ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Prof R G Hegde Column: ಭಾರತಕ್ಕೆ ಪಾಠ ಹೇಳುವ ದೇಶಗಳು ಸೆಕ್ಯುಲರ್ ಆಗಿರಲಿಲ್ಲ!

ರಾಮಾಯಣ, ಮಹಾಭಾರತ ಬಂದಿವೆ. ‘ಕಾಮಶಾಸ್ತ್ರ’ದಂತಹ ಶೃಂಗಾರ ಕೃತಿ ಕೂಡ ಹುಟ್ಟಿಕೊಂಡಿದೆ. ಜನಪದ ಎಲ್ಲ ಭಾಷೆಗಳಲ್ಲಿಯೂ ಹುಟ್ಟಿಕೊಂಡಿದೆ. ಭಾರತದಲ್ಲಿನ ಎಲ್ಲ ಕಲೆಗಳಿಗೆ, ಸಾಹಿತ್ಯಕ್ಕೆ ‘ಆರಾಧನಾ’ ರೂಪವಿದೆ. ಅಂದರೆ ಧರ್ಮದ ಲೇಪನವಿದೆ ನಿಜ. ಆದರೆ ಆರಾಧನೆಯ ಮನೋಭಾವ ಧಾರ್ಮಿಕ ಕಟ್ಟರ್ ಸ್ವರೂಪ ತಾಳಿ ಸಂಸ್ಕೃತಿಯ ಕತ್ತು ಹಿಸುಕಿರುವಂತೆ ಇಲ್ಲಿ ಅನಿಸುವುದಿಲ್ಲ.

ಭಾರತಕ್ಕೆ ಪಾಠ ಹೇಳುವ ದೇಶಗಳು ಸೆಕ್ಯುಲರ್ ಆಗಿರಲಿಲ್ಲ!

-

Profile
Ashok Nayak Aug 1, 2026 8:43 AM

ಧರ್ಮಕಾರಣ

ಪ್ರೊ.ಆರ್.ಜಿ ಹೆಗಡೆ

ಬ್ರಿಟಿಷ್ ಮತ್ತು ಆ ಮಾದರಿಯ ಚಿಂತಕರು ಐತಿಹಾಸಿಕವಾಗಿ ಬಿಂಬಿಸುತ್ತ ಬಂದಿರುವ ಒಂದು ಮಾತೆಂದರೆ ಭಾರತ ಧರ್ಮಕ್ಕೆ, ಧಾರ್ಮಿಕ ಪರಂಪರೆಗಳಿಗೆ ಕಟ್ಟುಬಿದ್ದ ದೇಶ. ಧಾರ್ಮಿಕತೆ ಭಾರತದ ಸಂಸ್ಕೃತಿಯ ಮೇಲೆ ಕರಿನೆರಳನ್ನು ಬೀರಿದೆ. ಹಾಗೆಯೇ ಅವರು ಹೇಳುತ್ತ ಬಂದಿರುವ ಇನ್ನೊಂದು ಮಾತೆಂದರೆ ಇಂಗ್ಲಂಡ್ ಮತ್ತಿತರ ಪಾಶ್ಚಾತ್ಯ ದೇಶಗಳು ‘ಸೆಕ್ಯುಲರ್’ ಅಂದರೆ ‘ಜಾತ್ಯತೀತ/ ಧರ್ಮಾತೀತ’ ದೇಶಗಳು.

ನೋಬೆಲ್ ಪ್ರಶಸ್ತಿ ವಿಜೇತ ವಿ.ಎಸ್.ನಾಯ್‌ಪಾಲ್ ಕೂಡ ಇಂತಹ ಮಾತುಗಳನ್ನು ತಮ್ಮ ಪುಸ್ತಕ ಗಳು India: A Wounded Civilization ಮತ್ತು India: An Area of Darkness ಗಳಲ್ಲಿ ಬಲವಾಗಿ ಸಮರ್ಥಿಸುತ್ತಾರೆ. ಇಂತಹ ಅಭಿಪ್ರಾಯ ವನ್ನು ನಮ್ಮ ದೇಶದ ‘ಬುದ್ಧಿಜೀವಿ’ಗಳೂ ಸೇರಿದಂತೆ ಜಗತ್ತು ಒಪ್ಪಿಕೊಂಡು ಸೀಲು ಹೊಡೆದು ಬಿಟ್ಟಿದೆ.

ಆದರೆ ವಾಸ್ತವ ಹಾಗೆ ಇಲ್ಲ. ನಿಜವಾಗಿ ಇಂಗ್ಲಂಡ್ ಅನ್ನೂ ಸೇರಿದಂತೆ ಹಲವು ಯುರೋಪಿಯನ್ ದೇಶಗಳೇ ಐತಿಹಾಸಿಕವಾಗಿ ಧರ್ಮಕ್ಕೆ ಹೆಚ್ಚು ಕಟ್ಟುಬಿದ್ದವುಗಳಾಗಿದ್ದವು. ಧರ್ಮದ ಹಿಡಿತದಲ್ಲಿ ಇದ್ದವು. ಮತ್ತು ಅವುಗಳ ಸಾಂಸ್ಕೃತಿಕ ಅಭಿವೃದ್ಧಿಯನ್ನು ಧರ್ಮ ಕುಂಠಿಸಿದೆ. ಸಮಾಜ, ಸಾಹಿತ್ಯ ಮತ್ತು ಸಂಸ್ಕೃತಿ ಧರ್ಮದ ಎಂತಹ ಹಿಡಿತದಲ್ಲಿ ಇದ್ದವೆಂದರೆ ಅವಕ್ಕೆ ಸುಮಾರು ಹದಿನೈದನೆಯ ಶತಮಾನದವರೆಗೂ ಧರ್ಮದ ಬಿಗಿ ಮುಷ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲೇ ಇಲ್ಲ. ಧರ್ಮ ಏನು ಹೇಳುತ್ತದೆಯೋ ಅದರಂತೆ ನಡೆದ ಸಮಾಜಗಳು ಅವು. ಜೀವನವೇ ಧರ್ಮಮಯ. ಈ ವಾಸ್ತವವನ್ನು ಇಂಗ್ಲಿಷ್ ಸಾಹಿತ್ಯ ಮತ್ತು ಸಂಸ್ಕೃತಿ ಚರಿತ್ರೆ ನಿಚ್ಚಳವಾಗಿ ಹೇಳುತ್ತದೆ.

ಇದನ್ನೂ ಓದಿ: Prof R G Hegde Column: ಮಾತು ಸೋತವರು ಸುಳ್ಳು ನಾಯಕರ ದೂರವಿಡಬೇಕು

ಇಲ್ಲಿ ಇನ್ನೊಂದು ಕುತೂಹಲವನ್ನೂ ಗಮನಿಸಬೇಕು. ಇಂಗ್ಲಂಡ್‌ನ ಮತ್ತು ಯೂರೋಪ್‌ನ ಧರ್ಮಾಚರಣೆ ಭಾರತದಂತೆ ಕಲೆ, ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಗೆ ಪೂರಕವಾಗಿಯೂ ಇರಲಿಲ್ಲ ಅನಿಸುತ್ತದೆ. ಬಹಳ ದೊಡ್ಡ ಚರ್ಚೆಯ ವಿಷಯ ಇದು. ಇದಕ್ಕೆ ಕಾರಣಗಳು ಏನು ಎಂಬ ಪ್ರಶ್ನೆಗೆ ಸುಲಭ ಉತ್ತರಗಳು ಇಲ್ಲ. ಬಹುಶಃ ಒಂದು ಕಾರಣ ಧರ್ಮಗಳ ಸ್ವರೂಪ ಎಂದೇ ಅನಿಸು ತ್ತದೆ.

ಗಮನಿಸಿ. ಭಾರತದಲ್ಲಿ ಹಿಂದೂ ಧರ್ಮ ಪ್ರಬಲವಾಗಿತ್ತು. ನಂತರ ಬೌದ್ಧ ಮತ್ತು ಜೈನ ಧರ್ಮಗಳೂ ಬಂದವು. ಆದರೆ ಈ ಧರ್ಮಗಳು ಎಂದಿಗೂ ಸಂಸ್ಕೃತಿಯ ವಿಶಾಲ ಹರಿವನ್ನು ಹತ್ತಿಕ್ಕಿದ ಧರ್ಮ ಗಳಾಗಿರಲಿಲ್ಲ. ಬದಲಾಗಿ ಬೆಳವಣಿಗೆಯನ್ನು ಪ್ರೋತ್ಸಾಹಿಸಿದ್ದವು. ಈ ಮಾತಿಗೆ ನಮ್ಮ ಸಾಂಸ್ಕೃತಿಕ, ಸಾಹಿತ್ಯಿಕ ಚರಿತ್ರೆಯೇ ಸಾಕ್ಷಿ. ಗಮನಿಸಿ. ಸುಮಾರು ಮೂರು ಸಾವಿರ ವರ್ಷಗಳ ಭಾರತೀಯ ಸಂಸ್ಕೃತಿಯ ಉದ್ದಕ್ಕೂ ಮಹಾಕಾವ್ಯ, ಕಾವ್ಯ, ನಾಟ್ಯ ಪ್ರಕಾರಗಳು, ಶಿಲ್ಪಶಾಸ್ತ್ರ, ನಾಟಕಗಳು ಹುಟ್ಟಿಕೊಂಡು ಹುಲುಸಾಗಿ ಬೆಳೆದುಬಂದಿವೆ.

ರಾಮಾಯಣ, ಮಹಾಭಾರತ ಬಂದಿವೆ. ‘ಕಾಮಶಾಸ್ತ್ರ’ದಂತಹ ಶೃಂಗಾರ ಕೃತಿ ಕೂಡ ಹುಟ್ಟಿ ಕೊಂಡಿದೆ. ಜನಪದ ಎಲ್ಲ ಭಾಷೆಗಳಲ್ಲಿಯೂ ಹುಟ್ಟಿಕೊಂಡಿದೆ. ಭಾರತದಲ್ಲಿನ ಎಲ್ಲ ಕಲೆಗಳಿಗೆ, ಸಾಹಿತ್ಯಕ್ಕೆ ‘ಆರಾಧನಾ’ ರೂಪವಿದೆ. ಅಂದರೆ ಧರ್ಮದ ಲೇಪನವಿದೆ ನಿಜ. ಆದರೆ ಆರಾಧನೆಯ ಮನೋಭಾವ ಧಾರ್ಮಿಕ ಕಟ್ಟರ್ ಸ್ವರೂಪ ತಾಳಿ ಸಂಸ್ಕೃತಿಯ ಕತ್ತು ಹಿಸುಕಿರುವಂತೆ ಇಲ್ಲಿ ಅನಿಸುವುದಿಲ್ಲ.

ದೇಶದ ಸಾಂಸ್ಕೃತಿಕ ಚರಿತ್ರೆ ಕಟ್ಟುವಿಕೆಯಲ್ಲಿ ಎಲ್ಲ ಧರ್ಮಗಳೂ ಭಾಗವಹಿಸಿವೆ. ಹಿಂದೂ ಧರ್ಮ ಒಂದು ಜನಾಂಗದ ಧ್ವನಿಯನ್ನು ಮಾತ್ರ ಎತ್ತಿ ಹಿಡಿಯಿತು ಎಂಬ ವಾದದಲ್ಲಿಯೂ ಪೂರ್ತಿಯಾದ ಸತ್ಯವಿಲ್ಲ. ವ್ಯಾಸ, ವಾಲ್ಮೀಕಿ ಮತ್ತಿತರ ಹಲವರು ಮೇಲ್ವರ್ಗದವರಾಗಿರಲಿಲ್ಲ ಎಂಬುದನ್ನು ಗಮನಿಸಬೇಕು.

62 ok

ಮತ್ತು ನಮ್ಮ ಚರಿತ್ರೆಗೆ, ಕಲೆ ಸಂಸ್ಕೃತಿಗೆ ಸಮಾಜದ ಎಲ್ಲ ವರ್ಗಗಳ ಕಾಣಿಕೆ ಸಂದಿದೆ. ಇದಕ್ಕೆ ಕಾರಣ ನಮ್ಮ ಧರ್ಮಗಳ ಸ್ವರೂಪ. ಹಿಂದೂ ಧರ್ಮವನ್ನೂ ಸೇರಿದಂತೆ ದೇಶದಲ್ಲಿ ಹುಟ್ಟಿ ಬೆಳೆದ ಧರ್ಮಗಳು ಏಕಪದರದ ಶಿಲೆಗಳು ಅಲ್ಲವೇ ಅಲ್ಲ. ಅಥವಾ ನಮ್ಮ ಧರ್ಮಗಳು ಒಂದೇ ರೀತಿಯ ಆಚರಣೆಗಳನ್ನು, ಕಟ್ಟುಪಾಡುಗಳನ್ನು ಹೊಂದಿದ ಧರ್ಮಗಳು ಅಲ್ಲ. ಉದಾ. ಹಿಂದೂ ಧರ್ಮ ದೊಳಗೆ ಹಲವು ಪದರುಗಳಿವೆ. ವಿರೋಧಾಭಾಸಗಳು, ಪರಸ್ಪರ ವಿರೋಧಿ ಪಂಥಗಳು, ಇವೆ.

ಧರ್ಮದೊಳಗೇ ಕಟುವಾದ ಸ್ವವಿಮರ್ಶೆ ಇದೆ. ದೇವರನ್ನು ಕಾಣುವ, ಗ್ರಹಿಸುವ, ತಲುಪುವ ಹಲವು ವಿಧಾನಗಳಿವೆ. ಧರ್ಮದ ಕುರಿತಾದ ಹಾಸ್ಯ, ವ್ಯಂಗ್ಯ, ಮತ್ತು ಕಟು ವಿಮರ್ಶೆ ಕೂಡ ಭಾರತೀಯ ಸಂಸ್ಕೃತಿಯ ಭಾಗ. ಹಾಗಾಗಿಯೇ ಹಿಂದೂ ಧರ್ಮದ ವಿರುದ್ಧ ನಿರಂತರ ಒಳ ಚಳುವಳಿಗಳು, ಶಂಕರಾಚಾರ್ಯರು, ಬಸವಣ್ಣನವರ ಮಹಾಕ್ರಾಂತಿ, ಭಕ್ತಿ ಪಂಥ, ದಾಸ ಪಂಥ, ಹುಟ್ಟಿಕೊಂಡಿದ್ದು. ಇವೆಲ್ಲ ಹಿಂದೂ ಧರ್ಮವನ್ನು ವಿವಿಧ ರೀತಿಗಳಲ್ಲಿ ವ್ಯಾಖ್ಯಾನಿಸಿವೆ.

ಹಾಗಾಗಿ ನಮ್ಮಲ್ಲಿ ಧರ್ಮ ಸಂಸ್ಕೃತಿಯನ್ನು ಮುದುಡಿಸಲಿಲ್ಲ. ಆದರೆ ಹೆಚ್ಚುಕಡಿಮೆ ಏಕಶಿಲೆ ಯಂತಿದ್ದ, ಬಿಗುವಾಗಿದ್ದ ಪಶ್ಚಿಮದ ಅಂದಿನ ಧಾರ್ಮಿಕತೆ ತನಗೆ ಹೊರತಾದ, ಅಥವಾ ಜಗತ್ತಿನ ತನ್ನ ಕಲ್ಪನೆಗೆ ವಿರೋಧವಾದ, ಧರ್ಮಾತೀತ ವಾದ ಕಲ್ಪನೆ, ಕಲೆ ಹುಟ್ಟಿಕೊಳ್ಳಲು ಬಿಡಲೇ ಇಲ್ಲ. ‘ಸೆಕ್ಯುಲರ್’ ಆದ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಅದು ಅವಕಾಶ ನೀಡಲೇ ಇಲ್ಲ.

ಇನ್ನೊಂದು ಕುತೂಹಲದ ವಿಷಯ. ಕೆಲವೊಮ್ಮೆ ಧರ್ಮಾತೀತವಾದ ಕಲ್ಪನೆ ಅರಳಲು ಬಿಟ್ಟರೂ ಕೂಡ ಅಂತಹವನ್ನು ಸೃಷ್ಟಿಸಿದ್ದು ಆ ಕಲ್ಪನೆಗಳನ್ನು ತಿರಸ್ಕರಿಸಲು ಮಾತ್ರ. ಉದಾಹರಣೆಗೆ ಮಿಲ್ಟನ್ ತನ್ನ Paradise Lost ನಲ್ಲಿ ಸಟಾನ್‌ನಂತಹ, ಬೀಲ್ಝ್‌ಬಬ್‌ನಂತಹ ಪರಮನೀಚ ರಾದ, ಕಟ್ಟರ್ ದೈವ ವಿರೋಽಯಾದ ಪಾತ್ರಗಳನ್ನು ಸೃಷ್ಟಿಸುತ್ತಾನೆ. ಆದರೆ ಅವುಗಳನ್ನು ಆತ ಸೃಷ್ಟಿಸು ವುದು ಆ ಕಲ್ಪನೆಗಳನ್ನು ತಿರಸ್ಕರಿಸಲು ಮಾತ್ರ. ಆದರೆ ನಮ್ಮ ಸಾಹಿತ್ಯ ಯಾವುದೇ ‘ಕೆಟ್ಟ’ ಪಾತ್ರ ಗಳನ್ನು ಸೃಷ್ಟಿಸಿ ಅವನ್ನು ತಿರಸ್ಕರಿಸುವಂತೆ ಕಾಣುವುದಿಲ್ಲ.

ಶಿಶುಪಾಲನ ಪಾತ್ರವನ್ನು ಕೂಡ ಕೃತಿಕಾರ ತಿರಸ್ಕರಿಸಲಿಲ್ಲ. ಅಂತಹ ಪಾತ್ರವೂ ಕಲ್ಪನೆಯಾಗಿ ಹೊರಬಂತು. ಒಂದು ದೃಷ್ಟಿಯಿಂದ ನೋಡಿದರೆ ನಮ್ಮಲ್ಲಿ ಧರ್ಮಕ್ಕೆ, ದೇವರಿಗೆ ಅಪ್ಪಟ ವಿರೋಧಿ ಯಾದ ಪಾತ್ರಗಳೇ ಕಾಣಸಿಗುವುದಿಲ್ಲ. ಉದಾಹರಣೆಗೆ ನಮ್ಮಲ್ಲಿ ಬರುವ ರಾವಣ, ಕುಂಭಕರ್ಣ, ಮಾಗಧ, ಕಂಸ ಇಂತಹ ಪಾತ್ರಗಳು ಕೂಡ ಆಳವಾಗಿ ಧಾರ್ಮಿಕ ಮನೋಭಾವ ಹೊಂದಿದವುಗಳೇ. ಕೃತಿಕಾರನ ಉದ್ದೇಶ ಅವುಗಳನ್ನು ತಿರಸ್ಕರಿಸುವುದು ಅಲ್ಲ.

ಭಾರತದಲ್ಲಿ ಧರ್ಮ ಪಾತ್ರ ಸೃಷ್ಟಿಯನ್ನು ನಿಯಂತ್ರಿಸಿಲ್ಲ. ಹೀಗಾಗಿ ನಮ್ಮ ಸಾಹಿತ್ಯ ಅನಾದಿಕಾಲ ದಿಂದಲೇ ವೈವಿಧ್ಯಮಯ, ಮಾನವೀಯ ಪಾತ್ರಗಳನ್ನು ಸೃಷ್ಟಿಸಿತು. ನವರಸವನ್ನು ಅಭಿವ್ಯಕ್ತಿಸುವ ಕಲ್ಪನೆಗಳು, ಕಥೆಗಳು, ಪಾತ್ರಗಳು ಸೃಷ್ಟಿಯಾಗಿವೆ. ಹೀಗಾಗಿ ನಮ್ಮಲ್ಲಿ ಧರ್ಮ ಪಶ್ಚಿಮದ ರೀತಿಯಲ್ಲಿ ಸಾಂಸ್ಕೃತಿಕ ಬೆಳವಣಿಗೆಯ ಕತ್ತು ಹಿಸುಕಿಲ್ಲ ಎಂದೇ ಹೇಳಬೇಕು.

ಮೇಲಿನ ಮಾತುಗಳಿಗೆ ಇಂಗ್ಲಿಷ್ ಸಾಹಿತ್ಯ ಚರಿತ್ರೆ ನಮಗೆ ಆಧಾರಗಳನ್ನು ನೀಡುತ್ತದೆ. ಅದು ಹೇಳುವುದೆಂದರೆ ಇಂಗ್ಲಂಡಿನಲ್ಲಿ ಹೀಗೆ ಆಗಲಿಲ್ಲ. ಧರ್ಮ ಹೆಚ್ಚು ಕಡಿಮೆ ದೇಶವನ್ನು 17ನೆಯ ಶತಮಾನದವರೆಗೂ ಆಳಿಬಿಟ್ಟಿತು. ಮತ್ತು ಧರ್ಮ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪೋಷಿಸಲೇ ಇಲ್ಲ. ಒಂದು ಬಲವಾದ ಜನಪರ, ಜನಪದೀಯ, ಮಾನವಕೇಂದ್ರಿತ ಸಾಹಿತ್ಯ ಇಂಗ್ಲಂಡಿನಲ್ಲಿ ಬಂದೇ ಇಲ್ಲ.

ಶ್ರೇಷ್ಠ ಸಾಹಿತ್ಯ ಮತ್ತು ಕಲಾಕೃತಿಗಳು, ಕನಿಷ್ಟಪಕ್ಷ ಗಮನಾರ್ಹವಾದ ಸಾಹಿತ್ಯ, ನೃತ್ಯಪ್ರಕಾರಗಳು, ನಾಟಕಗಳು ಇತರ ಕಲಾ ಪ್ರಕಾರಗಳು ಬರಲಿಲ್ಲ. ಬಂದಿರುವ ನಾಟಕಗಳು, ಬರಹಗಳು ಕಲಾಕೃತಿ ಗಳಾಗಿ ‘ಬಾಲಿಶವಾದವು’ ಎಂದೇ ಹೇಳಬೇಕು. (ಇಲ್ಲಿಯವರೆಗೆ ನಮ್ಮ ದೇಶದಲ್ಲಿ ಒಂದು ಬೃಹತ್ತಾದ ಮತ್ತು ಸಂಪದ್ಭರಿತ ಸಾಹಿತ್ಯಿಕ, ಸಾಂಸ್ಕೃತಿಕ ಪರಂಪರೆ ಬೆಳೆದು ಬಂದಿತ್ತು.) ಉದಾಹರಣೆಗೆ, ಬಂದವು ‘ಮಿರಕಲ್ ಪ್ಲೇ’, ‘ಮೊರಾಲಿಟಿ ಪ್ಲೇ’ ಇಂತವು. ಸೆಕ್ಯುಲರ್ ನಾಟಕವೊಂದು (ದ ಪ್ಲೇ ಆಫ್‌ ಫಾರ್ ಪಿ’ಸ್) ವೇದಿಕೆ ಹತ್ತಲು ವರ್ಷಗಳೇ ಬೇಕಾದವು.

ಇದಕ್ಕೆ ಕಾರಣ ಬ್ರಿಟಿಷ್ ರಂಗಭೂಮಿ ಧರ್ಮದ ಬಲವಾದ ಹಿಡಿತದಲ್ಲಿ ಇದ್ದುದು. ಎಂತಹ ಹಿಡಿತದಲ್ಲಿ ಎಂದರೆ ಧಾರ್ಮಿಕ ನಾಟಕಗಳನ್ನು ಬಿಟ್ಟು ಬೇರೆ ಮಾನವೀಯವಾದ ಪಾತ್ರಗಳನ್ನು, ಕ್ರಿಯೆಯನ್ನು ಪ್ರದರ್ಶಿಸುವ ನಾಟಕಗಳಿಗೆ ಅವಕಾಶವೇ ಇರಲಿಲ್ಲ. ಇದ್ದವು ಕೇವಲ ‘ಆರಾಧನ’ ನಾಟಕಗಳು ಮಾತ್ರ. ಎಷ್ಟರ ಮಟ್ಟಿಗೆ ಎಂದರೆ ಅವನ್ನು ಕೇವಲ ‘ಮಂದಿರಗಳ’ ಪರಿಧಿ ಒಳಗಡೆ ಆಡಲಾಗುತ್ತಿತ್ತು. ಕಥೆಗಳು ಧರ್ಮದ ಮಹಿಮೆಯನ್ನು ಸಾರುವಂಥವು.

ಸಹಜವಾಗಿ ಪಾತ್ರ ಚಿತ್ರಣ, ಕಲ್ಪನೆಯ ವಿಸ್ತಾರ ಇತ್ಯಾದಿ ಇರಲೇ ಇಲ್ಲ. ಏಕೆಂದರೆ ಮಾನವೀಯ ಗುಣಗಳನ್ನು ದೈವೀ ಪಾತ್ರಗಳಿಗೆ ಅನ್ವಯಿಸಲಾಗುತ್ತಿರಲಿಲ್ಲ. ಲೇಪಿಸಲಾಗುತ್ತಿರಲಿಲ್ಲ. ಇಂತಹ ನಾಟಕಗಳು ಬ್ರಿಟಿಷ್ ಪರಂಪರೆಯಲ್ಲಿ ನೂರಾರು ವರ್ಷಗಳ ಕಾಲ ಜೀವಂತವಿದ್ದವು. ಕಾವ್ಯ, ಕಾದಂಬರಿ, ನಾಟ್ಯ ಇತ್ಯಾದಿಯಂತೂ ಇರಲೇ ಇಲ್ಲ ಬಿಡಿ.

ಒಪ್ಪಿಕೊಳ್ಳಬೇಕು. ಹದಿನೈದನೆಯ ಶತಮಾನದಲ್ಲಿ ನಡೆದ ಪುನರುಥ್ಥಾನ (ರಿನೆಸನ್ಸ್) ಇದೆಲ್ಲವನ್ನೂ ಭಾರಿ ಪ್ರಮಾಣದಲ್ಲಿ ಬದಲಾಯಿಸಿತು. ಆಗ ಬಂದ ಶೇಕ್ಸ್‌ಪಿಯರ್ ತನ್ನ ಸಾಹಿತ್ಯದಲ್ಲಿ ಮಾನವ ಕೇಂದ್ರಿತ ಜಗತ್ತೊಂದರ ಪ್ರದರ್ಶನ ನೀಡಿದ. ಕುತೂಹಲವೆಂದರೆ ಆತ ಧರ್ಮದ, ದೇವರ ಕುರಿತು ತಲೆಕೆಡಿಸಿಕೊಳ್ಳಲೇ ಇಲ್ಲ. ಇಂತಹ ಮನಸ್ಥಿತಿಯನ್ನು ಹೊಂದಿದ್ದ, ಕೇವಲ ಜನರ ಮನರಂಜನೆ ಯನ್ನೇ ತನ್ನ ಕಾವ್ಯದ, ನಾಟಕಗಳ ಮುಖ್ಯ ಗುರಿಯನ್ನಾಗಿ ಹೊಂದಿದ್ದ ಶೇಕ್ಸ್‌ಪಿಯರ್ ಇಂಗ್ಲಿಷ್ ಸಾಹಿತ್ಯವನ್ನು ಜಾಗತಿಕ ಮುಡಿಗೇರಿಸಿದ.

ಅಮೂಲ್ಯ ಮಾನವ ಕೃತಿಗಳನ್ನು ರಚಿಸಿ, ಧರ್ಮಾತೀತವಾಗಿ, ಉಳಿದ ಮಾನಸಿಕ ಕಟ್ಟುಪಾಡು ಗಳನ್ನೂ ತ್ಯಜಿಸಿ ಜಗತ್ತನ್ನು ಮೊಟ್ಟಮೊದಲ ಬಾರಿ ತೆರೆದ ಕಣ್ಣುಗಳಿಂದ ನೋಡಿದವ ಶೇಕ್ಸ್‌ಪಿಯರ್. ಸಂಕೋಲೆಗಳನ್ನು ಹರಿದುಹಾಕಿ ಸೂಕ್ಷ್ಮವಾಗಿ ಧರ್ಮದ ವಿರುದ್ಧ ಬಂಡಾಯವೆದ್ದು ಬರೆದವ ಶೇಕ್ಸ್‌ಪಿಯರ್. ಅದರಲ್ಲಿ ಮಾತಿಲ್ಲ.

ಆದರೆ ಪುನರುಥ್ಥಾನ (ರಿನೇಸನ್ಸ್) ತಂದಿಟ್ಟ ಮನೋಭಾವ ಮತ್ತು ಶೇಕ್ಸ್‌ಪಿಯರ್‌ನ ಪ್ರಭಾವ ಇಂಗ್ಲಂಡಿನಲ್ಲಿ ಶೀಘ್ರವಾಗಿ ಹಿಂದಾಗಿ ಹೋಗಿ 17ನೆಯ ಶತಮಾನದಲ್ಲಿ ‘ಕಟ್ಟರ್’ ಧಾರ್ಮಿಕತೆ ಇಂಗ್ಲೆಂಡ್ ಅನ್ನು ಮರಳಿ ಆವರಿಸಿ ಬಿಟ್ಟಿತು. ಈ ಮನೋಭಾವದ ಫಲವಾಗಿ ಹುಟ್ಟಿದ್ದು ಜಾನ್ ಮಿಲ್ಟನ್‌ನ ಸಾಹಿತ್ಯ. ಆತನ ಮಹೋನ್ನತ ಕೃತಿಗಳು ಧಾರ್ಮಿಕ ಮನೋಭಾವದ ಹಿನ್ನೆಲೆ ಯಲ್ಲಿಯೇ ಹುಟ್ಟಿಕೊಂಡವು. ಧರ್ಮದ ಮರುಸ್ಥಾಪನೆಯ ಉದ್ದೇಶದಿಂದಲೇ ಹುಟ್ಟಿಕೊಂಡವು.

ಮಿಲ್ಟನ್‌ನೇ ಹೇಳುಕೊಳ್ಳುವಂತೆ ಆತ ಈ ಕೃತಿಗಳನ್ನು ಬರೆದಿದ್ದು to justify the ways of God to men. ಶೇಕ್ಸ್‌ಪಿಯರ್ ಹೊಂದಿದ್ದ ಮನೋಭಾವದ ವಿರುದ್ಧವಾದ ಮನೋಭೂಮಿಕೆ ಹೊಂದಿದ್ದ ಮಿಲ್ಟನ್ ಇಂಗ್ಲಿಷ್ ಸಾಹಿತ್ಯವನ್ನು ಮರಳಿ ‘ಧರ್ಮ ಕೇಂದ್ರಿತ’ ಜಗತ್ತನ್ನಾಗಿಸಿದ. ನಂತರದ ವಿಕ್ಟೋರಿಯನ್ ಯುಗದಲ್ಲಿ (19ನೆಯ ಶತಮಾನದಲ್ಲಿ) ಕೂಡ ಧಾರ್ಮಿಕ ನೆಲೆ ಹೊಂದಿರುವ ಪರಂಪರಾಗತ ಮೌಲ್ಯದ ವ್ಯವಸ್ಥೆಗಳು ಕಾಣಸಿಗುತ್ತದೆ. ಇಪ್ಪತ್ತನೆಯ ಶತಮಾನದ ಕವಿ ಟಿ.ಎಸ್. ಎಲಿಯಟ್ ಕೂಡ ಆಧುನಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತ ಧರ್ಮದ ಕಡೆಗೇ ಹೋಗುತ್ತಾನೆ.

ಈ ಮಾತುಗಳನ್ನು ಹೇಳುತ್ತಿರುವುದು ‘ನಮ್ಮದೇ ಶ್ರೇಷ್ಠ’, ನಾವೇ ಹೆಚ್ಚು ಜಾತ್ಯತೀತರು ಇತ್ಯಾದಿ ಹೇಳಲು, ತೋರಿಸಲು ಅಲ್ಲ. ಪಾಶ್ಚಿಮಾತ್ಯ ಜಗತ್ತು ನಮ್ಮ ವಿರುದ್ಧ ಎಂತಹ ಸುಳ್ಳುಗಳನ್ನು ಹೇಳಿ ಅವನ್ನೇ ಸತ್ಯವಾಗಿಸಿದೆ ಎಂಬುದನ್ನು ತೋರಿಸಲು ಮಾತ್ರ. ನಮ್ಮ ಸಂಸ್ಕೃತಿ ಮತ್ತು ಸಾಹಿತ್ಯವನ್ನು ನೋಡುವ ಯುರೋಪಿಯನ್ ಮನೋಭಾವ ದೋಷಪೂರಿತವಾಗಿದೆ ಅಷ್ಟೆ.