ಒಂದೊಳ್ಳೆ ಮಾತು
rgururaj628@gmail.com
ಹದ್ದುಗಳು ಸುಮಾರು ಎಪ್ಪತ್ತು ವರ್ಷ ಜೀವಿಸುವ ಪಕ್ಷಿಗಳು. ಆದರೆ ಎಪ್ಪತ್ತು ವರ್ಷದ ಈ ಸಂಪೂರ್ಣ ಆಯಸ್ಸನ್ನ ಬದುಕುವುದಕ್ಕೆ ಹದ್ದುಗಳು ಅಕ್ಷರಶಃ ತಮ್ಮನ್ನೇ ಕೊಂದುಕೊಂಡು, ಮತ್ತೆ ಜೀವ ಪಡೆಯುತ್ತವೆ ಎಂದರೆ ನೀವು ನಂಬಲೇಬೇಕು. ಹದ್ದಿಗೆ ಸುಮಾರು ನಲವತ್ತು ವರ್ಷವಾದಾಗ ಅದು ಜೀವನ ಮತ್ತು ಮರಣದ ಆಯ್ಕೆಯನ್ನು ಎದುರಿಸಬೇಕಾಗುತ್ತದೆ. ನಾಲ್ಕು ದಶಕಗಳಲ್ಲಿ ಅದರ ಉಗುರುಗಳು ತುಂಬಾ ಉದ್ದವಾಗಿ ಮತ್ತು ವಕ್ರವಾಗಿ ಬೆಳೆದಿರುತ್ತವೆ. ಅಂತಹ ಮುರುಟಿ ಹೋದ ವಕ್ರ ಉರು ಉಗುರುಗಳಿಂದ ಅತ್ತಿಗೆ ಬೇಟೆ ಯಾಡಲು ಕೂಡ ಸಾಧ್ಯವಿರುವುದಿಲ್ಲ.
ಅದಷ್ಟೇ ಅಲ್ಲ ಹದ್ದಿನ ಕೊಕ್ಕು ಬಾಗಿ ತನ್ನ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತದೆ. ಇದರಿಂದಾಗಿ ತನ್ನ ಬೇಟೆಯನ್ನು ಹರಿದು ತಿನ್ನಲು ಹದ್ದಿಗೆ ಸಾಧ್ಯವಾಗುವುದಿಲ್ಲ. ಆಹಾರವನ್ನೇ ತಿನ್ನಲಾಗದಿದ್ದ ಮೇಲೆ ಉಪವಾಸವಿದ್ದು ಸಾಯುವ ಪರಿಸ್ಥಿತಿ. ಇದಿಷ್ಟೂ ಸಾಲದು ಎಂಬಂತೆ, ಹದ್ದಿನ ಎದೆಯ ಭಾಗದ ಮತ್ತು ಬೇರೆ ರೆಕ್ಕೆಗಳು ಸಿಕ್ಕಾಪಟ್ಟೆ ಬೆಳೆದು ಭಾರವಾಗಿ ಹದ್ದಿನ ಹಾರಾಟವನ್ನೇ ಸೀಮಿತ ಗೊಳಿಸಿ ಬಿಡುತ್ತದೆ.
ಎಲ್ಲ ಹಕ್ಕಿಗಳಿಗಿಂತ ಮೇಲೆ ಹರಡುವ ಹದ್ದು, ತನ್ನದೇ ರೆಕ್ಕೆಗಳ ಭಾರದಿಂದ ಹಾರಲು ಸಾಧ್ಯವಾಗದ ಪರಿಸ್ಥಿತಿ. ಇಂತಹ ಸಮಯದಲ್ಲಿ ಹದ್ದಿಗಿರುವುದು ಎರಡೇ ಆಯ್ಕೆ. ಒಂದು ತನ್ನನ್ನು ತಾನು ಪರಿವರ್ತಿಸಿಕೊಳ್ಳುವುದು, ಮತ್ತೊಂದು ಸಾವಿಗೆ ಶರಣಾಗುವುದು. ಪರಿವರ್ತನೆ ಅಷ್ಟು ಸುಲಭವಲ್ಲ. ದೀರ್ಘಕಾಲದ ನೋವಿನ ರೂಪಾಂತರವನ್ನು ತನಗೆ ತಾನೇ ಮಾಡಿಕೊಳ್ಳುವ ತಪಸ್ಸು.
ಇದನ್ನೂ ಓದಿ: Roopa Gururaj Column: ನಳ ದಮಯಂತಿಯನ್ನು ಸೇರಿಸಿದ ಅಕ್ಷ ಹೃದಯ ವಿದ್ಯೆ
ಈ ಪ್ರಕ್ರಿಯೆ ಮತ್ತಷ್ಟು ಕುತೂಹಲಕಾರಿಯಾಗಿದೆ. ಪರ್ವತದ ತುದಿಯ ತನ್ನ ಗೂಡಿಗೆ ಮರಳುವ
ಹದ್ದು, ಅಲ್ಲಿ ತನ್ನ ಪುನರ್ಜನ್ಮದ ಕ್ರೂರ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ಎಲ್ಲಕ್ಕಿಂತ ಮೊದಲು ತನ್ನ ಬಾಗಿದ ಕೊಕ್ಕನ್ನು, ಒಡೆಯುವವರೆಗೆ ಬಂಡೆಗೆ ಕುಟ್ಟಿ ಕುಟ್ಟಿ ಮುರಿದು ಹಾಕುತ್ತದೆ. ಇದೇನು ಉಗುರು ಕತ್ತರಿಸಿದಷ್ಟು ಸುಲಭವಲ್ಲ. ಅನೇಕ ದಿನಗಳವರೆಗೆ ನಡೆಯುವ ಈ ಪ್ರಕ್ರಿಯೆಯಲ್ಲಿ ಆ ಕೊಕ್ಕು ಒಡೆದು ತುಂಡಾಗಿ ಮತ್ತೆ ಹೊಸ ಕೊಕ್ಕು ನಿಧಾನವಾಗಿ ಮೂಡುತ್ತದೆ. ಅತ್ಯಂತ ನೋವಿನ ಸಂದರ್ಭವಿದು. ಇದೆಲ್ಲಾ ಮುಗಿಯುವವರೆಗೆ ಯಾವುದೇ ಆಹಾರವು ಇಲ್ಲದೆ ಹದ್ದು ನೋವನ್ನು ಅನುಭವಿಸುತ್ತಿರುತ್ತದೆ.
ಹೊಸ ಕೊಕ್ಕು ಬೆಳದ ಮೇಲೆ ಹದ್ದು ಮಾಡುವ ಮುಂದಿನ ಕೆಲಸ ತನ್ನ ಗಟ್ಟಿಯಾದ ಕೊಕ್ಕಿನಿಂದ ಕಾಲಿನ ಉದ್ದ ಬೆಳೆದು ಮುರುಟಿ ಹೋದ ಉಗುರುಗಳನ್ನ ಒಂದೊಂದಾಗಿ ಕಿತ್ತು ಹಾಕುವುದು. ಈ ಉಗುರುಗಳನ್ನ ಕಿತ್ತ ಮೇಲೆ ಹೊಸ ಉಗುರುಗಳು ಮೂಡಲು ಮತ್ತಷ್ಟು ಕಾಲ ಹಿಡಿಯುತ್ತದೆ. ಅಲ್ಲಿಯವರೆಗೆ ಬೇಟೆಯಾಡುವ ಸಾಮರ್ಥ್ಯವು ಹದ್ದಿಗಿರುವುದಿಲ್ಲ.
ಇಲ್ಲಿಗೆ ಇದರ ರೂಪಾಂತರ ನಿಲ್ಲುವುದಿಲ್ಲ. ಉಗುರುಗಳು ಮತ್ತೆ ಬೆಳೆದ ಮೇಲೆ ಎದೆಯ ಭಾಗದ ಮತ್ತೆ ಮೈ ಮೇಲಿನ ಭಾರದ ಗರಿಗಳನ್ನ ಒಂದೊಂದಾಗಿ ಕೀಳಲು ಪ್ರಾರಂಭಿಸುತ್ತದೆ. ಇದು ಎಲ್ಲಕ್ಕಿಂತ ಹೆಚ್ಚು ನೋವನ್ನು ಕೊಡುವ ಪ್ರಕ್ರಿಯೆ. ಹೀಗೆಲ್ಲಾ ಮುಗಿಸುವ ಹೊತ್ತಿಗೆ ಸರಿಸುಮಾರು ಐದು ತಿಂಗಳ ಕಾಲ ಅಂದರೆ 150 ದಿನಗಳಾಗುತ್ತದೆ. ಇದಿಷ್ಟೂ ದಿನಗಳು ಅಹದ್ದು ಅನುಭವಿಸು ವುದು, ಅಸಹನಿಯ ನೋವು, ಒಂಟಿತನ, ಹಸಿವೆ ಮತ್ತು ಮೌನ. ಆದರೆ ಈ ಪ್ರಕ್ರಿಯೆ ಮುಗಿದಾಗ ಮತ್ತೆ ಹೊಸ ಉಗುರು ಕೊಕ್ಕು ಮತ್ತು ಗರಿಗಳಿಂದ ಹೊಸ ಚೈತನ್ಯವನ್ನು ಮತ್ತಷ್ಟು ಆಯಸ್ಯನ ಪಡೆದುಕೊಂಡ ಹದ್ದು ಎಂದೆಂದಿಗಿಂತ ಹೆಚ್ಚಿನ ಶಕ್ತಿಯಿಂದ ಮೇಲೆ ಹಾರಿ ತನ್ನ ಬೇಟೆಯನ್ನು ಹುಡುಕಿಕೊಳ್ಳುವ ಸಾಮರ್ಥ್ಯ ಹೊಂದುತ್ತದೆ.
ಅದಷ್ಟೇ ಅಲ್ಲ ಈ ಅತ್ಯಂತ ನೋವಿನ ರೂಪಾಂತರ , ಅದಕ್ಕೆ ಮುಂದಿನ 30 ವರ್ಷಗಳ ಆಯಸ್ಸ ನ್ನು ನೀಡುತ್ತದೆ. ಕೆಲವೊಮ್ಮೆ, ನಿಜವಾಗಿಯೂ ಬದುಕಲು ನಾವು ಬದಲಾಗಬೇಕು. ಬದಲಾವಣೆ ಹೆಚ್ಚಾಗಿ ಅನಿಶ್ಚಿತತೆ, ಭಯ ನೋವು ಹಿಂಸೆ ಎಲ್ಲದರೊಂದಿಗೆ ಬರುತ್ತದೆ. ಆದರೆ ಗಟ್ಟಿ ಮನಸ್ಸು ಮಾಡಿ ನಮ್ಮ ಹಳೆಯ ಅಭ್ಯಾಸಗಳನ್ನ, ನಮ್ಮನ್ನು ಜೀವನದಲ್ಲಿ ಅಶಕ್ತರಾಗಿಸುವ ನಂಬಿಕೆಗಳನ್ನ, ಸಂಬಂಧಗಳನ್ನ ಕೈ ಬಿಟ್ಟು ಹದ್ದಿನಂತೆ ಕತ್ತರಿಸಿ ಹಾಕಿ ಹೊಸದಕ್ಕೆ ದಾರಿ ಮಾಡಿ ಕೊಟ್ಟಾಗ ನಾವು ಕೂಡ ರೂಪಾಂತರಗೊಳ್ಳುತ್ತೇವೆ. ನಮ್ಮ ಭೂತಕಾಲದ ಹಳೆಯ ಹೊರೆಯನ್ನ ಬಿಡುಗಡೆ ಮಾಡಿ ದಾಗ ಮಾತ್ರ ಭವಿಷ್ಯದ ಬೆಳಕು ನಮ್ಮ ಪಾಲಿಗೆ. ರೂಪಾಂತರದ ನೋವು ನಿಜ - ಆದರೆ ಪುನರ್ಜ ನ್ಮದ ಶಕ್ತಿಯೂ ಅಪರಿಮಿತವಾದದ್ದು.