಾಚಿಕೊಂಡು ತನ್ನ ಮತಪಾಲನ್ನು ಕೂಡ ಶೇ.16ರಿಂದ ಶೇ.40ಕ್ಕೆ ಏರಿಸಿಕೊಂಡಿತ್ತು.

2019ರ ಚುನಾವಣೆಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಕೂಡ 2 ವರ್ಷಗಳ ಹಿಂದೆಯೇ ಬಂಗಾಳಕ್ಕೆ ಬಂದು ಮನೆ ಮನೆಗೆ ತೆರಳಿ ಬಿಜೆಪಿ ಗೆಲುವಿಗಾಗಿ ಶ್ರಮಿಸಿದ್ದರು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೀಟುಗಳ ಸಂಖ್ಯೆ 18ರಿಂದ 12ಕ್ಕೆ ಕುಸಿದಿತ್ತು. ಮತ ಪಾಲಿನ ಪ್ರಮಾಣ 40ರಿಂದ 39ಕ್ಕೆ ಇಳಿಯಿತು. ಅಂದರೆ, ಸೀಟುಗಳು ಕಡಿಮೆ ಯಾದರೂ, ಬಿಜೆಪಿ ಜನಪ್ರಿಯತೆ ಪ್ರಮಾಣವೇನೂ ತಗ್ಗಿರಲಿಲ್ಲ.

ವಿಧಾನಸಭೆ ಚುನಾವಣೆ ಫಲಿತಾಂಶಗಳನ್ನು ಪರಿಶೀಲಿಸುವುದಾದರೆ; 2016ರಲ್ಲಿ ಬಿಜೆಪಿ ಗೆದ್ದದ್ದು 3 ಸೀಟುಗಳನ್ನು ಮಾತ್ರ. 2011ರಲ್ಲಿ ಶೂನ್ಯ ಸ್ಥಾನಗಳನ್ನು ಹೊಂದಿದ್ದ ಬಿಜೆಪಿ 2016ರಲ್ಲಿ ಖಾತೆ ತೆರೆದು 3 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಆದರೆ ಇದೇ ಸಂಖ್ಯೆ 2021ರಲ್ಲಿ 77ಕ್ಕೇರಿದಾಗ ಇಡೀ ದೇಶ ಬಂಗಾಳ ಬಿಜೆಪಿ ನಿರ್ವಹಣೆಯನ್ನು ಹುಬ್ಬೇರಿಸಿ ನೋಡಿತ್ತು.

2019ರ ಲೋಕಸಭೆ ಫಲಿತಾಂಶಗಳು 2021ರ ವಿಧಾನಸಭೆ ಚುನಾವಣೆ ಹೋರಾಟಕ್ಕೆ ಬಿಜೆಪಿಯ ನೈತಿಕ ಸ್ಥೈರ್ಯವನ್ನು ದ್ವಿಗುಣಗೊಳಿಸಿತ್ತು. ಈ ಬಾರಿ ಬಂಗಾಳ ಹೋರಾಟ ವನ್ನು ಮಾಡು ಇಲ್ಲವೇ ಮಡಿ ಎಂಬಂತೆ ಪರಿಗಣಿಸಿರುವ ಬಿಜೆಪಿ, ಈ ಸಲ ಗೆಲ್ಲದಿದ್ದರೆ ಮುಂದೆಂದೂ ಗೆಲ್ಲಲಾರೆವು ಎನ್ನುತ್ತಾ ಕಾರ್ಯಕರ್ತರ ಹುಮ್ಮಸ್ಸನ್ನು ಹೆಚ್ಚಿಸಿ, ಆ ಮೂಲಕ ಮತದಾರ ಮಹಾಪ್ರಭುವಿನ ಹೃದಯ ಪ್ರವೇಶಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ನಾವು ಬಿಜೆಪಿ ಪರ ಕೆಲಸ ಮಾಡಿದರೆ, ನಮ್ಮ ಮನೆಯ ಹೆಣ್ಣುಮಕ್ಕಳನ್ನು ಟಿಎಂಸಿಯವರು ಶಿಕ್ಷಿಸುತ್ತಾರೆ ಎಂಬ ಆತಂಕ ಈಗಲೂ ಲಕ್ಷಾಂತರ ಬಿಜೆಪಿ ಕಾರ್ಯಕರ್ತರಲ್ಲಿದೆ ಮತ್ತು ಇದು ವಾಸ್ತವವೂ ಹೌದು.

ಬಂಗಾಳದೊಂದಿಗೆ ಗಡಿ ಹಂಚಿಕೊಂಡಿರುವ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ನಿರಂತರ ದಾಳಿ ಹಾಗೂ ಕೊಲೆ ಪ್ರಕರಣಗಳು ಬಂಗಾಳದಲ್ಲಿ ಭಾರೀ ಸದ್ದು ಮಾಡುತ್ತಿವೆ. ಬಂಗಾಳದಲ್ಲಿ ನುಸುಳಿಕೊಂಡಿರುವ ಬಾಂಗ್ಲಾದೇಶಿಯರು ರಾಜ್ಯದ ಅಸ್ಮಿತೆಗೆ ಹಾನಿ ಮಾಡುತ್ತಿದ್ದಾರೆ.

ಇನ್ನಾದರೂ ಬಂಗಾಳಿಗಳು ಜಾಗೃತಗೊಳ್ಳಬೇಕು ಎಂದು ಬಿಜೆಪಿ ವ್ಯವಸ್ಥಿತ ಪ್ರಚಾರ ಮಾಡುತ್ತಿದೆ. ಬಿಜೆಪಿಯು ಚುನಾವಣೆ ಗೆಲ್ಲುವುದಿದ್ದರೆ ಅದು ಹಿಂದೂಗಳ ಬೆಂಬಲದಿಂದ ಮಾತ್ರ ಸಾಧ್ಯ ಎಂಬ ವಾಸ್ತವ ಮೋದಿ-ಶಾಗೆ ಗೊತ್ತಿರುವುದರಿಂದ ಹಿಂದೂ ಜಾಗೃತಿ ಮಂತ್ರ ರಾಜ್ಯದಲ್ಲಿ ಜೋರಾಗಿ ಮೊಳಗುತ್ತಿದೆ. ಬಾಂಗ್ಲಾ ಜತೆಗಿನ ಆಂತರಿಕ ಸಂಘರ್ಷದಿಂದಾಗಿ ಬಾಂಗ್ಲಾದ ಕ್ರಿಕೆಟ್ ಆಟಗಾರ ಮುಸ್ತಫಿಜುರ್ ರೆಹಮಾನ್‌ರನ್ನು ಐಪಿಎಲ್ ಪಂದ್ಯಾವಳಿ ಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಹೊರಗಿಡಬೇಕೆಂಬ ಬಿಸಿಸಿಐ ತೀರ್ಮಾನ ಬಂಗಾಳ ಚುನಾವಣೆ ಜತೆಗೂ ಥಳುಕು ಹಾಕಿಕೊಂಡಿದೆ.

ರಾಜ್ಯದಲ್ಲಿ ಹಿಂದೂ ಮತಗಳ ಕ್ರೋಢೀಕರಣದ ಲೆಕ್ಕಾಚಾರ ಬಿಜೆಪಿ ಈ ಕ್ರಮದ ಹಿಂದಿದೆ ಎಂದು ವಿವಿಧ ವಿಪಕ್ಷಗಳು ಆರೋಪ ಮಾಡಿವೆ. ಹಾಗಂತ, ಬಾಂಗ್ಲಾದೇಶದಲ್ಲಿ ಅಲ್ಪ ಸಂಖ್ಯಾತರಾಗಿರುವ ಹಿಂದೂಗಳ ಹತ್ಯೆಗಳಾಗುತ್ತಿರುವುದು ನೆರೆಯ ಬಂಗಾಳದಲ್ಲಿ ಆತಂಕ, ಚರ್ಚೆಗಳಿಗೆ ಗ್ರಾಸವಾಗಿದೆ ಮತ್ತು ಅದೇ ಕಾರಣಕ್ಕಾಗಿ ಐಪಿಎಲ್‌ನಲ್ಲಿ ಅವರಿಗೆ ಅವಕಾಶ ನೀಡಬೇಡಿ ಎಂಬ ಗದ್ದಲ ಎಬ್ಬಿಸಲಾಗಿದೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಘಟನೆಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶಿಗರನ್ನು ಬಂಗಾಳಿಗರು ನೋಡುವ ದೃಷ್ಟಿಕೋನ ಬದಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ನಿಜವೇ ಆಗಿದ್ದರೆ, ಬಂಗಾಳ ಚುನಾವಣೆ ಮೇಲೆ ಅದು ಖಂಡಿತಾ ಪರಿಣಾಮ ಬೀರಲಿದೆ.

ಕೆಲ ದಿನಗಳ ಹಿಂದೆ ಗೋವಾದಲ್ಲಿ ನಡೆದ ಸಾಗರ ಮಂಥನ ಕಾರ್ಯಕ್ರಮದಲ್ಲಿ ಭಾಗಿ ಯಾಗಿ ಮಾತನಾಡಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು, ಬಂಗಾಳ ನಮಗೆ ಕೇವಲ ರಾಜಕೀಯ ಯುದ್ಧವಲ್ಲ. ಅದು ನಾಗರಿಕ ಯುದ್ಧ. ನಾವು ಅದನ್ನು ಅದೇ ರೀತಿಯಲ್ಲಿ ನೋಡುತ್ತೇವೆ. ‌

ಭಾರತ ಉಳಿಸಬೇಕೆಂದರೆ, ನಾವು ಬಂಗಾಳವನ್ನು ಉಳಿಸಬೇಕು. ದೊಡ್ಡ ಜನಸಂಖ್ಯಾ ಸವಾಲಿನಿಂದ ಭಾರತವನ್ನು ರಕ್ಷಿಸಲು ನಾವು ಬಂಗಾಳವನ್ನು ಗೆಲ್ಲಲು ಬಯಸುತ್ತೇವೆ ಮತ್ತು ನಿಮ್ಮ ಆಶೀರ್ವಾದದಿಂದ ಬಂಗಾಳ ಗೆಲ್ಲುತ್ತೇವೆ ಹೇಳಿದ್ದರು. ಬಂಗಾಳ ಚುನಾವಣೆ ಯನ್ನು ಬಿಜೆಪಿ ಹೇಗೆ ಪರಿಗಣಿಸಿದೆ ಎನ್ನುವುದನ್ನು ಸಂತೋಷರ ಮಾತಿನಿಂದಲೇ ಅರ್ಥ ಮಾಡಿಕೊಳ್ಳಬಹುದು.

ಬಂಗಾಳದ ಜತೆಗೆ ತಮಿಳುನಾಡು, ಕೇರಳ, ಅಸ್ಸಾಂ ರಾಜ್ಯ ಚುನಾವಣೆ ನಡೆದರೂ, ಬಿಜೆಪಿಯ ಮುಖ್ಯ ಗುರಿ ಪಶ್ಚಿಮ ಬಂಗಾಳವೇ ಆಗಿದೆ. ನೆರೆಯ ಬಾಂಗ್ಲಾದಗುತ್ತಿರುವ ಹಿಂಸಾಚಾರ, ತಮ್ಮ ರಾಜ್ಯದಲ್ಲಿ ಟಿಎಂಸಿ-ಬಿಜೆಪಿ ಸಂಘರ್ಷಗಳ ಹಿನ್ನೆಲೆಯಲ್ಲಿ ಚುನಾವಣೆ ಹೊಸ್ತಿಲಲ್ಲಿ ಬಂಗಾಳ ರಣಾಂಗಣವಾಗುವ ಲಕ್ಷಣಗಳೇ ಕಾಣುತ್ತಿವೆ.

2019ರ ಲೋಕಸಭೆ ಚುನಾವಣೆ ವರದಿಗೆಂದು ಬಂಗಾಳದಲ್ಲಿದ್ದಾಗ ಆರ್‌ಎಸ್‌ಎಸ್‌ನಲ್ಲಿ ವಿಸ್ತಾರಕರಾಗಿ ಜವಾಬ್ದಾರಿ ಹೊತ್ತಿದ್ದ ಕರ್ನಾಟಕದ ಯುವಕರಾದ ಕರುಣಾಕರ ಖಾಸಲೆ, ಪ್ರಮೋದ್, ದಶರಥ ವಯಲಾಯ ಮತ್ತು ಅರುಣ್ ಬಿನ್ನಡಿಯವರು ಆಕಸ್ಮಿಕವಾಗಿ ಭೇಟಿಗೆ ಸಿಕ್ಕಿದ್ದರು. ಬಿಜೆಪಿ ಸಭೆಗಳು ಅಲ್ಲಿ ಹೇಗೆ ನಡೆಯುತ್ತವೆ ಎಂದು ಕುತೂಹಲದಿಂದ ನೋಡಲು ಹೋಗಿದ್ದಾಗ ಕನ್ನಡದಲ್ಲಿ ಮಾತನಾಡುತ್ತಿದ್ದ ಈ ನಾಲ್ವರು ಸಿಕ್ಕರು. ಅವರು ಬಂಗಾಳದ ವಿವಿಧ ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ನಡೆಸಿ, ಸಭೆಗೆ ಬಂದಿದ್ದರು.

ಬಂಗಾಳ ಚುನಾವಣೆಯನ್ನು ಸಂಘ ಮತ್ತು ಬಿಜೆಪಿ ಎಷ್ಟರ ಮಟ್ಟಿಗೆ ಗಂಭೀರವಾಗಿ ತೆಗೆದು ಕೊಂಡಿತ್ತು ಮತ್ತು ಈ ಬಾರಿ ಬಿಜೆಪಿ ಸೀಟುಗಳ ಸಂಖ್ಯೆ ಖಂಡಿತವಾಗಿ ಹೆಚ್ಚಲಿದೆ ಎಂಬ ಅವರ ವಿಶ್ವಾಸದ ಮಾತುಗಳು ಲೋಕಸಭೆ ಫಲಿತಾಂಶದಲ್ಲೂ ಕಂಡುಬಂದಿತ್ತು. ಈ ಸಲದ ಚುನಾವಣೆಗೆ ಅರುಣ್ ಬಿನ್ನಡಿಯವರನ್ನು ಬಂಗಾಳದ ಸಿಲಿಗುರಿ ಭಾಗದಲ್ಲಿರುವ 28 ವಿಧಾನಸಭೆ ಕ್ಷೇತ್ರಗಳ ಸಂಘಟನಾ ಉಸ್ತುವಾರಿಯನ್ನಾಗಿ ಮಾಡಲಾಗಿದೆ.

ಕಳೆದ 3 ತಿಂಗಳಿಂದ ಸಿಲಿಗುರಿಯನ್ನೇ ಮನೆ ಮಾಡಿಕೊಂಡಿರುವ ಅರುಣ್ ಬಿನ್ನಡಿ, ಬಂಗಾಳದಲ್ಲಿ ಕೆಲಸ ಮಾಡಬೇಕು, ಸಂಘಟನೆ ಕಟ್ಟಬೇಕು ಎಂದು ನೇಮಕ ಆದೇಶ ಹೊರಬೀಳುವ ಮುನ್ನವೇ ಅಲ್ಲಿ ಕೆಲಸ ಆರಂಭಿಸಿದ್ದರು!

ಈ ಹಿಂದೆ ಮಹಾರಾಷ್ಟ್ರ, ತಮಿಳುನಾಡು ಚುನಾವಣೆಗಳಲ್ಲಿ ಪಕ್ಷದ ಉಸ್ತುವಾರಿಯಾಗಿ ಕೆಲಸ ಮಾಡಿದ್ದ ಬಿಜೆಪಿ ಹಿರಿಯ ನಾಯಕ ಮತ್ತು ಶಾಸಕ ಸಿ.ಟಿ.ರವಿ ಅವರಿಗೂ ಬಂಗಾಳದ ಕೋಲ್ಕತ್ತಾ ವಲಯದ 30ಕ್ಕೂ ಹೆಚ್ಚು ಕ್ಷೇತ್ರಗಳ ಜವಾಬ್ದಾರಿಯನ್ನು ಹೆಗಲಿಗೇರಿಸಲಾಗಿದೆ. ಅದೇ ರೀತಿ ರಾಜ್ಯ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಬಂಗ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

2021ರಲ್ಲೂ ಬಂಗಾಳದಲ್ಲಿದ್ದ ಅವರು ಪಕ್ಷದ ಪ್ರಚಾರ ನಿರ್ವಹಣೆ ಉಸ್ತುವಾರಿ ಆಗಿದ್ದರು. ಕೆಲ ದಿನಗಳ ಹಿಂದೆ ರಾಜ್ಯ ಬಿಜೆಪಿ ಕಾರ್ಯಕರ್ತರೊಬ್ಬರು ಸೌತ್ 24 ಪರಗಣ ಜಿಲ್ಲೆ ಯಲ್ಲಿದ್ದರು. ಅವರು ಬಿಜೆಪಿ ಬೆಂಬಲಿಸುವ 60ರ ಆಸುಪಾಸಿನಲ್ಲಿದ್ದ ಪತಿ-ಪತ್ನಿಯೊಂದಿಗೆ ಮಾತನಾಡುತ್ತಿದ್ದರು. ಅವರ 26 ವಯಸ್ಸಿನ ಮಗಳು 3 ವರ್ಷಗಳ ಹಿಂದೆ ಬಿಜೆಪಿ ಅಭ್ಯರ್ಥಿ ಯಾಗಿ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರಂತೆ.

ಆದರೆ, ನಾಮಪತ್ರ ಸಲ್ಲಿಸಿದ್ದೇ ತಪ್ಪು ಎಂಬಂತೆ ಆಕೆಯನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡಲಾಗಿತ್ತು. ನಾಮಪತ್ರ ಸಲ್ಲಿಸುತ್ತಿದ್ದಂತೆ ಮಗಳನ್ನು ಟಿಎಂಸಿ ಕಾರ್ಯಕರ್ತರು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಮಾಡಿ ಹತ್ಯೆಗೈದರು. ಆಕೆ ಚುನಾವಣೆಗೆ ನಿಲ್ಲದಿದ್ದಿ ದ್ದರೆ ಇಂದು ಬದುಕಿರುತ್ತಿದ್ದಳು ಎಂದಾಗ ಹೆತ್ತವರು ಕಣ್ಣಾಲಿಗಳು ಒದ್ದೆಯಾಗಿದ್ದವು.

ಮಗಳ ಸಾವಿಗೆ ನ್ಯಾಯ ಬೇಕೆಂದು ಈಗಲೂ ಆ ಹೆತ್ತವರು ಕೋರ್ಟು, ಪೊಲೀಸ್ ಠಾಣೆಗೆ ಅಲೆಯುತ್ತಿದ್ದಾರೆ ಎಂದು ಆ ಕಾರ್ಯಕರ್ತರು ದೂರವಾಣಿಯಲ್ಲಿ ಮಾತನಾಡುತ್ತಾ ಹೇಳಿದರು. ಇಂಥಾ ಹಲವಾರು ಕಣ್ಣೀರ ಕಥೆಗಳು ಬಂಗಾಳದಲ್ಲಿ ಬೇಕಾದಷ್ಟು ಸಿಗುತ್ತವೆ. ಆದರೆ, ವರದಿಯಾಗುವುದು ಬೆರಳೆಣಿಕೆ ಮಾತ್ರ.

2021ರಲ್ಲಿ ಬಿಜೆಪಿಯ ಅರವಿಂದ ಬೆಲ್ಲದ್ ಅವರಿಗೆ ಬಂಗಾಳದಲ್ಲಿ ಕೆಲ ಕ್ಷೇತ್ರಗಳ ಜವಾಬ್ದಾರಿ ನೀಡಲಾಗಿತ್ತು. ನನಗೆ ಅವರು ಕೋಲ್ಕತ್ತಾದಲ್ಲಿ ಭೇಟಿಗೆ ಸಿಕ್ಕಿದ್ದರು. ಬನ್ನಿ ನಿಮಗೆ ಕೆಲ ಕ್ಷೇತ್ರಗಳಲ್ಲಿರುವ (ಬಿಜೆಪಿ ಬೆಂಬಲಿಸಿದ್ದ) ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿಸುತ್ತೇನೆ ಎಂದು ನನ್ನನ್ನು ಕೋಲ್ಕತ್ತಾದಿಂದ ಕೆಲ ಗ್ರಾಮೀಣ ಭಾಗಗಳಿಗೆ ಕರೆದು ಕೊಂಡು ಹೋಗಿದ್ದರು.

ಅಂಥವರಲ್ಲಿ ಒಂದು ಕುಟುಂಬದ ಮೂರ್ನಾಲ್ಕು ಹೆಣ್ಣುಮಕ್ಕಳು ನಾರಾಯಣಪುರ ಎಂಬಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರ‍್ಯಾಲಿಯಲ್ಲಿ ಭಾಗಿಯಾಗಲು ತೆರಳಿದ್ದರು ಎಂಬ ಕಾರಣಕ್ಕಾಗಿ ಟಿಎಂಸಿ ಕಾರ್ಯಕರ್ತರಿಂದ ಲೈಂಗಿಕ ಹಿಂಸೆಗೆ ಒಳಗಾಗಿ, ತೀವ್ರ ಮಾನಸಿಕ ಆಘಾತಕ್ಕೀಡಾಗಿದ್ದರು.

ನಿಮ್ಮ ನೋವುಗಳನ್ನು ನಮ್ಮ ಸುದ್ದಿವಾಹಿನಿ ಮುಂದೆ ಹೇಳಿಕೊಳ್ಳಿ ಎಂದು ನಾನು ಹೇಳಿದ್ದಕ್ಕೆ, ನೀವು ಸಂದರ್ಶನ ಮಾಡಿ ಇಲ್ಲಿಂದ ಹೋಗುತ್ತೀರಿ ಸರ್. ನಂತರ ವಿಷಯ ತಿಳಿದು ನಮ್ಮ ಮನೆಗಳ ಮೇಲೆ ದಾಳಿ ಮಾಡುತ್ತಾರೆ, ಹಿಂಸೆ ಕೊಡುತ್ತಾರೆ. ಇದು ನಮಗೆ ಬೇಕಾ ಎಂದಾಗ ನನಗೂ ಉತ್ತರ ನೀಡಲಾಗದೆ, ಪುಸ್ತಕದಲ್ಲಿ ಟಿಪ್ಪಣಿ ಮಾಡಿಕೊಂಡು ವಾಪಸಾಗಿದ್ದೆ.

ಇಂಥ ಅನೇಕ ಸಂತ್ರಸ್ತರನ್ನು ಭೇಟಿ ಮಾಡಿದಾಗ, ಈ ರಾಜ್ಯದಲ್ಲಿ ದೌರ್ಜನ್ಯದ ವ್ಯವಸ್ಥಿತ ಮಾದರಿ ಹೇಗಿದೆ ಎಂಬುದೂ ಸಣ್ಣ ಮಟ್ಟಿಗೆ ಅರ್ಥವಾಗಿತ್ತು. ಒಂದೊಮ್ಮೆ ಕಮ್ಯುನಿಸ್ಟ್ ಪಕ್ಷಗಳ ದಬ್ಬಾಳಿಕೆ, ದೌರ್ಜನ್ಯಕ್ಕೆ ಸಾಕ್ಷಿಯಾಗಿ ಬಳಲಿದ್ದ ಬಂಗಾಳದ ಮತದಾರರು, 2011ರಿಂದ ಟಿಎಂಸಿಯನ್ನು ಆಯ್ಕೆ ಮಾಡುತ್ತಾ ಬಂದಿದ್ದಾರೆ.

2021ರಲ್ಲಿ ಅನೇಕರು ಟಿಎಂಸಿಯಿಂದ ಬಿಜೆಪಿ ಕಡೆ ಹೊರಳಿದರು. ಈಗಲೂ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ- ಸಂಘರ್ಷಗಳು ನಿತ್ಯ ಬದುಕಿನ ಭಾಗವಾಗಿದೆ. ಇದನ್ನು ಕೋಲ್ಕತ್ತಾದಲ್ಲಿ ಕುಳಿತು ದೇಶದ ಯುವಕರು, ಮಹಿಳೆಯರ ಪರ ಮಾತನಾಡುತ್ತಾ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಒತ್ತಿಹೇಳುವ ಸಿಎಂ ಮಮತಾ ಬ್ಯಾನರ್ಜಿ ಒಪ್ಪದಿರ ಬಹುದು. ಆದರೆ, ಕಹಿ ಸತ್ಯದ ಅನಾವರಣವಾಗುವುದು ಬಂಗಾಳದ ಒಳಹೊಕ್ಕು ನೋಡಿದಾಗಲೇ.