ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajguru K R Column: ದಿ ಬೆಂಗಾಲ್‌ ಫೈಲ್ಸ್:‌ ಬಂಗಾಳದ ಕರಾಳ ಇತಿಹಾಸದ ಮರುದರ್ಶನ

‘ದಿ ಬೆಂಗಾಲ್ ಫೈಲ್ಸ್’ ಚಿತ್ರವು, 1940ರ ದಶಕದ‌ ಪೂರ್ವಾರ್ಧದಲ್ಲಿ ಬಂಗಾಳದಲ್ಲಿ ನಡೆದ ಭೀಕರ ಕೋಮು ಗಲಭೆಗಳ ಮೇಲೆ ಕೇಂದ್ರೀಕರಿಸಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, 1946ರ ’ನೇರ ಕಾರ್ಯಾ ಚರಣೆಯ ದಿನ’ (Direct Action Day) ಮತ್ತು ನೌಖಾಲಿ ಗಲಭೆಗಳ ಕುರಿತು ಈ ಚಿತ್ರ ಬೆಳಕು ಚೆಲ್ಲಲಿದೆ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಿಳಿಸಿದ್ದಾರೆ.

ಸಕಾಲಿಕ

ರಾಜಗುರು ಕೆ.ಆರ್‌(ಹೋರ್ತಿ)

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಬೆಂಗಾಲ್ ಫೈಲ್ಸ್ ಇದೇ ಸೆಪ್ಟೆಂಬರ್ 5ರಿಂದ ತೆರೆಗೆ ಬರಲು‌ ಸಜ್ಜಾಗಿದೆ. ಮಾರ್ಚ್ ಎಪ್ರಿಲ್ 2026ರಲ್ಲಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳಿವೆ. ‘ದಿ ಬೆಂಗಾಲ್ ಫೈಲ್ಸ್’‌ ಚಿತ್ರದ ಬಿಡುಗಡೆಯು, ಕೇವಲ ಒಂದು ಚಲನಚಿತ್ರ ಬಿಡುಗಡೆಗಿಂತ ಹೆಚ್ಚು ಮಹತ್ವವನ್ನು ಪಡೆದಿದೆ.

ಇದು ಇತಿಹಾಸ, ರಾಜಕೀಯ, ಮತ್ತು ಕೋಮು ಸೌಹಾರ್ದತೆಯ ಕುರಿತ ಚರ್ಚೆಗಳನ್ನು ಮತ್ತೆ ಮುನ್ನಲೆಗೆ ತಂದಿದೆ. ಬಂಗಾಳದ ಇತಿಹಾಸದ ಒಂದು ಕರಾಳ ಅಧ್ಯಾಯವನ್ನು ತೆರೆದಿಡಲು ಹೊರಟಿರುವ ಈ ಸಿನಿಮಾ ಬಿಡುಗಡೆಯಾಗುತ್ತಿರುವ ಸಮಯದ ಬಗ್ಗೆ ಕೆಲವರು ಅಪಸ್ವರ ಎತ್ತಿರು ವುದು ಹಾಗೂ ಇದು ಅಜೆಂಡಾ ಇಟ್ಟುಕೊಂಡು ತಯಾರಿಸಲಾದ ಚಿತ್ರ ಎಂದು ಹೇಳುತ್ತಿರುವುದು ಒಂದೆಡೆಯಾದರೆ, ಪ್ರಸ್ತುತ ಆ ರಾಜ್ಯದಲ್ಲಿ ನಡೆಯುತ್ತಿರುವ ಸಾಂಪ್ರದಾಯಿಕ ಹಿಂಸಾಚಾರ, ದಂಗೆ, ವೋಟ್ ಬ್ಯಾಂಕ್ ಭದ್ರಗೊಳಿಸುವಿಕೆಗೆ ಪೂರಕವಾಗಿ ನಡೆಯುತ್ತಿರುವ ಅಕ್ರಮ ನುಸುಳುವಿಕೆ ಯನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಈ ಚಿತ್ರವನ್ನು ಅಜೆಂಡಾ ಇಟ್ಟುಕೊಂಡು ತಯಾರಿಸಲಾಗಿದೆ ಎಂದು ನಿರ್ಲಕ್ಷ್ಯ ಮಾಡುವವರು ಕೂಡ ಇಷ್ಟು ದಿವಸಗಳ ವರೆಗೆ ಈ ಸಂಕೀರ್ಣ ವಿಷಯದ ಕುರಿತು ವ್ಯಕ್ತಪಡಿಸಿರುವ ದಿವ್ಯಮೌನ ಕೂಡ ಅಜೆಂಡಾದ ಭಾಗವೇ ಅಲ್ಲವೇ ?

‘ದಿ ಬೆಂಗಾಲ್ ಫೈಲ್ಸ್’ ಚಿತ್ರವು, 1940ರ ದಶಕದ‌ ಪೂರ್ವಾರ್ಧದಲ್ಲಿ ಬಂಗಾಳದಲ್ಲಿ ನಡೆದ ಭೀಕರ ಕೋಮು ಗಲಭೆಗಳ ಮೇಲೆ ಕೇಂದ್ರೀಕರಿಸಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, 1946ರ ’ನೇರ ಕಾರ್ಯಾಚರಣೆಯ ದಿನ’ (Direct Action Day) ಮತ್ತು ನೌಖಾಲಿ ಗಲಭೆಗಳ ಕುರಿತು ಈ ಚಿತ್ರ ಬೆಳಕು ಚೆಲ್ಲಲಿದೆ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಿಳಿಸಿದ್ದಾರೆ.

ಇದನ್ನೂ ಓದಿ: Dr Vijay Darda Column: ಮಿಸ್ಟರ್‌ ಮುನೀರ್, ಎಲ್ಲಿ ಕುಣಿಯುತ್ತಿದ್ದೀರಿ ಗೊತ್ತಾ ?

ಈ ಘಟನೆಗಳು ಬಂಗಾಳದ ಹಿಂದೂ ಸಮುದಾಯದ ಮೇಲೆ ನಡೆದ ಭೀಕರ ಹತ್ಯಾಕಾಂಡ, ಬಲವಂತದ ಮತಾಂತರ ಮತ್ತು ಹಿಂಸಾಚಾರಗಳನ್ನು ವಿವರಿಸಲಿದೆ. ಈ ಹಿಂದೆ ಕಾಶ್ಮೀರ ಫೈಲ್ಸ್ ಮೂಲಕ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಬಗ್ಗೆ ವಿವರಿಸಿ, ನೋಡುಗರ ಕಣ್ಣಂಚಿನಲ್ಲಿ ಭಾವನಾ ತ್ಮಕ ಸ್ಪಂದನೆ ಕಂಡಿದ್ದ ನಿರ್ದೇಶಕರು, ನೂತನ ಚಿತ್ರದ ಮೂಲಕ ಬಂಗಾಲದಲ್ಲಿ‌ ನಡೆದ ನರಮೇಧ ಗಳ ಕುರಿತಾಗಿ ಚಿತ್ರ ಮಾಡಿದ್ದು ಸಹಜವಾಗಿ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

1905ರ ಬಂಗಾಳ ವಿಭಜನೆಯ ನಂತರ, ಬಂಗಾಳವು ಕೇವಲ ರಾಜಕೀಯ ಹೋರಾಟದ ಕೇಂದ್ರ ವಾಗದೆ, ಭಾರತೀಯ ರಾಷ್ಟ್ರೀಯತೆಯ ದಾರಿದೀಪವಾಯಿತು. ‘ಸ್ವದೇಶಿ’ ಚಳುವಳಿ ಇಲ್ಲಿಂದಲೇ ಪ್ರಾರಂಭಗೊಂಡು ದೇಶಾದ್ಯಂತ ಹರಡಿತು. ಬಂಗಾಳದ ಕವಿಗಳು, ಬರಹಗಾರರು ಮತ್ತು ಬುದ್ಧಿ ಜೀವಿಗಳು ತಮ್ಮ ಕೃತಿಗಳ ಮೂಲಕ ಜನರಲ್ಲಿ ದೇಶಭಕ್ತಿಯನ್ನು ತುಂಬಿದರು.

ಇತ್ತೀಚಿನ ಪಶ್ಚಿಮ ಬಂಗಾಳದ ರಾಜಕೀಯ ಹಿಂಸಾಚಾರ ಮತ್ತು ಘರ್ಷಣೆಗಳು ರಾಷ್ಟ್ರಮಟ್ಟದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವಾಗಿದೆ. ಹೆಚ್ಚಾಗಿ ಇವೆಲ್ಲವನ್ನೂ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳ ನಡುವಿನ ರಾಜಕೀಯ ದ್ವೇಷದ ಪರಿಣಾಮವೆಂದು ಮಾತ್ರ ನೋಡಲಾಗುತ್ತಿದೆ. ಆದರೆ, ಈ ರೀತಿಯ ಒಂದು ಸಿದ್ಧ ತೀರ್ಮಾನಕ್ಕೆ ಬರುವ ಮುನ್ನ, ಪಶ್ಚಿಮ ಬಂಗಾಳದಲ್ಲಿನ ಹಿಂಸಾ ತ್ಮಕ ರಾಜಕೀಯದ ಬೇರುಗಳು ಶತಮಾನಗಳಷ್ಟು ಹಳೆಯದಾಗಿವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಸ್ವಾತಂತ್ರ್ಯ ಪೂರ್ವದ ಬಂಗಾಳ ವಿಭಜನೆಯಿಂದ ತೊಡಗಿ, ಈ ಪ್ರದೇಶವು ನಿರಂತರವಾಗಿ ಹಿಂಸಾ ಚಾರಕ್ಕೆ ಸಾಕ್ಷಿಯಾಗಿದೆ. ವಿಭಜನೆಯ ಪೂರ್ವ ಮತ್ತು ನಂತರದ ಘಟನೆಗಳನ್ನು ನೋಡಿದಾಗ ಪಂಜಾಬ್‌ನಲ್ಲಿ ನಡೆದ ದಂಗೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ಇದರ ಹಿಂದಿನ ಕಾರಣ ಗಳು ಏನೇ ಇರಲಿ, ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರ ಮತ್ತು ಲಕ್ಷಾಂತರ ಜನರ ಸ್ಥಳಾಂತರದ ದುರಂತಗಳು ಸಾರ್ವಜನಿಕ ಚರ್ಚೆಯ ಭಾಗವಾಗಲೇ ಇಲ್ಲ.

ಇದು ಒಂದು ದುರಂತವೇ ಸರಿ. ಮಾಧ್ಯಮಗಳು ಮತ್ತು ಇತಿಹಾಸಕಾರರು ಕೂಡ ಹೆಚ್ಚಾಗಿ ಪಂಜಾಬ್‌ನತ್ತ ಗಮನ ಹರಿಸಿದ ಕಾರಣ, ಬಂಗಾಳದ ನೋವು ಹೆಚ್ಚು ಜನರ ಗಮನಕ್ಕೆ ಬರಲಿಲ್ಲ. ಭಾರತದ ವಿಭಜನೆ ಸಂದರ್ಭ, ಅದರ ಹಿನ್ನೆಲೆಗಳ ಬಗ್ಗೆ ವಿವಿಧ ಅಭಿಪ್ರಾಯಗಳಿದ್ದರೂ ಪಶ್ಚಿಮ ಬಂಗಾಳ ಭಾರತದ ಇತಿಹಾಸದಲ್ಲಿ ಡೈರೆಕ್ಟ್ ಆಕ್ಶನ್ ಡೇ (ನೇರ ಕಾರ್ಯಾಚರಣೆ ದಿನ) ಪ್ರಮುಖ ಭಾಗವಾಗಿತ್ತು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

1946ರಲ್ಲಿ ನಡೆದ ಚುನಾವಣೆಗಳು ಮುಸ್ಲಿಂ ಲೀಗ್ ಗೆ ದಿನೇ ದಿನೇ ಹೆಚ್ಚುತ್ತಿದ್ದ ವರ್ಚಸ್ಸು, ದ್ವಿರಾಷ್ಟ್ರ ಸಿದ್ಧಾಂತಕ್ಕೆ ಒಂದು ವೇದಿಕೆ ಸೃಷ್ಟಿಸುವ ಉಮೇದು ಹೆಚ್ಚಿಸಿತ್ತು. ಅದಕ್ಕೆ ಪೂರಕವಾಗಿ ಪಶ್ಚಿಮ ಬಂಗಾಲದಲ್ಲಿ ದಂಗೆ ಸೃಷ್ಟಿಸಿ, ಗಮನವನ್ನು ಸೆಳೆಯಲು ನಿರ್ಧರಿಸಿದ್ದು ಗಮನಾರ್ಹ.

1946ರ ಆಗಸ್ಟ್ 16ರಂದು, ಮುಸ್ಲಿಂ ಲೀಗ್ ಘೋಷಿಸಿದ ನೇರ ಕಾರ್ಯಾಚರಣೆಯ ದಿನವು ಭಾರತದ ಇತಿಹಾಸದಲ್ಲಿ ಒಂದು ನಿರ್ಣಾಯಕ ಮತ್ತು ದುರಂತದ ಘಟನೆಯಾಗಿದೆ. 1946ರ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಸಾಧಿಸಿದ ಭರ್ಜರಿ ಗೆಲುವು ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಯಿತು. ಒಟ್ಟು 429 ಮುಸ್ಲಿಂ ಸ್ಥಾನಗಳ ಪೈಕಿ 425 ಸ್ಥಾನಗಳನ್ನು ಗೆಲ್ಲುವ ಮೂಲಕ ಮುಸ್ಲಿಂ ಸಮುದಾಯದ ಏಕೈಕ ಪ್ರತಿನಿಧಿ ತಾವೇ ಎಂದು ಅದು ಸಾಬೀತುಪಡಿಸಿತು. ವಿಶೇಷವಾಗಿ ಬಂಗಾಳದಲ್ಲಿ 119ರಲ್ಲಿ 113 ಸ್ಥಾನಗಳನ್ನು ಗಳಿಸಿದ್ದು ಮುಸ್ಲಿಂ ಲೀಗ್‌ನ ಪ್ರಭಾವಕ್ಕೆ ಸಾಕ್ಷಿಯಾಗಿತ್ತು.

ನೇರ ಕಾರ್ಯಾಚರಣೆಯ ಘೋಷಣೆ: ಚುನಾವಣೆಯಲ್ಲಿ ಮುಸ್ಲಿಂ ಲೀಗ್‌ನ ಭರ್ಜರಿ ಜಯದ ಹೊರತಾಗಿಯೂ, ಬ್ರಿಟಿಷ್ ಸರ್ಕಾರವು ಸಂವಿಧಾನ ರಚನಾ ಸಭೆಯಲ್ಲಿ ಅಧಿಕಾರ ಹಂಚಿ ಕೊಳ್ಳುವ ಯೋಜನೆಯನ್ನು ತಂದಾಗ, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವಿನ ಭಿನ್ನಾಭಿಪ್ರಾಯ ಗಳು ಹೆಚ್ಚಾದವು.

ಈ ಪರಿಸ್ಥಿತಿಯಲ್ಲಿ, ಮುಸ್ಲಿಂ ಲೀಗ್ ತನ್ನ ಪ್ರತ್ಯೇಕ ದೇಶದ ಬೇಡಿಕೆಯನ್ನು ಬಲವಾಗಿ ಪ್ರತಿಪಾದಿಸಲು ನೇರ ಕಾರ್ಯಾಚರಣೆ ಘೋಷಿಸಿತು. ಈ ಘೋಷಣೆಯ ಹಿಂದಿನ ಉದ್ದೇಶವೆಂದರೆ, ಬ್ರಿಟಿಷ್ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ಒತ್ತಡ ಹೇರಿ ಪಾಕಿಸ್ತಾನದ ಬೇಡಿಕೆಯನ್ನು ಒಪ್ಪಿಸುವುದು. ಆಗಸ್ಟ್ 16, 1946 ರಂದು, ದೇಶಾದ್ಯಂತ ಈ ಕಾರ್ಯಾಚರಣೆಯನ್ನು ಆಚರಿಸಲು ನಿರ್ಧರಿಸಲಾಯಿತು.

ಕಲ್ಕತ್ತಾದಲ್ಲಿ ಭೀಕರ ಹಿಂಸಾಚಾರ: ನೇರ ಕಾರ್ಯಾಚರಣೆಯ ದಿನಕ್ಕಾಗಿ ಬಂಗಾಳವನ್ನು ಆಯ್ಕೆ ಮಾಡಿದ್ದು, ಕೋಲ್ಕತ್ತಾ ಒಂದು ಕೈಗಾರಿಕಾ ಪ್ರದೇಶವಾಗಿದ್ದ ಕಾರಣದಿಂದಾಗಿ ಅದನ್ನು ಪೂರ್ವ ಪಾಕಿಸ್ತಾನದ ಭಾಗವನ್ನಾಗಿ ಮಾಡಲು ಬಯಸಿದ್ದರು. ಅದಕ್ಕಾಗಿ ಹಿಂದೂಗಳನ್ನು ಬಂಗಾಳದಿಂದ ಹೊರಗೆ ಕಳುಹಿಸುವುದು ಅವರ ಉದ್ದೇಶವಾಗಿತ್ತು.

ಮೊದಲಿಗೆ ಕೇವಲ ಮುಷ್ಕರದಂತೆ ಕಂಡರೂ, ವಾಸ್ತವವಾಗಿ ಇದು ಹಿಂದೂಗಳ ವಿರುದ್ಧದ ಒಂದು ಪೂರ್ವನಿಯೋಜಿತ ಕಾರ್ಯಾಚರಣೆಯಾಗಿತ್ತು. ಮುಸ್ಲಿಂ ಲೀಗ್ ಬೆಂಬಲಿಗರು ಸಾರ್ವಜನಿಕವಾಗಿ ಘೋಷಣೆಗಳನ್ನು ಕೂಗುತ್ತಾ, ಹಿಂದೂ ಸಮುದಾಯದವರ ಮೇಲೆ ದಾಳಿ ಮಾಡಿದರು. ಅಂಗಡಿ ಗಳು, ಮನೆಗಳು ಮತ್ತು ದೇವಾಲಯಗಳನ್ನು ಸುಟ್ಟು ಹಾಕಿ, ಸಾಮೂಹಿಕ ಹತ್ಯೆಗಳನ್ನು ನಡೆಸ ಲಾಯಿತು.

ಒಂದು ಅಂದಾಜಿನ ಪ್ರಕಾರ, ಕೇವಲ 72 ಗಂಟೆಗಳಲ್ಲಿ 40 ಸಾವಿರಕ್ಕೂ ಅಧಿಕ ಜನರು ಪ್ರಾಣ ಕಳೆದು ಕೊಂಡರು. ಲಕ್ಷಾಂತರ ಜನರು ಗಾಯಗೊಂಡರು. 1946ರ ಆಗಸ್ಟ್ 16, ಶುಕ್ರವಾರದಂದು, ಕೇಸೋ ರಾಮ್ ಕಾಟನ್ ಮಿಲ್ಸ್‌ನಲ್ಲಿ 600 ಹಿಂದೂಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಯಿತು ಈ ಘಟನೆಯನ್ನು ಇತಿಹಾಸದಲ್ಲಿ ‘ಗ್ರೇಟ್ ಕಲ್ಕತ್ತಾ ಕಿಲ್ಲಿಂಗ್ ಎಂದೇ ಕರೆಯಲಾಗುತ್ತದೆ.

ಗೋಪಾಲ್ ಪಾಠಾ ನೇತೃತ್ವದಲ್ಲಿ ಹಿಂದೂಗಳು ಕೂಡ ಪ್ರತಿರೋಧ ಒಡ್ಡಿ, ನಂತರ ಸುಹ್ರಾವರ್ದಿಯ ಪ್ರತಿನಿಧಿ ಯಾಗಿ ಶೇಖ್ ಮುಜಿಬುರ್ ರಹಮಾನ್ ಶಾಂತಿದೂತರಾಗಿ ಕಾರ್ಯನಿರ್ವಹಿಸಿ ದಂಗೆ ಶಾಂತಗೊಂಡಿದ್ದು ಗಮನಾರ್ಹ. (ಮುಂದೆ ಇದೇ ಶೇಕ್ ಮುಜಿಬುರ್ ರಹಮಾನ್ ಇದೇ ಪಾಕಿಸ್ತಾನಿ ಗಳಿಂದ ವಿಮೋಚನೆ ಬಯಸಿ, ಭಾರತದ ಸಹಾಯದಿಂದ ಬಾಂಗ್ಲಾ ವಿಮೋಚನೆಗೆ ಕಾರಣವಾಗಿದ್ದು ಸ್ಮರಣಾರ್ಹ) ನೇರ ಕಾರ್ಯಾಚರಣೆಯ ದಿನದಂದು ನಡೆದ ಹಿಂಸಾಚಾರವು ದೇಶದ ವಿಭಜನೆಯ ಪ್ರಕ್ರಿಯೆಗೆ ವೇಗವನ್ನು ನೀಡಿತು.

ಕಲ್ಕತ್ತಾದಲ್ಲಿ ನಡೆದ ಹತ್ಯಾಕಾಂಡವು ದೇಶಾದ್ಯಂತ ಕೋಮು ಗಲಭೆಗಳನ್ನು ಪ್ರಚೋದಿಸಿತು. ಬಿಹಾರ, ನೌಖಾಲಿ, ಮತ್ತು ಇತರ ಭಾಗಗಳಲ್ಲಿಯೂ ಹಿಂಸಾಚಾರ ಭುಗಿಲೆದ್ದಿತು. ಹಿಂದೂ-ಮುಸ್ಲಿಂ ಸಂಬಂಧಗಳು ತೀರಾ ಹದ ಗೆಟ್ಟವು, ಮತ್ತು ಶಾಂತಿಯುತ ಸಹಬಾಳ್ವೆ ಅಸಾಧ್ಯ ಎಂಬ ಭಾವನೆ ಬಲಗೊಂಡಿತು. ಈ ಘಟನೆಗಳು ಭಾರತದ ಸ್ವಾತಂತ್ರ್ಯಕ್ಕೆ ಅನಿವಾರ್ಯವಾಗಿತ್ತು, ಆದರೆ ದೇಶದ ವಿಭಜನೆ ಅನಿವಾರ್ಯ ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟವು.

ಕೋಲ್ಕತ್ತಾದ ಆಯ್ಕೆಗೆ ಕಾರಣ: ಕೋಲ್ಕತ್ತಾ ಬ್ರಿಟಿಷ್ ಭಾರತದ ರಾಜಧಾನಿಯಾಗಿದ್ದ ಕಾರಣ, ಅದು ವಾಣಿಜ್ಯ ಮತ್ತು ರಾಜಕೀಯವಾಗಿ ಒಂದು ಪ್ರಮುಖ ಕೇಂದ್ರವಾಗಿತ್ತು. ಯಾವುದೇ ಬೃಹತ್ ಪ್ರತಿ ಭಟನೆಯು ಈ ನಗರದಲ್ಲಿ ಸಂಭವಿಸಿದರೆ ಅದು ಇಡೀ ಬ್ರಿಟಿಷ್ ಆಡಳಿತವನ್ನು ಮತ್ತು ಅಂತರ ರಾಷ್ಟ್ರೀಯ ಸಮುದಾಯವನ್ನು ಆಕರ್ಷಿಸುತ್ತದೆ ಎಂದು ಲೀಗ್ ನಾಯಕರು ತಿಳಿದಿದ್ದರು.

ಒಂದು ವೇಳೆ ಇಲ್ಲಿ ಹಿಂಸಾಚಾರ ನಡೆದರೆ, ಅದು ದೇಶದ ಉಳಿದ ಭಾಗಗಳ ಮೇಲೂ ಪರಿಣಾಮ ಬೀರುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿತ್ತು. ವಿಭಜನೆ ಪೂರ್ವದ ಯುಗ: ಬಂಗಾಳದಲ್ಲಿ ಕೋಮು ಉದ್ವಿಗ್ನತೆಗಳು ಆಳವಾದ ಬೇರುಗಳನ್ನು ಹೊಂದಿವೆ, ಇದು ಬ್ರಿಟಿಷ್ ವಸಾಹತುಶಾಹಿ ನೀತಿಗಳಿಂದ ಗಣನೀಯವಾಗಿ ಉಲ್ಬಣಗೊಂಡಿದೆ.

1905ರಲ್ಲಿ ಬಂಗಾಳದ ವಿಭಜನೆಯು, ಪ್ರಾಂತ್ಯವನ್ನು ಧಾರ್ಮಿಕ ಮಾರ್ಗಗಳಲ್ಲಿ ವಿಂಗಡಿಸಿತು, ಇದು ವಿಭಜಿಸಿ ಮತ್ತು ಆಳುವ ತಂತ್ರಕ್ಕೆ ಪ್ರಮುಖ ಉದಾಹರಣೆಯಾಗಿದೆ. ವ್ಯಾಪಕ ಪ್ರತಿಭಟನೆ ಗಳಿಂದಾಗಿ 1911ರಲ್ಲಿ ವಿಭಜನೆಯನ್ನು ರದ್ದುಗೊಳಿಸಲಾಗಿದ್ದರೂ, ಇದು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದೀರ್ಘಕಾಲದ ಅಪನಂಬಿಕೆ ಮತ್ತು ದ್ವೇಷದ ಪರಂಪರೆಯನ್ನು ಉಳಿಸಿತು.

ಕಮ್ಯುನಿಸ್ಟ್ ಆಡಳಿತದಲ್ಲಿ: ಪ.ಬಂಗಾಳದ ಇತಿಹಾಸದಲ್ಲಿ ಕಮ್ಯೂನಿಸ್ಟ್ ಆಡಳಿತದಲ್ಲಿ ಹಿಂದೂ ಗಳ ವಿರುದ್ಧ ‘ಬಿಜೋನ್ ಸೇತು ಹತ್ಯಾಕಾಂಡ’ ಎಂದು ಕರೆಯಲ್ಪಡುವ ಆನಂದ ಮಾರ್ಗ ಸನ್ಯಾಸಿ ಗಳ ಕೊಲೆಯು ಕಮ್ಯೂನಿಸ್ಟ್ ಆಡಳಿತದಲ್ಲಿ ಹಿಂದೂಗಳನ್ನು ದಮನಿಸಲು ನಡೆದಿದ್ದು, 1982ರ ಏಪ್ರಿಲ್ 30 ರಂದು ಕೋಲ್ಕತ್ತಾದಲ್ಲಿ ಆನಂದ ಮಾರ್ಗ ಧಾರ್ಮಿಕ ಸಂಸ್ಥೆಗೆ ಸೇರಿದ 17 ಸನ್ಯಾಸಿಗಳು ಮತ್ತು ಸನ್ಯಾಸಿನಿಯರನ್ನು ಸಾಮೂಹಿಕವಾಗಿ ಕೊಲೆ ಮಾಡಲಾದ ಘಟನೆಯಾಗಿದೆ.

ಕಮ್ಯೂನಿಸ್ಟ್ ಗೂಂಡಾಗಳ ಗುಂಪುಗಳು, ಸನ್ಯಾಸಿಗಳನ್ನು ಅಮಾನವೀಯವಾಗಿ ಥಳಿಸಿ, ಅವರ ಮೇಲೆ ಸೀಮೆಎಣ್ಣೆ ಸುರಿದು ಜೀವಂತವಾಗಿ ಬೆಂಕಿ ಹಚ್ಚಿದ್ದು ಘಟನೆಯ ಕ್ರೂರತೆಗೆ ಸಾಕ್ಷಿ. ಘಟನೆ ಯು ಸಾವಿರಾರು ಜನರ ಸಮ್ಮುಖದಲ್ಲಿ ನಡೆದರೂ, ಯಾವುದೇ ಪ್ರಮುಖ ವ್ಯಕ್ತಿಗಳನ್ನು ಬಂಧಿಸ ಲಿಲ್ಲ ಅಥವಾ ತಕ್ಷಣದ ಕ್ರಮ ತೆಗೆದುಕೊಳ್ಳಲಿಲ್ಲ. ಈ ಘಟನೆಯನ್ನು ಕೇವಲ ರಾಜಕೀಯ ಪ್ರೇರಿತ ಹಿಂಸಾಚಾರವೆಂದು, ಕಮ್ಯುನಿಸ್ಟ್ ಆಡಳಿತದ ಕ್ರೂರತೆಯನ್ನು ಹೊರಜಗತ್ತು ಹೀಗೆ ವ್ಯಾಖ್ಯಾನಿಸಿತೇ ಹೊರತು ಅಲ್ಲಿನ ಹಿಂಸಾಚಾರವನ್ನು ಪ್ರಮುಖವಾಗಿ ಪರಿಗಣಿಸಲೇ ಇಲ್ಲ. .

ಇತ್ತೀಚಿನ ಘಟನೆಗಳು: 2011ರಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ತೃಣ ಮೂಲ ಕಾಂಗ್ರೆಸ್ (ಟಿಎಂಸಿ) ಅಧಿಕಾರಕ್ಕೆ ಬಂದಾಗಿನಿಂದ, ಹಿಂದೂಗಳ ಮೇಲಿನ ದೌರ್ಜನ್ಯದ ಆರೋಪಗಳು ಪ್ರಮುಖ ರಾಜಕೀಯ ಸಂಘರ್ಷದ ಕೇಂದ್ರಬಿಂದುವಾಗಿವೆ. ಬಿಜೆಪಿ ಟಿಎಂಸಿ ನಡು ವಿನ ರಾಜಕೀಯ ವಿರೋಧ ಎಂದು ಹೊರಜಗತ್ತಿಗೆ ಕಂಡರೂ ಬಂಗಾಲದಲ್ಲಿ ಇಂದಿಗೂ ಮುಸ್ಲಿಂ ಲೀಗ್ ನ ಮನಸ್ಥಿತಿಯೇ ಇನ್ನೂ ಕೂಡ ಇದೆ ಎಂಬುದು ಸ್ಪಷ್ಟ.

2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗಳ ನಂತರ, ವ್ಯಾಪಕ ಹಿಂಸಾಚಾರ ವರದಿ ಯಾಗಿದೆ. ಮುರ್ಷಿದಾಬಾದ್‌ನಂತಹ ಜಿಲ್ಲೆಗಳಲ್ಲಿ ಹಲವಾರು ಕೋಮು ಹಿಂಸಾಚಾರದ ಘಟನೆ ಗಳು ವರದಿಯಾಗಿವೆ. ಇತ್ತೀಚಿನ ಘಟನೆಯಲ್ಲಿ ಕೋಲ್ಕತ್ತಾ ಹೈಕೋರ್ಟ್ ನೇಮಿಸಿದ ಸತ್ಯಶೋಧನಾ ಸಮಿತಿಯು ಹಿಂದೂಗಳು ಮತ್ತು ಅವರ ದೇವಾಲಯಗಳನ್ನು ಗುರಿಯಾಗಿಸ ಲಾಗಿತ್ತು ಎಂಬುದಾಗಿ ತಿಳಿಸಿದೆ.

ಸಂದೇಶ್ ಖಾಲಿ ಪ್ರಕರಣದಲ್ಲಿ ಮಹಿಳೆಯರನ್ನು ಧರ್ಮದ ಆಧಾರದ ಮೇಲೆ ಹಿಂಸಿಸಲಾಗಿದ್ದು ಟಿಎಂಸಿ ಬರ್ಬರತೆಗೆ ಸಾಕ್ಷಿ. ಸ್ವಾತಂತ್ರ ಪೂರ್ವದಿಂದ ಇಲ್ಲಿಯವರೆಗೆ, ಕಮ್ಯೂನಿಸ್ಟ್ ಸರ್ಕಾರದಿಂದ, ಟಿಎಂಸಿವರೆಗೆ, ಜ್ಯೋತಿ ಬಸು ಅವರಿಂದ ಹಿಡಿದು ಮಮತಾ ದೀದಿ ವರೆಗೆ, ಬಂಗಾಲದಲ್ಲಿ ನಡೆದಿದ್ದು ಇತಿಹಾಸ, ಮಾನವೀಯತೆ ಕ್ಷಮಿಸದ ಘಟನೆಗಳು.

ಈ ಘಟನೆಗಳು ಯಾವುದೇ ಮಾನವಹಕ್ಕು ಹೋರಾಟಗಾರರ ಹೋರಾಟಗಳಲ್ಲಿ, ಮಾಧ್ಯಮಗಳ ಚರ್ಚೆಗಳಲ್ಲಿ, ಅಂತರಾಷ್ಟ್ರೀಯ ವೇದಿಕೆಗಳಲ್ಲಿನ ಸಂವಾದಗಳಲ್ಲಿ ಗಮನಕ್ಕೆ ಬರುವುದಿಲ್ಲ. ಒಂದು ಕಾಲದಲ್ಲಿ ಭಾರತದ ರಾಜಧಾನಿ ಮತ್ತು ಬೌದ್ಧಿಕ ಚಳುವಳಿಗಳ ಕೇಂದ್ರವಾಗಿದ್ದ ಕೋಲ್ಕತ್ತಾ (ಕಲ್ಕತ್ತಾ), ಬರೀ ಒಂದು ನಗರವಲ್ಲ, ಇದು ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯನ್ನು ರೂಪಿಸಿದ ಶಕ್ತಿ ಕೇಂದ್ರ.

ವೇದಾಂತದ ಪುನರುಜ್ಜೀವನ, ಹಿಂದೂ ನವೋದಯ ಮತ್ತು ರಾಷ್ಟ್ರೀಯತೆಯ ಮಹಾಕಾವ್ಯಗಳಿಗೆ ಬಂಗಾಳವೇ ಜನ್ಮ ನೀಡಿದ ಸ್ಥಳ. ಇಲ್ಲಿಂದಲೇ ಮಹಾತ್ಮರಾದ ಶ್ರೀ ರಾಮಕೃಷ್ಣ ಪರಮಹಂಸರು ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸಿದರು, ಅವರ ಶಿಷ್ಯರಾದ ಸ್ವಾಮಿ ವಿವೇಕಾನಂದರು ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದರು. ಅರವಿಂದೋ ಘೋಷ್ ಅವರಂತಹ ತತ್ವಜ್ಞಾನಿಗಳು ಮತ್ತು ರಾಷ್ಟ್ರೀಯವಾದಿಗಳು ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕನ್ನು ನೀಡಿ ದರು.

ಸುಭಾಷ್ ಚಂದ್ರ ಬೋಸ್ ಅವರ ’ಆಜಾದ್ ಹಿಂದ್ ಫೌಜ್’ ಭಾರತೀಯರಿಗೆ ಹೊಸ ಭರವಸೆ ಮೂಡಿ ಸಿತು. ಇಲ್ಲಿಂದಲೇ, ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ ಮತ್ತು ರಾಷ್ಟ್ರೀಯ ಗೀತೆ ’ವಂದೇ ಮಾತರಂ’ ಎರಡೂ ಸೃಷ್ಟಿಯಾದವು. ಇದರ ಜೊತೆಗೆ, ಬಾಂಗ್ಲಾದೇಶದ ರಾಷ್ಟ್ರಗೀತೆ ಕೂಡ ಬಂಗಾ ಳದ ನೆಲದ ರಚನೆಯಾಯಿತು. ಈ ವಿಶಿಷ್ಟ ಹೆಗ್ಗಳಿಕೆ ಬೇರೆ ಯಾವುದೇ ಪ್ರದೇಶಕ್ಕಿಲ್ಲ.

ಆದರೆ, ಇತ್ತೀಚಿನ ದಿನಗಳಲ್ಲಿ ರಾಜ್ಯದ ಸಾಂಸ್ಕೃತಿಕ ಪರಂಪರೆ ಮಸುಕಾಗುತ್ತಿದೆ. ದಿ ಬೆಂಗಾಲ್ ಫೈಲ್ಸ್ ಚಿತ್ರವು ಈ‌ ಎಲ್ಲ ಘಟನೆಗಳಿಗೆ ಕನ್ನಡಿ ಹಿಡಿಯಲಿದೆ. ಚಿತ್ರದಲ್ಲಿ ಒಂದು ಡೈಲಾಗ್‌ಗೆ ತಕ್ಕಂತೆ ವ್ಯಾಖ್ಯಾನಿಸುವುದಾದರೆ, ಬಂಗಾಲ, ಭಾರತದ ಲೈಟ್ ಹೌಸ್ ಇದ್ದಂತೆ. ಹೌದು, ನಿಜ. ಬಂಗಾಲವು ಭಾರತಕ್ಕೆ ಬೆಳಕು ನೀಡಿದ ಪ್ರದೇಶ. ಅಲ್ಲಿನ ಘಟನೆಗಳು ಭಾರತದ ಭವಿಷ್ಯತ್ತಿಗೆ ದಿಕ್ಸೂಚಿ.