ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿ ಗಾನರಸಂ ಫಣಿಃ...

ಸಂತರು ಭಗವಂತನ ಲೀಲೆಗಳನ್ನು ಬಣ್ಣಿಸುವುದೇ ಹಾಗೆ. ನಮಗದು ಉತ್ಪ್ರೇಕ್ಷೆಯಾಗಿ ತೋರ ಬಹುದು, ಆದರೆ ಅವರು ಅನುಭವ ಮತ್ತು ಅನುಭಾವಗಳಿಗೆ ದಕ್ಕಿದ್ದನ್ನೇ ಹೇಳಿರುತ್ತಾರೆ. ಕೃಷ್ಣನ ವೇಣುಗಾನವು ಸಕಲ ಚರಾಚರ ಜೀವಜಗತ್ತಿನ ಮೇಲೆ ಅಂಥದೊಂದು ಪರಿಣಾಮ ಬೀರಿದ್ದಿರಬಹುದು. ಅದು ನಮ್ಮ ಅನುಭವಕ್ಕೆ ದಕ್ಕಲಿಲ್ಲ ಅಂದಮಾತ್ರಕ್ಕೇ ಅಲ್ಲಿ ಹಾಗೆ ಆಗಿರಲಿಕ್ಕೇ ಸಾಧ್ಯ ವಿಲ್ಲ ಎಂದುಕೊಳ್ಳುವುದು ತಪ್ಪಾಗುತ್ತದೆ.

ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿ ಗಾನರಸಂ ಫಣಿಃ...

ತಿಳಿರು ತೋರಣ

srivathsajoshi@yahoo.com

ಅಜಿತ್ ಕಡಕಡೆ ಅವರು ಹಾಡಿ ಜನಪ್ರಿಯವಾಗಿರುವ ಪ್ರಸಿದ್ಧ ಮರಾಠಿ ಅಭಂಗವೊಂದರಲ್ಲಿ ಸಂತ ಭಾನುದಾಸರು ಹೀಗೆ ಬಣ್ಣಿಸಿದ್ದಾರೆ: “ವೃಂದಾವನದಲ್ಲಿ ಕೃಷ್ಣನ ವೇಣುಗಾನ ಕೇಳಿ ಬರುತ್ತಿದೆ. ಯಾರಿಗಾಗಿ ನುಡಿಸುತ್ತಿರುವುದೋ ತಿಳಿಯದು. ಗೋವರ್ಧನ ಗಿರಿಯ ತುಂಬೆಲ್ಲ ಅದು ಅನುರಣಿಸು ತ್ತಿದೆ.

ವೇಣುಗಾನದಿಂದ ಉಂಟಾದ ಸಂತಸಕ್ಕೆ ನವಿಲು ಗರಿಗೆದರಿ ನರ್ತಿಸುತ್ತಿದೆ. ಆಗ ಯಾದವರಾಜ ಕೃಷ್ಣನೇ ನನ್ನತ್ತ ಪ್ರೀತಿಯಿಂದ ನೋಡುತ್ತಿದ್ದಾನೇನೋ ಎಂದೆನಿಸುತ್ತದೆ. ಎಲ್ಲರೂ ಭಾವ ಪರವಶ ರಾಗಿದ್ದಾರೆ. ಮಗುವಿಗೆ ಹಾಲೂಡಿಸುವುದನ್ನು ಮರೆತ ತಾಯಿಯು ಗಾನಾಮೃತವನ್ನು ಸವಿಯುವು ದರಲ್ಲಿ ಮಗ್ನಳಾಗಿದ್ದಾಳೆ.

ಹುಲ್ಲು ಮೇಯುವುದನ್ನು ಮರೆತ ಹಸು ಸಂಗೀತಕ್ಕೆ ಕಿವಿಯಾನಿಸಿ ನಿಂತಿದೆ. ಅದರ ಪಕ್ಕದಲ್ಲೇ ಹುಲಿಯೂ ಇದೆ, ಹಸುವಿನ ಮೇಲೆ ಆಕ್ರಮಣ ಮಾಡಲಿಕ್ಕಲ್ಲ, ಸುಮ್ಮನೆ ಕುಳಿತುಕೊಂಡು ಕೊಳಲ ದನಿ ಆಲಿಸಲಿಕ್ಕೆ! ಪಕ್ಷಿಗಳೆಲ್ಲ ಸ್ತಬ್ಧವಾಗಿ ವಿರಮಿಸುತ್ತಿರುವಂತೆ ಕಾಣುತ್ತಿದೆ. ಜೀವಿಗಳಲ್ಲಿ ಸಹಜ ವಾಗಿರುವ ಪರಸ್ಪರ ವೈರತ್ವಭಾವವೇ ಮಾಯವಾಗಿದೆ.

ಶೇಷ, ಕೂರ್ಮ, ವರಾಹರೆಲ್ಲ ಚಕಿತರಾಗಿ ನಿಂತಿದ್ದಾರೆ. ಯಮುನೆಯಲ್ಲಿ ನೀರಿನ ಪ್ರವಾಹ ನಿಶ್ಚಲ ವಾಗಿದೆಯೇನೋ ಎನ್ನುವಷ್ಟು ನಿಧಾನವಾಗಿದೆ. ಅಷ್ಟೇಕೆ, ಸಮಗ್ರ ಸೌರಮಂಡಲದ ಚಲನೆಯೇ ನಿಂತುಹೋಗಿರುವಂತೆ ಕಾಣುತ್ತಿದೆ. ಇದೆಲ್ಲದಕ್ಕೆ ಕಾರಣವಾದ ಮುರಲಿಯ ಮಧುರ ಮಂಜುಳ ನಿನಾದವು ಅಲೆಅಲೆಯಾಗಿ ತೇಲಿ ಬರುತ್ತಿದೆ.

ಇದನ್ನೂ ಓದಿ: Srivathsa Joshi Column: ಹಂಚಿಕೆಯ ಪಂಚ-ತಂತ್ರದಲಿ ಪಾಲಿಗೆ ಬಂದಿದ್ದೇ ಪಂಚಾಮೃತ !

ಜತೆಯಲ್ಲಿ ಪ್ರಕೃತಿಯೇ ತಲೆದೂಗುತ್ತ ಹೆಜ್ಜೆಹಾಕುತ್ತಿರುವಂತೆ ರುಣುಝುಣು ಗೆಜ್ಜೆನಾದ. ವಿಮಾನ ದಲ್ಲಿ ಕುಳಿತ ದೇವತೆಗಳು ಇದನ್ನೆಲ್ಲ ಆಕಾಶದಿಂದಲೇ ನೋಡಿ ಸ್ತುತಿಸುತ್ತಿದ್ದಾರೆ. ಭಾನುದಾಸನಿಗೆ ಪ್ರೇಮಭಕ್ತಿಯ ಆಶೀರ್ವಾದವಾಗಿದೆ!".

ಸಂತರು ಭಗವಂತನ ಲೀಲೆಗಳನ್ನು ಬಣ್ಣಿಸುವುದೇ ಹಾಗೆ. ನಮಗದು ಉತ್ಪ್ರೇಕ್ಷೆಯಾಗಿ ತೋರ ಬಹುದು, ಆದರೆ ಅವರು ಅನುಭವ ಮತ್ತು ಅನುಭಾವಗಳಿಗೆ ದಕ್ಕಿದ್ದನ್ನೇ ಹೇಳಿರುತ್ತಾರೆ. ಕೃಷ್ಣನ ವೇಣುಗಾನವು ಸಕಲ ಚರಾಚರ ಜೀವಜಗತ್ತಿನ ಮೇಲೆ ಅಂಥದೊಂದು ಪರಿಣಾಮ ಬೀರಿದ್ದಿರ ಬಹುದು. ಅದು ನಮ್ಮ ಅನುಭವಕ್ಕೆ ದಕ್ಕಲಿಲ್ಲ ಅಂದಮಾತ್ರಕ್ಕೇ ಅಲ್ಲಿ ಹಾಗೆ ಆಗಿರಲಿಕ್ಕೇ ಸಾಧ್ಯ ವಿಲ್ಲ ಎಂದುಕೊಳ್ಳುವುದು ತಪ್ಪಾಗುತ್ತದೆ. ಆಶ್ಚರ್ಯವೆಂದರೆ ಕೃಷ್ಣನ ವೇಣುಗಾನದ ಮೋಡಿ ಯನ್ನು ಬಣ್ಣಿಸುವ ‘ವೃಂದಾವನೀ ವೇಣು ವಾಜೆ...’ ಅಭಂಗವನ್ನು ಅಜಿತ್ ಕಡಕಡೆಯವರ ಧ್ವನಿ ಯಲ್ಲಿ ಕೇಳುವಾಗ ನಮಗೂ ಒಂದು ರೀತಿಯ ಭಾವಪರವಶತೆ ಉಂಟಾಗಿರುತ್ತದೆ.

ವೃಂದಾವನದಲ್ಲಾದಷ್ಟು ಅಲ್ಲದಿದ್ದರೂ ಸೊನ್ನೆಯಂತೂ ಖಂಡಿತ ಅಲ್ಲ. ನಾವು ಏಕಾಗ್ರತೆ ಕೊಟ್ಟಷ್ಟೂ ನಮಗೆ ಹೆಚ್ಚು ಸಿದ್ಧಿಸಿರುತ್ತದೆ. ಮತ್ತು ಇದು ಅಜಿತ್ ಕಡಕಡೆ ಎಂಬ ಒಬ್ಬ ಗಾಯಕ ನಿಗಾಗಲೀ ಭಾನುದಾಸ ವಿರಚಿತ ಆ ಒಂದು ಅಭಂಗಕ್ಕಾಗಲೀ ಸೀಮಿತವಾದ ಮಾತಲ್ಲ. ಸಂಗೀತ ಕ್ಕಿರುವ ದಿವ್ಯಶಕ್ತಿಯೇ ಅದು.

62 R

ನಾವು ಅಷ್ಟಿಷ್ಟು ವಿದ್ಯೆಬುದ್ಧಿ ಕಲಿತು ಪ್ರೌಢರೆನಿಸಿಕೊಂಡವರಾದರೋ ನಾವು ಕೇಳುವ ಸಂಗೀತದ ರಾಗವನ್ನು ಗುರುತಿಸಿ ಆಸ್ವಾದಿಸುವುದನ್ನೋ, ಹಾಡುಗಾರಿಕೆ ಅಂತಾದರೆ ಸಾಹಿತ್ಯದ ಅರ್ಥ ಮತ್ತು ಭಾವಗಳನ್ನು ಗ್ರಹಿಸುವುದನ್ನೋ ಮಾಡಿ ಇನ್ನೂ ಹೆಚ್ಚಿನ ಆನಂದ ತಂದುಕೊಳ್ಳುತ್ತೇವೆ ಅಂದು ಕೊಳ್ಳೋಣ. ಆದರೆ ಏನೂ ಅರಿಯದ ಮುಗ್ಧ ಕಂದಮ್ಮಗಳು, ಪಶು-ಪಕ್ಷಿಗಳು, ಸರೀಸೃಪಗಳು, ಕೊನೆಗೆ ಸಸ್ಯಗಳು ಕೂಡ ಸಂಗೀತದ ಮೋಡಿಗೆ ಒಳಗಾಗುತ್ತವೆಂದರೆ ಅದು ಸಂಗೀತದ ದಿವ್ಯಶಕ್ತಿ ಯಲ್ಲದೆ ಮತ್ತಿನ್ನೇನು!

ಸಂಗೀತದ ಮಾಧುರ್ಯವನ್ನು ಶಿಶುಗಳು ಪಶುಗಳು ಸರ್ಪಗಳು ಕೂಡ ಸವಿಯಬಲ್ಲವು ಎಂಬರ್ಥದ ‘ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿ ಗಾನರಸಂ ಫಣಿಃ’ ಸಂಸ್ಕೃತ ಸೂಕ್ತಿಯೇ ಇದೆ. ಸಂಗೀತ ಪ್ರಧಾನ ‘ಶಂಕರಾಭರಣಂ’ ಚಿತ್ರದ ಆರಂಭದಲ್ಲಿ ನಿರ್ದೇಶಕ ಕೆ.ವಿಶ್ವನಾಥ್ ಅದನ್ನು ಪ್ರಾಸಂಗಿಕವಾಗಿ ತೆಲುಗು ಅನುವಾದದ ಸಹಿತ ಪ್ರಸ್ತಾವಿಸಿದ್ದೂ ಇದೆ.

ಶಿಶುರ್ವೇತ್ತಿ ಎಂದೊಡನೆ ನನಗೆ ಎರಡು ಸ್ವಾರಸ್ಯಕರ ಘಟನೆಗಳು ನೆನಪಾಗುತ್ತವೆ. ಶಿಶುಗಳಿಗೆ ಸಂಬಂಧಿಸಿದವೇ. ಮೊದಲನೆಯದು, ನನ್ನ ಅಣ್ಣನ ಮಗಳು ದೀಪಿಕಾ ಎರಡು ಅಥವಾ ಮೂರು ವರ್ಷದವಳಿದ್ದಾಗ ದೂರದರ್ಶನದಲ್ಲಿ ಆಗಿನ ಕಾಲದಲ್ಲಿ ಹಿಂದಿ ಮತ್ತು ಇಂಗ್ಲಿಷ್ ರಾಷ್ಟ್ರೀಯ ವಾರ್ತೆಗಳ ಆರಂಭದ ಸಿಗ್ನೇಚರ್ ಟ್ಯೂನ್ ಕೇಳಿ ಮಂತ್ರಮುಗ್ಧಳಾಗುತ್ತಿದ್ದ ಪರಿ.

ನನ್ನಣ್ಣನ ಕುಟುಂಬದವರು ಆಗ ದೆಹಲಿವಾಸಿಗಳಾಗಿದ್ದರು ಮತ್ತು ನನ್ನ ಮೊದಲ ಉದ್ಯೋಗದ ನಿಮಿತ್ತ ಕೆಲ ಕಾಲ ನಾನೂ ಅವರ ಮನೆಯಲ್ಲಿದ್ದುಕೊಂಡೇ ಕೆಲಸಕ್ಕೆ ಹೋಗುತ್ತಿದ್ದೆ. ಅಂದ ಹಾಗೆ ಅದು ಟಿವಿಯಲ್ಲಿ ದೂರದರ್ಶನದ ಎರಡು ಚಾನೆಲ್‌ಗಳು ಮಾತ್ರ ಬರುತ್ತಿದ್ದ ಜಮಾನಾ. ದೀಪಿಕಾ ಸಂಜೆ ಹೊತ್ತು ಏನೇ ಹಠ ಮಾಡುತ್ತಿದ್ದರೂ, ಅಥವಾ ರಾತ್ರಿ ಊಟ ಮಾಡಿಸಬೇಕಿದ್ದರೆ ರಂಪ ಮಾಡುತ್ತಿದ್ದರೂ ದೂರದರ್ಶನದಲ್ಲಿ ವಾರ್ತೆಗಳ ಸಿಗ್ನೇಚರ್ ಟ್ಯೂನ್ ಆರಂಭವಾದೊಡನೆ ಒಮ್ಮೆಲೇ ಗಪ್‌ಚುಪ್ ಆಗುವಳು.

ಎಲ್ಲೇ ಇದ್ದರೂ ಟಿವಿಯ ಮುಂದೆ ಬಂದು ನಿಲ್ಲುವಳು. 15-20 ಸೆಕೆಂಡುಗಳ ಆ ಸಂಗೀತವನ್ನು ಮುಖದಲ್ಲಿ ಮಂದಹಾಸದೊಡನೆ, ಕಣ್ಣುಗಳನ್ನು ಅರಳಿಸಿಕೊಂಡು ತಲ್ಲೀನಳಾಗಿ ಕೇಳುವಳು. ಇಷ್ಟ ರವರೆಗೆ ಹಠ ರಂಪ ಮಾಡುತ್ತಿದ್ದ ಹುಡುಗಿ ಇವಳೇನಾ ಎಂದು ನಮಗೇ ಬೆರಗಾಗುತ್ತಿತ್ತು. ಸಿಗ್ನೇಚರ್ ಟ್ಯೂನ್ ಮುಗಿದೊಡನೆ ಮತ್ತೆ ಅಳು ರಂಪ ನಖ್ರಾಗಳು ಮುಂದುವರಿಯುತ್ತಿದ್ದವು. ಒಂದೆರಡು ದಿನವಲ್ಲ, ಇದು ಅವಳ ನಿತ್ಯದ ಪರಿಪಾಠವೇ ಆಗಿತ್ತು.

ಬಹುಶಃ ಇಂಥದನ್ನು ನೀವೂ ನಿಮ್ಮ ಅಥವಾ ಬಂಧುಮಿತ್ರರ ಮನೆಗಳಲ್ಲಿ ಪುಟ್ಟ ಮಕ್ಕಳ ವಿಷಯ ದಲ್ಲಿ, ರೇಡಿಯೊ/ಟಿವಿ ಕಾರ್ಯಕ್ರಮಗಳ ಶೀರ್ಷಿಕೆ ಸಂಗೀತದ ವಿಷಯದಲ್ಲಿ, ಗಮನಿಸಿರ ಬಹುದು. ಎರಡನೆಯದು ಇನ್ನೂ ಸ್ವಾರಸ್ಯಕರ. ಇದು ನಾನು ಪ್ರತ್ಯಕ್ಷ ಕಂಡಿದ್ದಲ್ಲ ವಾದರೂ ಸ್ವಲ್ಪ ಮಟ್ಟಿಗೆ ನನ್ನ ಪಾತ್ರವೂ ಇದರಲ್ಲಿದೆ. ಸುಮಾರು 15 ವರ್ಷಗಳ ಹಿಂದಿನ ಸಂಗತಿ. ಡಾ.ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೊಫೋನ್ ಮತ್ತು ಪ್ರವೀಣ ಗೋಡ್ಖಿಂಡಿಯವರ ಕೊಳಲು ಜುಗಲ್ಬಂದಿಯಲ್ಲಿ ‘ಭಾಗ್ಯ ದ ಲಕ್ಷ್ಮಿ ಬಾರಮ್ಮ...’ ಕೀರ್ತನೆಯ ವಿಡಿಯೊವನ್ನು ನಾನೊಮ್ಮೆ ಫೇಸ್‌ಬುಕ್ ನಲ್ಲಿ ಹಂಚಿ ಕೊಂಡಿದ್ದೆ.

ಬೆಂಗಳೂರಲ್ಲಿ ಈ ಹಿಂದೆ ನಡೆದಿದ್ದ ‘ರಾಗ-ರಂಗ್’ ಸಂಗೀತ ಕಾರ್ಯಕ್ರಮದ ಸಮಾರೋಪ ಪ್ರಸ್ತುತಿ ಅದು. ಆಬಾಲವೃದ್ಧರನ್ನೂ ಆಕರ್ಷಿಸುವ, ಎಂಥವರಿಗೂ ಮೈನವಿರೇಳುವಂತೆ ಮಾಡುವ ಅಮೋಘ ಸಂಗೀತ. ಆ ಫೇಸ್‌ಬುಕ್ ಪೋಸ್ಟನ್ನು ಗಮನಿಸಿದ ಬೆಂಗಳೂರಿನ ಕನ್ನಡತಿ ಸುಮಾ ಅಮೃತೇಶ್ ತಮ್ಮ ಲ್ಯಾಪ್ ಟಾಪನ್ನು ಟಿವಿಗೆ ಕನೆಕ್ಟ್ ಮಾಡಿ ಆ ವಿಡಿಯೊ ಪ್ಲೇ ಮಾಡಿದರಂತೆ. ಅವರ ಮಗ ಪ್ರಣವ, ಆಗಿನ್ನೂ ಎರಡು ವರ್ಷಗಳ ತುಂಟ, ಅದೆಲ್ಲಿದ್ದನೋ ಟಿವಿ ಮುಂದೆ ಬಂದು ಪದ್ಮಾಸನ ಹಾಕಿ ಕುಳಿತನಂತೆ. ತದೇಕಚಿತ್ತದಿಂದ ಆ ವಿಡಿಯೊವನ್ನು ನೋಡಿದನಂತೆ.

ಆ ಕ್ಷಣದಲ್ಲೇ ಅವನು ಕದ್ರಿ ಮ್ಯಾಜಿಕ್‌ಗೆ (ಮ್ಯೂಸಿಕ್‌ಗೆ) ಫಿದಾ ಆಗಿಬಿಟ್ಟ! ಆಮೇಲೆ ದಿನಾ ಆ ವಿಡಿಯೊವನ್ನು ಮತ್ತೆಮತ್ತೆ ಪ್ಲೇ ಮಾಡುವಂತೆ ಅಮ್ಮನಿಗೆ ಒತ್ತಾಯ. ಊಟದ ಹೊತ್ತಿಗಂತೂ ಬೇಕೇಬೇಕು. ಆಮೇಲೆ ಅವನಿಗೆ ಒಂದು ಸ್ಯಾಕ್ಸೊ-ನ್ ಆಟಿಕೆಯನ್ನೂ ತಂದುಕೊಟ್ಟರಂತೆ. ಹಾಲಿ ನವನ ಲೆಕ್ಕಾಚಾರದ ಪ್ಲಾಸ್ಟಿಕ್ ಬಿಲ್ಲೆಗಳು ಮನೆಯಲ್ಲಿದ್ದುದರಲ್ಲಿ ಕೆಂಪಗಿನದೊಂದನ್ನು ಹಣೆಗೆ ಹಚ್ಚಿಕೊಂಡು ಪ್ರಣವ ತಾನೇ ಕದ್ರಿ ಗೋಪಾಲನಾಥ್ ಎಂದು ನಟಿಸುತ್ತ ಸ್ಯಾಕ್ಸೊಫೋನ್ ಆಟಿಕೆ ಯನ್ನು ಊದುತ್ತಿದ್ದನಂತೆ.

ಅಮ್ಮನಿಂದ ಟಿವಿಯಲ್ಲಿ ಕದ್ರಿ ಗೋಪಾಲನಾಥ್ ಸ್ಯಾಕ್ಸೊಫೋನ್ ವಾದನದ ಬೇರೆ ಬೇರೆ ವಿಡಿಯೊ ಗಳನ್ನು ಪ್ಲೇ ಮಾಡಿಸಿ ತಾನು ಟಿವಿಯ ಎದುರಿಗೆ ಪದ್ಮಾಸನ ಹಾಕಿ ಕುಳಿತು ಅಭ್ಯಾಸ ಮಾಡು ತ್ತಿದ್ದನಂತೆ. ಟಿವಿಯಲ್ಲಿ ಆಗದಿದ್ದರೆ ಐಪ್ಯಾಡ್‌ನಲ್ಲಾದರೂ ಹಾಕಿಕೊಡು ಎಂದು ದುಂಬಾಲು ಬೀಳುತ್ತಿದ್ದನಂತೆ. ದ್ರೋಣಾಚಾರ್ಯರಿಗೊಬ್ಬ ಏಕಲವ್ಯನಿದ್ದಂತೆ ಕದ್ರಿಯವರಿಗೆ ಒಬ್ಬ ಪ್ರಣವ. ಅಂಥದೊಂದು ಹೆಸರಿರುವುದಕ್ಕೂ ಈ ಪರಿಯಲ್ಲಿ ನಾದೋಪಾಸಕ ಆಗಿರುವುದಕ್ಕೂ ಸರಿಯಾ ಯ್ತು.

ಪ್ರಣವನ ‘ಕದ್ರಿ-ಕ್ರೇಜ್’ ಬಗ್ಗೆ ಸುಮಾ ಆಗಾಗ ನನಗೆ ತಿಳಿಸುತ್ತಿದ್ದರು. “ಆ ಒಂದು ವಿಡಿಯೋದಿಂದಾಗಿ ಎಷ್ಟು ಊಟಗಳು ಯಾವೊಂದು ರಂಪ ಇಲ್ಲದೆ ಅವನ ಹೊಟ್ಟೆ ಸೇರಿವೆ!" ಎಂದು ನೆನಪಿಸಿ ಕೊಳ್ಳುತ್ತಿದ್ದರು. ಸಾಧ್ಯವಾದರೆ ಒಮ್ಮೆ ಪ್ರಣವನನ್ನು ಕದ್ರಿ ಗೋಪಾಲನಾಥರ ಲೈವ್ ಸಂಗೀತ ಕಛೇರಿಗೆ ಕರೆದುಕೊಂಡು ಹೋಗಬೇಕು, ಭೇಟಿ ಮಾಡಿಸಬೇಕು ಎಂದು ಅವರ ಆಕಾಂಕ್ಷೆಯಿತ್ತು. ಕದ್ರಿಯವರ ಸಂಪರ್ಕ ವಿವರವನ್ನು ನನ್ನಿಂದ ಪಡೆದುಕೊಂಡಿದ್ದರು. ಮುಂದೊಂದು ದಿನ ಆ ಸಂದರ್ಭವೂ ಬಂತು.

ಆ ವರ್ಷ ಗಣೇಶೋತ್ಸವ ಸಮಯದಲ್ಲಿ ಅವರ ಮನೆಯ ಹತ್ತಿರವೇ ಕದ್ರಿ ಗೋಪಾಲನಾಥ್ ಮತ್ತು ಪ್ರವೀಣ ಗೋಡ್ಖಿಂಡಿ ಜುಗಲ್ ಬಂದಿ ಕಾರ್ಯಕ್ರಮ ಇತ್ತು. ಆವತ್ತು ಸಂಗೀತ ಕಛೇರಿಗೆ ಮುನ್ನವೇ ಡಾ.ಕದ್ರಿಯವರು ಪ್ರಣವನ ಮನೆಗೆ ಭೇಟಿ ಕೊಡುವ ಏರ್ಪಾಡೂ ಆಯ್ತು. ಯಾರ ಸಂಗೀತಕ್ಕೆ ಭಾವಪರವಶನಾಗಿ ಆ ಕಲಾವಿದನನ್ನು ಆರಾಧ್ಯದೈವವೆಂದು ಪೂಜಿಸುತ್ತಿದ್ದನೋ ಆ ದೇವರು ಕಣ್ಮುಂದೆ ಪ್ರತ್ಯಕ್ಷ! ‘ಕದ್ರಿಯವರ ಜತೆಗೆ ಮೂಕವಿಸ್ಮಿತ ಪ್ರಣವ್’ ಎಂದು ಬರೆದು ಸುಮಾ ಒಂದು ಫೋಟೊ ಕಳುಹಿಸಿದರು.

ಆ ದೃಶ್ಯವನ್ನು ನೋಡಿ ನನಗೆ ತುಂಬ ಖುಷಿಯಾಯ್ತು. ಆ ಪುಟ್ಟ ಪೋರನ ಮನಸ್ಸಿಗೆ ಅದೆಂಥ ರೋಮಾಂಚನ ಆಗಿರಲಿಕ್ಕಿಲ್ಲ! ಮಗುವಿನಂಥದೇ ಮನಸ್ಸಿನ ಡಾ.ಕದ್ರಿಯವರಿಗೂ ಬಹುಶಃ ಅಷ್ಟೇ ರೋಮಾಂಚನ ಆಗಿರಬಹುದು. ನಾಲ್ಕು ವರ್ಷಗಳ ಚಿಕ್ಕ ಹುಡುಗ, ಮುಗ್ಧತೆಯ ಮುದ್ದು ಮೂರ್ತಿ, ಅಭಿಮಾನಿಯಾಗಿ ಕೈಕುಲುಕುತ್ತಿದ್ದಾನೆ ಎಂದರೆ ಬಹುಶಃ ಅದಕ್ಕಿಂತ ದೊಡ್ಡ ಸಮ್ಮಾನ ಸಂತೃಪ್ತಿ ಒಬ್ಬ ಕಲಾವಿದನಿಗೆ ಬೇರೆ ಸಿಗಲಿಕ್ಕಿಲ್ಲ.

ಇನ್ನು, ‘ಪಶುರ್ವೇತ್ತಿ’ಗೆ ತಾಜಾ ಉದಾಹರಣೆಯೊಂದನ್ನು ಕೊಡುತ್ತೇನೆ, ಅದೂ ಅಮೆರಿಕದಿಂದ! ಯುವಿ ಅಗರವಾಲ್ ಎಂಬೊಬ್ಬ ಅಮೆರಿಕವಾಸಿ (ಭಾರತೀಯ ಮೂಲದ) ಬಾಲಕನ ವಿಶಿಷ್ಟ ವಾದೊಂದು ಪ್ರಯೋಗ ಮತ್ತದರ ಫಲಿತಾಂಶದ ಸುದ್ದಿಯಿದು. ಹೃದಯಸ್ಪರ್ಶಿಯಾಗಿದೆ, ನಾವೆಲ್ಲ ಹೆಮ್ಮೆಪಡುವಂಥದೂ ಆಗಿದೆ.

ಅಮೆರಿಕದಲ್ಲಿ ಟೆಕ್ಸಸ್ ಸಂಸ್ಥಾನದ ಹ್ಯೂಸ್ಟನ್ ನಗರದಲ್ಲಿ ವಾಸಿಸುತ್ತಿರುವ ಪ್ರಿಯಾಂಕಾ-ನಿತಿನ್ ಅಗರವಾಲ್ ದಂಪತಿಯ ಮಗ ಯುವಿ. ಈಗ ಅವನಿಗೆ 12 ವರ್ಷ ವಯಸ್ಸು. ಯುವಿ ಪುಟ್ಟ ಮಗು ಆಗಿದ್ದಾಗಲೇ ಸಂಗೀತಕ್ಕೆ ಕಿವಿಗೊಡುತ್ತಿದ್ದನಂತೆ, ಮತ್ತು ಪ್ರಾಣಿಗಳೆಂದರೆ ವಿಶೇಷ ಪ್ರೀತಿ ಯುಳ್ಳವ ನಾಗಿದ್ದನಂತೆ. ಅವರ ಮನೆಯಲ್ಲೇ ಒಂದು ನಾಯಿ- ಗೋಲ್ಡನ್ ಡೂಡಲ್ ತಳಿಯದು- ಸಾಕಿದ್ದರು. ‘ಬೊಝೊ’ ಎಂದು ಅದರ ಹೆಸರು.

ಯುವಿ ನಾಲ್ಕು ವರ್ಷದವನಿದ್ದಾಗ ಪಿಯಾನೊ ನುಡಿಸಲಿಕ್ಕೆ ಆರಂಭಿಸಿದನು. ಅವನು ಪಿಯಾನೊ ನುಡಿಸುವಾಗೆಲ್ಲ ಬೊಝೊ ಅವನ ಹತ್ತಿರ ಬಂದು ಕುಳಿತು ಕುತೂಹಲದಿಂದ ನೋಡುತ್ತಿತ್ತಂತೆ. ಬೇರೆ ಸಮಯದಲ್ಲಿ ಕುಂಯ್ ಕುಂಯ್ ರಾಗವೆಳೆಯುತ್ತ ತನ್ನ ಅತೃಪ್ತಿ ಅಸಮಾಧಾನಗಳ ಚಡಪಡಿಕೆ ವ್ಯಕ್ತಪಡಿಸುತ್ತ ಮನೆಮಂದಿಯ ಗಮನ ಸೆಳೆಯುತ್ತಿದ್ದದ್ದು, ಯುವಿ ಪಿಯಾನೊ ನುಡಿಸತೊಡಗಿದನೆಂದರೆ ಹತ್ತಿರ ಬಂದು ಕುಳಿತು ಶಾಂತಚಿತ್ತದಿಂದ ಕೇಳುತ್ತಿತ್ತಂತೆ.

ಯುವಿಗೂ ಅವನ ಹೆತ್ತವರಿಗೂ ಇದೊಂದು ಕೌತುಕದ ಸಂಗತಿಯೇ ಆಯ್ತು. ಬೊಝೊಗೆ ನಿಜವಾಗಿಯೂ ಸಂಗೀತದಲ್ಲಿ ಆಸಕ್ತಿ ಹುಟ್ಟಿಕೊಂಡಿದೆಯೇ, ಸಂಗೀತ ಅದಕ್ಕೆ ಅರ್ಥವಾಗುತ್ತದೆಯೇ, ಸಂಗೀತವು ಅದರ ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆಯೇ ಎಂದು ವೈಜ್ಞಾನಿಕ ಅಧ್ಯಯನದಂತೆ ಸಾಧಿಸಿ ತೋರಿಸಲಾಗದಿದ್ದರೂ ಅವರೆಲ್ಲರೂ ಬೊಝೊನ ಈ ವಿಶಿಷ್ಟ ವರ್ತನೆ ಯನ್ನು ಗಮನಿಸಿದ್ದಂತೂ ಹೌದು.

ಯುವಿ ಮತ್ತು ಅವನ ಹೆತ್ತವರಿಗೆ ಇದರಿಂದ ಒಂದು ಆಲೋಚನೆ ಹೊಳೆಯಿತು. ಯುವಿ ಪಿಯಾನೊ ನುಡಿಸುವುದು ಬೊಝೊನನ್ನು ಶಾಂತಗೊಳಿಸುತ್ತದಾದರೆ ಹ್ಯೂಸ್ಟನ್‌ನ ಅನಿಮಲ್ ಶೆಲ್ಟರ್‌ಗಳಲ್ಲಿರುವ ಬೇರೆ ನಾಯಿ-ಬೆಕ್ಕು ಮತ್ತಿತರ ಪ್ರಾಣಿಗಳ ಮೇಲೂ ಸಂಗೀತವು ಪ್ರಭಾವ ಬೀರುವುದೇ ಎಂದು ಪ್ರಯೋಗ ಮಾಡಿ ನೋಡಬಹುದೇ? ಯುವಿಯ ಪ್ರಾಣಿಪ್ರೇಮದಿಂದಾಗಿ ಅವರು ಅನಿಮಲ್ ಶೆಲ್ಟರ್‌ಗಳಿಗೆ ಆಗಾಗ ಭೇಟಿ ಕೊಡುವುದು ಇದ್ದೇ ಇತ್ತು.

ಒಮ್ಮೆ ಪ್ರಸ್ತಾವಿಸಿ ನೋಡೋಣ ಎಂದುಕೊಂಡರು. ಯುವಿಯೇ ಒಂದು ಯೋಜನೆ ಸಿದ್ಧಪಡಿಸಿ ಅದಕ್ಕೆ ಬೇಕಾದ ವಿವರಣೆ ಎರಡು ಪುಟಗಳಷ್ಟು ಬರೆದಿಟ್ಟುಕೊಂಡನು. Wild Tunes ಎಂದು ಆ ಕ್ಷಣಕ್ಕೆ ತನಗೆ ಹೊಳೆದ ಹೆಸರನ್ನೂ ಯೋಜನೆಗೆ ಇಟ್ಟನು. ಹೆತ್ತವರೊಂದಿಗೆ ಒಂದೆರಡು ಶೆಲ್ಟರ್‌ ಗಳಿಗೆ ಹೋಗಿ ಕೇಳಿದನು.

ಶೆಲ್ಟರ್‌ನ ಅಧಿಕಾರಿಗಳಿಂದ ಅಂಥದೇನೂ ಉತ್ತೇಜನಕಾರಿ ಪ್ರತಿಕ್ರಿಯೆ ಸಿಗಲಿಲ್ಲ. ಹೆತ್ತವರ ಸ್ನೇಹಿತ ರಾರೋ ಹ್ಯೂಸ್ಟನ್ ಪೆಟ್ಸ್ ಎಲೈವ್ ಎಂಬ ಇನ್ನೊಂದು ಶೆಲ್ಟರ್‌ನಲ್ಲಿ ವಿಚಾರಿಸಿನೋಡಿ ಎಂದು ಸಲಹೆಯಿತ್ತರು. ಅದರಂತೆ ಅಲ್ಲಿಗೆ ಹೋಗಿ ಕೇಳಿದಾಗ ಸಕಾರಾತ್ಮಕ ಸ್ಪಂದನ ಸಿಕ್ಕಿತು! ಅಧಿಕಾರಿ ಗಳಷ್ಟೇ ಅಲ್ಲ, ಶೆಲ್ಟರ್‌ನಲ್ಲಿದ್ದ ನಾಯಿ-ಬೆಕ್ಕುಗಳೂ ಸಕಾರಾತ್ಮಕವಾಗಿ ಸ್ಪಂದಿಸಿ ಯುವಿಯ ಪಿಯಾನೊ ಸಂಗೀತವನ್ನು ಸ್ವಾಗತಿಸಿದವು.

ಪ್ರತಿ ವಾರಾಂತ್ಯದಲ್ಲಿ ಯುವಿ ಆ ಶೆಲ್ಟರ್‌ಗೆ ಹೋಗಿ ಸ್ವಲ್ಪ ಹೊತ್ತು ಪಿಯಾನೊ ನುಡಿಸಿ ಅಲ್ಲಿರುವ ನಾಯಿ-ಬೆಕ್ಕುಗಳ ಮನತಣಿಸುವುದು ಎಂದಾಯಿತು. ಕೆಲವು ಪ್ರಾಣಿಗಳು ತದೇಕಚಿತ್ತದಿಂದ ಕೇಳುವವು; ಕೆಲವು ನಾಯಿಗಳು ತಾವೂ ರಾಗಬದ್ಧವಾಗಿ ಬೊಗಳುತ್ತ ದನಿಗೂಡಿಸುವವು. ಅಂತೂ ಅವು ಯುವಿಯ ಸಂಗೀತವನ್ನು ಆನಂದಿಸುವುದು ಮತ್ತು ತನ್ಮೂಲಕ ತಮ್ಮ ಚಡಪಡಿಕೆಯನ್ನು ತಾತ್ಕಾಲಿಕವಾಗಿಯಾದರೂ ಕಡಿಮೆ ಮಾಡಿಕೊಳ್ಳುವುದು ಹೌದೆಂದು ಶೆಲ್ಟರ್‌ನ ಅಧಿಕಾರಿಗಳಿಗೆ, ಪಶುವೈದ್ಯರಿಗೆ ಮನವರಿಕೆಯಾಯ್ತು.

ಯುವಿಯ ಹೆತ್ತವರ ಮಿತ್ರವರ್ಗ ಒಳ್ಳೆಯದಿರುವುದರಿಂದ, ಇಬ್ಬರಿಗೂ ವೃತ್ತಿಯಲ್ಲಿ ಮಾರ್ಕೆಟಿಂಗ್ ಹಿನ್ನೆಲೆ ಇರುವುದರಿಂದ ಈ ಯೋಜನೆಯನ್ನು ವಿಸ್ತರಿಸುವುದು ಸಾಧ್ಯವಾಯಿತು. ಹ್ಯೂಸ್ಟನ್‌ನ ಬೇರೆ ಕೆಲವು ಅನಿಮಲ್ ಶೆಲ್ಟರ್‌ಗಳೂ ಆಸಕ್ತಿ ತೋರಿದುವು. ಆದರೆ ಎಲ್ಲ ಕಡೆಯೂ ಯುವಿಯೇ ಹೋಗಿ ಸಂಗೀತ ನುಡಿಸುವುದು ಸಾಧ್ಯವಾಗದಷ್ಟೆ? ಆಗ ಹೊಳೆದ ಯೋಜನೆಯೇ Wild Tunes ಅನ್ನು ಒಂದು ಲಾಭರಹಿತ ಪ್ರಾಣಿದಯಾ ಸಂಸ್ಥೆಯಾಗಿ ನೋಂದಾಯಿಸುವುದು ಮತ್ತು ಸಮಾನ ಮನಸ್ಕರನ್ನು ಅದರಲ್ಲಿ ಸೇರಿಸಿಕೊಳ್ಳುವುದು. ವೃತ್ತಿಯಲ್ಲಿ ಅನುಭವವಿದ್ದ ಪ್ರಿಯಾಂಕಾ ಅಗರ ವಾಲ್ ಆ ಸಂಸ್ಥೆಯ ನಿರ್ದೇಶಕಿಯಾದರು.

ಹವ್ಯಾಸಿ ಸಂಗೀತಗಾರರು ಒಂದಷ್ಟು ಮಂದಿ ಸೇರಿಕೊಂಡರು. ಪಿಯಾನೊ ಮಾತ್ರವಲ್ಲದೆ ವಯಲಿನ್, ಗಿಟಾರ್, ಕೊಳಲು, ಸ್ಯಾಕ್ಸೊ-ನ್ ಮುಂತಾದ ವಾದ್ಯಗಳನ್ನು ನುಡಿಸಬಲ್ಲ ಸ್ವಯಂ ಸೇವಕರು ತಮ್ಮತಮ್ಮ ವ್ಯಾಪ್ತಿಯ ಅನಿಮಲ್ ಶೆಲ್ಟರ್‌ಗಳಲ್ಲಿ ನಿಯತವಾಗಿ ಒಂದಷ್ಟು ಹೊತ್ತು ಸಂಗೀತಸೇವೆ ಒದಗಿಸಲಿಕ್ಕೆ ಮುಂದಾದರು. ಶೆಲ್ಟರ್‌ನ ಪ್ರಾಣಿಗಳ ಮನತಣಿಸುವಿಕೆಯ ಜತೆಜತೆಗೇ ಈ ಹವ್ಯಾಸಿ/ಅಭ್ಯಾಸಿ ಸಂಗೀತಗಾರರಿಗೆ ಪ್ರಾಕ್ಟೀಸ್ ಮಾಡಿದ ಹಾಗೂ ಆಯ್ತು,

ಪ್ರದರ್ಶನದ ಅನುಭವವೂ ಸಿಕ್ಕಿತು, ವಿದ್ಯಾರ್ಥಿಗಳಾಗಿದ್ದರಂತೂ ಹೈಸ್ಕೂಲ್‌ಗಳಲ್ಲಿ ಅಪೇಕ್ಷಿಸುವ ‘ಸಮಾಜಸೇವೆಯಲ್ಲಿ ಸಮಯದ ಸದುಪಯೋಗ’ ಗಂಟೆಗಳನ್ನು ದಾಖಲಿಸಿ ಕ್ರೆಡಿಟ್ ಗಳಿಸುವು ದಕ್ಕಾಯ್ತು. ಈಗ ನೂರಕ್ಕೂ ಹೆಚ್ಚು ಸ್ವಯಂಸೇವಕರು ವೈಲ್ಡ್ ಟ್ಯೂನ್ಸ್ ಯೋಜನೆಯನ್ನು ಸೇರಿಕೊಂಡಿದ್ದಾರೆ. ಹ್ಯೂಸ್ಟನ್ ಮಾತ್ರವಲ್ಲ ಅಮೆರಿಕದ ಬೇರೆ ಸಂಸ್ಥಾನಗಳಲ್ಲಿ- ನ್ಯೂಜೆರ್ಸಿ, ಕೊಲರಾಡೊ ಮುಂತಾದೆಡೆಗಳಲ್ಲಿ- ಅನಿಮಲ್ ಶೆಲ್ಟರ್‌ಗಳು ಈ ಯೋಜನೆಯನ್ನು ಅಳವಡಿಸಿ ಕೊಂಡಿವೆ.

ಕೆಲವೊಮ್ಮೆ ಯುವಿಯೇ ಅಲ್ಲಿಗೆ ವಿಸಿಟಿಂಗ್ ಮ್ಯುಸೀಷಿಯನ್ ಆಗಿ ಹೋಗುತ್ತಾನೆ. ಬೀಟಲ್ಸ್‌ನ ಪ್ರಖ್ಯಾತ ‘ಹೇ ಜ್ಯೂಡ್’ ಹಾಡು, ಎಡ್ ಶೀರನ್‌ನ ಪ್ರಸಿದ್ಧ ‘ಶೇಪ್ ಆಫ್ ಯು’ ಹಾಡು, ಕೆಲವೊಮ್ಮೆ ಹಿಂದಿ ಚಿತ್ರಗೀತೆಗಳನ್ನೂ, ತನ್ನ ಪಿಯಾನೊದಲ್ಲಿ ನುಡಿಸಿ ಚತುಷ್ಪದಿ ಪ್ರೇಕ್ಷಕರನ್ನು ಮುದ ಗೊಳಿಸುತ್ತಾನೆ. ಬೇರೆ ಸಂಗೀತಗಾರರೂ ಮೊಝಾರ್ಟ್, ಬಾಖ್ ಮುಂತಾದ ಜಗತ್ಪ್ರಸಿದ್ಧರ ಟ್ರ್ಯಾಕ್‌ಗಳನ್ನು ನುಡಿಸಿ ತಾವೂ ಪುಳಕಿತರಾಗುತ್ತಾರೆ, ಪ್ರಾಣಿಗಳನ್ನೂ ಸಂಪ್ರೀತಗೊಳಿಸುತ್ತಾರೆ.

ಯುವಿಯ ಈ ಸೇವೆ-ಸಾಧನೆಗಳನ್ನು ಗುರುತಿಸಿ ಹ್ಯೂಸ್ಟನ್‌ನ ಬೆಂಡ್ ಕೌಂಟಿ ಕಮಿಷನರರು ವಿಶೇಷ ಮಾನಪತ್ರ ನೀಡಿ ಗೌರವಿಸಿದ್ದಾರೆ. ಹ್ಯೂಸ್ಟನ್‌ನ ಸ್ಥಳೀಯ ಸುದ್ದಿವಾಹಿನಿಗಳಷ್ಟೇ ಅಲ್ಲದೆ ಎಬಿಸಿ ವರ್ಲ್ಡ್ ನ್ಯೂಸ್‌ನಂಥ ರಾಷ್ಟ್ರೀಯ ಮಾಧ್ಯಮಗಳೂ ಯುವಿ ಅಗರವಾಲ್ ಮತ್ತು ಅವನ ವೈಲ್ಡ್ ಟ್ಯೂನ್ಸ್ ಯೋಜನೆಯನ್ನು ಪ್ರೇರಣಾದಾಯಕ ಎಂದು ಕೊಂಡಾಡಿವೆ. ಈಗಿನ್ನು ಇದು ಅಮೆರಿಕದ ಐವತ್ತೂ ಸಂಸ್ಥಾನಗಳಿಗೆ ಹರಡಿಕೊಂಡರೆ ಆಶ್ಚರ್ಯವಿಲ್ಲ.

ನನಗನಿಸುತ್ತದೆ, ಜಿ.ಪಿ.ರಾಜರತ್ನಂ ಅವರ ಪದ್ಯದಲ್ಲಿ ನಾಯಿಮರಿಯು “ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು" ಎಂದಿತ್ತಲ್ಲ, ‘ಎಲ್ಲ’ದಲ್ಲಿ ಹತ್ತು ಹಲವು ಬೇಡಿಕೆಗಳು, ಆಡಲಿಕ್ಕೆ ಆಟಿಕೆ, ಓದಲಿಕ್ಕೆ ಪುಸ್ತಕ, ಕೇಳಿ ಆನಂದಿಸುವುದಕ್ಕೆ ಸಂಗೀತ... ಎಲ್ಲವೂ ಇತ್ತು. ನಾವು ಅರ್ಥಮಾಡಿಕೊಳ್ಳಲಿಲ್ಲ ಅಷ್ಟೇ. ಯುವಿ ಅಗರವಾಲ್‌ನಂಥ ಜಾಣ ಮಕ್ಕಳು ಅರ್ಥಮಾಡಿಕೊಂಡರು; ಪಶುರ್ವೇತ್ತಿ ಗಾನರಸಂ ಎಂಬುದನ್ನು ಸಾಬೀತುಪಡಿಸಿದರು!