Harish Kera Column: ಪಾತಾಳಮಲೆಯಲ್ಲಿ ಪತಂಗ !
ಒಂದು ಯಃಕಶ್ಚಿತ್ ಪತಂಗಕ್ಕಾಗಿ ನಾವಿಷ್ಟು ಜನರನ್ನು ಕರೆದು ಕೂರಿಸಿಕೊಂಡಿದ್ದಾರಲ್ಲ ಎಂದು ಆಶ್ಚರ್ಯ, ಕುತೂಹಲ, ಸ್ವಲ್ಪ ಅಸಮಾಧಾನ ಒಟ್ಟಿಗೇ ಮೂಡಿದವು. ಏನೋ ಮಹತ್ವದ ಸಂಶೋ ಧನೆ ಎಂದು ಬಂದರೆ ಈಗ ಬರೀ ಪತಂಗ ಪಾತರಗಿತ್ತಿ ಅಂತಾ ಇದಾರಲ್ಲ. ಇವರಿಗೇನು ಮಂಡೆ ಸಮ ಇದೆಯಾ, ಒಂದು ಚಿಟ್ಟೆ ಹಿಡಿಯಲು ನಾವಿಷ್ಟು ಜನ ಬೇಕಾ ಎಂಬ ಪ್ರಶ್ನೆಗಳು ಮನದಲ್ಲಿ ಮೂಡಿ ಮುಳುಗಿದವು.

-

ಹರೀಶ್ ಕೇರ
ಮುಂದಿನ ವಾರ ಲೋಕಾರ್ಪಣೆಗೊಳ್ಳಲಿರುವ ನಿಲ್ಲು ನಿಲ್ಲೇ ಪತಂಗ (ಮಿಸ್ಟರಿ ಜಂಗಲ್ ಥ್ರಿಲ್ಲರ್) ಕಾದಂಬರಿಯ ಆಯ್ದ ಭಾಗವಿದು. ಪರಿಸರದ ವಿಸ್ಮಯಗಳನ್ನು ಈ ಕಾದಂಬರಿ ಪರಿಶೋಧಿಸುತ್ತದೆ. ನಾಡಿನ ಪ್ರಖ್ಯಾತ ಪ್ರಕಾಶಕರಾದ ಅಂಕಿತ ಪುಸ್ತಕದವರು ಇದನ್ನು ಹೊರ ತರುತ್ತಿದ್ದಾರೆ.
ಒಂದು ಯಃಕಶ್ಚಿತ್ ಪತಂಗಕ್ಕಾಗಿ ನಾವಿಷ್ಟು ಜನರನ್ನು ಕರೆದು ಕೂರಿಸಿಕೊಂಡಿದ್ದಾರಲ್ಲ ಎಂದು ಆಶ್ಚರ್ಯ, ಕುತೂಹಲ, ಸ್ವಲ್ಪ ಅಸಮಾಧಾನ ಒಟ್ಟಿಗೇ ಮೂಡಿದವು. ಏನೋ ಮಹತ್ವದ ಸಂಶೋ ಧನೆ ಎಂದು ಬಂದರೆ ಈಗ ಬರೀ ಪತಂಗ ಪಾತರಗಿತ್ತಿ ಅಂತಾ ಇದಾರಲ್ಲ. ಇವರಿಗೇನು ಮಂಡೆ ಸಮ ಇದೆಯಾ, ಒಂದು ಚಿಟ್ಟೆ ಹಿಡಿಯಲು ನಾವಿಷ್ಟು ಜನ ಬೇಕಾ ಎಂಬ ಪ್ರಶ್ನೆಗಳು ಮನದಲ್ಲಿ ಮೂಡಿ ಮುಳುಗಿದವು. ಇದನ್ನು ಅರಿತವರಂತೆ ಪಣಿಕ್ಕರ್ ಮೌನ ಮುರಿದು ಶುರು ಮಾಡಿದರು.
‘ಹೌದು, ಒಂದು ಪತಂಗವನ್ನು ಹುಡುಕಬೇಕಾಗಿದೆ. ಆದರೆ ಅದು ನಾವು ನೀವೆಲ್ಲ ಯಾವಾಗ್ಲೂ ಇಲ್ಲಿ ಕಾಣಬಹುದಾದ ಪತಂಗವಲ್ಲ. ಅದಕ್ಕೆ ಬೇರೆಯೇ ಹಿನ್ನೆಲೆ ಇದೆ. ಅದು ಬಹಳ ಸುಂದರವಾದ ಜೀವಿ. ಕೆಲವು ವರ್ಷಗಳ ಹಿಂದೆ ಅದು ಮಂದಣ್ಣನಿಗೆ ಒಮ್ಮೆ ಕಾಣಸಿಕ್ಕಿತ್ತು. ಆಗಲೂ ಒಮ್ಮೆ ಇಲ್ಲಿ ನಾನು ಹುಡುಕಾಟಕ್ಕೆ ಬಂದಿದ್ದೆ. ಆ ಕತೆ ಇನ್ನೊಮ್ಮೆ ಹೇಳುತೀನಿ. ಈಗ ಮತ್ತೊಮ್ಮೆ ಮಂದಣ್ಣನ ಮಗ ನವೀನನಿಗೆ ಕಾಣೋಕೆ ಸಿಕ್ಕಿದೆ. ಈ ಸಲ ಅದನ್ನು ಹಿಡೀಬೇಕು, ಡಾಕ್ಯುಮೆಂಟ್ ಮಾಡಬೇಕು ಅನ್ನೋದು ನಮ್ಮ ಉದ್ದೇಶ.’
‘ಈ ಚಿಟ್ಟೇಲಿ ಅಂಥದೇನು ವಿಶೇಷ?’ ‘ವಿಶೇಷ ಇದೆ. ಇದು ನಮ್ಮ ಮಲೆನಾಡಿನ ಕಾಡುಗಳಲ್ಲಿ ಕಾಣಿಸೋ ಸಾಮಾನ್ಯ ಪತಂಗ ಅಲ್ಲ. ಇಲ್ಲಿ ನೋಡಿ ಅದರ ಫೋಟೋ. ಇದೊಂದೇ ಫೋಟೋ ನನ್ನತ್ರ ಇರೋದು. ಈ ಫೊಟೋ ಕೂಡ ನವೀನ ತೆಗೆದು ಕಳಿಸಿರೋದು’ ಎಂದು ತಮ್ಮ ಮೊಬೈಲ್ ತೆಗೆದು ಗ್ಯಾಲರಿಯಿಂದ ಒಂದು ಫೊಟೋ ಹುಡುಕಿ ನನ್ನ ಮುಂದಿಟ್ಟರು.
ಇದನ್ನೂ ಓದಿ: Harish Kera Column: ಇವು ಯಾರ ಜಪ್ತಿಗೂ ಸಿಗದ ನವಿಲುಗಳು!
ಮೊದಲಿಗೇ ಥಟ್ಟನೆ ಗಮನ ಸೆಳೆದದ್ದು ಅದರ ಸೀಳು ಬಾಲ- ಹಾಗೆ ಕರೆಯಬಹುದಾಗಿದ್ದರೆ. ಮೈಬಣ್ಣ ಹುಲಿಯಂತೆ ಕಾಣಿಸಿತು, ಅದರಂತೆಯೇ ಹಳದಿ ಮೈ ಮತ್ತು ಕಪ್ಪು ಪಟ್ಟೆ. ಮೈಯಿಂದ ಹೊರಚಾಚಿದ ರೆಕ್ಕೆಗಳೂ ಹಳದಿ. ನಡುಭಾಗದಲ್ಲಿ ಅವು ಎರಡೂ ಸೀಳಿ ನಾಲ್ಕಾಗಿದ್ದವು.
ನಾಲ್ಕರಲ್ಲೂ ಉರುಟಾದ ಒಂದು ಬೊಟ್ಟಿನಂಥ ಕೆಂಪು ಹಳದಿ ಮಿಶ್ರಿತ ರಚನೆ. ಕೆಳಭಾಗದ ರೆಕ್ಕೆ ನಡುವಿನಲ್ಲಿ ಉದ್ದಕ್ಕೆ ವಿಸ್ತರಿಸಿ ಬಾಲದಂತೆ ಚಾಚಿಕೊಂಡಿತ್ತು. ಬಾಲದ ನಡುಭಾಗ ಕೆಂಪು, ತುದಿ ಮತ್ತೆ ಹಳದಿಯಾಗಿ ತುಸು ಬಿಡಿಸಿಕೊಂಡು ಫ್ರಿಲ್ ಇದ್ದಂತಿತ್ತು. ಅಂಚುಗಳಲ್ಲಿ ಮೋಡದ ಬಣ್ಣ. ‘ಇದನ್ನು ಎಲ್ಲಾದರೂ ನೋಡಿದ್ದೀರಾ?’ ಅಂದರು ಪಣಿಕ್ಕರ್.
‘ನಾನು ಸಾಕಷ್ಟು ಚಿಟ್ಟೆಗಳನ್ನು ನೋಡಿದೀನಿ. ಆದರೆ ಇದನ್ನು ಕಂಡಿಲ್ಲ. ಇದು ಎಲ್ಲಿನದು?’ ‘ನೀವು ಚಿಟ್ಟೆ ಅಂದ್ರಲ್ಲ, ಇದು ಚಿಟ್ಟೆ ಅಲ್ಲ- ಪತಂಗ, ಮಾತ್. ಇವುಗಳ ವ್ಯತ್ಯಾಸ ಹೇಳಿಬಿಡ್ತೀನಿ. ಕೆಲವೇ ಕೆಲವು ಸುಲಭ ಗುರುತು ಹೇಳ್ತೀನಿ- ಹೆಚ್ಚಾಗಿ ಚಿಟ್ಟೆಗಳು ಹಗಲು ಆಕ್ಟಿವ್ ಆಗಿರ್ತವೆ, ಪತಂಗಗಳು ರಾತ್ರಿ. ಹಗಲೂ ಹಾರಾಡೋ ಪತಂಗಗಳು ಸಾಕಷ್ಟಿವೆ. ಇನ್ನು ಚಿಟ್ಟೆಗಳ ಮೈಬಣ್ಣ ಝಗಮಗ ಅಂತಿರುತ್ತೆ, ಪತಂಗಗಳು ಅವುಗಳ ಮುಂದೆ ತುಸು ಮಂಕು.
ಇನ್ನು ಚಿಟ್ಟೆಗಳ ಆಂಟೆನಾದ ತುದಿಯಲ್ಲಿ ದುಂಡಗಿನ ಬಾಲ್ ಥರ ಇರುತ್ತೆ, ಮಾತ್‌ಗಳಲ್ಲಿ ಅದು ಇರೊಲ್ಲ. ಒಂದು ಕಡೆ ಕುಳಿತಾಗ ಪತಂಗಗಳ ರೆಕ್ಕೆಗಳು ಹರಡಿರುತ್ತೆ, ಚಿಟ್ಟೆ ಮಡಚಿಕೊಂಡಿರುತ್ತೆ. ಇದನ್ನೆಲ್ಲ ನಾನು ನಿಮಗೆ ನಿಜವಾದ ಚಿಟ್ಟೆಯನ್ನೂ ಪತಂಗವನ್ನೂ ಅಕ್ಕಪಕ್ಕದಲ್ಲಿಟ್ಟು ವಿವರಿಸಿ ದರೆ ಮಾತ್ರ ಸರಿಯಾಗಿ ಅರ್ಥವಾಗುತ್ತೆ. ಮುಖ್ಯವಾಗಿ, ಪತಂಗಗಳು ಚಿಟ್ಟೆಗಳ ಪೂರ್ವಜರು.
ಪತಂಗಗಳು 19 ಕೋಟಿ ವರ್ಷಗಳ ಹಿಂದೆಯೇ ಇದ್ದವು. ಚಿಟ್ಟೆಗಳು ಅವುಗಳಿಂದ 9 ಕೋಟಿ ವರ್ಷಗಳ ಬಳಿಕ ವಿಕಾಸವಾದವು’ ಎಂದು ಪಣಿಕ್ಕರ್ ವಿವರಿಸಿದರು.
‘ಇದನ್ನೇ ನಾವೀಗ ಹುಡುಕೋಕೆ ಹೊರಟಿರೋದು. ನವೀನ್‌ನ ಮೊಬೈಲ್‌ಗೆ ಈ ಚಿಟ್ಟೆ ಸಿಕ್ಕಿರೋದು ಚಾರ್ಮಾಡಿಯ ಕಾಡುಗಳ ನಡುವಿನ ಯಾವುದೋ ಒಂದು ಕಣಿವೆಯಲ್ಲಿ, ಒಂದು ಕೆರೆಯ ಬಳಿ. ಅದು ಎಲ್ಲಿ ಎಂಬುದು ನಿಖರವಾಗಿ ಅವನಿಗೂ ಗೊತ್ತಿಲ್ಲ.’ ‘ಅದು ಹೇಗೆ ಸಾಧ್ಯ?’ ನನ್ನ ಪ್ರಶ್ನೆಗೆ ಪಣಿಕ್ಕರ್ ಉತ್ತರಿಸಲಿಲ್ಲ, ನವೀನನ ಮುಖ ನೋಡಿದರು. ನವೀನ ವಿವರಿಸಿದ.
‘ಮೂರ್ನಾಲ್ಕು ತಿಂಗಳ ಹಿಂದೆ ನಮ್ಮ ಮಂಗಳ ದನ ಸಂಜೆ ಮನೆಗೆ ಬರಲಿಲ್ಲ. ಕಾಡಿನಲ್ಲಿ ಬಹುಶಃ ಎಲ್ಲಾದರೂ ಹೋಗಿರಬಹುದು, ಇತ್ತೀಚೆಗೆ ಹುಲಿ ಹೆದರಿಕೆ ಬೇರೆ ಇದೆ ಅಂತ ಅದನ್ನು ಹುಡುಕ್ತಾ ಕಾಡಿನ ಒಳಗೆ ಹೋಗಿದ್ದೆ. ಯಾವತ್ತೂ ದಾರಿ ತಪ್ಪಿದೋನಲ್ಲ. ಆವತ್ತು ದಾರಿ ತಪ್ಪಿತು. ನಾನು ಹೋದ ಜಾಗವೆಲ್ಲ ಯಾರೂ ಓಡಾಡಿದ ಜಾಗವೇ ಆಗಿರಲಿಲ್ಲ. ಹೀಗಾಗಿ ನಡೆಯೋ ದಾರಿನೇ ಇರಲಿಲ್ಲ. ಅಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗಲ್ಲ. ಹೀಗಾಗಿ ಯಾರನ್ನಾದರೂ ಸಂಪರ್ಕಿಸೋಣ ಅಂದರೂ ಸಾಧ್ಯವಿರಲಿಲ್ಲ. ಬೆಳಗ್ಗೆ ಹೊರಟವನು ಸಂಜೆಯವರೆಗೂ ಅಲೆದೆ. ಅಲೆಯುತ್ತಾ ನಾಲ್ಕು ಬೆಟ್ಟಗಳ ನಡುವಿನ ಒಂದು ತಗ್ಗುಪ್ರದೇಶಕ್ಕೆ ಇಳಿದೆ.
ಅಷ್ಟರಲ್ಲಿ ರಾತ್ರಿಯಾಯ್ತು. ಒಂದು ಬೆಟ್ಟದ ಬುಡದಲ್ಲಿ ಕೊಡೆ ಥರಾ ಹೊರಗೆ ಚಾಚಿದ ಒಂದು ಬಂಡೆ ಕೆಳಗೆ ಮಲಗಿ ನಿದ್ರೆ ಮಾಡಿದೆ. ಬೆಳಗ್ಗೆ ಎಚ್ಚರಾಯ್ತು. ನೋಡ್ತೀನಿ, ಪಕ್ಕದಲ್ಲೇ ಒಂದು ಸಣ್ಣ ಕೊಳ ಇದೆ. ಅದರ ಪಕ್ಕದಲ್ಲಿ ಅಗಲವಾದ ಎಲೆಗಳ ನೀರಿನ ಸಸ್ಯಗಳು ಬೆಳೆದಿದ್ದವು.
ಅವುಗಳಲ್ಲಿ ಒಂದರಲ್ಲಿ ಇದು ಕೂತಿತ್ತು. ಎಂದೂ ಕಂಡಂತಿಲ್ಲವಲ್ಲ’ ಎಂದು ಫೋಟೋ ಹೊಡೆದು ಕೊಂಡೆ. ‘ಇವನು ನೋಡಿದ್ದು ಪಾತಾಳಮಲೆಯ ಜಾಗ ಇರಬೇಕು. ಅಲ್ಲಿನ ವಾತಾವರಣವೇ ತುಂಬಾ ವಿಚಿತ್ರ, ಬಹಳ ಥಂಡಿ, ಮನುಷ್ಯರು ಇರೋಕಾಗದು. ನಾನು ಒಂದೆರಡು ಸಲ ಅತ್ತ ಕಡೆ ಹೋದದ್ದುಂಟು. ಆ ಕಡೆ ಹೋಗಬೇಡಿ ಅನ್ನುತ್ತಾ ಇದ್ದರು ನಮ್ಮ ತಾತ.’ ‘ಅದ್ಯಾಕೆ?’‘ಅಲ್ಲಿ ದನ ಮೇಯಿಸೋಕೆ ಹೋದ ನಮ್ಮವರು ಯಾರೋ ಬೆಟ್ಟ ಕುಸಿದು ಕಣ್ಮರೆಯಾಗಿಬಿಟ್ಟರಂತೆ.
ಅಂದಿನಿಂದ ಅಲ್ಲಿ ಹೋದವರಿಗೆ ಭೂತಪ್ರೇತಗಳ ಕಾಟ ಕೂಡ ಇರುತ್ತೆ, ಅದು ದೇವರ ಶಾಪದ ಜಾಗ ಅಂತಿದ್ರು, ಯಾರೂ ಆ ಕಡೆ ಹೋಗೊಲ್ಲ.’ ‘ಪ್ರೊಫೆಸರ್, ಈ ಫೋಟೋ ನಿಮ್ಮ ಬಳಿ ಹೇಗೆ ಬಂತು, ಈ ನವೀನ ನಿಮಗೆ ಹೇಗೆ ಪರಿಚಯ?’ ನನ್ನ ಕುತೂಹಲ ಬಿಚ್ಚಿಟ್ಟೆ. ‘ಇವನು ನನಗೆ ಪರಿಚಯ ಆಗಿದ್ದು ಪೂರ್ಣಚಂದ್ರ ತೇಜಸ್ವಿ ಅವರಿಂದ ಅನ್ನಬಹುದು.
ನೀವು ಕೊಟ್ಟಿಗೆಹಾರದಲ್ಲಿರೋ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ನೋಡಿದೀರಲ್ಲ. ಅಲ್ಲಿ ಕೆಲವು ದಿನಗಳ ಮೊದಲು ತೇಜಸ್ವಿಯವರ ನೆನಪಿನ ಕಾರ್ಯಕ್ರಮ ನಡೆದಿತ್ತು. ಜೊತೆಗೆ ತೇಜಸ್ವಿ ತೆಗೆದಿರೋ ಫೋಟೋಗಳ ಎಕ್ಸಿಬಿಷನ್ ಇಟ್ಟುಕೊಂಡಿದ್ರು. ನಾನು ಯಾವುದೋ ಕಾರ್ಯಕ್ರಮಕ್ಕೆ ಮೂಡಿಗೆರೆಗೆ ಬಂದಿದ್ದೆ. ಈ ಕಾರ್ಯಕ್ರಮ ಇರೋದು ಗೊತ್ತಾಯಿತು. ಬಂದೆ. ನಾನು ಎಕ್ಸಿಬಿಷನ್ ನೋಡ್ತಾ ಇರಬೇಕಾದರೆ ಇವನು ಬಂದ. ಆಮೇಲೇನಾಯ್ತು ಹೇಳೋ ನವೀನ.’
‘ನಂಗೆ ತೇಜಸ್ವಿ ಅಂದರೆ ಇಷ್ಟ. ನಾನು ಪಿಯುಸಿ ಮಾಡಿದ್ದು ಮೂಡಿಗೆರೆಯಲ್ಲಿ. ಅಲ್ಲಿನ ಲೆಕ್ಚರರ್ಸ್ ಎಲ್ಲ ತೇಜಸ್ವಿ ಬಗ್ಗೆ ಮಾತಾಡೋರು. ನನಗೂ ಕುತೂಹಲ. ಲೈಬ್ರರಿಯಲ್ಲಿ ಹುಡುಕಿದೆ. ಅವರ ಕರ್ವಾಲೋ, ಪರಿಸರದ ಕತೆ ಎಲ್ಲ ಸಿಕ್ಕಿತು, ಓದಿದೆ. ಅದ್ಭುತ ವ್ಯಕ್ತಿ ಅನಿಸಿತು. ಅವರ ಬಗ್ಗೆ ಇಲ್ಲಿ ಏನೇ ಕಾರ್ಯಕ್ರಮ ಆದರೂ ಬರ್ತಿರ್ತೀನಿ. ಹಾಗೆ ಆವತ್ತು ಬಂದಾಗ ಪಣಿಕ್ಕರ್ ಸರ್ ಇದ್ರು. ನಾನು ಅವರನ್ನು ಗಮನಿಸಲಿಲ್ಲ. ನನ್ನ ಪಾಡಿಗೆ ತೇಜಸ್ವಿ ಫೋಟೋಗಳನ್ನು ನೋಡ್ತಾ ಇದ್ದೆ...’ ‘ನಂಗೆ ಈ ಹುಡುಗನ ಆಸಕ್ತಿ ಫ್ಯಾಸಿನೇಟಿಂಗ್ ಅನಿಸ್ತು.
ನಂಗೆ ಯಾವಾಗ್ಲೂ ಈ ಯಂಗ್ ಜನರೇಶನ್ ಆಸಕ್ತಿಗಳೇನಿವೆ ಅಂತ ಗಮನಿಸೋದು ಅಭ್ಯಾಸ. ಅದರಲ್ಲೂ ತೇಜಸ್ವಿ ಬಗ್ಗೆ, ಅವರ ಪುಸ್ತಕಗಳನ್ನು ಈಗ್ಲೂ ಓದ್ತಾ ಇರ್ತಾರಲ್ಲ ಯುವಕರು- ಅವರಂದ್ರೆ ಏನೋ ಪ್ರೀತಿ. ಅವರ ನಂತರದ ನಾಲ್ಕನೇ ಜನರೇಶನ್ ಕೂಡ ಅವರನ್ನು ಹುಚ್ಚರ ಥರ ಆರಾಧಿಸ್ಕೊಂಡು ಓದ್ತಾ ಇದೆ ಅಂದ್ರೆ...’ ಎಂದು ಪಣಿಕ್ಕರ್ ಇನ್ನೂ ಹೇಳುವವರಿದ್ದರು.
ತೇಜಸ್ವಿ ಕೃತಿಗಳು, ಅವರ ಇಕಾಲಜಿಯ ಚಿಂತನೆ ಪ್ರೊಫೆಸರ್‌ಗೆ ಇಷ್ಟ ಎಂಬುದು ನನಗೆ ಅವರ ಇಷ್ಟು ವರ್ಷಗಳ ಒಡನಾಟದಲ್ಲಿ ಗೊತ್ತಿತ್ತು. ನಾನೂ ಅವರ ಜೊತೆ ಕುಳಿತುಕೊಂಡಾಗಲೆಲ್ಲ ತೇಜಸ್ವಿಯ ಹಲವು ಪುಸ್ತಕ, ಪಾತ್ರಗಳು ಮಾತಿಗೆ ಬರುತ್ತಿದ್ದವು. ಆದರೆ ಈಗ ಮಾತು ಮುಖ್ಯ ವಿಷಯ ಬಿಟ್ಟು ಎಲ್ಲೆಲ್ಲಿಗೋ ಹೋಗುವುದು ನನಗೆ ಬೇಕಿರಲಿಲ್ಲ. ನಿಜ ನಿಜ ಎಂದು ತಲೆಹಾಕಿ ನವೀನ್ ಕಡೆ ನೋಡಿದೆ.
‘ಹೇಳಿದರೆ ನಿಮಗೆ ಆಶ್ಚರ್ಯ ಆಗಬಹುದು. ಆವತ್ತು ಅದರ ಹಿಂದೆ ಬಿದ್ದು ನಮ್ಮೆಲ್ಲರ ಜೀವನಗಳಲ್ಲಿ ಮರೆಯಲಾಗದ ಸಂಗತಿಗಳು ಘಟಿಸಿಹೋದವು’ ಎಂದು ಪಣಿಕ್ಕರ್ ಕುತೂಹಲಕಾರಿಯಾಗಿ ಅಲ್ಪ ವಿರಾಮ ಕೊಟ್ಟರು. ನಮ್ಮ ಗ್ಲಾಸುಗಳನ್ನು ಮತ್ತೆ ಭರ್ತಿ ಮಾಡಿಕೊಂಡೆವು. ಅಷ್ಟರಲ್ಲಿ ರಾಜು ಊಟ ತಂದಿಟ್ಟ. ರೊಟ್ಟಿ ಮತ್ತು ಕಾಳಿನ ಪಲ್ಯ ಬಿಸಿಬಿಸಿಯಾಗಿ ಹಬೆಯಾಡುತ್ತಿದ್ದವು.