ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Prof R G Hegde Column: ಮಧ್ಯರಾತ್ರಿಯ ಮಕ್ಕಳ ಮಕ್ಕಳ ಮೊಮ್ಮಕ್ಕಳು !

‘ಜೆನ್ ಝೀ’ ಶಬ್ದ ಸೂಚಿಸುವುದು ಎರಡು ಸಾವಿರದ ನಂತರದಲ್ಲಿ ಹುಟ್ಟಿ ಬೆಳೆದ ಈಗ ತಾರುಣ್ಯ ದಲ್ಲಿರುವ ಪೀಳಿಗೆಯನ್ನು. ಅದರ ವಿಶಿಷ್ಟ ಮನೋಭೂಮಿಕೆಯನ್ನು ಗುರುತಿಸಲು ಬಳಸಲಾಗು ತ್ತಿರುವ ಶಬ್ದ ಇದು. ಕುತೂಲವೆಂದರೆ ಈ ಪೀಳಿಗೆಯ ಮನಸ್ಸನ್ನು ‘ಹಿಂದಿನದರ ಮುಂದಿನದು’ ಎಂದು ಸರಳವಾಗಿ ವಿವರಿಸುವಂತಿಲ್ಲ. ಬ್ರಿಟಿಷ್ ಕಾದಂಬರಿಕಾರ್ತಿ ವರ್ಜಿನಿಯ ವೂಲ್ ಇಪ್ಪತ್ತನೆ ಶತಮಾನದ ಮೊದಲ ಪೀಳಿಗೆಯ ಮನಸನ್ನು ಕುರಿತು ಒಂದು ಮಾತು ಹೇಳಿದ್ದರು. ಏನೆಂದರೆ ಪೀಳಿಗೆಯ ಸಂದರ್ಭ ದಲ್ಲಿ ಮಾನವ ಮನಸ್ಸು ಬದಲಾಗಿ ಹೋಯಿತು ಎಂದು.

ತಲೆಮಾರು

ಪ್ರೊ.ಆರ್.ಜಿ.ಹೆಗಡೆ

ಜೆನ್ ಝೀ ಎನ್ನುವ ಶಬ್ದ ಹುಟ್ಟಿಕೊಂಡಿದ್ದು ಅಂತಾರಾಷ್ಟ್ರೀಯ ಸಂದರ್ಭದಲ್ಲಿ. ನೇಪಾಳ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದಲ್ಲಿ ನಡೆದ ರಾಜಕೀಯ ಕ್ಷಿಪ್ರಕ್ರಾಂತಿಗಳಲ್ಲಿ ಭಾಗವಹಿಸಿದ ಯುವಪೀಳಿಗೆಯ ಮನೋಭೂಮಿಕೆಯಲ್ಲಿರುವ ಕೆಲವು ಸಾಮಾನ್ಯ ಅಂಶಗಳನ್ನು ಗುರುತಿಸಿದ ಜಾಗತಿಕ ಮಾಧ್ಯಮ ಈ ಯುವಜನತೆಯನ್ನು ಜೆನ್ ಝೀ ಎಂಬ ಹೆಸರಿನಿಂದ ಕರೆಯಿತು. ಸಮಕಾಲೀನ ಪೀಳಿಗೆಗಳನ್ನು ಗುರುತಿಸಲಾಗುತ್ತಿದ್ದ ಜೆನ್ ಆಲ್ಫಾ, ಜೆನ್ ಎಕ್ಸ್ ಇವುಗಳಿಗಿಂತಲೂ ಹೆಚ್ಚು ‘ಆಧುನಿಕವಾದ’ ಶಬ್ದ ವೊಂದನ್ನು ಹುಟ್ಟಿಸಿತು.

ಕೆಲದಿನ ಹಿಂದೆ ದೆಹಲಿಯಲ್ಲಿ ನಡೆದ ‘ನೀಟ್ ಪ್ರತಿಭಟನೆ’ಯಲ್ಲಿ ಜೆನ್ ಝೀ ಭಾರಿ ಸದ್ದು ಮಾಡಿದೆ. ಹಾಗಾಗಿ ಈ ಶಬ್ದ ಭಾರತದಲ್ಲಿಯೂ ವ್ಯಾಪಕವಾಗಿ ಕೇಳಿ‌ ಬಂದಿದೆ. ಈ ಹಿನ್ನೆಲೆಯಲ್ಲಿ ಜೆನ್ ಝೀಯ ಮನಸ್ಸನ್ನು ‘ಮ್ಯಾಪ್’ ಮಾಡಲು ರಾಜಕೀಯ ಪಕ್ಷಗಳು ಮತ್ತು ಬೌದ್ಧಿಕ ಜಗತ್ತು ಹೆಣಗಾಡುತ್ತಿವೆ.

‘ಜೆನ್ ಝೀ’ ಶಬ್ದ ಸೂಚಿಸುವುದು ಎರಡು ಸಾವಿರದ ನಂತರದಲ್ಲಿ ಹುಟ್ಟಿ ಬೆಳೆದ ಈಗ ತಾರುಣ್ಯ ದಲ್ಲಿರುವ ಪೀಳಿಗೆಯನ್ನು. ಅದರ ವಿಶಿಷ್ಟ ಮನೋಭೂಮಿಕೆಯನ್ನು ಗುರುತಿಸಲು ಬಳಸಲಾಗು ತ್ತಿರುವ ಶಬ್ದ ಇದು. ಕುತೂಲವೆಂದರೆ ಈ ಪೀಳಿಗೆಯ ಮನಸ್ಸನ್ನು ‘ಹಿಂದಿನದರ ಮುಂದಿನದು’ ಎಂದು ಸರಳವಾಗಿ ವಿವರಿಸುವಂತಿಲ್ಲ. ಬ್ರಿಟಿಷ್ ಕಾದಂಬರಿಕಾರ್ತಿ ವರ್ಜಿನಿಯ ವೂಲ್ ಇಪ್ಪತ್ತನೆ ಶತಮಾನದ ಮೊದಲ ಪೀಳಿಗೆಯ ಮನಸನ್ನು ಕುರಿತು ಒಂದು ಮಾತು ಹೇಳಿದ್ದರು. ಏನೆಂದರೆ ಪೀಳಿಗೆಯ ಸಂದರ್ಭದಲ್ಲಿ ಮಾನವ ಮನಸ್ಸು ಬದಲಾಗಿ ಹೋಯಿತು ಎಂದು.

ಇದನ್ನೂ ಓದಿ: Prof R G Hegde Column: ಭಾರತಕ್ಕೆ ಪಾಠ ಹೇಳುವ ದೇಶಗಳು ಸೆಕ್ಯುಲರ್ ಆಗಿರಲಿಲ್ಲ!

ಅಂತಹುದೇ ಬದಲಾವಣೆ ಹೊಂದಿದ, ಮುಂದುವರಿಕೆಗಿಂತಲೂ ಬದಲಾವಣೆಯ ಅಂಶವನ್ನೇ ಹೆಚ್ಚಾಗಿ ಹೊಂದಿರುವ ಮನೋಭೂಮಿಕೆ ಜೆನ್ ಝೀಯದು. ಸಂಕೀರ್ಣವಾದ ಮನಸ್ಸು ಅದು. ಜೆನ್ ಝೀ ಮಾನಸಿಕತೆಯನ್ನು, ವಿಶೇಷವಾಗಿ ಭಾರತದಲ್ಲಿ ಅರ್ಥ ಮಾಡಿಕೊಳ್ಳುವ ಭಾಗವಾಗಿ ಸ್ವಾತಂತ್ರ್ಯ ಸಮಯದಿಂದ ಕೆಲವು ಯುವ ಪೀಳಿಗೆಗಳನ್ನು ಗಮನಿಸುತ್ತ ಬರಬೇಕು. ಮೊದಲನೆ ಯದು ಸ್ವಾತಂತ್ರ್ಯ ಸಿಗುವ ಸಮಯದಲ್ಲಿ ಯುವಕರಾಗಿದ್ದ ಪೀಳಿಗೆ.

ಅವರನ್ನು (ಸಲ್ಮಾನ್ ರಶ್ದಿಯ ಮಿಡ್ ನೈಟ್ಸ್ ಚಿಲ್ಡ್ರನ್ ಶಬ್ದ ಬಳಸಿ) ‘ಮಧ್ಯರಾತ್ರಿಯ ಮಕ್ಕಳು’ ಎಂದು ಕರೆಯಬಹುದು. ಆ ಪೀಳಿಗೆಗೆ ಒಂದು ವಿಶಿಷ್ಟ ಮನೋಭಾವವಿತ್ತು. ಗಾಂಧಿಯನ್ ಮೌಲ್ಯಗಳಿಗೆ ಕಟ್ಟು ಬಿದ್ದ ಪೀಳಿಗೆ ಅದು. ಭಾರತೀಯ ಮೌಲ್ಯಗಳಿಗೆ ಬದ್ಧರಾಗಿ ಬದುಕಿದ್ದವರು. ಆಗ ದೇಶದಲ್ಲಿ ವ್ಯಾಪಕವಾದ ದಟ್ಟವಾದ ಬಡತನವಿತ್ತು. ಸಮಾಜ ಕೃಷಿ ಆಧರಿತವಾಗಿತ್ತು. ಕುಟುಂಬ ಯೋಜನೆ ಇರಲೇ ಇಲ್ಲ. ಪ್ರತಿ ಕುಟುಂಬದಲ್ಲೂ ಹತ್ತು ಹದಿನೈದು ಮಕ್ಕಳಿದ್ದರು. ಶಿಕ್ಷಣದ ಲಭ್ಯತೆ ಕಡಿಮೆ ಇತ್ತು.

ಪರಂಪರಾಗತ ಸಂಸ್ಕೃತಿಯನ್ನು ಪ್ರತಿನಿಧಿಸಿ ಬದುಕಿದ, ಹಿರಿಯರು ಹಾಕಿಕೊಟ್ಟ ಗೆರೆಯನ್ನು ದಾಟದ, ಕೃಷಿ ಸಂಸ್ಕೃತಿ ಮತ್ತು ಒಟ್ಟು ಕುಟುಂಬದ ಸಂಸ್ಕೃತಿ ಹೊಂದಿ ಬದುಕಿದ ಪೀಳಿಗೆ ಅದು. 1970ರ ವೇಳೆಗೆ ಹೊಸ ಯುವಪೀಳಿಗೆ ಬಂತು. ಈ ಪೀಳಿಗೆ ಸ್ವಾತಂತ್ರ್ಯೋತ್ತರ ರಾಜಕೀಯದ, ಮುಖ್ಯವಾಗಿ ಸಮಾಜವಾದಿ ನೀತಿಗಳ ದಟ್ಟವಾದ ಪ್ರಭಾವದಿಂದ ನಿರೂಪಿತವಾಗಿದ್ದು. (ಮಧ್ಯರಾತ್ರಿ ಯ ಮಕ್ಕಳ ಮಕ್ಕಳು). ಈಗಲೂ ಕೃಷಿ ಸಂಸ್ಕೃತಿ ಇತ್ತು. ಒಟ್ಟು ಕುಟುಂಬ ವ್ಯವಸ್ಥೆ ಇತ್ತು. ವ್ಯಾಪಕ ಬಡತನವಿತ್ತು.

Screenshot_3 ಒಕ

ಸರಕಾರಗಳು ‘ಗರೀಬಿ ಹಟಾವೋ’ ನೀತಿಯನ್ನು ಅನುಸರಿಸಿದವು. ನಿಧಾನವಾಗಿ ಹಿಂದುಳಿದ ವರ್ಗಗಳು ಮತ್ತು ಕಡುಬಡವರು ತುಸು ಚೇತರಿಸಿಕೊಳ್ಳುವಂತಾಯಿತು. ಹಾಗೆಯೇ ಹೆಚ್ಚು ಹೆಚ್ಚಾಗಿ ಎಲ್ಲ ವರ್ಗಗಳು ಮಾನಸಿಕವಾಗಿ ಬೆರೆತು ಒಂದು ದೇಶ (ನೇಶನ್ ಸ್ಟೇಟ್) ಅನ್ನು ಸೃಷ್ಟಿಸಿದವು. ಸಮಾನತೆಯ ಭಾವನೆ ಹುಟ್ಟಿಕೊಂಡಿತು. ಆರ್ಥಿಕವಾಗಿ ತುಸು ಚೈತನ್ಯ ಬಂತು. ಬಾಂಗ್ಲಾ ಯುದ್ಧದ ಗೆಲುವು ದೇಶಕ್ಕೆ ಆತ್ಮವಿಶ್ವಾಸವನ್ನು ತಂದಿತ್ತಿತು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣಕ್ಕೆ ಭಾರಿ ಒತ್ತು ನೀಡಲಾಯಿತು. ಸರಕಾರಿ ನೌಕರಿಗಳು ಬಂದವು. ಬ್ಯಾಂಕ್‌ಗಳು ಸರಕಾರೀಕರಣಗೊಂಡವು. ಪ್ರಾಥಮಿಕ ಶಾಲಾ ಶಿಕ್ಷಕ, ಬ್ಯಾಂಕ್, ಪೊಲೀಸು, ಅಟೆಂಡರ್, ಇತ್ಯಾದಿ ನೌಕರಿಗಳು ದೊಡ್ಡಸಂಖ್ಯೆ ಯಲ್ಲಿ ಹುಟ್ಟಿಕೊಂಡವು.

ಮನೆಯಲ್ಲಿ ಒಬ್ಬರು ಇಬ್ಬರು ನೌಕರಿ ಮಾಡಿದರು. ಕುಟುಂಬ ಕಲ್ಯಾಣ ಯೋಜನೆ ಬಂತು. ಹತ್ತು ಹದಿನೈದು ಮಕ್ಕಳ ಕುಟುಂಬಗಳು ಕಡಿಮೆಯಾಗಿ ಕುಟುಂಬಗಳಲ್ಲಿ ಮೂರು ನಾಲ್ಕು ಮಕ್ಕಳು ಬಂದರು. ನಂತರದ ಯುವ ಪೀಳಿಗೆ ಎಂಬತ್ತರಿಂದ ತೊಂಬತ್ತರ ದಶಕದಲ್ಲಿ ಯುವಕರಾಗಿದ್ದವರು. ನಮ್ಮ ಪೀಳಿಗೆ. ಮಧ್ಯರಾತ್ರಿಯ ಮೊಮ್ಮಕ್ಕಳ ಮಕ್ಕಳು. ಈಗ ಉನ್ನತ ಶಿಕ್ಷಣ ದೊರೆಯಲು ಆರಂಭವಾಯಿತು.

ಕರ್ನಾಟಕದಲ್ಲಿ ದೇವರಾಜ ಅರಸು ಕಾಲೇಜು ಶಿಕ್ಷಣವನ್ನು ಉಚಿತವಾಗಿಸಿದರು. ರಾಮಕೃಷ್ಣ ಹೆಗಡೆ ಉಚಿತ ಬಸ್ಸು ಸಂಚಾರ ಕಲ್ಪಿಸಿದರು. ಬಂಗಾರಪ್ಪ ಹಳ್ಳಿಗರಿಗೆ ರಿಸರ್ವೇಶನ್ ಜಾರಿಗೆ ತಂದರು. ವೀರಪ್ಪ ಮೊಯ್ಲಿ ಸೀಟ್‌ಗಳನ್ನು ಸಿಇಟಿ ಮೂಲಕ ಹಂಚಿಕೆ ಜಾರಿಗೆ ತಂದರು. ತಾಂತ್ರಿಕ ಶಿಕ್ಷಣಕ್ಕೆ ಭಾರಿ ಒತ್ತು ಬಂತು. ಇಂತಹ ಪ್ರಕ್ರಿಯೆ ದೇಶಾದ್ಯಂತ ನಡೆಯಿತು. ಪೀಳಿಗೆ ಕೆಲವು ಲಿಬರಲ್ ಆದ ನಂಬಿಕೆಗಳೊಂದಿಗೆ ಬೆಳೆಯಿತು. ಹೆಚ್ಚು ಕಡಿಮೆ ಈಗ ಧರ್ಮ, ಜಾತಿ ಇತ್ಯಾದಿ ಭಾವನೆಗಳು ಹಿಂದೆ ಸರಿದವು. ಜಾತ್ಯತೀತವಾಗಿ ಜನ ಹೋಟೆಲ್‌ಗಳಲ್ಲಿ ತಿನ್ನಲು ಆರಂಭಿಸಿದರು. ಟಿವಿ ಬಂತು. ಜನ ಹೊರಗಡೆ ಅಡ್ಡಾಡಲಾರಂಭಿಸಿದರು. ಬೆಂಗಳೂರು ಮುಂಬೈ ನಗರಗಳಲ್ಲಿ ನೌಕರಿ ಮಾಡಿದರು.

ಹೆಚ್ಚು ಕಡಿಮೆ ಎಲ್ಲರೂ ಊರುಗಳನ್ನು ಬಿಟ್ಟು ನಗರಗಳನ್ನು ಸೇರಿಕೊಂಡರು. ಕೃಷಿ ಸಂಸ್ಕೃತಿ ಮರವೆ ಯಾಗಿ ಹೋಯಿತು. ನಗರ ಸಂಸ್ಕೃತಿ ಬಂತು. ಬಂದ ನಗರ ಸಂಸ್ಕೃತಿ ಜನರಿಗೆ ‘ಖಾಸಗಿತನ’ ಒದಗಿಸಿತು. ಜನ ಈಗ ಸಿನಿಮಾ ನೋಡಿದರು. ಬಿಯರ್ ಕುಡಿದರು. ನಾನ್ ವೆಜ್ ತಿನ್ನಲು, ಗುಟ್ಟಾಗಿ ಬ್ಲೂ ಫಿಲಂಗಳನ್ನು ನೋಡಲು ಕಲಿತರು. ನಮ್ಮ ಪೀಳಿಗೆಯ ಕೊನೆಯ ಹಂತದವರಿಗೆ ಅಂದರೆ 90ರ ಸುಮಾರಿಗೆ ಶಿಕ್ಷಣ ಪಡೆದ ಪೀಳಿಗೆಗಿಂತ ದೊಡ್ಡ ದೊಡ್ಡ ನೌಕರಿಗಳು ಸಿಕ್ಕವು. ಐಟಿ ಯುಗ ಬಂತು. ಖರ್ಚು ಮಾಡಲಾಗದಷ್ಟು ಸಂಬಳ ಬಂತು. ಜನ ವಿದೇಶಗಳಿಗೆ ಹೋದರು. ಬಹಳ ಖರ್ಚು ಮಾಡಿದರು. ಇವರನ್ನು ನೋಡಿದ ಹೆಚ್ಚು ಕಡಿಮೆ ಎಲ್ಲರೂ ತಮ್ಮ ಊರು, ಕೃಷಿ ಸಂಸ್ಕೃತಿ, ಹಳ್ಳಿ ಸಂಸ್ಕೃತಿ, ಭಾರತೀಯ ಸಂಸ್ಕೃತಿ ಬಿಟ್ಟರು.

ತಮ್ಮ ಸಂಸ್ಕೃತಿಗಳನ್ನು ಹೆಚ್ಚುಕಡಿಮೆ ಬರೇ ನೆನಪಾಗಿಸಿಕೊಂಡರು. ಈ ಸಂದರ್ಭದಲ್ಲಿ ಅಂದರೆ 90ರ ದಶಕದಲ್ಲಿಯೇ ಭಾರತದಲ್ಲಿ ಮುಕ್ತ ಆರ್ಥಿಕತೆ ಆರಂಭವಾಗಿದ್ದು. ಮುಕ್ತ ಆರ್ಥಿಕತೆಯ ಲಾಭ ದೊರೆತಿದ್ದು ಈ ಪೀಳಿಗೆಗೆ. ಇನ್ನೂ ಒಂದು ಅಂಶವನ್ನು ಗಮನಿಸಬೇಕು. ತೊಂಬತ್ತರ ದಶಕ ಹೆಚ್ಚು ಕಡಿಮೆ ಐಡಿಯಾಲಜಿಗಳಿಂದ ಅಂದರೆ ಕೆಪಿಟಲಿಸ್ಟ್ ಮತ್ತು ಸಮಾಜವಾದಿ ಎರಡೂ ಐಡಿಯಾಲಜಿ ಗಳಿಂದ ಬಿಡುಗಡೆಯಾದ ಜಗತ್ತು.

ರಷ್ಯಾದ ಪತನದ ನಂತರ ಸಮಾಜವಾದಿ ತತ್ವಜ್ಞಾನ ಜನರನ್ನು ಆಕರ್ಷಿಸುವ ತತ್ವಜ್ಞಾನವಾಗಿ ಉಳಿಯಲಿಲ್ಲ. ಹಾಗೆ ಕ್ಯಾಪಿಟಲಿಸ್ಟ್ ಅಂದರೆ ಬಂಡವಾಳಶಾಹಿ ತತ್ವಜ್ಞಾನದ ಬಿರುಕುಗಳು ಕೂಡ ಈಗ ಎದ್ದು ಕಂಡವು. ಈ ಕನ್ಸ್ಯೂಮರ್ ಯುಗದಲ್ಲಿ ಗಾಂಧಿ ಅಪ್ರಸ್ತುತವೆನಿಸಿದರು. ಎಲ್ಲ ತತ್ವಜ್ಞಾನಗಳನ್ನು ಮೀರಿದ ಉದ್ಯಮಗಳು ಅಂದರೆ ಸಾಫ್ಟ್ʼವೇರ್ ಉದ್ಯಮಗಳು ಬಂದವು. ಜ್ಞಾನ ಆಧರಿತ ಜಗತ್ತು ಹುಟ್ಟಿ ಕೊಂಡಿತು. ಹಾಗೆಯೇ ಅಮೇರಿಕನ್ ಮಾದರಿಯ ಮಹಿಳಾ ಹಕ್ಕಿನ, ಸ್ವಾತಂತ್ರ್ಯದ ಕಲ್ಪನೆ ಬಂತು. ಹೆಣ್ಣು ಗಂಡು ನಡುವೆ ವ್ಯತ್ಯಾಸ ಇಲ್ಲ ಎಂಬ ಯೋಚನೆ ಬಂತು. ‌

ಗಂಡ ಹೆಂಡತಿ ಸೇರಿಯೇ ಪಾರ್ಟಿ ಮಾಡಿದರು. ಕುಟುಂಬಕ್ಕೆ ಒಂದೇ ಮಗು ಎಂಬ ಪದ್ಧತಿ ಜಾರಿಗೆ ಬರಲಾರಂಭಿಸಿತು. ಮಕ್ಕಳನ್ನು ವಿಪರೀತ ಮುದ್ದು ಮಾಡಿ ಮುಕ್ತ ವಾತಾವರಣದಲ್ಲಿ ಬೆಳೆಸಿದರು. ಒಟ್ಟಾರೆಯಾಗಿ ಇತಿಹಾಸದ, ಸಂಪ್ರದಾಯಗಳ, ಜಾತಿ ಮತಗಳ, ಐಡಿಯಾಲಜಿಯ, ಹಣಕಾಸಿನ, ಹೆಣ್ಣು ಗಂಡು ಎನ್ನುವ ಯಾವುದೇ ಸಂಕೋಲೆಗಳಿಲ್ಲದ ಜಗತ್ತು ಅಂದರೆ ಎರಡು ಸಾವಿರದ ಇಸವಿಯ ಸುತ್ತಮುತ್ತ ಹುಟ್ಟಿಕೊಂಡಿತು.

ಇವತ್ತಿನ ‘ಜೆನ್ ಝೀ’ ಇಂತಹ ಪೀಳಿಗೆಗೆ ಸೇರಿದವರು. ಮಧ್ಯರಾತ್ರಿಯ ಮಕ್ಕಳ ಮಕ್ಕಳ ಮೊಮ್ಮಕ್ಕಳು. ಈಗ ಸುಮಾರು ಐವತ್ತರ ಹರಯದ ಸುತ್ತಮುತ್ತ ಇರುವವರ ಮಕ್ಕಳು. ವಿಶೇಷತೆಯೆಂದರೆ ಇವರಲ್ಲಿ ಹೆಚ್ಚಿನವ ರಿಗೆ ಗಟ್ಟಿಯಾದ ಆರ್ಥಿಕ ಹಿನ್ನೆಲೆ ಇದೆ. ಮನೆಯಲ್ಲಿ ಹೆಚ್ಚು ಕಡಿಮೆ ಒಂದೇ ಮಗ ಅಥವಾ ಮಗಳು. ಹೆಚ್ಚು ಕಡಿಮೆ ಕೈ ಕಾಲಿಗೆ ಮಣ್ಣು ತಾಗಿಸದೆ ಬೆಳೆದವರು. ವಿಪರೀತ ಮುದ್ದಿನಲ್ಲಿ ಬೆಳೆದವರು. ಬಡತನವನ್ನು ಅನುಭವಿಸದೆ ಇರುವವರು. ನಾಚಿಕೆ ಮುಳ್ಳು ಚುಚ್ಚಿಸಿಕೊಂಡ ನೋವು ಕೂಡ ಅನುಭವಿಸದವರು. ಜಗತ್ತಿನ ಎಲ್ಲವೂ ಕೇವಲ ಒಂದು ಬಟನ್ ಕ್ಲಿಕ್‌ನಲ್ಲಿ ಇವರಿಗೆ ಸಿಕ್ಕಿತು.

ಇವರು ಹುಟ್ಟುವಾಗಲೇ ಮನೆ ಆಧುನಿಕ ಗೆಜೆಟ್‌ಗಳಿಂದ ಸಮೃದ್ಧವಾಗಿತ್ತು. ಬ್ರಾಡ್‌ಬ್ಯಾಂಡ್ ಇಂಟರ್ನೆಟ್, ಲ್ಯಾಪ್ ಟಾಪ್ ಹಾಗೂ ಸ್ಮಾರ್ಟ್ ಮೊಬೈಲ್‌ಗಳನ್ನು ಕೈಯಲ್ಲಿ ಹಿಡಿದೇ ಹುಟ್ಟಿದರು. ಇಂಟರ್ನೆಟ್ ಎಂತಹ ಜಗತ್ತು ಎಂದರೆ ಅದಕ್ಕೆ ಜಾತಿ ಮತಗಳ, ಬೇಕಾದ್ದು ಬೇಡವಾದ್ದು, ರಾಷ್ಟ್ರೀಯತೆ, ಅಂತಾರಾಷ್ಟ್ರೀಯತೆ, ಖಾಸಗಿತನ, ಗಂಡು ಹೆಣ್ಣು, ತೃತೀಯ ಲಿಂಗ, ಅಂತರಂಗ ಬಹಿರಂಗ ಇತ್ಯಾದಿ ಬೇಲಿಗಳಿಲ್ಲ. ಇಂಟರ್ ನೆಟ್‌ನ ತೀವ್ರ ಪ್ರಭಾವದಲ್ಲಿ ಬಂದಿರುವ ಜೆನ್ ಝೀ ಮನಸ್ಥಿತಿ ಸಹಜವಾಗಿಯೇ ಅವೆಲ್ಲವುಗಳ ಬಂಧದಿಂದ ಮುಕ್ತವಾದದ್ದು. ಗೂಗಲ್‌ನ ಜಗತ್ತು ಇವರಿಗೆ ವಾಸ್ತವ.

ಗೂಗಲ್ಲೇ ಅಂತಿಮ ಸತ್ಯ ಮತ್ತು ಉಳಿದ ಜಗತ್ತೆಲ್ಲವೂ ಮಿಥ್ಯ. ಹಾಗೆಯೇ ಒಟ್ಟು ಕುಟುಂಬಗಳು ಹರಿದು ಹೋಗಿದ್ದರಿಂದ ಸಂಬಂಧಗಳಿಂದ ಮುಕ್ತವಾದ ಜಗತ್ತು ಇದು. ಜೆನ್ ಝೀ ಹೆಚ್ಚಾಗಿ ಕಾಲಕಳೆಯುವುದು ಸಂಬಂಽಗಳೊಂದಿಗೆ, ಸಂಗಾತಿಗಳೊಂದಿಗೆ ಅಲ್ಲ. ಅವರು ಏಕಾಂಗಿಗಳು ಮತ್ತು ಅಂತರ್ಮುಖಿಗಳು. ಹೊರಜಗತ್ತಿನಿಂದ ಮತ್ತು ಜನರಿಂದ ದೂರ ಉಳಿಯಬಯಸುವವರು. ಇಂಟರ್‌ನೆಟ್ ಮತ್ತು ಮೊಬೈಲ್ ಗಳು ಅವರ ಆತ್ಮೀಯ ಸಂಗಾತಿಗಳು. ಅಂತರ್ಜಾಲ ಇಲ್ಲದಿದ್ದರೆ ಅವರ ಜೀವಜಲವೇ ಬತ್ತಿಹೋಗುತ್ತದೆ. ಚಾಟ್ ಮಾಡುವ ಅವರು ಮಾತನಾಡುವುದು ಕಡಿಮೆ. ಏಕಾಂಗಿತನ, ಮಾನವ ಸಂವಹನದ ಕೊರತೆ, ಈ ಪೀಳಿಗೆಯನ್ನು ಕಾಡುತ್ತಿವೆ ಅನಿಸುತ್ತದೆ. ಈ ಕಾರಣದಿಂದಲೇ ಹೆಚ್ಚಾಗಿ ಜೆನ್ ಝೀ ತುಂಬ ಸೂಕ್ಷ್ಮ ಮನಸ್ಸಿನದು. ‘ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ತಂದೆ ತಾಯಿಯನ್ನು ಬೆದರಿಸುವುದು ಇತ್ತೀಚಿನ ದಿನಗಳ ಸಾಮಾನ್ಯ ವಿಷಯ.

ಚಿಕ್ಕ ಚಿಕ್ಕ ಕಾರಣಗಳಿಗೂ ಡಿಪ್ರೆಶನ್ ಮತ್ತು ಆತ್ಮಹತ್ಯೆಯತ್ತ ಜೆನ್ ಝೀ ಮನಸ್ಸು ಓಡುತ್ತಿರುವ ವರದಿಗಳಿವೆ. ಸಂಪ್ರದಾಯಗಳು, ಧರ್ಮ, ಜಾತಿ ಇತ್ಯಾದಿ ಎಲ್ಲವೂ ಕಡಿದುಹೋಗಿದ್ದರಿಂದ ಇತಿಹಾಸ ಮತ್ತು ಸಂಪ್ರದಾಯ, ಸಂಸ್ಕೃತಿ ಮುಕ್ತ ಜಗತ್ತು ಇದು. ಚರಿತ್ರೆಯ ಬಡತನ ಅವರಿಗೆ ಕೇವಲ ಹಾಸ್ಯದ ವಿಷಯ ಅಷ್ಟೇ. ಮಾತ್ರ ಭಾಷೆ, ಒಳಭಾಷೆಗಳು, ದೇಶದ ಸಾಹಿತ್ಯ, ಪರಂಪರೆ ಈ ಮಕ್ಕಳ ಜಗತ್ತಿಗೆ ಅರ್ಥವಾಗುವುದಿಲ್ಲ. ಹಾಗೆಂದು ಜೆನ್ ಜೀಯ ಸಕಾರಾತ್ಮಕ ಗುಣಗಳನ್ನು ನಾವು ಗಮನಿಸಬೇಕು. ಅದಕ್ಕೆ ತನ್ನದೇ ಆದ ಮೌಲ್ಯಗಳ ವ್ಯವಸ್ಥೆ ಇದೆ.

ಸುಮಾರಾಗಿ ಎದ್ದು ಕಾಣುವ ಜೆನ್ ಝೀ ಗುಣವೆಂದರೆ ಅದು ಹಿಪಾಕ್ರಟಿಕ್ ಆದ ಪೀಳಿಗೆ ಅಲ್ಲ. ತನಗೆ ಅನಿಸಿದ್ದನ್ನು ಅದು ನೇರವಾಗಿ ಹೇಳಿಬಿಡುತ್ತದೆ ಮತ್ತು ಮಾಡಿಬಿಡುತ್ತದೆ. ಹಾಗೆಯೇ ನೇರವಾಗಿ, ದಿಟ್ಟವಾಗಿ, ಪ್ರಾಮಾಣಿಕವಾಗಿ ಬದುಕಲು ಇಚ್ಛಿಸುತ್ತದೆ. ಮುಖ್ಯವಾಗಿ ತುಂಬ ಬುದ್ಧಿವಂತ ಪೀಳಿಗೆ. ಸಮಸ್ಯೆಗಳಿಗೆ ಹೊಸ ಪರಿಹಾರಗಳನ್ನು ಕಂಡುಹಿಡಿಯುವದರಲ್ಲಿ ಸಿದ್ಧಹಸ್ತರು ಅವರು. ಭ್ರಷ್ಟತೆಯನ್ನು ಸಹಿಸದ ಜನಾಂಗ ಇದು. ಹಾಗಾಗಿಯೇ ಇಂದಿನ ಮಕ್ಕಳು ಸರಕಾರಿ ನೌಕರಿಗಳಿಗೆ ಹೋಗಲು ಅಷ್ಟೊಂದು ಬಯಸದೆ ಇರುವುದು. ಭ್ರಷ್ಟಾಚಾರ ವಿರುದ್ಧ ಹೋರಾಟ ಗಳಲ್ಲಿ ಅದು ತುಂಬ ಶ್ರದ್ಧೆಯಿಂದ ಭಾಗವಹಿಸುತ್ತದೆ. ಜಾತಿ, ಮತಗಳ ಬಂಧವೂ ಅದಕ್ಕಿಲ್ಲ.

ಸಣ್ಣ, ಕುತ್ಸಿತ ಮನಸ್ಸಿನ ಪೀಳಿಗೆಯಲ್ಲ ಇದು. ಹಾಗೆಯೇ ಬಹಳ ಆಶೋತ್ತರಗಳನ್ನಿಟ್ಟುಕೊಂಡ ಜನಾಂಗ ಇದು. ಅದಕ್ಕೆ ಜಾಗತಿಕ ಮಟ್ಟದ ಜೀವನಶೈಲಿಯಲ್ಲಿ ಬದುಕುವ ಆಸೆ ಇದೆ. ಪರಿಸರದ ಕುರಿತು, ಸ್ವಚ್ಛತೆಯ ಕುರಿತು, ಆರ್ಥಿಕ ಅಭಿವೃದ್ಧಿಯ ಕುರಿತು ತುಂಬ ಭಾವನಾತ್ಮಕವಾಗಿರುವ ಪೀಳಿಗೆ ಇದು. ಸಾಧಾರಣವಾಗಿ ಸೆಕ್ಯುಲರ್ ಆಗಿರುವ ಜೆನ್ ಝೀ ಭಾರತದಲ್ಲಿ ಸ್ಥೂಲವಾಗಿ ಮೋದಿ, ಯೋಗಿ ರಾಜಕೀಯವನ್ನು ಬೆಂಬಲಿಸು ತ್ತದೆ.

‘ಹಿಂದುತ್ವ’ ವಿಚಾರಧಾರೆಯ ಪ್ರಭಾವದಲ್ಲಿ ಬಂದಿದೆ. ಮಿಲಿಟರಿ ದೃಷ್ಟಿಯಿಂದ ಬಲವಾದ ಭಾರತ ವನ್ನು ಕಟ್ಟುವ ಯೋಚನೆಗಳಿಗೆ ಅದರ ಸಹಮತವಿದೆ. ಮೋದಿ ಆರ್ಥಿಕ ನೀತಿಗಳಿಗೂ ಅದರ ಬೆಂಬಲ ವಿದೆ. ಅದು ಬಯಸುವುದು ಬಲವಾದ, ಸಮೃದ್ಧವಾದ, ಸ್ವಚ್ಛವಾದ, ಗುಣಮಟ್ಟದ ಜೀವನವನ್ನು ನೀಡುವ ರಾಜಕೀಯವನ್ನು. ದೇಶದ ವ್ಯಾಪಕ ಭ್ರಷ್ಟತೆ, ಹಳೆಯ ಕಾನೂನುಗಳು, ಸಾವಕಾಶವಾಗಿ ನಡೆಯುವ ನ್ಯಾಯ ವ್ಯವಸ್ಥೆ, ರಿಸರ್ವೇಶನ್, ಮೈನಾರಿಟಿ ಓಲೈಕೆಯ ಹಳೆಯ ರಾಜಕೀಯ ಶೈಲಿಯ, ಸರಕಾರಿ ವ್ಯವಸ್ಥೆಯ ಕುರಿತು ಜೆನ್ ಝೀಗೆ ತೀವ್ರ ರೇಜಿಗೆ ಇದೆ.

ಈಗ ಜೆನ್ ಝೀ ಬಯಸುತ್ತಿರುವುದು ಮುಖ್ಯವಾಗಿ ಶಿಕ್ಷಣ, ನ್ಯಾಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭಾರಿ ಸುಧಾರಣೆಗಳನ್ನು. ಜೆನ್ ಝೀಯನ್ನು ಯಾರೂ ಹಗುರವಾಗಿ ತೆಗೆದುಕೊಳ್ಳು ವಂತೆ ಇಲ್ಲ. ತೀವ್ರವಾಗಿ, ಉದ್ರೇಕಿತವಾಗಿ ಯೋಚಿಸುವ, ಕ್ರಿಯೆಯಲ್ಲಿ ತೊಡಗುವ ಜನಾಂಗ ಇದು. ಮಾತು ಮತ್ತು ಕೃತಿಗಳಲ್ಲಿ ವಿಪರೀತಕ್ಕೆ ಕೂಡ ಹೋಗಿ ಬಿಡಬಲ್ಲವರು ಅವರು. ಈಗಿರುವ ಸರಕಾರ ಗಳು ಹಿಂದಿನದೇ ದಾರಿ ತುಳಿದರೆ ಜೆನ್ ಝೀ ಸುಮ್ಮನಿರಲಿಕ್ಕಿಲ್ಲ. ಅದಕ್ಕೆ ಕಾಯುತ್ತ ಕೂರುವ ಸಹನೆಯಿಲ್ಲ.

ಸಂಪೂರ್ಣವಾಗಿ ಹೊಸ ಪಕ್ಷವೊಂದಕ್ಕೆ ಅದು ಅಧಿಕಾರ ನೀಡಿಬಿಡಬಹುದು. ಏಕೆಂದರೆ ಅದು ಹೆಚ್ಚು ಕಡಿಮೆ ಒಂದೇ ಕಡೆ ಮತ ನೀಡುತ್ತದೆ. ಮತ್ತು ಚುನಾವಣೆಗಳನ್ನು ದೊಡ್ಡ ಪ್ರಮಾಣದಲ್ಲಿ ಪ್ರಭಾವಿಸುವ ಶಕ್ತಿ ಅದಕ್ಕಿದೆ. ತಮಿಳುನಾಡಿನಲ್ಲಿ ಟಿವಿಕೆಯನ್ನು ಗೆಲ್ಲಿಸಿದ ಹಾಗೆ. ಜೆನ್ ಝೀಯನ್ನು ತನ್ನ ಜೊತೆ ಕೊಂಡೊಯ್ಯಲು ಮೋದಿ ಸರಕಾರ ಕೆಲವು ಭಾರೀ ನಿರ್ಣಯಗಳನ್ನು ತೆಗೆದುಕೊಳ್ಳ ಬೇಕಾಗಿ ಬರಬಹುದು. ಇಲ್ಲವಾದರೆ ಬಿಜೆಪಿ ದುರ್ಬಲಗೊಂಡು ‘ಆಪ್’ ನಂತಹ ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಳ್ಳಲಿವೆ.